00014 – ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….!

=================================================================
ಪೀಠಿಕೆ:

ಇಂದು ನಾಗರ ಪಂಚಮಿಯ ದಿನ. ಅಂತೆಯೆ ಇದು ಗರುಡ ಪಂಚಮಿಯೂ ಹೌದು. ಈ ನಾಗ ಗರುಡರ ರೋಚಕ ಕಥನ ಸಾಮಾಗ್ರಿ, ನಮ್ಮ ಪುರಾಣ, ಪುರಾತನ ಕಥಾನಕದಲ್ಲಿ ಹೇರಳವಾಗಿವೆಯಾದರೂ, ವಿನತೆ ಕದ್ರುಗಳ ಮೂಲ ಕಥೆಯಿಂದಾರಂಭಿಸಿ ಸಮಗ್ರ ಕಥಾನಕವನ್ನು ಒಂದು ಕಾವ್ಯರೂಪಕವಾಗಿ ಮಾಡಬೇಕೆಂದು ಪ್ರಯತ್ನಿಸಿದ್ದರ ಫಲವೆ ಈ ಸರಳಗನ್ನಡ ನೀಳ್ಗಾವ್ಯ. ಬರೆದು ತುಸು ದಿನಗಳಾಗಿದ್ದರೂ ಪ್ರಕಟಿಸಿರಲಿಲ್ಲ. ಈ ದಿನದ ನಾಗರ ಗರುಡ ಪಂಚಮಿಯ ಸಂಧರ್ಭ ಸೂಕ್ತ ದಿನ ಸಮಯ ಬಂದಿದೆಯಾಗಿ – ಇದೊ ತಮಗಿಲ್ಲಿ ಗರುಡ-ನಾಗ ಕಾವ್ಯ ಸಮಯ. ಉದ್ದನೆಯ ಕಾವ್ಯವಾದರೂ ಸಂಪೂರ್ಣ ಕಥಾನಕದ ದೃಷ್ಟಿಯಿಂದ ಕ್ಷಮಾರ್ಹವೆಂಬ ಅನಿಸಿಕೆಯಲ್ಲಿ ಹಾಕುತ್ತಿದ್ದೇನೆ. ನಾನು ಬಾಲ್ಯದಿಂದ ಕೇಳಿದ್ದ, ಓದಿದ್ದರ ಸಂಕಲಿತ ರೂಪದಲ್ಲಿ ಈ ಕಾವ್ಯ ಬಂದಿರುವ ಕಾರಣ, ಗ್ರಹಿಕೆಯಲ್ಲಿ ತಪ್ಪು, ದೋಷಗಳೇನಾದರೂ ಕಾಣಿಸಿದ್ದರೆ ದಯವಿಟ್ಟು ಮನ್ನಿಸಿ 🙂

ಸಾಧಾರಣ ಬ್ಲಾಗಿನ್ಹೆಸರಲಿ ಗದ್ಯವನೆ ಬರೆಯುತಿದ್ದವನಿಗೆ, ಇಂದೊಂದು ಪದ್ಯದ ರೂಪದಲಿ ಬರೆವ ಪ್ರೆರೇಪಣೆ ಏಕಾಯ್ತೊ ನಾಕಾಣೆ. ಕದ್ರು, ವಿನತೆ, ಗರುಡ ನಾಗಗಳ ವಸ್ತುವೇಕೆ ಮನಸಿಗೆ ಬಂತೊ ಎಂಬುದನೂ ಅರಿಯೆ. ಆದರೆ, ಬಂದ ಲಹರಿಯನು ಬಿಡದೆ ಹಾಗೆ ಹರಿಯಬಿಟ್ಟಿದ್ದರ ಪರಿಣಾಮ – ಈ ಮುವ್ವತ್ತು ಪಂಕ್ತಿಗಳ ಪದ್ಯ ಕಥನ. ಪೂರ್ಣ ಕಥೆಯ ಮುಖ್ಯಾಂಶಗಳಾವೂ ಕಾವ್ಯಸಂಭ್ರಮದಲ್ಲಿ ಕಳುವಾಗದಿರಲೆಂದು, ಸಾಕಷ್ಟು ಗಮನ ಕೇಂದ್ರೀಕರಿಸಿ ಒಟ್ಟಾರೆ ಕಥನದ ಮೂಲ ಲಯ , ಆಶಯಕ್ಕೆ ಧಕ್ಕೆ ಬಾರದ ಹಾಗೆ ಹಿಡಿದಿಡಲು ಯತ್ನಿಸಿದ್ದೇನೆ; ಆ ಯತ್ನ ಕಿಂಚಿತ್ತಾದರೂ ಸಫಲವಾಗಿದ್ದರೆ, ಈ ಕಿರು ಪ್ರಯತ್ನ ಸಾರ್ಥಕ.

ಧನ್ಯವಾದಗಳೊಂದಿಗೆ,
-ನಾಗೇಶ ಮೈಸೂರು
11.08.2013 (sampada)

=================================================================

ಉಚ್ಚೈಶ್ರವಸ್ಸಿನ ಕಪ್ಪು ಬಾಲದಮಚ್ಚೆ….!
________________________
(ಕದ್ರು ವಿನತೆಯರ ಪಂಥ)

ಕಶ್ಯಪ ಬ್ರಹ್ಮನಿಗಷ್ಟೊಂದು ಪತ್ನಿಯರು
ಹದಿಮೂರರಲಿಬ್ಬರಾ ವಿನತೇ ಕದ್ರು
ಸಂತಾನವನ್ಹಡೆಯಲವರಾಕಾಂಕ್ಷಿತರೆ
ಬೇಡಿರಲೆ ಪತಿಗೆ ವರ ಕೊಡೋ ದೊರೆ ||(01)||

ಕಶ್ಯಪ ಪ್ರಸನ್ನ ಚಿತ್ತ ಮುದ್ದಿನ್ಹೆಂಡಿರತ್ತ
ನಸುನಗೆ ಕೇಳಿತ್ತ ವರವೇನು ಬೇಕಿತ್ತ
ಕದ್ರುವೆಂದಳು ಸಹಸ್ರ ನಾಗರಹುತ್ತ
ವಿನತೆಗೆರಡಂತೆ ಮೀರಿಸೆ ಸಂಯುಕ್ತ ||(02)||

ತಥಾಸ್ತುವೆಂದನಾ ಋಷಿವರ ಭರದಿ
ಕದ್ರುವ್ಹಡೆದಿಟ್ಟಳಾ ಮೊಟ್ಟೆ ಸಾವಿರದಿ
ವಿನತೆಗೆರಡು ಕಲಸಿಟ್ಟ ಘೃತಭಾಂಡ
ಕಾಯ್ದಿಟ್ಟ ತೀರ್ಪಿಗೆ ಕಾದಾಡಿದವಂಡ ||(03)||

ನಾಗಸರ್ಪಗಳಾಗ ನಳನಳಿಸಿ ಹುಟ್ಟೆ
ಸಾವಿರ ಮೊಟ್ಟೆಗಳೊಡೆದ ಒಳಗುಟ್ಟೆ
ಹಿರಿಯವನಾದಿಶೇಷ ಹರಿಗ್ಹಾಸಿ ತಲ್ಪ
ವಾಸುಕಿಯೇ ಸಮುದ್ರಮಥನ ಸರ್ಪ ||(04)||

ಮೂರನೆಯವ ತಕ್ಷಕ ನಾಗಗಳ ನಾಗ
ಹೀಗೆ ಸಾವಿರ ನಾಗ ಜನಿಸಿದವೆ ಬೇಗ
ವಿನತೆಗೆ ಆತಂಕ ಬಿಚ್ಚದೇಕೋ ಮೊಟ್ಟೆ
ಕಾಯದೆ ಒಡೆದಳೆ ಹೆಳವನ್ಹೆತ್ತ ಹೊಟ್ಟೆ ||(05)||

ರೋಧಿಸಿದ ಶಿಶು ನೀ ಕಾಲೇಕಮ್ಮ ಕಿತ್ತೆ
ಸಹನೆಯಿಂದಿರದೇ ಹೆಳವನ ಮಾಡಿಟ್ಟೆ
ಈ ಪಾಪಕನುಭವಿಸು ದಾಸಿಯ ಪಾಡೆ
ವಿಮೋಚನೆ ಅಣುಗದಮ್ಮನೆ ಕಾಪಾಡೆ ||(06)||

ಶಪಿಸಿದೀ ಮಗನೆ ಅರುಣನಾಗ್ಹೊರಟನೆ
ಸೂರ್ಯರಥದಾ ಸಾರಥಿಯಾಗುರಿದನೆ
ಕಾದಳೆ ಜತನದಲಿ ಕಿರಿಮಗನಾ ಅಂಡ
ತಾಳ್ಮೆಫಲಸಿಹಿ ಹುಟ್ಟೆ ಗರುಡ ಪ್ರಚಂಡ ||(07)||

ಅಂಥಹ ಸಮಯದಲೆ ಸಮುದ್ರಮಥನ
ಹುಟ್ಟಿತೇ ಅಮೃತ ಕಲ್ಪವೃಕ್ಷ ಕಾಮಧೇನ
ಉಚ್ಚೈಶ್ರವಸ್ಸೆಂಬ ಶ್ರೇಷ್ಠಾತಿಶ್ರೇಷ್ಠಾಶ್ವೇತಾಶ್ವ  
ಹಾಲಾಹಲದೊಡನೆಯೆ ಜನಿಸೀ ಸರ್ವಸ್ವ ||(08)||

ಶ್ವೇತಾಶ್ವ ಆಕಾಶಗಮನದಲಿ ಮನೋಹರಿ
ಬೆಕ್ಕಸ ಬೆರಗಾಗಿ ನೋಡುವರೆಲ್ಲರ ಲಹರಿ
ಸಖೇದಾಶ್ಚರ್ಯ ಅತಿಶಯಾ ಸೌಂದರ್ಯಾ
ಮುಟ್ಟಿ ನೋಡಲೆ ಬಹಳ ಭಾಗ್ಯವೇ ವಿರಳ ||(09)||

ಸತಿ ಸವತಿಯರಿಬ್ಬರು ಬಾಯ್ಬಿಟ್ಟ ನೋಟ
ರೂಪ ಲಾವಣ್ಯ ಒನಪೊಯ್ಯಾರ ಮುಕುಟ
ಹಾರಿಹೋಗೆ ಕದ್ರು ಬಾಲವಿದೆಯೆನೆ ಕಪ್ಪು
ವಿನತೆಯೆಂದಳು ತಪ್ಪು ಎಲ್ಲವು ಬಿಳುಪು ||(10)||

ಮೋಜಿನಲ್ಹೆಂಗಳೆಯರಾಡುತ ಪಂಥದಾಟ
ವಾಗ್ವಾದಕಿಳಿದರೆ ವಾಗ್ಯುದ್ದವಾಯ್ತೆ ಖಚಿತ
ಆಗಸದಲ್ಹಾರಿಹೋದ ದೇವಾಶ್ವ ಅಪರಿಚಿತ
ಸೋಲಿಸಿ ದಾಸಿಯೆನಿಸೆ ಗುದ್ದಾಟದಿ ನಿರತ ||(11)||

ನಿಶ್ಚಯಿಸಿ ಮೇಯಲೆ ಬಯಲಿಗಿಳಿದ ಗಳಿಗೆ
ಪರೀಕ್ಷಿಸಿದ್ದೇ ಸರಿಯೆಂದಾ ವನಿತಾ ಮಳಿಗೆ
ಕದ್ರುವೆಂದಳು ಸುತರೆ ಸುತ್ತಿಬಿಡಿ ಬಾಲಾಶ್ವ
ಕಪ್ಪಿಟ್ಟರೆ ಬಾಲ ದಾಸಿ ಗರುಡಜತೆ ಸಾಂಗತ್ಯ ||(12)||

ತಳಮಳಿಸಿದವು ಮೋಸ ವಂಚನೆ ಕೇಡಿಗೆ
ಬೇಡಮ್ಮ ಗೆಲುವು ನೀತಿ ನಿಯಮಾ ಕಡೆಗೆ
ಸಿಟ್ಟುರಿದು ಕದ್ರು ಶಪಿಸೆ ಮಾತೃ ದ್ರೋಹಕೆ
ಬಲಿಯಾಗೆಂದಳೆ ಜನಮೇಜಯನ ಯಜ್ಞಕೆ ||(13)||

ನಡುಗಿ ಥರಥರ ಕೆಳ ಮಡುಗಿದಾ ನಾಗಶಿರ
ಕ್ಷಮಿಸು ಮಾತಾ ನಿನ್ನಾಣತಿಯನೇ ಹೊತ್ತಿರ
ಬೆಳಗಲಿ ಬಯಲಲ್ಹತ್ತಿ ಸುತ್ತುವವನಾ ಬಾಲ
ಕಾಲ ಮಿಂಚುವ ಮುನ್ನ ತೋರಿಬಿಡೆ ತೊಗಲ ||(14)||

ಗರ್ವದಲಿ ಕದ್ರು ಕರೆದೊಯ್ದಳೆ ವಿನತೆ ಜತೆ
ಏನದ್ಭುತದಚ್ಚರಿ ಚಂದ್ರಮನಲು ಕರಿಯಚುಕ್ಕೆ
ಗೋಳಾಡಿದಳೆ ಸೋದರಿ ದಕ್ಷಬ್ರಹ್ಮನ ಕುವರಿ
ದಾಸಿಯಾಗೊ ಗತಿ ದೌರ್ಭಾಗ್ಯಕೆ ತನು ಬೆವರಿ ||(15)||

ಬಸವನ್ಹಿಂದೆ ಬಾಲ ತಾಯಿ ಸೆರಗಲಿ ಗರುಡ
ದಾಸಿಯಾದವಳ ಜತೆ ದಾಸ್ಯದಿ ನರಳಿ ಬಿಡ
ಬೆಳೆದಂತೆ ಬಾಲಕನಿಗೆ ಏರಿತೇರಿತೇ ದುಗುಡ
ಕದ್ರುವನೆ ಕೇಳಿದ ಬಿಡುಗಡೆ ದಾರಿ ಹೇಳಿಬಿಡ ||(16)||

ವರ್ಷಗಟ್ಟಲೆ ದಾಸ್ಯ ಹೇಗೂ ಕಳೆದಾಯ್ತು ಸಹ್ಯ
ವೀರತ್ವಕೆ ಗರುಡಗೆ ಸಮನಿಲ್ಲ ಬಲನಾಗ ಅವಶ್ಯ
ತಂದುಕೊಡೊ ಸುರಲೋಕದಾ ಅಮೃತ ಭಾಂಡ
ನಿನ್ನಮ್ಮಗೆ ಮುಕ್ತಿ ದಾಸ್ಯದ ಸಂಕೋಲೆ ನೋಡಾ ||(17)||

ದಾರಿ ಕಾಣೇ ಗರುಡ ಉಕ್ಕಿದಾ ಹರ್ಷದ ಕೊಡ
ವಚನವಿತ್ತನಮ್ಮಗೆ ತಂದಿಡುವೆ ಅಮೃತಭಾಂಡ
ಕೊಡಿಸಿಬಿಡುವೆನೆ ಮುಕ್ತಿ ದಾಸ್ಯದಿಂದಾ ವಿಮುಕ್ತಿ
ನೀ ಕಾಲ ಕಾಲಕು ಪಟ್ಟ ಕಷ್ಟಕೆ ಕೊನೆಗೂ ಶಾಸ್ತಿ ||(18)||

ಹಾರಿದನೆ ಗರುಡ ದೇವಲೋಕ ತತ್ತರಿಸಿ ಗಾಢ
ಯುವಕನ ಶಕ್ತಿ ಸಾಮರ್ಥ್ಯಕೆ ಸಮವಿರದೆ ಕಾಡ
ಎದ್ಧು ಬಿದ್ದೋಡಿದರು ಕಾದಿದವರು ಸೋತಕುರು
ಇಂದ್ರನ್ವೊಜ್ರಾಯುಧಕೆ ದಿಗಿಲು ಕಾಯುವರಾರು ||(19)||

ಓಡಿದನಾ ಇಂದ್ರ ಶರಣು ಬೀಳುತೆ ಹರಿಚರಣಕೆ
ಕಾಪಾಡಯ್ಯಾ ಅಜನೆ ಸಂಚಕಾರಾ ಮತ್ತಮೃತಕೆ
ಧೂಳಿಪಟ ಮಾಡಿ ಸ್ವರ್ಗವೆ ಸವರಿಬಿಟ್ಟನೆ ಗರುಡ
ಕಂಡವರ ಪಾಲಾದರೆ ಅಮೃತ ನಂಬಾಳೆ ಬರಡ ||(20)||

ಹರಿ ಚಿಂತನೆ ಚಣ ದುಡುಕೆ ಅಕಾಲ ಮಹೇಂದ್ರ
ಸಂಭಾಳಿಸುವೆ ನಾನವನನ್ನು ನಿರಾಳದೆ ಚದುರ
ಅಮೃತವೆಂದು ದೇವಗಣಗಳಿಗಿತ್ತ ವರದಸೊತ್ತು
ಹೇಗಾದರು ಗರುಡನೊಲಿಸೆ ನಯದೆ ಸ್ತುತಿಸಿತ್ತು ||(21)||

ವಿಷ್ಣುವಿನ ಮುಖಸ್ತುತಿಗೆ ನಾಚಿ ನೀರಾದ ಗರುಡ
ತನ್ನ ವಾಹನವಾಗೆಂದ ಹರಿಗೆ ಕಾಲಿಗೆರಗಿದ್ದೆ ತಡ
ವರವಿತ್ತು ಕರುಣಿಸುತ ಶ್ರೀಮನ್ನಾರಾಯಣ ನೀತಿ
ನಾಗರ ಪಾಲಾಗದಂತೆ ಅಮೃತ ಕಾಪಾಡಲಣತಿ ||(22)||

ಮಾತಿತ್ತಿರುವೆ ಮಾತೆಗೆ ಮಾಡಲೇನ ದಾಸ್ಯದತಿ
ಕೊಟ್ಟ ಮಾತಿಗೆ ಕೊಂಡೊಯ್ಯಲೆ ಬೇಕಯ್ಯ ನೀತಿ
ವಚನ ಭ್ರಷ್ಟನಾದರೆ ಮಾತೆಯ ನಿಟ್ಟುಸಿರೆ ಶಾಪ
ಕ್ಷಮಿಸಿಬಿಡು ಹರಿ, ಇಂದ್ರಯ್ಯ ನಾನಸಹಾಯಕ ||(23)||

ತಟ್ಟನ್ಹೊಳೆಯಿತುಪಾಯ ದೇವರಾಜ ಯೋಜನೆ
ಕೊಂಡೊಯ್ಯಲೀ ಗರುಡ ಅಮೃತ ಪಾತ್ರೆ ಜತನೆ
ಬಿಡಿಸಲಿ ದಾಸ್ಯವ ಮಾತೆಗೆ ಎಚ್ಚರವಿರಲಿ ಮತ್ತೆ
ಮತ್ತೆ ತಂದಿಟ್ಟಿಡಲಿ ಹನಿಯೊಂದು ಸೋರದಂತೆ ||(24)||

ಗರುಡನೊಪ್ಪಿ ಹಾರಿ ಅಮೃತದ ಜತೆ ಊರದಾರಿ
ಕೊಡವನಿತ್ತ ಕದ್ರುವಿನ ಮಕ್ಕಳಿಗೆ ಸಿಕ್ಕ ರಹದಾರಿ
ಮಾತಂತೆ ತಾಯನು ಮುಕ್ತಿಗೊಳಿಸಿದಳಾ ನಾಗಿಣಿ
ಸ್ವಾತ್ಯಂತ್ರದಾ ಹಸಿರು ಗಾಳಿ ವಿನತೆಗೆ ಅಸ್ವಾದಿನಿ ||(25)||

ಧರ್ಭೆಯ ಹುಲ್ಹಾಸಿನ ಮೇಲಿಟ್ಟ ಅಮೃತ ಭಾಂಡ
ಮಡಿ ಶುಚಿರ್ಭೂತರಾಗಿ ಬಂದು ಸೇವಿಸೊ ಕಾಂಡ
ಎಂದಟ್ಟಿದ ನಾಗರನೆಲ್ಲಾ ಸರಸರ ನದಿ ನೀರಿನತ್ತ
ಹಿಂಬರುವ ಮುನ್ನವೆ ಮಂಗಮಾಯ ಬರಿ ಹುಲ್ಲಿತ್ತ ||(26)||

ಒಂದು ಹನಿಯೂ ಚೆಲ್ಲದೆ ಸೇರಿತೆ ದೇವಲೋಕಕೆ
ಕಾದಿತ್ತೆ ನಿರಾಶೆ ನಾಗರ ಕಾತರಾತರ ಸಂತತಿಗೆ
ಆತುರದಲಿ ನೆಕ್ಕೆ ಧರ್ಭೆಗೆ ಚೆಲ್ಲಿದ್ದರೆಂಬ ದುರಾಸೆ
ತೀಕ್ಷತೆ ಕುಯ್ದಿತೆ ನಾಗನಾಲಿಗೆಗೆರಡಾಗಿ ಕತ್ತರಿಸೆ ||(27)||

ಅಂದಿನಿಂದಾಯ್ತು ಎರಡು ನಾಲಿಗೆಯ ನಾಗರ
ಲಭ್ಯವಿಲ್ಲದಾ ಪ್ರಾಪ್ತಿ ಸಿಕ್ಕೂ ಕೈಜಾರೋ ಪ್ರವರ
ಭಗವಂತನ ಪಾದ ಸೇವೆಯ ಭಾಗ್ಯದಲಿ ಗರುಡ
ಹೊತ್ತು ಹರಿಯನ್ಹಾರಿದ್ದೇ ಹಾರಿದ್ದು ತಾನೆಡಬಿಡ ||(28)||

ತಾಯ ಶಾಪ ಫಲಿಸಿತೆ ಬಿಡದೆ ಸರ್ಪಯಾಗದಿ
ಹಾವುಗಳೆಲ್ಲಾ ಆಹುತಿಯಾಗೆ ಯಜ್ಞ ಕುಂಡದಿ
ಮಾತೃಪ್ರೇಮವುರುಳಾಗಿ ಕಾಡಿದ ವಿಪರ್ಯಾಸ
ಆ ಮಕ್ಕಳಿಗಾಗಿ ತಾನೆ ಕದ್ರೂ ಪಟ್ಟ ವನವಾಸ ||(29)||

ನಿಜ ಸತ್ವಕೆ ಗೆಲುವೆಂದು ಸಾರಿ ಗರುಡಾಭರಣ
ವಿನತೆಯಾದರ್ಶದ ರೂಪದಿ ಗುರಿಸೇರಿದ ಚಣ
ನಮ್ಮೊಳಗಿನಾ ಕದ್ರು ನಾಗರಗಳ ವಿಶ್ವರೂಪಕೆ
ಕಟ್ಟು ಹಾಕೆ ಕ್ಷೇಮವೆ ಸೀಳದ ನಾಲಿಗೆ ಬಯಕೆ ||(30)||

——————————————————
ನಾಗೇಶ ಮೈಸೂರು, 03.ಎಪ್ರಿಲ್.2013, ಸಿಂಗಾಪುರ
——————————————————

20130403-231251.jpg

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s