00118. ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ

ಎಂದಿನಂತೆ ರಾಜ್ಯೋತ್ಸವದ ಹಬ್ಬ ಬಂದಿದೆ. ಆಚರಣೆಯ ಸಂಭ್ರಮ ಒಂದೆಡೆಯಾದರೆ ದೀಪಾವಳಿಯ ರಜೆಯೂ ಹಿಂದೆಯೆ ಬರುತ್ತಿದೆ ಮತ್ತು ಧೀರ್ಘ ವಾರಾಂತ್ಯದ ಅನುಕೂಲವು ಜತೆಗೂಡಿದೆ ಕರ್ನಾಟಕದಲ್ಲಿ. ಸಂಪದದಲ್ಲಿಯೂ ಈಗಾಗಲೆ ಹಲವು ಕನ್ನಡ ರಾಜ್ಯೋತ್ಸವದ ಬರಹಗಳು ಕಾಣಿಸುತ್ತಿವೆ. ಆ ಗುಂಪಿಗೊಂದು ಸೇರ್ಪಡೆ ಈ ಕವನ. ಆದರೆ ಕವನದ ಆಶಯ ಸ್ವಲ್ಪ ಕನ್ನಡಿಗರಿಗೆ ಹೆಚ್ಚು ಪರಿಚಿತವಲ್ಲದ ದನಿಯೆಂದು ನನ್ನ ಅನಿಸಿಕೆ. ಸಹನೆ, ತಾಳ್ಮೆಯಿಂದ ಸಹಿಸುವುದು ಕನ್ನಡಿಗರ ಹುಟ್ಟು ಗುಣವಾದರೂ, ಸಂಧರ್ಭಕ್ಕೆ ತಕ್ಕಂತೆ ಅಗತ್ಯ ಬಿದ್ದಾಗ ಗುಡುಗಿ ಎಚ್ಚರಿಸುವುದು, ಕನ್ನಡದ-ಕನ್ನಡಿಗರ ಹಿತಾಸಕ್ತಿಗೆ ಎರವಾಗದಂತಹ ಪರಿಸರ ರೂಪಿಸಲು ಯತ್ನಿಸುವುದು ಅವಶ್ಯಕವೆಂದು ನನ್ನ ಭಾವನೆ. ಹೀಗಾಗಿ ಅಂತಹ ಸಂದರ್ಭಗಳು ಬಂದಾಗ ಮಾತ್ರವಲ್ಲದೆ, ಸದಾಕಾಲವೂ ಆ ಕಾಳಜಿಯ ಪ್ರಜ್ಞೆಯನ್ನು ಜಾಗೃತಗೊಳಿಸಿಟ್ಟುಕೊಂಡಿರುವುದು ಅವಶ್ಯ. ಹೇಗೆ ಪರನಾಡಿಗೆ ಹೋದ ಕನ್ನಡಿಗರು ಅಲ್ಲಿನ ಸಂಸ್ಕೃತಿ , ಆಚಾರ-ವಿಚಾರ-ಕಲಾಚಾರಗಳನ್ನು ಗೌರವಿಸುತ್ತಾರೊ, ಅದೇ ರೀತಿಯ ನಿರೀಕ್ಷೆಯನ್ನು ಕನ್ನಡ ನಾಡಿಗೆ ಬಂದಿರುವ, ಇಲ್ಲಿನ ನೆಲಜಲದ ಋಣದಲಿರುವ ಜನರಿಂದ ನಿರೀಕ್ಷಿಸುವುದು ತೀರಾ ಸಹಜ ಪ್ರಕ್ರಿಯೆ. ಈ ರೀತಿಯ ಹಲವು ಆಶಯಗಳನ್ನು ಮೇಳೈಸಿದ ರಾಜ್ಯೋತ್ಸವದ ಆಶಯ ಈ ಕವನ.

ಸಂಪದಿಗರಿಗೆ ಮತ್ತು ಸಮಸ್ತ ಕನ್ನಡ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು.

ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ
______________________________

ನನ್ನ ಪದಗಳಿಗಾಗುವಿರ ದನಿ
ಕನ್ನಡಕಾಗಿ ಬಿಗಿಸುತ್ತ ಧಮನಿ
ಸಾಕಾಗಿ ಹೋಗಿದೆ ಸಹನೆ, ಮೌನ
ಬಲಿ ಹಾಕಬೇಕಿದೆ ಹುಸಿ ಸೌಜನ್ಯವನ್ನ ||

ಔದಾರ್ಯವಲ್ಲಾ ಬಲಹೀನತೆ
ಉದಾರತೆಯಲ್ಲ ಹತ್ತಿಕ್ಕಿ ಒತ್ತೆ
ಪರವಾನಗಿಯಿರದೆ ತುಳಿದವರತ್ತ
ಕೆಂಗಣ್ಣನಾದರು ಹರಿಸಬೇಕಿದೆ ಸೂಕ್ತ ||

ಬಂದವರೆಷ್ಟೊ ಉಂಡವರೆಷ್ಟೊ
ಉಂಡೂ ಕೊಂಡೂ ಹೋಗದವರಿನ್ನೆಷ್ಟೊ
ಹಿಡಿಯಬೇಕಿದೆ ಜುಟ್ಟು ಬಗಲಿಗೆ ಕೈಯಿಟ್ಟು
ಯಾರಪ್ಪನ ಮನೆ ಗಂಟು ಕಳ್ಳರಲೆಂತಾ ನಂಟು ||

ಬರಲಿ ಇರಲಿ ಬೇಡೆಂದವರಾರು
ಬಗಲಿನಲಿಡದಿರೆ ಬೆಂಕಿ ಸೋದರತೆ ತೇರು
ಬಂದು ನುಂಗಿದರೆ ನೋಡಿ ಸುಮ್ಮನಿರೆ ಹಂದೆ
ಅನಿಸಿಕೊಂಡು ಬಳೆ ತೊಡಬೇಕಿದೆಯೆ ಮಂದೆ?

ಪುಟ್ಟ ಭಾರತವಾಗಿಸಲಿ ಕನ್ನಡಮ್ಮನ ತೊಡೆ
ಕನ್ನಡದ ಮಕ್ಕಳಂತೆ ಹೀರಲೆದೆ ಹಾಲ ಸುಧೆ
ಪಸರಿಸದೆಲೆ ಕಸ್ತೂರಿ ಕನ್ನಡದ ಕಂಪು ಎಲ್ಲೆಡೆ
ನೆಲ ಜಲ ಬಲ ಕಬಳಿಸಲೆ, ಕರವಾಳ ಕಲ್ಲೆದೆ ||

ಈ ರಾಜ್ಯೋತ್ಸವವಾಗಲಿ ಆಶಯ ಕನ್ನಡಿಗ ಮನದೆ
ಸಹಿಸಲಾರೆವು ತಾಯ್ ಸೊರಗೆ ಅನ್ಯಾಯ ಭಾರದೆ
ಪದಗಳಾಗುತ ಪ್ರತಿ ಕನ್ನಡಿಗನೆದೆ ಕವಿ ದನಿಯಲಿ
ಎಚ್ಚರಿಕೆ ದನಿಗಳಾಗುತ ಸುಳಿವುಗಳಿಗೂ ಗುಡುಗಲಿ ||

ಕೊಟ್ಟು ಪಡೆಯಲಿ ಗೌರವ, ಅವರ ನೆಲದಲಿದ್ದಂತೆ ನಾವು
ಬಾಳುವುದಿಲ್ಲವೆ ಅವರಂತೆ, ಕದಲಿಸದೆಲೆ ಸಂಸ್ಕೃತಿ ಕಾವು
ನಮ್ಮಿ ನೆಲದಲಿ ತಲೆಬಾಗಿ, ನಮದೆ ಸಂಸ್ಕೃತಿಗೆ ಸ್ವರವಾಗಿ
ಅನ್ನ ಕೊಟ್ಟ ನೆಲದ ಋಣ ತೀರಿಸೊ ಮನುಜತ್ವಕೆ ಶರಣಾಗಿ ||

– ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
(saMpada 01.11.2013)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s