00019 – ‘ಐ’ಗಳ ಪುರಾಣ – 01

‘ಐ’ಗಳ ಪುರಾಣ (ಭಾಗ 01)
___________________

‘ಐ’-ಪೋನು_’ಐ’ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ..
____________________________________________________________
ಸ್ಮಾರ್ಟ್ಫೋನ್ ಐ ಫೋನಿನ ‘ಕನ್ನಡ ಪುರಾಣ’…
____________________________________________________________

ಬಹುಶಃ ಈಗ ನಾನ್ಹೇಳುವ ಕಥೆಯನ್ನು ಯಾರು ನಂಬುವುದಿಲ್ಲ ಅಂತ ಕಾಣುತ್ತೆ…ನನಗೆ ನಂಬಲು ಕಷ್ಟವಾದದನ್ನು ಬೇರೆಯವರಿಗೆ ನಂಬಿಸಬೇಕೆಂದರೆ ಇನ್ನೂ ತ್ರಾಸದಾಯಕವಲ್ಲವೆ? ಕೆಲ ಘಟನೆ, ಘಟಿತಗಳು ಒಮ್ಮೆ ಸಂಭವಿಸಿದರೆ ಕಾಕತಾಳೀಯ ಅನ್ನಬಹುದು. ಮತ್ತೆ ಅದೆ ಕ್ರಮದಲ್ಲಿ ಹಾಗೆಯೆ ಮರುಕಳಿಸಿದರೆ ಕಾಕತಾಳೀಯ ಎನ್ನಲು ಕಷ್ಟ. ಅದಕ್ಕೆ ಮುನ್ನ ತುಸು ಪೀಠಿಕೆಯಾಗಿ ಈ ಮೊದಲ ಭಾಗದಲ್ಲಿ ಸ್ಮಾರ್ಟ್ಪೋನ್ ಜಗದ ಕಿರುಹಿನ್ನಲೆ ನೀಡಿ ನಂತರ ಆ ಕಾಕತಾಳೀಯತೆಯತ್ತ ನೋಡೋಣ (ಭಾಗ ಎರಡು ಮತ್ತು ಮೂರರಲ್ಲಿ)

ಸುಮಾರು ಎರಡು ದಶಕಗಳಿಂದ ಬದುಕಿನನಿವಾರ್ಯದ ತುರ್ತುಗಳಿಂದಾಗಿ ಕನ್ನಡದಲ್ಲಿ ಬರೆಯಲು ಸಾಧ್ಯವಾಗದೆ ಒಂದು ರೀತಿಯಲಿ ಆ ನಂಟೆ ಕಳೆದುಹೋದಂತಾಗಿದ್ದಾಗ, ಪುಸಕ್ಕನೆ ಉದ್ಭವವಾದ ಈ ಹೊಸತಿನ ಜಗತ್ತು ಸ್ಮಾರ್ಟ್ಫೋನುಗಳದು. ಅಲ್ಲಿಯವರೆಗೂ ಸಾಧ್ಯವಿರದಿದ್ದ ಅಥವಾ ಕಷ್ಟ ಸಾಧ್ಯವಿದ್ದ ಎಷ್ಟೊ ಪ್ರಕ್ರಿಯೆಗಳಿಗೆ ಸೈದ್ದಾಂತಿಕವಾಗಿ ಚಾಲನೆ ಕೊಟ್ಟಿದ್ದೆ ಈ ಫೋನುಗಳು. ಆಪಲ್ ಕಂಪನಿಯ ಸ್ಟೀವ್ ಜಾಬ್ಸನಂತಹವರ ಅಪರೂಪದ ದೂರದೃಷ್ಟಿ, ವಿಶಿಷ್ಟ ಸೃಷ್ಟಿಯ ಹಂಬಲವುಳ್ಳ ಹುರಿಯಾಳುಗಳ ಸಾರಥ್ಯದಲ್ಲಿ ದಿಢೀರನೆ ಮಾರುಕಟ್ಟೆಗಿಳಿದ ಈ ಗ್ಯಾಡ್ಜೆಟ್ಟುಗಳು ಸಂವಹನ ಕ್ಷೇತ್ರದಲ್ಲಿ ಬಿರುಗಾಳಿಯೆಬ್ಬಿಸಿ, ಅಲ್ಲಿಯತನಕ ಸಾಮ್ರಾಜ್ಯವಾಳುತ್ತಿದ್ದ ಎಷ್ಟೊ ರೀತಿಯ ಸಿದ್ದಾಂತ ಮತ್ತದನ್ನವಲಂಬಿಸಿಕೊಂಡೆ ಬೆಳೆದಿದ್ದ ಕಂಪನಿಗಳನ್ನೆಲ್ಲಾ ರಾತ್ರೋರಾತ್ರಿ ಧೂಳೀಪಟ ಮಾಡಿ, ಒಕ್ಕಲೆಬ್ಬಿಸಿಬಿಟ್ಟವು. ಅಲ್ಲಿಯವರೆಗೂ ಮುಕುಟವಿಲ್ಲದ ರಾಜನಂತೆ ಮೆರೆಯುತಿದ್ದ ನೋಕಿಯ ತರಹದ ಕಂಪನಿಗಳು ಬೀದಿಯ ನಡುವೆ ತಲೆ ಕೆರೆದು ಮೈ ಪರಚಿಕೊಳ್ಳುವಂತಹ ಸ್ಥಿತಿಗೆ ತಂದಿಟ್ಟುಬಿಟ್ಟಿತು ಈ ಬೆಳವಣಿಗೆ.

ಹಾಗೆ ನೋಡಿದರೆ ಈ ಬೆಳವಣಿಗೆಯ ಹಿನ್ನಲೆಯ ಚಿತ್ರ ತುಂಬ ಸರಳ ಮತ್ತು ರೋಚಕ ಸಹ. ಮೊದಲಿಗೆ ಯಾವುದೆ ಫೋನ್ / ಗ್ಯಾಡ್ಜೆಟ್ಟಿನಲ್ಲಿ ಏನೇನು ಮಾಡಲು ಸಾಧ್ಯವಿದೆ ಎಂಬುದು ಆಯ ಕಂಪನಿಗಳ ತಂತ್ರಾಂಶ ಮತ್ತು ಹತೋಟಿಯ ಮೇಲೆ ಅವಲಂಬಿತವಾಗಿರುತ್ತಿತ್ತು. ಇದೆ ಒಂದು ರೀತಿಯಲ್ಲಿ ಬ್ರಾಂಡುಗಳ ನಡುವಿನ ಡಿಫರೆನ್ಷಿಯೇಟರ (ಪ್ರತ್ಯೇಕತಾನುಕೂಲತೆ ಅನ್ನಬಹುದೆ?) / ಕಾಂಪಿಟೇಟಿವ್ ಅಡ್ವಾಂಟೇಜ್ (ಸ್ಪರ್ಧಾನುಕೂಲ ಅಥವ ಪೈಪೋಟಿಯ್ಹತೋಟಿ ಮಟ್ಟ – ಎನ್ನಬಹುದೆ?) ಸಹ ಆಗಿರುತ್ತಿತ್ತು.
ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲೊಂದು ಉದಾಹರಣೆ ಬೇಕೆಂದರೆ – ಫೋನ್ ವೀಡಿಯೊ ಗೇಮ್ಸುಗಳು. ಮೊದಲು ಫೋನಿನಲ್ಲಾಡುತ್ತಿದ್ದ ಗೇಮ್ಸುಗಳು ನೆನಪಿವೆಯೆ? ಪ್ರತಿ ಕಂಪನಿಯ ಪೋನಿನಲ್ಲೂ ಒಂದೊ, ಎರಡೊ, ಮೂರೊ ಗೇಮುಗಳಿರುತ್ತಿದ್ದ ಕಾಲ. ಒಂದರಲ್ಲಿದ್ದ ಗೇಮು ಮತ್ತೊಂದರಲ್ಲಿ ಅಸಾಧ್ಯ ಅಥವಾ ಕಷ್ಟಸಾಧ್ಯವೆನ್ನುವ ಪರಿಸ್ಥಿತಿ. ನನ್ನ ಮಗನಂತೂ ಯಾರೆ ಬರಲಿ, ಅವರ ಪೋನಿನ ಮೇಲೆ ಕಣ್ಣು, ಮತ್ತು ಯಾವ ಫೋನಿನಲ್ಲೇನು ಗೇಮಿದೆಯೆಂಬ ಕೂಲಂಕುಷ ಪರಿಶೋಧನೆ! ಆದರೆ ಸ್ಮಾರ್ಟು ಪೋನಿನಲ್ಲಿ ಮೊದಲಿಗೆ ಗೇಮುಗಳೆ ಇರಬೇಕಿಲ್ಲ! ಯಾಕೆಂದರೆ ಅಲ್ಲಿ ಇಂತದ್ದೆ ಗೇಮಿರಬೇಕು ಎಂಬ ಕಟ್ಟುಪಾಡೆ ಇಲ್ಲ…ಎಷ್ಟು ಗೇಮು ಬೇಕಾದರೂ, ಯಾವುದು ಬೇಕಾದರೂ ನೀವೆ ‘ಇನ್ಸ್ಟಾಲ್’ ಮಾಡಿಕೊಳ್ಳಬಹುದು – ನಿಮ್ಮ ಪೋನಲ್ಲಿ ಜಾಗವಿದ್ದರೆ ಸರಿ, ಹಾಗೆ ಸಂವಾದಿಯಾದ ಗೇಮಿನ ತಂತ್ರಾಶ ದೊರಕುವಂತಿದ್ದರೆ ಸಾಕು. ಅದು ಹೇಗೆನ್ನುವಿರ? ನೋಡಿ, ಮುಂದಿದೆ ಸ್ಥೂಲವಾದ ವಿವರಣೆ.

ಸರಳವಾಗಿ ಹೇಳುವುದಾದರೆ – ನೀವು ಸಾಧಾರಣ ಮೊಬೈಲು ಫೋನಿನಲ್ಲಿ ಅಂತರ್ಜಾಲದಲ್ಲಿ ಅಡ್ಡಾಡಬೇಕೆಂದಿಟ್ಟುಕೊಳ್ಳಿ; ಮಾಮೂಲಿ ಫೋನಿನಲ್ಲಿ ಇದು ಸಾಧ್ಯವಾದರೂ ಯಾವ ರೀತಿ ಒಳಹೊಕ್ಕು, ಏನು ಮತ್ತು ಹೇಗೆ ಮಾಡಬೇಕೆಂಬುದು ಆ ಕಂಪನಿಯ ತಂತ್ರಾಶದ (ಸಾಫ್ಟ್ವೇರು) ಮೇಲೆ ಅವಲಂಬಿತವಾಗಿರುತ್ತದೆ. ಆ ತಂತ್ರಾಂಶದಲ್ಲಿ ಏನೇನು ಮಾಡಲು ಸಾಧ್ಯವಿದೆಯೊ, ಅಷ್ಟು ಮಾತ್ರ ಮಾಡಲು ಸಾಧ್ಯ. ಹಾಗೆಯೆ ಕಂಪನಿಯ ಪೋನಿನಲ್ಲಿ ಯಾವ ಕಂಪನಿಯ ತಂತ್ರಾಂಶವೆಂದು ನಿಗದಿಯಾಗಿರುತ್ತದೊ ಅದನ್ನೆ ಬಳಸಬೇಕು. ಆ ನಿರ್ಧಾರವೆಲ್ಲ ಕಂಪನಿಗೆ ಸೇರಿದ್ದು. ಎಷ್ಟು ತಂತ್ರಾಂಶಗಳೆಂದು ನಿಗದಿಮಾಡಿ, ಪೋನ್ ಡಬ್ಬಿಯ ಒಳ ಸೇರಿಸಿ ಪೊಟ್ಟಣ ಕಟ್ಟಿ ಕೊಟ್ಟುಬಿಡುತ್ತಾರೆ. ಅದು ಹೆಚ್ಚುವ ಹಾಗೂ ಇಲ್ಲ ಕಡಿಮೆಯಾಗುವ ಹಾಗೂ ಇಲ್ಲ. ಏನೆ ಬದಲಾವಣೆ ಬೇಕಾದರೂ ಮುಂದಿನ ಮೊಬೈಲಿಗೊ ಅಥವ ಮುಂದಿನ ಸಂತತಿಗೊ ಕಾಯಬೇಕು – ಅದೂ ಹೊಸತನ್ನು ಕೊಳ್ಳುವಿರಾದರೆ. ಆದರೆ ಸ್ಮಾರ್ಟ್ ಪೋನಿನಲ್ಲಿ ಹಾಗಲ್ಲ; ಕಂಪನಿಯಿಂದ ಮೂಲ ಸೈದ್ದಾಂತಿಕ ವೇದಿಕೆಯೊಂದನ್ನು ಕಟ್ಟಿ ಅದರ ಬಿಳಿಪರದೆಯೊಂದನ್ನು ಹಾಸಿ ನಿಮಗೆ ಕೊಟ್ಟುಬಿಡುತ್ತದೆ ಕಂಪನಿ. ಅದರಲ್ಲಿ ಯಾವ ತಂತ್ರಾಂಶ / ಉಪಕರಣ (ಸಾಧಾರಣವಾಗಿ ‘ಆಪ್ಸ್ ‘ ಎಂದು ಕರೆಯುತ್ತಾರೆ) ಬೇಕೊ ಅದನ್ನು ‘ಡೌನ್ಲೋಡ್’ ಮಾಡಿಕೊಳ್ಳಬಹುದು; ಬೇಡಾವಾದರೆ ತೆಗೆದುಹಾಕಬಹುದು. ಹಾಗೆಯೆ ಇಷ್ಟೆ ಆಪ್ಸ್ ಇರಬೇಕೆಂಬ ಕಡಿತವೂ ಇಲ್ಲ. ನಿಮಗೆ ಬೇಕಾದಷ್ಟು ನೀವೇ ಆರಿಸಿ ‘ಇನ್ಸ್ಟಾಲ್’ ಮಾಡಿಕೊಳ್ಳಬಹುದು. ಸೂಕ್ಷ್ಮವಿರುವುದೆ ಅಲ್ಲೆ ನೋಡಿ; ಹೇಗೆ ನಾವು ನಮಗೆ ಬೇಕಾದ್ದನ್ನು ಆರಿಸಿ. ಪೋನಿಗಿಳಿಸಿಕೊಳ್ಳಬಹುದೊ ಹಾಗೆಯೆ ಈ ರೀತಿಯ ‘ಸಲಕರಣಾ ಆಪ್ಸ್’ ಗಳನ್ನು ಹುಟ್ಟುಹಾಕಿ ಬಿಕರಿಗಿಡುವ ಸೃಷ್ಟಿಕರ್ತರಿಗೂ ಇದೇ ವೇದಿಕೆಯ ಮತ್ತೊಂದು ಆಸ್ಥಾನದಲ್ಲಿ ತಮ್ಮ ‘ಸೃಷ್ಟಿಯ’ ಕೈ ಚಳಕವನ್ನು ತೋರಿಸಲು ಸಾಧ್ಯ! ಬೇಕಾದವರೆಲ್ಲ ಬೇಕಾದ್ದು ಸೃಷ್ಟಿಸಿ ಪುಕ್ಕಟೆಯಾಗಿಯೊ, ಅಥವ ಸೂಕ್ತ ಬೆಲೆಗೆ ಮಾರಲು ಇದೇ ವೇದಿಕೆ. ಹಾಗೆಯೆ ಬೇಕಾದವರು ಬೇಕಾದ್ದೂ ಕೊಳ್ಳಲೂ ಇದೆ ವೇದಿಕೆ. ಪೋನು ಮಾರುವ ಕಂಪನಿ ಮಧ್ಯ ದಲ್ಲಾಳಿಯ ಹಾಗೆ, ಇಬ್ಬರ ನಡುವಿನ ಸೇತುವೆಯ ಹಾಗೆ ವರ್ತಿಸಿ ರಂಗಮಂಚದ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಬೇಕಾದವರು ಬಂದು ಪ್ರದರ್ಶನ ಕೊಡುವಾಗ, ಹಾಗೆ ಬೇಕಿದ್ದವರು ಬಂದು ನೋಡುವ ಕಾರ್ಯಕ್ರಮದ ಹಾಗೆ. ಇಲ್ಲೆ ಮತ್ತೊಂದು ವೈಶಿಷ್ಟ್ಯ ನೋಡಿ – ಮೊದಲು ಒಂದು ಬಗೆಯ ಮಾಡೆಲ್ ಕೊಂಡವರೆಲ್ಲ ಒಂದೇ ತರಹದ ತಂತ್ರಾಂಶ ಸಲಕರಣೆಗಳನ್ನು ಹೊಂದಿರುತ್ತಿದ್ದರು. ನನಗೇನು ಸಾಧ್ಯವೊ ಅದು ಅದೆ ಫೋನ್ ಮಾಡೆಲ್ ಹೊಂದಿರುವ ಮತ್ತೊಬ್ಬನಿಗು ಸಾಧ್ಯ; ನನಗಾಗದ್ದು, ಅವನಿಗೂ ಆಗದು. ಸ್ಮಾರ್ಟ್ಫೋನ್ ಜಗದಲ್ಲಿ ಹಾಗಲ್ಲ – ಎಲ್ಲರೂ ಒಂದೆ ಮಾಡಲ್ ಕೊಂಡಿದ್ದರೂ, ಪ್ರತಿಯೊಬ್ಬನ ಫೋನಿನ ಕಾಗುಣಿತ, ವ್ಯಾಕರಣಗಳೆ ಬೇರೆ ಬೇರೆ! ಒಂದೆ ಅಂಗಡಿಯಿಂದ ಎಲ್ಲಾರು ಒಂದೆ ಅಕ್ಕಿ ಕೊಂಡೊಯ್ದರು ಒಬ್ಬರು ಪೊಂಗಲ್ ಮಾಡಿಕೊಂಡರೆ, ಮತ್ತೊಬ್ಬರು ಪುಳಿಯೋಗರೆ, ಇನ್ನೊಬ್ಬರು ಬಿಸಿಬೇಳೆ ಬಾತು, ಮಗದೊಬ್ಬರು ಮಾವಿನಕಾಯಿ ಚಿತ್ರಾನ್ನ..ಹೀಗೆ ಅವರವರ ಭಾವಕ್ಕೆ, ಅವರವರ ಭಕುತಿಗೆ. ಆದರೆ ಮಾರುವವನಿಗೆ ಮಾತ್ರ ಒಂದೆ ಅಕ್ಕಿ, ಒಂದೆ ಬೆಲೆ – ಕೊಂಡು ಏನಾದರೂ ಮಾಡಿಕೊಳ್ಳಿ!

ನಾನೀ ಹಿನ್ನಲೆ ಹೇಳಲೂ ಕಾರಣವೇನೆಂದರೆ ಸ್ವಯಂ ನನ್ನ ವಿಷಯದಲ್ಲೆ, ಈ ಕ್ರಾಂತಿಯುಂಟು ಮಾಡಿದ ಕ್ಷಿಪ್ರ ಹಾಗೂ ತೀವ್ರ ಬದಲಾವಣೆ. ಆಗಾಗ್ಗೆ ಬರೆಯಬೇಕೆಂಬ ತುಡಿತ, ಆಸೆ ಸಾಕಷ್ಟು ಬಾರಿ ಕಾಡಿದರೂ ಕೆಲಸದೊತ್ತಡ, ಒಡಂಬಡಿಕೆಗಳ ನಡುವೆ ಸಾಧ್ಯವಾಗುತ್ತಲೇ ಇರಲಿಲ್ಲ – ಹಾಗೆಯೆ ಹದಿನೈದಿಪ್ಪತ್ತು ವರ್ಷಗಳೆ ಉರುಳಿಹೋದರೂ ಸಹ. ಕೊನೆಗೆ, ಬಹುಶಃ ಬರಹವೇನಿದ್ದರೂ ರಿಟೈರು ಆದ ಮೇಲೆಯೆ ಸಾಧ್ಯವೇನೊ ಅಂದುಕೊಂಡಿದ್ದಾಗ ತಟ್ಟನೆ ಪ್ರತ್ಯಕ್ಷವಾದ ಅವತಾರಗಳು ಈ ಸ್ಮಾರ್ಟ್ಫೋನುಗಳು. ಸ್ಟೀವ್ ಜಾಬ್ಸನ ಜಾದೂ ಜಗದೆಲ್ಲೆಡೆ ಪಸರಿಸಿ ಹರಡುತಿದ್ದ ಕಾಲದಲ್ಲೆ, ನನ್ನ ಕೈಗೂ ಒಂದು ಐಫೋನು ಬಂದು ಸೇರಿತು. ಅದರಲ್ಲಿ ಮೊದಲ ಬಾರಿಗೆ ಕೀಪ್ಯಾಡಿಲ್ಲದೆ ಬರಿ ಕೈ ಬೆರಳ ಸವರುವಿಕೆಯಿಂದಲೆ ಬಳಸಬಹುದೆಂಬ ವಿಷಯವೆ ಅತಿಶಯ ಹಾಗೂ ಸೋಜಿಗವಾಗಿ ಕಂಡಿತು. ಅದರಲ್ಲೂ ಅದರ ಸುಲಭದ ಬಳಕೆಯ ವಿಧಾನ (ಯುಸರ ಮಾನ್ಯುವಲ್ಸು – ಗ್ರಾಹಕ ಸೂಚನೆ ಪುಸ್ತಿಕೆ ಇಲ್ಲದೆಯೆ) ಅತ್ಯದ್ಭುತ ಎನಿಸಿತು – ಪುಸ್ತಕ ಓದಿ ಕಲಿಯಲು ಆಲಸಿಗಳಾದ ಸೋಮಾರಿ ಜನರಿಗೆ, ಇದು ಒಂದು ರೀತಿ ಹೇಳಿ ಮಾಡಿಸಿಟ್ಟ ಹಾಗೆ; ತೂಕಡಿಸುವವನಿಗೆ ಹಾಸಿಗೆ ಹಾಸಿ ಕೊಟ್ಟ ಹಾಗೆ. ಇವು ಆರಂಭದ ಆಕರ್ಷಣ ಪರಿಧಿಗಳಾದರೆ, ನಂತರ ನಿಜಕ್ಕೂ ಗಮನವನ್ನಪಹರಿಸಿ ಪೂರ್ತಿ ಶರಣಾಗತನನ್ನಾಗಿಸಿದ್ದು – ಬೇಕೆಂದ ‘ಆಪ್ಸು’ಗಳನ್ನು ಒಳಗಿಳಿಸಿ ಉಪಯೋಗಿಸುವ ಅನುಕುಲ. ಅದರಲ್ಲೂ, ಸರಿಸುಮಾರು ಎಲ್ಲ ಬಿಟ್ಟಿ ಸಲಕರಣೆಗಳು ಬೇರೆ! ಸಾಲದ್ದಕ್ಕೆ ಎಷ್ಟೊಂದು ಗೇಮ್ಸುಗಳ ಮತ್ತು ವೈಯಕ್ತಿಕ ದೈನಂದಿನ ಲೆಕ್ಕವಿಡುವ ಉಪಯುಕ್ತತೆಗಳು. ಅಂತೂ, ಆರಂಭದ ಆ ದಿನಗಳಲ್ಲಿ ಎಡಬಲ ನೋಡದೆ ಫ್ರೀ ಆಪ್ಸುಗಳನ್ನು ತುಂಬಿದ್ದೆ ತುಂಬಿದ್ದು – ಫೋನಿನ ಜಾಗವೆ ಭರ್ತಿಯಾಗಿ ಚೆಲ್ಲುವಷ್ಟು! ಆಮೇಲೆ ನಿರುಪಯುಕ್ತ ಕೆಲವನ್ನು ಕಿತ್ತೆಸೆಯುವ (ಡಿಲೀಟ್ ಮಾಡುವ) ಮತ್ತೊಂದು ಪುರಾಣ..ಸದ್ಯ, ಕೂಡಲೂ ಅಥವಾ ಕಳೆಯಲು ಅಷ್ಟೆ ಸುಲಭವಾದ್ದರಿಂದ ಬಲು ಬೇಗನೆ ಆ ಕೆಲಸ ಕರತಲಾಮಲಕವಾಯ್ತು! ಮೊದಲಿನ ಕೆಲವು ದಿನವಂತೂ ಒಂದಾದರ ಮೇಲೊಂದರಂತೆ ಗೇಮ್ಸು ಹಾಕಿಕೊಂಡು, ಅಡಿಕ್ಷನ್ ಅನ್ನುವ ಮಟ್ಟಕ್ಕೆ ತಲುಪಿ ಹೋಯ್ತು!

ಆ ದಿನಗಳಲ್ಲೆ ಮತ್ತೊಂದು ಕಂಟಕ ಶುರುವಾಯ್ತು – ಮಗರಾಯನಿಂದ. ಯಾವ ಪೋನನ್ನು ಬಿಡದವ ಈ ಐಪೋನನ್ನು ಬಿಟ್ಟಾನೆಯೆ? ಮನೆಯಲ್ಲಿದ್ದ ಹೊತ್ತಿನಲೆಲ್ಲ ಅದಕ್ಕವನೆ ದೊಡ್ಡ ಪ್ರತಿಸ್ಪರ್ಧಿಯಾಗಿಬಿಟ್ಟ. ಓದು, ಹೋಮ್ವರ್ಕ್ ಎಲ್ಲಾದಕ್ಕೂ ತಿಲಾಂಜಲಿಯಿಟ್ಟು ಇದರತ್ತಲೆ ಗಮನ ಕೊಡಲಾರಂಭಿಸತೊಡಗಿದ. ಪಾಸ್ವರ್ಡಿನ ಬಂಧವೊಂದಿರದಿದ್ದರೆ, ಹೇಳದೆ ಕೆಳದೆಯ ಬೇಕಾದ್ದೆಲ್ಲ ಒಳಗಿಳಿಸಿ ಉಡಾಯಿಸಿಬಿಡುತ್ತಿದ್ದನೊ ಏನೊ. ಅದೃಷ್ಟವಶಾತ್ ಅದು ಸಾಧ್ಯವಿರಲಿಲ್ಲವಾಗಿ, ನಮಗೆ ಕೊಂಚ ರಿಲೀಫ್. ಜತೆಗೆ ನಿಗದಿತ ಸಮಯದಲ್ಲಿ ಮಾತ್ರ ಆಡಲವಕಾಶ ಕೊಡುವ ಮತ್ತು ಶಹಭಾಷಗಿರಿಯ ಭಾಗವಾಗಿ ಬಹುಮಾನವಾಗಿ ಆಡಲು ಕೊಡುವ ಪ್ರಕ್ರಿಯೆ ಆರಂಭಿಸಬೇಕಾಯ್ತು. ಆದರೂ ಐ ಫೋನಿನ ಸೈಜಿನ ದೆಸೆಯಿಂದ ಕಣ್ಣಿಗದು ಅಷ್ಟು ಒಳಿತಲ್ಲವೆಂಬ ಕೊರಗಂತೂ ಇದ್ದೆ ಇತ್ತು.

ಇದೆ ಸಮಯದಲ್ಲಿ ನನಗೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆಯಿತು – ನನಗೂ ಆರಂಭದ ಗೇಮುಗಳ ಅಮಲಿನಿಂದ ಹೊರಬರಲು ದಾರಿ ಬೇಕಾಗಿತ್ತು. ಹೀಗೆ ಒಮ್ಮೆ ಹುಡುಕುತ್ತ ಯಾವುದಾದರೂ ಕನ್ನಡದ ‘ಆಪ್ಸ್’ ಇದೆಯೆ ಎಂದು ನೋಡುತ್ತಿದ್ದೆ. ಆಗ ಮೊದಲು ಹುಡುಕಿದ್ದೆ ‘ಬರಹ’ ತಂತ್ರಾಂಶಕ್ಕಾಗಿ. ಆದರೆ ದುರದೃಷ್ಟವಶಾತ್ ಐಪೋನಿನಲ್ಲಿ ಬಳಸಬಲ್ಲ ಬರಹದ ಅವತರಣಿಕೆ ಲಭ್ಯವಿರಲಿಲ್ಲ. ಸರಿ, ಬೇರಾವುದಾದರೂ ಇರಬಹುದೆ ಎಂದು ನೋಡುತ್ತಿದ್ದಾಗ, ‘ಕನ್ನಡ ಎಡಿಟರು (ಐ ಕನ್ನಡ)’ ಎಂಬ ಉಚಿತ ಬಳಕೆಯ ತಂತ್ರಾಂಶವೊಂದು ಕಣ್ಣಿಗೆ ಬಿತ್ತು. ಹೇಗಿದೆಯೊ ನೋಡೋಣವೆಂದು ‘ಐಪೋನಿನೊಳಗೆ’ ತಂತ್ರಾಂಶದ ಆಪ್ಸ್ ಮೂಲಕ ಇಳಿಸಿಕೊಂಡೆ. ಇಂದಿಗು ಈ ಅಪ್ಲಿಕೇಶನ್ನೆ ನಾನು ಬಳಸುತ್ತಿರುವುದು. ಇದನ್ನು ಸಿದ್ದಪಡಿಸಿದವರ ಹೆಸರು “ಪ್ರತಿಭಾ ಈರಯ್ಯ” ಎಂದಿದೆ, ಆ ಸೈಟಿನಲ್ಲಿ. ಅವರಿಗೆ ಈ ಮೂಲಕ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ – ಅವರ ಈ ಆಪ್ಸ್ ಮೂಖಾಂತರ ನನ್ನ ಕನ್ನಡದ ಒಡನಾಟ ಮತ್ತೆ ಆರಂಭಿಸಲು ಸಾಧ್ಯವಾಯ್ತು, ಅದಕ್ಕೆ ಒಂದು ರೀತಿ ಅವರು ಪರೋಕ್ಷವಾಗಿ ಕಾರಣಕರ್ತರಾಗಿದ್ದಕ್ಕೆ. ಈ ಆಪ್ಸ್ ಈಗಲೂ ಉಚಿತವಾಗಿ ಲಭ್ಯವಿದೆ ಮತ್ತು ಐ ಪೋನ್ ಹಾಗೂ ಐ ಪ್ಯಾಡ್ – ಎರಡರಲ್ಲೂ ಕೆಲಸ ಮಾಡುತ್ತದೆ. ಇದರಿಂದಾಗಿ ಎಲ್ಲೆಂದರಲ್ಲಿ – ರೈಲು, ಬಸ್ಸಿಗೆ ಕಾಯುತ್ತ, ಬಿಡುವಿನ ವೇಳೆಯಲ್ಲಿ, ನಡೆಯುವ ಹೊತ್ತಲ್ಲಿ ಎಲ್ಲೆಂದರಲ್ಲಿ ಬಿಡುವು ಸಿಕ್ಕ ತುಸು ಸಮಯವನ್ನೆ ಬಳಸಿ ಆದಷ್ಟು ಬರೆದು ಸಂಗ್ರಹಿಸಿಡಲು ಸಾಧ್ಯವಾಯ್ತು.

ಮೊದಮೊದಲಲ್ಲಿ ನನ್ನ ಮತ್ತು ಈ ಕನ್ನಡ ಎಡಿಟರಿನ ಹನಿಮೂನ್ ಅಷ್ಟು ಸುಗಮವಾಗೇನು ಇರಲಿಲ್ಲವೆಂದೆ ಹೇಳಬೇಕು. ಆರಂಭದ ಉಪಯೋಗಿಸುವ ಉತ್ಸಾಹದಲ್ಲಿ ಸುಮಾರು ವರ್ಷಗಳ ನಂತರ ಕವನವೊಂದನ್ನು ಬರೆಯಲು ಆರಂಭಿಸಿಬಿಟ್ಟೆ. ಮೊದಲಿಗೆ ಆನ್ಲೈನ್ ಆವೃತ್ತಿಯನ್ನು ಬಳಸುತ್ತ ಬರೆಯತೊಡಗಿದೆ. ಹೆಚ್ಚು ಕಡಿಮೆ ಇದೂ ಸಹ ಬರಹದಂತೆಯೆ ಕೆಲಸ ಮಾಡುವುದರಿಂದ ಬಳಸಲು ತೊಂದರೆಯೇನೂ ಇರಲಿಲ್ಲ. ಟೈಪಿಸುತ್ತಾ ಇದ್ದಂತೆ ಇದು ಅಂತರ್ಜಾಲದ ಜತೆ ಜೋಡಣೆಯಲಿದ್ದರೆ ತಾನೆ ತಾನಾಗಿ ಕನ್ನಡ ಪದಾಕ್ಷರಗಳ ಆಯ್ಕೆಯನ್ನು ಒದಗಿಸುತ್ತದೆ. ಹೀಗೆ ಬರೆಯುತ್ತ ಬರೆಯುತ್ತ ಬರೆಯುತ್ತ ಸುಮಾರು ಒಂದು ಗಂಟೆಯ ರಾತ್ರಿಯ ತನಕ , ಬರೆಯುವ ಕೃಷಿ ಮುಗಿಸಿ ಅಪರೂಪಕ್ಕೆ ಬರೆದ ದೊಡ್ಡ ಹಾಗೂ ಅಮೋಘ ಕವನವನ್ನು ಅವಲೋಕಿಸುತ್ತ, ಕೊನೆಯ ಒಂದೆರಡು ಸಾಲು ಸೇರಿಸಲು ಹೆಣಗುತ್ತಿದ್ದೆ. ನಿಜ ಹೇಳಬೇಕೆಂದರೆ, ಸುಮಾರು ಹದಿನೈದಿಪ್ಪತ್ತು ವರ್ಷಗಳ ನಂತರ ಬರೆದ ಬರಹ; ಅಲ್ಲಿಯತನಕ ಹೆಪ್ಪುಗಟ್ಟಿದ ಭಾವನೆ, ತೀವ್ರತೆ, ಒಡ್ಡುಗಟ್ಟಿ ಮಡುಗಟ್ಟಿದ್ದ ಕಸುವೆಲ್ಲಾ, ಒಡ್ಡೊಡೆದ ಅಣೆಕಟ್ಟಿನಂತೆ ಹರಿದು, ಭೋರ್ಗರೆದು ಧಾವಂತದಲಿ ಧಾವಿಸಿ ಧುಮ್ಮಿಕ್ಕಿದಂತಿತ್ತು ಆಗಿನ ಮನಸ್ಥಿತಿ. ಬಹುಶಃ ಅದು, ನಾನೀವರೆಗೆ ಬರೆದ ಶ್ರೇಷ್ಟ ಬರಹಗಳಲೊಂದಾಗುತ್ತಿತ್ತೊ, ಏನೊ – ಭಾವ ನಿಜಾಯತಿಯ ಪ್ರಾಮಾಣಿಕ ತಾಕಲಾಟ, ತುಡಿತಗಳ ಹೊರ ಹರಿವಿನಿಂದಾಗಿ…ಆದರೆ ಆ ಭಾವ ತೀವ್ರತೆಯ ಅಪಾರ ಗಾತ್ರ, ವೇಗದ ಪರಿ ಆ ಕಾವ್ಯದೇವತೆಯ ಮನಸಿಗೆ ಬರಲಿಲ್ಲವೊ ಏನೊ; ಮುಂದಿನೆರಡು ಸಾಲು ಬರೆಯುತ್ತಿದ್ದಂತೆ ಇದ್ದಕ್ಕಿದ್ದಂತೆ ಇಡಿ ಪರದೆಯೆಲ್ಲ ಕಪ್ಪಾಗಿ ಬರೆದದ್ದೆಲ್ಲಾ ಮಂಗ ಮಾಯ!

ಬಹುಶಃ ಒಂದು ಪುಟದಲ್ಲೊ ಅಥವಾ ಒಟ್ಟು ಒಂದು ಬಾರಿಯ ಯತ್ನದಲ್ಲೊ ಗರಿಷ್ಟ ಎಷ್ಟು ಬರೆಯಬಹುದೆಂದು ಅಳತೆಯ ಮಿತಿಯಿತ್ತೆಂದು ಕಾಣುತ್ತದೆ ಈ ತಂತ್ರಾಂಶದಲ್ಲಿ. ಆ ಮಿತಿ ದಾಟುತ್ತಿದ್ದಂತೆ ಅದು ತನ್ನಂತಾನೆ ಲಯಿಸಿ, ಕ್ಷಯವಾಗಿ, ಪರದೆಯ ಮೇಲಿಂದ ಕುಪ್ಪಳಿಸಿ ಅದೃಶ್ಯವಾಗಿಬಿಟ್ಟಿತ್ತು (ಅಥವಾ ಸಾಫ್ಟ್ವೇರಿನಲ್ಲಿ ಸಾಮಾನ್ಯವಾದ ‘ಕ್ರ್ಯಾಷ್’ ಆಯ್ತೊ ಏನೊ?). ಹಾಗಾಗುವ ಮುನ್ನ ಯಾವ ಮುನ್ಸೂಚನೆಯನ್ನು ಕೊಡದೆ, ಧಸಕ್ಕನೆ ಕುಸಿದಿದ್ದರಿಂದಾಗಿ ಅದರ ‘ಟೆಕ್ಸ್ಟ್ ‘ ಫೈಲೂ ಕಾಪಿ ಮಾಡಿಕೊಂಡಿರಲಿಲ್ಲ. ಹೇಳಿ ಕೇಳಿ ಮೊದಲ ಅನುಭವ ಬೇರೆ – ಪ್ರಥಮ ಚುಂಬನೆ ದಂತಭಗ್ನೆ ಅನ್ನುವ ಹಾಗೆ. ಮತ್ತೆ ಹೇಗೊ ಬರೆದುಬಿಡೋಣವೆಂದರೆ, ಮೂರು ಗಂಟೆ ಹೊತ್ತು ಕೂತು ಬರೆದಿದ್ದು ನೆನಪಿನಲ್ಲಿರುವುದಾದರೂ ಹೇಗೆ? ಇದ್ದರೂ ಬರಿ ಚೌಕಟ್ಟು, ಹೊರ ಅವರಣ ನೆನಪಿರುವುದಲ್ಲದೆ ಭಾವ ತೀವ್ರತೆಯ ಭಾವೊದ್ಘೋಷವನ್ನು ಮತ್ತೆ ಅನುರಣಿಸುವುದಾದರೂ ಹೇಗೆ? ಆಗಂತು ಕೋಪಕ್ಕೆ ಮೈ ಪರಚುವಂತಾಗಿತ್ತು..

ಆಗುವುದೆಲ್ಲ ಒಳ್ಳೆಯದಕ್ಕೆನ್ನುತ್ತಾರೆ ಹಿರಿಯರು. ಕೊನೆಗೆ ನಮದು ಸುಖಾಂತವೆ ಆಯ್ತೆನ್ನಿ; ಅಂದಿನ ಘಟನೆ ನನ್ನನ್ನು ಸ್ವಲ್ಪ ಎಚ್ಚರದಲ್ಲಿರುವಂತೆ ಪ್ರೇರೇಪಿಸಿ ಪ್ರತಿ ಕೆಲ ನಿಮಿಷಗಳಿಗೊಮ್ಮೆ ಬರೆದಿದ್ದನ್ನೆಲ್ಲ ‘ಸೇವ್’ ಮಾಡುವ ಅಭ್ಯಾಸಕ್ಕೆಡೆ ಮಾಡಿಕೊಟ್ಟಿತು. ಹಾಗೆಯೆ ನನ್ನ ಶೈಲಿಗೆ ಆನ್ಲೈನಿಗಿಂತ ಆಫ್ ಲೈನೆ ಸುಗಮವೆಂದು ಕಂಡುಕೊಂಡೆ ( ಇಲ್ಲಿ ಎಲ್ಲ ನಾವೇ ಟೈಪ್ ಮಾಡಬೇಕು, ಅಂತರ್ಜಾಲದ ನೆರವಿಲ್ಲದೆ, ಮತ್ತು ಅಕ್ಷರಗಳ ಸರಿಯಾದ ಅವತರಣಿಕೆಯನ್ನು ಅನುಕರಿಸುತ್ತ). ಇದು ಹೆಚ್ಚು ಸಮಯ ಹಿಡಿಯುವ, ಮತ್ತು ಹೆಚ್ಚು ಶ್ರಮದ ಹಾದಿಯಾದರೂ, ನನಗೀಗದೆ ಅಭ್ಯಾಸವಾಗಿ ಹೋಗಿರುವುದರಿಂದ ಬದಲಿಸದೆ ಹಾಗೆ ಮುಂದುವರೆಸಿದ್ದೇನೆ. ಆದರೂ ಆಗ ‘ಕಳುವಾದ’ ಭಾವಮಂಜರಿಯನ್ನು ಮರುಕಳಿಸಲು ಸಾಧ್ಯವಾಗಲೆ ಇಲ್ಲ – ಬರೆಯಲೆತ್ನಿಸಿದರೂ ಸಹ, ಆ ಮೊದಲಿನ ಖದರು ಹೊರಟು ಹೋಗಿತ್ತು…(ಅಂದಹಾಗೆ ಈ ಕಳುವಾದ ಕವನದ ಮರುಯತ್ನದ ರೂಪ ‘ಸಾವೆಂಬ ಸಕಲೇಶಪುರದಿಂದ’. ತುಸು ದಿನಗಳ ನಂತರ ಮತ್ತೆ ಬರೆದದ್ದು).

ಇಲ್ಲಿಂದಾಚೆಗೆ ಹೆಚ್ಚು ಕಡಿಮೆ ದಿನೆ ದಿನೆ ಎಲ್ಲೆಂದರಲ್ಲಿ ಬರೆಯಲು ಸಾಧ್ಯವಾಯ್ತು. ಒಂದು ಘಟ್ಟದಲ್ಲಿ ಇದು ಯಾವ ಸೀಮೆ ಮುಟ್ಟಿತೆಂದರೆ, ಹೆಚ್ಚು ಕಡಿಮೆ ಒಂಭತ್ತು ತಿಂಗಳಲ್ಲಿ ಸಾವಿರಕ್ಕೂ ಮಿಕ್ಕಿ ಕವನಗಳೆನ್ನಬಹುದಾದ ಸರಕುಗಳು ಹೊರಬಿದ್ದವು – ಎಲ್ಲಾ ಡಿಜಿಟಲ್ ರೂಪದಲ್ಲಿ! ಅವು ಓದಬಲ್ಲ, ಉತ್ತಮ ಕವನಗಳೊ ಅಲ್ಲವೊ ಅನ್ನುವುದು ಬೇರೆಯ ವಿಷಯ (ಕೆಲವನ್ನ ಕವನ ಅನ್ನಬಹುದಾ ಇಲ್ಲವಾ ಅಂಥ ನನಗೇ ಅನುಮಾನವಿದೆ) ಆದರೆ ಗಾದೆಯೆ ಇದೆಯಲ್ಲಾ, ‘ಹೆತ್ತವರಿಗೆ ಹೆಗ್ಗಣ ಮುದ್ದು’ ಅಂತ. ನಾನೆ ಪ್ರಸವ ವೇದನೆ ಅನುಭವಿಸಿ ಬರೆದಿರೊದ್ರಿಂದ ನನ್ನ ಪಾಲಿಗಂತು ಅವು ಕವನಗಳೆ (ಹಾಗೆಯೆ, ಸಾವಿರದಲಿ ಶೇಕಡಾ ಹತ್ತಾದರೂ ಇರಲಾರದೆ ಸಕತ್ತೂ? ಅನ್ನೊ ದೂರದ – ದುಷ್ಟಬುದ್ಧಿ). ಒಟ್ಟಾರೆ ತಾಂತ್ರಿಕತೆಯ ಈ ಸ್ಮಾರ್ಟ್ಪೋನಿನ ಬೆಳವಣಿಗೆ, ನನ್ನನ್ನು ಮತ್ತೆ ಕನ್ನಡಮ್ಮನ ಮಡಿಲಿಗೆ ನಿಕಟವಾಗಲಿಕ್ಕೆ ಸಾಧ್ಯವಾಗಿಸಿದ್ದಂತೂ ಸತ್ಯ.
(ಇನ್ನೂ ಇದೆ)
– ನಾಗೇಶ ಮೈಸೂರು, ಸಿಂಗಾಪುರ,
14.04.2013

Next part continued in: https://nageshamysore.wordpress.com/94-%e0%b2%90%e0%b2%97%e0%b2%b3-%e0%b2%aa%e0%b3%81%e0%b2%b0%e0%b2%be%e0%b2%a3-02/

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s