00126. ನೂರು ಶತಕಗಳ ಸರದಾರ

ನೂರು ಶತಕಗಳ ಸರದಾರ
___________________

ಕ್ರಿಕೆಟ್ಟಿನಲ್ಲಿ ಪ್ರತಿ ಬಾರಿಯೂ ಚೆಂಡಿಗೆ ವಿಕೆಟ್ಟು ಉರುಳಿದ್ದು ನೋಡಿ ಅಭ್ಯಾಸ. ಆದರೆ ಈ ಬಾರಿ ಒಂದು ವಿಶಿಷ್ಠ ವೈಚಿತ್ರ ನಡೆದು ಹೋಯ್ತು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ. ಕೈಯಲ್ಲಿ ಚೆಂಡಿಲ್ಲದೆ, ಬರಿ ಮಾತಿನ ಮೂಲಕವೆ ಇಡಿ ಭಾರತದ ಹಾಗೂ ವಿಶ್ವದ ಮೂಲೆ ಮೂಲೆಯ ಅಸಂಖ್ಯಾತ ಅಭಿಮಾನಿಗಳೆಲ್ಲರ ವಿಕೆಟ್ಟನ್ನು ಒಂದೆ ಬಾರಿಗೆ ಉರುಳಿಸಿಬಿಟ್ಟರು, ಅಂದು ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿ ವಿದಾಯ ಹೇಳಿದ ಸಚಿನ್ ರಮೇಶ್ ತೆಂಡೂಲ್ಕರ. ಆಯುಧಗಳಿಲ್ಲದೆ, ರಕ್ತಪಾತವಿಲ್ಲದೆ ಯುದ್ಧ ಗೆಲ್ಲುವುದೆನ್ನುತ್ತಾರಲ್ಲ, ಬಹುಶಃ ಅದು ಈ ರೀತಿಯ ಗೆಲುವಿಗೆ ಇರಬೇಕು. ತಮ್ಮ ವೈಯಕ್ತಿಕ ನಿವೃತ್ತಿಯನ್ನು ಇಡೀ ದೇಶವೊಂದರ ಹಬ್ಬವಾಗಿಸಿ, ಒಂದು ದಿನ ಸಾಲದಂತೆ ನವರಾತ್ರಿಯ ಹಾಗೆ ಆಚರಿಸುವಂತೆ ಮೋಡಿ ಮಾಡಿದ ಈ ಜಾದುಗಾರನ ರೀತಿಯೆ ಅನನ್ಯ.

ನೆನಪಿಡಿ, ಇದುವರೆವಿಗೂ ಇಡೀ ಪ್ರಪಂಚದಲ್ಲಿ ಯಾವ ಕ್ರಿಕೆಟಿಗನಿಗೂ ಇಂತಹ ಅಭೂತಪೂರ್ವ ಬೀಳ್ಕೊಡುಗೆ ಸಿಕ್ಕಿರಲಿಲ್ಲ; ಪ್ರಾಯಶಃ ಇನ್ಯಾರಿಗೂ ಸಿಗುವುದೂ ಇಲ್ಲ. ಇಡೀ ದೇಶದೆಲ್ಲ ಅಭಿಮಾನಿಗಳು ಏಕಸ್ವರದಿಂದ ಪ್ರತ್ಯಕ್ಷವಾಗಿಯೊ, ಪರೋಕ್ಷವಾಗಿಯೊ ಪಾಲ್ಗೊಂಡು ಇಡಿ ವಿದಾಯದ ಪ್ರಕ್ರಿಯೆಯನ್ನೆ ‘ನ ಭೂತೋ, ನ ಭವಿಷ್ಯತೇ..’ ಎನಿಸುವಂತೆ ದಿಗ್ಭ್ರಮೆ ಹುಟ್ಟಿಸುವ ಮಟ್ಟದಲ್ಲಿ ಆಚರಿಸಿದ್ದು ಭಾರತವಿರಲಿ, ಹೊರಗಿನ ಪ್ರಪಂಚಕ್ಕೂ ಸೋಜಿಗ ಹುಟ್ಟಿಸಿರಲಿಕ್ಕೆ ಸಾಕು. ಇದೇನು ನಿವೃತ್ತಿಯಾಗುವ ವಿಷಾದ, ಖೇದದ ಬದಲು ಉತ್ಸವ, ಮೆರವಣಿಗೆಯ ಉರವಣಿ ಸಾಗುತ್ತಿದೆಯಲ್ಲ ಎಂದು ಅಚ್ಚರಿಪಟ್ಟಿರಲೂಬಹುದು. ಆದೆ ಗಳಿಗೆಯಲ್ಲಿ ಪ್ರತಿಯೊಬ್ಬ ಕ್ರಿಕೆಟ್ಟಿಗನ ಮನದಲ್ಲಿ ಈರ್ಷೆಯ ಕುಡಿಯನ್ನು ಹುಟ್ಟು ಹಾಕಿರಲೂಬಹುದು – ತಾವಾರೂ ಸಾಧಿಸಲಾಗದ ಅಪೂರ್ವ, ಅಪರೂಪದ ಸಾಧನೆಗಳ ಸರದಾರನಿಗೆ ಸಿಗುತ್ತಿರುವ ಪ್ರೀತಿ, ವಿಶ್ವಾಸ, ಆದರಗಳ ಪ್ರವಾಹವನ್ನು ಕಂಡು. ಅಷ್ಟೇಕೆ, ಎಷ್ಟೋ ಜನ ರಾಜಕಾರಣಿಗಳಿಗನಿಸಿರಬಹುದು – ತಾವೆಂದಾದರೂ ಈ ರೀತಿಯ ವಿವಾದಾತೀತ ವಾತಾವರಣದಲ್ಲಿ ಈ ರೀತಿಯ ಏಕಧ್ವನಿಯ , ಅವಿರೋಧಿ ಬೆಂಬಲಿಗರ ನಡುವೆ ಇಂತಹ ಸಭೆ ನಡೆಸಲು ಸಾಧ್ಯವೆ ಎಂದು. ಸಚಿನ್ ಹೇಳಿದಂತೆ ಅದೊಂದು ಅದ್ಭುತ ಕನಸು – ನನಸಾದ ಕನಸು. ಮಾತ್ರವಲ್ಲ, ಅದನ್ನು ನೋಡುತ್ತಿದ್ದ ಲಕ್ಷಾಂತರ ಕಣ್ಣುಗಳಲ್ಲಿ ಆ ಸಾಧನೆಯ ಹಾದಿಯಲ್ಲಿ ತಾವೂ ಒಂದೂ ಕೈ ನೋಡಿ, ಹೆಮ್ಮರವಾಗಲ್ಲದಿದ್ದರೂ , ಗರಿಕೆ ಹುಲ್ಲಾದರೂ ಆಗಬೇಕೆಂಬ ಹಂಬಲ, ಛಲ ಹುಟ್ಟಿಸಿರಬಹುದಾದ ಗಳಿಗೆ. ಆ ಗಳಿಗೆಯಿಂದ ಇನ್ನು ಅದೆಷ್ಟು ತೆಂಡೂಲ್ಕರರು ಹುಟ್ಟಿ ಬರಲಿದ್ದಾರೊ, ಕಾಲವೆ ಹೇಳಬೇಕು.

ಆ ಕಡೆಯ ನಿಮಿಷಗಳಲ್ಲಿ ಅಷ್ಟೆಲ್ಲ ಮಾನಸಿಕ ಸಿದ್ದತೆಯ ನಡುವೆಯೂ, ತಾನಿಷ್ಟು ಪ್ರೀತಿಸಿದ ಜೀವಕ್ಕೆ ಜೀವವಾದ ಆಟದಿಂದ ತಾನು ನಿವೃತ್ತನಾಗಬೇಕಲ್ಲ, ದೇಶವನ್ನು ಪ್ರತಿನಿಧಿಸುವ ಕಾಯಕದಿಂದ ಹೊರತಾಗಿಸಿಕೊಳ್ಳಬೇಕಲ್ಲಾ ಎಂಬ ನೋವು ಭಾವಾತ್ಮಕ ಕಂಬನಿಯ ರೂಪ ತಾಳಿ, ಪದಗಳಾಗಿ ಹೊಮ್ಮಿದ್ದರಲ್ಲಿ ಅತಿಶಯವೇನೂ ಇಲ್ಲ. ನಿಜ ಹೇಳುವುದಾದರೆ, ಈಗ ಸಚಿನ್ ಸ್ಥಾನ ತುಂಬಲು ಸಾಲುಸಾಲು ಯುವಕರ ದಂಡೆ ಇದೆ. ಆ ದೃಷ್ಟಿಯಿಂದ ಸ್ವತಃ ಸಚಿನ್ ಕೂಡ ನಿರಾಳವಾಗಿ ಸರಿದು, ಆರಾಮವಾಗಿ ವೀಕ್ಷಿಸಬಹುದು ಮುಂದಿನ ಪೀಳಿಗೆಯ ಕಾಣಿಕೆ, ಕಾರ್ಯ ಚಟುವಟಿಕೆಯನ್ನ. ಆದರೆ ನಲವತ್ತಕ್ಕೆ ನಿವೃತ್ತಿಯಾದ ಸಚಿನ್ ಅದು ಹೇಗೆ ಕ್ರಿಕೆಟ್ ರಹಿತ ಜೀವನಕ್ಕೆ ಹೊಂದಿಕೊಳ್ಳಬಲ್ಲ, ಮತ್ತು ಹಾಸು ಬಿದ್ದಿರುವ ಉಳಿದ ಸಮಯವನ್ನು ಹೇಗೆ ದೂಡಬಲ್ಲ ಎಂಬುದು ಕುತೂಹಲಕಾರಿ ವಿಷಯ – ಯಾಕೆಂದರೆ ನಮ್ಮಲ್ಲೆಷ್ಟೊ ಜನರ ಸ್ವತಂತ್ರ ಜೀವನ ನಿಜವಾದ ಅರ್ಥದಲ್ಲಿ ಆರಂಭವಾಗುವುದೆ ನಲವತ್ತರ ನಂತರ. ಸದ್ಯಕ್ಕೆ ಆತ್ಮ ಕಥನದ ಕುರಿತು ಮಾತಾಡಿರುವ ಸಚಿನ್, ಪ್ರಾಯಶಃ ಅದರತ್ತ ಮೊದಲು ಗಮನ ಹರಿಸಿ ಬ್ಯಾಟು, ಬಾಲು, ಮೈದಾನಗಳಿಲ್ಲದ ದಿನಗಳಿಗೆ ಹೊಂದಿಕೊಳ್ಳಲು ಪ್ರಯತ್ನಿಸಬಹುದು.

ಅದು ಹೇಗಾದರೂ ಸರಿ – ಇಪ್ಪತ್ನಾಲ್ಕು ವರ್ಷದ ಸುಧೀರ್ಘ ಕ್ರಿಕೆಟ್ ಒಡನಾಟದಲ್ಲಿ ಸಚಿನ್ ಈ ದೇಶದ ಕ್ರಿಕೆಟ್ಟಿಗೆ ಕೊಟ್ಟ ಕಾಣಿಕೆ ಅಪಾರ. ಬಹುಶಃ ಮುಂದೆ ಯಾರೂ ಅಷ್ಟು ಧೀರ್ಘಕಾಲ ಆಡಲು ಸಾಧ್ಯವೆ ಆಗದಿರಬಹುದು. ಅಂತೆಯೆ, ನಮ್ಮ ದೇಶದ ಎಷ್ಟೊ ಒಡಕಲು ದನಿ, ಸುದ್ಧಿಗಳ ನಡುವೆ ಆಶಾಕಿರಣದಂತೆ ಕಾಣಿಸಿಕೊಂಡು, ಜಗತ್ತಿನ ಭೂಪಠದಲ್ಲಿ ನಾವು ತಲೆಯೆತ್ತಿ ನಿಲ್ಲಲು ಮತ್ತೊಂದು ಕಾರಣವಾದವನು. ಆ ಸಾಧನೆಯ ನೆನಪು ಮತ್ತು ಕೃತಜ್ಞತೆಯ ಕುರುಹಾಗಿ ಆ ಕೊನೆಯ ಗಳಿಗೆಗಳನ್ನು ಸೆರೆಹಿಡಿಯಲೆತ್ನಿಸಿದ ಯತ್ನ ಈ ಕವನ – ಸಚಿನ್ ಸಾಧನೆಗೆ ಸಮರ್ಪಿತ.

ಮರೆತೆ ಒಂದೆ ಹೆಸರು, ಅದು ನಿನ್ನದೆ!
_______________________

ನೂರು ಶತಕಗಳಾ ಸರದಾರ
ಪಕ್ಕ ಸರಿದೆ, ಮತ್ತೆ ಪರಿಹಾರ?
ನಿವೃತ್ತಿ ನಿನಗೆ ಹಾಕಿತೆ ಹಾರ
ನಲವತ್ತಕ್ಕೆ ನೀ ಗಳಿಸಿ ಅಪಾರ ||

ಎಳೆಯನಿಗಿರಲಿಲ್ಲ ಭಾರತರತ್ನ
ನಿವಾರಿಸೀ ಕೊರತೆ ನಿನ್ನ ಯತ್ನ
ನಿನ್ನಿಂದಲೆ ಯುವ ಜಗಕೆ ಹೆಮ್ಮೆ
ಸಾಧಿಸಲುಳಿದಿದ್ದೇ ಬರಿ ಸೊನ್ನೆ ||

ಬೀಳ್ಕೊಡುಗೆ ನಡೆದು ನವರಾತ್ರಿ
ಹಬ್ಬದಂತೆ ಆಚರಿಸಿದರೆ ಖಾತ್ರಿ
ಇಡೀ ದೇಶಾ ಅತ್ತಿದ್ದು ಯಾವತ್ತು?
ಒಬ್ಬನಿಗಾಗಿ ಮಿಡಿದಾ ಈ ಹೊತ್ತು ||

ಕುಹುಕವಿಲ್ಲದ ವಿದಾಯ ಯಾತ್ರೆ
ಹೊಗಳಿಕೆಯಷ್ಟೆ ಬೇರಿಲ್ಲದ ಜಾತ್ರೆ
ಯಾವ ನೇತಾರಗೆ ಕಂಡ ನೆನಪಿಲ್ಲ
ಇಡೀ ನಾಡಿನ ಜನರೇ ಸೇರಿದ್ದರಲ್ಲ ||

ತಂಡದ ನಡುವಿನಲಿ ಗೌರವ ರಕ್ಷೆ
ನಿವೃತ್ತಿ ರನ್ನಲು ಗೌರವಾನ್ವಿತ ಕಕ್ಷೆ
ತಲೆಯೆತ್ತಿ ಆಟ ಆಡಿದ ಮೈದಾನ
ತಲೆ ತಗ್ಗಿ ಕಂಬನಿ, ನಡೆದೆ ನಿಧಾನ ||

ನಿನ ರಣರಂಗ ಪಿಚ್ಚು, ಅಚ್ಚುಮೆಚ್ಚು
ಕಣ್ಣಿಗೊತ್ತಿಕೊಂಡಾಗ ಜನಕು ಹುಚ್ಚು
ಅಳದಿದ್ದವರೆಲ್ಲ ಅತ್ತರಲ್ಲವೆ ಅಂದು
ಅರಿವಾಯ್ತೆ ಆಗ ನೀನಿಲ್ಲಾ ಮುಂದು ||

ಮೊದಲೆ ನುಡಿದೆ ನಿವೃತ್ತಿ ವಿಷಯ
ಹಬ್ಬದ ನೆಪದಲಿ ಮರೆಸೇ ಕಹಿಯ
ಕಿಲಾಡಿ ನೀನು ಮೈಮರೆಸಿಟ್ಟೆ ಬಿಟ್ಟೆ
ಆಚರಣೆ ಸಂಭ್ರಮದೆ ಕೈಕೊಟ್ಟೆಬಿಟ್ಟೆ ||

ಮಾತಾಡಿದೆ ಏನು, ಭಾಷಣ ಜೇನು
ಮಾತರಿಯ ನಾಚಿ ಮಾತಾಡಿದ್ದೇನು!
ಬಿಚ್ಚಿಟ್ಟಾ ಹೃದಯ ಒಳಗಿತ್ತೆ ಸಂಕಟ
ಧನ್ಯ ಕಡೆವರೆಗು, ಬಿಡಲಿಲ್ಲ ವೆಂಕಟ ||

ಮಾತಾ ಪಿತರೆಂದೆ, ಸತಿ ಸುತರೆಂದೆ
ಸಹಜಾತ ಕೆಳೆ ಗುರುಗೆಲ್ಲ ನಮಿಸಿದೆ
ಯಾರ ಬಿಟ್ಟಿಲ್ಲ ಎಲ್ಲರ ಹೆಸರು ಇದೆ
ಮರೆತೆ ಒಂದೆ ಹೆಸರು, ಅದು ನಿನ್ನದೆ ||

ಹಿಂದಿನವರೆಲ್ಲ ಬರೆದದ್ದು ಇತಿಹಾಸ
ನಿನ್ನ ಬರೆಯುತಲೆ ಚರಿತ್ರೆಗೆ ಸೊಗಸ
ಬೇಕಿರಲಿ ಬಿಡಲಿ ಕುರಿತಾಡುತ ನಿನ್ನ
ಭವಿತದಲೆಲ್ಲ ಪ್ರಸ್ತುತವಾಗಿ ಸ್ಪಂದನ ||

(Sampada 18.11.2013)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s