00119. ದೀಪೋತ್ಸಾಹಂ ಭುವಂಗತೆ..

ದೀಪೋತ್ಸಾಹಂ ಭುವಂಗತೆ..
_____________________

ಈ ಬಾರಿಯ ಬೆಳಕಿನ ಹಬ್ಬ ದೀಪಾವಳಿ ಇಂದಿನಿಂದ ಆರಂಭವಾಗುತ್ತಿದೆ (02.11.2013). ಮತ್ತೆ ಕಣ್ಮುಂದೆ ಹಿನ್ನಲೆಯಾಗಿ ಅನೇಕಾನೇಕ ಚಿತ್ರಗಳು – ಸೀತಾರಾಮಲಕ್ಷ್ಮಣರ ವನವಾಸ ಮುಗಿದು ಅಯೋಧ್ಯೆಗೆ ಹಿಂದಿರುಗಿದ್ದು, ನರಕಾಸುರ ವಧೆ, ವಾಮನ – ಬಲಿ ಚಕ್ರವರ್ತಿ ಪ್ರಕರಣ, ಲಕ್ಷ್ಮಿ ಪೂಜೆ – ನೀರು ತುಂಬುವ ಹಬ್ಬ ಇತ್ಯಾದಿ. ಹಾಗೆಯೆ ಬೆಂಗಳೂರಿನಲ್ಲಿದ್ದಾಗ ನೋಡಿದ್ದ ವರ್ತಕ ಸಮೂಹದ ದೀಪಾವಳಿ ವರ್ಷಾರಂಭದ ಸೊಗಡು, ವಿನಿಮಯವಾಗುತ್ತಿದ್ದ ಸಿಹಿತಿಂಡಿ ಪೊಟ್ಟಣಗಳು, ಒಣ ಹಣ್ಣುಗಳು; ಜೊತೆಗೆ ಮೂರು ರಾತ್ರಿಯ ಸದ್ದುಗದ್ದಲದ ನಂತರದ ಬೆಳಗಿನಲ್ಲಿ ವಾಕ್ ಹೊರಟರೆ ಬೀದಿಬೀದಿಯಲ್ಲೂ ಕಾಣುತ್ತಿದ್ದ, ಚೆಲ್ಲಾಡಿ ಚೂರುಚೂರಾಗಿ ಬಿದ್ದ ಸಿಡಿದ ಪಟಾಕಿಯ ಕಾಗದದ ಚೂರುಗಳು. ಎಲ್ಲವೂ ದೀಪಾವಳಿಗೆ ಮೆರುಗೀಯುವುದರ ಜತೆಗೆ ತುಸು ಆತಂಕವನ್ನು ಹುಟ್ಟಿಸುತ್ತಿದ್ದವು ಸಹಜವಾಗಿ.

ನಿಜ ಹೇಳಬೇಕೆಂದರೆ, ನಾವು ಚಿಕ್ಕವರಾಗಿದ್ದಾಗ ದೀಪಾವಳಿಯೆಂದರೆ ಮನಃಪಟಲದಲಿ ಮೂಡುತ್ತಿದ್ದ ಮೊದಲ ಚಿತ್ರ ಪಟಾಕಿ. ಕುದುರೆ, ಪಟಾಕಿ, ಆನೆ ಪಟಾಕಿ, ಲಕ್ಷ್ಮಿ ಪಟಾಕಿ, ಡಬ್ಬಲ್ ಸೌಂಡು, ಆಟಂಬಾಂಬ್ ಇತ್ಯಾದಿ. ಜತೆಗೆ ಸುರುಸುರುಬತ್ತಿ, ಮತಾಪು, ಹಾವಿನ ಗುಳಿಗೆ, ಭೂಚಕ್ರ, ವಿಷ್ಣು ಚಕ್ರ, ಪೆನ್ಸಿಲ್, ವೈರು, ಹೂಕುಂಡಗಳು ಸಹ ಇರುತ್ತಿದ್ದರೂ, ಗಂಡು ಹುಡುಗರಿಗೆ ‘ಹೆಚ್ಚು’ ಸದ್ದು ಮಾಡುವ ಪಟಾಕಿಗಳ ಮೇಲೆ ಮೊದಲ ಕಣ್ಣು. ಮನೆಯ ಮುಂದೆ ಬೆಳಕಿನ ವರ್ಷಧಾರೆಯ ಕಾರಂಜಿಯೆಬ್ಬಿಸುವ ಸದ್ದಿರದ ಪಟಾಕಿಗಳೆ ದೀಪಾವಳಿಯ ನಿಜವಾದ ಕಳೆಗಟ್ಟಿಸುತ್ತಿದ್ದರೂ, ‘ನಾನು ಹೆಚ್ಚು ಸದ್ದಿನ ಪಟಾಕಿ ಹೊಡೆದೆ’ ಎಂಬುದು ಹೆಮ್ಮೆಯ ವಿಷಯವಾಗುತ್ತಿತ್ತು, ಆ ದಿನಗಳಲಿ.

ಈಗ ಬದಲಾದ ಕಾಲ, ಪೀಳಿಗೆ. ಇನ್ನು ಮಕ್ಕಳು ಅದೆ ತರಹದ ಉತ್ಸಾಹದಲಿರುತ್ತಾರೊ, ಇಲ್ಲವೊ – ನಾನಂತೂ ನೋಡಲಾಗಿಲ್ಲ. ಆದರೆ ಶಾಲೆಗಳಲ್ಲಿನ ತಿಳುವಳಿಕೆಯ ಪರಿಣಾಮ, ಕೊಂಚ ಕಡಿಮೆಯಿರಬಹುದೆಂದೆ ಕಾಣುತ್ತದೆ – ಸಿಡಿದು ಆಗಬಹುದಾದ ಅಪಘಾತ, ಸುಟ್ಟಾಗಿನ ವಾತಾವರಣ ಕಲುಷಿತವಾಗುವುದರಿಂದ ಹಿಡಿದು, ಸದ್ದಿನಿಂದ ವಯಸಾದವರಿಗೆ, ಹಸೂಗೂಸುಗಳಿಗೆ, ಹಾಸಿಗೆ ಹಿಡಿದು ಮಲಗಿದವರಿಗೆ ಹಾಗೂ ಸದ್ದಿಗೆ ಭೀತರಾಗುವ ಆಳ್ಳೆದೆಯವರವರೆಗೆ ಉಂಟುಮಾಡುವ ಆತಂಕ, ಉದ್ವೇಗ , ಒತ್ತಡಗಳ ಪರಿಗಣನೆಯ ಜತೆ, ಶಿವಕಾಶಿಯಂತಹ ಜಾಗದಲ್ಲಿ ಇವನ್ನು ತಯಾರಿಸುವಾಗ ಬಳಸುವ ಬಾಲಕಾರ್ಮಿಕರ ಚಿತ್ರವೂ ಸೇರಿ ನೈತಿಕ ಜವಾಬ್ದಾರಿಯ ದ್ವಂದ್ವವನ್ನು ಉಂಟಾಗಿಸಿ ಕೆಲವು ಮಕ್ಕಳು ಪಟಾಕಿ ಹಚ್ಚದ ಪ್ರತಿಜ್ಞೆ ಮಾಡಿದ್ದನ್ನು ಕಂಡಿದ್ದೇನೆ.

ಆದರೆ ಪಟಾಕಿಯಿಲ್ಲದ ದೀಪಾವಳಿ ಹೇಗೆ ಎಂಬ ದ್ವಂದ್ವದೊಡನೆ ಸಂಪ್ರದಾಯದ ತಿಕ್ಕಾಟ, ಮಕ್ಕಳಿಗದರಿಂದಾಗುವ ಆನಂದ, ತೃಪ್ತಿ, ಉಲ್ಲಾಸ, ಉತ್ಸಾಹ ಎಲ್ಲವೂ ಮೇಳೈವಿಸಿದಾಗ ಹೊಂದಾಣಿಕೆಯ ಸೂತ್ರಕ್ಕೆ ಅರೆಮನಸಲೆ ರಾಜಿಯಾಗಬೇಕಾದ ಅನಿವಾರ್ಯ. ಇಲ್ಲಿ ಸಿಂಗಪೂರದಲ್ಲೂ ದೀಪಾವಳಿ ಒಂದು ದಿನ ಆಚರಿಸುತ್ತಾರೆ. ಇಲ್ಲೂ ಪಟಾಕಿ ಸಿಗುತ್ತದೆ. ಆದರೆ ವಿಶೇಷವೆಂದರೆ ಸದ್ದಿನ ಪಟಾಕಿ ಸಿಗುವುದಿಲ್ಲ (ಕಾನೂನುಬಾಹಿರ ಅನ್ನುವುದಕ್ಕಿಂತ, ಬೇಕಿದ್ದರೂ ಸಿಗುವುದಿಲ್ಲ ಅನ್ನಿ!) – ಬರಿ ಬೆಳಕು ಚೆಲ್ಲುವ ಸುರುಸುರು ಬತ್ತಿಯಂತದ್ದು ಮಾತ್ರ ಮಾರಬಹುದು. ಹೀಗಾಗಿ ವ್ಯವಸ್ಥೆಯಲ್ಲೆ ಒಂದು ಹತೋಟಿ, ಶಿಸ್ತು ಅಂತರ್ಗತವಾಗಿಬಿಟ್ಟಿದೆ. ಒಂದು ತಿಂಗಳಿನಿಂದ ‘ಲಿಟಲ್ ಇಂಡಿಯ’ ರಸ್ತೆಗಳೆಲ್ಲ ಬೀದಿಯ ವಿಶೇಷ ದೀಪಾಲಂಕಾರದಲ್ಲಿ ನವ ವಧುವಿನಂತೆ ಮಿಂಚುತ್ತಿದೆ. ಹಬ್ಬಕ್ಕೆಂದೆ ತೆರೆದಿದ್ದ ದೀಪಾವಳಿ ತಾತ್ಕಾಲಿಕ ಪೆಂಡಾಲುಗಳೆಲ್ಲ ತಿಂಗಳ ಪೂರ್ತಿಯ ಬಿರುಸಿನ ವ್ಯಾಪಾರ ಚಟುವಟಿಕೆ ಮುಗಿಸಿ ನಾಳೆಯ ನಂತರ ಮತ್ತೆ ‘ಬಿಕೊ’ ಎನ್ನುವ ಖಾಲಿ ಮೈದಾನಗಳಾಗಲಿವೆ. ಹೊರದೇಶದಲಿದ್ದೂ, ದೀಪಾವಳಿಯ ಉತ್ಸಾಹವನ್ನು ಕಾಣುವ ಸುಯೋಗ ಸಿಂಗಪುರ, ಮಲೇಶಿಯದಂತಹ ಕೆಲವು ದೇಶಗಳಲ್ಲಿ ಸಾಧ್ಯ – ಅಷ್ಟರ ಮಟ್ಟಿಗೆ (ಇಲ್ಲಿ ವಾಸಿಸುವ ನನಂತಹವರಿಗೆ) ಬೇರೆ ದೇಶಗಳಿಗಿಂತ ತುಸು ಪರವಾಗಿಲ್ಲ ಎನ್ನಬಹುದಾದ ವಾತಾವರಣ 🙂

ಅದೇನೆ ಇದ್ದರು, ಎಲ್ಲ ವಯೋಮಾನದವರಲ್ಲು ತನ್ನದೆ ಆದ ರೀತಿಯಲ್ಲಿ, ದೀಪಾವಳಿ ಚಿಮ್ಮಿಸುವ ಉತ್ಸಾಹದ ಬಗ್ಗೆ ಎರಡು ಮಾತಿಲ್ಲ. ಅದಕ್ಕೆಂದೆ ಈ ದೀಪಾವಳಿಗೆ ಸಮಸ್ತ ಸಂಪದಿಗರಿಗೂ, ಈ ನಾಡಿನ ಜನರೆಲ್ಲರಿಗು ಹಾರ್ದಿಕ ಶುಭಾಶಯಗಳನ್ನು ಕೋರುತ್ತ, ಈ ಬಾರಿಯ ಆಚರಣೆ ಅದರಲ್ಲೂ ಮಕ್ಕಳೊಡನೆ ಆಚರಿಸುವಾಗ – ಹರ್ಷದಾಯಕವಾಗಿರಲಿ, ಸುರಕ್ಷಿತವಾಗಿರಲಿ ಎಂದು ಹಾರೈಸುತ್ತೇನೆ. ಅದೆ ಬಿರುಸಿನಲ್ಲಿ ಈ ಕೆಳಗಿನ ಜೋಡಿ ಕವನಗಳನ್ನು ಸೇರಿಸುತ್ತಿದ್ದೇನೆ – ದೀಪಾವಳಿಯ ಹೋಳಿಗೆಯ ಜತೆ ಸವಿಯಲು :

1. ದೀಪಗಳಾಗಿ ಭುವಂಗತ

2. ಸದ್ದುಗಳ ನಡುವೆ.

ಮತ್ತೊಮ್ಮೆ ಶುಭ ದೀಪಾವಳಿ, ‘ದೀಪೋತ್ಸಾಹಂ ಭುವಂಗತೆ’ 🙂

ಧನ್ಯವಾದಗಳೊಂದಿಗೆ
– ನಾಗೇಶ ಮೈಸೂರು

1. ದೀಪಗಳಾಗಿ ಭುವಂಗತ…
_____________________

ದೀಪಗಳಾದುವೆ ಭುವಂಗತ
ಕತ್ತಲೆಯನ್ನಾಗಿಸಿ ಅಸ್ತಂಗತ
ಜಗಮಗ ಹೊತ್ತಿ ದೀಪದ ಶಿಸ್ತ
ಹಣತೆಗಳ್ಹೆತ್ತ ಸೂರ್ಯನ ರಥ ||

ಸಂಜೆಗತ್ತಲಿಗೆ ಮಿಣುಕು ಕಣ್ಣಿತ್ತ
ಗಾಳಿಯಾಡಿಸಿ ಸೊಡರು ನೃತ್ಯ
ಕಿಟಕಿ ಗೂಡು ಹೊಸಿಲ ನೊಸಲು
ಕಾಂಪೌಂಡಿನ ಹೆಗಲೇರಿದ ಸಾಲು ||

ಸಾಲು ಸಾಲು ಸಾಲಂಕೃತ ಬಳ್ಳಿ
ತೆರೆದು ಬಿಟ್ಟಂತೆ ಬೆಳಕಿನಾ ನಲ್ಲಿ
ಯಾರೊ ಚೆಲ್ಲಿದ ಹಳದಿ ಮಲ್ಲಿಗೆ
ಜ್ಯೋತಿಯ ರೂಪಾಗೆಲ್ಲೆಡೆ ಬೆಳಗೆ ||

ಚಿಮ್ಮುತ ನೆರಿಗೆ, ಸಿಗ್ಗು ರೇಶಿಮೆಗೆ
ಲಲನೆ ಬಣ್ಣದ ಚಿಗುರು ಬೆರಳಿಗೆ
ದೀಪದಲಿ ದೀಪ ಹಚ್ಚುವ ಸರತಿ
ಯಾರ ಬಾಳಿಗೊ ಬೆಳಗುವಾರತಿ ||

ಬಾಣ ಬಿರುಸಿನ ಕುದುರೆ ಚದುರೆ
ಬೆಳಕಿಗೆ ಬೆಳಕನು ಕೂಡಿಸಿ ಧಾರೆ
ಕತ್ತಲ ರಾತ್ರಿಯ ಹಿತ್ತಲಿಗು ತಾರೆ
ದೀಪದಲುಡಿಸಿದ ನೆರಿಗೆಯ ಸೀರೆ ||

2. ಸದ್ದುಗಳ ನಡುವೆ..
_____________________

ಸದ್ದು ಸದ್ದು ಸದ್ದಾಗದಿದ್ದರೆ ಗುದ್ದು
ಪಟಾಕಿ ಧಾರಣೆಯಾಗಿ ಸಿಡಿಮದ್ದು
ಸದ್ದಿರದವನನ್ಹಚ್ಚೊ ಒಳ್ಳೆ ಧೋರಣೆ
ರಸ್ತೆ ರಂಗೋಲಿ ಅಳಿಸದಂತೆ ಗೆಣೆ ||

ಚೂರುಚೂರಾದ ಚಿಂದಿ ಪಟಾಕಿಯ
ಸುತ್ತಲೆಷ್ಟೆಳಸೂ ಕೈ ಸೋಕಿವೆಯೊ
ಕತ್ತರಿಸಿದ ಮರಗಳೆಷ್ಟೊ ಲೆಕ್ಕವಿಲ್ಲ
ಸುಟ್ಟು ಸದ್ದಾಗಿಸೆ ಚಿಣ್ಣರದೆ ಗದ್ದಲ ||

ಸಿಂಗಪುರದಲೂ, ದೀಪಾವಳಿ ಹೌದು
ಸಿಡಿಮಿಡಿ ಪಟಾಕಿ ಬೇಕೆಂದರು ಸಿಗದು
ಸುರುಸುರು ಬತ್ತಿ, ಮತಾಪುಗಳ ಶಿಸ್ತು
ಉಟ್ಟುಂಡು ಕೊಂಡಾಡಲೆ ಹಬ್ಬವಾಯ್ತು ||

ಈ ದೀಪಾವಳಿಗು ಸೂರ್ಯ ಅಸ್ತಂಗತ
ನೆನಪಿರಲಿ ಹಣತೆಯು ಕಲಿಸಿದ ಪಾಠ
ಸದ್ದಿರದೆ ಮೌನದಲುರಿದೆ ಕೊಟ್ಟ ಜ್ಯೋತಿ
ಸಿಡಿತ ಕ್ಷಣಿಕ, ಬೆಳಕು ಪಸರಿಸೊ ಪ್ರಗತಿ ||

ಅಂತಿರಲಿ ದೀಪಾವಳಿ ಒಳ ಬೆಳಕ ಬುಗ್ಗೆ
ನರ ನಾಡಿಗೆಲ್ಲ ಹೊತ್ತಿಸಿ ಉತ್ಸಾಹ ಬುಗ್ಗೆ
ಅಸ್ತಂಗತವಾಗಲಿ ಬಾಳಿಗಂಟಿದೆಲ್ಲ ಶಾಪ
ಭುವಂಗತವಾಗುತ್ಸಾಹ ಕಳೆಸಿ ಪರಿತಾಪ ||

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s