00110. ಸಿಂಗಪುರ್ ಈಸ್ ಏ ಫೈನ್ ಸಿಟಿ…

ಸುಮ್ಮನೆ ಕುಳಿತಿದ್ದ ಲಹರಿಯಲ್ಲಿ ಬೇಸರವಾಗಿ ಏನೊ ಓದಲು ತೆರೆದೆ – ಆಗ ಕಣ್ಣಿಗೆ ಬಿತ್ತು ಈ ಪದ ಪುಂಜ : ‘ಸಿಂಗಪುರ್ ಈಸ್ ಅ ಫೈನ್ ಸಿಟಿ’. ಈ ‘ಫೈನ್’ ಎನ್ನುವ ಶಬ್ದವನ್ನು ಒಂದೆಡೆ ಈ ನಗರದ ದಿಗ್ಬ್ರಮೆಗೊಳಿಸುವ ವೈಭವ, ಸ್ವಚ್ಛತೆ ಇತ್ಯಾದಿಗಳನ್ನು ವರ್ಣಿಸಲು ಅಲಂಕಾರಿಕವಾಗಿ ಬಳಸಿದರೆ, ಮತ್ತೊಂದೆಡೆ ಇಲ್ಲಿನ ಶಿಸ್ತಿನ ಹಾಗೂ ಕಟ್ಟುನಿಟ್ಟಿನ ನಿಯಮಪಾಲನೆಯ ಹತೋಟಿ ಸೂತ್ರವಾಗಿ ಬಳಸಲ್ಪಡುವ ‘ಫೈನ್’ (ತಪ್ಪಿಗೆ ಕಟ್ಟಬೇಕಾದ ದಂಡ) – ತುಸು ಲಘು ಹಾಸ್ಯದ ಲಹರಿಯಲ್ಲೂ ಉಲ್ಲೇಖಿಸಲ್ಪಡುತ್ತದೆ. ಆ ಲಹರಿಯ ಲಘುಹಾಸ್ಯದ ಸಾಲುಗಳಿಗೆ ಈ ಹಾಸ್ಯ ಕವನದ ರೂಪ ಕೊಡಲೆತ್ನಿಸಿದೆ. ತುಸು ಋಣಾತ್ಮಕ ಉತ್ಪ್ರೇಕ್ಷೆ ಬೆರೆಸಿದ್ದರೂ ಅದು ಬರಿ ಹಾಸ್ಯ ಮತ್ತು ಕಾವ್ಯಾತ್ಮಕ ವೈಭವೀಕರಣಕಷ್ಟೆ (ಇಲ್ಲಿ ಜೀವನ ನಡೆಸುವುದು ಬಲು ಕಠಿಣ ಎಂಬ ಹುಸಿಕಲ್ಪನೆ ಬರಬಾರದು ಇದನ್ನು ಓದಿದವರಿಗೆ!). ಆದರೆ ನಮ್ಮ ಊರುಗಳಲ್ಲಿನ / ಆಡಳಿತಾತ್ಮಕತೆಯ ಹೋಲಿಕೆಯಲ್ಲಿ, ದೈನಂದಿನತೆಯಲ್ಲಿ ಕಾಣುವ ವ್ಯತ್ಯಾಸವನ್ನಂತು ಇದು ಎತ್ತಿ ತೋರಿಸುತ್ತದೆ.

ಸಿಂಗಪುರ್ ಈಸ್ ಏ ಫೈನ್ ಸಿಟಿ…
________________________________

ಎಷ್ಟು ವೈನಾದ ‘ಫೈನ್’ ಸಿಟಿ ಸಿಂಗಪುರ
ಕೂತು ನಿಂತ ತಪ್ಪಿಗು ಹುಷಾರು ‘ಫೈನು’ ಹಾಕುವರ
ಅಡ್ಡಾದಿಡ್ಡಿ ಓಡಿಸಬೇಡಿ ರಸ್ತೆಯಲಿ ತುಸು ಎಚ್ಚರ
ಮುಖ ಮೂತಿ ನೋಡದೆ ರಸೀತಿ ಬರೆಯುವ ‘ಚೌರ’ ||

ಎಲ್ಲಕ್ಕು ಉಂಟೂ ಲೆಕ್ಕ ಡಾಲರಿನಲೆ ಪಕ್ಕಾ
ಜೋಪಾನ ಕಸ ಕಡ್ಡಿ ಚೆಲ್ಲೀರಾ ರಸ್ತೆಯೆ ಥಳುಕ
ಹುಡುಕಿ ಕಸದಾ ಬುಟ್ಟಿ ಮೂಲೆ ಮೂಲೆಗು ಉಂಟು
ಸುಮ್ಮನೆ ಬೀದಿಯಲೆಸೆದು ಕಳೆವುದ್ಯಾಕೆ ಗಂಟು? ||

ಬೀಡಾ, ತಂಬಾಕು ಬೇಡ ಬಾಯಿಗೆಲ್ಲೀ ಬೀಗ
ಉಗಿಯಬೇಕೆಂದರೆ ಇಲ್ಲಿ ಎಲ್ಲುಂಟೂ ಜಾಗ?
ಎಲ್ಲೆಂದರಲ್ಲೆ ಉಗಿದರೊ ಮಾನ ಮೂರಾಬಟ್ಟೆ
ರಸ್ತೆ ಗುಡಿಸುವುದರ ಜತೆಗೆ ಕುಂಡಿಗೆ ಬೆತ್ತದ ಅಟ್ಟೆ ||

ಸಿಗರೇಟು ಸೇದೀರಾ ಜೋಕೆ, ಎಲ್ಲೆಂದರಲ್ಲಿ
ಮೊದಲೇ ತುಟ್ಟಿ ಸಿಗರೇಟು, ಯಾಕೆ ದಂಡದ ಮಲ್ಲಿ
ಬಸ್ಟಾಪು, ಸಾರ್ವಜನಿಕ ಜಾಗ ಎಚ್ಚರವಿರಲಿ
ಎಚ್ಚರ ತಪ್ಪೆ ಜೇಬಲಿ ಡಾಲರು ಬಿಚ್ಚೆ ಧಾರಾಳವೆಲ್ಲಿ? ||

ಟ್ರಾಫಿಕ್ಕಿನಲಿ ಕೆಂಪೆಂದರೆ ಕೆಂಪೆ, ಹಳದಿ ಹಸಿರಲ್ಲ
ದನದ ಹಾಗೆ ನುಗ್ಗುವ ಮುನ್ನ ಖಚಿತ ಕ್ಯಾಮರಾ ಇಲ್ಲ
ಅಂದುಕೊಂಡೆ ಸರಿ ಹಾರಿದರೂ ಸಿಗ್ನಲಲಿ ಕಾರು
ಮನೆ ವಿಳಾಸಕೆ ಟಿಕೆಟು ಕಳಿಸಿದಾಗ ಹೌಹಾರುವರಾರು? ||

ಚೂಯಿಂಗ್ ಗಮ್ಮಿಗೆ ಅವಮಾನ ಮಾಡದೆ ಬನ್ನಿ
ಅದ ಬಿಟ್ಟು ಬೇರೇನು ಬೇಕೊ ಜತೆಯಲೆ ತನ್ನಿ
ಜೋಪಾನ ಪ್ಯಾಕಿಗಿಂತ ಹೆಚ್ಚು ಸಿಗರೇಟು ತರುವಂತಿಲ್ಲ
ಕೊಂಡೊಯ್ಯುವ ಸಾಮಾನಿಗೆ ಮಿತಿ ಹೇರುವುದಿಲ್ಲ! ||

ಕಾರೂ, ಟ್ಯಾಕ್ಸಿಯಲಿ ಕುಳಿತು ಮರೆಯಬೇಡಿ
ಸೀಟಿನ ಬೆಲ್ಟಿಗೆ ಒಡ್ಡಿದ ತನು ಕಟ್ಟುತ ಬಾಡಿ
ಬೆಲ್ಟಿಲ್ಲದ ಸಂಕಟಕೆ ಫೈನು ಡ್ರೈವರನಿಗೂ ಉಂಟು
ಹಿಂದೆ ಕುಳಿತಿದ್ದರು ಬಿಡದು ಲೆಕ್ಕಾಚಾರದ ನಂಟು ||

ಟಿಕೆಟ್ಟಿಲ್ಲದ ಪಯಣ ಬಸ್ಸಲಿ ಮಾಡಲೆಬೇಡಿ
ಅವಮಾನದಲಿ ಕುಗ್ಗುವ ಹೊತ್ತು ಫೈನಿನ ಲಾಡಿ
ಅಪ್ಪಿ ತಪ್ಪಿ ಮರೆತು ರೈಲಿನ ಚೈನೆಳೆಯಲೆಬೇಡಿ
ಹುಡುಗಾಟಕೆಳೆದರೆ ಜೇಬಿಂದೆಳೆವರು ಸಾವಿರ ದಮಡಿ ||

ಕಾರು ಮನೆ ಬಾಡಿಗೆ-ಖರೀದಿ ‘ಶಾಂತಂ ಪಾಪಂ’
ಆ ಕೊಳ್ಳುವ ಬೆಲೆಗಳ ಮುಂದೆ ಮನುಜರೆ ‘ದಾಸೋಹಂ’
ರೈಲು ಬಸ್ಸು ಟ್ಯಾಕ್ಸಿ ನಟರಾಜ ಸರ್ವಿಸ್ಸೆ ವಾಸಿ
ಕಾಸುಳಿಸಿ ವ್ಯಾಯಮ ಮಾಡಲು ಆರೋಗ್ಯಕೂ ಊಸಿ ||

ಮಾತಾಡುವ ಮಾತು ಲೆಕ್ಕ, ಗಮನವಿರಲೆ
ಹಗುರದ ಮಾತಾಡುವ ರಾಜಕೀಯವೆ ತರಲೆ
ಇಷ್ಟನು ಬಿಟ್ಟರೆ ನೋಡಿ ಈ ಭೂಮಿಯೆ ಸ್ವರ್ಗ ಸುಖ
ಸ್ವರ್ಗದ ರೇಟೆ ಬೇಕೆಂದರೆ, ಮಲೇಶಿಯ ದೇಶವೆ ಪಕ್ಕ ||

– ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s