00108. ಮಹಾಲಯ ಅಮಾವಾಸೆ (ಮಹಾನವಮಿ) (01)

ನಾಡಹಬ್ಬ ನವರಾತ್ರಿಯ ಆಗಮನದೊಂದಿಗೆ ಸಾಲು ಸಾಲಾಗಿ, ಹಬ್ಬಗಳ ಸಾಲು ಒಂದರ ಹಿಂದೆ ಒಂದರಂತೆ ಬರುವ ಸಡಗರ. ಇನ್ನೇನು ನವರಾತ್ರಿಯ ಕೊನೆಯ ತಿರುವಿನಲ್ಲೆ ‘ಹರಿ ರಾಯ ಹಾಜಿ (ನಮ್ಮ ಬಕ್ರೀದ್)’ ಕಾಣಿಸುತ್ತಿದೆ. ಸಿಂಗಪುರದಲ್ಲಿ ಎಂದಿನಂತೆ ತಿಂಗಳಿಗೂ ಮುನ್ನದ ದೀಪಾವಳಿ ದೀಪಾಲಂಕಾರ ಆರಂಭವಾಗಿದೆ. ಆದರೂ ನವರಾತ್ರಿಯ ನಾಡಹಬ್ಬ ಒಂದು ರೀತಿಯ ವಿಶೇಷ ಪುಳಕದ್ದು. ಒಂದೆಡೆ, ತೀರಾ ಸಾಂಪ್ರದಾಯಿಕ ಹಾಗೂ ವೈಯಕ್ತಿಕ ಮಟ್ಟದ್ದೆನ್ನಬಹುದಾದ ಹಾಗೂ ಆಚರಣೆಯಲ್ಲಿಯು ಬಹುಶಃ ಪ್ರತಿಯೊಬ್ಬರ ಸ್ವಂತ ಸಂಪ್ರದಾಯ, ಆಚರಣೆಗಳ ಪ್ರಭಾವಕ್ಕೊಳಗಾದ ‘ಮಹಾಲಯ ಅಮಾವಾಸೆ’ ಯಿಂದ ಆರಂಭವಾದರೆ, ಮುಕ್ತಾಯದ ತುದಿಯಲ್ಲಿ ತೀರಾ ಸಮೂಹ ಪ್ರಜ್ಞೆಯಲ್ಲಿ ಆಚರಿಸಲ್ಪಡುವ ಆಯುಧ ಪೂಜೆ ಹಾಗು ವಿಜಯದಶಮಿ (ದಸರ).

ಮಹಾಲಯ ಅಮಾವಾಸೆಯ ಹಿರಿಯರ ಪೂಜೆಯ ಆಚರಣೆ, ಮಾಡಬೇಕಾದ ಭಕ್ಷ್ಯ ಭೋಜ್ಯಗಳ ಪಟ್ಟಿ, ಮಾಡಿ ಎಡೆಯಿಟ್ಟು ಕಾಕರಾಜನ ಕೃಪದೃಷ್ಟಿಗೆ ಬೀಳಲೆಂದು ಕಾಯುವ ಹುನ್ನಾರ, ತಡವಾದರೆ ಅಪಚಾರವಾಯ್ತೆಂದು ಮತ್ತೆ ಮಂಗಳಾರತಿ ಎತ್ತಿ ಕೋಪಿಸದೆ ಬಂದು ಎಡೆಯೆತ್ತಲು ಬೇಡಿಕೊಳ್ಳುವ ಪೂಜೆ, ಆ ಹಬ್ಬದ ಸಂಧರ್ಭವಾಗಿ ಹಿರಿಯವನ ಮನೆಯಲೆಲ್ಲರೂ ಸಾಂಪ್ರದಾಯಿಕವಾಗಿ ಸೇರುತ್ತಿದ್ದ ಗಳಿಗೆ – ಎಲ್ಲವೂ ನೆನಪಾಗುತ್ತಿದೆ. ಎಷ್ಟು ಇನ್ನು ಹಾಗೆ ಉಳಿದು ಮುಂದುವರೆಯುತ್ತಿದೆಯೊ, ಉಳಿದಿದೆಯೊ, ಉಳಿಯಲಿದೆಯೊ ಎನ್ನುವ ಆತಂಕಕ್ಕೂ ‘ಕಾಲಾಯ ತಸ್ಮೈ ನಮಃ’ ಅನ್ನುತ್ತಲೆ ನವರಾತ್ರಿಯ ಮತ್ತೊಂದು ತುದಿಯಲಿರುವ ಆಯುಧ ಪೂಜೆಯ ಅಲಂಕರಣ, ಸಂಭ್ರಮ, ಆಯುಧಗಳ ‘ಪೂಜೆ’, ದಸರ ಮೆರವಣಿಗೆ ಉತ್ಸವ, ಅಚರಣೆ ಮತ್ತೆ ಈ ಸಿಂಗಾಪುರದ ಬೆಂಗಾಳಿಗಳು ಆಚರಿಸುವ ದುರ್ಗಾಪೂಜೆ, ಮತ್ತಿತರ ಭಾರತೀಯರ ‘ದಾಂಡಿಯಾ’ ನೃತ್ಯ – ಎಲ್ಲವೂ ಕಣ್ಮುಂದೆ ಬಂದು ನಿಲ್ಲುತ್ತಿದೆ. ಆಯುಧ ಪೂಜೆಯ ಮೈಸೂರಿನ ಬೀದಿಗಳಲ್ಲಿ ಅಕ್ಕಪಕ್ಕದ ಜನ ಊಟಕ್ಕೆಳೆದೊಯ್ಯುತ್ತಿದ್ದ ತುಣುಕುಗಳು ಬಂದು ನಿಲ್ಲುತ್ತಿವೆ. ಇವೆಲ್ಲಾ ಕಾಡಿದ್ದ ಹೊತ್ತಲ್ಲಿ ಬರೆದಿದ್ದ (ಒಂದು ವರ್ಷದಿಂದೀಚೆಗೆ) ನಾಲ್ಕಾರು ಕವನಗಳನ್ನು ಸಂಸ್ಕರಿಸಿ, ಒಗ್ಗೂಡಿಸಿ ಒಂದು ಜೋಡಿ ಕವನದ ರೂಪದಲ್ಲಿ ಪ್ರಕಟಿಸುತ್ತಿದ್ದೇನೆ – ಕೆಲವು ನೆನುಪಿನ ಪಲುಕಿಗೆ ಜತೆಯಾಗಲೆಂದು. ಹಾಗೆಯೆ, ಎಲ್ಲ ಸಂಪದಿಗರಿಗೂ, ನಾಡಿನ ಜನತೆಗೂ, ಸಕಲ ವಿಶ್ವ ಕನ್ನಡಿಗರಿಗೂ ನವರಾತ್ರಿ ನಾಡಹಬ್ಬದ, ಆಯುಧಪೂಜೆ, ವಿಜಯದಶಮಿಯ, ಹಾರ್ದಿಕ ಶುಭಾಕಾಮನೆಗಳನ್ನು ಕೋರುವ ರೂಪದಲ್ಲಿ.

ಉದ್ದದ ದೃಷ್ಟಿಯಿಂದ ಎರಡೂ ಕವನವನ್ನು ಬೇರೆಯಾಗಿ ಪ್ರಕಟಿಸುತ್ತಿದ್ದೇನೆ, ಅದರೆ ಎರಡರಲ್ಲೂ ಒಂದೆ ವಿವರಣೆ ಉಳಿಸಿಕೊಂಡಿದ್ದೇನೆ.

– ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

ಮಹಾಲಯ ಅಮಾವಾಸೆ (ಮಹಾನವಮಿ) (01)
__________________________________

ನವರಾತ್ರಿ ಆರಂಭ ಹೊತ್ತು, ಅಮಾವಾಸೆಯ ಸವಲತ್ತು
ಮಹಾಲಯ ಅಮಾವಾಸೆ, ಪಿತೃಪಕ್ಷ ಹಿರೀಕರ ನೆನೆಸೆ ||

ಸಾಲ್ಹಬ್ಬಗಳ ಸರದಿ ಶುರು, ಮಾಲಯ ಅಮಾಸೆ ತಾರು
ಬಗೆಭಕ್ಷ್ಯ ಭೋಜ್ಯಕ್ಕೆ ತವರು, ಪಿತೃತೃಪ್ತಿಯ ಕಾರುಬಾರು ||

ಬಾಳೆಲೆ ಬಾಳೆಕಂದಿನ ಜತೆ, ಹರಡಿದ ಅಕ್ಕಿಕಾಳು ಕೂತೆ
ಮೇಲ್ಕಲಶ ಒಳಪವಿತ್ರ ಜಲ, ಎಲೆ ಸಿಂಗರಿಸಿತೆ ಬಾಯಾಳ ||

ಭಂಡಾರ ವಿಭೂತಿ ಹಚ್ಚುತ, ಹೊಚ ್ಚಹೊಸ ಬಟ್ಟೆಯಿಕ್ಕುತ
ಪೂಜೆಗೆ ಸೇರಿ ಹಿರಿಯವನ, ಮನೆಯೆಲ್ಲರ ದಂಡಾಗಮನ ||

ತರಕಾರಿಗಳನ್ಹೆಚ್ಚುತ ಸಮನ, ಯಾವುದು ಸರಿಬೆಸ ಗಮನ
ತಾಳದ ಪಲ್ಯ ಸರಿ ಸರಿಗಮ, ನವವಿರದಿದ್ದರೆ ಐದಕೆ ಜಮ ||

ಉದ್ದಿನೊಡೆ ಅಂಬೊಡೆ ಜಾಡೆ, ಸರ್ಜಪ್ಪಕಜ್ಜಾಯಸುಕ್ಕಿನುಂಡೆ
ಸಾರನ್ನ ಸಾಂಬಾರಿನ ಕೊಳಗ, ಪಾಯಸಕೆ ಹಂಡೆಯ ಬಳಗ ||

ಏನೆಲ್ಲ ಸಿದ್ದತೆಗೆ ಅಡಿಗೆ ಮನೆ, ಮಡಿಯುಟ್ಟು ಮಾಡುವಗೊನೆ
ಕೊನೆಗೆಲ್ಲ ಎಡೆಯಿಟ್ಟ ಬಾಳೆಲೆ, ನೈವೇದ್ಯ ಕಾಗೆಗುಡುಕ್ಹೋಗಲೆ ||

ಬಿಸಿಲಲ್ಲಿ ದೂರದಲೇ ನಿಂತು, ತಾರಸಿ ಹೆಂಚ ಮೇಲಿಡಿಸಿತ್ತು
ಕಾತುರ ಉದ್ವೇಗದಲಿ ಕಾದು, ಕಾಕವೇಷದಿ ಬರುವ ಬಂಧು ||

ಕೊನೆಗೂ ಎಡೆಯೆತ್ತೆ ಕಾಕಜ, ತೃಪ್ತನೆಂದರ್ಥ ಆ ಪೂರ್ವಜ
ಮಾಡುತಾ ಮಂಗಳದ ಗಂಟೆ, ಎಡೆಯೆಲೆ ಪ್ರಸಾದದ ಸಗಟೆ ||

ಪೂಜಿತ ಹೊಸಬಟ್ಟೆಗೆ ಹಿರಿಯ, ಎಡೆಯೆಲೆ ಜತೆಯಲೆ ಒಡೆಯ
ಕುಟುಂಬದ ಎಲ್ಲ ಸೇರಿ ಕೂತು, ತಿನ್ನೇ ವಂಶಾತ್ಮವೆಲ್ಲ ಹರಸಿತು ||

———————————————————–
ನಾಗೇಶ ಮೈಸೂರು, 11.10. 2013
———————————————————–

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s