00009 – ತೊಡಕುಗಳನು ಬಿಡಿಸಲು “ತೊಡಕಿನ ಸಿದ್ಧಾಂತ – 01″(ತೊಡಕು ಸಿದ್ಧಾಂತ) – ಭಾಗ – 01

…………ನಿರ್ಬಂಧಗಳಿಂದ ಅನಿರ್ಬಂಧದತ್ತ ನಡೆಸುವ ಸುವರ್ಣ ಪಥ – ಥಿಯರಿ ಆಫ್ ಕಂಸ್ಟ್ರೆಂಟ್ಸ್!

ತಿಕ್ಕಾಟಗಳ ಪರಿಹರಿಸಲು ‘ತಿಕ್ಕಾಟದ ಸಿದ್ಧಾಂತ’?
______________________________________________________________________________
ಭಾಗ – 01: ಏನೀ ತೊಡಕಿನ ಸಿದ್ಧಾಂತ?
______________________________________________________________________________

ಹೆಸರಲ್ಲೆ ತೊಡಕನ್ನು ಹೊತ್ತು ಬಂದಿರುವ ಯಾವುದೀ ಹೊಸ ತತ್ವ? ಮಸಲ, ಹೆಸರೆ ಸರಿಯಿದೆಯೊ, ತಪ್ಪಿದೆಯೊ ಎಂಬ ಸಂಶಯವನ್ನು ಸಹ ಮೊದಲನೆಯ ತೊಡಕಾಗಿ ಜತೆಯಲ್ಲೆ ಹೊತ್ತು ಬಂದಿರುವ ಕಾರಣ, ಮೊದಲು ಹೆಸರಿನ ವಿವಾದವನ್ನು ನಿಭಾಯಿಸಿ ನಂತರ ಉಳಿದ ವಿಷಯ ನೋಡಿಕೊಳ್ಳೋಣ. ಹೆಸರೇನೇ ಆಗಿರಲಿ, ಕೊನೆಗೆ ಅದರ ಸರಿಯಾದ ಅರ್ಥ ತಿಳಿದಿರುವುದು ಎಲ್ಲರಿಗೂ ಮುಖ್ಯ ನೋಡಿ!

ಇಂಗ್ಲೀಷಿನಲ್ಲಿ ಈಗ ” ಥಿಯರಿ ಆಫ್ ಕಂಸ್ಟ್ರೆಂಟ್ಸ್” ಎಂದು ಕರೆಯಲ್ಪಡುವ ಸಿದ್ಧಾಂತ ಅಥವ ತತ್ವದ ಕನ್ನಡ ಭಾವಾನುವಾದದ ಯತ್ನ ಈ “ತೊಡಕಿನ ಸಿದ್ಧಾಂತ”ದ ಹೆಸರಿನ ಹಿಂದಿನ ಋಷಿ / ನದಿ ಮೂಲ. ಕನ್ನಡದಲಿ ಕನ್ಸ್-ಟ್ರೈಂಟು ಪದಕ್ಕೆ ನಿಯಮ, ನಿರ್ಬಂಧ, ಕಡ್ಡಾಯ, ಬಲಾತ್ಕಾರ, ಒತ್ತಾಯ – ಹೀಗೆ ಹಲವಾರು ಅರ್ಥಗಳನ್ನು ನೋಡಬಹುದಾದರೂ, ಸಿದ್ಧಾಂತದ ಅರ್ಥ ಸಾಮ್ಯತೆಯಲ್ಲಿ “ನಿರ್ಬಂಧ” ಪದವೊಂದೆ ಹತ್ತಿರದ ಸಂಬಂಧಿಯಾಗಿತ್ತು. ಆದರೂ “ತೊಡಕು” ಮತ್ತು “ಅಡೆತಡೆ” ಕೂಡ ಅಷ್ಟೆ ಸೂಕ್ತವಾಗಿ ಹೊಂದಾಣಿಕೆಯಾಗಬಹುದು ಎನಿಸಿತು. ಸರಿಯಾದ ಪದಕ್ಕಾಗಿ ಹೆಚ್ಚು ತಡಕಾಡದೆ ವಸ್ತು-ವಿಷಯದತ್ತ ಹೆಚ್ಚು ಗಮನ ಹರಿಸುವ ಸಲುವಾಗಿ “ತೊಡಕು”, “ನಿರ್ಬಂಧ” ಮತ್ತು “ಅಡೆತಡೆ” ಈ ಮೂರು ಪದ / ಪದಪುಂಜಗಳ ಬಳಕೆಗೆ ಸೀಮಿತಗೊಳಿಸಿ ಈ ಲೇಖನವನ್ನು ಬರೆದಿದ್ದೇನೆ. ಈ ಪದಗಳನ್ನು ಸಹ ಒಂದರ ಬದಲಾಗಿ ಇನ್ನೊಂದನ್ನು ಒಂದೆ ಅರ್ಥದ ಪರಿಧಿಯಲ್ಲಿ ಯಥೇಚ್ಚವಾಗಿ ಬಳಸಿದ್ದೇನೆ. ಈ ತತ್ವದ ಅರಿವಿಗೆ, ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ ಇದರಿಂದ ಹೆಚ್ಚೇನು ಭಂಗ ಬರುವುದಿಲ್ಲವೆಂದು ನನ್ನ ಭಾವನೆ. ಒಂದು ವೇಳೆ ಸಹೃದಯ ಓದುಗ ಬಳಗ ಯಾ ಸ್ನೇಹಕೂಟದ ದೆಸೆಯಿಂದಾಗಿ ಇನ್ನು ಹೆಚ್ಚು ಸೂಕ್ತಪದದ ಸುಳಿವು ಸಿಕ್ಕರೆ, ಈ ಪದಗಳ ಬದಲು ಅದನ್ನೆ ಧಾರಾಳವಾಗಿ ಬಳಸಲು ಖಂಡಿತ ನನ್ನಡ್ಡಿಯಿಲ್ಲ. ಹೆಸರಿಗಿಂತ ಅದರ ಅರಿವು, ಜ್ಞಾನ ಮುಖ್ಯ ಎಂಬ ತತ್ವ ಸಿದ್ಧಾಂತದ ಆಲೋಚನಾಶಾಲೆಯ ವಿದ್ಯಾರ್ಥಿ ನಾನು. ಹೆಸರೇನಿದ್ದರೂ ಸಾಮಾನ್ಯ ಮತ್ತು ಸಹಮತಪೂರಿತ ಅರ್ಥಾವಗಾಹನೆಗಷ್ಟೆ ಮುಖ್ಯ ಎಂದು ನಂಬಿದವನು!

ಹೆಸರಿನ ಕುರಿತ ಈ ಮಾತು ಬಂದಾಗ ತೊಡಕಿನ ಸಿದ್ದಾಂತಕ್ಕೆ ನೇರ ಸಂಬಂಧಿಸದಿದ್ದರು, ಈ ಪುಟ್ಟ ಪ್ರವರವನ್ನು ಹೇಳಿ ನಂತರ ಮುಖ್ಯ ವಿಷಯಕ್ಕೆ ಬರುತ್ತೇನೆ (ಕೊಂಚ ಲಘುವಾದ ಹಾಸ್ಯದ ಲೇಪವಿದ್ದರೆ, ಈ “ಸೀರಿಯಸ್”ಬರಹಗಳು ತುಸುವಾದರು ಓದರಿಯಲು ಪ್ರೇರೇಪಿಸಬಹುದೆಂಬ ದುರಾಸೆ!). ನನ್ನ ಅಪ್ಪ ಅಮ್ಮ ನನಗಿಟ್ಟ ಹೆಸರು ಒಂದೆ ಪದದ ಸರಕು. ಮೂರುಹೊತ್ತಿನ ಗಂಜಿಗೆ ನೂರಿಪ್ಪತ್ತು ತರದ ಸರ್ಕಸ್ಸು ಮಾಡಿ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ಕರೆಯಲೊಂದು ಹೆಸರಿದ್ದರೆ ಸಾಕೆಂದು ಯಾವುದೊ ಬಾಯಿಗೆ ಸಿಕ್ಕ, ಮನಸಿಗೆ ಹೊಳೆದ ಅಥವಾ ಯಾವುದಾದರು ಇಷ್ಟದೈವದ ಹೆಸರಿಟ್ಟು ಕೈತೊಳೆದುಕೊಳ್ಳುವುದು ಸಾಮಾನ್ಯ ರೂಢಿ. ನಮ್ಮ ಕುಟುಂಬವು ಈ ಸುವರ್ಣ ಸೂತ್ರದ ಹೊರತೇನೂ ಆಗಿರಲಿಲ್ಲ. ಕರೆಯಲೊಂದು ಹೆಸರಿದ್ದರೆ ಸರಿಯೆನ್ನುವ ಜನಕ್ಕೆ, ಹೆಸರಲ್ಲೆ “ಮೊದಲ ಹೆಸರು” ” ಮಧ್ಯದ ಹೆಸರು” “ಕಡೆ ಹೆಸರು” ಇಡಬೇಕೆಂದರೆ ಅರ್ಥವಾಗುವುದಾದರೂ ಹೇಗೆ? ಅಬ್ಬಬ್ಬಾ ಎಂದರೆ ಅವರರಿವಿಲ್ಲದೆ ಕುಟುಂಬದ ಹೆಸರಾಗಿ ಶೆಟ್ಟಿಯೊ, ರೆಡ್ಡಿಯೊ ಸೇರಿಕೊಂಡಿದ್ದರೆ ಅದೇ ದೊಡ್ಡ ಆಕಸ್ಮಿಕ. ಪುಣ್ಯವಶಾತ್ ಸ್ಕೂಲಿಗೆ ಹಾಕುವಾಗ ಹುಟ್ಟಿದೂರು ಮತ್ತು ಅಪ್ಪನ ಹೆಸರನ್ನು ಹೆಸರಿನ ಹಿಂದೆ ಇನಿಷಿಯಲ್ಲಾಗಿ ಸೇರಿಸಿದ್ದರಿಂದ ಖಾಲಿ ಹೊಡೆಯುತ್ತಿದ್ದ ಹೆಸರಿಗೊಂದು ತರ ಖಳೆ ಬಂದಂತಾಗಿ, ಹಳ್ಳಿ ಗಮಾರನ ಅವತಾರದಿಂದ ಸಿಟಿಯವನ ಸೂಟುಬೂಟಿನ ಥಳುಕುಬಳುಕಿಗೆ ಜಿಗಿದಂತಾಗಿತ್ತು. ಓದು ಮುಗಿದು, ಕೆಲಸ ಹಿಡಿದಾಗಲೂ ಈ ಹೆಸರು ಏನೂ ತೊಡಕಾಗಲಿಲ್ಲ. ವಿದೇಶ ವಿಮಾನ ಹತ್ತಲು ಪಾಸ್ಪೋರ್ಟು ಮಾಡಿಸಲು ಹವಣಿಸಿದೆ ನೋಡಿ, ಅಲ್ಲಿಂದ ಶುರುವಾಯ್ತು ಪೀಕಲಾಟ. ಕನಿಷ್ಟ ಇಟ್ಟ ಹೆಸರು / ಕುಟುಂಬದ ಹೆಸರು (ಅಥವ ಮೊದಲಾ ಮತ್ತು ಕಡೆ ಹೆಸರು) ಅಲ್ಲಿ ತುಂಬಲೆ ಬೇಕಲ್ಲಾ? ಸರಿ, ಇನಿಷಿಯಲ್ಲುಗಳು ಹೇಗೂ ಇದೆಯಲ್ಲ! ಮೊದಲ ಭಾಗ ‘ಇಟ್ಟ ಹೆಸರಿನ’ ಸ್ಥಳದಲ್ಲಿ ನನ್ನ ನಿಜವಾದ ಹೆಸರು ಮತ್ತು ಊರಿನ ಹೆಸರನ್ನು ಜೋಡಿಸಿ ಸಂಕ್ಷಿಪ್ತವಿರದ ಹಾಗೆ ಪೂರ್ತಿ ಬರೆಸಿದ್ದಾಯ್ತು; ಇನ್ನು ಎರಡನೆ ಭಾಗಕ್ಕೆ ಅಪ್ಪನ ಹೆಸರು ಇದ್ದೆ ಇದೆಯಲ್ಲ!

ಆದರೆ, ಇನ್ನೂ ನಿಜವಾದ ಪೀಕಲಾಟಕ್ಕಿಟ್ಟುಕೊಂಡಿದ್ದು ವಿದೇಶಿ ನೆಲದಲ್ಲಿ ಕಾಲಿಟ್ಟು ಕೆಲಸ ಆರಂಭಿಸಿದಾಗಲೆ! ಕಂಪ್ಯೂಟರು ವಿಭಾಗದ ಸಹೋದ್ಯೋಗಿಯೊಬ್ಬರು ನನ್ನ ಹೊಸ ‘ಮಿಂಚಂಚೆ’ ತೆರೆಯಲು, ಮೊದಲ ಹಾಗೂ ಕಡೆ ಹೆಸರನ್ನು ಕೇಳಿದಾಗ ಮೇಲೆ ಕೆಳಗೆ ನೋಡುವಂತಾಯ್ತು. ಯಥಾರೀತಿ ಅವನ ಬಳಿ ಪ್ರವರ ಬಿಚ್ಚಿದೆ – ನನಗೊಂದೆ ಇಟ್ಟ ಹೆಸರು, ಮೊದಲ ಹಾಗು ಕಡೆಯದು ಅಂತೇನೂ ಇಲ್ಲ..ಇತ್ಯಾದಿ, ಇತ್ಯಾದಿ. ಪಾಪದವನು ತಾಳ್ಮೆಯಿಂದ ಕೇಳಿಸಿಕೊಂಡು ಕೊನೆಗೆಂದ – “ಸಾರಿ, ದಿಸಿಸ್ ದ ರೂಲ್ಸ್ ಹಿಯರ್; ಆಲ್ಸೊ, ಅನ್ಲೆಸ್ ಐ ಹ್ಯಾವ್ ಬೊಥ್ ಫೀಲ್ಡ್ಸ್, ಐ ಕಾಂಟ್ ಕ್ರೀಯೇಟ್ ದ ಯುಸರ ಐಡಿ ಇನ್ ಸಿಸ್ಟಂ..” ಎಂದ. ತೆಪ್ಪನೆ ಪಾಸ್ಪೋರ್ಟು ಬಿಚ್ಚಿ ತೋರಿಸಿದೆ. ನನ್ನ ನಿಜ ನಾಮಧೇಯ ” ಮೊದಲ ಹೆಸರಾಯ್ತು”, ಊರಿನ ಹೆಸರು”ಕೊನೆಯ ಹೆಸರಾಯ್ತು”! ಅಲ್ಲಿಂದಾಚೆಗೆ ಎಲ್ಲಾ ಸುಲಭವಾಯ್ತು – ಒಂದು ಬಾರಿ ಮಾಡಿದ್ದು ಪದೆಪದೆ ಮಾಡಲು ಅನುಭವಶಾಲಿಗಳಿಗೆ ಸುಲಭ ತಾನೆ? ಬ್ಯಾಂಕು, ಇಮ್ಮಿಗ್ರೇಷನ್ನು, ಕ್ರೆಡಿಟ್ ಕಾರ್ಡು – ಎಲ್ಲಾ ಕಡೆಗೂ ರಾಮಬಾಣದ ಹಾಗೆ ಅದೆ, ಒಂದೇ ಮಂತ್ರ!

ಈಗಲೂ ಬರುವ ಎಷ್ಟೊ ಇ-ಮೈಯಿಲುಗಳಲ್ಲಿ ಕೆಲವಲ್ಲಿ ನನ್ನ ಹೆಸರಿನ ನೇರ ಸಂಭೋಧನೆಯಿದ್ದರೆ, ಇನ್ನು ಕೆಲವರು “ಮಿಸ್ಟರು ಮೈಸೂರು” ಅಂತಲೆ ಆರಂಭಿಸುತ್ತಾರೆ. ಈಗಾಗಲೆ ಚೆನ್ನಾಗಿ ಅಭ್ಯಾಸವಾಗಿ ಹೋಗಿದೆಯಾದ್ದರಿಂದ ನಾನು ಅಷ್ಟೆ ಆರಾಮವಾಗಿ ಉತ್ತರಿಸುತ್ತೇನೆ – ಹೇಳಿ ಕೇಳಿ, ಹೆಸರಿನಲೇನಿದೆ ಹೇಳಿ?

ತೊಡಕಿನ ಸಿದ್ಧಾಂತದ ಬಗ್ಗೆ ಹೇಳ ಹೊರಟು, ಹೆಸರಿನ ತೊಡಕಿನ ಬಗ್ಗೆ ಬರೆಯಬೇಕಾಗಿ ಬಂದದ್ದು ಕಾಕತಾಳೀಯವಾದರೂ, ಈ ಸಿದ್ಧಾಂತ ಬರಿ ಔದ್ಯೋಗಿಕ ಜಗತ್ತಿಗೆ ಮಾತ್ರವಲ್ಲ, ವೈಯಕ್ತಿಕ ಜೀವನಕ್ಕೂ ಅಳವಡಿಕೆಯಾಗಬಲ್ಲ ಮತ್ತು ತೊಡಕನ್ನು ನಿವಾರಿಸಬಲ್ಲ ಸಂಜೀವಿನಿ ಎಂದು ಹೆಸರಿಸುತ್ತಾರಾಗಿ, ಈ ತೊಡಕು, ಒಂದು ರೀತಿ ಲೇಖನದ ವಸ್ತುವಿಗೆ ಸಂಬಂಧ ಪಟ್ಟಿದ್ದೇ, ಎಂದು ತೀರ್ಮಾನಿಸಿ ಮುಂದುವರೆಯೋಣ ಮುಖ್ಯ ವಸ್ತುವಿಗೆ!! (ಎಲ್ಲಿ ಬೇಕಾದರೂ ಎಂಬುದು ಈ ತತ್ವದ ಮೂಲ ಕತೃ ಎಲಿಯ್ಯಾಹು ಗೋಲ್ಡ್ರಾಟ ರವರ ಅಭಿಪ್ರಾಯ – ಇನ್ನು ಓದಿಲ್ಲದಿದ್ದರೆ, ಓದಿನೋಡಿ, ಅವರ ಹೆಸರಾಂತ ಕೃತಿ – ದಿ ಗೋಲ್, ಭಾರತೀಯ ಮುದ್ರಿತ ಅವೃತ್ತಿಯೂ ಲಭ್ಯವಿದೆ).

ಈ ಸಿದ್ಧಾಂತವನ್ನರಿಯಲು ಮತ್ತು, ಮತ್ತೆ ಹರಿಕಥೆಗೆ ಉಪಕಥೆಯಾದಂತೆ ವಿಷಯಾಂತರ ಮಾಡದಿರಲು, ಒಂದು ಪುಟ್ಟ ಸೀಮಾರೇಖೆಯ ಪರಿಧಿಯನ್ನು ಹಾಕಿಕೊಳ್ಳೋಣ. ಓದಿನ ಕೊನೆಯಲ್ಲಿ ಕನಿಷ್ಟ ಅಷ್ಟೂ ವಿಷಯಗಳಿಗೆ ಮಾನ್ಯತೆ / ಅವಕಾಶ ದೊರಕಿದ್ದರೆ ಈ ಬರಹದ ಉದ್ದೇಶದ ಗುರಿ ಮುಟ್ಟಿದಂತೆ. ಪರಿಧಿಯಿಲ್ಲದೆ ಲಹರಿ ಬಿಟ್ಟರೆ, ಮತ್ತೆಲ್ಲೊ ತೇಲಿ ಹೋಗುವ ಸಾಧ್ಯತೆಯೆ ಹೆಚ್ಚು – ಹಾರುತ ದೂರಾ, ದೂರಾ ಅನ್ನುವ ಹಾಗೆ!

ಇನ್ನು ಪರಿಧಿಯ ಮಾತಿಗೆ ಬಂದರೆ –

1. ಏನಿದು ತೊಡಕಿನ ಸಿದ್ಧಾಂತವೆಂದರೆ? ಏನಿದರ ಹಿನ್ನಲೆ?
2. ಈ ಸಿದ್ಧಾಂತ / ತತ್ವದ ಬಳಕೆಯ ವ್ಯಾಪ್ತಿ ಮತ್ತು ಮಿತಿಗಳೇನು? ಎಲ್ಲೆಲ್ಲಿ ಮತ್ತು ಹೇಗೆ ಬಳಸಬಹುದು?
3. ಈ ಸಿದ್ಧಾಂತದ ಮೂಲಾಧಾರ ಸ್ತಂಭಗಳಿದ್ದರೆ ಅವು ಯಾವುವು? (ಕಾಮನ್ ಸೆನ್ಸ್ – ಸಾಮಾನ್ಯ ಜ್ಞಾನ, ಸೊಕ್ರೆಟಿಸನ – ಪ್ರಶ್ನಾರ್ಥಗಳಿಂದ ಉತ್ತರಕ್ಕೆ ಸೆಣೆಸುವ ವಿಧಾನ, ಲೋಕಲ್ ಆಪ್ಟಿಮ ಗ್ಲೊಬಲ್ ಆಪ್ಟಿಮ)
4. ಅಂಕಿ-ಅಂಶ ತತ್ವಾಧಾರಿತ ಏರಿಳಿತಗಳ ಗಣನೆ ಯಾ ಅಂಕಿ-ಅಂಶಾಧಾರಿತ ಕಂಪನಗಳ ಗಣನೆ ಮತ್ತು ಪರಾವಲಂಬಿತ ಘಟನಾತ್ಮಕತೆಯ ಗಣನೆ ( ಸ್ಟಾಟಿಸ್ಟಿಕಲ್ ಫ್ಲಕ್ಚುಯೇಶನ್ ಮತ್ತು ಡಿಪೆಂಡೆಂಟ್ ಈವೆಂಟ್ಸ್ ಮತ್ತವುಗಳ ಗಣನೆ ಹಾಗೂ ಪರಿಣಾಮ / ಪರಿಮಾಣ)
5. ಕಿವುಚು-ಕತ್ತಿನ ಬಾಟಲಿಯ ಪರಿಣಾಮ / ಇಕ್ಕಟ್ಟುಕತ್ತಿನ ಶೀಷೆಯ ಪರಿಣಾಮ (ಬಾಟಲ್-ನೆಕ್ ಎಫೆಕ್ಟ್ ಮತ್ತದರ ಪ್ರಾಮುಖ್ಯತೆ)
6. ಅಳೆಯುವ ಮಾನದಂಡಗಳ ಉದಾಹರಣೆ – ಕಾಂಚಾಣೊತ್ಪಾದನಾ ವೇಗ (ಥ್ರೂ – ಪುಟ್), ಮಾರಾಟವಾಗಬಲ್ಲ ಬಂಡವಾಳ (ಇನ್ವೆಂಟರಿ) , ಪರಿವರ್ತನಾ ಕಾಂಚಣ (ಆಪರೇಟಿಂಗ್ ಎಕ್ಸ್ ಪೆನ್ಸಸ್)
7. ಸುವರ್ಣ ಸೂತ್ರದ ಬಂಗಾರದ ತ್ರಿಭುಜ – (ಕಾರ್ಯತಂತ್ರದ ಕೆಂದ್ರಬಿಂದು ಮತ್ತದರ ಸಂಬಂಧ)
8. ನೈಜ್ಯತೆಯ ವೃಕ್ಷಗಳು – ಪ್ರಸ್ತುತ ವೃಕ್ಷಗಳು, ತಾತ್ಕಾಲಿಕ ಸೇತುವೆ ವೃಕ್ಷಗಳು ಮತ್ತು ಭವಿತದ ವೃಕ್ಷಗಳು (ರಿಯಾಲಿಟಿ ಟ್ರೀಸ್ – ಕರೆಂಟ್, ಟ್ರಾನ್ಸಿಶನ್, ಫ್ಯೂಚರು – ಸಿ.ಆರ.ಟಿ, ಟಿ.ಆರ.ಟಿ, ಎಫ್.ಆರ.ಟಿ)
9. ಖಾಸಗಿ ಬದುಕು ಮತ್ತು ಟಿಓಸಿ

ನಿರ್ಬಂಧ ಸಿದ್ಧಾಂತ / ತತ್ವದ ಕುರಿತು ಬರೆಯಹೊರಟರೆ ಆಳ ಅಗಲದ ಮೇಲವಲಂಬಿಸಿ ಪುಸ್ತಕಗಳನ್ನೆ ಬರೆಯುವಷ್ಟು ವ್ಯಾಪ್ತಿಯಿರುವುದರಿಂದ ಈ ಲೇಖನದಲ್ಲಿ ಕೇವಲ ಸಿದ್ಧಾಂತ ಯಾ ತತ್ವ ಗ್ರಹಣೆ ಮತ್ತು ಸೈದ್ಧಾಂತಿಕ ಅನುಸಂಧಾನತೆಯನ್ನು ಮಾತ್ರ ಮುಖ್ಯ ಗಮ್ಯವಾಗಿರಿಸಿಕೊಂಡಿದೆ. ಹೆಚ್ಚಿನ ಆಳ ಬಯಸುವ ಓದುಗರು ಬೇರೆ ಆಕರಗಳನ್ನು ಸೋಸಬೇಕಾಗುತ್ತದೆ. ಈಗ ಒಂದೊಂದಾಗಿ ಈ ಮೇಲಿನ ವಿಷಯಗ್ರಹಿಕೆಗೆ ಪ್ರಯತ್ನಿಸೋಣ.

______________________________________________________________________________ (ಮುಂದಿನ ಭಾಗಕ್ಕೆ ಲೇಖನ ಸಂಖ್ಯೆ 95ನ್ನು ನೋಡಿ: https://nageshamysore.wordpress.com/2413-2/)
______________________________________________________________________________

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s