00123. ತುಳಸಿಗಿಂದು ಸಂಭ್ರಮ

ಇಂದು ತುಳಸಿ ಹಬ್ಬ. ತುಳಸಿ ಜನಪದರ ಮನೆಮನಗಳಲ್ಲಿ ಸಾಂಪ್ರದಾಯಿಕವಾಗಿ ಹಾಸುಹೊಕ್ಕಾಗಿರುವ ಬಗೆ ನೋಡಿದಾಗ ಅಚ್ಚರಿಯಾಗುತ್ತದೆ. ಅಂತಸ್ತುಗಳ ಗೊಡವೆಯಿಲ್ಲದೆ ಮನೆಯಲ್ಲಿ ಖಾಲಿ ಡಬ್ಬಕ್ಕೊ, ಹೂ ಕುಂಡಕ್ಕೊ ಹಾಕಿ ಬೆಳೆಸಿದ ಸಸಿಯಾಗೊ, ಇಲ್ಲವೆ ಅಂಗಳದಲ್ಲಿ ಕಟ್ಟಿಸಿದ ತುಳಸಿ ಕಟ್ಟೆಯಲ್ಲರಳಿದ ದೇವತೆಯಾಗೊ ಸರ್ವೆ ಸಾಧಾರಣವಾಗಿ ಕಂಡು ಬರುವ ತುಳಸಿ, ಬಹುಶಃ ಆ ಕಾರಣದಿಂದಲೆ ವಿಶೇಷವೆಂಬಂತೆ ಭಾಸವಾಗುವುದಿಲ್ಲ. ಅರಿಶಿನ, ಕುಂಕುಮ ಹಚ್ಚಿ ಹೂ ಮುಡಿಸಿ, ಹತ್ತಿಯಲ್ಲಿ ಹೊಸೆದ ಹಾರವನ್ನು ಅರ್ಪಿಸಿ ಬೃಂದಾವನದ ಸುತ್ತಲೊ, ಕುಂಡ ಯಾ ಡಬ್ಬದ ಸುತ್ತಲೊ ಸುತ್ತುತ್ತ ಪೂಜಿಸುತ್ತಿರುವ ಸಾಂಪ್ರದಾಯಿಕ ಹೆಂಗಳೆಯರ ಚಿತ್ರಣ ಕಣ್ಮುಂದೆ ನಿಲ್ಲುತ್ತದೆ. ಅದರಲ್ಲೂ ಕೆಲ ಗೃಹಿಣಿಯರಿಗೆ ದಿನದ ಸ್ನಾನದ ನಂತರ, ಒಣಗದ ಕೇಶರಾಶಿಯ ಸುತ್ತ ಸುತ್ತಿದ ವದ್ದೆ ಬಟ್ಟೆಯ ಸಮೇತ ಹಾಡು ಹೇಳಿಕೊಂಡು ಪೂಜಿಸುತ್ತ ಕಟ್ಟೆ ಸುತ್ತುತ್ತಿದ್ದುದ್ದು ನೆನಪಲಿನ್ನು ಅಚ್ಚ ಹಸಿರು. ಬಹುಶಃ ನೀರು, ಬೆಳಕಿನ ವ್ಯವಸ್ಥೆಗೆ ಸುಲಭವಿರಲೆಂದೊ ಏನೊ, ತುಳಸಿಯನ್ನು ಮನೆಯ ಹೊರಗಡೆಯೊ, ಅಥವಾ ಅಂಗಳದಲ್ಲೆ ಕಾಣುವುದು ಹೆಚ್ಚು. ಕೆಲವು ಮನೆಗಳಲ್ಲಂತೂ ಒಳಗೆ ಹೋಗುವ ಮುನ್ನ ಅಂಗಳದಲ್ಲಿರುವ ತುಳಸಿ ಕಟ್ಟೆಯನ್ನು ದಾಟಿಯೆ ಹೋಗಬೇಕು; ಕನಿಷ್ಠ ಸಮೀಪದಲ್ಲಿ ಹಾದಾದರೂ ಹೋಗಬೇಕು.
.
ಅಂತೆಯೆ ತುಳಸಿಗೆ ಮಡಿವಂತಿಕೆ, ಭಕ್ತಿಭಾವದಲ್ಲಿ ಒಂದು ರೀತಿ ವಿಶೇಷ ಸ್ಥಾನಮಾನ. ಅವಳು ಚೆನ್ನಾಗಿ ಬೆಳೆದು ನಳನಳಿಸುತ್ತಿದ್ದಾಳೆಂದರೆ ಅದನ್ನು ಬೆಳೆಸಿದ ಗೃಹಿಣಿಗೆ ತೃಪ್ತಿ, ಹೆಮ್ಮೆ. ಬೆಳೆಸಲೆತ್ನಿಸಿದ ತುಳಸಿ ಬಾಡಿಹೋದರೆ ಶುಭಕರವಲ್ಲವೆಂದು ಬಾಡಿದ ಮುಖ ಮಾಡಿಕೊಳ್ಳುವ ವನಿತೆಯರೆಷ್ಟೊ ಜನ ಪಾಪ.
.
ಸಿಂಗಪುರದಲ್ಲಿ ಲಿಟಲ್ ಇಂಡಿಯಾದಲ್ಲಿ ಕುಂಡದಲ್ಲಿ ಬೆಳೆಸಿದ ತುಳಸಿ ಸಿಗುತ್ತದೆ. ಆದರೆ ಇದರ ಎಲೆಯ ಗಾತ್ರ ತುಂಬಾ ದೊಡ್ಡದು. ನಮ್ಮಲ್ಲಿರುವ ನಾನು ನೋಡಿರುವ ಎಲೆಗಳ ನಾಕೈದು ಪಟ್ಟೆ ದೊಡ್ಡದೆಂದು ಕಾಣುತ್ತದೆ. ಪರಿಮಳ ಕೂಡ ನಮ್ಮದರ ಹಾಗೆ ಸಮೃದ್ದವಿದ್ದ ಹಾಗೆ ಕಾಣುವುದಿಲ್ಲವಾದರೂ, ‘ಸದ್ಯ ಇಷ್ಟಾದರೂ ಸಿಗುತ್ತಲ್ಲಾ’ ಎಂದು ಗೃಹಿಣಿಯರು ಸಮಾಧಾನ ಪಟ್ಟುಕೊಳ್ಳಬಹುದು.
.
ಈ ದಿನದ ಹಬ್ಬದ ನೆನಪಿಗೆ ನನ್ನ ನೆನಪಿನ ತುಣುಕುಗಳನ್ನು ಜೋಡಿಸಿದ ಒಂದು ಪುಟ್ಟ ಕವನ ಇದೊ, ಈ ಕೆಳಗೆ 🙂
.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
.
.
ತುಳಸಿಗಿಂದು ಸಂಭ್ರಮ
______________
.
ತುಳಸಿ
ಗಿಡ ಬೆಳೆಸಿ
ಸಂಭ್ರಮಿಸಿ ಸರತಿ
ಸಂಪ್ರದಾಯದ ಗರತಿ ||
.
ಬೃಂದಾವನ
ಕಟ್ಟಿದ ಅಂಗಣ
ವಠಾರಕು ಬಿಡದೆ
ತುಲಸಿಯ ಸರಹದ್ದೆ ||
.
ತುಳಸಿ ಕಟ್ಟೆ
ನಾಲ್ಕು ಬದಿಗಿಟ್ಟೆ
ದೀಪ ಮಲ್ಲಿಗೆ ಗೂಡು
ಬೆಳಗಿದಾಗೆಲ್ಲ ಸರಿ ಹಾಡು ||
.
ಅಭ್ಯಂಜನ
ಹಚ್ಚಿ ನೀಲಾಂಜನ
ಮುಡಿಗೆ ವಸ್ತ್ರ ಬಿಗಿದೆ
ಅರಿಶಿನ ಕುಂಕುಮ ಹಚ್ಚಿದೆ ||
.
ಒದ್ದೆ ತಲೆ ವಸ್ತ್ರ
ಪೂಜೆ ಪರಿಕರ ಶಸ್ತ್ರ
ಸುತ್ತುವ ಗೃಹಿಣಿ ಸಿತಾರೆ
ತುಳಸಿಗ್ಹಾಡಾಗ್ಹರಿದು ಧಾರೆ ||
.
ಪ್ರತಿದಿನ ಪೂಜೆ
ಸುತ್ತುವಾ ಗೋಜೆ
ಕಟ್ಟೆಗೇಕೆ ಮನೆಯಾಚೆ
ನೀರು ಬೆಳಕಿನು ಹೊಂಚೆ ? ||
.
ಬಾಡದಂತೆಚ್ಚರ
ಶಕುನ ಅಶುಭಕರ
ಒಳಿತಲ್ಲ ಮನೆ ಮನಕೆ
ಶ್ರದ್ದೆ ಭಕ್ತಿ ಸರಿಯಿಲ್ಲದ್ದಕ್ಕೆ ||
.
ವರಿಸಿದ ಮಾಲೆ
ವಿಷ್ಣುವಿನ ಕೊರಳಲೆ
ಪರಿಣಯದಲಿ ಪರಿಮಳ
ಶ್ರೀಹರಿಗು ಪ್ರಿಯಳಾದವಳ ||
.
ವೈಭವ ತುಳಸಿಗೆ
ಸಿಂಗರಿಸಿಕೊಂಡ ಕಟ್ಟೆಗೆ
ಭಕ್ತಿ ನೇತು ಹಾಕಿ ಹೂವ್ವಲೆ
ಹತ್ತಿ ಅರಿಶಿನ ಹಾರದ ಮಾಲೆ ||
.
ತುಲಸಿಯೆಲೆ ಹಿತ
ಆಚರಣೆ ಮನ ವಿಹಿತ
ದೈವತ್ವ ಔಷಧಿಯ ತತ್ವ
ಸಂಪ್ರದಾಯದಲಡಗಿ ಮಹತ್ವ ||
.
.
ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s