00112. ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ…

ಹುಣ್ಣಿಮೆಯ ಆಸುಪಾಸಿನ ದಿನಗಳಲಿ, ವಾಕ್ ಮಾಡಿಕೊಂಡೆ ಮನೆಗೆ ನಡೆದಿದ್ದ ಸಂಜೆಯಲ್ಲಿ, ಆಗಲೆ ದುಂಡಗೆ ಪ್ರಸ್ಥಾನಗೊಂಡಿದ್ದ ಚಂದ್ರಣ್ಣ ಕಣ್ಣಿಗೆ ಬೀಳುವ ಸಾಮಾನ್ಯ ದೃಶ್ಯ; ಎಷ್ಟೆಲ್ಲಾ ಕವಿ ಪುಂಗವರು, ಪ್ರಣಯಿಗಳುಗಳಿಂದೆಲ್ಲಾ ಏನೆಲ್ಲಾ ಸುಳ್ಳು ಸುಳ್ಳೆ ಹೊಗಳಿಸಿಕೊಳ್ಳೊ ಭಾಗ್ಯ ಇವನಿಗೆ ಅನಿಸಿತು. ಅವನ ಮೈನ ಹಳ್ಳ ಕೊಳ್ಳದಿಂದ ಹಿಡಿದು, ಬೆಳಕನ್ನು ಸೂರ್ಯನಿಂದ ಸಾಲಾವಾಗಿ ಪಡೆದರೂ ಮೆರೆಯುವ ಪುಣ್ಯಾತ್ಮ ಇವ. ಅವನನ್ನು ಹೊಗಳುವ ಭಾವದ ಬದಲು ತುಸು ಛೇಡಿಕೆಯಲಿ ಕಾಲೆಳೆಯಲು ಹಾಗೆ ಗೀಚಿದ ಸಾಲುಗಳಿವು. ಹುಣ್ಣಿಮೆ ಬೆಳಕಿನಡಿ ಓದುತ್ತಾ ‘ಎಂಜಾಯ್’ ಮಾಡಿ 🙂

ಪೌರ್ಣಿಮೆ ಚಂದ್ರನ ಕಾಲೆಳೆಯುತ್ತ…
_________________________

ರವಿಯಣ್ಣನಾ ಬಿಳಿ ಬೆಳಕಿನ ಎರವಲು
ಎರಚಾಡಿಸಿ ಮೈಗೆ ಹಚ್ಚಿದ ಉರುವಲು
ಫಳಫಳ ಹೊಳೆಯುವೆ ಹುಣ್ಣಿಮೆಗೊಮ್ಮೆ
ಚಂದ್ರಣ್ಣ ನೀನು ಬರಿ ಸೂರ್ಯನ ಕೆಮ್ಮೆ ||

ನಿನ್ನ ಬೆಳಕೆಲ್ಲಾ ನಕಲಿ ಬರಿ ಕಪಟ ತಕಲಿ
ಕಣೆ ಕಟ್ಟಿದ ಸುತ್ತೆಲ್ಲಾ ದಿನಕರ ದಯದಲ್ಲಿ
ಉಗಿದೊ ಮುಕ್ಕಳಿಸಿದ್ದೊ ಕೆಂಬೂತ ಹೊದ್ದು
ನವಿಲಂತೆ ಕುಣಿಯೊ ನಿನ್ನ ಬಿನ್ನಾಣ ಬುದ್ಧು ||

ಪ್ರೇಮ ವ್ಯಾಪಾರ ಪ್ರಣಯಕ್ಕೆ ಪ್ರತಿದಿನ ಬರ
ಕತ್ತಲ ಭೇಟಿಗು ಖಾರ ತಿಂಗಳ ತಡುಕುವರ
ತಿಂಗಳಿಗೆ ಹುಣ್ಣಿಮೆ, ದಿನಾ ತಂಗಳ-ವಾರಾನ್ನ
ಕೊಂಡಾಡುವರು ಸುಳ್ಳೆ, ನೀನಲ್ಲ ಬಿಡು ಸೋಮ ||

ದುಂಡಾಗಿಹ ಸುತ್ತು, ಬಿಳಿ ಪೌಡರು ಮೆತ್ತಿಟ್ಟು
ಚಂದಿರ ವದನಾ ಅಂತೆಲ್ಲಾ ನಿನಗೆ ಹೆಸರಿಟ್ಟು
ಮುಳ್ಳು ಮೊಡವೆ ಮುಖಕದೆಷ್ಟೊ ಅಲಂಕಾರ
ದೂರದಾಬೆಟ್ಟ, ನುಣ್ಣಗಿದ್ದರೂ ಏಮಾರುವವರ ||

ದೃಷ್ಟಿ ಬೊಟ್ಟೆನಬೇಡ, ಕಪ್ಪು ಚುಕ್ಕೆಯ ಬೊಕ್ಕೆ
ಹಳ್ಳ ಕೊಳ್ಳ ಕಣಿವೆ ಗುಂಡಿಗೆ ಒಳ ಮೈ ಸುಕ್ಕೆ
ಹತ್ತಿರದಿಂದ ನಿನ್ನ ಮುದ್ದಿಸುವವರಾರೂ ಕಾಣೆ
ನಿನ ಪುಣ್ಯ ಬದುಕಿದೆ ಕೈಸಿಗದ ದೂರದ ಹೆಣ್ಣೆ ||

ಕಾಲಿಟ್ಟವರಿಬ್ಬರು ಜಂಬದೇ ಕುಣಿದಾಡಿದರು
ಕಲ್ಲು ಮಣ್ಣು ಎತ್ತಿ ತಂದು ದರ್ಶಕದಲ್ಹಿಡಿದರು
ಸುಂದರೀ ವಸುಂಧರೆ ನೀಲಿ ಗೃಹಿಣಿ ಎಂದರು
ಚಂದದ ಚೆಂದಿರನೆಂದು ಎಲ್ಲಿ ಬಾಯಿ ಬಿಟ್ಟರು? ||

ಹೊಗಳಲೆಬೇಕೆ ಕೊರಮ, ನಿನಗೊಂದೇ ಪರಮ
ಇಳೆಯಾರನೆ ಒಂದಂಶ ಗುರುತ್ವಾಕರ್ಷಣೆ ಸಮ
ಸ್ಥೂಲಕಾಯ, ಮಹಾಕಾಯ, ಅತಿಕಾಯರೆಲ್ಲಾ
ಬೊಜ್ಜಿನಜ್ಜರಲ್ಲವೆಂದು ಅಲ್ಲಿ ಖುಷಿ ಪಡಬಹುದಲ್ಲ! ||

– ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s