00036 – ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು!

ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು!

ಡ್ರಾಗನ್ ಪ್ರೂಟಿನ ಒಳಗೆ ಬರಿ ಆರೋಗ್ಯದ ಬೆಡಗೆ!

ಡ್ರಾಗನ್ ಕಣ್ಣಾಯ್ತು (ಲೊಂಗನ್ ಹಣ್ಣು) ; ಕೆದರಿದ ಜುಟ್ಟಿನ ಕೆಂಭೂತವೂ ಆಯ್ತು (ರಂಬುತಾನ್) ; ಈಗ ಮುಂದಿನ ಗಿರಾಕಿ ಯಾರೆಂದು ಯೋಚಿಸುತ್ತಲೆ ತರಕಾರಿ, ಹಣ್ಣಿನ ಮಾರುಕಟ್ಟೆಯೊಳಗೆ ಕಾಲಿಟ್ಟೆ – ಅದೋ, ಅಲ್ಲೆ ಎದುರುಗಡೆಯೆ ಸ್ವಾಗತಿಸುತ್ತಾ ಕಾಣಿಸಿಕೊಂಡ ‘ಡ್ರಾಗನ್ ಹಣ್ಣು’ ಕೇಳಿತು, “ಯಾಕೆ, ನಾನಿಲ್ಲವೆ?” ಎಂದು. ‘ಸರಿ, ಇಂದು ನಿನ್ನಯ ಪಾಳಿ’ ಎಂದನ್ನುತ್ತಲೆ, ‘ಏಯ್ ನಾನೂ ಇದ್ದೇನೆ, ಈ ಸರದಿ ನನ್ನದೂ’ – ಎಂದು ಹೆಚ್ಚು ಕಮ್ಮಿ ಕಿರುಚುತ್ತಿದ್ದ ‘ವಾಸನಾಯುಕ್ತ ಹಣ್ಣುಗಳ ರಾಜಾಧಿರಾಜ’ ಎಂದೆ ಕರೆಯಬಹುದಾದ “ಡುರಿಯನ್” ಹಣ್ಣನ್ನು ಹತ್ತಡಿ ದೂರದಿಂದಲೆ ಸಮಾಧಾನಿಸಿ, ಕೈಗೊಂದೆರಡು ಕೆಂಗುಲಾಬಿ ಕೆಂಪಿನ ಡ್ರಾಗನ್ ಹಣ್ಣುಗಳನ್ನೆತ್ತಿಕೊಂಡು ತರಕಾರಿ ಸಾಲಿನತ್ತ ಓಡಿದೆ. ಸದ್ಯ ವಾಸನೆಯು ಹಿಂದೆಯೆ ಹಿಂಬಾಲಿಸಿ ಬರದಿದ್ದರಿಂದ ‘ಡ್ಯುರಿಯನ್’ ಬೆನ್ನು ಹಿಡಿಯಲಿಲ್ಲವೆಂಬ ಸಮಾಧಾನದಲ್ಲೆ ಬೇರೆಲ್ಲಾ ಶಾಪಿಂಗು ಮುಗಿಸಿ ‘ಕ್ಯಾಶ್ ಕೌಂಟರಿನತ್ತ’ ಬಂದರೆ, ಅಲ್ಲಿ ನಿಜವಾದ ‘ಶಾಕ್’ ಕಾದಿತ್ತು – ನನಗೆ ತಿಳಿದಂತೆ ತೀರಾ ಅಷ್ಟೇನು ದುಬಾರಿಯಲ್ಲದ ಈ ಹಣ್ಣಿಗೆ ಕೆಜಿಗೆ ಐದು ಡಾಲರು ಬಿಲ್ಲು ಹಾಕಿದಾಗ! ಈ ಹಣ್ಣುಗಳ ‘ಸ್ಥೂಲ ಕಾಯದಿಂದಾಗಿ’ ಎರಡು ಹಣ್ಣೆ ಒಂದು ಕೇಜೀಗೂ ಮೀರಿ ತೂಕವಿತ್ತು. ಒಂದನ್ನು ವಾಪಸಿಟ್ಟುಬಿಡಲೆ ಅಂದುಕೊಳ್ಳುತ್ತಿರುವಾಗಲೆ, ಮನಸ್ಸು ಬದಲಿಸಿ ಎರಡನ್ನು ದುಬಾರಿ ಬೆಲೆ ತೆತ್ತು ಹೊತ್ತು ತಂದೆ. ಅದನ್ನು ಮನೆಗೆ ತಂದ ಮೇಲೆ , ಒಂದಷ್ಟು ಅದರ ಇತಿಹಾಸ ಕೆದಕಿದ ಮೇಲೆ ನಾ ತಂದ ಹಣ್ಣೇಕೆ ಅಷ್ಟೊಂದು ದುಬಾರಿಯೆಂದು ಗೊತ್ತಾಗಿ, ನಾನು ಟೋಪಿ ಬೀಳಲಿಲ್ಲವೆಂದು ತುಸು ಸಮಾಧಾನವಾಯ್ತು. ಅದು ಏಕೆ, ಎತ್ತ ಅನ್ನುವ ಪುರಾಣ ಊದುವ ಮೊದಲೆ, ಈ ಹಣ್ಣಿನ ಜಾತಕವನ್ನೊಂದಷ್ಟು ಅಲ್ಲಾಡಿಸಿ ಬರುವ ಬನ್ನಿ.

ಸಾಮಾನ್ಯರ ಆಡು ಭಾಷೆಯಲ್ಲಿ ‘ಡ್ರಾಗನ್ ಫ್ರೂಟ್’ ಎಂದೆ ಹೆಸರಾದ ಈ ಮನಮೋಹಕ ಆಕಾರ ಮತ್ತು ಬಣ್ಣದ ಸುಂದರಿಯ ನಿಜವಾದ ಹೆಸರು ‘ಪಿತಾಯ’ ಅಥವಾ ‘ಪಿತಹಾಯ’ ಎಂದು. ಸಾಧಾರಣವಾಗಿ ಕಡುಗೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಈ ನೀರೆ ಆಗಾಗ ಗುಲಾಬಿ ಅಥವ ಹಳದಿಯ ಸೀರೆಯಲ್ಲೂ ಮಿಂಚುವುದುಂಟಂತೆ. ನಮ್ಮ ಬಾಳೆಹಣ್ಣಿನ ಸಿಪ್ಪೆಯ ಹಾಗೆ ಸುಲಭದಲೆ ಬಿಚ್ಚಬಹುದಾದ ತೆಳುವಾದ ಸಿಪ್ಪೆಯನ್ನು ಹೊದ್ದಿರುವ ಈ ಹಣ್ಣಿನ ಸಿಪ್ಪೆಯೆ ಸಮೃದ್ದ ನಾರಿನ ಪೋಷಕಾಂಶದಿಂದ ಶ್ರೀಮಂತವಂತೆ – ಸಿಪ್ಪೆ ಶುಚಿಯಾಗಿದ್ದು ನೀವು ತಿನ್ನುವ ಧೈರ್ಯ ಮಾಡಿದರೆ! ಅಂದಹಾಗೆ ಹಣ್ಣಿನ ಆಕಾರಕ್ಕೆ ಹೋಲಿಸಿದರೆ ಈ ಸಿಪ್ಪೆಯನ್ನು ತೆಳು ಅನ್ನಬೇಕೆ ವಿನಹಃ, ಯಾವುದೊ ಹೋಲಿಕೆಯಿಲ್ಲದೆ ನೋಡಿದರೆ ಅಷ್ಟೊಂದು ಸಪೂರ ಸುಂದರಿಯೇನಲ್ಲಾ ಈ ಚಿತ್ರಾಂಗಿ (ಚಿತ್ರದ ಅಂಗಿ ತೊಟ್ಟ ಹಾಗೆಯೆ ಇದೆ ಇದರ ಹೊರ ಕವಚ – ಅದಕ್ಕೆ ಚಿತ್ರಾಂಗಿ ಎಂದೆನಷ್ಟೆ). ಆದರೆ ಆ ಸಿಪ್ಪೆ ಬಿಚ್ಚುವಾಗ ನೀವು ತುಸು ದುಶ್ಯಾಸನನನ್ನು ನೆನೆದರೆ ಒಳಿತು – ಹೆಚ್ಚು ಕಡಿಮೆ ದ್ರೌಪದಿ ವಸ್ತ್ರಾಪಹರಣದಂತೆಯೆ ಈ ಡ್ರಾಗಿಣಿಯ ‘ಸಿಪ್ಪಾಪಹರಣವೂ’ ಆಗುವುದರಿಂದ ಮಹಾಭಾರತದ ಆ ಸೀನು ನೆನಪಿನಲ್ಲಿದ್ದರೆ, ಈ ವಿದೇಶಿ ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ಸುಲಭವು, ಅಷ್ಟೆ ರೋಚಕವೂ ಆದೀತು! ಅಂದಹಾಗೆ ವಿದೇಶಿ ನಾರಿಯರಿಗೆ ನಮ್ಮ ಹಾಗೆ ಮೈ ತುಂಬಾ ಬಟ್ಟೆಯುಟ್ಟು ರೂಢಿಯಿಲ್ಲವಲ್ಲಾ, ಈ ಡ್ರಾಗಿಣಿಯೇಕೆ ಹೀಗೆ? ಎಂದು ಕೇಳಬೇಡಿ – ಹಳೆ ಕಾಲದವಳಿರಬೇಕೆನ್ನಿ, ಸಂಪ್ರದಾಯದ ಗೊಡ್ಡು ಎನ್ನಿ – ತಲೆಯಿಂದ ಕಾಲಿನವರೆಗೆ, ತಲೆಯೂ ಸೇರಿದ ಹಾಗೆ ಇವಳು ಪೂರ್ತಿ ಒಳ ಸೇರಿರುವುದಂತೂ ನಿಜ! ಹೊರಗಿನ ಸಿಪ್ಪೆಯ ವಿನ್ಯಾಸ, ಲಾವಣ್ಯ, ಲಾಸ್ಯ ನೋಡಿದರೆ – ಅದನ್ನು ನೋಡೆ ಹೊಸ ಸೀರೆ ಡಿಸೈನುಗಳು ಹುಟ್ಟಿಕೊಂಡರೂ ಅಚ್ಚರಿಯಿಲ್ಲ! ಒಳಗೆ ಹಣ್ಣಿನ ರೂಪ, ಹೊರಗೆ ಸುಂದರ ಹೂವಿನ ಸೊಬಗಿನ ಚಳಕ ಹೊತ್ತ ಯಾವುದಾದರೂ ಹಣ್ಣಿನ ಉದಾಹರಣೆ ಕೊಡಿರೆಂದರೆ, ಈ ಹಣ್ಣನ್ನು ಕಣ್ಣು ಮುಚ್ಚಿಕೊಂಡು ಹೆಸರಿಸಬಹುದು! (ಮೊಟ್ಟ ಮೊದಲ ಬಾರಿಗೆ ಈ ಹಣ್ಣನ್ನು ನೋಡಿಯೆ ನಮ್ಮ ಕನ್ನಡದ ಮಹಾಕವಿಯೊಬ್ಬ – ‘ಹಣ್ ರೂಪಮೆ ರೂಪಂ’ ಎಂದು ಉದ್ಗಾರ ತೆಗೆದನಂತೆ…ಅದು ಮುದ್ರಾರಾಕ್ಷಸನ ಎಡವಟ್ಟಿನಿಂದಾಗಿ ‘ಪೆಣ್ ರೂಪಮೆ ರೂಪಂ’ ಎಂದಾಗಿದ್ದು ಗೊತ್ತಾದರೂ, ಆಗಲೆ ಅದನ್ನು ಓದಿ ಖುಷಿ ಪಟ್ಟಿದ್ದ ಹೆಂಡತಿಯ ಮೋರೆ ನೆನೆದು, ಮತ್ತೆ ಬದಲಿಸದೆ ಹಾಗೆಬಿಟ್ಟನೆಂದು ಹೇಳುತ್ತಾರಾದರೂ ಇದಕ್ಕೆ ಐತಿಹಾಸಿಕ ಸಾಕ್ಷ್ಯಾಧಾರ, ದಾಖಲೆಗಳಿಲ್ಲವಾಗಿ ಯಾರಿಗು ಇದರ ಹಿನ್ನಲೆ ಗೊತ್ತಾಗಲಿಲ್ಲವಂತೆ!)

ಹೊರಗಿನಿಂದಲೆ ನೋಡಲು ಭಾರಿ ಕುಳದಂತೆ ಕಾಣುವ ಈ ಹಣ್ಣಿನ ಒಳಭಾಗ ಮಾತ್ರ ಅಪ್ಪಟ ಬಂಗಾರಿ – ಒಳಗೆಲ್ಲ ಬಾಳೆಹಣ್ಣಿನ ಹಾಗೆ ಬರಿ ತಿನ್ನಬಹುದಾದ ತಿರುಳೆ; ಆದರೆ ಈ ರಸಭರಿತ ತಿರುಳಿನ ತುಂಬಾ ಸಹಸ್ರಾರು ತೆಗೆದು ಬಿಸಾಡಲಾಗದ ಸಣ್ಣ, ಸಣ್ಣ ಬೀಜಗಳು – ನಮ್ಮ ಸಹಸ್ರಾಕ್ಷನ ಹಾಗೆ (ಹಣ್ಣಿನ ಹೋಲಿಕೆಯೆ ಬೇಕೆಂದರೆ – ಕಿವಿ ಫ್ರೂಟಿನ ಹಾಗೆ ಎನ್ನಬಹುದು). ಆದರೆ ಹಾಗೆಂದು ಬೀಜದ ಒಳಗಿರಬಹುದಾದ ಕೊಬ್ಬಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ – ತುಸುವೆ ಕೊಬ್ಬಿರುವುದು ನಿಜವಾದರೂ, ಬರಿ ಅಸಂತೃಪ್ತ ಕೊಬ್ಬೆ ತುಂಬಿದ್ದು, ಟ್ರಾನ್ಸ್ ಫ್ಯಾಟಿನ ಹಂಗಿಲ್ಲದೆ ಇರುವುದರಿಂದ ತಲೆಕೆಡಿಸಿಕೊಳ್ಳುವ ಪ್ರಮೇಯವೇನಿಲ್ಲ – ಪೀಡ್ಜ, ಬರ್ಗರುಗಳಂತ ಎಷ್ಟೊ ಜಂಕು ಫುಡ್ಡುಗಳಿಗಿಂತ ಖಂಡಿತ ಎಷ್ಟೋಪಟ್ಟು ಕೆಳಮಟ್ಟದ ಕೊಬ್ಬಷ್ಟೆ ಇರುವುದು. ಅಷ್ಟಾದರೆ ಮುಗಿಯಿತು ನೋಡಿ – ಉಳಿದಿದ್ದೆಲ್ಲ ಬರಿ ಕೊಚ್ಚಾಟ, ಬಾಯ್ಬಿಚ್ಚಾಟ, ಕಚ್ಚಾಟ – ದೇಹಕೆ ಆರೋಗ್ಯದೂಟ! ಅಂದ ಹಾಗೆ ಈ ಒಳ ತಿರುಳು ಸಾಮಾನ್ಯವಾಗಿ ಬಿಳಿ ಬಣ್ಣದಿದ್ದರೂ, ಹೆಚ್ಚು ರುಚಿಯಿರುವುದು ಮಾತ್ರ ಕೆಂಪನೆಯ ತಿರುಳಿನ ಹಣ್ಣಿಗೆ (ಹಾಗೆ ಹೆಚ್ಚು ಆರೋಗ್ಯಕಾರಿ ಗುಣಗಳು ಈ ಕೆಂಪಮ್ಮನ ಪಾಲಂತೆ). ಹೀಗಾಗಿ ಕೆಂಪು ಕವಚದ ಕೆಂಪು ತಿರುಳಿನ ಹಣ್ಣಿಗೆ ಬೆಲೆಯೂ ಹೆಚ್ಚು – ಈಗ ತಿಳಿಯಿತೆ, ನಾನು ತಂದ ಹಣ್ಣಿಗೇಕೆ ತುಟ್ಟಿ ಬೆಲೆಯೆಂದು (ಇನ್ನು ತಿಳಿಯದಿದ್ದರೆ ಚಿತ್ರದಲ್ಲಿರುವ ನಾ ತಂದ ಹಣ್ಣಿನ ಬಣ್ಣ ನೋಡಿ!) ಈ ಹಣ್ಣಿನ ಇನ್ನೊಂದು ವೈವಿಧ್ಯ ಹಳದಿ ಸೀರೆಯನುಟ್ಟ ಚೆಲುವೆ – ಆದರೆ ಒಳಗಿನ ತಿರುಳು ಮಾತ್ರ ಬಿಳಿಯೆ. ಅದೇನೆ ಇರಲಿ – ಹೊರಗಿನ , ಒಳಗಿನ ಬಣ್ಣ ಯಾವುದೇ ಇರಲಿ ಎಲ್ಲದರ ಬೀಜವೂ ಒಂದೆ ತರಹ, ಒಂದೆ ಬಣ್ಣ , ‘ ವಿವಿಧತೆಯಲ್ಲಿ ಏಕತೆ’ ಅನ್ನುವ ಹಾಗೆ! ಬಿಳಿ ತಿರುಳಿನ ಹಣ್ಣು ತುಸು ಮೆಲುವಾದ ಸಿಹಿಯ ಹೂರಣ ಹೊಂದಿದ್ದರೆ, ಕೆಂಪಕ್ಕ ಮಾತ್ರ ಅಪ್ಪಟ ರಸಭರಿತ ಸಿಹಿ – ತಿಂದ ಬಳಿಕವೂ ನಾಲಿಗೆಯ ಮೇಲುಳಿಯುವಷ್ಟು. ಸಾಧಾರಣ ಅರ್ಧ ಕೇಜಿಗೂ ಹೆಚ್ಚು ತೂಗುವ ಇಡಿ ಹಣ್ಣನ್ನು ಒಬ್ಬೊಬ್ಬರೆ ಒಂದೆ ಸಾರಿಗೆ ತಿಂದುಬಿಡುತ್ತಾರಂತೆ..ಹಾಗೆ ಸಣ್ಣ ಎಚ್ಚರಿಕೆ – ಹಾಗೆ ಎಗ್ಗುಸಿಗ್ಗಿಲ್ಲದೆ ಎಕ್ಕಮುಕ್ಕ ಎರಡು ಮೂರು ಹಣ್ಣು ತಿನ್ನಲು ಹೋಗಬೇಡಿ ; ನಂತರದ ಫಾರಿನ್ ಯಾತ್ರೆಯಲ್ಲಿ ಕೆಲವೊಮ್ಮೆ ಕೆಂಪು ತೀರ್ಥ ವಿಸರ್ಜನೆಯಾಗಿದ್ದು ಕಂಡು ರಕ್ತವೊ ಏನೋ ಅಂತ ಗಾಬರಿಬಿದ್ದು , ಡಾಕ್ಟರ ಹತ್ತಿರ ಹೋಗಿ…….ಯಾಕೆ ಬೇಕು ಪಜೀತಿ? ಆದರೆ ಈ ಬಣ್ಣ ನೈಸರ್ಗಿಕವಾದದ್ದೆ ಇದರಲ್ಲಿ ಗಾಬರಿಪಡಲೇನೂ ಇಲ್ಲ ಅನ್ನುತ್ತವೆ ಇದನ್ನು ಬೆಳೆಯುವ ಮೂಲಗಳು. ಅಲ್ಲದೆ ಇದರ ಔಷದೀಯ ಗುಣದಿಂದಾಗಿ ಬಿಳಿ ತಿರುಳಿಗಿಂತ ಕೆಂಪು ತಿರುಳೆ ಶ್ರೇಷ್ಟ (ಅದಕ್ಕೆ ಹೆಚ್ಚು ಬೆಲೆ ಕೂಡಾ) ಅನ್ನುತ್ತಾರೆ, ಈ ಕೆಂಪಮ್ಮನ ವಕ್ತಾರರು.

ಈ ಹಣ್ಣಿನ ಮತ್ತೊಂದು ಸಾಧಾರಣವಾಗಿ ಗೊತ್ತಿರದ ವೈಶಿಷ್ಟ್ಯವೆಂದರೆ – ಇದೊಂದು ಕ್ಯಾಕ್ಟಸ್ ಜಾತಿಗೆ ಸೇರಿದ ಹಣ್ಣು ಎಂಬುದು. ಮೂಲತಃ ಉತ್ತರ ಮತ್ತು ದಕ್ಷಿಣ ಅಮೇರಿಕಾ ಮೂಲಗಳಿಂದ ಜನಿಸಿ ವಲಸೆಗೊಂಡ ಈ ಹಣ್ಣು ಈಗ ಆಗ್ನೇಯ ಏಷಿಯಾ ಮತ್ತು ಪೂರ್ವ ಏಷಿಯಾ ಭಾಗಗಳಲ್ಲಿ ಹೇರಳವಾಗಿ ಬೆಳೆಯಲ್ಪಡುವ ಹಣ್ಣು. ಇದರ ಹೂವ್ವುಗಳು ರಾತ್ರಿ ಮಾತ್ರವೆ ಅರಳುವುದಂತೆ. ಅದರ ಸುಂದರ ರೂಪಕ್ಕೆ ಮನಸೋತು ‘ ರಾತ್ರಿ ರಾಣಿ, ಚಂದ್ರ ಪುಷ್ಪೆ’ ಅಂತೆಲ್ಲಕರೆಯುತ್ತಾರೆಂದು ವಿಕ್ಕಿಯ ಉವಾಚ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿಂದ ಕರೆದರೂ – ಎಲ್ಲಾ ಕಡೆ ಹೆಚ್ಚು ಕಡಿಮೆ ಡ್ರಾಗನ್ನಿನ ಹೆಸರಿರುವುದು ಕುತೂಹಲಕರ! ಹೆಚ್ಚಿನ ಮಾಹಿತಿಗೆ ಕೆಳಗಿರುವ ವಿಕ್ಕಿಯ ಕೊಂಡಿಯನ್ನು ಗಿಂಡಿ ನೋಡಿ.

ಇನ್ನು ತುಸು ಆರೋಗ್ಯ ಕುರಿತ ಪ್ರವಚನ – ಈ ಹಣ್ಣಿನ ಆರೋಗ್ಯದ ಯೋಗ್ಯತೆಗಳನ್ನು ಕುರಿತು ಬಣ್ಣಿಸಿರುವುದನ್ನು ಓದುತ್ತಾ ಓದುತ್ತಲೆ ನಾನೆ ಒಂದು ಇಡಿ ಕೆಂಪಕ್ಕನನ್ನು ಮುಗಿಸಿಬಿಟ್ಟೆ (ವಿಶೇಷ ಸೂಚನೆ – ಸಿಪ್ಪೆ ತೆಗೆದ ಮೇಲೆ ಸುಮಾರು 350-400 ಗ್ರಾಂನ ಹಣ್ಣು ತಿಂದ ಮೇಲೂ ಫಾರಿನ್ ಯಾತ್ರೆಯಲ್ಲಿ ಯಾವುದೆ ಅವಲಕ್ಷಣಗಳಿಲ್ಲದೆ ಸುಗಮವಾಗಿಯೆ ನಡೆಯಿತೆಂದು ತಿಳಿಸಲು ಹರ್ಷಿಸುತ್ತೇನೆ!) ಮೊದಲನೆಯದಾಗಿ ಇದೊಂದು ಭಯಂಕರ ಕೆಳಮಟ್ಟದ ಕೊಲೆಸ್ಟರಾಲ್ ಇರುವ ಹಣ್ಣಂತೆ ಮತ್ತು ಅದನ್ನು ಉತ್ಪಾದಿಸುವ ಕೊಬ್ಬು ಇದರಲ್ಲಿಲ್ಲವಂತೆ. ಇದರ ನಂತರದ ಆರೋಗ್ಯದ ವಕ್ತಾರ – ಯಥೇಚ್ಚವಾಗಿ ಹೇರಳವಾಗಿರುವ, ಸುಲಭದಲ್ಲಿ ಹೀರಿಕೊಳ್ಳಲ್ಪಡುವ ವಿಟಮಿನ್ ‘ಸಿ’. ಇನ್ನು ಮೂರನೆಯ ಹಾಗು ಸರ್ವೋತ್ತಮ ಆರೋಗ್ಯದ ಯೋಗ್ಯತೆಯೆಂದರೆ ಇದರ ‘ಉತ್ಕರ್ಷಣ ನಿರೋಧಕ’ ಗುಣ (ಆಂಟಿ ಆಕ್ಸಿಡೆಂಟ್ ಗುಣ). ಡ್ರಾಗನ್ನಿನ ಹಣ್ಣಲ್ಲಿ ವಿಪುಲವಾಗಿರುವ ಈ ಉತ್ಕರ್ಷಣ ನಿರೋಧಕಗಳು, ಅಡ್ಡಾದಿಡ್ಡಿ, ಬೀದಿ ಬಸವಗಳ ಹಾಗೆ ಓಡಾಡಿಕೊಂಡಿರುವ ‘ಪೋಲಿ ಕಣಗಳ’ ಜತೆ ಸೇರಿ ಕ್ಯಾನ್ಸರಿನಂತ ಭಯಾನಕ ಪಿಡುಗಾಗುವುದಕ್ಕೆ ತಡೆ ಹಾಕುತ್ತವಂತೆ! ಈ ಹಣ್ಣಿನಲ್ಲಿರುವಷ್ಟು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಬೇರೆ ಯಾವುದೆ ಹಣ್ಣಲ್ಲು ಸಿಗುವುದಿಲ್ಲವಂತೆ ( ಅಬ್ಬಾ! ಬದುಕಿದೆ – ಹೆಚ್ಚು ತೆತ್ತರೂ ಪೆಕರನಾಗಲಿಲ್ಲವಲ್ಲ ಸದ್ಯ!). ಇನ್ನು ಕಡೆಯದಾಗಿ ಸಿಪ್ಪೆ ಮತ್ತು ಹಣ್ಣಿನಲ್ಲಿರುವ ಅಗಾಧ ನಾರಿನ ಅಂಶ – ಇದರಲ್ಲು ಈ ಕೆಂಪವ್ವ ತೆಂಡೂಲ್ಕರನ ಹಾಗೆಯೆ ಅಂತೆ….ಆ ಮಹಾಕವಿ ‘ಹಣ್ ಸೌಂದರ್ಯಮೇ….’ ಎಂದು ಏಕೆ ಉದ್ಗಾರ ತೆಗೆದ ಎಂದು ಈಗ ನನಗೂ ಅರ್ಥವಾಗುತ್ತಿದೆ..!

ಇನ್ನು ಯಥಾರೀತಿ – ಬೆಂಗಳೂರು ಹಾಗೂ ಕರ್ನಾಟಕದ / ಭಾರತದ ಇತರೆಡೆ ಸಿಗುವ ಮಾಹಿತಿಯಿದ್ದರೆ ಪ್ರತಿಕ್ರಿಯೆಯಡಿ ಸೇರಿಸಿ. ಹಣ್ಣೇನಾದರೂ ಸಿಕ್ಕರೆ (ಅದರಲ್ಲು ಕೆಂಪಕ್ಕ) ತಿಂದು ರುಚಿ ನೋಡಿ ಪ್ರತಿಕ್ರಿಯೆ ಸೇರಿಸಿ!

ಹಾಗೆಯೆ ಹೆಚ್ಚಿನ ಮಾಹಿತಿ ಬೇಕುದ್ದರೆ ಈ ಕೆಳಗಿನ ಕೆಲ ಕೊಂಡಿಗಳನ್ನು ಗಿಂಡಿ ಅಥವ ಅಂತರ್ಜಾಲದಲಿ ಜಾಲಾಡಿ.

—————————————————————————————————————————————————-
ನಾಗೇಶ ಮೈಸೂರು, ಸಿಂಗಪುರದಿಂದ.
ಮಾಹಿತಿ ಕೃಪೆ / ಸಂಗ್ರಹಣೆ :ವಿವಿಧ ಅಂತರ್ಜಾಲ ತಾಣಗಳಿಂದ, ಪ್ರಮುಖವಾಗಿ ಕೆಳಗಿನ ತಾಣಗಳಿಂದ.
ಚಿತ್ರ ಕೃಪೆ: ನನ್ನ ಐ ಫೋನಿನ ಕ್ಯಾಮರಗೆ (ಗುಣಮಟ್ಟಕ್ಕೆ ಕ್ಷಮೆಯಿರಲಿ, ಸರ್ವೋತ್ತಮ ಚಿತ್ರಗಳಿಗೆ ಕೊಂಡಿಯನ್ನು ಗಿಂಡಿ ಅಥವ ಅಂತರ್ಜಾಲದಲಿ ಜಾಲಾಡಿ)

1. http://en.wikipedia.org/wiki/Pitaya
2. http://mannajoy.wordpress.com/2008/01/11/why-is-red-flesh-dragon-fruit-more-expensive-less-popular/
3. http://www.naturalfoodbenefits.com/display.asp?CAT=1&ID=41

ಅಂದಹಾಹಾಗೆ ಮತ್ತೊಂದು ಮಾಹಿತಿ ಸಹ – ಈ ಹಣ್ಣು ಮಧುಮೇಹ (2ನೆ ತರದ) ರಕ್ತ ಸಕ್ಕರೆಯ ಅಂಶ ನಿಯಂತ್ರಣಕ್ಕು ಸಹಕಾರಿ ಎನ್ನುತ್ತವೆ ಕೆಲವು ವೆಬ್ಸೈಟುಗಳು. ವಿವರಕ್ಕೆ ಜಾಲಾಡಿ ನೋಡಿ:

http://www.dailymail.co.uk/femail/article-2263218/CACTUS-fruit-treat-diabetes-Dragon-fruit-named-hot-new-superfood-2013.html
—————————————————————————————————————————————————-

20130608-115400.jpg

20130608-115428.jpg

20130608-115436.jpg

20130608-115520.jpg

20130608-115526.jpg

20130608-115540.jpg

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s