00122. ಈ ಸಂಪದ

ಸಂಪದದಲ್ಲಿ ಬರುವ / ಬಂದಿರುವ ಎಷ್ಟೋ ರೀತಿಯ ಬರಹ, ಲೇಖನಗಳ ವೈವಿಧ್ಯತೆ ನಿಜಕ್ಕೂ ಅಗಾಧವಾದದ್ದು. ಆದರೆ ಸಂಪದ, ಸಂಪದಿಗ, ಸಂಪದ ಆಡಳಿತ ವರ್ಗದ ಕುರಿತಾಗಿ ಬಂದ ಬರಹಗಳು ಹೆಚ್ಚಿರಲಾರದೆಂದು ನನ್ನ ಅನಿಸಿಕೆ. ಪ್ರತಿ ವರ್ಷ ವಾರ್ಷಿಕೋತ್ಸವದ ರೀತಿಯ ಆಚರಣೆಯಿದೆಯೋ ಏನೊ ಗೊತ್ತಿಲ್ಲ. ಕೆಲ ದಿನದ ಹಿಂದೆ ಈ ಅನಿಸಿಕೆ ಮನಸಿಗೆ ಬಂದಾಗ ಹಾಗೆ ಕೆಲವು ಸಾಲುಗಳನ್ನು ಗೀಚಿದ್ದರ ಪರಿಣಾಮ ಈ ಸರಳ ಕವನ. ಸಂಪದ ಸಿದ್ದಾಂತದ ವೈಶಿಷ್ಠ್ಯ, ಸಂಪದಿಗರ ಅಲಿಖಿತ ನೀತಿ ಸಂಹಿತೆ, ಅದರ ಬೆನ್ನೆಲುಬಾಗಿರುವ ಕಾರ್ಯ ನಿರ್ವಾಹಕ ತಂಡ ಮತ್ತು ಆಡಳಿತ ವರ್ಗ, ಸರಳ ಮಾದರಿಯ ನಮೂನೆ, ಭವಿಷ್ಯಾತ್ಮಕ ದೃಷ್ಟಿಕೋನ – ಎಲ್ಲವು ಸ್ಪೂರ್ತಿಯ ಸರಕಾಗಿ ಇಲ್ಲಿ ಸಾಲಾಗಿ ಸೇರಿಕೊಂಡಿದೆ. ಪ್ರಾಯಶಃ ಇಷ್ಟು ವರ್ಷಗಳ ಚರಿತ್ರೆಯಲ್ಲಿ ಅನೇಕ ಸಿಹಿ-ಕಹಿ ಅನುಭವಗಳಿರಬಹುದಾದರೂ, ಪರಿಮಿತ ಮಟ್ಟ ಮೀರದೆ ತಂತಾನೆ ಸಂತುಲಿಸಿಕೊಂಡು ಮುನ್ನಡೆದಿದೆ ಎನ್ನುವುದಕ್ಕೆ ಸಾಕ್ಷಿ, ಈಗಲೂ ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿರುವುದು. ಹೀಗಾಗಿ ಇದೊಂದು ಯಶಸ್ವಿ ಮಾದರಿ ನಮೂನೆಯೆಂದು ಪರಿಗಣಿಸಲು ಅಡ್ಡಿಯಿಲ್ಲವೆಂದೆ ನನ್ನ ಭಾವನೆ.

ಸಂಪದದಲ್ಲಿ ಮೇಲ್ನೋಟಕ್ಕೆ ಕಾಣದ ಹಲವಾರು ವೈಶಿಷ್ಠ್ಯಗಳಿವೆ. ಬೋರಾಗದಂತೆ ಇರಿಸಲು ಬಾಹ್ಯರೂಪ ಸತತ ರೂಪಾಂತರವಾಗುತ್ತಿದ್ದರು ಸಂಪದಿಗರಿಗೆ ಅದರ ಪರಿಣಾಮ ಗಾಢವಾಗಿ ತಟ್ಟದ ಹಾಗೆ ಸಮಾನಾಂತರವಾಗಿ ಸಂಭಾಳಿಸಿಕೊಂಡು ಹೋಗುವುದು ದೊಡ್ಡ ಪಂಥವೆ ಸರಿ. ಐಟಿಯಲ್ಲಿ ಕೆಲಸ ಮಾಡುವವರಿಗೆ ಸಿಸ್ಟಂ ಡೌನ್ ಟೈಮುಗಳ ಪರಿಚಯವಿರುವುದರಿಂದ ಅವರಿಗೆ ಇದನ್ನು ಊಹಿಸಲು ತುಂಬಾ ಸುಲಭ. ಹಾಗೆಯೆ ದಿನೆದಿನೆ ಬೆಳೆಯುತ್ತಿರುವ ಮಾಹಿತಿಯ ಗಾತ್ರವನ್ನು ಸಂಭಾಳಿಸಿಕೊಂಡು ಹೋಗಬೇಕು. ಜಾಹಿರಾತುಗಳ ಹಂಗಿಲ್ಲದೆ ಖರ್ಚು ವೆಚ್ಚ ಭರಿಸಿಲೊಂಡು ತೂಗಿಸಬೇಕು. ಇಪ್ಪತನಾಲ್ಕು ಗಂಟೆಗಳು ಬಳಕೆದಾರನ ಬಳಕೆಗೆ ದೊರಕುವ ಹಾಗೆ ಸಂತುಲಿಸಬೇಕು; ಜತೆಜತೆಯೆ ಕನಿಷ್ಠ ಅಗತ್ಯದ ತಾಂತ್ರಿಕ ಸಹಾಯವನ್ನು ಕೊಡುವ ಕೈಂಕರ್ಯ. ಇದೆಲ್ಲವನ್ನು ನಡೆಸುವ ಶಕ್ತಿಮೂಲ ಬರುತ್ತಿರುವುದು ಪ್ರಾಯಶಃ ಭಾಷೆಯ ಬಗೆಗಿನ ಅಭಿಮಾನ, ಆರಾಧನೆ, ನಿಸ್ವಾರ್ಥತೆ ಮತ್ತು ಸಮೂಹ ಪ್ರೇಮಗಳಂತಹ ಉನ್ನತ ಧ್ಯೇಯೋದ್ದೇಶಗಳಿಂದ. ಇದೆಲ್ಲದರ ಜತೆಗೆ ಈ ಜಾಗತಿಕ ಗೋಮಾಳದಲ್ಲಿ ಕನ್ನಡದ ಹೆಜ್ಜೆ ಗುರುತುಗಳನ್ನು ಸ್ಪಷ್ಟವಾಗಿ, ನಿಖರವಾಗಿ ದಾಖಲಿಸಿಡುವ ಹವಣಿಕೆ. ಇನ್ನು ಇಲ್ಲಿ ಬರೆಯದ, ಹೇಳದ ಅದೆಷ್ಟೊ ಕಾರಣಗಳಿರಬಹುದು – ಉದಾಹರಣೆಗೆ ಇಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತ ಇಡಿ ಪ್ರಕ್ರಿಯೆಯನ್ನು ಜೀವಂತವಾಗಿಟ್ಟಿರುವ ಸಂಪದಿಗರ ಪಾತ್ರವೂ ಅಷ್ಟೆ ಮಹತ್ವದ್ದು.

ಅಂತದ್ದೆಲ್ಲ ವಿವರಗಳನ್ನು ಹೆಕ್ಕಿ ದಾಖಲಿಸುವ ಹುನ್ನಾರವನ್ನು ಬದಿಗಿರಿಸಿ, ಈ ರಾಜ್ಯೋತ್ಸವದ ತಿಂಗಳಿನಲ್ಲಿ ಸಂಪದ ಬಳಗದ – ಸಂಪದಿಗ ಓದುಗರೂ ಸೇರಿದಂತೆ – ಎಲ್ಲರಿಗು ಕೃತಜ್ಞತೆ, ಅಭಿನಂದನೆ ಹಾಗೂ ನಮನಗಳನ್ನು ಈ ಕವಿತೆಯ ಮೂಲಕ ಸಲ್ಲಿಸುವ ಒಂದು ವಿನಮ್ರ ಯತ್ನ . ಅಂತೆಯೆ, ಸಂಪದದಂತಹ ಮಾದರಿ ಸ್ವರೂಪ ಪ್ರಯೋಗವೆ ಅತ್ಯಂತ ವಿಶೇಷ ತರದ್ದು, ಅಪರೂಪದ್ದು ಹಾಗು ವೈಶಿಷ್ಠ್ಯಪೂರ್ಣವಾದದ್ದು. ವಿಕಸನವಾಗುತ್ತಿರುವ ಜಾಗತಿಕ ಗೋಮಾಳದಲ್ಲಿ ಉಳಿದು ಸೆಣೆಸಲು ಬೇಕಾದ ಹೊಸರೀತಿಯ ಸಂವಹನ, ಸಹಕಾರ, ಇರುವ ಸ್ಥಳದ ತೊಡಕಿಲ್ಲದೆ ಯಾವ ಮೂಲೆಯಿಂದಾದರೂ ಭಾಗವಹಿಸಿ ಕಾಣಿಕೆ ನೀಡುವ ಅಥವಾ ಜ್ಞಾನ ವೃದ್ಧಿಸಿಕೊಳ್ಳುವ ಅವಕಾಶ – ಇಡಿ ಪ್ರಕ್ರಿಯೆಯಲ್ಲಿ ತಮ್ಮ ಅರಿವಿಲ್ಲದೆ ಹೊಸದಾಗಿ ಉದ್ಭವವಾಗುತ್ತಿರುವ, ಆಗಬಹುದಾದ ಹೊಸ ವಾಣಿಜ್ಯ ನಮೂನೆಯ (ಬಿಜಿನೆಸ್ ಮಾಡಲ್) ಭಾಗವಾಗುವ, ಪಾಲ್ಗೊಳ್ಳುವ, ಸಾಕ್ಷೀಭೂತರಾಗುವ ಅವಕಾಶ. ಇದಕ್ಕೆಲ್ಲ ಕೇಂದ್ರ ವೇದಿಕೆಯಾಗಿ, ಸಮಷ್ಟಿಯ ಕೊಂಡಿಯಾಗಿರುವ ‘ಸಂಪದಕ್ಕೆ’ ಕೃತಜ್ಞತೆಯನ್ನರ್ಪಿಸುವ ಕಿರುಕಾಣಿಕೆಯಾಗಿ ಈ ಬರಹ – ಸಂಪದಿಗರ ಪರವಾಗಿ, ಸಂಪದಿಗರಿಗಾಗಿ ಮತ್ತು ಸಂಪದಿಗರಿಂದ 🙂
.
ಇಲ್ಲಿ ಇನ್ನೂ ಒಂದು ಪ್ರಮುಖ ಅಂಶವಿದೆ – ಸಂಪದ ಒಂದು ವೇದಿಕೆಯಾಗಿ ಮುಖ್ಯವಾಹಿನಿಯಲ್ಲಾಗಲಿ ಅಥವಾ ಜನಪ್ರಿಯ ಮುದ್ರಣ ಮಾಧ್ಯಮದಲ್ಲಾಗಲಿ ಅವಕಾಶವಿಲ್ಲದೆ ತೊಳಲುತ್ತಿರುವ ಎಷ್ಟೋ ಹಿರಿಯ, ಕಿರಿಯ ಬರಹಗಾರರಿಗೆ ಹಾಗೂ ಈ ಹಾದಿಯಲ್ಲಿ ಪ್ರಯತ್ನಿಸಿ ನೋಡಲು ಹವಣಿಸುತ್ತಿರುವವರಿಗೆ ಒಂದು ಮುಕ್ತ ಮಾಧ್ಯಮವಾಗಿ ಬಾಗಿಲು ತೆರೆದಿಟ್ಟಿದೆ – ಅದೂ ಯಾವ ಅನಗತ್ಯ ನಿಯಂತ್ರಣವೂ ಇರದ ಹೆಬ್ಬಾಗಿಲು. ಸಂಪದಿಗರು ಸಂಪದಿಗರನ್ನು ತಲುಪುವ ಸುಲಭ ಪಥ ತೆರೆದಿಟ್ಟ ಕಾರಣ ಜಾಗತಿಕ ನೆಲೆಯ ಗಣನೆಯಿಲ್ಲದೆ ಎಲ್ಲರೂ ಒಂದೆಡೆ ಸೇರಬಲ್ಲ ಅವಕಾಶ ಒದಗಿಸಿಕೊಟ್ಟಿದೆ. ಇದು ಸಂಪದದ ಒಂದು ಅತ್ಯಮೂಲ್ಯ ಕಾಣಿಕೆ ಎಂದೆ ಹೇಳಬೇಕು.
.
ಧನ್ಯವಾದಗಳೊಂದಿಗೆ
– ನಾಗೇಶ ಮೈಸೂರು
.
.
ಈ ಸಂಪದ
________________

ಈ ಸಂಪದ
ತೆರೆಸೊಳಗಿನ ಕದ
ಎಳೆದೆಲ್ಲ ಎದೆ ಮಾತು
ಹೊರಗೆ ಹಾಕಿದ್ದಷ್ಟೆ ಗೊತ್ತು ||

ಈಗ ಸಂಪದಿಗ
ತಾನೆ ಲೇಖಕ ಓದುಗ
ವಿಮರ್ಶೆಗೂ ವಿಮರ್ಶಿಸುತ
ಅವನನವನೆ ಸರಿ ಪ್ರಕಟಿಸುತ ||

ಬೇಡದು ಅರ್ಜಿ
ಹಿಡಿಯದೆ ಯಾರ ಮರ್ಜಿ
ಬಿಚ್ಚಿದರೆ ಸರಿ ನಿನ್ನಯ ಪ್ರವರ
ಟೀಕೆ ಟಿಪ್ಪಣಿ ಮೆಚ್ಚುಗೆ ಭರಪೂರ ||

ಕಾಯುವ ತವಕ
ಪ್ರಕಟಿಸಲಲ್ಲ ಸರಕ
ಕ್ಲಿಕ್ಕೆಷ್ಟು ಕಿಕ್ಕೆಷ್ಟು ನೇರಾ
ಸದ್ದಿದ್ದರೆ ತಂತಾನೆ ಪ್ರಚಾರ ||

ತಂಡವೇ ‘ಶೂನ್ಯ’
ಅದೃಶ್ಯ ಜಗ ಮಾನ್ಯ
ಕಾರ್ಯಗಳಾಗಷ್ಟೆ ಬಿತ್ತರ
ಕಾರಣ ನೇಪಥ್ಯದಾ ವಿಸ್ತಾರ ||

ಸ್ವನೀತಿ ಸಂಹಿತೆ
ಎಲ್ಲೆ ದಾಟದ ಸಹಿಷ್ಣುತೆ
ನಿಯಂತ್ರಣವಿಲ್ಲದ ಕಡಿವಾಣ
ಅನುಸರಿಸುತ ಸಂಪದಿಗ ಜಾಣ ||

ಇಲ್ಲದ ಜಾಹೀರಾತು
ಪುಕ್ಕಟೆ ಹಂಚಿದ ಕನಸು
ನನಸಾಗಿಸಲೆಷ್ಟಿರಬೇಕು ಕಸು
ಹಿಂದಿರುವವರ ನಮಿಸಷ್ಟೇ ಹರಸು ||

ಎಚ್ಚರವಿರಲಿ ಸದ
ಈ ಮಾದರಿ ಸಮೃದ್ಧ
ಇದು ಸರಳತೆಯಲಿಹ ಭವ್ಯ
ಸಂಕೀರ್ಣಿಸದೆ ರಥವುರುಳೆ ಕಾವ್ಯ ||

ಸಂಪದಿಗರು ನಾವೆಲ್ಲ
ಬೆಳೆಸಬೇಕಿ ಸಸ್ಯಶಾಮಲ
ಅಳಿಲು ಸೇವೆಯಾದರು ಚಿತ್ತ
ಹನಿಹನಿಗೂಡಿದರೆ ತಾನೆ ಮೊತ್ತ ||

ಧನ್ಯವಾದಗಳೊಂದಿಗೆ
– ನಾಗೇಶ ಮೈಸೂರು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s