00011 – ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…!

00011 – ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…!

ಸರಿ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು – ೧೯೮೬ / ೧೯೮೭ ರ ಅಸುಪಾಸಿನ ದಿನಗಳು. ಎನ್.ಐ.ಇ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಓದುತಿದ್ದ ದಿನಗಳವು. ಹೆಚ್ಚಾಗಿ ಕನ್ನಡದ ಹಿನ್ನಲೆಯಿಂದ ಬಂದ ಅರೆಬರೆ ಆಂಗ್ಲಭಾಷಾ ಪ್ರಬುದ್ಧತೆಯೊಂದಿಗೆ ಮೈಸೂರು ಹುಡುಗನೊಬ್ಬ ತಾಂತ್ರಿಕ ಕಾಲೇಜು ವಾತಾವರಣದಲ್ಲಿ ಹೆಣಗಬೇಕೆಂದರೆ ಅದೇನು ಸುಲಭದ ಮಾತಾಗಿರಲಿಲ್ಲ, ಅದರಲ್ಲು ವಿಶೇಷವಾಗಿ ಕನ್ನಡ ಮಾಧ್ಯಮದಲಿ ಓದುತ್ತಾ ಬೆಳೆದ ನನ್ನಂತಹವರಿಗದು ಇನ್ನೂ ಕ್ಲಿಷ್ಟಕರ ಪರಿಸ್ಥಿತಿ. ಅದೃಷ್ಟವಶಾತ್ ಮೈಸೂರಿನ ಕಾಲೇಜಾಗಿದ್ದರಿಂದ ಸುತ್ತಲಿನ ಪರಿಸರ, ವಾತಾವರಣ, ಅಧ್ಯಾಪಕ ಬಳಗವೂ ಸೇರಿದಂತೆ ಹಲವು ಸ್ಥಳೀಯಾಂಶಗಳ ಸಹಜ ಪ್ರಭಾವದಿಂದಾಗಿ ನಾನಲ್ಲಿ ತೀರಾ ಹೆಣಗಾಡದೆ ಈಜಿ ಬರಲು ಸಾಧ್ಯವಾಯ್ತು. ಆದರೆ ನಾನು ನಿಜಕ್ಕೂ ಬರೆಯ ಹೊರಟ ವಿಷಯ ಅದಲ್ಲ. ಇಂಥಾ ತಾಂತ್ರಿಕ ವಾತಾವರಣದಲ್ಲಿಯೂ, ಕಾಲೇಜಿನ ವಾರ್ಷಿಕ ಸಂಚಿಕೆಯೊಂದರ ಪ್ರಧಾನ ಸಂಪಾದಕನ ಪಟ್ಟ ಅಲಂಕರಿಸಬೇಕಾದ ಅವಕಾಶ ಬಂದಾಗ ಆ ಸ್ಥಾನ, ಜವಾಬ್ದಾರಿ, ಹೊಣೆಗಾರಿಕೆಯ ಪೂರ್ಣ ಅರಿವಿರದೆಯೆ ಹುಡುಗಾಟಿಕೆಯ ಮನಸತ್ವದಿಂದಲೆ ಅದನ್ನು ಅಪ್ಪಿಕೊಂಡಿದ್ದು ಮತ್ತು ಹೇಗೊ ಕೊನೆಗದನ್ನು ನಿಭಾಯಿಸಿ ಸಂಭಾಳಿಸಿದ್ದು. ಈ ಸಂಗತಿ ಕೆಲವೊಮ್ಮೆ ವಿಸ್ಮಯಕರವಾಗಿ, ಮತ್ತೆ ಕೆಲವೊಮ್ಮೆ  ಬಾಲಿಶವಾಗಿ ಕಾಣಲು, ಆ ಅಪ್ರಬುದ್ಧ ಹುಡುಗಾಟಿಕೆಯೂ ಕಾರಣವಾಗಿರಬಹುದು.

ಆ ಸಮಯದಲ್ಲಿ ಆ ‘ಹುದ್ದೆ’ಯನ್ನಲಂಕರಿಸಲು ನನಗಿದ್ದ ಪ್ರಮುಖ ಅರ್ಹತೆಯೆಂದರೆ – ಮೊದಲನೆಯದಾಗಿ ಕನ್ನಡದಲಿ ಕವಿತೆ ಬರೆಯುವನೆಂಬ ಹಣೆಪಟ್ಟಿ; ಎರಡನೆ ಕಾರಣವೆಂದರೆ ಆ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಹಾಗೂ ಕ್ರಿಯಾಶೀಲತೆಯಿಂದ ಪಾಲ್ಗೊಂಡು, ಒಂದು ವಿಧದಲ್ಲಿ ಅದರ ಸಂಪೂರ್ಣ ಪ್ರೇರಕ ಶಕ್ತಿ ಹಾಗೂ ಬೆನ್ನೆಲುಬಾಗಿ ನಿಂತ ಪ್ರಾಧ್ಯಾಪಕ ಶ್ರಿ ಯದುಪತಿಪುಟ್ಟಿಯವರ ಶಕ್ತಿಯುತ ಬೆಂಬಲ ಮತ್ತು ಒತ್ತಾಸೆ ; ಮೂರನೆಯ ಕಾರಣ ಸರಳ ಹಾಗೂ ನೇರ – ತಾಂತ್ರಿಕ ವಾತಾವರಣದಲ್ಲಿ, ಇಂಥ ಮಹಾನ್ಕಾರ್ಯಕ್ಕೆ ಸ್ವಯಂ ಸೇವಾ ಕಾರ್ಯಕರ್ತರಾಗಿ ಸಿಗಬಲ್ಲ ಪ್ರಾಮಾಣಿಕ ‘ಹುರಿಯಾಳುಗಳ’ ಕೊರತೆ; ಪ್ರಾಯಶಃ ಈ ಎಲ್ಲ ಮೂರಂಶಗಳ ಸಂಯೋಜಿತ ಪ್ರಭಾವವೂ ಇರಬಹುದು!

ಅಂತು ಇಂತು ಇಂಥದೊಂದು ಹೊಣೆ ಹೆಗಲೇರಿದಾಗ, ಅದನ್ನು ಹೊತ್ತು ನಡೆಸಬಲ್ಲ ಸಾಮರ್ಥ್ಯಕಿಂತಲೂ ಹೆಚ್ಚಾಗಿ, ಅಂಥ ಹೊರೆಹೊತ್ತ ಹೆಗ್ಗಳಿಕೆಯೆ ಮೇಲಾಗಿ, ಬಂಧು-ಬಳಗ ಗೆಳೆಯರೊಂದಿಗೆ ಜಂಬ ಕೊಚ್ಚಿಕೊಳ್ಳಲು ವಿಷಯವೊಂದು ಸಿಕ್ಕಂತಾಯ್ತು! ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಯಲಿ ಕೊಡೆ ಹಿಡಿದವನ ಪಾಡಾಗಿತ್ತು ನನ್ನಯ ಸ್ಥಿತಿ! ಆಡಳಿತಾತ್ಮಕವಾಗಿ ಮತ್ತು ವ್ಯವಸ್ಥಾಬದ್ದವಾಗಿ ಅದನ್ನು ನಿಭಾಯಿಸಲಿರಬೇಕಾದ ಅನುಭವವಾಗಲಿ ಅರ್ಹತೆಯಾಗಲಿ ನನಗಿರಲಿಲ್ಲ. ಒಂದಷ್ಟು ಕತೆ, ಕವಿತೆ , ಲೇಖನಗಳನೊಟ್ಟುಗೂಡಿಸಿ ಅಚ್ಚಿನ ಮನೆಗೆ ಕಳಿಸಿ ಹೊತ್ತಗೆಯ ರೂಪ ಕೊಟ್ಟರೆ ಸಾಕು, ಕಾಲೇಜು ಸಂಚಿಕೆ ಸಿದ್ದ ಎಂದೆ ನನ್ನಾಗಿನ ಭಾವನೆ. ಅಷ್ಟಾಗಿಯು, ನನಗರಿವಿಲ್ಲದಂತೆ, ನನ್ನ ಪ್ರಜ್ಞಾಪೂರ್ವಕ ಪ್ರಯತ್ನವಿಲ್ಲದೆಯೆ ಅದೊಂದು ಉತ್ತಮ ಕಲಿಕೆಯ ಅನುಭವವಾಗಿ , ಅವಕಾಶವಾಗಿ ಪರಿವರ್ತಿತಗೊಂಡಿದ್ದು ಯೌವ್ವನದ ಬದುಕಿನ ದಿನಗಳ ಅನೇಕ ವ್ಯಂಗ್ಯಗಳಲ್ಲಿ ಒಂದು. ನನ್ನ ಇಡಿ ಸಂಪಾದಕತ್ವದ ಅನುಭವವೆಲ್ಲ ಬರೆಯುತ್ತಾ ಹೊರಟರೆ, ದೊಡ್ಡ ಕಾದಂಬರಿಯೆ ಆಗುವ ಅಪಾಯವಿರುವುದರಿಂದ ಅದನ್ನಿಲ್ಲೆ ಮೊಟಕುಗೊಳಿಸಿ, ಕೆಲವು ಮೆಲುಕು ಹಾಕಬಲ್ಲ ಅನುಭವ, ಸಂಗತಿಗಳಿಗಷ್ಟೆ ಸೀಮಿತಗೊಳಿಸುತ್ತೇನೆ. ಪ್ರವೃತ್ತಿಯಾಗಿ ಬರಹ ಬಿಡದೆ ಬೆನ್ನಿಗಂಟಲು ಈ ಘಟನೆ , ಸಂಗತಿಗಳು ಪ್ರತ್ಯಕ್ಷ್ಯವೊ ಅಪ್ರತ್ಯಕ್ಷವೊ ಆಗಿ ಪ್ರಭಾವ ಬೀರಿರುವುದರಿಂದ ಅವನ್ನಿಲ್ಲಿ ಉಲ್ಲೇಖಿಸುವುದು ಯೋಗ್ಯವೆಂದೆ ಭಾವಿಸಿ ಇಲ್ಲಿ ದಾಖಲಿಸಿದ್ದೇನೆ.

ನೆನಪಿನ ರೈಲಿನ್ಹಿಂದೆ ಓಡಿ ಮೆಲುಕುವಂತ ಕೆಲ ಕೊಂಡಿಗಾಗಿ ಹುಡುಕಿದರೆ ತಟ್ಟನೆ ಕಣ್ಮುಂದೆ ಬಂದು ನಿಲ್ಲುವ ದೃಶ್ಯಗಳಲ್ಲಿ ಪ್ರಮುಖವಾದ್ದು ಈ ಕಾರ್ಯಕ್ಕಾಗಿ ಸಂಘಟಿತವಾಗಿದ್ದ ತಂಡ. ನಮ್ಮ ಸಂಪಾದಕ ಬಳಗದ ಮುಖ್ಯ ಭೂಮಿಕೆಯಲ್ಲಿ ಸಂಚಾಲಕರಾಗಿ ಮುಂಚೂಣಿಯಲಿದ್ದವರು ಯದುಪತಿ ಪುಟ್ಟಿ ಮತ್ತು ಸಲಹೆಗಾರರಾಗಿ ಹಿರಿಯ ಡಾಕ್ಟರ ಶ್ರಿನಿವಾಸ ಮೂರ್ತಿಯವರು. ಇಂಥದೆ ಕಾರ್ಯಭಾರವನ್ನು ಅವರಿಬ್ಬರು ಅದೆಷ್ಟೊಬಾರಿ ಈಗಾಗಲೆ ನಿಭಾಯಿಸಿದ್ದುದರಿಂದ, ಅವರ ಸ್ಥಾನಮಾನ, ಪಾತ್ರಗಳಲ್ಲಿ ವಿಶೇಷತೆಯಾಗಲಿ, ಅಚ್ಚರಿಯಾಗಲಿ ಇರಲಿಲ್ಲ. ಅವರ ಹಿರಿಯ, ಅನುಭವಪೂರಿತ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದಾಯ್ದ ಕಾರ್ಯತಂಡವು ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳಬೇಕಿತ್ತು. ಪ್ರಧಾನ ಸಂಪಾದಕನಾಗಿದ್ದ ನನ್ನ ಜತೆ, ವಿದ್ಯಾರ್ಥಿ ಗೆಳೆಯ ದೀಪಕ, ಕನ್ನಡ ವಿಭಾಗಕ್ಕೆ ಸಂಪಾದಕನಾಗಿ ಆಯ್ಕೆಯಾದಾಗ ನನ್ನರ್ಧ ಹೊರೆ ಅಲ್ಲೆ ಇಳಿದಂತಾಗಿತ್ತು. ಆಂಗ್ಲ ವಿಭಾಗದ ಸಂಪಾದಕರಾಗಿ ಮತ್ತೊಬ್ಬ ಮಿತ್ರ ಮನೋಹರ ರಾವ್ ಜತೆ ಶ್ರೀ ರಾಮ್ ಮತ್ತು ಛಾಯಚಿತ್ರಣ / ವಿನ್ಯಾಸದ ಹೊಣೆಗಾರಿಕೆಯಾಗಿ ರಂಗನಾಥ್ ತಂಡದಲ್ಲಿದ್ದ ಇತರ ಸದಸ್ಯರು. ಜಾಹೀರಾತಿನ ವಿಭಾಗಕ್ಕೆ ಕುಮಾರಸ್ವಾಮಿಯ ಸಾರಥ್ಯ. ಪ್ರಧಾನ ಸಂಪಾದಕನಾಗಿ, ನನಗೆ ಇವರೆಲ್ಲರನ್ನು ಒಗ್ಗೂಡಿಸಿ ಸಂಯೋಜಿತ ಮತ್ತು ನಿಯೋಜಿತ ಪಥದಲ್ಲಿ ಕೊಂಡೊಯ್ಯುವ ಜವಾಬ್ದಾರಿ. ಹಾಗೆಯೆ, ಒಟ್ಟಾರೆ ವಾರ್ಷಿಕ ಸಂಚಿಕೆಯ ಎಲ್ಲಾ ವಿಭಾಗಗಳು ಗುಣಮಟ್ಟದಲ್ಲಿ ಒಂದೆ ಹದ-ಶ್ರೇಷ್ಟತೆಯ ಮಾನದಂಡಕ್ಕೊಪ್ಪುವ ಹಾಗೆ ಇರುವಂತೆ ಸಮತೋಲಿಸಿ, ಸಂಭಾಳಿಸುವ ಹೊಣೆ. ಅಡಳಿತಾತ್ಮಕ ವ್ಯವಸ್ಥೆಗಳ ಮೇಲ್ವಿಚಾರಣೆಯ ಕಾಯಕವು ನನ್ನ ಪಾಲಿಗೆ.

ಪ್ರತಿ ವಿಭಾಗೀಯ ಗುಣಮಟ್ಟದ ಮಾತಿಗೆ ಬಂದರೆ ಕನ್ನಡ ಕುರಿತಾದ ವಿಭಾಗ, ವಿಷಯಗಳಿಗೇನು ನನಗೆ ಅಳುಕಿರಲಿಲ್ಲ. ಅಲ್ಲಿ ದೀಪಕನ ಮುಂದಾಳತ್ವದಲ್ಲಿ ಎಲ್ಲ ಅಚ್ಚುಕಟ್ಟಾಗಿ ಸಾಗಲಡ್ಡಿಯಿರದ ಪರಿಸ್ಥಿತಿ; ಬೇಕಿದ್ದ ಕಡೆ, ನಾನು ಅಲ್ಲೊಂದು, ಇಲ್ಲೊಂದು ಕಿರು ಬಿರುಕುಗಳನ್ನು ಮುಚ್ಚಲು ಸಹಕರಿಸಿದ್ದರೆ ಸಾಕಿತ್ತು. ನಿಜವಾದ ‘ಕಂಪನ’ವಿದ್ದುದ್ದು ಇಂಗ್ಲಿಷಿನ ವಿಭಾಗದ್ದು. ನನ್ನ “ಅಗಾಧ ಆಂಗ್ಲಭಾಷಾ ಪಾಂಡಿತ್ಯದ” ಸ್ಪಷ್ಟ ಅರಿವಿದ್ದ ನನಗೆ, ಆ ವಿಭಾಗಕ್ಕೆ ಯಾವುದೆ ರೀತಿಯ ಸೃಜನಾತ್ಮಕ ಮೌಲ್ಯಾರೋಹಣ ಮಾಡಬಲ್ಲ ಭರವಸೆ ಇರಲಿಲ್ಲ. ಪ್ರಧಾನ ಸಂಪಾದಕನಾಗಿ ಇಂಗ್ಲಿಷು ವಿಭಾಗದ ಕುರಿತು ಯಾವುದೆ ಅಭಿಪ್ರಾಯ, ಕಾಣಿಕೆ ನೀಡಿ ಆ ಸ್ಥಾನಕ್ಕೆ ಸಲ್ಲಬೇಕಾದ ಕನಿಷ್ಟ ಗೌರವ ಸಲ್ಲಿಸುವುದು ಹೇಗೆ ಎಂಬುದೆ ಪ್ರಶ್ನೆಯಾಗಿತ್ತು. ವಾಸ್ತವದಲ್ಲಿ ಅಂಥಾ ಪ್ರಬುದ್ಧತೆಯಾಗಲಿ, ಅರಿವಾಗಲಿ, ಜ್ಞಾನವಾಗಲಿ ಇಂಗ್ಲೀಷು ಭಾಷೆಯಲ್ಲಿ ನನಗಿರಲಿಲ್ಲವೆಂಬ ಬಲಹೀನತೆಯನ್ನು ತಂಡದ ಸದಸ್ಯರು ಗಮನಿಸದಂತೆ ಸಂಭಾಳಿಸಬೇಕಿತ್ತು. ಬಾಯಿಬಿಟ್ಟು ಬಣ್ಣಗೇಡಾಗುವ ಹತಾಶ ಪರಿಸ್ಥಿತಿ ಬರಬಾರದಲ್ಲ? ಯಾವ ಪ್ರೇರಣೆಗೊ ಏನೋ, ಮ್ಯಾಗಜೈನು ಹೊರಬರುವತನಕ , ಇಂಗ್ಲಿಷು ವಿಭಾಗದ ಜತೆ ಎಷ್ಟು ಕನಿಷ್ಟ ಸಂಬಂಧ ಸಾಧ್ಯವೊ ಅಷ್ಟಕ್ಕೆ ಸೀಮಿತಗೊಳಿಸಿದೆ. ಆಡಳಿತಾತ್ಮಕವಾಗಿ ಎಲ್ಲ ಮಾಮೂಲಿನಂತೆ ನಡೆದರೂ, ವಿನ್ಯಾಸದ ನಿರ್ಧಾರ, ಲೇಖನ / ಬರಹಗಳ ಆಯ್ಕೆ, ಆ ವಿಭಾಗದ ಸಂಪಾದಕೀಯ – ಈ ಎಲ್ಲದರ ಹತ್ತಿರ ಸುಳಿಯದಂತೆ ನಿಗಾವಹಿಸಿ, ಎಲ್ಲವನ್ನು ವಿಭಾಗ ತಂಡದ ನಿಯಂತ್ರಣಕ್ಕೆ ಬಿಟ್ಟುಬಿಟ್ಟಿದ್ದೆ. ಮನದ ಮೂಲೆಯಲಿ ಆ ವಿಭಾಗ ಕೊಂಚ ಅನ್ಯಾಯ ಮಾಡುತ್ತಿದ್ದೇನೆಂಬ ಭಾವನೆ ಒಳಗೆ ಕೊರೆಯುತಿದ್ದರು, ನನ್ನ ಸಕ್ರಿಯ ಭಾಗವಹಿಸುವಿಕೆ ಅಲ್ಲಿ ಸಹಾಯಕವಾಗುವುದಕ್ಕಿಂತ ಮಾರಕವಾಗುವ ಸಾಧ್ಯತೆಯೆ ಹೆಚ್ಚಿದ್ದುದರಿಂದ, ಹಿನ್ನಲೆಯಲ್ಲೇ ಉಳಿಯುವ ದಾರಿ ಹಿಡಿದೆ. 

ಆದರೆ, ಇದೊಂದು ರೀತಿಯಲಿ ಅನವಶ್ಯಕ ಭೀತಿಯಾಗಿತ್ತು – ಮನೋಹರರಾವ್ ಮತ್ತು ಶ್ರೀರಾಮ್ ಆ ವಿಭಾಗದ ಜವಾಬ್ದಾರಿಯನ್ನು ಎಷ್ಟು ಸಮರ್ಥವಾಗಿ ನಿಭಾಯಿಸಿದರೆಂದರೆ, ಆ ಕುರಿತ ನನ್ನ ಕಳವಳ, ಅನಗತ್ಯ ಕೀಳರಿಮೆ ಅನಾವಶ್ಯಕವಾಗಿತ್ತೆಂದೆ ಹೇಳಬಹುದು. ಅಷ್ಟಲ್ಲದೆ, ಪ್ರಧಾನ ಸಂಪಾದಕನಾದ ಮಾತ್ರಕ್ಕೆ ಎಲ್ಲಾ ವಿಭಾಗದ ಎಲ್ಲಾ ವಿಷಯಗಳನ್ನು ತಿಳಿದಿರಲೇಬೇಕೆಂಬ ಅಗತ್ಯವೇನೂ ಇರುವುದಿಲ್ಲ. (ಹಾಗೆಂದು ಈಗ ಗೊತ್ತಿದೆ, ಆದರೆ ಆ ಸಮಯದಲ್ಲಿ ಆ ಪರಿಜ್ಞಾನವಿರಲಿಲ್ಲವಲ್ಲ! ). ತಮಾಷೆಯೆಂದರೆ, ಎಲ್ಲಾ ಮುಗಿದ ಮೇಲೆ ಒಂದು ಪುಟ್ಟ ಸಮಾರಂಭದಲ್ಲಿ ನಮ್ಮ ಇಂಗ್ಲೀಷು ವಿಭಾಗದ ಪರವಾಗಿ ಸಂಪಾದಕ ಮನೋಹರ ರಾವ್ ಮಾತನಾಡುತ್ತ, ಇಂಗ್ಲೀಷು ವಿಭಾಗ ಈ ಮಟ್ಟಕ್ಕೆ ಸೊಗಸಾಗಿ ಬರಲು ಕಾರಣ , ತಮ್ಮ ತಂಡಕ್ಕೆ ನಾನು ಪ್ರಧಾನ ಸಂಪಾದಕನಾಗಿ ನೀಡಿದ ಸಂಪೂರ್ಣ ಸ್ವಾತ್ಯಂತ್ರ ಮತ್ತು ವಿಭಾಗ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡದ ಉದಾರ ನೀತಿಗಳು ಪ್ರಮುಖ ಕಾರಣ ಎಂದಾಗ ನಾನು ಬೇಸ್ತು! ಆ ಗಳಿಗೆ ನನ್ನ ಇಂಗ್ಲಿಷು ಕೀಳರಿಮೆಯ ಕುರೂಪಕ್ಕೆ ತೆಳ್ಳಗಿನ ತೆರೆಯೆಳೆದಿದ್ದಷ್ಟೆ ಅಲ್ಲದೆ, ತಂಡದ ಸ್ವಾತ್ಯಂತ್ರವು ಒಂದು ಧನಾತ್ಮಕ ಗುಣವಾಗಿ ಪ್ರಭಾವ ಬೀರಬಲ್ಲದೆಂಬ ಸರಳ ಸತ್ಯವನ್ನು ಮನವರಿಕೆ ಮಾಡಿಕೊಟ್ಟಿತು! ಅಷ್ಟೇ ಅಲ್ಲದೆ ಆ ದೌರ್ಬಲ್ಯದ ಹಿನ್ನಲೆಯೆ ಪ್ರೇರಕ ಶಕ್ತಿಯಾಗಿ, ಮುಂದೆ ನನ್ನ ಇಂಗ್ಲಿಷಿನ ಮಟ್ಟವನ್ನು ತುಸು ಮೇಲಿನ ಸ್ತರಕ್ಕೇರಿಸಲು ಸಹಕಾರಿಯಾಯ್ತು. ಆ ಹಿನ್ನಲೆಯಲ್ಲೆ, ತುಸು ಛೇಡಿಕೆ, ಹಾಸ್ಯದ ಜತೆ ಸೇರಿಸಿ ನಮ್ಮ ಆಂಗ್ಲ ವಿಭಾಗ ಸಂಪಾದಕ ತಂಡ ‘ಸ್ಟಾಪ್ ಪ್ರೆಸ್’ ತಲೆಬರಹದಡಿ, ಪ್ರಧಾನ ಸಂಪಾದಕನನ್ನೆ ಗೇಲಿ ಮಾಡುತ್ತ ‘ಎಡಿಟರು ಇನ್ ಚೀಫ್’ ಅನ್ನು ‘ಎಡಿಟರು ಇನ್ ಗ್ರೀಫ್’ ಆಗಿಸಿ ಬರೆದಿದ್ದನ್ನು ನೆನೆದಾಗ, ಈಗಲೂ ತುಟಿಯಂಚಿನಲಿ ತೆಳು ನಗು.

ಚೋದ್ಯವೆಂದರೆ, ಇಂಗ್ಲೀಷ್ ವಿಭಾಗದಲ್ಲಾದ ಇದೇ ನೀತಿ ಹೆಚ್ಚು ಕಡಿಮೆ ಕನ್ನಡ ಹಾಗೂ ಛಾಯಚಿತ್ರ ವಿಭಾಗಗಳಲ್ಲೂ ತನ್ನಂತಾನೆ ಊರ್ಜಿತವಾದದ್ದು! ಛಾಯ ಚಿತ್ರ ವಿಭಾಗದಲ್ಲೆನೋ ನನ್ನ ಸೀಮಿತ ಜ್ಞಾನದ ಮಟ್ಟವೆ (ನಾನೆ ಅರೆಕಾಲಿಕ ಛಾಯಗ್ರಾಹಕನಾಗಿ ಕೆಲಸ ಮಾಡಿದ್ದ ಹಿನ್ನಲೆಯಿದ್ದರು), ನನ್ನನ್ನು ಸಹಜವಾಗೆ ಹೊರಗಿಟ್ಟರೂ, ಕನ್ನಡ ವಿಭಾಗದಲ್ಲಿ ಆ ತೊಂದರೆಯಿರಲಿಲ್ಲ. ಆದರೆ ಪ್ರಾಸಂಗಿಕವಾಗ ಈ ಮೊದಲೆ ಹೇಳಿದಂತೆ, ಕನ್ನಡದಲ್ಲಿ ನನಗಿಂತಲೂ ಹೆಚ್ಚು ಪ್ರಭುತ್ವ ಹಾಗೂ ಪಾಂಡಿತ್ಯವಿದ್ದ ಶ್ರದ್ದಾಳು ದೀಪಕನೆ ಕನ್ನಡ ವಿಭಾಗದ ಸಂಪಾದಕನಾಗಿದ್ದಿದ್ದರಿಂದ, ನನಗಲ್ಲಿ ಮಾಡಲು ಹೆಚ್ಚೇನೂ ಕೆಲಸವಿರಲಿಲ್ಲ! ಆದರೂ, ಅವನ ಕಾರ್ಯಭಾರದಲ್ಲಿ ಸ್ವಲ್ಪ ಹಂಚಿಕೊಂಡು, ವಿಶೇಷವಾಗಿ ಕರಡು ಪ್ರತಿಗಳನ್ನು ತಿದ್ದುವತ್ತ ಸಹಾಯ ಮಾಡಲು ಸಾಧ್ಯವಾಯಿತು. ಅದಕ್ಕೂ ಮಿಗಿಲಾಗಿ, ನಾನೇ ಕನ್ನಡದಲ್ಲಿ ಪ್ರಧಾನ ಸಂಪಾದಕೀಯ ಬರೆಯಲು ಮತ್ತು ಕೆಲವು ಕಥೆ, ಕವನಗಳನ್ನು ಸೇರಿಸಲು ಪ್ರೇರೇಪಣೆಯಾಯ್ತು. ಅಲ್ಲೂ ಕೊಂಚ ತಮಾಷೆಯ ಸರದಿ ಕಾದಿತ್ತು. ಒಂದು ಸಂಪಾದಕೀಯ, ಒಂದು ಸಣ್ಣ ಕಥೆ ಮತ್ತು ಒಂದು ಕವಿತೆ ನನ್ನ ಹೆಸರಲ್ಲಿ ಆಗಲೇ ದಾಖಲಿಸಿಯಾಗಿತ್ತು. ಇನ್ನು ಕೆಲವು ಚುಟಕಗಳನ್ನು ಹಾಕುವುದೊ, ಬಿಡುವುದೊ ಸಂದಿಗ್ದ – ಎಲ್ಲಾ ಕಡೆ ನಮ್ಮ ಹೆಸರೆ ಇರಬಾರದು ನೋಡಿ! ಕೊನೆಗಲ್ಲಿ ಹೊಳೆದ ಉಪಾಯ – ಗುಪ್ತ ಕಾವ್ಯನಾಮ ಬಳಕೆ!

ಆದರೂ ದೀಪಕನ ಅಳಲು ತಪ್ಪಿರಲಿಲ್ಲ – ಕನ್ನಡ ವಿಭಾಗಕ್ಕೆ ಸಾಕಷ್ಟು ಬರಹಗಳು ಬಂದಿಲ್ಲದ ವ್ಯಥೆ ಅವನನ್ನು ಭಾದಿಸುತಿತ್ತು. ನಾನೇನೊ, ಇನ್ನಷ್ಟು ಬರೆದುಕೊಡಲು ಸಿದ್ದನಿದ್ದರೂ, ಇಡಿ ವಿಭಾಗವೆ ನನ್ನ ಬರಹಗಳಿಂದ ತುಂಬಿ, ಬೇರೆ ರೀತಿಯ ತಾಪತ್ರಯ ದೂರುಗಳಿಗೆ ದಾರಿ ಮಾಡುವ ಅಪಾಯವಿದ್ದುದರಿಂದ, ಆ ನನ್ನ ಕೊಡುಗೆಯನ್ನು ನಯವಾಗೆ ತಿರಸ್ಕರಿಸಿದ ನನ್ನ ಸಂಪಾದಕ ಮಿತ್ರ! 🙂 ಮಸಲಾ, ತೊಂದರೆಯಿದ್ದುದು ಬರಹಗಳ ಸಂಖ್ಯೆಯಲಾಗಿರದೆ, ಅವುಗಳ ಗುಣಮಟ್ಟದಲಾಗಿತ್ತು. ಅದನ್ನೊಮ್ಮೆ ನೋಡಿದ ಮೇಲೆ, ನನ್ನ ಮಿತ್ರನ ತೊಂದರೆಯೇನೆಂದು ಅರಿವಾಯ್ತು. ತೊಂದರೆಯ ನಡುವೆಯೆ ಅವಕಾಶವೂ ಗೋಚರಿಸಿತು – ತೀರಾ ಕುಸಿದ ಗುಣಮಟ್ಟವಿದ್ದ ಆಯ್ದ ಕೆಲ ಬರಹಗಳನ್ನು ಓದಿ, ಪ್ರಕಟಿಸಲು ಯೋಗ್ಯವಿರುವಂತೆ ತಿದ್ದಿ ಬರೆದುಕೊಡುವ ಕಾರ್ಯಭಾರವನ್ನು ನಾನೆ ಹೆಗಲಿಗೆ ಹೊರಲು ಸಾಧ್ಯವಾಯ್ತು; ಮಿಕ್ಕೆಲ್ಲ ಹೇಗೂ ನಮ್ಮ ಕನ್ನಡ ಸಂಪಾದಕ ವಿಭಾಗ ಈಗಾಗಲೆ ತಿದ್ದಿಯಾಗಿತ್ತು. ಹಾಗಿದ್ದೂ, ಈ ಮೂಲ ಕರಡು ಪ್ರತಿಯನ್ನು ತಿದ್ದುವ ಕಾರ್ಯದ ಭಯಂಕರ ಶಿಕ್ಷೆಯ ಆಳ ಅಗಲ, ಆ ಕಾರ್ಯಕ್ಕಿಳಿಯುವ ತನಕ ಅರಿವಾಗಿರಲಿಲ್ಲ. ಅದನ್ನೆಲ್ಲ ಸರಿಪಡಿಸಿ ಒಂದು ರೂಪು ಕೊಡುವ ಹೊತ್ತಿಗೆ, ನನ್ನಲ್ಲಿ ಬರೆಯುವ ಉತ್ಸಾಹವೆ ಉಡುಗಿಹೋದಂತಾಗಿದ್ದು ಮಾತ್ರವಲ್ಲದೆ, ಕನ್ನಡನಾಡಿನ (ತಾಂತ್ರಿಕ ಕಾಲೇಜಿನ) ಕನ್ನಡಿಗರ ಬರವಣಿಗೆಯ ಸ್ಥಿತಿಗತಿ ಕಂಡು ಭೀತಿ, ಮರುಕವೂ ಆಯ್ತು!

ಈ ನಡುವೆ ಏನಾದರೂ ಹೊಸತು ಕೊಡಬೇಕೆಂಬ ಉತ್ಸಾಹ, ಹುಮ್ಮಸ್ಸಿನಲ್ಲಿ ಗೆಳೆಯ ದೀಪಕ್ ಹಾಗೂ ಮನೋಹರ ಕೊಂಚ ವಿನೂತನ ಹಾಗು ಮೌಲ್ಯವುಳ್ಳ ಒಂದೆರಡು ಭಿನ್ನ ಅಂಕಣಗಳನ್ನು ಸೇರಿಸಿದರೆ ಹೇಗೆ ಎಂಬ ಆಲೋಚನೆಯನ್ನು ಪ್ರಸ್ತಾಪಿಸಿದರು. ಆಗ ಮೂಡಿದ ವಿಭಾಗಗಳೆ “ಸಮಯೋಚಿತ ತಂತ್ರಜ್ಞಾನ” (ರಿಲೆವೆಂಟ್ ಟೆಕ್ನಾಲಜಿ) ಮತ್ತು “ಎಮ್ಮ ಮನೆಯಂಗಳದಿ…” ಅಂಕಣಗಳು. ಮೊದಲಿನಂಕಣಕ್ಕೆ ಒಂದಷ್ಟು ತಾಂತ್ರಿಕ ಪ್ರಶ್ನೆಗಳನ್ನು ಸಿದ್ದಪಡಿಸಿ ಒಂದಷ್ಟು ಜನ ಗಣ್ಯರಿಗೆ ಕಳಿಸಿ ಅವರ ಉತ್ತರ ಗಳನ್ನೆ ಲೇಖನವಾಗಿ ಪ್ರಕಟಿಸುವ ಆಶಯ. ಶ್ರೀಯುತರುಗಳಾದ ಎಚ್ಚೆಸ್ಕೆ, ಬಿ.ವಿ. ವೈಕುಂಠರಾಜು, ಧನಂಜಯ, ಹೆಸರಾಂತ ಮಠದ ಸ್ವಾಮಿಗಳು ಹೀಗೆ ಹತ್ತಾರು ಗಣ್ಯರ ಹತ್ತಿರ ಪ್ರಶ್ನೆ ಕಳಿಸಿದ್ದು ಆಯ್ತು. ಆ ನೆಪದಲ್ಲೆ, ವಾರಪತ್ರಿಕೆಯ ಸಂಪಾದಕರಾದ
ಶ್ರೀ ವೈಕುಂಠರಾಜುರವರ ಆಫೀಸಿಗೆ ಮೊದಲ ಬಾರಿಗೆ ಕಾಲಿಟ್ಟಂತಾಯ್ತು. ಹಾಗೆಯೆ ಮರೆಯಲಾಗದ ಮತ್ತೊಂದು ನೆನಪೆಂದರೆ, ಹೆಸರಾಂತ ಶ್ರೀ ಮಠದ ಸ್ವಾಮಿಗಳ ಭೇಟಿಗೆ ಹೋಗಿದ್ದು. ಹೋಗುವ ಮುನ್ನ, ಅಲ್ಲಿಯತನಕ ಯಾವ ಮಠಕ್ಕೂ ಭೇಟಿಯಿತ್ತ ಅನುಭವವೆ ಇಲ್ಲದ ನಾನು ಮತ್ತು ಮನೋಹರ – ಸ್ವಾಮಿಗಳ ಮುಂದೆ ಕೂರಬಹುದೆ, ಇಲ್ಲವೆ, ಕನ್ನಡದಲಿ ಮಾತಾಡಬೇಕೆ, ಇಂಗ್ಲೀಷಿನಲ್ಲೆ…ಇತ್ಯಾದಿ ಇತ್ಯಾದಿ ಪ್ರಶ್ನೆಗಳು ಕಾಡಿ, ಭೇಟಿಯ ಕಾಂಡ ಮುಗಿಯುವ ತನಕ ನಮ್ಮಿಬ್ಬರನ್ನು ಆತಂಕದ ಮಡುವಿನಲಿಟ್ಟಿದ್ದು ಇನ್ನು ನೆನಪಲ್ಲಿ ಹಸಿರು!

ಆ ನೆನಪಿನ ಚೀಲದಿಂದ ಹೊರ ಬೀಳುವ ಮುನ್ನ ತುಸು ಲಘು ಲಹರಿಯ ಮಾತು; ‘ಎಮ್ಮ ಮನೆಯಂಗಳದಿ’ ವಿಭಾಗದಲ್ಲಿ ನಮ್ಮ ಕಾಲೇಜಿನ ಪ್ರತಿಭೆಗಳನ್ನು ಮಾತ್ರ ಪರಿಚಯಿಸಬೇಕೆಂಬ ಸಂವಾದದಲ್ಲಿ, ಗೆಳೆಯ ದೀಪಕ ನಗರದ ಮತ್ತೊಂದು ತಾಂತ್ರಿಕ ಕಾಲೇಜಿನ ಪ್ರತಿಭೆಯನ್ನು ಸೇರಿಸಬೇಕೆಂದು ಪಟ್ಟು ಹಿಡಿದಾಗ, ಎಲ್ಲಾ ಸೇರಿ ಅವನನ್ನು ಛೇಡಿಸಿ ಕೆಂಪಾಗುವಂತೆ ಮಾಡಿದ್ದ ಕುಚೋದ್ಯ ಸ್ಮರಣೀಯ. ಆಗ ಮನೋಹರ – ‘ಆ ಕಾಲೇಜಿನಲಿ ಅವನ ಕನಸಿನ ಕನ್ಯೆಯೊಬ್ಬಳು , ನಾಟ್ಯ ಪ್ರವೀಣೆಯಂತೆ. ಅವಳನ್ನು ಈ ನೆಪದಲಾದರು ಸಂದರ್ಶಿಸಲೆಂದು ಈ ವಿಭಾಗ ಮಾಡಿ, ಕಾಲೇಜು ಹೊರಗಿನ ನಗರದ ಪ್ರತಿಭೆಗಳನ್ನು ಸೇರಿಸಲು ಹವಣಿಸುತ್ತಿದ್ದಾನೆ’ ಎಂದು ಕಾಲೆಳೆದಿದ್ದು – ಎಲ್ಲ ಮೆಲುಕು ಹಾಕಿದರೆ, ಕಂಡೂ ಕಾಣದ ತೆಳುನಗುವೊಂದು ಮಿಂಚಿ ಮಾಯವಾಗುತ್ತದೆ 🙂 ನಿಜಕ್ಕೂ ಮನೋಹರನ ಆ ಮಾತು ಅರ್ಧ ಸತ್ಯವಾಗಿತ್ತು. ಆ ಯುವತಿ ನಮ್ಮ ಕಾಲೇಜಿನ ವಿದ್ಯಾರ್ಥಿಯೆ ಆಗಿದ್ದವಳು; ತಾಂತ್ರಿಕ ಕಾಲೇಜುಗಳಲ್ಲಿ ಸಾಮಾನ್ಯವಾಗಿ ನಡೆಯುವಂತೆ, ಮೊದಲ ವರ್ಷದ ನಂತರ ಪರಸ್ಪರ ವರ್ಗಾವಣೆ ತೆಗೆದುಕೊಂಡು ಮತ್ತೊಂದು ಕಾಲೇಜಿಗೆ ಸೇರಿದ್ದಳಷ್ಟೆ (ತಮಗೆ ಬೇಕಾದ ಐಚ್ಚಿಕ ವಿಭಾಗಕ್ಕೆ / ಕಾಲೇಜಿಗೆ ಬದಲಾಯಿಸಿಕೊಳ್ಳಲು ಇದು ಸಾಮಾನ್ಯವಾಗಿ ಬಳಕೆಯಲ್ಲಿರುವ ವಿಧಾನ). ಕೊನೆಗೆ ನಾನು ಲಘುಹಾಸ್ಯದೊಂದಿಗೆ “ಎಮ್ಮ ಮನೆಯಂಗಳದಿ ಅಂತ ಶೀರ್ಷಿಕೆಯಿದೆ…ಮೈಸೂರು ಪೂರ, ನಮ್ಮ ಮನೆಯಂಗಳವೆ ತಾನೆ? ಸಂದರ್ಶಿಸಲಿ ಬಿಡಿ” ಎಂದು ‘ವೀಟೊ’ ಚಲಾಯಿಸಿದೆ!

ಇದೆಲ್ಲಾ ಪ್ರವರದ ನಡುವೆಯ ಅತ್ಯಂತ ರೋಚಕ ಭಾಗವೆಂದರೆ – ಜಾಹೀರಾತು ವಿಭಾಗದ್ದು! ನಮ್ಮ ಸಂಪಾದಕ ತಂಡದ ಜಾಹೀರಾತು ವಿಭಾಗದ ಜವಾಬ್ದಾರಿಯನ್ನು ಹೊತ್ತಿದ್ದು, ಕೊಂಚ ತರಲೆಯೆಂದೆ ಹೆಸರಾದ ಮತ್ತೊಬ್ಬ ಸಹಪಾಠಿ ಕುಮಾರಸ್ವಾಮಿ. ತುಸು ಅತಿಯೆನಿಸುವ ಕುಚೇಷ್ಟೆ, ಕಂಜೂಸು ಹಾಗೂ ತೀಟೆ ಬುದ್ದಿಗಳಿಂದ ಮಿತ್ರರಿಗಿಂತ ಹೆಚ್ಚು ಶತ್ರುಗಳನ್ನೆ ಹೊಂದಿದ್ದ ಕುಮಾರನ ಸೇರ್ಪಡೆ ನಮಗಷ್ಟು ಹಿತಕರವೆನಿಸದಿದ್ದರು, ಜಾಹೀರಾತು ಬೇಡಿ ಹಣ ಸಂಗ್ರಹಿಸುವ ‘ಘನ’ ಕಾರ್ಯಕ್ಕೆ ಇಂತಹವನೊಬ್ಬರ ಅಗತ್ಯ ಅತ್ಯಾವಶ್ಯಕವಾಗಿತ್ತು. ಅಲ್ಲದೆ ಸಂಚಿಕೆಯ ಹೊರತರಲು ಬೇಕಾದ ಹಣಕ್ಕೆ ಇದು ಒಂದು ಮೂಲವಾದ್ದರಿಂದ, ಬೇರೆ ದಾರಿಯು ಇರಲಿಲ್ಲ.

ಜಾಹೀರಾತು ಅಂದ ಕೂಡಲೆ ಮುಖ ತಿರುಗಿಸುವ, ನೂರೆಂಟು ಬಾರಿ ಅಲೆದಾಡಿಸಿ, ಸುತ್ತಾಡಿಸಿ, ಪರದಾಡಿಸುವ ಯಾತನೆ, ವೇದನೆ ಅನುಭವಿಸಿದವರಿಗೆ ಗೊತ್ತು. ಅದರಲ್ಲೂ ಕಾಲೇಜು ಪತ್ರಿಕೆಯ ಜಾಹೀರಾತೆಂದರೆ ಅಷ್ಟೆ, ಬಿಡಿ. ಹೀಗಾಗಿ, ಯಾರು ಈ ಸುಮಧುರ ಅನುಭವದ ಅಸ್ವಾದನೆಗೆ ಮುಂದಾಗುವುದಿಲ್ಲವೆಂಬ ಸ್ಪಷ್ಟ ಅರಿವು ಇದ್ದುದ್ದರಿಂದ, ಜಾಹೀರಾತು ಸಂಗ್ರಹಣೆಯನ್ನು ತುಸು ಆಕರ್ಷಣೀಯವಾಗಿಸಲು ಒಂದು ಪುಟ್ಟ ಯೋಜನೆಯನ್ನು ಜಾರಿಗೆ ತಂದಿದ್ದೆವು. ಅದೆಂದರೆ, ಯಾರು ಬೇಕಾದರೂ ಜಾಹೀರಾತು ಸಂಗ್ರಹಣೆಯಲ್ಲಿ ಪಾಲ್ಗೊಳ್ಲಬಹುದು – ಪ್ರತಿ ಸಂಗ್ರಹಿತವಾದ ಜಾಹೀರಾತಿನ ಶೇಕಡಾ ಐದು ಭಾಗ ಕಮೀಷನ್ನಿನ ರೂಪದಲ್ಲಿ ಸಂಗ್ರಹಿಸಿದವರಿಗೆ ಕೊಡಮಾಡಲಾಗುವುದು, ಎಂದು. ಯಾವಾಗ ಕಮೀಷನ್ನಿನ ಶೇಕಡಾವಾರು ವ್ಯವಹಾರ ಬಂತೊ, ಕುಮಾರಸ್ವಾಮಿಯ ಹದ್ದಿನ ಕಣ್ಣು, ಕಿವಿ, ಮೆದುಳು ಬಹಳ ಚುರುಕಾಗಿ ಕೆಲಸ ಮಾಡಿತು. ದಿನವೆಲ್ಲ ಹೊತ್ತು ಸಿಕ್ಕಾಗೆಲ್ಲ ಹೆಗಲಿಗೊಂದು ಚೀಲವನೇರಿಸಿ ಸೈಕಲಿನಲ್ಲಿ ಊರೆಲ್ಲ ಅಲೆದಾಡಿ ಜಾಹೀರಾತು ಸಂಗ್ರಹಿಸತೊಡಗಿದ. ಇದು ಯಾವ ಮಟ್ಟಕ್ಕೋಯಿತೆಂದರೆ, ನಾವುಗಳು ನಮ್ಮ ಮಾಮೂಲಿ ಗ್ರಾಹಕರ ಬಳಿ ಜಾಹೀರಾತು ಕೇಳಲ್ಹೋಗುವಷ್ಟರಲ್ಲಿ ಈ ಆಸಾಮಿ ಆಗಲೇ ಬಂದು ಹೋಗಿಬಿಟ್ಟಿದ್ದಾನೆ! ಯಾವಾಗ, ನಮಗೆ ಸಿಗುವ ಕಮೀಷನ್ನಿಗೂ ಕಲ್ಲು ಹಾಕಲಾರಂಭಿಸಿದನೊ , ಅವನ ಮೇಲಿನ ರೋಷ ಇನ್ನಷ್ಟು ತೀವ್ರವಾಗುತ್ತಾ ಹೋಯ್ತು. ಅಷ್ಟಾದರೂ, ಕೊನೆಯಲ್ಲಿ ಅವನು ಸಂಗ್ರಹಿಸಿದ ಮೊತ್ತ ನೋಡಿದಾಗ ‘ಭಲೆ’ ಎನ್ನದೆ ವಿಧಿಯಿರಲಿಲ್ಲ. ಆದರೆ, ಅದಕ್ಕೆ ಅವನಿಗೆ ಸಿಗುವ ಕಮೀಷನ್ನನು ನೆನೆದಾಗ ಕೊಂಚ ಹೊಟ್ಟೆಕಿಚ್ಚು , ಮಾತ್ಸರ್ಯ ಒಟ್ಟಾಗಿಯೆ ತೂರಿ ಬಂತು. ಆ ಕೋಪದಲ್ಲೆ, ಅವನ ಜಾಹೀರಾತು ಸಂಗ್ರಹಣೆ ಕುರಿತಾಗಿ ಒಂದು ಹಾಸ್ಯ ಲೇಖನ ಬರೆದು, ಅದರಲ್ಲಿ ‘ಕರೆಂಟು ಹೊಡೆದ ಕಪಿಯಂತೆ’, ‘ಕಾಸಿಗಾಗಿ ಏನು ಮಾಡಲೂ ಹೇಸದ ..’ ಇತ್ಯಾದಿ ಇತ್ಯಾದಿ ಬೈಗುಳಗಳನ್ನೆಲ್ಲ ಸೇರಿಸಿ ಕೊಂಚ ಸೇಡು ತೀರಿಸಿಕೊಂಡ ಹಾಗೆ ಪೆದ್ದು ಖುಷಿಪಟ್ಟಿದ್ದು – ಈಗ ಅದೆಷ್ಟು ಬಾಲಿಶ ನಡೆಯಾಗಿತ್ತು ಅನಿಸಿದರು, ಆಗಿನ ಸಾಂಧರ್ಭಿಕ ವಾತಾವರಣದಲ್ಲಿ ಅದೆಲ್ಲದರ ಪರಿಗಣನೆಯಾದರೂ ಎಲ್ಲಿರುತ್ತಿತ್ತು? ಪ್ರಬುದ್ಧತೆಗಿಂತೆ ಹುಡುಗಾಟ ಮತ್ತು ವಯಸ್ಸಿನ ಸಹಜ ರಾಗ ದ್ವೇಷಗಳೆ ರಾಜ್ಯವಾಳುತ್ತಿದ್ದ ಕಾಲ.ಅದನ್ನೋದಿದ ಕುಮಾರಸ್ವಾಮಿಯು ಬಿದ್ದು ಬಿದ್ದು ನಕ್ಕ ವಿಪರ್ಯಾಸ ನೆನೆದರೆ ಈಗಲೂ ವಿಸ್ಮಯ!

ಈಗ ಇಷ್ಟು ವರ್ಷ ಕಳೆದ ಮೇಲೆ ಇದೆಲ್ಲ ನೆನೆದಾಗ ಆ ಹಳೆಯ ದಿನಗಳೆಷ್ಟು ಮಧುರ ಎನಿಸಿಬಿಡುತ್ತದೆ. ಆ ಗುಂಪಿನಲ್ಲಿದ್ದ ಯಾರ್ಯಾರು ಎಲ್ಲಿದ್ದಾರೊ ಗೊತ್ತಿಲ್ಲ. ದೀಪಕನೊಬ್ಬನ ಜತೆಯೊಡನಾಟ ಇನ್ನು ಹಾಗೆ ಮುಂದುವರೆದಿದೆ. ಪುಟ್ಟಿಯವರು ಅದೆ ಕಾಲೇಜಿನಲ್ಲಿ ಅದೇ ಜೀವಂತಿಕೆಯಿಂದ ಸಕ್ರೀಯವಾಗಿ, ಕ್ರಿಯಾಶೀಲವಾಗಿ ಕೆಲಸ ಮಾಡಿಕೊಂಡಿದ್ದಾರೆ. ಈಗಲೂ ಭೇಟಿಯಾದಾಗ ಮ್ಯಾಗಜೈನಿನ ಮಾತಾಡುತ್ತಾರೆ – ಅಲ್ಯುಮಿನಿ ವಿಭಾಗ ಮಾಡಿಸುವೆ, ಲೇಖನ ಬರಿ ಎಂದರು, ಮೊನ್ನೆ ಮೊನ್ನೆ ಭೇಟಿಯಾದಾಗ. ಆ ದಿನಗಳಲ್ಲಿ ಬರೆದ ಕಥೆ “ಬದುಕು ಜಟಕಾ ಬಂಡಿ”, ನನ್ನ ಪ್ರೀತಿಯ ಕವನ ” ಸಂವಾದ, ಸಂದೇಶ”, ಗುಬ್ಬಿ ಕಾವ್ಯ ನಾಮದ ಚುಟುಕಗಳು, ದೀಪಕನ ‘ಎಮ್ಮ ಮನೆಯಂಗಳದಿ’ ಹಾಗೂ ನಾಗರಾಜನ – “ಮೂಡಣದ ಈ ಕಪ್ಪು ಚುಕ್ಕೆ..” ಎಲ್ಲವೂ ಆತ್ಮೀಯ ನೆನಪುಗಳಾಗಿ ಹಾದು ಮನಪದರದಲಿ ಮುದ ತರುವ ಸ್ಪೂರ್ತಿಗಳಾಗಿ – ಜತನದಿಂದ ಕಾಪಾಡಿರಿಸಿದ ಆ ಕಾಲೇಜು ಮ್ಯಾಗಜೈನಿನಲ್ಲಿ ಇಂದಿಗೂ ನಗುತಲಿವೆ.

ಎಷ್ಟೇ ಆಗಲಿ, ನೆನಪುಗಳೆ ತಾನೆ ಅತಿ ಮಧುರ? ಅಂಥ ಸುಮಧುರ ನೆನಪಿನ ಬುತ್ತಿಯಲ್ಲಿ ಈ ಯಶಸ್ವಿ ಪ್ರಧಾನ ಸಂಪಾದಕನ ಪಾತ್ರದ ನೆನಪು ಅಷ್ಟೇ ಸ್ಮರಣೀಯ !

———————————————————-
ನಾಗೇಶ ಮೈಸೂರು, ೧೨.ಮಾರ್ಚ್.೨೦೧೩, ಸಿಂಗಾಪುರ
———————————————————-

4 thoughts on “00011 – ಲಘು ಪ್ರಬಂಧ: ನನ್ನ ಪ್ರಧಾನ ಸಂಪಾದಕ ಹುದ್ದೆ…!”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s