00003 – ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ?

ನೀನೋದಿದ ವಿದ್ಯೆಗೆಲ್ಲಿಡುವೆ ನೈವೇದ್ಯ?
ಹೀಗೆ ಯೋಚಿಸುತ್ತ ಕುಳಿತಿದ್ದೆ ಪಾರ್ಕಿನ ಬೆಂಚೊಂದರ ಮೇಲೆ. ಶನಿವಾರ, ಭಾನುವಾರಗಳ ಒಂದೂವರೆ ತಾಸಿನ ನಡೆದಾಟ ಮುಗಿಸಿ, ಹಿಂದಿರುಗುವ ಮುನ್ನ ಅಲ್ಲೊಂದರ್ಧ ಗಂಟೆ ಕೂತು ವಿಶ್ರಮಿಸಿ ಹೊರಡುವುದು ರೂಢಿ. ಹಾಗೆ ಕೂತ ಗಳಿಗೆ, ಮನಸಿಗಷ್ಟು ಹುರುಪೆದ್ದರೆ ಒಂದು ಕವನವೊ, ಚುಟುಕವೊ ಗೀಚುವುದುಂಟು. ಇಲ್ಲವಾದರೆ, ಕಿವಿಗುಟ್ಟುವ ಹಾಡಿನ ಜತೆ ಗುನುಗುತ್ತ ಯಾವುದೊ ಆಲೋಚನೆಯಲ್ಲಿ ಕಳುವಾಗುವುದು ಉಂಟು. ಪ್ರತಿಬಾರಿಯೂ ಇದೇ ಪದೇ ಪದೇ ಪುನರಾವರ್ತನೆಯಾದರು ಇನ್ನು ಬೋರೆನಿಸುವ ಮಟ್ಟಕ್ಕೆ ತಲುಪದ ಕಾರಣ, ಇದಿನ್ನು ಮನಸಿಗೆ ಹಿತವಾದ ಪ್ರಕ್ರಿಯೆಯೆಂದೆ ಅಂದುಕೊಂಡೇನೊ , ಒಂದೆರಡು ವರ್ಷಗಳಿಂದ ಇದು ಹಾಗೆ ಮುಂದುವರೆದಿದೆ.
ಅಂದು ನನ್ನ ಹಾಗೆ ವಾಕಿಂಗ್ ಬಂದಿದ್ದ ಮತ್ತೊಬ್ಬರು ಮಾತಿಗೆ ಸಿಕ್ಕಿ, ಲೋಕಾಭಿರಾಮವಾಗಿ ಅದು, ಇದು ಮಾತನಾಡುತ್ತ ಕುಳಿತೆವು. ಆತ ಈಗಾಗಲೆ ರಿಟೈರಾಗಿ ಕುಳಿತ ಟೆಕ್ನೀಷಿಯನ್ನು – ಹಡಗಿನಲ್ಲಿ ಸುತ್ತಾಡುತ್ತಲೆ ಅರ್ಧ ಆಯಸ್ಸನ್ನು ಕಳೆದವ. ಕೂತೂಹಲಕೆಂಬಂತೆ ಆವನ ವಿದ್ಯಾಭ್ಯಾಸದ ಹಿನ್ನಲೆ ವಿಚಾರಿಸಿದೆ. ತಾಂತ್ರಿಕ ಡಿಪ್ಲೊಮೊವೊಂದನ್ನು ಸಂಪಾದಿಸಿ ತನ್ನ ಓದಿಗೆ ಸಂಬಂಧಿತ ಕಾರ್ಯಕ್ಷೇತ್ರದಲ್ಲೆ ಕೆಲಸ ಮಾಡುವ ಸೌಭಾಗ್ಯ ಅವನದಾಗಿತ್ತು. ಜತೆಗೆ ಅದೇ ವಿಷಯದಲ್ಲಿ ಅವನ ಆಸಕ್ತಿ ಅತ್ಯಧಿಕವಿದ್ದ ಕಾರಣ, ಆ ಸಂಬಂಧಿತ ಕ್ಷೇತ್ರ ಬಿಟ್ಟು ಬೇರೆಯದರತ್ತ ಆಲೋಚನೆಯನ್ನೂ ಮಾಡಿರಲಿಲ್ಲವಾತ. ಒಬ್ಬ ಮಗ ಅಪ್ಪನ ಹಾದಿ ಹಿಡಿದು ತಾಂತ್ರಿಕ ಡಿಗ್ರಿ ಮುಗಿಸಿದ್ದರೂ, ಬ್ಯಾಂಕೊಂದರ ಸೇವಾವಿಭಾಗದಲ್ಲಿ ಕೆಲಸ ಹಿಡಿದಿದ್ದ. ಮಗಳು ಡಿಗ್ರಿ ಮುಗಿಸಿ ರಿಯಲ್ಲೆಸ್ಟೇಟ್ ಕಂಪನಿಯೊಂದರ ಮಾರ್ಕೆಟಿಂಗ್ ಆಫೀಸರಾಗಿ ಕೆಲಸಕಿದ್ದಾಳೆ. ಪ್ರಾಸಂಗಿಕವಾಗಿ, ಅವರ ಓದಿಗೂ ಅವರ್ಹಿಡಿದ ಹುದ್ದೆಗೂ ನೇರ ಸಂಬಂಧವೆ ಇಲ್ಲವೆಂದು ನಕ್ಕರಾತ.

ಆತ ಹೊರಟ ಕೆಲಕ್ಷಣಗಳ ನಂತರವು ಆತನ ಕಡೆಯ ಮಾತು ಗುಂಯುಗುಡುತ್ತಿತ್ತು. ಹೌದಲ್ಲಾ ಎನಿಸಿತು – ನನ್ನ ಕೇಸನ್ನೆ ತೆಗೆದುಕೊಂಡರೆ, ಓದಿದ್ದು ಎಂಜಿನಿಯರಿಂಗು; ಕೆಲಸ ಶುರು ಮಾಡಿದಾಗ ಸಿಕ್ಕಿದ ಕೆಲಸ ತಾಂತ್ರಿಕ ಜಗತ್ತಿಗಿಂತ ಹೆಚ್ಚು ವಾಣಿಜ್ಯ ಜಗತ್ತಿಗೆ ಸಂಬಂಧಿಸಿದ್ದು – ಮೆಟೀರಿಯಲ್ಸ್ ವಿಭಾಗದಲ್ಲಿ. ಆ ಕೆಲಸದ ಅಗತ್ಯದ ನಿಮಿತ್ತ ಕಂಪ್ಯೂಟರಿನಲ್ಲಿ ಮತ್ತು ಅದರ ಸಂಬಂಧಿಸಿದ ಅಪ್ಲಿಕೇಶನ್ ಸಾಫ್ಟ್ವೇರುಗಳ ಜತೆ ಹೆಣಗಾಡುವ ಅವಕಾಶ. ಹೀಗಾಗಿ ಎಮ್.ಆರ.ಪಿ (ಮೆಟೀರಿಯಲ್ ರಿಕ್ವೈರ್ಮೆಂಟು ಪ್ಲಾನಿಂಗ್), ಪಿ.ಪಿ.ಸಿ(ಪ್ರೊಡಕ್ಷನ್, ಪ್ಲಾನಿಂಗ್ & ಕಂಟ್ರೊಲ್), ವೇರಹೌಸ್ ಮ್ಯಾನೇಜ್ಮೆಂಟು (ಡಬ್ಲ್ಯೂ.ಎಂ) ತರದ ಪ್ರೋಸಸ್ಸು ಮತ್ತವುಗಳ ಸಿಸ್ಟಂಗಳ ಜತೆ ಒಡನಾಟ ತೆಕ್ಕೆಗೆ ಬಿತ್ತು. ಅಲ್ಲಿಂದ ಮುಂದೆ ಸಂಭವಿಸಿದ ಪ್ರಾಜೆಕ್ಟೊಂದರ ಕಾರಣವಾಗಿ ಮಾಹಿತಿ ವಿಜ್ಞಾನದ ಬೆನ್ನು ಹಿಡಿದು ಇಂದಿನ ಐ.ಟಿ. ಜಗತ್ತಿನಲ್ಲಿ ಈಜಾಡುವ ಸರದಿ. ಎಲ್ಲಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಗ್ರಿ? ಎಲ್ಲಿಯ ಮಾಹಿತಿ ವಿಜ್ಞಾನದ ಕೊಂಡಿ? ಎತ್ತಣದ ಸಂಬಂಧ ಗಂಟು ಹಾಕಿತೀ ಅನುಬಂಧ?

ಮೊತ್ತ ಒಟ್ಟಾಗಿಸಿ ನೋಡಿದರೆ, ಇದುವರೆಗಿನ ನನ್ನ ಯಶಾಪಯಶಗಳಲ್ಲಿ ನನ್ನ ವಿದ್ಯೆಯ ಹಿನ್ನಲೆಗಿಂತ ಹೆಚ್ಚು ಸಹಾಯ, ಸಹಕಾರ ನೀಡಿದ್ದು ಬೇರೆಯೆ ತರಹದ ಸರಕುಗಳು. ಗುಣಾತ್ಮಕ ನಡುವಳಿಕೆಗಳಾದ ಮನೋಭಾವ, ಸಹನೆ, ಹೊಂದಾಣಿಕೆ ಗುಣ, ವ್ಯವಹಾರದ ಒಳಹೊರಗುಟ್ಟು – ಸೂಕ್ಷ್ಮತೆಗಳನ್ನರಿಯುವ ಜಾಣ್ಮೆ, ಸಮಯೋಚಿತ ಸಾಮಾನ್ಯಜ್ಞಾನ – ಇತ್ಯಾದಿ. ವಸ್ತು ವಿಷಯದ ಮೇಲಿನ ಜ್ಞಾನ, ಸಾಮರ್ಥ್ಯ ಮತ್ತು ತಾಂತ್ರಿಕ ವಿವರಗಳ ಅರಿವು ಅಷ್ಟೆ ಅಗತ್ಯವಾದರು, ಅವಾವುದು ಕಾಲೇಜಿನಿಂದಾಗಲಿ ಅಥವ ಓದಿನಿಂದಾಗಲಿ ಬಂದ ಸರಕಾಗಿರದೆ, ತರಬೇತಿಯಿಂದಲೊ ಮತ್ತು ಕೆಲಸದ ಪೂರಕವಾಗಿ ಬಂದ ದಾಖಲೆಗಳಿಂದಲೊ ಅರಿತ ಸಾಧ್ಯತೆಗಳೆ ಹೆಚ್ಚು. ಹಾಗಿದ್ದರೆ ಓದಿನಿಂದ ಏನೂ ಪ್ರಯೋಜನವೆ ಆಗಲಿಲ್ಲವೆಂದರ್ಥವೆ?

ವಿಷಯ ಹಾಗಿರಲಾರದು. ನಿಜ, ಎಲ್ಲರೂ ಕಾಲೇಜು ಮುಗಿಸಿ ಹೊಸದಾಗಿ ಕೆಲಸಕ್ಕೆ ಸೇರಿದ ಹೊತ್ತಿನಲ್ಲಿ ಸಾಮನ್ಯವಾಗಿ ಎಲ್ಲರು ಅನುಭವಿಸುವ ‘ ಕಲ್ಚರಲ್ ಶಾಕ್ ‘ ಬಗೆ ಹೇಳುತ್ತಾರೆ. ಕೆಲಸ ಆರಂಭಿಸಿದ ತುಸುದಿನಗಳಲ್ಲೆ, ತಾನು ಓದಿದ ‘ಐಡಿಯಲ್ ಪ್ರಪಂಚ’ಕ್ಕು , ನಿಜ ಜೀವನದ ‘ರಿಯಲ್ ವರ್ಡ್’ಗು ಇರುವ ಅಗಾಧ ಅಂತರ ದಿಗ್ಭ್ರಮೆ ಮೂಡಿಸಿ, ಎಂತಹವರನ್ನೂ ದಿಗ್ಮೂಢನನ್ನಾಗಿಸುವುದು ನಿಜವೆ. ಆದರೆ ವಾಸ್ತವದಲ್ಲಿ, ಯಾವ ವಿಶ್ವವಿದ್ಯಾಲಯದಲ್ಲೂ ಯಾವುದೆ ಮಟ್ಟದಲ್ಲೂ ‘ರೆಡಿ ಟು ಇಂಡಸ್ಟ್ರಿ’ ಸರಕನ್ನು ಉತ್ಪಾದಿಸಿ, ಮಾರುಕಟ್ಟೆಗಿಳಿಸುವುದಿಲ್ಲ. ಅಲ್ಲೇನಿದ್ದರು ಉತ್ಪಾದನೆಯಾಗುವುದು ಬರಿ ಡಿಗ್ರಿ, ಡಿಪ್ಲೊಮೊಗಳಷ್ಟೆ. ಆ ಪ್ರಶಸ್ತಿಯನ್ಹೊತ್ತು ಬಂದ ಮೂಲ ಸಾಮಾಗ್ರಿಗಳನ್ನು, ಸಿದ್ದ ಸರಕಾಗಿಸುವ ಜವಾಬ್ದಾರಿ ಆಯಾ ಕಂಪನಿಗಳ ಪಾಲಿಗೆ ಬೀಳುತ್ತದೆ. ಹೇಗೂ ಈ ಪರಿವರ್ತನೆಯ ಹೊಣೆ, ಕಂಪನಿಯದೆ ಆದರೆ ಕಾಲೇಜು ಓದಿದ, ಹೆಚ್ಚೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನೆ ಏಕೆ ಹುಡುಕಬೇಕು? ಯಾರನ್ನಾದರೂ ಆರಿಸಿ ತರಬೇತು ನೀಡಬಹುದಲ್ಲವೆ?

ವಾಸ್ತವದಲ್ಲಿ ನಿರೀಕ್ಷೆಗೂ ಮತ್ತು ದೊರಕುವ ಸಿದ್ದ ಸರಕಿನ ಸಾಮರ್ಥ್ಯಕ್ಕೂ ನಡುವಿರುವ ಈ ಕಂದಕ ಇಬ್ಬರಿಗೂ ಗೊತ್ತು. ಆದರೆ ಸಿಕ್ಕುವುದರಲ್ಲಿ ಸಂಭಾಳಿಸಿಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ. ಪೂರೈಕೆ (ಸಪ್ಲೈ) ಮತ್ತು ಬೇಡಿಕೆ (ಡಿಮ್ಯಾಂಡ್) ನಡುವಿನ ಅಂತರ ಮುಚ್ಚಲು ಸುಲಭ ಸಾಧ್ಯವಲ್ಲ. ಮತ್ತು ಎರಡರ ನಡುವಿನ ಸಂಬಂಧವನ್ನು ನಿಖರವಾಗಿ, ನಿರ್ದಿಷ್ಟವಾಗಿ ಜೋಡಿಸಲಗತ್ಯವಾದ ಸಲಕರಣಾತ್ಮಕ ಪರಿಸ್ಥಿತಿ, ವಾತಾವರಣವು ನಮ್ಮಲ್ಲಿಲ್ಲ. ಅಂದ ಮೇಲೆ ಇಂಥ ಸಾಧ್ಯತೆಯ ಕನಸೆ ಒಂದು ಮರೀಚಿಕೆಯೆ? ಅಥವಾ ಹಾಗಿರಬೇಕೆಂದು ಬಯಸುವುದೇ ವಿಪರೀತದ ನಿರೀಕ್ಷೆಯೆ? ಈ ಪ್ರಶ್ನೆಗೆ ಸುಲಭದ ಉತ್ತರವಿದೆಯೆ?

ಉತ್ತರವಿದೆಯೊ, ಇಲ್ಲವೊ ಗೊತ್ತಿಲ್ಲ; ನನ್ನದೆ ಆದ ಅಭಿಪ್ರಾಯವೊಂದಿದೆ. ಅದೆಂದರೆ – ಇಂಥಹ ಒಂದು “ಪರ್ಫೆಕ್ಟ್ ವರ್ಡ್” ಅನ್ನು ಬಯಸುವುದೆ ಒಂದು ವಿಪರೀತದ ನಿರೀಕ್ಷೆ, ಎನ್ನುವುದು. ಈ ಪ್ರಪಂಚದಲ್ಲಿ “ಸರ್ವೊತ್ಕೃಷ್ಟ” ಅಥವ “ಸರ್ವವಿಧ ಪರಿಪೂರ್ಣತೆ” ಎನ್ನುವುದು ಸಿದ್ದಾಂತದ ಪ್ರಕಾರ ಸಾಧ್ಯವಿರುವುದಾದರೂ, ‘ವಾಸ್ತವ (ಪ್ರಾಕ್ಟಿಕಲ್)’ ಜಗತ್ತಿನಲ್ಲಿ ಅದಕ್ಕೆ ತೆರಬೇಕಾದ ಬೆಲೆ ತೀರಾ ಹೆಚ್ಚು. ಕೆಲವೊಮ್ಮೆ, ಬೆಲೆ ತೆತ್ತರು ಸಾಧಿಸಲಾಗದ ಸ್ಥಿತಿಯು ಉಂಟು. ಅದರಿಂದ, ಅಂಥ ‘ಪರಿಪೂರ್ಣ ಸರ್ವೋತ್ತಮ’ ಗಳನ್ನು ನಿರೀಕ್ಷಿಸದೆ ಸರಾಸರಿಯ ಆಚೀಚೆಯ ಪರಿಧಿಯಲ್ಲಿ ನೋಡುವುದೆ ಹೆಚ್ಚು ಉಪಯೋಗಕಾರಿ ಎಂದು ನನ್ನ ನಂಬಿಕೆ. ತುಸು ಸರಳವಾಗಿ ಹೇಳುವುದಾದರೆ – ಓದು ಮುಗಿಸಿ ಬರುವ ಜ್ಞಾನದ ಸರಕುಗಳು, ಉದ್ಯಮಕ್ಕೆ ಬೇಕಾದ ಆಳವಾದ ಜ್ಞಾನ, ತಿಳುವಳಿಕೆ, ಪ್ರಾಥಮಿಕ ಅನುಭವ ತರದಿದ್ದರೂ, ಉದ್ಯಮದಲಿ ಕೆಲಸ ಶುರು ಮಾಡಲು ಆಗತ್ಯವಾದ “ಸಿದ್ದಾಂತದ ತಳಹದಿ”ಯೊಡನೆ ಬಂದರೆನ್ನಿ (ಕಾನ್ಸೆಪ್ಚ್ಯುವಲ್ ಫೌಂಡೇಶನ್). ತಳಹದಿಯೆಂದರೆ ಉರು ಹೊಡೆದು ಸಂಪಾದಿಸಿ ತಂದ ಜ್ಞಾನವಲ್ಲ. ಆಳ ಮತ್ತು ಧೃಡವಾದ ಅರಿವಿನ ಪರಿವೆಯ ಜ್ಞಾನ. ತುಸು ಪ್ರಾಯೋಗಿಕ ಜ್ಞಾನ ಜತೆ ಸೇರಿದ್ದರೆ ಅಡಿಯಿಲ್ಲ – ಆದರೆ, ಬುನಾದಿ ಮಾತ್ರ ಬಲವಾದ ಶಕ್ತಿಯುತವಾದ ತಿಳುವಳಿಕೆಯ ಆಳದಿಂದೊಡಗೂಡಿದ ಭದ್ರ ಗೂಡಾಗಿರಬೇಕು.

ಹೀಗೆ ಸೈದಾಂತಿಕ ನೆಲೆಗಟ್ಟಿನ ಭದ್ರಬುನಾದಿಯೊಡನೆ ಬಂದವರಿಗೆ ವಾಸ್ತವದಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳೊಡನೆ ಅರ್ಥಮಾಡಿಕೊಂಡು ಜೋಡಿಸುವುದು ಸುಲಭವಾಗಿ, ಕಲಿಕೆಯ ಹಾದಿ ಸುಗಮವಾಗುತ್ತದೆ. ಸಮಯದ ಮತ್ತು ಅನುಭವದ ಮೂಸೆಯಲ್ಲಿ ಸಿದ್ದಾಂತ ಮತ್ತು ವಾಸ್ತವ ಸರಿಯಾದ ಅನುಪಾತದಲ್ಲಿ ತಾಳೆಹೊಂದಿ ದೈನಂದಿನ ಜಗದ ಜತೆಗೆ ಸಹಜೀವನ ನಡೆಸಲಾರಂಭಿಸುತ್ತವೆ. ಹೀಗಾದಲ್ಲಿ, ಆರಂಭದ ಎರಡರ ನಡುವಿನ ಅಂತರ ಒಂದು ವಿಧದಲ್ಲಿ ನಗಣ್ಯವಾಗುವುದಿಲ್ಲವೆ?

ಇಲ್ಲಿರುವ ಒಂದೆ ಒಂದು ತೊಡಕೆಂದರೆ, ನಮ್ಮ ಶಿಕ್ಷಣ ವ್ಯವಸ್ಥೆ ಅಂಥಹ ಸೈದ್ದಾಂತಿಕ ಭದ್ರ ಬುನಾದಿ ಹಾಕುವಂತ ಕಾರ್ಯಸೂಚಿ ಹಾಗೂ ಕಾರ್ಯಕ್ಷಮತೆಯನ್ನು ಹೊಂದಿದೆಯೆ ಎಂಬುದು. ನಮ್ಮ ಪ್ರೈಮರಿ, ಹೈಸ್ಕೂಲುಗಳನ್ನು ನೆನೆಸಿಕೊಂಡರೆ (ಅಥವ ಅದೆ ಶ್ರೇಣಿಯ ಈಗಿನ ಮಕ್ಕಳನ್ನು ಸಹ) – ನನಗೆ ತಟ್ಟನೆ ನೆನಪಾಗುವುದು ಒಂದೆ ಒಂದು – “ಉರು ಜಗದ್ಗುರು!” ಈಗಿನ ಶಿಕ್ಷಣ ವ್ಯವಸ್ಥೆಯೂ ಇದಕ್ಕೆ ಅಷ್ಟೇನೂ ಹೊರತಾದಂತೆ ಕಾಣುವುದಿಲ್ಲ. ಈ ದಾರಿಯ ಪ್ರಮುಖ ಗುರಿ ಕಲಿಕೆಯಲ್ಲ; ಬದಲಿಗೆ ಅಂಕಗಳು, ಶ್ರೇಣಿಗಳು. ಈ ಮಾನದಂಡದಲ್ಲಿ ನೈಜ್ಯ ಸಾಮರ್ಥ್ಯಕ್ಕಿಂತಲು ಜ್ಞಾಪಕ ಶಕ್ತಿಯ ಸಾಮರ್ಥ್ಯಕ್ಕೆ ಹೆಚ್ಚು ಬೆಲೆ. ಆದರೆ, ಮುಂದಿನ ನಿಜ ಜೀವನದಲ್ಲಿ, ಬರಿ ಈ ಸಾಮರ್ಥ್ಯ ಅದೆಷ್ಟು ಸಹಕಾರಿ?

ಬಹುಶಃ ಈ ವ್ಯವಸ್ಥೆಯ ಶೌಚವನ್ನು ತಳಪಾಯದಿಂದಲೆ ಶುದ್ಧಿ ಗೊಳಿಸಲಾರಂಭಿಸಬೇಕೆಂದು ಕಾಣುತ್ತದೆ. ಆದರೆ, ಇದೊಂದು ರೀತಿ ಬೆಕ್ಕಿಗೆ ಗಂಟೆ ಕಟ್ಟುವ ಕೆಲಸ. ಬೀಜ ವೃಕ್ಷ ನ್ಯಾಯದ ವ್ಯಾಪಾರ. ಕೋಳಿ ಮೊದಲೊ, ಇಲ್ಲಾ ಮೊಟ್ಟೆಯೊ ಎಂಬ ಭಂಡವಾದದ ಬಡಿವಾರ. ಒಂದೊಮ್ಮೆ ಇಂಥಹ ಕ್ರಮಬದ್ದತೆ ಸಾಧ್ಯವಾದರೆ, ಕಲಿಯುವ ಮಕ್ಕಳ ಹಾಗೂ ಕಲಿಸುವವರ ಕೆಲಸ ಎಷ್ಟು ಹಗುರವಾದೀತೊ, ನೋಡಿ! ಆಗ, ಕಲಿಕೆಯು ಒಂದು ಆಹ್ಲಾದಕರ ಅನುಭವವಾಗಿ, ಒತ್ತಡರಹಿತ ವಾತಾವರಣ ನಿರ್ಮಾಣವಾಗುತ್ತದೆ. ಇದು ಹೇಗೆ ಸಾಧ್ಯ ಎಂಬುದನ್ನು ಈ ಪುಟ್ಟ ಲೇಖನದಲ್ಲಿ ವಿವರವಾಗಿ ವಿಷದೀಕರಿಸುವುದು ಕಷ್ಟಸಾಧ್ಯ. ಆದ ಕಾರಣ, ಸದ್ಯಕ್ಕಿಲ್ಲಿ ಈ ಕುರಿತು ಮೊಟಕುಗೊಳಿಸಿ, ಈ ಬಗ್ಗೆ ಮತ್ತೊಮ್ಮೆ ವಿವರವಾಗಿ ಬರೆಯುತ್ತೇನೆ.

ಸಾರಾಂಶದಲ್ಲಿ, ಇಂಥಹ ವ್ಯವಸ್ಥೆ ಸಾಧ್ಯವಾಗುವುದಾದರೆ, ಓದಿಗು ಮತ್ತು ವೃತ್ತಿನಿರತ ಪ್ರಪಂಚಕ್ಕು ನಡುವಿನ ಕಂದಕವನ್ನು ಸಾಕಷ್ಟು ಸಂಪೂರ್ಣವಾಗಿಯೆ ಮುಚ್ಚಬಹುದೆಂದೆ ನನ್ನ ಅನಿಸಿಕೆ ಮತ್ತು ನಂಬಿಕೆ – ಇವೆರಡರ ನಡುವಿನ ತಾಳಮೇಳಗಳನ್ನು, ಸರಿಯಾಗಿ ಹೊಂದಾಣಿಸಿ ಮುನ್ನಡೆಸಿದರೆ. ಹಾಗಾಗಲಿಕ್ಕೆ ಸಾಧ್ಯವಿದೆಯೆ?

ಬಹುಶಃ ಬರಿ ಕನಸಿನಲ್ಲಿ ಮಾತ್ರ ಎಂದು ತೋರುತ್ತದೆ!!

ನಾಗೇಶ ಮೈಸೂರು, ಸಿಂಗಾಪುರ
25.03.2013

20130328-180258.jpg

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s