02126. ಬಂದೆಯೋ ಸರಿ…!


02126. ಬಂದೆಯೋ ಸರಿ…!
_____________________


ಶ್ರಾವಣ..
ದಣಿವಾರಿಸಿಕೊಳ್ಳೋಣ ಬಾ..
ಆಷಾಢಕೆ ಹೋದವಳು ನೀ
ಹೊರಡು, ಹಿಂತಿರುಗೀಗ ;
ವರ್ಷ ವರ್ಷ ತವರಿನ ನೆಪ
ತುಂತುರೇ ಸಾಕು, ಬಂದುಬಿಡು.

ಬೇಡ ಶ್ರಾವಣದ ಭೋರ್ಗರೆತ
ಸುರಿದಾಗುವುದೆಲ್ಲ ವ್ಯರ್ಥ;
ಏಕಾಂತದ ಮಬ್ಬಿನಲಿ ಸ್ಖಲಿಸಿ
ಅವಿರತ ಮಳೆಯಾದಾಗ –
ಜತೆಗಿರಬೇಕು ನೀ ಜೀಕುತ
ಪ್ರೇಮದುಯ್ಯಾಲೆ ಸಂಗೀತ.

ಅಲ್ಲೇನು ಅಪ್ಪಾಲೆ ತಿಪ್ಪಾಲೆ ?
ಇಲ್ಲಿ ಕೆಸರ ರಾಡಿ ಎರಚಲು..
ನೆನೆನೆನೆದು ಹಬೆಯಾಡುವ ಒಡಲು
ಕುದಿಸುತಿದೆ ಕಾಫಿಗೆ ಎಸರಿಟ್ಟು..!
ಬರುವೆಯೋ ಬಾರೆಯೋ ಮತ್ತದೇ
ಅನುಮಾನಗಳ ದೀಪಾವಳಿ ಪಟಾಕಿ..

ಬಂದುಬಿಡು ಮುಗಿಲುದರ ಒಡೆಯುತಿದೆ
ಮನದ ಮೋಡ ಸ್ಪೋಟವಾಗುವ ಖಚಿತ
ವಲ್ಲಿಯ ಮುಗಿಲ ತುಂಬಾ ಕಾಣದ ಬಿಳಿ ಚಿಕ್ಕೆ
ಮಲ್ಲಿಗೆಯ ನೆನಪಾಗಿಸಿದೆ ನಿನ್ನ ನಗೆ
ನಂಚಿಕೊಳ್ಳಲಿದೆ ನಿನ್ನೊಡನೆ ಶ್ರಾವಣ
ಹಂಚಿಕೊಳ್ಳಲಿದೆ ಕಾಮನ ಮನ್ಮಥಬಾಣ !

ಯಾವ ಶ್ರಾವಣ ಬಿಡು ನೀನಿಲ್ಲದೆ
ಧುಮ್ಮಿಕ್ಕಲವಳು ಹೊರಜಗದೇ,
ನೀ ಕುಣಿದಾಡು ಬಾ ನನ್ನೆದೆ ರಂಗಮಂಚದೆ..
ತಣಿಸಲವಳು ಮಳೆಯಾಗಿ ಇಳೆ
ತಣಿಸುವೆ ನಿನ್ನ ಶ್ರಾವಣ ನಾನಾಗಿ
ನೀರುಣಿಸುವೆ ದಾಹ ತೀರಿಸಿ ಫಸಲಾಗಿಸಿ..

– ನಾಗೇಶ ಮೈಸೂರು
೨೪.೦೭.೨೦೧೭

(Picture source: internet / social media)

02125. ಮಂಕುತಿಮ್ಮನ ಕಗ್ಗ ೬೯ ರ ಟಿಪ್ಪಣಿ ರೀಡೂ ಕನ್ನಡದಲ್ಲಿ… 


02125. ಮಂಕುತಿಮ್ಮನ ಕಗ್ಗ ೬೯ ರ ಟಿಪ್ಪಣಿ ರೀಡೂ ಕನ್ನಡದಲ್ಲಿ… 

ನಿಸರ್ಗ ಪಸರಿಸಿದ ರಸಗಂಧ, ಉಸಿರಾಡಲಿದೆಯೆ ನಿರ್ಬಂಧ ?
http://kannada.readoo.in/2017/07/ನಿಸರ್ಗ-ಪಸರಿಸಿದ-ರಸಗಂಧ-ಉಸಿ

02124. ಆಷಾಢದ ಚಾಮುಂಡಿ


02124. ಆಷಾಢದ ಚಾಮುಂಡಿ
___________________________


ಆಷಾಢದುಲಿ ತುಂತುರು ತಂಗಾಳಿ
ಹವಣಿಸುತ್ತಿದೆ ತಾಯಿ ನಿನ್ನ ಪಾದ
ಬಂದೆರಗಲೆಂದು ಧುಮ್ಮಿಕ್ಕಿ ಜಿಗಿಜಿಗಿದು
ಪುನೀತವಾಗಲು ಪಾದಧೂಳಿಯಲಿ ಮಿಂದು ||

ಕುಣಿದಾಡಿ ನಮಿಸೆ ಮಾತೆ ನಿನ್ನ
ಹೇಳಿಕೊಟ್ಟವರಾರೊ ಕಾಣೆ ಸನ್ನಾಹ
ಹೊತ್ತು ಮೋಡದ ಬೆಟ್ಟ ಸಾಗಿದೆ ವಿಮಾನ
ಹನಿಸಲೆಲ್ಲಾ ಸರಕ ನಿನ್ನ ಸೇವೆಯ ಧ್ಯಾನ ||

ಬಂದೆಲ್ಲ ನೆರೆದವೆ ತಾಯಿ ಬೆಟ್ಟದ ಮಾಯಿ
ಸುತ್ತುವರೆದು ದೇಗುಲ ಗೋಪುರ ಬಯಲು
ಹೊತ್ತಿಕೊಳಬೇಕಿತ್ತು ಆರ್ಭಟ ವರ್ಷಧಾರೆ ತಾಯಿ
ಯಾಕೊ ಮೌನದೆ ನಿಂತವೆ ಬಿಡಲಾಗದೆ ಬಾಯಿ..||


ಸಾಲುಸಾಲು ನಿಂತ ಭಕ್ತರ ಉದ್ದುದ್ದ ಸರತಿ
ಏರುವ ಮೆಟ್ಟಿಲುಗಳನೆ ತುಂಬಿಸಿ ತುಳುಕಾಡಿಸಿ
ಜನಸಾಗರವೆಲ್ಲೆಡೆ ಹನಿಯಾಗವರ ದನಿ ಭರ್ತಿ
ಮೀಯಿಸಿಹರು ಮಾತೆಯ ಭಕ್ತಿಘೋಷದ ಸ್ಫೂರ್ತಿ ||

ಮರೆತುಹೋದವು ಬಿರುಮಳೆಯಾಗದೆ ತುಂತುರಿಸಿ
ಸಿಂಪಡಿಸುತ ಮೆಲುಗಾಳಿಯ ವಾದನ ಬೀಸಣಿಕೆ
ಸುರಿಯುವುದಲ್ಲ ನೆರೆದವರ ಸೇವೆ ತಾಯಿಗೆ ಪ್ರಿಯ
ಆಷಾಢ ಶುಕ್ರವಾರದ ಚಾಮುಂಡಿಗೆ ನಮಿಸಲ್ಲೆ ಜಯ ||


– ನಾಗೇಶ ಮೈಸೂರು
೨೩.೦೭.೨೦೧೭

(ಚಿತ್ರ ಕೃಪೆ:
http://www.newskannada.com/mysuru/69379
http://www.aralikatte.com/2017/07/07/ashada_shukravaara_chamundi_hills-2/
http://vijaykarnataka.indiatimes.com/district/mysuru/last-ash-friday-devotees-on-the-hillside/articleshow/59702528.cms)

02123. ಸರ್ವಜ್ಞನ ವಚನಗಳು ೦೦೦೮. ಹಸುವ ಕೊಂದವನೊಬ್ಬ


02123. ಸರ್ವಜ್ಞನ ವಚನಗಳು ೦೦೦೮. ಹಸುವ ಕೊಂದವನೊಬ್ಬ
_________________________________________________


ಹಸುವ ಕೊಂದವನೊಬ್ಬ | ಶಿಶು ಕೊಂದವನೊಬ್ಬ |
ಹುಸಿ ಕರ್ಮಕಾರನವನೊಬ್ಬ ಮೂವರಿಗೆ |
ಶಶಿಧರನೊಲಿದ ಸರ್ವಜ್ಞ ||

ಹಸುವ ಕೊಂದವರಾರು? ಶಿಶುವ ಕೊಂದವರಾರು ? ಹುಸಿ ಕರ್ಮಕಾರರು ಯಾರು ? ಎನ್ನುವುದು ಗೊತ್ತಾದರೆ ಈ ವಚನದಲ್ಲಿ ಅರ್ಥ ಮಾಡಿಕೊಳ್ಳಲು ಮತ್ತಾವ ಕ್ಲಿಷ್ಟತೆಯೂ ಕಾಣುವುದಿಲ್ಲ.

ಈ ಮೂರರ ಹುಡುಕಾಟದಲ್ಲಿದ್ದಾಗ ಆಕಸ್ಮಿಕವಾಗಿ ಬಸವಣ್ಣನವರ ಈ ವಚನ ಕಣ್ಣಿಗೆ ಬಿತ್ತು. ಕಾಕತಾಳೀಯವೆಂಬಂತೆ ಮೂರರ ಉತ್ತರವೂ ಅದರಲ್ಲೇ ಕಂಡಾಗ ಅಚ್ಚರಿಯೂ ಆಯ್ತು. ಆ ಬಸವಣ್ಣನವರ ವಚನ ಇಂತಿದೆ :
________________________________________
ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ.
ಶಿಶು ವೇಧೆಗಾರನು ನಮ್ಮ ಡೋಹರ ಕಕ್ಕಯ್ಯ.
ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ.
ಇವರಿಬ್ಬರ ಮೂವರ ಕೂಡಿಕೊಂಡಿಪ್ಪ,
ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ.

– ಬಸವಣ್ಣ
_________________________________________

ಇದರನುಸಾರ ಸರ್ವಜ್ಞನ ಮೇಲಿನ ವಚನವನ್ನು ವಿಶ್ಲೇಷಿಸಿದರೆ ಅನುಕ್ರಮವಾಗಿ ಶಿವಶರಣರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಮಡಿವಾಳ ಮಾಚಯ್ಯ ಇವರನ್ನು ಕುರಿತಾಗಿ ಹೇಳುತ್ತಾ ಇರುವ ವಚನವೆಂದು ಅರಿವಾಗುತ್ತದೆ. ಅವರವರ ಬಾಹ್ಯ ಕರ್ಮ ಬಾಂಧವ್ಯದ ಹೊರತಾಗಿಯೂ ಅಂತರಂಗದಲ್ಲಿ ಶುದ್ಧ ಶಿವಶರಣರಾದ ಕಾರಣ ಅವರಿಗೆ ಶಶಿಧರ (ಶಿವ) ಒಲಿದ ಎನ್ನುವ ಭಾವಾರ್ಥ ಇಲ್ಲಿದೆ. ಸಾಮಾನ್ಯ ಜನರೂ ಸಹ ಶುದ್ಧ ಭಕ್ತಿಯಿಂದ ಅವರಂತೆಯೇ ಆಗಲು ಸಾಧ್ಯ ಎನ್ನುವುದು ಇಲ್ಲಿ ಅಡಗಿರುವ ಸಂದೇಶ.

(ಸೂಚನೆ: ಈ ಮೂವರ ಹಿನ್ನಲೆ ಕಥೆಯ ವಿವರಣೆ ಈ ವಚನದ ವಿವರಣೆಯ ವ್ಯಾಪ್ತಿಗೆ ಮೀರಿದ್ದು. ಅದಕ್ಕಾಗಿ ಅದನ್ನು ಪರಿಗಣಿಸಲಿಲ್ಲ)

– ನಾಗೇಶ ಮೈಸೂರು
(Picture : Wikipedia)

(ಶಂಕರ ಅಜ್ಜಂಪುರರ Shankar Ajjampura ಕೋರಿಕೆಯ ಮೇರೆಗೆ ವಿವರಿಸಲೆತ್ನಿಸಿದ ವಚನ. ಅಸಂಪೂರ್ಣ / ಅಸಮರ್ಪಕ ವಿವರಣೆಯೆನಿಸಿದರೆ ಕ್ಷಮೆ ಇರಲಿ)

02122. ಸರ್ವಜ್ಞನ ವಚನಗಳು ೦೦೦೭. ಸಿರಿ ಬಂದ ಕಾಲಕ್ಕೆ


02122. ಸರ್ವಜ್ಞನ ವಚನಗಳು ೦೦೦೭. ಸಿರಿ ಬಂದ ಕಾಲಕ್ಕೆ
_____________________________________________


ಸಿರಿ ಬಂದ ಕಾಲಕ್ಕೆ | ಕರೆದು ದಾನವ ಮಾಡು |
ಪರಿಣಾಮವಕ್ಕು ಪದವಕ್ಕು ಕೈಲಾಸ |
ನೆರೆಮನೆಯು ಅಕ್ಕು ಸರ್ವಜ್ಞ ||

ಈ ತ್ರಿಪದಿಯ ಪದಗಳು ನೇರ ಮತ್ತು ಸರಳವಾದ ಕಾರಣ ಇದರ ಭಾವಾರ್ಥ ಓದುತ್ತಿದ್ದಂತೆಯೇ ಗ್ರಹಿಕೆಗೆ ನಿಲುಕಿಬಿಡುತ್ತದೆ. ಇದ್ದುದ್ದರಲ್ಲಿ ‘ಅಕ್ಕು’ ಪದ ಮಾತ್ರ ಸ್ವಲ್ಪ ವಿಶಿಷ್ಠವೆನಿಸುವ ಕಾರಣ ಅದನ್ನು ಮೊದಲು ಗಮನಿಸಿ ನಂತರ ಮಿಕ್ಕದ್ದನ್ನು ಅರ್ಥೈಸೋಣ.

ಅಕ್ಕು ಪದದ ಹಲವಾರು ಅರ್ಥಗಳು ಈ ರೀತಿ ಇವೆ (ಕೆಲವು ನಾಮಪದವಾದರೆ ಕೆಲವು ಕ್ರಿಯಾಪದಗಳು) ದಕ್ಕು, ಜೀರ್ಣವಾಗು; ಅನುಕೂಲವಾಗುವಿಕೆ; ಅಪ್ಪಿಕೊಳ್ಳುವಿಕೆ, ಅಳವಡಿಸುವಿಕೆ ; ಸಂಭವನೀಯತೆ, ಸಾಧ್ಯತೆ; ಲಾಭ ; ಅಭಿಪ್ರಾಯ, ದೃಷ್ಟಿಕೋನ; ನನ್ನ ಅನಿಸಿಕೆಯ ಪ್ರಕಾರ ಈ ವಚನಕ್ಕೆ ಸೂಕ್ತವಾಗಿ ಹೊಂದುವ ಅರ್ಥಗಳು – ದಕ್ಕುವಿಕೆ /ಸಂಭವನೀಯತೆ / ಸಾಧ್ಯತೆ. ಮಿಕ್ಕವುಗಳಲ್ಲಿ ಕೆಲವನ್ನು ಪರೋಕ್ಷವಾಗಿ ಹೊಂದಿಸಿ ವಿವರಿಸಬಹುದಾದರೂ ಒಟ್ಟಾರೆ ಅರ್ಥ ಗ್ರಹಿಕೆಗೆ ಇವಿಷ್ಟೇ ಸಾಕು.

ಸಿರಿ ಬಂದ ಕಾಲಕ್ಕೆ | ಕರೆದು ದಾನವ ಮಾಡು |
________________________________________

ಹುಟ್ಟಿನಿಂದಲೇ ಸಿರಿವಂತರಾಗಿರುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಹುಟ್ಟಿನಿಂದ ಸಿರಿವಂತರಾಗಿದ್ದವರು ನಂತರ ನಿರ್ಗತಿಕರಾದ ಉದಾಹರಣೆಗಳೇನು ಕಡಿಮೆಯಿಲ್ಲ. ಸಿರಿಯೆನ್ನುವುದು ಯಾವಾಗ ಬರುವುದೋ, ಯಾವಾಗ ಹೋಗುವುದೋ ಹೇಳಬರದು. ಸಿರಿಯಿಲ್ಲದ ಹೊತ್ತಲಿ ಅದರ ಬೇಗೆ ಅನುಭವಿಸಿದವರೂ ಕೂಡ, ಸಿರಿ ಕೈಗೂಡಿತೆಂದರೆ ತಮ್ಮ ಬೇಗೆಯ ದಿನಗಳನ್ನು ಮರೆತುಬಿಡುತ್ತಾರೆ. ಸಿರಿ ಎಷ್ಟು ಕೂಡಿದರೆ ಸಿರಿತನ? ಎಂದಳೆಯುವ ಯಾವ ಮಾನದಂಡವೂ ಇರದ ಕಾರಣ, ಇನ್ನೂ ಸಾಲದು ಮತ್ತಷ್ಟು ಬೇಕೆನ್ನುವತ್ತ ಗಮನವಿರುತ್ತದೆಯೇ ಹೊರತು, ನಾನು ಮೊದಲಿಗಿಂತ ಸಿರಿವಂತನಾದೆ, ನನಗಿಂತ ಕೆಳಗಿರುವವರಿಗೆ ಆದಷ್ಟು ಸಹಾಯ ಮಾಡಬಹುದೆನ್ನುವ ಆಲೋಚನೆ ಬರುವುದಿಲ್ಲ. ಅದನ್ನು ಕಂಡ ಸರ್ವಜ್ಞ ‘ಸಿರಿ ಬಂದಾಗ ಅಗತ್ಯವಿರುವವರನ್ನು ನೀನಾಗಿಯೇ ಕರೆದು ಕೈಲಾದಷ್ಟು ಕೊಡು’ ಎನ್ನುತ್ತಾನೆ. ಇಲ್ಲಿ ಯಾರಾದರೂ ಬಂದು ಬೇಡುವ ತನಕ ಕಾಯದೆ ತಾನಾಗಿಯೇ ಕರೆದು ದಾನ ಮಾಡಬೇಕು ಎನ್ನುವುದು ಗಮನಿಸಬೇಕಾದ ಸಂಗತಿ. ಒಂದೆಡೆ ಇದು ಉದಾರತೆಯ ಸಂಕೇತವಾದರೆ ಮತ್ತೊಂದೆಡೆ ಸಾಮಾಜಿಕ ಸಮತೋಲನವನ್ನು ಸಾಧಿಸಲು ವ್ಯಕ್ತಿಗತ ನೆಲೆಗಟ್ಟಿನಲ್ಲಿಯೂ ಮಾಡಬಹುದಾದ ಕಾರ್ಯಗಳನ್ನು ಸೂಚಿಸುತ್ತದೆ. ಏಕೆಂದರೆ ಇದ್ದವರೆಲ್ಲ ಇಲ್ಲದವರೊಡನೆ ಹಂಚಿಕೊಂಡು ಬಾಳ್ವೆ ನಡೆಸಿದರೆ ಸಮಗ್ರ ಮಟ್ಟದಲ್ಲಿ ಕೊರತೆಯೆನ್ನುವುದು ಸಮಾಜವನ್ನು ಬಾಧಿಸಬಾರದಲ್ಲವೇ ? ಈ ದೃಷ್ಟಿಯಿಂದಲೂ ಈ ಸಾಲು ಅರ್ಥಪೂರ್ಣ.

ಪರಿಣಾಮವಕ್ಕು ಪದವಕ್ಕು..
_____________________________________

ಕರೆದು ಕೊಡಬೇಕೇನೋ ಸರಿ. ಆದರೆ ಅದರಿಂದೇನೂ ಪ್ರಯೋಜನ ? ಯಾಕೆ ದಾನ ಮಾಡಬೇಕು ? ಎನ್ನುವುದರ ಉತ್ತರ ಈ ಸಾಲಿನಲ್ಲಿದೆ. ಹೀಗೆ ದಾನ ಕೊಡುವುದರಿಂದಾಗುವ ಪರಿಣಾಮವೆಂದರೆ ಬಹುಮಾನದ ರೂಪದಲ್ಲಿ ‘ಪದವಿ’ ದಕ್ಕುವುದು. ಯಾವ ಪದವಿ ಎನ್ನುವುದನ್ನು ಅರಿಯಲು ಸ್ವಲ್ಪ ಲೌಕಿಕ ಮತ್ತು ಅಲೌಕಿಕ ಸ್ತರಗಳೆರಡರಲ್ಲು ಇಣುಕಿ ನೋಡಬೇಕು. ದಾನ ಕೊಡುವುದು ಲೌಕಿಕ, ಇಹ ಜಗದ ಕ್ರಿಯಾ ಕರ್ಮ. ಅದರ ಹಿಂದಿರುವ ಅಲೌಕಿಕ ಉದ್ದೇಶ ಪುಣ್ಯ ಸಂಪಾದನೆ. ಪುಣ್ಯ ಹೆಚ್ಚಾದಷ್ಟೂ ಪಾಪ ಕಡಿಮೆಯಾದಷ್ಟೂ ಪರಲೋಕದಲ್ಲಿ ಸಿಕ್ಕುವ ಸ್ಥಾನ ಉನ್ನತ್ತದ್ದಾಗಿರುತ್ತದೆಯೆನ್ನುವ ನಂಬಿಕೆ. ಇನ್ನು ಲೌಕಿಕ ಜಗದಲ್ಲಿನ ಪದವಿಗಳ ಬಗ್ಗೆ ಹೇಳುವಂತೆಯೇ ಇಲ್ಲ. ಕೊಡುಗೈ ದೊರೆಗಳೆಂಬ ಬಿರುದಿನ ಜತೆಜತೆಗೆ, ಲೌಕಿಕ ವ್ಯವಹಾರದ ಅದೆಷ್ಟೋ ನಾಯಕತ್ವದ ಹೊಣೆ, ಜವಾಬ್ದಾರಿಗಳು ಪದವಿಯ ರೂಪದಲ್ಲಿ ಸಿಕ್ಕುವುದು ಸಾಮಾನ್ಯ. ಸ್ವಂತದ್ದನ್ನೇ ಕೈ ಬಿಚ್ಚಿ ದಾನಗೈಯುವವರು ತಾನೇ ಸಮಾಜದ ಸಂಪತ್ತನ್ನು ನಿಸ್ವಾರ್ಥದಿಂದ, ದುರ್ಬಳಕೆ ಮಾಡದೆ ನೋಡಬಲ್ಲವರು ? ಒಟ್ಟಿನಲ್ಲಿ ‘ಕರೆದು ದಾನವ ಮಾಡು’ ಎಂದಾಗ ‘ಸಂಪತ್ತನ್ನು ಕೊಟ್ಟು ಕಳೆದುಕೊ’ ಎನ್ನುವ ಅನಿಸಿಕೆ ಮೂಡಿದರೂ, ನೈಜದಲ್ಲಿ ಕೊಟ್ಟದ್ದನ್ನು ಮೀರಿಸುವ ಪದವಿ ಅವರನ್ನು ಅರಸಿಕೊಂಡು ಬರುತ್ತದೆ ಎನ್ನುವುದು ಇಲ್ಲಿನ ತಾತ್ಪರ್ಯ.

ಕೈಲಾಸ | ನೆರೆಮನೆಯು ಅಕ್ಕು ಸರ್ವಜ್ಞ ||
_____________________________________

ಹೀಗೆ ಕರೆದು ದಾನ ಮಾಡುವ ಮಹತ್ಕಾರ್ಯದಿಂದ ಇಹದ ಪದವಿಯ ಜತೆ ಪರದ ಉನ್ನತ ಪದವಿಯೂ ದಕ್ಕುವ ಸಂಭವನೀಯತೆ ಹೆಚ್ಚು ಎಂದು ಈಗಾಗಲೇ ನೋಡಿದೆವು. ಆ ಪರದ ಪದವಿಯ ಔನ್ಯತ್ಯದ ಸಾಧ್ಯತೆ ಎಷ್ಟು ಮಟ್ಟಿಗಿರಬಹುದು ? ಎನ್ನುವುದು ಇಲ್ಲಿ ಸೂಚಿತವಾಗಿದೆ. ಪದವಿಗಳಲೆಲ್ಲ ಪರಮ ಶ್ರೇಷ್ಠ ಪದವಿಯೆಂದರೆ ಯಾವುದು ? ಅಂತಿಮ ಮುಕ್ತಿ, ಮೋಕ್ಷವನಿಯಬಲ್ಲ ಕೈಲಾಸಪದ ತಾನೇ ? ನೀ ಕೊಟ್ಟದ್ದಕ್ಕನುಗುಣವಾಗಿ ಫಲ ಪ್ರಾಪ್ತಿಯಾಗುವುದಲ್ಲದೆ ಕಡೆಗೆ ಕೈಲಾಸ ಪದವಿ ಕೂಡ ದಕ್ಕುವ ಸಾಧ್ಯತೆ, ಸಂಭವನೀಯತೆ ಇರುತ್ತದೆ ಎನ್ನುವ ಸಾರ ಈ ಸಾಲಿನಲ್ಲಿದೆ.

ಈ ತ್ರಿಪದಿಯಲ್ಲಿ ನನಗೆ ಕೊಂಚ ಕಾಡಿದ ಸಾಲು ‘ನೆರೆಮನೆಯು ಅಕ್ಕು’. ಆದರೆ ‘ಕೈಲಾಸ’ ಪದದ ಜತೆಗೆ ಸೇರಿಸಿ ನೋಡಿದರೆ ಹೆಚ್ಚು ಅರ್ಥಗರ್ಭಿತ ಅನಿಸಿತು. ಪರದಲ್ಲೇನೋ ಕೈಲಾಸ ಪದವಿ ಸಿಕ್ಕುತ್ತದೆಯೆನ್ನುವುದು ಸರಿ – ಆದರೆ ಅದು ಇಹದ ಬದುಕಿನ ನಂತರದ ಮಾತಾಯ್ತು. ಹಾಗಾದರೆ ಇಹದ ಸ್ಥಿತಿ ಹೇಗೆ? – ಎಂದರೆ ಕೈಲಾಸವೇ ನೆರೆಮನೆಯೇನೋ ಎನ್ನುವಂತಹ ಅನುಭೂತಿ, ಅನುಭವ, ಅನುಭಾವಗಳು ಇಹಜೀವನದಲ್ಲಿಯೂ ದಕ್ಕುವ ಸಾಧ್ಯತೆ ಇರುತ್ತದೆ. ಕರೆದು ಸಿರಿಯನ್ನು ಕೊಡುವ ಸಂತಸ ಕೈಲಾಸ ಸಾದೃಶ್ಯ ಸಂತೃಪ್ತಿಯನ್ನು ಲೌಕಿಕ ಜಗದಲ್ಲಿಯೂ ಕರುಣಿಸುತ್ತದೆ.

ಈ ವಚನದ ಒಟ್ಟಾರೆ ಸಾರವನ್ನು ಸಮಗ್ರರೂಪದಲ್ಲಿ ಹೇಳುವುದಾದರೆ – ಸಿರಿ ಬಂದ ಹೊತ್ತಲ್ಲಿ ಯಾರು ಅದನ್ನು ತಾವು ಮಾತ್ರವಲ್ಲದೆ ಅಗತ್ಯವಿರುವ ಅರ್ಹರೊಡನೆಯೂ ಹಂಚಿಕೊಂಡು ಬದುಕುವರೋ ಅವರಿಗೆ ಇಹ ಮತ್ತು ಪರ ಎರಡರಲ್ಲೂ ಕೈಲಾಸಕ್ಕೆ ಸರಿಸಮಾನವಾದ ಪದವಿ, ತೃಪ್ತಿ, ಆನಂದ, ಸುಖ, ಸಂತೋಷಗಳು ಸಿಕ್ಕುತ್ತವೆ. ಹೆಚ್ಚು ಕೊಟ್ಟಷ್ಟೂ ಹೆಚ್ಚೆಚ್ಚು ಫಲ ದೊರಕುವ ಸಾಧ್ಯತೆ ಹೆಚ್ಚು.

– ನಾಗೇಶ ಮೈಸೂರು

( Yamunab Bsyಯವರ ಕೋರಿಕೆಯ ಮೇರೆಗೆ ವಿವರಿಸಲು ಯತ್ನಿಸಿದ್ದು. ವಿವರಣೆ ಅಸಮರ್ಪಕ ಅಥವಾ ಅಸಂಪೂರ್ಣವೆನಿಸಿದರೆ ಕ್ಷಮೆಯಿರಲಿ)

02121. ಸರ್ವಜ್ಞನ ವಚನಗಳು ೦೦೦೬. ಕಿಚ್ಚಿಗೆ ತಣಿವಿಲ್ಲ


02121. ಸರ್ವಜ್ಞನ ವಚನಗಳು ೦೦೦೬. ಕಿಚ್ಚಿಗೆ ತಣಿವಿಲ್ಲ
_____________________________________________


ಕಿಚ್ಚಿಗೆ ತಣಿವಿಲ್ಲ | ನಿಶ್ಚಯಕೆ ಹುಸಿಯಲ್ಲ |
ಮುಚ್ಚಳವಿಲ್ಲ ಪರಮಂಗೆ | ಶಿವಯೋಗಿ
ಗಚ್ಚುಗವಿಲ್ಲ ಸರ್ವಜ್ಞ ||

ಕಿಚ್ಚು ಎಂದರೆ ಬೆಂಕಿ.
ತಣಿವುದು ಎಂದರೆ ತಂಪಾಗುವುದು ಅಥವಾ ಸಂತೃಪ್ತವಾಗುವುದು ಎಂದಾಗುತ್ತದೆ.
ಹುಸಿ ಎಂದರೆ ಸುಳ್ಳು, ಅನೃತ, ನಿಜವಲ್ಲದ್ದು.
ಅಚ್ಚುಗ ಎಂದರೆ ಮರುಕ, ಅಳಲು, ಕೊರೆ, ಮಿಡುಕು ಇತ್ಯಾದಿ ಅರ್ಥಗಳಿವೆ.

ಈ ಅರ್ಥಗಳ ಹಿನ್ನಲೆಯಲ್ಲಿ ಈ ವಚನದ ಅರ್ಥ ಹುಡುಕೋಣ.

ಕಿಚ್ಚಿಗೆ ತಣಿವಿಲ್ಲ |
________________

ಅರ್ಥ: ಉರಿಯುತ್ತಿರುವ ಕಿಚ್ಚಿನ ಮೂಲಸ್ವಭಾವ ಎಂತಾದ್ದೆಂದರೆ ಅದೆಂದಿಗೂ ಸಂತೃಪ್ತಗೊಂಡು ಶಾಂತವಾಗುವುದಿಲ್ಲ. ತನ್ನ ಅಸ್ತಿತ್ವವಿರುವ ತನಕ ಸುತ್ತಮುತ್ತಲನ್ನು ದಹಿಸಿ, ಆಪೋಷಿಸಿಕೊಂಡು ಹೋಗುತ್ತಿರುತ್ತದೆ. ತಣಿದು ಸ್ತಬ್ದವಾಗುವುದು ಅದರ ಜಾಯಮಾನವಲ್ಲ.

ಹೆಚ್ಚುವರಿ ಟಿಪ್ಪಣಿ :
_________________

ಕಿಚ್ಚು ಅರ್ಥಾತ್ ಬೆಂಕಿಗೆ ತಣಿವು (ಅಂದರೆ ತಂಪು, ಸಂತೃಪ್ತಿ) ಇರುವುದು ಸಾಧ್ಯವಿಲ್ಲ. ಯಾಕೆಂದರೆ ಅವೆರಡರ ಭೌತಿಕ ಅಸ್ತಿತ್ವ ಒಟ್ಟಾಗಿರುವುದು ಸಾಧ್ಯವಿಲ್ಲ. ಅವೆರಡೂ ಪರಸ್ಪರ ವಿರೋಧಾಭಾಸದ ಗುಣ ಸ್ವರೂಪ ಸೂಚಕಗಳು. ಈ ವಚನದಲ್ಲಿ ಕಿಚ್ಚಿಗೆ ಆರಿಹೋಗುವ, ತಣಿದು ತಂಪಾಗಿಬಿಡುವ ಉದ್ದೇಶವಿಲ್ಲ ಅಥವಾ ಬರಿ ಕಿಚ್ಚು ಮಾತ್ರ ಇದ್ದಲ್ಲಿ ತಣಿಯುವುದು ಸಾಧ್ಯವಿಲ್ಲ ಎನ್ನುವ ಅರ್ಥ ಗೋಚರಿಸುತ್ತದೆ.

ಆದರೆ ಇಲ್ಲಿ ಕಿಚ್ಚು ಎಂದರೆ ಬೆಂಕಿ ಎಂದು ಮಾತ್ರ ಅರ್ಥವೆ ? ಖಂಡಿತ ಇಲ್ಲ. ಪರರ ಏಳಿಗೆ, ಉನ್ನತಿಯನ್ನು ಕಂಡು ಹೊಟ್ಟೆಕಿಚ್ಚು ಪಡುವ ಜನರನ್ನು ಕಂಡಾಗ ಆ ಅಸೂಯೆಯೆಂಬ ಕಿಚ್ಚಿನ ನೆನಪಾಗುತ್ತದೆ. ಇನ್ನು ಹಸಿವೆ ? ಹಸಿವೆಯೆಂಬ ಬೆಂಕಿ ಹೊಟ್ಟೆಯನ್ನು ಸುಡುವಾಗ ಎಂತಹ ಸೌಮ್ಯ ಮನ ಕೂಡ ರೊಚ್ಚಿಗೆದ್ದು ರೋಷತಪ್ತವಾಗಿಬಿಡುತ್ತದೆ. ದೈಹಿಕ ಕಾಮನೆಯೆಂಬ ಕಾಡಿನ ಬೆಂಕಿಯನ್ನು ಅರಿಯದವರಾರು ? ಆಸೆಯೆಂಬ ಕಿಚ್ಚನ್ನು ಜಯಿಸಿದ ಜಿತೇಂದ್ರಿಯರೆಷ್ಟು ಮಂದಿ ಸಿಕ್ಕಾರು ? ಸಿಟ್ಟು, ಕೋಪದ ಕಿಚ್ಚಿಗೆ ಕಡಿವಾಣ ಹಾಕಿ ಜಯಶೀಲರಾದ ಮಹನೀಯರದೆಷ್ಟು ಜನ ಸಿಕ್ಕಾರು ? ಹೀಗೆ ಕಿಚ್ಚಿನ ವಿಶ್ವರೂಪ ಹುಡುಕುತ್ತ ಹೋದರೆ ಅದರ ನೂರೆಂಟು ಅವತಾರಗಳ ಅನಾವರಣವಾಗುತ್ತಾ ಹೋಗುತ್ತದೆ. ಅದ್ಯಾವ ರೀತಿಯ ಕಿಚ್ಚಾದರೂ ಸರಿ – ಅದು ಒಂದು ಬಾರಿ ತೋರಿಕೊಂಡಿತೆಂದರೆ ಮುಗಿಯಿತು; ಬಡಪೆಟ್ಟಿಗೆ ತಣಿಯುವ ಪೈಕಿಯದಲ್ಲ ಅದು. ಅದನ್ನು ನಿಯಂತ್ರಿಸುವ ಏಕೈಕ ನಿಖರ ಮಾರ್ಗವೆಂದರೆ ಬರುವ ಮೊದಲೆ ಅದನ್ನು ತಡೆ ಹಿಡಿಯುವುದು. ಅದರೆ ಹಾಗೆ ಮಾಡಬಲ್ಲ ಮಹಾಸಹಿಷ್ಣುಗಳು ಅದೆಷ್ಟು ಇದ್ದಾರು, ಈ ಜಗದಲ್ಲಿ ? ಅದೇನೆ ಇರಲಿ ಬಂದ ಮೇಲೆ ಕಿಚ್ಚಿಗೆ ತಣಿವಿಲ್ಲವಾದ ಕಾರಣ ಬರದ ಹಾಗೆ ನೋಡಿಕೊಳ್ಳುವುದೆ ಜಾಣತನ.

ಅದೇ ಕಿಚ್ಚಿನ ಜ್ವಾಲೆ ಧನಾತ್ಮಕವಾಗಿದ್ದಾಗ – ಉದಾಹರಣೆಗೆ ಏನನ್ನಾದರೂ ಸಾಧಿಸಲೇಬೇಕೆನ್ನುವ ಹಠದ ಕಿಚ್ಚು ಹೊತ್ತಿಕೊಂಡಾಗ, ಸಮಾಜಕ್ಕೆ ಒಳಿತು ಮಾಡಬೇಕೆನ್ನುವ ಸೇವೆಯ ಕಿಚ್ಚು ಉದ್ದೀಪನಗೊಂಡಾಗ, ದೇಶಪ್ರೇಮದ ಕಿಚ್ಚು ಪ್ರಜ್ವಲಿಸುವಾಗ – ಇಲ್ಲಿಯೂ ಅದೇ ಕಿಚ್ಚಿನ ಶಕ್ತಿ ಸಕ್ರಿಯವಾಗಿದ್ದರು ಪರಿಣಾಮ ಮಾತ್ರ ತದ್ವಿರುದ್ಧ. ಒಮ್ಮೆ ಈ ಕಿಚ್ಚು ಹೊತ್ತಿಕೊಂಡರೆ ಅದೇ ಸಾಮಾನ್ಯನನ್ನು ಸಾಧಕನನ್ನಾಗಿಸಿಬಿಡುತ್ತದೆ – ಆ ಕಿಚ್ಚನ್ನು ತಣಿಯಬಿಡದೆ ಕಾಪಾಡಿಕೊಂಡರೆ.

ಒಟ್ಟಾರೆ ಕಿಚ್ಚೆನ್ನುವುದು ಒಮ್ಮೆ ಹತ್ತಿಕೊಂಡರೆ ಅದನ್ನು ವಿನಾಶಕಾರಿಯಾಗಿಯು ಬಳಸಬಹುದು, ಪ್ರೇರಕ ಶಕ್ತಿಯಾಗಿಯು ಬಳಸಬಹುದು. ಋಣಾತ್ಮಕ ವಿಷಯಗಳಿಗೆ ಬಂದಾಗ, ಮುಕ್ಕಣ್ಣನ ಮೂರನೇ ಕಣ್ಣಿನ ಹಾಗೆ; ತೆರೆದಾಗ ವಿನಾಶ ಖಚಿತವಾದ ಕಾರಣ ಮುಚ್ಚಿಕೊಂಡಿರುವುದೇ ಕ್ಷೇಮ. ಲೋಕ ಕಲ್ಯಾಣಾರ್ಥ ಕಾರ್ಯದಲ್ಲಿ ಅಂತಹ ಕಿಚ್ಚನ್ನು ಪ್ರಚೋದಕ ಶಕ್ತಿಯಾಗಿ ಬಳಸಿ ಕಾರ್ಯಸಾಧಿಸುವುದು ಜಾಣತನ. ಹೀಗೆ ಸುಲಭದಲ್ಲಿ ತಣಿಯದ / ಶಾಂತವಾಗದ ಕಾರಣ ಕಿಚ್ಚನ್ನು ಬಳಸುವ ಬಗ್ಗೆ ಮುನ್ನೆಚ್ಚರಿಕೆಯಿಂದ ಇರಬೇಕೆನ್ನುವ ನೀತಿ ಇಲ್ಲಿ ಅಡಕ.

ನಿಶ್ಚಯಕೆ ಹುಸಿಯಲ್ಲ |
_____________________

ಅರ್ಥ: ಒಮ್ಮೆ ನಿಶ್ಚಯಿಸಿದ ಮೇಲೆ ಅದು ಹುಸಿಯಾಗಬಾರದು. ಹಾಗೆ ನಿರ್ಧರಿಸಿ ವಚನ ಕೊಟ್ಟ ಮೇಲೆ ಮಾತು ತಪ್ಪಬಾರದು. ನಿಶ್ಚಯ ಎನ್ನುವ ಪದವೇ ದೃಢ ನಿರ್ಧಾರವೆನ್ನುವ ಸಂಕೇತ (ನಿಜವಾಗುವಂತದ್ದು, ಸತ್ಯವಾಗುವಂತದ್ದು). ಹುಸಿ ನಿಶ್ಚಯವೆಂದರೆ (‘ಸುಳ್ಳಾಗುವ ಸತ್ಯ’ ಎನ್ನುವ ಅರ್ಥದಲ್ಲಿ) ವಿರೋಧಾಭಾಸವಾದಂತೆ. ಆದಕಾರಣ ನಿಶ್ಚಯಕೆ, ಹುಸಿತನ ಸಲ್ಲದು. ಒಟ್ಟಾರೆ ಯಾವುದೇ ಸಂಧರ್ಭವಿರಲಿ – ನಿಶ್ಚಯದ ಬಲವಿದ್ದಲ್ಲಿ ಹುಸಿ ಹೋಗುವ ಭಯವಿಲ್ಲ ಎನ್ನುವ ಧೈರ್ಯವನ್ನು ತುಂಬುತ್ತಿದೆ ಈ ಸಾಲು.

ಹೆಚ್ಚುವರಿ ಟಿಪ್ಪಣಿ :
_________________

ಕಿಚ್ಚು ಮತ್ತು ತಣಿಯುವಿಕೆಯ ರೀತಿಯಲ್ಲೆ ನಿಶ್ಚಯ ಮತ್ತು ಹುಸಿ ಪದಗಳನ್ನು ಅರ್ಥೈಸಿಕೊಳ್ಳಬಹುದು. ನಿಶ್ಚಯವೆನ್ನುವುದು ಒಂದು ನಿರ್ಧಾರದ ತೀರ್ಮಾನ. ನಾವು ನಿಶ್ಚಿತ ಎಂದಾಗ ಹೆಚ್ಚುಕಡಿಮೆ, ಖಡಾಖಂಡಿತ ನಡೆದೇ ನಡೆಯುತ್ತದೆ ಎನ್ನುವ ಅನಿಸಿಕೆ, ನಿರೀಕ್ಷೆ. ಹೀಗೆ ಏನಾದರೂ ದೊಡ್ಡ ಕಾರ್ಯಕ್ಕೆ ಕೈ ಹಾಕುವ ನಿರ್ಧಾರ, ನಿಶ್ಚಯ ಮಾಡಿದರೆ, ಕಾರ್ಯರೂಪಕ್ಕೆ ತರುವ ನೈಜ ಇಂಗಿತವಿದ್ದರಷ್ಟೆ ಅದನ್ನು ಮಾಡಲು ಸಾಧ್ಯ. ಆ ನಿರ್ಧಾರ ಕೈಗೊಂಡಾಗ ಅದು ಅನೇಕರಲ್ಲಿ ನಿರೀಕ್ಷೆ ಹುಟ್ಟಿಸಿರುತ್ತದೆ. ಆ ನಿರೀಕ್ಷೆ ಹುಸಿಯಾಗಿ ಹೋಗದಂತೆ, ಸುಳ್ಳಾಗಿಬಿಡದಂತೆ ಕಾಪಾಡಿಕೊಳ್ಳುವುದು ಮುಖ್ಯ. ಒಂದು ಸಾರಿ ದೃಢ ನಿಶ್ಚಯ ಮಾಡಿದ ಮೇಲೆ ಅದು ಹುಸಿಯಾಗುವುದು ತರವಲ್ಲ. ಹೀಗಾಗಿ ನಿಶ್ಚಯ ಮತ್ತು ಹುಸಿಯಾಗುವಿಕೆ ಜೊತೆಜೊತೆಗೆ ಹೋಗುವುದು ಸಾಧ್ಯವಿಲ್ಲ. ಕಿಚ್ಚಿಗೆ ಹೇಗೆ ತಂಪು ಜತೆಯಾಗಲು ಸಾಧ್ಯವಿಲ್ಲವೊ, ಅಂತೆಯೆ ನಿರ್ಧಾರ ಮತ್ತದನ್ನು ಪಾಲಿಸದ ಹುಸಿತನ ಜೆತೆಯಾಗಿ ಹೋಗಲು ಸಾಧ್ಯವಿಲ್ಲ.

ಮತ್ತೊಂದು ದೃಷ್ಟಿಕೋನದಿಂದ ನೋಡಿದರೆ – ನಾವು ಕೈಗೊಂಡ ನಿರ್ಧಾರ, ನಿಶ್ಚಯ ಸರಿಯಾದುದ್ದಾದರೆ, ಬಲವಾದದ್ದಾದರೆ ಅದರ ನಿರೀಕ್ಷಿತ ಫಲಿತಾಂಶ ಎಂದಿಗೂ ಹುಸಿಯಾಗದು. ನಂಬಿಕೆಯ ಜತೆ ಆತ್ಮವಿಶ್ವಾಸದಿಂದ ಎದೆಗುಂದದೆ ಮುನ್ನಡೆದಲ್ಲಿ ಅಂತಿಮ ಗಮ್ಯ ತಲುಪುವ ಸಾಧ್ಯತೆ ಎಂದಿಗೂ ಹುಸಿಯಾಗಿ ಹೋಗುವುದಿಲ್ಲ. ಆ ಭರವಸೆಯ ದೃಢನಂಬಿಕೆ ಜತೆಗಿದ್ದರೆ ಸಾಕು.

ಸಾರದಲ್ಲಿ, ಯಾರಿಗೇ ಆಗಲಿ ಯಾವುದೇ ಮಾತು ಕೊಡಬೇಕೆಂದರೆ ಅದನ್ನು ಹುಸಿಯಾಗಿಸದ ಭರವಸೆಯಿದ್ದರೆ ಮಾತ್ರ ಕೊಡಬೇಕು. ಪೂರ್ವಾಪರ ಯೋಚಿಸಿ, ವಿವೇಚಿಸಿ ಯಾವುದೇ ನಿರ್ಧಾರ ಕೈಗೊಂಡಾದ ಮೇಲೆ ಅದರತ್ತ ಆತ್ಮವಿಶ್ವಾಸದಿಂದ ಮುನ್ನಡೆದರೆ ಆಗ ಜಯ ಖಚಿತ.

ಮುಚ್ಚಳವಿಲ್ಲ ಪರಮಂಗೆ |
___________________________

ಅರ್ಥ: ಪರಮಾತ್ಮನಿಗೆ ಯಾವುದೇ ಇತಿಮಿತಿಯಿಲ್ಲ, ಮುಚ್ಚುಮರೆಯಿಲ್ಲ; ಅವನು ಅನಂತ, ಅಸೀಮ. ಅವನನ್ನು ಹೀಗೇ ಎಂದು ಸಂಕ್ಷೇಪಿಸಿ, ಪೆಟ್ಟಿಗೆಯಲಿಟ್ಟಂತೆ ಸೀಮಿತ ಚೌಕಟ್ಟಲಿ ಬಂಧಿಸಿ, ಕೊನೆಗೆ ಮುಚ್ಚಳ ಮುಚ್ಚಿ – ‘ಅವನೆಂದರೆ ಇಷ್ಟೇ’ ಎಂದು ರೂಪುರೇಷೆ ನಿರ್ಧರಿಸುವುದು ಅಸಾಧ್ಯ. ಸ್ವತಃ ಅವನೇ ಮುಚ್ಚಳವಿಲ್ಲದವನು ಎಂದಾಗ ಪೆಟ್ಟಿಗೆಯೂ ಸೇರಿದಂತೆ ಎಲ್ಲವೂ ಅವನೇ ಎನ್ನುವ ಭಾವ ಕೂಡ ಪ್ರಸ್ತುತವಾಗುತ್ತದೆ.

ಹೆಚ್ಚುವರಿ ಟಿಪ್ಪಣಿ :
_________________

ಮುಚ್ಚಳವಿಲ್ಲ ಎಂದಾಗ ಮನಸಿಗೆ ಬರುವುದು ಬಿಚ್ಚುತನ. ಆದರೆ ಇದರರ್ಥವನ್ನು ಎರಡನೆಯ ಪದ ಪರಮಂಗೆಯ ಜತೆಗೂಡಿಸಿ ನೋಡಬೇಕು. ಮೊದಲಿಗೆ ‘ಪರಮ’ ಅಂದರೆ ಯಾರು ಎಂದು ಅರ್ಥ ಮಾಡಿಕೊಂಡರೆ ಮುಚ್ಚಳದ ಅರ್ಥ ಸಹಜವಾಗಿ ಹೊಮ್ಮುತ್ತದೆ. ಯಾರು ಈ ಪರಮಾ? ಪರಮನೆಂದರೆ ಮಿಕ್ಕವರೆಲ್ಲರಿಗಿಂತಲೂ ಶ್ರೇಷ್ಟನಾದವನು, ಉನ್ನತನಾದವನು, ಉಚ್ಛ ಶ್ರೇಣಿಗೆ ಸೇರಿದವನು, ಹೋಲಿಕೆಯಲ್ಲಿ ಎಲ್ಲರನ್ನು, ಎಲ್ಲವನ್ನು ಮೀರಿದವನು; ಅರ್ಥಾತ್ ಪರಮಾತ್ಮನೆಂದು ಹೇಳಬಹುದು. ಮುಚ್ಚಳವಿಲ್ಲ ಪರಮಂಗೆ ಎಂದಾಗ ಇತಿಮಿತಿಗಳ ಪರಿಮಿತಿಯಿಲ್ಲ ಭಗವಂತನಿಗೆ ಎಂದರ್ಥವಾಗುತ್ತದೆ. ಈಗ ಮುಚ್ಚಳವಿಲ್ಲ ಎನ್ನುವುದರ ಮತ್ತಷ್ಟು ಅರ್ಥಗಳೂ ಹೊರಹೊಮ್ಮುತ್ತವೆ – ಆದಿ-ಅಂತ್ಯಗಳಿಲ್ಲದವನು, ಮುಚ್ಚುಮರೆಯಿರದವನು, ಅಡೆತಡೆಗಳ ಹಂಗಿಲ್ಲದವನು, ಮಿತಿಯಿಲ್ಲದ ಅಮಿತನು, ಯಾವುದೇ ನಿರ್ಬಂಧದಿಂದ ಬಂಧಿಸಲ್ಪಡದವನು ಎಂದೆಲ್ಲಾ ಅರ್ಥೈಸಬಹುದು ಮತ್ತು ಎಲ್ಲವೂ ಸೂಕ್ತವಾಗಿ ಹೊಂದಿಕೊಳ್ಳುವ ವರ್ಣನೆಗಳೇ ಆಗುತ್ತವೆ. ಒಟ್ಟಾರೆ ಆ ಪರಮಾತ್ಮನಿಗೆ ಅಸಾಧ್ಯವಾದುದ್ದು ಏನೂ ಇಲ್ಲ ಎನ್ನುವುದನ್ನು ಸರಳವಾಗಿ ‘ಮುಚ್ಚಳವಿಲ್ಲ ಪರಮಂಗೆ’ ಎನ್ನುವ ಎರಡು ಪದಗಳಲ್ಲಿ ಕಟ್ಟಿಕೊಟ್ಟಿದ್ದಾನೆ ಸರ್ವಜ್ಞ.

..ಶಿವಯೋಗಿಗಚ್ಚುಗವಿಲ್ಲ ಸರ್ವಜ್ಞ ||
______________________________

ಅರ್ಥ: ಶಿವನನ್ನೊಲಿಸಿಕೊಳ್ಳಲೆಂದು ಶಿವಯೋಗಿಯಾದವರಿಗೆ (ಅಥವಾ ಆ ಹಾದಿಯಲ್ಲಿ ಹೊರಟ ಭಕ್ತರಿಗೆ) ಯಾವುದೇ ಅಡೆತಡೆಯಾಗಲಿ, ಆಳುಕಾಗಲಿ, ಅರೆಕೊರೆಯಾಗಲಿ, ಪ್ರಾಪಂಚಿಕ ಬಂಧನವಾಗಲಿ ಕಾಡುವುದಿಲ್ಲ. ಯಾವ ತಡೆಯು ಅವರ ಸಾಧನೆಗೆ ಅಡ್ಡಿಯಾಗುವುದಿಲ್ಲ. ಎಲ್ಲವನ್ನು ಜಯಿಸಿ ಅವರು ಮುಂದುವರೆಯುತ್ತಾರೆ.

ಹೆಚ್ಚುವರಿ ಟಿಪ್ಪಣಿ :
_________________

ಇಲ್ಲಿ ಶಿವಯೋಗಿಯೆಂದರೆ ಶಿವಭಕ್ತರು, ಶಿವನನ್ನು ಹತ್ತಿರದಿಂದ ಆರಾಧಿಸುವ ಸಿದ್ದರು, ಯೋಗಿಗಳೂ, ಋಷಿಗಳೂ – ಎಲ್ಲರನ್ನು ಪರಿಗಣಿಸಬಹುದು. ಅಚ್ಚುಗವೆಂದರೆ ಕೊರೆ, ಅಳಲು, ಮರುಕ, ಮಿಡುಕ ಎಂದೆಲ್ಲಾ ಅರ್ಥವಿರುವುದು. ಇವೆರಡನ್ನೂ ಒಗ್ಗೂಡಿಸಿ ನೋಡಿದರೆ ಶಿವನನ್ನು ಆರಾಧಿಸುವವರಿಗೆ ಯಾವುದೆ ರೀತಿಯ ಚಿಂತೆಯಾಗಲಿ, ಅಳಲಾಗಲಿ ಇರುವುದಿಲ್ಲ ಎಂಬರ್ಥ ಬರುತ್ತದೆ. ಸರ್ವಸಂಗ ಪರಿತ್ಯಾಗಿಯಾದವರಿಗೆ ಯಾವುದೂ ಕೊರತೆಯಾಗಿ ಕಾಣಿಸಿಕೊಳ್ಳುವುದಿಲ್ಲ. ಬದುಕಿನ ಯಾವುದೇ ರಾಗದ್ವೇಷಗಳಾಗಲಿ ಕಾಡುವುದಿಲ್ಲ. ಯಾವ ಕುಂದು ಕೊರತೆಗಳೂ ಸ್ವಯಂಮರುಕ ಹುಟ್ಟಿಸುವುದಿಲ್ಲ. ಒಟ್ಟಾರೆ ನಿಜವಾದ ಅರ್ಥದಲ್ಲಿ ಶಿವಯೋಗಿಯಾದವನಿಗೆ ಶಿವನ ಆರಾಧನೆಯ ಹೊರತೂ ಮತ್ತಾವುದು ಬೇಕಿಲ್ಲದ ಕಾರಣ ಯಾವೊಂದು ಅಳಲೂ ಕಾಡುವುದಿಲ್ಲ. ಅಂತಹ ನಿಜಭಕ್ತರಿಗೆ ಐಹಿಕ ಪ್ರಪಂಚದ ಮೋಹ-ಮಮಕಾರಗಳು ಅಡ್ಡಿಯಾಗವು, ಸಾಂಸಾರಿಕ ಬಂಧನಗಳು ತೊಡಕಾಗವು.

ವಚನದ ಒಟ್ಟಾರೆ ಅರ್ಥ :
______________________

ಈ ವಚನವನ್ನು ಸಮಗ್ರವಾಗಿ ಸಾರದಲ್ಲಿ ಹೇಳುವುದಾದರೆ “ಸಾಧನೆಯ ಹಾದಿಯಲ್ಲಿ ಹೊರಟ ಶರಣನು (ಶಿವಭಕ್ತನು) ಸರಿಯಾದ ಗಮ್ಯ-ಗುರಿಯ ಕಿಚ್ಚು ಹಚ್ಚಿಕೊಂಡು, ಬಲವಾದ ದೃಢ ನಿಶ್ಚಯದೊಡನೆ ಮುನ್ನಡೆದರೆ ಯಾವುದೇ ಮಿತಿಯಿಲ್ಲದ (ಅಮಿತವಾದ) ಪರಮಾತ್ಮನ ಕೃಪೆ-ಕರುಣೆಯಿಂದಾಗಿ ಯಾವುದೇ ಅಡೆತಡೆ ಕುಂದುಕೊರತೆಗೀಡಾಗದೆ ತನ್ನ ಗುರಿಯನ್ನು ಮುಟ್ಟಬಹುದು”. ಮುಕ್ತಿ, ಮೋಕ್ಷದ ಹಾದಿಯಲ್ಲಿರುವ ಶರಣರಿಂದ ಹಿಡಿದು ಐಹಿಕ ಲೋಕದ ಸೌಖ್ಯವನ್ನು ಬೆನ್ನಟ್ಟುವ ಭಕ್ತರೆಲ್ಲರಿಗೂ ಅನ್ವಯವಾಗುವ ಸಂದೇಶವಿದು.

– ನಾಗೇಶ ಮೈಸೂರು
ಚಿತ್ರ ಕೃಪೆ : ವಿಕಿಪಿಡಿಯಾ

( ಶ್ರೀಯುತ ಅಜ್ಜಂಪುರ ಶಂಕರರ Shankar Ajjampura ಕೋರಿಕೆಯ ಮೇರೆಗೆ ಮಾಡಿದ ಯತ್ನ. ವಿವರಣೆ ಅಸಮರ್ಪಕ ಅಥವಾ ಅಸಂಪೂರ್ಣವೆನಿಸಿದರೆ ಕ್ಷಮೆಯಿರಲಿ)

02120. ಸರ್ವಜ್ಞನ ವಚನಗಳು ೦೫. ಉತ್ತಮರು ಎಂಬುವರು


02120. ಸರ್ವಜ್ಞನ ವಚನಗಳು ೦೫. ಉತ್ತಮರು ಎಂಬುವರು
__________________________________________
(Yamunab Bsyರ ಕೋರಿಕೆಯನುಸಾರ ವಿವರಿಸುವ ಯತ್ನ)


ಉತ್ತಮರು ಎಂಬುವರು | ಸತ್ಯದಲಿ ನಡೆದಿಹರು |
ಉತ್ತಮರಧಮರೆನಬೇಡ, ಅವರೊಂದು |
ಮುತ್ತಿನಂಥವರು ಸರ್ವಜ್ಞ ||

ಉತ್ತಮರ ಮತ್ತು ಅಧಮರ ನಡುವಿನ ವ್ಯತ್ಯಾಸವನ್ನು ಹೇಳುವ ಹಲವಾರು ತ್ರಿಪದಿಗಳಲ್ಲಿ ಇದೂ ಒಂದು. ಯಾರನ್ನಾದರೂ ಉತ್ತಮರೆಂದು ಹೇಳಬೇಕಾದರೆ ಹಲವಾರು ಮಾನದಂಡಗಳನ್ನು ಬಳಸಬಹುದು. ಇಲ್ಲಿ ಉತ್ತಮರ ಅಂತದ್ದೇ ಒಂದು ಗುಣವನ್ನು ಬಳಸಿಕೊಂಡು ವ್ಯತ್ಯಾಸವನ್ನು ಹೇಳಲಾಗಿದೆ – ಅದು, ಸತ್ಯದ ಮಾರ್ಗದಲ್ಲಿ ನಡೆಯುವ ಮಾನದಂಡ.

ಈ ವಿವರಕ್ಕೆ ಬರುವ ಮೊದಲು ಉತ್ತಮರು ಎಂದರೇನು ಎಂದು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳೋಣ. ಸರಳವಾಗಿ ಹೇಳುವುದಾದರೆ ‘ಒಟ್ಟಾರೆ ಒಳ್ಳೆಯವರು’ ಎಂದು ಅರ್ಥೈಸಿಬಿಡಬಹುದಾದರೂ ಸ್ವಲ್ಪ ವಿಭಿನ್ನವಾಗಿ ಯೋಚಿಸೋಣ. ಉತ್ತಮ ಎನ್ನುವುದರರ್ಥ ಹೋಲಿಕೆಯಲ್ಲಿ ಹೆಚ್ಚು ಗುಣಮಟ್ಟದ್ದು ಎಂದು. ಹೀಗಾಗಿ ಉತ್ತಮರು ಎಂದಾಗ ಅತ್ಯುತ್ಕೃಷ್ಟರು, ಪರಿಪೂರ್ಣರು ಎಂದು ನೋಡದೆ ಪರಸ್ಪರ ಹೋಲಿಕೆಯಲ್ಲಿ ಉನ್ನತ ಸ್ತರದವರು ಎಂದು ನೋಡಬೇಕು. ಆಗ ಉತ್ತಮರಲ್ಲಿಯೇ ಹಲವು ಶ್ರೇಣಿಗಳನ್ನು ಊಹಿಸಲು ಸಾಧ್ಯವಾಗುತ್ತದೆ – ತರಗತಿಯ ವಿದ್ಯಾರ್ಥಿಗಳಿಗೆ ಕೊಡುವ ಅಂಕ ಶ್ರೇಣಿಯ ಹಾಗೆ. ಹೀಗಾಗಿ ಉತ್ತಮಿಕೆ ಪಕ್ವವಾಗುತ್ತ ಹೆಚ್ಚು ಉತ್ತಮವಾಗುತ್ತ ಹೋಗುವ ಸಾಧ್ಯತೆ ನಿರಂತರವಾಗುತ್ತದೆ. ಇದೇ ಜಾಡಿನಲ್ಲಿ ಅಧಮಿಕೆಯಲ್ಲೂ ವಿವಿಧ ಸ್ತರದ ಶ್ರೇಣಿಯನ್ನು ಊಹಿಸಿಕೊಳ್ಳಬಹುದು.

೧. ಉತ್ತಮರು ಎಂಬುವರು | ಸತ್ಯದಲಿ ನಡೆದಿಹರು |

ಉತ್ತಮರೆಂದೆನಿಸಿಕೊಂಡವರ ಒಂದು ಗುಣಧರ್ಮ – ಎಷ್ಟೇ ಕಷ್ಟವಾದರೂ ಸರಿ ಸತ್ಯದ ಮತ್ತು ನ್ಯಾಯದ ಹಾದಿಯಲ್ಲಿ ನಡೆಯುವುದು. ಆಗ ನಂಟು, ಕೆಳೆ, ಲಾಭ, ನಷ್ಟಗಳನ್ನು ನೋಡದೆ ಖಡಾಖಂಡಿತವಾಗಿ ನಡೆಯಬೇಕಾದ ಸಂಧರ್ಭಗಳು ಅನೇಕ ಬಾರಿ ಎದುರಾಗುತ್ತವೆ. ಉತ್ತಮರ ಒಂದು ಮುಖ್ಯ ಗುಣವೆಂದರೆ ಅದೇನೇ ಕಷ್ಟಬಂದರು ಬಿಡದೆ ಸತ್ಯ ಮಾರ್ಗದಲ್ಲಿ ನಡೆಯುವುದು. ಆ ಕಠೋರ ಪ್ರಜ್ಞಾಪೂರ್ವಕ ಪರಿಪಾಲನೆಯೇ ಅವರನ್ನು ನಾಯಕತ್ವದ ಮಟ್ಟಕ್ಕೆ ಏರಿಸಿಬಿಟ್ಟಿರುತ್ತದೆ. ಹೀಗಾಗಿ ಅವರು ನಡೆದುಕೊಳ್ಳಬೇಕಾದ ರೀತಿ ನೀತಿಯ ಬಗ್ಗೆಯೂ ಇತರರಲ್ಲಿ ಒಂದು ರೀತಿಯ ಪೂರ್ವಯೋಜಿತ ನಿರೀಕ್ಷೆ ಹುಟ್ಟಿಕೊಂಡಿರುತ್ತದೆ. ಅವರ ಒಳ್ಳೆಯತನದ ಕಾರಣದಿಂದಲೇ ಅವರ ಜನಪ್ರಿಯತೆಯು ಹೆಚ್ಚಿರುತ್ತದೆ.

೨. ಉತ್ತಮರಧಮರೆನಬೇಡ

ಆದರೆ ಹಾಗೆ ನಡೆಯುವುದೇನು ಸುಲಭವೇ ? ಪ್ರಚಲಿತವಿರುವ ಲೋಕವಾಣಿಯಂತೆ ‘ಖಂಡಿತವಾದಿ ಲೋಕವಿರೋಧಿ’ ಎಂಬ ನಾಣ್ಣುಡಿಯೇ ಇದೆ. ‘ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೊದ್ದರು’ ಎನ್ನುವ ನಾಣ್ಣುಡಿ ಸತ್ಯವಂತರು ಎದುರಿಸಬೇಕಾದ ಮತ್ತೊಂದು ಬಗೆಯ ಸಂದಿಗ್ದವನ್ನು ತೋರಿಸುತ್ತದೆ. ಸತ್ಯವಂತರೆಂದಾಗ ಮುಲಾಜಿಲ್ಲದೆ ನಿಷ್ಟೂರವಾಗಿರಬೇಕಾದ ಸನ್ನಿವೇಶಗಳು ಅಸಂಖ್ಯಾತ. ಹೀಗಾಗಿ ಎಲ್ಲರು ಅವರ ಸ್ನೇಹಿತರೆಂದೇ ಹೇಳಲಾಗದು. ಮಿತ್ರರಂತೆ ಶತ್ರುಗಳು ಹುಟ್ಟಿಕೊಳ್ಳುತ್ತಾರೆ ಅನಿವಾರ್ಯವೆಂಬಂತೆ. ಇಂತಹವರು ತಮಗೆ ಬೇಕಾದ ರೀತಿಯ ವರ್ತನೆ, ತೀರ್ಮಾನ ಸಿಕ್ಕದಾದಾಗ ಅಂತಹ ಉತ್ತಮರ ಗುಣ, ನಡತೆ, ಸ್ವಭಾವವನ್ನು ಕುರಿತು ಸುಳ್ಳುಸುಳ್ಳೇ ಅಪಪ್ರಚಾರ ಮಾಡುತ್ತಾರೆ. ತಮ್ಮ ಮಾತನ್ನು ನಂಬಿಸಲೋಸುಗ ಉತ್ತಮರಿಗೆ ಅಧಮರೆಂದೇ ಹಣೆಪಟ್ಟಿ ಕಟ್ಟಲು ಹಿಂದೆಗೆಯುವುದಿಲ್ಲ. ಹಾಗೆ ಮಾಡುವುದು ತಪ್ಪು – ಉತ್ತಮರನ್ನು ಅಧಮರೆಂದು ತಿಳಿಯಬೇಡ, ಹಾಗೆಂದು ವಿನಾಕಾರಣ ಪ್ರಚಾರಿಸಬೇಡ ಎನ್ನುವ ನೀತಿಬೋಧೆ ಈ ಸಾಲಿನಲ್ಲಿದೆ.

೩. ಅವರೊಂದು | ಮುತ್ತಿನಂಥವರು ಸರ್ವಜ್ಞ ||

ಈ ಸಾಲಿನಲ್ಲಿ ಯಾಕೆ ಉತ್ತಮರನ್ನು ಅಧಮರೆನ್ನಬಾರದು? ಎನ್ನುವ ವಿವರಣೆಯಿದೆ. ಉತ್ತಮರೆಂದರೆ ಅವರೊಂದು ಮುತ್ತಿನ ಹಾಗೆ ಬೆಲೆಬಾಳುವವರು, ಮೌಲ್ಯವುಳ್ಳವರು. ಮುತ್ತೆಂದರೆ ನವರತ್ನಗಳಲ್ಲೊಂದಾದ ಕಾರಣ ಪ್ರತಿಯೊಬ್ಬರೂ ಅದರ ಮೌಲ್ಯವನ್ನರಿತು ಬೆಲೆ ಕೊಡುತ್ತಾರೆ. ಉತ್ತಮರು ಸಹ ಈ ನವರತ್ನದ ಮುತ್ತಿನ ಹಾಗೆ; ಆದ ಕಾರಣ ಅವರ ಕುರಿತು ಅಧಮರೆಂಬ ಸುಳ್ಳು ಪ್ರಚಾರ ಸಲ್ಲ ಎನ್ನುವುದು ಇಲ್ಲಿಯ ಇಂಗಿತ.

ಆದರೆ ಇಲ್ಲೊಂದು ವಿಶೇಷವಿದೆ. ನಾವು ಯಾರನ್ನಾದರೂ ಒಳ್ಳೆಯವರೆಂದು ಹೇಳಬೇಕಾದಾಗ ‘ ಮುತ್ತಿನಂತಹ ಮನುಷ್ಯ’ ಎನ್ನುತ್ತೇವೆ. ಯಾಕೆ ನಾವು ಮಿಕ್ಕ ಎಂಟು ರತ್ನಗಳನ್ನೂ ಪರಿಗಣಿಸಿ ‘ವಜ್ರದಂತಹ ಮನುಷ್ಯ’, ‘ಗೋಮೇಧಕದಂತಹ ಮನುಷ್ಯ’, ‘ಪುಷ್ಯರಾಗದಂತಹ ಮನುಷ್ಯ’ ಎಂದೆಲ್ಲಾ ಹೇಳುವುದಿಲ್ಲ ? ಯಾಕೆ ಮುತ್ತಿನಂತಹ ಮನುಷ್ಯ ಎಂದು ಮಾತ್ರ ಹೇಳುತ್ತೇವೆ ?

ಮಿಕ್ಕೆಲ್ಲ ರತ್ನಗಳು ಭೂಗರ್ಭದಲ್ಲೋ ಎಲ್ಲೋ ಅಡಗಿ ಕೂತಿದ್ದು , ಪರಿಷ್ಕರಿಸಬೇಕಾದ ಕಲ್ಲುಗಳ ರೂಪದಲ್ಲಿ ದೊರಕುತ್ತವೆ. ಅವುಗಳನ್ನು ಹುಡುಕಿ ತೆಗೆದು ಹೊಳಪು ಬರಿಸಲು ಮತ್ತಷ್ಟು ಕುಸುರಿ ಕೆಲಸ ಮಾಡಬೇಕು. ಆದರೆ ಮುತ್ತಿನ ವಿಷಯ ಹಾಗಲ್ಲ ! ಮೊದಲಿಗೆ ಅದು ಕಪ್ಪೆಚಿಪ್ಪಿನೊಳಗಾಗುವ ಜೈವಿಕ ಕ್ರಿಯೆಯ ಫಲವಾಗಿ ರೂಪುಗೊಳ್ಳುವ ನೈಸರ್ಗಿಕ ವಸ್ತು. ಜೊತೆಗೆ ಮುತ್ತು ರೂಪುಗೊಂಡ ಮೇಲೆ ಯಾವ ಹೊಳಪನ್ನಾಗಲಿ, ಕುಸುರಿಯನ್ನಾಗಲಿ ಮಾಡುವ ಅಗತ್ಯವಿಲ್ಲ. ರೂಪುಗೊಂಡ ಆಕಾರ, ಹೊಳಪು, ಗಾತ್ರವೇ ಅಂತಿಮ. ಉತ್ತಮರು ಕೂಡ ಒಂದು ರೀತಿ ಮುತ್ತಿನ ಹಾಗೆ ಸ್ವಯಂ ರೂಪುಗೊಂಡವರು. ಅವರ ಸಜ್ಜನಿಕೆಯಿಂದ ತಾವಾಗಿಯೇ ಹೊಳೆಯುವವರು. ಮುತ್ತಿನ ಗಾತ್ರದ ಹಾಗೆ ಉತ್ತಮಿಕೆಯ ಮಟ್ಟದಲ್ಲಿ ವೈವಿಧ್ಯವಿದ್ದರೂ ಪ್ರತಿಯೊಂದಕ್ಕೂ ಅದರದೇ ಬೆಲೆಯಿರುವಂತೆ ಉತಮ್ಮರು ತಮ್ಮದೇ ಆದ ವಿಶಿಷ್ಠ ಸ್ಥಾನಬೆಲೆ ಕಾಯ್ದುಕೊಂಡವರು. ಹೀಗಾಗಿ ಅವರನ್ನು ಮುತ್ತಿಗೆ ಹೋಲಿಸುವುದು ಅತ್ಯಂತ ಸಮಂಜಸ.

ಇಲ್ಲಿ ಇನ್ನೂ ಒಂದು ಅತಿಶಯವಿದೆ. ಕಪ್ಪೆ ಚಿಪ್ಪಿನ ಒಳಗೆ ಮುತ್ತಾಗುವುದು ಕೂಡ ಆ ಚಿಪ್ಪಿನ ಎರಡು ಕವಚದ ನಡುವೆ ಬೇಡದ ಹೊರಗಿನ ವಸ್ತು ಸೇರಿಕೊಂಡಾಗ. ಅದರಿಂದಾಗುವ ತೊಂದರೆಯನ್ನು ನಿವಾರಿಸಿಕೊಳ್ಳಲೆಂಬಂತೆ ಕಪ್ಪೆಚಿಪ್ಪು ಆ ಬಾಹ್ಯವಸ್ತುವಿನ ಸುತ್ತ ತಾನು ತಯಾರಿಸಿದ ರಾಸಾಯನಿಕವನ್ನು ಸ್ರವಿಸುತ್ತ ಅದನ್ನು ಸುತ್ತುವರೆಯುವುದಂತೆ. ಹೀಗೆ ಸುತ್ತಿನ ಮೇಲೆ ಸುತ್ತು ಹಾಕುತ್ತ ಹೋದಂತೆ ಆ ಮುತ್ತಿನ ಗಾತ್ರ ಹೆಚ್ಚುತ್ತಾ ಹೋಗುತ್ತದಂತೆ ಅದರ ಹೊಳಪಿನ ಜೊತೆಜೊತೆಗೆ. ಉತ್ತಮರು ಕೂಡ ತಮ್ಮ ಮೇಲೆಸೆದ ದೂಷಣೆಗಳನ್ನು, ತಮ್ಮನ್ನು ಅಧಮರೆಂದು ಆಡಿಕೊಳ್ಳುವ ಜನರ ದೌರ್ಬಲ್ಯಗಳನ್ನು ತಮ್ಮ ಸತ್ಯವಂತಿಕೆ, ನ್ಯಾಯ, ನೀತಿ, ನಿಯತ್ತುಗಳೆಂಬ ನಿರಂತರ ಸ್ರಾವದಿಂದ ಹೊಳಪಾಗಿಸುತ್ತ ಋಣಾತ್ಮಕವನ್ನೆಲ್ಲ ಧನಾತ್ಮಕವಾಗಿಸುತ್ತ ಮತ್ತಷ್ಟೂ ಉತ್ತಮರಾಗುತ್ತಾ ನಡೆಯುತ್ತಾರೆ. ಹೀಗಾಗಿ ಉತ್ತಮರ ಗುಣ ನಡತೆಯು ರೂಪುಗೊಳ್ಳುವ ಬಗ್ಗೆಯೂ ಮುತ್ತಿನ ರೂಪುಗೊಳ್ಳುವಿಕೆಯ ಬಗೆಯನ್ನೇ ಹೋಲುತ್ತದೆ. ಆ ದೃಷ್ಟಿಯಿಂದಲೂ ಮುತ್ತಿನ ಹೋಲಿಕೆ ಸರಿಸೂಕ್ತವೆನಿಸುತ್ತದೆ. (ಸೂಚನೆ: ಮುತ್ತಿನ ಬಗ್ಗೆ ಹೆಚ್ಚು ಮಾಹಿತಿಗೆ ವಿಕಿಪಿಡಿಯಾ ನೋಡಿ)

ಹೀಗೆ ಉತ್ತಮರೆಲ್ಲ ಮುತ್ತಿನಂತಹವರು ಎನ್ನುವುದರ ಹಿಂದೆ ಅಗಾಧ ಅರ್ಥವ್ಯಾಪ್ತಿಯಿರುವುದನ್ನು ನೋಡಬಹುದು.

– ನಾಗೇಶ ಮೈಸೂರು
೧೮.೦೭.೨೦೧೭
(ಚಿತ್ರಕೃಪೆ: ವಿಕಿಪಿಡಿಯಾ)