00002 – ಏನಾಗಿದೀದಿನಗಳಿಗೆ?

ಏನಾಗಿದೀದಿನಗಳಿಗೆ?

ಈಚಿನ ದಿನಗಳಿಗೇನಾಗಿದೆ ಗೊತ್ತಾ?

ಈಚಿನ ಕೆಲ ವರ್ಷಗಳಲ್ಲಿ ಸರ್ವೆಸದಾ ಕಾಡುವ ಹಲವಾರು ಭಾವಗಳಲ್ಲಿ ಒಂದು – ಈ ದಿನಗಳ ಅನಿಶ್ಚಿತತೆ. ಜಾಗತಿಕ ಗೋಮಾಳದಲ್ಲಿ ಹೆಚ್ಚು ಒಡನಾಟ, ಸಂಪರ್ಕವಿರದಿದ್ದ ದಿನಗಳಲ್ಲು ಈ ತರದ ಭಾವನೆ ಕಾಡಿದ್ದಿಲ್ಲ. ಆಗೆಲ್ಲ, ಒಂದು ರೀತಿಯ ನೆಮ್ಮದಿಯ ಭಾವವೆ ಹೆಚ್ಚು ಪ್ರಖರವಾಗಿ, ಹೆಚ್ಚು ಕಡಿಮೆ ಜೀವನವೆಲ್ಲ ಹೀಗೆ ಕಳೆದುಹೋಗುತ್ತದೆಂಬ ನಂಬಿಕೆ ಮನದಲಿದ್ದ ಸ್ಥಿತಿ. ಪ್ರತಿ ನಾಲ್ಕಾರು ವರ್ಷಗಳಿಗೊಮ್ಮೆ, ‘ರಿಸೆಶನ್ನಿನ ಭೂತ’ ಒಂದು ಬಾರಿ ಭೇಟಿ ಕೊಟ್ಟು ಹೋದನೆಂದರೆ, ಮತ್ತದೆ ನಿರಾಳ – ಪ್ರಗತಿಯ ಹೆಗಲೇರಿದ ಮರುಪಯಣದ ಹೊಸ ರೈಲು.

ಇಂದೇಕೊ ಹಾಗಿಲ್ಲ. ಆ ದಿನಗಳ ಪರಿಸರ ಮತ್ತೆ ಬರುವಂತೆಯು ಕಾಣುತ್ತಿಲ್ಲ. ಈಗ ವರ್ಷದೊಳಗಿನ ತಿಂಗಳುಗಳ ನಡುವೆಯೆ ಗಟ್ಟಿಯಾಗೇನೂ ಹೇಳಲಾಗದ ಅತಂತ್ರ ಸ್ಥಿತಿ. ಮೂರು ತಿಂಗಳು ಮಾರುಕಟ್ಟೆಯ ಆರೋಗ್ಯ ಏರುವಳಿ ಕಂಡರೆ, ತಟ್ಟನೆ ಎಲ್ಲಿಂದಲೊ ಕದ್ದು ಬರುತ್ತಾನೆ ಅತಂತ್ರತೆಯ ಸರದಾರ. ಇಳಿತದ ಹಾದಿಯಿಡಿದು ಮತ್ತೆ ಏನಾಗಲಿದೆಯೊ, ಯಾವ ಹಾದಿ ಹಿಡಿಯಲಿದೆಯೊ ಎಂಬ ಆತಂಕ, ದುಗುಡ ದುಮ್ಮಾನಗಳ ಕಾಡುವಿಕೆ ಶುರು. ಎಲ್ಲಕ್ಕೂ ಏನೆಲ್ಲಾ ಮೂಲಕಾರಣಗಳು, ಸಂಶೋಧಿತ ಉತ್ತರಗಳು, ಸಿದ್ದಾಂತಗಳು – ಎಲ್ಲ ಬಯಲಿಗೆ ಬಿದ್ದ ಆಲಯದಂತೆ ತೆರೆದುಕೊಳ್ಳತೊಡಗುತ್ತವೆ. ತಮಾಷೆಯೆಂದರೆ, ಅಲ್ಲೂ ಕಾಣಲಾಗದ ಒಮ್ಮತದ ದನಿ! ಅನುಮಾನ, ಆಶಾಭಾವ, ಸಂದೇಹ, ತುಂಬಿದ ಸಂಭಾವ್ಯಗಳ ಬೆನ್ನೇರಿದ ಸಿದ್ದಾಂತಗಳು, ವಿಶ್ಲೇಷಣೆ, ವಿವರಗಳು ಜನರನ್ನು ಮತ್ತಷ್ಟು ಕಂಗೆಡಿಸಿ ಮತ್ತಿನ್ನೂ ಆಳದ ಗೊಂದಲ್ಲಕ್ಕೆ ನೂಕುತ್ತವೆ – ಇದೆ ಪ್ರಗತಿಯ ಸಿದ್ದಾಂತವಾ? ಇದೇ ಪ್ರಗತಿಯ ಹೆಸರಲ್ಲಿ ನಾವು ತೆರಬೇಕಾದ ಬೆಲೆಯಾ? ಗೊತ್ತಿಲ್ಲಾ.

ಈ ಬಾರಿ ಕಂಪನಿಯ ಸಾಧನೆ ನಿರೀಕ್ಷಿತ ಮಟ್ಟಕ್ಕಿಂತ ಕೆಳಗೆ ಇದೆ. ಅಂದರೆ , ಈ ಬಾರಿಯ ಬೋನಸ್ಸಿಗೆ ಆಗಲೆ ಅರ್ಧಚಂದ್ರ ಬಿದ್ದಂತೆ. ಸಿಕ್ಕರೂ ಅಷ್ಟಿಷ್ಟು, ಆನೇ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗುವ ಸಾಧ್ಯತೆಗಳೆ ಹೆಚ್ಚು. ವರ್ಷಾರಂಭದಲ್ಲಿ ಸಿಕ್ಕ ಇಂಕ್ರಿಮೆಂಟುಗಳು ಹೆಚ್ಚುಕಡಿಮೆ ಮಸೂರ ಹಾಕಿ ಹುಡುಕಿದರು ಕಾಣದಷ್ಟು ಚಿಕ್ಕದು. ಆದರೆ ಕೊಂಚ ಹೊರಗಿನ ದೈನಂದಿನ ಜೀವನಕ್ಕೆ ಬರೋಣ. ದಿನ ಬೆಳಗ್ಗೆ ಕುಡಿಯುವ ಕಾಫಿ, ಚಹ ಸರಾಸರಿ ಮೂರು ತಿಂಗಳಿಗೊಮ್ಮೆಯಂತೆ ಕಡಿಮೆಯೆಂದರು ಹತ್ತು ಸೆಂಟಿನಂತೆ ಹೆಚ್ಚುತ್ತಾ ಹೋಗಿದೆ. ಐವತ್ತರವತ್ತು ಸೆಂಟಿಗೆ ಹಾಕರು ಸೆಂಟರಿನಲ್ಲಿ ಕಾಲಾಡಿಸುತ್ತಾ ಕುಡಿಯುತ್ತಿದ್ದ ಚಹಾ ಈಗ ಎಪ್ಪತ್ತರಿಂದ ತೊಂಭತ್ತರವರೆಗೂ ತೆತ್ತು ಕುಡಿಯುವ ಸ್ಥಿತಿ. ಮೂರು ಡಾಲರಿನಲಿ ದೊರಕುತ್ತಿದ್ದ ಹಗಲಿನೂಟ ಈಗ ನಾಲ್ಕೈದರಿಂದ ಆರರ ತನಕ ತೆರಬೇಕಾದ ರೀತಿ. ಇನ್ನು ನಮ್ಮವರದೆ ಭಾರತೀಯ ರೆಸ್ಟೊರೆಂಟುಗಳಿಗ್ಹೋದರೆ ಕಥೆಯೇನೂ ವಿಭಿನ್ನವಲ್ಲ. ಐದು ಡಾಲರಿನ ಕೆಳಗೆ ಇರುತಿದ್ದ ದಕ್ಷಿಣ ಭಾರತದ ಸಸ್ಯಾಹಾರಿ ಊಟ ಈಗ ಏಳು – ಎಂಟರ ಆಸುಪಾಸಿನಲ್ಲಿದೆ. ಕಾಫಿ ಚಹಗಳು ಒಂದು ಡಾಲರಿನ ಸೀಮಾರೇಖೆ ದಾಟಿ, ಒಂದೂವರೆಯ ಆಚೀಚೆ ಹೆಣಗುತ್ತಿವೆ. ಇಲ್ಲೂ, ಈ ಏರಿಕೆ ಒಂದೇ ದಿನದಲ್ಲಾಗಿದ್ದಲ್ಲ; ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಹಂತ ಹಂತವಾಗಿ ಏರಿದ್ದು. ಇಷ್ಟು ವೇಗವಾಗಿ, ಕ್ಷಿಪ್ರ ಗತಿಯಲ್ಲಿ ಮೇಲೇರಿದ ತರ ನೋಡುತ್ತಿದ್ದರೆ, ಏರಿಸಲೇಬೇಕಾದ ಅನಿವಾರ್ಯತೆಯಲ್ಲಿ ಮಾರಾಟಗಾರರ ಒತ್ತಡಗಳು ಕೆಲಸ ಮಾಡುತ್ತಿರುವಂತೆ ಕಾಣುತ್ತಿವೆ. ಮೂಲ ಸರಕಿನ ಬೆಲೆ, ಕಾರ್ಮಿಕ ಕೂಲಿ ಸಂಬಳದ ಹೆಚ್ಚಳ ಇತ್ಯಾದಿಗಳೆಲ್ಲ ಒಟ್ಟಿಗೆ ಪರಿಣಾಮ ಬೀರಿದ ಸಮಗ್ರ ಪರಿಣಾಮವಿದ್ದರೂ ಇರಬಹುದು.

ವಿಷಯ ಈ ಹೆಚ್ಚಳದ್ದಲ್ಲ – ಈ ಪರಿಯ ವೇಗೋತ್ಕರ್ಷದ್ದು. ಹತ್ತು ವರ್ಷದ ಹಿಂದೆ ಇದೇ ನಗರದಲ್ಲಿ, ಇದೇ ಜೀವನ ಶೈಲಿಯಲಿ ಬದುಕು ಸಾಗಿದ್ದಾಗ – ಮೂರು ವರ್ಷದ ಅವಧಿಯಲ್ಲಿ ಒಮ್ಮೆಯು ಈ ರೀತಿಯ ಹೆಚ್ಚಳ ಕಂಡಿರಲಿಲ್ಲ – ಒಂದೇ ಒಂದು ಬಾರಿ ಬಸ್ಸಿನೋಡಾಟದ ಕೆಲ ಸೆಂಟುಗಳ ಹೆಚ್ಚಳ ಹೊರತು ಪಡಿಸಿದರೆ. ಬಾಡಿಗೆಯಂತೂ ಆ ಎಲ್ಲಾ ನಾಕಾರು ವರ್ಷ ಹೆಚ್ಚುಕಡಿಮೆ ಒಂದೆ ಮಟ್ಟದಲ್ಲಿತ್ತು ( ಅಥವಾ ಹಾಗಿರುವಂತೆ ಬದಲಾವಣೆ ಸಾಧ್ಯವಿತ್ತು). ಈಗದೆಲ್ಲ ಕನಸಿನ ಮಾತು; ವರ್ಷ ವರ್ಷ ಬಾಡಿಗೆ ಹೆಚ್ಚುತ್ತಲೆ ಇರುತ್ತದೆ ಜತೆಗೆ, ಇತರೆ ಖರ್ಚು ವೆಚ್ಚಗಳು ಸಹ.

ಈ ಗತಿ ರೀತಿಯನ್ನು , ಸಂಬಳ, ಸವಲತ್ತಿನ ಹೆಚ್ಚಳದ ಗತಿಗೆ ಹೋಲಿಸಿದರೆ ಇವುಗಳ ನಡುವಿನ ಅಂತರದ ಅರಿವಾಗುತ್ತದೆ. ಅಭಿವೃದ್ಧಿಶೀಲ ದೇಶಗಳೆಂಬ ಹಣೆಪಟ್ಟಿಯಡಿ ಇಲ್ಲಿ ಸಿಕ್ಕುವ ಹೆಚ್ಚಳಗಳೆ ಕಮ್ಮಿ. ಅದರ ಜತೆ, ಈ ರೀತಿ ಜೀವನ ವೆಚ್ಚದ ಮಟ್ಟ ಏರುತ್ತಾ ನಡೆದರೆ, ಅದನ್ನು ಇನ್ನೂ ಹಾಳುಗೆಡವುವ ಹಾಗೆ ಜಾಗತಿಕ ಹಾಗೂ ಸ್ಥಳೀಯ ಆರ್ಥಿಕ ಸ್ಥಿತಿಯ ಆರೋಗ್ಯವೂ ಕ್ಷಣ ಚಿತ್ತಂ, ಕ್ಷಣ ಪಿತ್ತಂ ಎಂಬಂತೆ ಎಗರಾಡಿದರೆ – ಇವೆಲ್ಲಾದುದರ ಹೊಂದಾಣಿಸಿದ ಸಮಗ್ರ ಪರಿಣಾಮ ಕಳವಳಕ್ಕೆ ಮೂಲ. ಈ ರೇಸಿನಲ್ಲಿ, ಎಂದು, ಯಾವಾಗ ನಮ್ಮ ಸಾಮರ್ಥ್ಯದ ಮಟ್ಟ ಮೀರಿ, ದೌರ್ಬಲ್ಯದ ತೆಳುಗೆರೆಯಡಿ ಸಿಲುಕಿ ಈ ಪರಿಣಾಮಗಳಡಿ ನರಳುವ ಸ್ಥಿತಿ ಬಂದೀತೊ ಎಂದು ಹೇಳಲಾಗದು. ಇದು ಹೀಗೆ ಮುಂದುವರೆದರೆ, ಪ್ರಶ್ನೆ ಬರುವುದೊ ಇಲ್ಲವೊ ಎಂಬುದಲ್ಲ – ಯಾವಾಗ ಬರುತ್ತದೆ ಮತ್ತು ಎಂದು ನನ್ನ ಬುಡಕ್ಕೆ ತಗುಲುತ್ತದೆ ಎಂಬುದಾಗುತ್ತದೆ. ಭಾರತದ ರೂಪಾಯಿ ವಿನಿಮಯದ ಲೆಕ್ಕದಡಿ ದೊಡ್ಡದಾಗಿ ಕಾಣುತ್ತಿದ್ದ ಡಾಲರಿನ ಉಳಿತಾಯದ ಗಂಟು, ಅಭದ್ರತೆಯ ತೂಗುಕತ್ತಿಯೆದುರು ದುರ್ಬಲವಾಗತೊಡಗುತ್ತದೆ. ಹಾಗಾಗದಿರಲೆಂದೆ ಎಲ್ಲರ ಬಯಕೆಯಾದರೂ, ಸ್ಥಿರತೆಯಿಲ್ಲದ ಬೆಳವಣಿಗೆಯ ಗತಿ ಏನೆಲ್ಲ ಮಾಡಬಲ್ಲುದೆಂಬುದು ಊಹೆಗೆಟುಕದ ಸಂಗತಿ.

ಮೊದಲು ಈ ಜಾಗತಿಕ ಪರಿಮಾಣದಲ್ಲಿ ಎಲ್ಲರು ಪರಸ್ಪರ ಅವಲಂಬನೆಯಿಲ್ಲದೆ ಇದ್ದ ದಿನಗಳಲ್ಲಿ, ಇಷ್ಟೊಂದು ಪ್ರಕ್ಷುಬ್ದತೆ, ಹೇಳಲಾಗದ ಸ್ಥಿತಿಯ ವಾತಾವರಣ ಕಾಣಿಸುತ್ತಿರಲಿಲ್ಲ. ಇದ್ದರೂ, ಅದು ಸ್ಥಳಿಯವಾಗಿ ಅಥವಾ ಪರಿಮಿತ ಗುಂಪಿಗೆ ಸೀಮಿತವಾಗಿ ಇರುತ್ತಿತ್ತು. ಈಗ ಹಾಗಲ್ಲ – ಎಲ್ಲರೂ ಒಂದೆ ದೋಣಿಯನ್ಹತ್ತಿದ ಪರಿಸ್ಥಿತಿ. ಒಟ್ಟಿಗೆ ಮುಳುಗೇಳುವ ಅನಿವಾರ್ಯ. ನಾಯಕತ್ವ, ಅದರ ನಿರ್ಧಾರಗಳು ಒಂದೇ ಅಧಿಕಾರ ಕೆಂದ್ರದಿಂದ ಹೊರಟು, ಎಲ್ಲ ಅಂಗ ಸಂಸ್ಥೆಗಳಲ್ಲೂ ಆಚರಣೆಗೆ ಬರುವ ‘ಜಾಗತಿಕ ಸ್ಥಿತಿ’. ಇಂಥ ವಾತಾವರಣದಲ್ಲಿ, ಈ ರೀತಿಯ ತಳಮಳ, ಅನಿಯಂತ್ರಿತ ಆರ್ಥಿಕ ಸ್ಥಿತಿ ಗತಿ, ಮತ್ತು ಚಂಚಲತೆಯ ಗಾಳಿ ಸದಾ ಬೀಸುತ್ತಿರಬೇಕಾದರೆ – ಈ ‘ಜಾಗತಿಕ ಮೇಳಗಳು’ ಮತ್ತು ಅದನ್ನು ಮುನ್ನಡೆಸುತ್ತಿರುವ ಅಧಿಕಾರಶಾಹಿ ವ್ಯವಸ್ಥೆಯಲ್ಲೆ ಅಥವಾ ನಡೆಸುವ ರೀತಿಯಲ್ಲೆ , ಏನೊ ಮೂಲಭೂತ ದೋಷವಿರಬೇಕಲ್ಲವೆ? ಈ ರೀತಿಯ ವ್ಯವಸ್ಥೆಯ ನರ ದೌರ್ಬಲ್ಯಗಳು, ಆ ಬಲಹೀನತೆಯನ್ನು ಎತ್ತಿ ತೋರಿಸುತ್ತಿದ್ದರೂ, ಅದನ್ನು ಗುರಿತಿಸಲಾಗದ, ಅರಿಯಲಾಗದ ಅಮಾಯಕ ಸ್ಥಿತಿಯಲ್ಲಿ ನಾವಿದ್ದೇವೆಯೆ? ಅರಿಯುವಷ್ಟು ಹೊತ್ತಿಗೆ ತುಂಬ ತಡವಾಗಿ ಹೋಗಲಿದೆಯೆ? ಅಥವಾ ಇಂಥಾ ವ್ಯವಸ್ಥೆಯಲ್ಲಿ ಇದೆಲ್ಲ ಸಹಜವಾದ ಸೂಚಕ ಪರಿಣಾಮಗಳೆ? ಸಮಯದ ಬಯಲಲ್ಲಿ ತನ್ನಂತಾನೆ ಸರಿಪಡಿಸಿಕೊಳ್ಳುವ ಶಕ್ತಿ, ತಾಕತ್ತಿರುವ ಸ್ವಯಂಪೂರ್ಣ ವ್ಯವಸ್ಥೆಗಳೆ?

ಕಾಲದೊಗಟಿನ ಈ ಕೊನೆಯುತ್ತರಕ್ಕೆ ಕಾಯದೆ, ಸಮಯೋಚಿತವಾದ ಸರಳ, ಸಹಜ ಪರಿಹಾರದತ್ತ ಗಮನ ಹರಿಸಿ ಉತ್ತರ ಕಂಡುಕೊಳ್ಳಬೇಕಾದ ಕಾಲ ಈಗಾಗಲೆ ಸನ್ನಿಹಿತವಾಗಿ ಹೋಗಿದೆಯೆ? ತಡವಾದರೆ ಪರಿಣಾಮ ಭವಿಷ್ಯದಲ್ಲಿ ಇನ್ನು ಭೀಕರವಾಗಲಿದೆಯೆ? ಅಥವಾ ಇದೆಲ್ಲಾ ಬರಿ ಆಧಾರರಹಿತ ಭ್ರಮೆಯಿಂದೊಡಗೂಡಿದ ಕಲ್ಪನೆಗಳ ಮಂಪರೆ?

ಇದಕ್ಕೆಲ್ಲ ಯಾರು ಉತ್ತರ ಹೇಳಬಲ್ಲರು? ಮತ್ತೆ ಕಾಲಾಯ ತಸ್ಮೈ ನಮಃ ಅನ್ನಬೇಕೆ?

ನಾಗೇಶ ಮೈಸೂರು, ಸಿಂಗಾಪುರ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s