ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ!
—————————————————————
ಹತ್ತತ್ತಲ ಹತ್ನೂರು!………ಹತ್ತರ ಮಗ್ಗಿಗು ಸತ್ತರೆ ಹೆಂಗೊ?
—————————————————————
ನೀವು ಗುರು ಶಿಷ್ಯರು ಚಿತ್ರ ನೋಡಿದ್ದರೆ ಅಥವಾ ‘ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ’ ಹಾಡು ಕೇಳಿದ್ದರೆ, ಹಾಡಿನ ಈ ಒಂದು ಸಾಲು ಖಂಡಿತಾ ನೆನಪಿರುತ್ತದೆ – ‘ಒಂದೊಂದ್ಲ ಒಂದು ಮಗ್ಗಿಯ ಮುಂದೆ, ಬೇರೆ ಸುಲಭದ ಮಗ್ಗಿಯೆ ಇಲ್ಲ!’ ಅದೆ ಸಿದ್ದಾಂತವನ್ನು ತುಸು ವಿಸ್ತರಿಸಿ ‘ಹತ್ತತ್ಲ ನೂರು ಮಗಿಯ ಮುಂದೆ….’ ಎಂದೂ ಹಾಡಬಹುದೆಂದು ಭಾವಿಸಿದ್ದ ನಾನು, ಮಗರಾಯನಿಗೆ ಕನ್ನಡದಲ್ಲಿ ಹತ್ತರ ಮಗ್ಗಿ ಕಲಿಸುತ್ತ ಇರುವಾಗ, ನಿಜಕ್ಕೂ ಅದೆಷ್ಟು ಕಷ್ಟಕರ ಕೆಲಸವೆಂದು ಅರಿತುಕೊಳ್ಳುವ ಪರಿಸ್ಥಿತಿ ಬಂತು. ನಿಮಗೆ ಹತ್ತರ ಮಗ್ಗಿ ಕಲಿಸುವುದು ಏನು ಮಹ ಕಷ್ಟವಪ್ಪಾ ಅನಿಸಿ ಆಶ್ಚರ್ಯವಾಗುತ್ತಿರಬಹುದು; ವಿಷಯ ಏನಪ್ಪಾಂದ್ರೆ, ನಾನು ಹೇಳುತ್ತಿರುವ ಕಲಿಕೆ ಕನ್ನಡ ನಾಡಿನ ಕನ್ನಡದ ವಾತಾವರಣದಲ್ಲಲ್ಲ. ಮನೆಯಲ್ಲಿ ಬಿಟ್ಟರೆ ಬೇರೆಲ್ಲೂ ಕನ್ನಡದ ಗಂಧ ಗಾಳಿಯೂ ಸುಳಿಯದ ಅಪ್ಪಟ ವಿದೇಶಿ ವಾತಾವರಣದಲ್ಲಿ. ಜತೆಗೆ ತಿಳುವಳಿಕೆ ಬರುವ ವಯಸಿನ ತನಕ, ಅದರಲ್ಲೂ ಆರಂಭದಲ್ಲಿ ಶಾಲೆಯಲ್ಲೊ ಅಥವ ಮನೆಯ ಪರಿಸರದಲ್ಲೊ ಕನ್ನಡದ ಸಹಜ ವಾತಾವರಣವಿರದೆ ಬೆಳೆದ ಮಕ್ಕಳಾದರೆ, ಇನ್ನೂ ಅದ್ವಾನ!
ಮನೆಯಲಾಡುವ ಕನ್ನಡ ಕೇಳುತ್ತ ಅಷ್ಟಿಷ್ಟು ಬೆರಕೆ ತುಂಡುಗನ್ನಡ ಮಾತಾಡುವ ಮಗರಾಯ ಅವತ್ತು ಕನ್ನಡ ಮಗ್ಗಿ ಕಲಿಯುವ ಮೂಡಿನಲ್ಲಿ ಬಂದು – “ಅಪ್ಪಾ! ನನಗೆ ಹತ್ತರ ಮಗ್ಗಿ ಹೇಳಿಕೊಡಪ್ಪ” ಎಂದಾಗ ಯಾವ ಕನ್ನಡಪ್ಪನ ಎದೆ ತಾನೆ ಉಬ್ಬದೆ ಇದ್ದೀತು? ನನ್ನಲ್ಲಿನ ಕನ್ನಡ ಪ್ರೇಮ ತಟ್ಟನೆ ಜಾಗೃತವಾಗಿ, ಕಲಿಸಾಟದ ರಣರಂಗಕ್ಕೆ ಸಿದ್ದನಾಗಿ ಹೊರಟೆ. ಈಗಾಗಲೆ ಅವನಿಗೆ ಒಂದರಿಂದ ಹತ್ತರತನಕ ಗೊತ್ತಿತ್ತು. ಜತೆಗೆ ಹೇಗೊ ಒದ್ದಾಡಿಕೊಂಡು ನೂರರವರೆಗು ಕಲಿಸಿಬಿಡಬೇಕೆಂದು ಶತಸಾಹಸ ಮಾಡಿದ ನೆನಪಿನ್ನು ಮನದಲ್ಲಿ ಹಸಿರಾಗೆ ಇತ್ತು. ಒಂದರಿಂದ ಹತ್ತರವರೆಗೇನೊ ಸುಲಭದಲ್ಲಿಯೆ ಕಲಿತುಬಿಟ್ಟ ಮಗ ಅಲ್ಲಿಂದ ಮುಂದೆ ಕಲಿಯುವ ತರ್ಕದ ಹಿಡಿತ ಸಿಗದೆ ಸಾಕಷ್ಟು ಒದ್ದಾಡಿಬಿಟ್ಟಿದ್ದ. ಮೊದಲಿಗೆ ಆರಂಭಿಸಿದಾಗ ಒಂದು ಕಡೆ ನಗು ಮತ್ತೊಂದೆಡೆ ಕೋಪ ಎರಡೂ ಬರುತ್ತಿತ್ತು – ಅವನ ಮೇಲೆ ಮತ್ತು ನನ್ನ ಮೇಲೆ ಕೂಡ!
“ಎಲ್ಲಿ ಒಂದು, ಎರಡು ಕನ್ನಡದಲ್ಲಿ ಹೇಳು ಕಂದ..ಎಲ್ಲಾ ಜ್ಞಾಪಕವಿದೆಯ, ಮರೆತಿದಿಯಾ ನೋಡೋಣ?”
“ಇಲ್ಲಪ್ಪ ಮರೆತಿಲ್ಲ…ಒಂದೂ, ಎರಡೂ, ಮೂರು, ನಾಲಕು, ಐದೂ, ಆರು, ಯೋಳು, ಯೆಂಟು, ಒಂಭತ್ತು, ಹತ್ತು…..” ಹತ್ತಕ್ಕೆ ಟ್ರೈನು ಯಾರೊ ಚೈನ್ಹಿಡಿದೆಳೆದಂತೆ ತಟ್ಟನೆ ನಿಂತುಹೋಗಿ ‘ಹತ್ತೂ.. ಹತ್ತೂ.. ಹತ್ತೂ…’ ಎಂದು ಜಪಿಸಲಾರಂಭಿಸುತಿತ್ತು.
“ಸರಿ ಹೇಳೊ ಈಗ, ಹತ್ತಾದ ಮೇಲೆ ಎಷ್ಟು ಅಂತ ಹೇಳ್ಕೊಂಡು ಹೋಗೊ..”
“…………..”
“ಹೂಂ..ಹತ್ತಾಯ್ತಲ್ಲ..ಇನ್ನು ಮುಂದುಕ್ಕೆಳಿ…ಇಲೆವೆನ್, ಟ್ವೆಲ್ವ್, ಥರ್ಟೀನ್ ಎಲ್ಲಾ ಹೇಳು…”
ಕೊಂಚ ಹೊತ್ತೂ ಅಲ್ಲೆ ತಡವರಿಸಿ ಎಡತಾಕಿದ ಮೇಲೆ, ಮತ್ತೊಂದು ಗದರಿಕೆಯ ದನಿಯು ಸೇರಿಕೊಳ್ಳುತ್ತಿದ್ದಂತೆ ತಟ್ಟನೆ ಮುಂದೋಡುತ್ತಿತ್ತು, ತೇರು…”ಹತ್ತೊಂದು, ಹತ್ತೆರಡು, ಹತ್ಮೂರು, ಹತ್ನಾಕು, ಹತ್ತೈದು, ಹತ್ತಾರು……..”
“ಏಯ್…ನಿಲ್ಸೊ ಅಲ್ಗೆ…ಬರಿ ತಪ್ ತಪ್ಪೆ ಹೇಳ್ತಾ ಇದೀಯಲ್ಲೊ..? ಅದು ಹತ್ತೊಂದಲ್ಲ…..ಹತ್ತು + ಒಂದು = ಹನ್ನೊಂದು”
” ಹತ್ತು + ಒಂದು = ಹನ್ನೊಂದು…, ಹತ್ತು + ಎರಡು = ಹತ್ತೆರಡೂ”
” ಗೂಬೆ, ಅದು ಹತ್ತೆರಡಲ್ಲ; ಹತ್ತು + ಎರಡು = ಹನ್ನೆರಡು….”
“ಸರಿ …ಹತ್ತು + ಎರಡು = ಹನ್ನೆರಡು…ಅಪ್ಪಾ…”
“ಏನೊ ಅದು?”
“ಅದೇನೊ ಗೂಬೆ ಅಂದ್ಯಲ್ಲ ..ಹಾಗಂದ್ರೆ ಇಂಗ್ಲೀಷಲ್ಲಿ ಏನಪ್ಪಾ?”
“ಗೂಬೆ ಮುಂಡೆದೆ…ಅದೂ ಗೊತ್ತಿಲ್ವಾ….ಔಲ್ ಕಣೊ ಔಲ್…ದಿನವೆಲ್ಲ ನಿದ್ದೆ ಮಾಡಿ, ರಾತ್ರಿಯೆಲ್ಲ ಎಚ್ಚರವಾಗಿರುತ್ತಲ್ಲಾ, ನಿಂತರಾನೆ..ಅದು..”
“ನಾನೆಲ್ಲಪ್ಪ ರಾತ್ರಿಯೆಲ್ಲಾ ಎಚ್ಚರವಾಗಿರ್ತೀನಿ…?” ಗೂಬೆಯೆಂದರೆ ಬೈಗುಳವೆಂದು ಸರಿಯಾಗಿ ತಿಳಿಯದ ಮಗನ ಮುಗ್ದ ಪ್ರಶ್ನೆ!
“ಮುಟ್ಠಾಳ….ಪೂರ್ತಿ ಅಲ್ದಿದ್ರೂ ಅರ್ಧ ಗೂಬೆನೆ ನೀನು….ಮಧ್ಯರಾತ್ರಿಯಾದರೂ ಮಲಗೊಲ್ಲ…ಬೆಳಗ್ಗೆ ಕುಂಭಕರ್ಣನ ತರ ಏಳೋದೂ ಇಲ್ಲ…ಗೂಬೆನಾದ್ರೂ ವಾಸಿ, ಬೇಗ ಎದ್ಬಿಡುತ್ತೆ…”
” ಅಪ್ಪಾ….”
“ಏನೊ ಅದು ತಿರುಗಾ?”
“ಮುಟ್ಠಾಳ ಅಂತೇನೊ ಅಂದ್ಯಲ್ಲಾ….ಹಾಗಂದ್ರೆ ಇಂಗ್ಲೀಷಿನಲ್ಲಿ ಏನೂ?”
“ಅಯ್ಯೊ..ಪಾಪಿ! ಮಗ್ಗಿ ಹೇಳೋದ್ ಕಲಿಯೋ ಅಂದ್ರೆ ಗೂಬೆ, ಮುಟ್ಠಾಳ ಅನ್ಕೊಂಡು ಕೂತಿದ್ದೀಯಾ – ಮುಂದಕ್ಕೆ ಹೇಳ್ತಿಯಾ, ಇಲ್ಲಾ ಬೀಳ್ಬೇಕಾ ಎರಡು?”
ಸ್ವಲ್ಪ ಸೀರಿಯಸ್ಸಾಗುತ್ತಿದೆ ಅನ್ನುವುದನ್ನು ತೀರಾ ತಡವಾಗುವ ಮೊದಲೆ ಅರಿತುಬಿಡುವ ಆರನೆ ಇಂದ್ರೀಯ, ತಟ್ಟನೆ ಜಾಗೃತವಾಗಿ ಪಠಣ ಶುರುವಾಗುತ್ತಿತ್ತು “…. ಹನ್ನೊಂದು, …ಹನ್ನೆರಡು, ….ಹನ್ಮೂರು……ಹನ್ನಾಲ್ಕು..”
“ಅಯ್ಯೊ ಪೀಡೆ! ಅದು ಹನ್ಮೂರಲ್ಲ, ಹನ್ನಾಲ್ಕಲ್ಲ ….ಹದಿಮೂರು, ಹದಿನಾಲ್ಕು…”
” ಸರಿಯಪ್ಪ…ಹದಿಮೂರು, ಹದಿನಾಲ್ಕು….ಅಪ್ಪ, ಅಪ್ಪ….ಪೀಡೆಂದ್ರೆ ಇಂಗ್ಲೀಷಲ್ಲಿ….”
“ಅದೀಗ ಬಾಯಲ್ಲಿ ಹೇಳಲ್ಲ…ದೊಣ್ಣೆ ಹೇಳುತ್ತೆ…ಮೊದಲು ಮಗ್ಗಿ ಹೇಳೊ ಅಂದ್ರೆ ತಲೆ ಹರಟೆ ಮಾಡ್ತೀಯಾ….? ಮುಂದಕ್ಕೆ ಹೇಳು”
ನಾನೀಗ ಗದರಿದ ದನಿಯಲ್ಲಿ ನಿಜಕ್ಕು ಹುದುಗಿದ ಎಚ್ಚರಿಕೆಯನ್ನು ಅರಿಯುವ ಸೂಕ್ಷ್ಮಜ್ಞತೆ, ಕಿಲಾಡಿ ಮಗನಿಗಿದ್ದುದರಿಂದ, ನಾನು ಮತ್ತೆ ಹೇಳುವ ಮೊದಲೆ…”ಹತ್ತು + ನಾಲ್ಕು = ಹದಿನಾಲ್ಕು,….ಹದಿನೈದು…., ಹದಿನಾರು…., ಹದಿನೇಳು, ಹದಿನೆಂಟು…, ಹದಿನೊಂಭತ್ತು…….”
” ಏಯ್…ಏಯ್…. ಅದು ‘ಹದಿ’ ಅಲ್ಲ…ಹತ್ತು + ಒಂಭತ್ತು = ಹತ್ತೊಂಭತ್ತು……”
“ಹತ್ತು + ಒಂಭತ್ತು = ಹತ್ತೊಂಭತ್ತು……? ಎಲ್ಲಾ ಕನಫ್ಯೂಸ್ ಅಪ್ಪ….ಹತ್ತು-ಏಳಕೆ ಹತ್ತೇಳು, ಹತ್ತು-ಎಂಟಕೆ ಹತ್ತೆಂಟು ಅಂದ್ರೆ ತಪ್ಪು ಅಂದೆ…ಈಗ ಹತ್ತು-ಒಂಭತ್ತಕ್ಕೆ, ಹತ್ತೊಂಭತ್ತು ಸರಿ ಅಂತಿಯಾ….”
ಅರೆ ಹೌದಲ್ಲಾ? ಇವನ ಲಾಜಿಕ್ಕು ಸರಿಯಿದೆಯಲ್ಲಾ ಅನಿಸಿತು. ಅದರೆ ಹಾಗೆಂದು ಈ ರೂಲ್ಸು ಮಾಡಿದವನು ನಾನಲ್ಲವಲ್ಲ! ಅದೂ ಸಾಲದೆ, ಅವನ ಮುಂದೆ ಹಾಗೇನಾದರೂ ಒಪ್ಪಿಕೊಂಡುಬಿಟ್ಟರೆ, ಅಷ್ಟೆ…ನಮ್ಮ ಅಂಕಿಯ ತರ್ಕದ ಮೂಲ ಬೇರನ್ನೆ ಜರಿದು ವಂಶ ಜಾಲಾಡಿಸಿಬಿಡುತ್ತಾನೆ! ತರ್ಕವಿದೆಯೊ ಇಲ್ಲವೊ ಅದು ಬೇರೆ ಪ್ರಶ್ನೆ; ಅದೇನಿದೆ ಅಂತಾದರೂ ನಮಗೆ ಗೊತ್ತಿರಬೇಕಲ್ಲ…?
“ಕತ್ತೆ ನನ ಮಗನೆ…ಈ ಲಾಜಿಕ್ಕೆಲ್ಲಾ ಬೇಗ ಗೊತ್ತಾಗುತ್ತೆ…ಇವೆಲ್ಲಾ ವ್ಯಾಕರಣ ಹಾಕಿ ಮಾಡಿರೊ ರೂಲ್ಸು ಗೊತ್ತಾಯ್ತಾ? ಅದೆಲ್ಲಾ ಯಾಕೆ ಏನೂಂತ ಕೇಳ್ದೆ ಮೊದಲು ಕಲಿತುಕೋಬೇಕು…ನಮಗೆ ಅದೆಲ್ಲ ಯಾಕ್ ಹಂಗ್ ಮಾಡಿದಾರೆ ಅಂಥ ಅರ್ಥ ಮಾಡ್ಕೊಳ್ಳೊ ಅಷ್ಟು ಬುದ್ಧಿ ಇಲ್ಲಾ…”
‘ನಿನಗಿಲ್ಲದೆ ಇದ್ರು ನನಗಿದೆ ಅಪ್ಪಾ’ ಅಂತ ಮನಸಲ್ಲೆ ಅಂದುಕೊಂಡಿದ್ರು ಅಂದುಕೊಂಡಿದ್ದನೊ ಏನೊ…ಆದರೆ ಬಾಯಿ ಬಿಡಲಿಲ್ಲ. ಬದಲಿಗೆ…”ಅಪ್ಪಾ ಕತ್ತೆ ಅಂದ್ರೆ ನಂಗೊತ್ತು ….ಆದರೆ ಡಾಂಕಿನೊ ಅಥವಾ ಆಸೊ ಅಂಥ ಗೊತ್ತಿಲ್ಲ….’
ಯಾಕೊ ಇವನಿಗೆ ಬೈಯುವಾಗ ಹುಷಾರಾಗಿರಬೇಕು ಅಂತ ಎಷ್ಟು ಅಂದುಕೊಂಡ್ರು ಹಾಳು ಅಭ್ಯಾಸಬಲ – ಪದಗಳು ಮೆದುಳಿನ ಮೂಸೆಯಲಿ ಫಿಲ್ಟರ ಕಾಫಿಯ ಹಾಗೆ ಶೋಧಿಸಿ ತಿಳಿಯಾಗಿ ಇಳಿಯುವ ಮೊದಲೆ, ಜಿಹ್ವಾಂಬರಿಯ ಜಾರುಬಂಡೆಯಲಿ ಆಡಿ, ಪಾಡಿ ನಲಿದು – ಅರಿವಾಗುವ ಮೊದಲೆ, ಪದವಲ್ಲರಿಯಾಗಿ ತುಟಿ ದಾಟಿ ಮಾತಾಗಿಬಿಟ್ಟಿರುತ್ತಾಳೆ! ‘ಮಾತು ಜಾರಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು’ ಅಂದ ಹಾಗೆ ಅವನ ಪಾಟಿ ಸವಾಲಿಗೆ ಒಳಗಾಗದೆ ವಿಧಿಯಿರಲಿಲ್ಲ….
“ಪೆದ್ದಣ್ಣ…ಅವೆರಡು ಪದಗಳ ಅರ್ಥವೂ ಒಂದೆ ಕಣೊ…ಕತ್ತೆ ಅಂತ….”
“ಹಾಗೇನಿಲ್ಲಪ್ಪ….ಡಾಂಕಿ ಅಂದ್ರೆ ಮಾತ್ರ ಒಂದೆ ಅರ್ಥ ಕತ್ತೆ ಅಂಥ..ಆಸ್ ಅಂದ್ರೆ ಕತ್ತೆ ಜತೆ ಬೇರೆ ಅರ್ಥಾನೂ ಇದೆ…” ಇದ್ಯಾಕೊ ಡೆಂಜರ ಜೋನಿನತ್ತ ಹೋಗುತ್ತಿದೆ ಅನಿಸಿ…’ಚಿನ್ನೂ…..’ ಎಂದೆ ತುಸು ಭಾರವಾದ, ಖಾರವಾದ ದನಿಯಲ್ಲಿ…
“ಅಲ್ಲಪ್ಪ..ಪೆದ್ದಣ್ಣ ಅಂತ ಯಾಕೆ ಬೈಯ್ತಿ? ನಾನೇನು ಅಷ್ಟೊಂದು ಪೆದ್ದಾನ?” ಚಕ್ಕನೆ ಟ್ರ್ಯಾಕ್ ಬದಲಾಯಿಸಿ ಮಾತು ಬದಲಿಸಿದ ಮಗ. ನಾನೂ ತುಸು ಚಾಣಾಕ್ಷತನದಿಂದ,
“ಪೆದ್ದಣ್ಣ ಅಂದ್ರೆ ತೆಲುಗಲ್ಲಿ ದೊಡ್ಡ ಅಣ್ಣ ಅಂತ ಅರ್ಥ ಕಣೊ….”
ಅವನೇನು ಕಡಿಮೆ ಚಾಣಾಕ್ಷನೆ? – ” ನಾವು ಮಾತಾಡ್ತಾ ಇರೋದು ಕನ್ನಡ ಅಲ್ವಪ್ಪ?”
” ಹೀಗೆ ತಲೆಹರಟೆ ಮಾಡ್ತಾ ಕೂರ್ತಿಯೋ, ಇಲ್ಲಾ ಮಗ್ಗಿ ಕಲಿತಿಯೊ? ನನಗೆ ಇನ್ನೂ ಬೇಕಾದಷ್ಟು ಕೆಲಸ ಇದೆ…”
” ಹತ್ತೊಂಭತ್ತಾದ ಮೇಲೆ , ಹತ್ತು-ಹತ್ತು ಹತ್ತತ್ತು ಅಲ್ವಪ್ಪ?”
ಅವನನ್ನು ಬೈಯಬೇಕೊ, ನನಗೆ ಬೈದುಕೊಳ್ಳಬೇಕೊ ಅಥವಾ ಕನ್ನಡ ಮಗ್ಗಿಯ ತರ್ಕಕ್ಕೆ ಶಾಪ ಹಾಕಬೇಕೊ ತಿಳಿಯದೆ, ಪಕ್ಕದಲ್ಲಿದ್ದ ದಿಂಬನ್ನೆ ಎತ್ತಿ ತಲೆಗೆ ಗುದ್ದಿಕೊಂಡೆ…ಏನು ಮಾಡುವುದು…ಹಾಳು ಬಾಡಿಗೆ ಮನೆ, ಗೋಡೆಗೆ ಹಣೆ ಚಚ್ಚಿಕೊಳ್ಳುವಂತೆಯೂ ಇಲ್ಲಾ..ಬೊಕ್ಕತಲೆಯ ಹರಳೆಣ್ಣೆಯೇನಾದರೂ ಗೋಡೆಗೆ ಮೆತ್ತಿಕೊಂಡು ಕರೆಯಾಗಿಬಿಟ್ಟರೆ ಗೋಡೆಯ ಜತೆ ರೂಮು, ಮನೆಯೆಲ್ಲಾ ಪೈಂಟು ಮಾಡಿಸಿಕೊಡಬೇಕಲ್ಲಾ ಅನ್ನುವ ಮುನ್ನೆಚ್ಚರಿಕೆಯ ಮತ್ತು ಅನುಭವಗಳಿಂದ ಪಾಠ ಕಲಿತಿದ್ದರ ಫಲ! ದಿಂಬಾದರೆ ಹೇಗೂ ನಮ್ಮದೆ..ಕೊನೆಗೊ ಒಗೆದೊ, ಬೇರೆ ಕವರನ್ನು ಹಾಕಿಯೊ ನಿಭಾಯಿಸಬಹುದು…
“ಪ್ರತಿ ಹತ್ತಕ್ಕೆ ಸರಣಿ ಬದಲಾಯಿಸಿ..ಮುಂದಿನದಕ್ಕೆ ದಾಟಬೇಕು….ಇಂಗ್ಲೀಷಿನಲ್ಲಿ ನೈಂಟೀನ್ ಆದಮೇಲೆ ಟ್ವೆಂಟಿ, ಟ್ವೆಂಟಿ ವನ್ ಬರೋದಿಲ್ವಾ….ಹಾಗೆ”
ಇಂಗ್ಲೀಷ್ ಲಾಜಿಕ್ ಹೇಳುತ್ತಿದ್ದಂತೆ ತಟ್ಟನೆ ಅರ್ಥವಾದವನಂತೆ, “ಹಾಗಾದ್ರೆ ಹತ್ತತ್ತಕ್ಕೆ ಬದಲು ಎರಡು ಹತ್ತು ಅನ್ಬೇಕಾ ಅಪ್ಪಾ?” ಎಂದ. ಅವನ ಅಪಭ್ರಂಶ ಉದ್ಗಾರಕ್ಕೆ ದುಃಖಿಸಬೇಕೊ ಅಥವಾ ತರ್ಕ ನೈಪುಣ್ಯಕ್ಕೆ ಕೊಂಡಾಡಬೇಕೊ ಅರಿವಾಗದೆ ಗೊಂದಲದಲಿ ತಲೆ ಕೆರೆದುಕೊಳ್ಳುತ್ತಲೆ, “ಎರಡತ್ತಲ್ಲಮ್ಮ….ಅದನ್ನ ಇಪ್ಪತ್ತು ಅಂತಾರೆ..” ಅಂದೆ.
“ಹಾಗಾದ್ರೆ ಟ್ವೆಂಟಿ ವನ್ಗೆ – ಇಪ್ಪತ್ತು ಒಂದು, ಟ್ವೆಂಟಿ ಟೂಗೆ – ಇಪ್ಪತ್ತು ಎರಡು, ಇಪ್ಪತ್ತು ಮೂರು….ಹಾಗಾ?”
“ಶಾಭಾಷ್ ಮಗನೆ…ವೆರಿ ಕ್ಲೋಸ್ ಇಂಡೀಡ್…! ಅದನ್ನೆ ಸ್ವಲ್ಪ ಅದುಮಿ ಇಪ್ಪತ್ತೊಂದು, ಇಪ್ಪತ್ತೆರಡು, ಇಪ್ಪತ್ತಮೂರು, ಇಪ್ಪತ್ತನಾಲ್ಕು……..”
ಈ ಬಾರಿ ಟ್ರೈನೂ ಇಪ್ಪತ್ತೊಂಭತ್ತರ ತನಕ ಸರಾಗವಾಗಿ ಓಡಿತು…ಅಲ್ಲಿ ಮತ್ತೆ ಬ್ರೇಕ್….ಮೂವತ್ತಕ್ಕೆ ಹೊರಳುವ ಹಂತದಲ್ಲಿ ಲಹರಿಯ ತರ್ಕ ಕೆಲಸ ಮಾಡದಲ್ಲ..? “ಇಪ್ಪತ್ತೊಂಭತ್ತಾದ ಮೇಲೆ ‘ಮೂರು+ಹತ್ತು = ಮೂವತ್ತು’ ಆಗುತ್ತದೆ” ಸ್ವಲ್ಪ ಪುಷ್ ಕೊಟ್ಟೆ. ಅಲ್ಲಿಂದ ಮೂವತ್ತೊಂದರಿಂದ ಮೂವತ್ತೊಂಭತ್ತರವರೆಗೆ ಸರಾಗವಾಗಿ ಜೆಟ್ ವೇಗದಲ್ಲಿ ಓಡಿದ ಲೆಕ್ಕ ಮತ್ತೆ ತಿರುವಿನಲ್ಲಿ, ಗಾಳಿ ಸೋರಿ ಟುಸ್ಸೆಂದ ಟೈರಿನಂತೆ ಮತ್ತೆ ಸ್ಥಗಿತ, ನಾನು ಇನ್ನೊಂದು ಪುಷ್ ಕೊಡುವ ತನಕ ” ಮೂವ್ವತ್ತೊಂಭತ್ತು ಆದಮೇಲೆ, ನಾಕು+ ಹತ್ತು = ನಲವತ್ತು”
ಹೀಗೆ ಒಂದರಿಂದ ಒಂಭತ್ತರವರೆಗೆ ಹೇಗೊ ಓಡುತ್ತಿದ್ದ ಗಾಡಿ, ಹತ್ತರ ತಿರುವಿಗೆ ಬಂದಾಗಲೆಲ್ಲ ಹೇರಪಿನ್ ತಿರುವಿನಲ್ಲಿ ಮೇಲೆಳೆಯಲಾಗದೆ ದಮ್ಮು ಬಂದ ಹಾಗೆ ನಿಂತು ಹೋಗುತ್ತಿತ್ತು. ಅಲ್ಲೊಂದು ಪುಷ್ ಕೊಟ್ಟರೆ ಸಾಕು, ಮತ್ತೆ ಎಕ್ಸಪ್ರೆಸ್ಸಿನ ವೇಗದಲಿ ಗಾಡಿ ಓಡು. ಆ ದಿನದಿಂದ ಹೆಚ್ಚು ಕಡಿಮೆ ನೂರರ ತನಕ ಎಣಿಸಲು ಚೆನ್ನಾಗೆ ಕಲಿತನಾದರೂ ತಿರುವಿನಲ್ಲಿ ಮತ್ತೆ ಅದೆ ತೊಡಕು…ಒಮ್ಮೊಮ್ಮೆ ನೆನಪಾಗಿ ಸರಿಯಾಗಿ ಹೇಳಿದರೆ ಮತ್ತೊಮ್ಮೆ ಇಪ್ಪತ್ತರ ಬದಲು ನಲವತ್ತೊ, ಐವತ್ತೊ ಹಾಕಿ ಎಕ್ಕಾಮುಕ್ಕ ಮಧ್ಯದ ಅಂಕಿಗಳ ಗುಂಪನ್ನೆ ಎಗರಿಸಿ ಗೊಂದಲವೆಬ್ಬಿಸಿಬಿಡುತ್ತಿದ್ದ…ಇನ್ನೂ ಕೆಲವೊಮ್ಮೆ ಐವತ್ತರ ಜಾಗದಲ್ಲಿ ಇಪ್ಪತ್ತು ಹೇಗೊ ಬಂದು ಸೇರಿಕೊಂಡುಬಿಡುತ್ತಿತ್ತು. ಅದೂ ಕೊಂಚ ತಮಾಷೆಯಾಗಿಯು ಇರುತ್ತಿತ್ತೆನ್ನಿ…
“….ನಲವತ್ತೆಂಟು, ನಲವತ್ತೊಂಭತ್ತು, ‘ಇಪ್ಪತ್ತೂ!’ ಇಪ್ಪತ್ತೊಂದು, ಇಪ್ಪತ್ತೆರಡು………………… ನಲವತ್ತೆಂಟು, ನಲವತ್ತೊಂಭತ್ತು, ‘ಇಪ್ಪತ್ತೂ!’, ಇಪ್ಪತ್ತೊಂದು, ಇಪ್ಪತ್ತೆರಡು…………..”
ಯಾರಾದರೂ ಮಧ್ಯಸ್ತಿಕೆ ವಹಿಸಿ ಇಪ್ಪತ್ತನ್ನು – ಐವತ್ತಾಗಿಸದಿದ್ದರೆ, ಈ ನಿರಂತರ ಚಲನೆಯ ಚಕ್ರ, ತಡೆರಹಿತವಾಗಿ ಎಡಬಿಡದೆ ಓಡುತ್ತಲೆ ಇರುತ್ತಿತ್ತು, ಒಂದೆ ಕೇಂದ್ರದ ಸುತ್ತ ಸುತ್ತುವ ಬುಗುರಿಯ ಹಾಗೆ!
ಈ ತಿರುವಿನ ಮರೆವನ್ನು ಕುರಿತು ಸುಮಾರು ಬಾರಿ ನೆನಪು ಮಾಡಿಸಿ ಉರು – ಜಗದ್ಗುರು ಮಾಡಿಸಿದರೂ ಅದು ಪ್ರಯೋಜನವಾಗುವಂತೆ ಕಾಣಲಿಲ್ಲ. ಇದಕ್ಕೆ ಬೇರೆಯೇನಾದರೂ ತರಹ ಸಾಧ್ಯವಿದೆಯೆ ಎಂದು ಆಲೋಚಿಸುತ್ತಿದ್ದಾಗ ಹತ್ತರ ಮಗ್ಗಿ ನೆನಪಿಗೆ ಬಂತು. ‘ಅರೆ..ಹೌದಲ್ಲಾ? ಹತ್ತರ ಮಗ್ಗಿ ಕಲಿಸಿಬಿಟ್ಟರೆ ಹತ್ತರ ಎಲ್ಲಾ ತಿರುವು ಹೇಗೂ ಅದರಲ್ಲೆ ತಾನೆ ಬರುವುದು? ಅದನ್ನು ಚೆನ್ನಾಗಿ ಉರು ಹೊಡೆಸಿಬಿಟ್ಟರೆ ಆಯ್ತಲ್ಲಾ…?’ ಎಂದು ಆಲೋಚಿಸಿದೆ. ಅದೆ ಹೊತ್ತಿನಲ್ಲಿ ಆಗಲೆ ಇದೆಲ್ಲಾ ಗೊಂದಲದಿಂದ ಅವನಲ್ಲಿ ಕಲಿಕೆಯ ಆಸಕ್ತಿ ತುಸುವೆ ಕುಗ್ಗುತ್ತಿದ್ದ ಕಾರಣ, ಏನಾದರೂ ಆಸಕ್ತಿದಾಯಕವಾದ ಹೊಸ ದಾರಿಯನ್ನು ಹುಡುಕಬೇಕಿತ್ತು. ಈ ಮಕ್ಕಳು ಒಮ್ಮೆ ಭ್ರಮನಿರಸನ ಸ್ಥಿತಿಗೆ ಹೊಕ್ಕು, ಕನ್ನಡ ಕಲಿಯುವುದೆ ಕಷ್ಟ ಅನ್ನುವ ತೀರ್ಮಾನಕ್ಕೆ ಬಂದುಬಿಟ್ಟರೆ, ಆಮೇಲೆ ‘ಜಪ್ಪಯ್ಯ’ ಅಂದರೂ ಕಲಿಸಲಾಗದು, ನೋಡಿ.
ತಟ್ಟನೆ ಒಂದು ಆಲೋಚನೆ ಬಂತು – ಈ ಹತ್ತರ ಮಗ್ಗಿಯನ್ನೆ ಪದ್ಯದ-ಹಾಡಿನ ರೂಪದಲ್ಲಿ ಮಾಡಿ ಕಲಿಸಿದರೆ ಹೇಗೆ? ಪದ್ಯ ಹಾಡಿನ ಲಯವನ್ನೆ ಆಸಕ್ತಿಯನ್ನಾಗಿಸಿದರೆ ಬಹುಶಃ ಬೇಗ ಕಲಿತಾನು ಎಂದು ಆ ಪ್ರಯತ್ನಕ್ಕಿಳಿದೆ. ಮೊದಲಿಗೆ ಅಪ್ಪಾ-ಮಗನ ಸಂಭಾಷಣೆಯ ರೂಪದಲ್ಲಿ ಹತ್ತರ ಮಗ್ಗಿಯನ್ನು ಪುಟ್ಟ ಪದ್ಯದ ರೂಪದಲಿ ಕಟ್ಟಿಕೊಂಡೆ. ಪರವಾಗಿಲ್ಲ ಸುಮಾರಾಗಿದೆ ಎನ್ನುವ ಮಟ್ಟಕ್ಕೆ ಬಂದಿದೆ ಎನಿಸಿದಾಗ ಮಗರಾಯನನ್ನ ಕರೆದೆ…
“ಕಂದಾ ಬಾರೋ…ಇಲ್ಲಿ…”
“ಏನಪ್ಪಾ …” ಅವನಿನ್ನು ವೀಡಿಯೋ ಗೇಮಿನಲ್ಲೆ ನಿರತ. ಪುಣ್ಯಕ್ಕೆ ಟೈಮರನಿಂದಾಗಿ ಆಟ ಅಷ್ಟಕ್ಕೆ ನಿಲ್ಲಿಸಿ ಬಂದ.
“ನಿಂಗೊಂದು ಪದ್ಯದ ಕಥೆ ಹೇಳ್ತಿನಿ, ಬಾ..”
“ಕಥೆನಾ….” ಕಿವಿಗಳು ತುಸು ನಿಮಿರಿದವೆಂದು ಕಾಣುತ್ತೆ…
“ನಿನ್ನ ಹಾಗೆ ಒಬ್ಬ ಮಗ ಹತ್ತು , ಇಪ್ಪತ್ತೂ ಕಲಿಯೋಕೆ ಕಷ್ಟಪಡ್ತಾ ಇದ್ದುದಕ್ಕೆ ಅವನಪ್ಪಾ ಹೇಗೆ ಒಂದು ಪದ್ಯದ ಮೂಲಕ ಹತ್ತರ ಮಗ್ಗಿ ಕಲಿಸಿದಾ ಅಂತಾ”
“ಓಹ್! ಮಗ್ಗಿನಾ…?’ ಆಗಲೆ ಅರ್ಧ ಉತ್ಸಾಹ ಟುಸ್ಸ್….
“ನಾವೇನು ಹಾಗೆ ಕಲಿಯೋದು ಬೇಡ…ಆದರೆ ಆ ಪದ್ಯದ ರೀತಿ ತಮಾಷೆಯಾಗಿದೆ ಅನ್ನಿಸ್ತು..ವಿ ಕಾನ್ ಜಸ್ಟ್ ಎಂಜಾಯ್ ರೀಡಿಂಗ್”
ಕಲಿಯುವ ಡ್ರಿಲ್ ಅಲ್ಲವೆಂದು ತುಸು ನಿರಾಳವಾಯ್ತೇನೊ…..” ಇದೊಂದು ತರ ಆಟದ ಹಾಗೆ….ಮೊದಲ ಸಾಲು ಮಗ ಹೇಳ್ತಾನೆ..ಅದು ಸರಿಯೂ ಆಗಿರಬಹುದು, ತಪ್ಪೂ ಆಗಿರಬಹುದು..ಅವನಿಗೆ ಗೊತ್ತಿರೊ ಹಾಗೆ ಹತ್ತರ ಮಗ್ಗಿ ಹೇಳಿದರೆ ಸರಿ…ಟೆನ್, ಟ್ವೇಂಟಿ, ಥರ್ಟಿ……..ಹಂಡ್ರೆಡ್ ತನಕ ಕನ್ನಡದಲ್ಲಿ ಹೇಳೋದು ಅಷ್ಟೆ. ಇದು ಒಂದು ತರ ಆಟವಿದ್ದ ಹಾಗೆ…. ”
“ಆಮೇಲೆ…?”
“ಅಪ್ಪಾ, ಆ ಸಾಲಿಗೆ ಎರಡನೆ ಸಾಲಲ್ಲಿ ಉತ್ತರ ಹೇಳ್ತಾನೆ, ತಪ್ಪಿದ್ರೆ ತಿದ್ತಾನೆ..ಆಮೇಲೆ ಮಗ ಮತ್ತೆ ಮೂರನೆ ಸಾಲಲ್ಲಿ, ಅಪ್ಪಾ ನಾಲ್ಕನೆ ಸಾಲಲ್ಲಿ…ಹೀಗೆ ಆಟ ಹತ್ತರ ಮಗ್ಗಿ ಮುಗಿಯೊತನಕ ಆಡೋದು…”
ಮಗನ ಮುಖ ನೋಡಿದಾಗಲೆ, ಅರ್ಥವಾಗಲಿಲ್ಲವೆಂದು ಗೊತ್ತಾಯಿತು..ಸರಿಯಾಗಿ ಹೇಳಿಕೊಟ್ಟಾಗ ತಪ್ಪಾಗಿ ಕಲಿಯುವ ಹಾಗೆ, ತಪ್ಪಾಗಿ ಹೇಳಿಕೊಟ್ಟಾಗ ಸರಿಯಾಗಿ ಕಲಿಯಬಹುದೆಂಬ ‘ರೀವರ್ಸ್ ಸೈಕಾಲಜಿ’ ಪ್ರಯೋಗಿಸುತ್ತಿದ್ದೇನೆಂದು ಅವನಿಗೆ ಹೇಗೆ ಅರ್ಥ ಮಾಡಿಸುವುದು?
“….ಅಂದರೆ, ಮೊದಲ ಸಾಲಿನಲ್ಲಿ ಬೇಕೆಂತಲೆ ನೀನು ಹೇಳುತ್ತಿಯಲ್ಲಾ, ಹಾಗೆ ತಪ್ಪು ತಪ್ಪಾಗಿ ಇರುತ್ತದೆ. ಎರಡನೆ ಸಾಲಿನಲ್ಲಿ ಅಪ್ಪ ಅದನ್ನು ತಿದ್ದಿ ಹೇಳಿಕೊಡುವ ಹಾಗೆ…”
“ಹಂಗೂ ಕಲೀದಿದ್ರೆ…”
“ತೊಂದರೆಯೇನೂ ಇಲ್ಲಾ…ಅವರು ಅದೆ ಆಟ ಎಷ್ಟು ಸಾರಿ ಬೇಕಾದ್ರೂ ಆಡ್ಬೋದು, ಯಾವಾಗ ಬೇಕಾದ್ರೂ ಆಡಬಹುದು..ನೋ ವಿನ್ನರು, ನೋ ಲೂಸರು….ಜಸ್ಟ್ ಪ್ಲೇ..”
ಅರೆ ಮನಸಿನಿಂದಲೆ ತಲೆಯಾಡಿಸಿದ ಮಗ….ಕಬ್ಬಿಣ ಕಾದಿದೆ, ಈಗಲೆ ಹುಷಾರಾಗಿ ಬಡಿದುಬಿಡಬೇಕೆಂದು ಆಲೋಚಿಸಿ, ” ಮೊದಲ ಸಾರಿ ಅಪ್ಪಾ, ಮಗ ಇಬ್ಬರದೂ ನಾನೆ ಓದ್ತೀನಿ…ನೀನು ಮೊದಲ ಸಾಲು ಮಾತ್ರ ರಿಪೀಟ್ ಮಾಡು…ಆಮೇಲೆ ನೀನು ಎಲ್ಲಾ ಸಾಲು ಕಲಿತರೆ ಇಬ್ಬರೂ ಸೇರಿ ಆಡಬಹುದು…ತಪ್ಪಾಗಿ ಕಲಿತರೂ ಓಕೆ..ಅಪ್ಪಾ ಮುಂದಿನ ಸಾಲಲ್ಲಿ ಅದನ್ನು ತಿದ್ದ ಬೇಕು…ಒಂದು ವೇಳೆ ನೀನೂ ಪೂರ್ತಿ ಕಲಿತರೆ, ನೀನೆ ಅಪ್ಪನಾಗಿ ನಾನು ಅಥವ ಬೇರೆ ಯಾರಾದರೂ ಮಗನಾಗಬಹುದು…”
ಅವನೂ ಅಪ್ಪನಾಗುವ ಸಾಧ್ಯತೆ ಕೊಂಚ ಸ್ವಲ್ಪ ‘ಥ್ರಿಲ್ಲ್’ಅನಿಸಿರಬೇಕು…ಆಟದ ಮೊದಲಂಕ ಶುರುವಾಯ್ತು….ಮೊದಲ ಸಾರಿಗೆ ನಾನು ಆರಂಭಿಸಿದೆ, ಪೂರ್ಣವಾಗಿ ಹೇಳಿ ಕೊಡುವತ್ತ:
ಅಪ್ಪಾ: ಹತ್ತೊಂದಲ ‘ಹತ್ತು’
ಮಗ : ಹತ್ತೊಂದಲ ಹತ್ತು
ಅಪ್ಪ: ಬಾಯ್ಬಿಟ್ಟಾ ಮಗ ಸಕ್ಕತ್ತು!
ಮಗ: ಬಾಯ್ಬಿಟ್ಟಾ ಮಗ ಸಕ್ಕತ್ತು!
“ನೋಡಿದ್ಯಾ, ಮೊದಲನೆ ಸಾಲು ನಿನ್ನ ತರ ಅವನು ಚೆನ್ನಾಗಿ ಕಲಿತುಕೊಂಡುಬಿಟ್ಟಿದಾನೆ..”
“ಹೂಂ…”
ಅಪ್ಪ: ಹತ್ತೆರಡಲ ಎರಡತ್ತು?
ಮಗ: ಹತ್ತೆರಡಲ ಎರಡತ್ತೂ?
ಅಪ್ಪ: ಎರ’ಡ’ಲ್ಲಾ ಬೆ’ಪ್ಪ’ ‘ಇಪ್ಪತ್ತು!’
ಮಗ: ಎರಡಲ್ಲಾ ಬೆಪ್ಪ ಇಪ್ಪತ್ತು..!
“ನೋಡು..’ಡ’ ಬದಲು ‘ಪ್ಪ’ ಆಗೋಯ್ತು….”
” ಅಪ್ಪಾ..’ಅಪ್ಪ-ಬೆಪ್ಪ’ ರೈಮಿಂಗ್ ವರ್ಡ್ಸು…ಜ್ಞಾಪಕ ಇಟ್ಕೊಳ್ಳೊದು ಸುಲಭ …”
“ಸುಮ್ಮನಿರೊ ತರ್ಲೆ ಮಗನೆ…ಇವೆಲ್ಲಾ ಬೇಗಾ ಗೊತ್ತಾಗುತ್ತೆ….”
ಅಪ್ಪ: ಮೂರ್ಹತ್ತಲ ಮುಪ್ಪತ್ತು?
ಮಗ: ಮೂರ್ಹತ್ತಲ ಮುಪ್ಪತ್ತು..?
ಅಪ್ಪ: ಅ’ಪ್ಪ’ನ ಬಿಡ’ವ್ವ’ ‘ಮೂವ್ವತ್ತು!’
ಮಗ: ಅಪ್ಪನ ಬಿಡವ್ವ ಮೂವ್ವತ್ತು….!
” ಅಪ್ಪಾ, ‘ತಿಂಗಳ ಮುವ್ವತ್ ದಿನಾನು ಅಪ್ಪನ ಬೈದಿದ್ದು ಸಾಕು ಬಿಡವ್ವಾ’ ಅಂತ ಜ್ಞಾಪಕ ಇಟ್ಕೊಳ್ಳಲ?”
ನಾನು ಕೆಂಗಣ್ಣು ತೆರೆದು ಗುರಾಯಿಸಿದೆ, ತುದಿಗಣ್ಣಲ್ಲೆ ಅಡುಗೆ ಮನೆಯತ್ತ ನೋಡುತ್ತ…..
ಅಪ್ಪ: ನಾಲ್ಕು ಹತ್ತಲ ನಾ’ಕ್ವ’ತ್ತು?
ಮಗ: ನಾಲ್ಕು ಹತ್ತಲ ನಾಕ್ವತ್ತು?
ಅಪ್ಪ: ‘ಲ-ಕ್ವ’ ಬದಲಾಯಿಸು ‘ನಲವತ್ತು!’
ಮಗ: ‘ಲ-ಕ್ವ’ ಬದಲಾಯಿಸು ನಲವತ್ತು..!
“ಮೊನ್ನೆ ಅಮ್ಮ ಹೇಳ್ತು, ‘ಗೋಪಿ ಮಾಮನಿಗೆ, ನಲವತ್ತಕ್ಕೆ ಲಕ್ವ ಹೊಡೆದುಬಿಡ್ತಂತೆ’ ಅಂತ..ಆ ಲಕ್ವ ಈ ಲ-ಕ್ವ ಒಂದೇನಾಪ್ಪ?”
“ಮುಂಡೆದೆ ಆ ಲಕ್ವ ‘ನೌನು’ (ನಾಮಪದ), ಈ ‘ಲ-ಕ್ವ’ ಬರಿ ‘ಲೆಟರ್ಸ್ – ಅಕ್ಷರಮಾತ್ರಾಗಣ…”
” ಮುಂಡೇದೆ ಅಂದ್ರೆ ಇಂಗ್ಲೀಷಿನಲ್ಲಿ…..”
“ಮುಚ್ಚೊ ಬಾಯಿ…ಮುಂಡೆದುನ್ ತಂದು…ಹೇಳೊ ಮುಂದಿಂದು”
ಅಪ್ಪ: ಐದು ಹತ್ತಲ ಐದ್-ಹತ್ತು?
ಮಗ: ಐದು ಹತ್ತಲ ಐದು-ಹತ್ತೂ..?
ಅಪ್ಪ: ವ’ದು’ವಾಗಲಿ ‘ವ’ರ ‘ಐವತ್ತು’!
ಮಗ: ವಧುವಾಗಲಿ ವರ ಐವತ್ತು..!
“ಅಪ್ಪ ವಧು ವರ ಅಂದ್ರೇನು..?”
“ಮದುವೆ ಜೋಡಿಗೆ ವಧು-ವರ ಅಂತಾರೆ ‘ಬ್ರೈಡ್ – ಬ್ರೈಡ್ ಗ್ರೂಮ್’..”
“ಸರಿ ಸರಿ ..ಅಮ್ಮ ಪೇಪರು ಓದ್ತಾ ಹೇಳ್ತಾ ಇದ್ಲು ‘ವಧುವಿಗೆ ಇಪ್ಪತ್ತು, ವರನಿಗೆ ಐವತ್ತು’..ಅದೆ ಕ್ಲೂ ಆಗಿಟ್ಕೊತೀನಿ ಬಿಡು…”
ನಾನು ಏನು ಮಾತಾಡದೆ ಮುಂದಿನ ಸಾಲಿಗೆ ನಡೆದೆ….
ಅಪ್ಪ: ಆರ ಹತ್ತಲ ಅರವತ್ತು?
ಮಗ: ಆರ ಹತ್ತಲ ಅರವತ್ತು..?
ಅಪ್ಪ: ಭೇಷೋ ಮಗನೆ ಅರವತ್ತು!
ಮಗ: ಭೇಷೋ ಮಗನೆ ಅರವತ್ತು!
“ನೋಡೂ, ಇದೂ ಸರಿಯಾಗಿ ಹೇಳಿಬಿಟ್ಟಾ….” ಮಗನನ್ನ ಹುರಿದುಂಬಿಸುತ್ತ ಮುಂದುವರೆಸಿದೆ
ಅಪ್ಪ: ಏಳು ಹತ್ತಲ ಏಳವತ್ತು?
ಮಗ: ಏಳು ಹತ್ತಲ ಏಳವತ್ತು?
ಅಪ್ಪ: ಎಡವಟ್ಟನೆ ಅ’ಳಿ’ಸು, ‘ಎ’ಪ್ಪ’ತ್ತು!’
ಮಗ: ಎಡವಟ್ಟನೆ ಅಳಿಸು, ಎಪ್ಪತ್ತು!
“ಅಪ್ಪಾ..ಅಪ್ಪಾ..ಅಳಿಸು ಬದಲು ‘ಎಳಸು’ ಹಾಕೋಣಪ್ಪಾ?”
“ಯಾಕೊ…?”
” ನೀನು ಯಾವಾಗ್ಲೂ ಅಮ್ಮಂಗೆ ‘ನೀನಿನ್ನು ಎಳಸು, ನೀನಿನ್ನು ಎಳಸು’ ಅಂತ ಬೈತಿರ್ತೀಯಲ್ಲಾ, ಆ ಪದ ಚೆನ್ನಾಗಿ ನೆನಪಿರುತ್ತೆ..ಮರೆತರೂ ನೀ ಬೈದಾಗ ಜ್ಞಾಪಕಕ್ಕೆ ಬಂದುಬಿಡುತ್ತೆ…”
ಅಪ್ಪ: ಎಂಟತ್ತಲಿ ಹೌದಾ ಎಂಟತ್ತು ?
ಮಗ: ಎಂಟತ್ತಲಿ ಹೌದಾ ಎಂಟತ್ತು ?
ಅಪ್ಪ: ಗಂ’ಟಿ’ರೆ ನೆಂಟ ‘ಬ’ರುವ ಎಂಬತ್ತು!
ಮಗ: ಗಂಟಿರೆ ನೆಂಟ ಬರುವ ಎಂಬತ್ತು!
“ಅಪ್ಪಾ..ಗಂಟು ಅಂದ್ರೆ ‘ನಾಟ್’ ಅಲ್ವಾ…”
“ಇದು ಆ ‘ನಾಟ್’ ಅಲ್ಲಮ್ಮ..ಇದು ಕಾಸಿನ ಗಂಟು… ಈಗೆಲ್ಲಾ ಬ್ಯಾಂಕಲ್ ಇಡ್ತಾರೆ, ಮನೆಲಲ್ಲಾ…”
“ಅದಕ್ಕೇನಾ ನೀ ಬಯ್ಯೋದು ಅಮ್ಮನ, ನಿಮ್ಮ ಕಡೆ ನೆಂಟರೆಲ್ಲಾ ಗಂಟು ಹೊಡೆಯೋಕೆ ಬರೋರು ಅಂತ? ಬ್ಯಾಂಕಲ್ಲಿರೊ ಗಂಟು ಹೆಂಗ್ಹೊಡಿತಾರಪ್ಪ?”
“ಮಗಾ…..”
“ಆಯ್ತಪ್ಪ….ಈಗ ಒಂಭತ್ತನೆ ಮಗ್ಗಿ….”
ಅಪ್ಪ: ಒಂಭತ್ತ ಹತ್ತಲಿ ಒಂಬೊಂಭತ್ತು?
ಮಗ: ಒಂಭತ್ತ ಹತ್ತಲಿ ಒಂಬೊಂಭತ್ತು?
ಅಪ್ಪ: ತಿರುಗಿಸಿ ತೊಡಿಸು’ತ’ ಬರಿ ತೊಂಬತ್ತು!
ಮಗ: ತಿರುಗಿಸಿ ತೊಡಿಸು’ತ’ ಬರಿ ತೊಂಬತ್ತು!
“ಅಪ್ಪಾ..ಇದು ಮೋಸ…ಹೇಗಪ್ಪಾ ‘ಒ’ ಇದ್ದುದ್ದು ‘ತೊ’ ಆಗೋಯ್ತು…?
” ‘ತೊ’ ನಲ್ಲೂ ‘ತ’ + ‘ಒ’ = ‘ತೊ’ ಇದೆಯಲ್ಲಾ ಮಗನೆ?”
“ಒ- ಸರಿಯಪ್ಪ, ತ- ಯಾಕೆ ಬೇಕು?”
‘ಒತ್ಲಾ’ ಪದದ ಛೇಧನ ರೂಪ ಅಂತ ಬಾಯಿಗೆ ಬಂದಿದ್ದನ್ನ ತಡೆದು, “‘ಒ’ ಕಾರಕ್ಕೆ, ‘ತೊ’ಕಾರಂ ಸುಂದರಂ ಅಂತ ಯಾರೊ ಮಹಾನುಭಾವ ಹೇಳಿಬಿಟ್ಟಿದಾನಪ್ಪ..ಅದಕ್ಕೆ ಇರಬೇಕು..” (ಸದ್ಯ , ಯಾರು ಆ ಮಹಾನುಭಾವ ಅಂತ ಕೇಳಲಿಲ್ಲ..ನಾನೆ ಅಂತ ಹೇಳಿದ್ದರೆ ಏನಿರುತ್ತಿತ್ತೊ ಅವನ ಪ್ರತಿಕ್ರಿಯೆ ಗೊತ್ತಿಲ್ಲ!)
ಅಪ್ಪ: ಹತ್ತು ಹತ್ತಲ ಹತ್ತತ್ತು ಖರೆ?
ಮಗ: ಹತ್ತು ಹತ್ತಲ ಹತ್ತತ್ತು ಖರೆ?
ಅಪ್ಪ: ಹತ್ತಿಳಿದಾಯ್ತು, ಬರೆಯಣ್ಣ ‘ನೂರೆ!’
ಮಗ: ಹತ್ತಿಳಿದಾಯ್ತು, ಬರೆಯಣ್ಣ ನೂರೆ!
“ನೋಡಿದ್ಯಾ ಮಗನೆ, ಆಗಲೆ ನೂರಕ್ಕೆ ಬಂದ್ಬಿಟ್ವಿ…ವನ್ ಹಂಡ್ರೆಡ್ ”
” ಸೆಂಚುರಿ ಆಗೋಯ್ತಲ್ಲಪ್ಪ..ತೇಂಡೂಲ್ಕರಂದು”.. ಟಿವಿ ಕಡೆ ಗಮನ ಕೊಡುತ್ತ ಮಗನ ಉವಾಚ…
ಹಾಳಾಯ್ತು ಒಟ್ನಲ್ಲಿ ನೂರಾಯ್ತಲ್ಲ ಅನ್ನುವಾಗಲೆ, ” ಹತ್ತು ನೂರಿಗೇನನ್ನಬೇಕಪ್ಪ”ಅಂದಾ. ಸರಿ, ಅದು ಒಂದು ಸೇರಿಸಿಬಿಡುವ ಅನ್ನುತ್ತ ಮುಂದುವರೆಸಿದೆ.
ಅಪ್ಪ: ನೂರೆ ಭಾರ, ಹತ್ನೂರಲ ಹತ್ನೂರ?
ಮಗ: ನೂರೆ ಭಾರ, ಹತ್ನೂರಲ ಹತ್ನೂರ?
ಅಪ್ಪ: ಬಿಟ್ಟಾಕು ನೂರ, ಹಿಡಿದಾಕು ‘ಸಾವಿರ!’
ಮಗ: ಬಿಟ್ಟಾಕು ನೂರ, ಹಿಡಿದಾಕು ಸಾವಿರ!
“ನೋಡಿದ್ಯಾ ಮಗನೆ, ಬರಿ ನೂರೇನು..ಸಾವಿರಾನು ಕಲಿತುಬಿಟ್ಟೆ..ಇನ್ನೂ ಏನಿದ್ರೂ ಮುಂದೆ ಹತ್ತು ಸಾವಿರ, ಲಕ್ಷ, ದಶಲಕ್ಷ, ಕೋಟಿ…..ಹಿಂಗೆ ಒಂದೆರಡು ದಿನ ನಾವಾಟ ಆಡಿಬಿಟ್ರೆ ಸುಲಭವಾಗಿ ಬಂದುಬಿಡುತ್ತೆ ಎಲ್ಲಾ, ಏನಂತಿಯಾ?”
” ಆಟ ಚೆನ್ನಾಗೇನೊ ಇತ್ತು ಅಪ್ಪ…..ಆದ್ರೆ ಕೊನೆಲಿ ಇನ್ನೊಂದೆ ಪದ್ಯ ಮಿಸ್ಸಿಂಗು..”
“ಯಾವುದಪ್ಪ ಅದು ಗುರುವೆ..”
“ನಾನೀಗ ಹೇಳಿಕೊಡ್ತೀನಿ…ಹಾಗೆ ಹೇಳಪ್ಪ…ಆಮೇಲೆ ಜತೆಗೆ ಸೇರಿಸಿಬಿಡು…”
“ಸರಿ ಹೇಳು ನೋಡೋಣ..?” – ಏನು ಹೇಳುತ್ತಾನೊ, ಕುತೂಹಲ, ತವಕ ನನಗೆ……
ಮಗ: ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ….
ಅಪ್ಪ: ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ
ನನಗೊ ಮಗನು ಕವಿಯಾಗ್ತಾ ಇದಾನೆಂಬ ಸಂತಸ, ಹೆಮ್ಮೆ…ಏನು ಹೇಳಲಿದ್ದಾನೊ ಕುತೂಹಲ…
ಮಗ: ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ!
ಅಪ್ಪ: ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ!
‘ಟುಸ್ಸೆಂದು’ ಕುಸಿದಿಂಗಿದ ಬಲೂನಿನಂತಾಯ್ತು ಮನಸು…ಇಷ್ಟೊತ್ತಿನ ಪದ್ಯವನೆಲ್ಲಾ ಒಂದೆ ಸಾಲಿನಲ್ಲಿ ನಿವಾಳಿಸಿ, ತೊಳೆದುಬಿಟ್ಟಿದ್ದಾ ಮಗ. ಪೆಚ್ಚಾಗಿ ಮಾತು ಬರದೆ ನಿಂತ ಅಪ್ಪನ ಬೆಪ್ಪು ಮುಖ ನೋಡೆನನಿಸಿತೊ ಏನೊ – “ಸುಮ್ಮನೆ ತಮಾಷೆ ಮಾಡ್ದೆ ಅಪ್ಪಾ, ಪದ್ಯ ಚೆನ್ನಾಗಿತ್ತು..ದಿನಾ ಕಲಿಸಾಟ ಆಡೋಣ, ಬೇಗ ಕಲಿತುಬಿಡಬಹುದು…”
ನಿಜಾವಾಗಲೂ ಹೇಳಿದನೊ, ನನ್ನ ಮುಖ ನೋಡಿ ಹಾಗಂದನೊ, ಒಟ್ಟಿನಲ್ಲಿ ಈ ಪದ್ಯದ ಕಲಿಯುವಾಟ ಬೇರೇನೂ ಕೆಲಸವಿಲ್ಲದೆ ಬೋರಾದಾಗೆಲ್ಲ ನಡೆಯುತ್ತಿತ್ತು. ಕೆಲ ದಿನಗಳಾದ ಮೇಲೆ, ಇನ್ಯಾರಿಗೊ ಅದೆ ಆಟ ಹೇಳಿಕೊಡುತ್ತಿದ್ದ ಮಗನನ್ನು ಕಂಡಾಗ – ಪದ್ಯ ಅರ್ಥವಾಯ್ತೊ ಬಿಟ್ಟಿತೊ, ಹಾಡನ್ನು ಕಲಿತಂತೆ ಕಲಿತುಬಿಟ್ಟಿದ್ದಾನಲ್ಲ ಸಾಕು, ಎಂದು ಸಮಾಧಾನವಾಯ್ತು. ಯಾರಿಗೆ ಗೊತ್ತು, ಬಹುಶಃ, ಅವನೆ ಹೇಳಿದಂತೆ ಪದ್ಯವನ್ನೆ ಅರ್ಥವಾಗಲಿ, ಬಿಡಲಿ – ಉರು ಹೊಡೆದುಬಿಟ್ಟಿರಬೇಕು!
ಹೇಗಾದರೂ ಸರಿ, ಹತ್ತರ ಮಗ್ಗಿ ಸರಿಯಾಗಿ ಹೇಳುವುದನ್ನು ಕಲಿತನಲ್ಲ ಎಂದು ನಾನು ನಿರಾಳವಾದೆ. ಅಲ್ಲಿಂದ ಮುಂದೆ ಅವನು ನಲವತ್ತೊಂಬತ್ತಕ್ಕೆ ಬಂದು ಇಪ್ಪತ್ತಕ್ಕೆ ತಿರುಗಿ ಹೋಗುವುದನ್ನು ಮತ್ತೆಂದು ನೋಡದಿದ್ದ ಕಾರಣ (ಹಾಗೂ ಸರಿಯಾಗೆ ನೂರರ ತನಕ ತಲುಪುತ್ತಿರುವುದರಿಂದ) , ಈ ಪದ್ಯದ ದೆಸೆಯಿಂದಲೊ ಅಥವಾ ಅದನ್ನು ಕಲಿಯಬೇಕಲ್ಲಾ ಎಂಬ ಭಯದಿಂದಲೊ – ಒಟ್ಟಾರೆ ಈ ಪದ್ಯಾಟ ವಿಧಾನದ ಪ್ರೇರಣೆಯಿಂದ ಕಲಿತುಕೊಂಡ ಎಂದೆಳಲು ಅಡ್ಡಿಯಿಲ್ಲಾ ಎನ್ನಬಹುದು.
————————————————————————————————————————————
– ನಾಗೇಶ ಮೈಸೂರು, ಸಿಂಗಾಪುರದಿಂದ (01.05.2013)
(WeBlog site: nageshamysore.wordpress.com )
———————————————————————————————————————————–
ತಡೆರಹಿತ ಒಟ್ಟಾರೆ ಅವಗಾಹನೆಗೆ ಅನುವಾಗಲೆಂದು ಆ ಪದ್ಯಾಟದ ಸಾಲುಗಳನ್ನೆಲ್ಲಾ ಇಲ್ಲಿ ಒಟ್ಟುಗೂಡಿಸಿ ಕೊಟ್ಟಿದ್ದೇನೆ. ನಿಮ್ಮ ಮನೆಯಲ್ಲಿಯೂ ಇದರ ಅವಶ್ಯಕತೆಯಿದ್ದರೆ ಒಮ್ಮೆ ಬಳಸಿ ನೋಡಿ….ಉಪಯೋಗವಾದರೂ ಆಗಬಹುದು…! 🙂
————————————————————————————————————————————
ಹತ್ತತ್ತಲ ಹತ್ನೂರು!
————————————————————————————————————————————
ಹತ್ತೊಂದಲ ‘ಹತ್ತು’
ಬಾಯ್ಬಿಟ್ಟಾ ಮಗ ಸಕ್ಕತ್ತು!
ಹತ್ತೆರಡಲ ಎರಡತ್ತು?
ಎರಡಲ್ಲಾ ಬೆಪ್ಪ ‘ಇಪ್ಪತ್ತು!’
ಮೂರ್ಹತ್ತಲ ಮುಪ್ಪತ್ತು?
ಅಪ್ಪನ ಬಿಡವ್ವ ‘ಮೂವ್ವತ್ತು!’
ನಾಲ್ಕು ಹತ್ತಲ ನಾಕ್ವತ್ತು?
‘ಲ-ಕ್ವ’ ಬದಲಾಯಿಸು ‘ನಲವತ್ತು!’
ಐದ ಹತ್ತಲ ಐದ್-ಹತ್ತು?
ವ’ದು’ವಾಗಲಿ ‘ವ’ರ ‘ಐವತ್ತು’!
ಆರ ಹತ್ತಲ ಅರವತ್ತು?
ಭೇಷ್ ಮಗನೆ, ಸರಿ ಅರವತ್ತು!
ಏಳು ಹತ್ತಲ ಏಳವತ್ತು?
ಎಡವಟ್ಟನೆ ಹಾಕು ಎಪ್ಪತ್ತು!
ಎಂಟತ್ತಲಿ ಹೌದಾ ಎಂಟತ್ತು ?
ಗಂಟಿರೆ ನೆಂಟ ಬರುವ ಎಂಬತ್ತು!
ಒಂಭತ್ತ ಹತ್ತಲಿ ಒಂಬೊಂಭತ್ತು?
ತಿರುಗಿಸಿ ತೊಡಿಸು’ತ’ ಬರಿ ತೊಂಬತ್ತು!
ಹತ್ತು ಹತ್ತಲ ಹತ್ತತ್ತು ಖರೆ?
ಹತ್ತಿಳಿದಾಯ್ತು, ಬರೆಯಣ್ಣ ನೂರೆ!
ನೂರೆ ಭಾರ, ಹತ್ನೂರಲ ಹತ್ನೂರ?
ಬಿಟ್ಟಾಕು ನೂರ, ಹಿಡಿದಾಕು ಸಾವಿರ!
ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ
ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ!
My son was saying English numbers as below –
2 and 2 – twenty two, 3and 3 – thirty three, so on till 9and 9 – ninety nine and after that 10 and 10 Tenty ten, 11 and 11 – Leventy leven, 12 and 12 twelty twelve !
LikeLike
ತುಂಬಾ ಸ್ವಾರಸ್ಯ ಕರವಾಗಿತ್ತು ನಿಮ್ಮ್ ಮಗನಿಗೆ ಮಗ್ಗಿ ಕಲಿಸುವಾಟ . ಲೇಖನ ಮುಗುಳ್ ನಗೆಯಿಂದ ಒದ್ಸಿ ಕೊಂಡು ಹೋಯಿತು 🙂
LikeLiked by 1 person
ನಮಸ್ಕಾರ ಆರತಿಯವರೆ. ಮಾಮೂಲಿನ ಪರಿಸರದಲ್ಲೆ ಕಲಿಕೆ ಕಷ್ಟ. ಇನ್ನು ಪರದೇಶದಲ್ಲಿದ್ದಾಗಂತು ಕೇಳಲೆ ಬೇಡಿ; ಮಗ್ಗಿಯಾಗಲಿ, ಕನ್ನಡವಾಗಲಿ – ಕಲಿಸುವ ಕಷ್ಟ ಏನೂಂತ ಹೇಳೋದು ? ಸುತ್ತಲಿನ ಪೂರಕ ವಾತಾವರಣವಿಲ್ಲದೆ ಹೇಗೊ ಏನೊ ಕಲಿಸ ಹೊರಟಾಗ ಒಂದೆಡೆ ನಗು, ಮತ್ತೊಂದೆಡೆ ಪರದಾಟ; ಅದೇ ರೀತಿ ಈ ತರಹದ ಲಘು ಹಾಸ್ಯದ ಬರಹಕ್ಕೆ ಸರಕೂ ಹೌದು. ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು. ಅಂದಹಾಗೆ ಲೇಖನಗಳ ಸಂಖ್ಯೆ 00019, 00094, 00116 (ಐಗಳ ಪುರಾಣ ಭಾಗ 1,2,3), ಇದೇ ತರದ ಲಹರಿಯ ಕಥಾನಕಗಳು. ಓದಿ ನೋಡಿ, ಇಷ್ಟವಾಗಬಹುದು !
LikeLike
Bhavanaji, That is amazing…looks like more or less all of us have nearly similar experience with our children. In case of your son also, 10 and 10 Tenty ten, 11and 11 – Leventy leven….right or wrong, but it looks so logical!
LikeLike