00128. “ಬೀರಿನ” ದೇವರು ಒಳಗಿಳಿದರೆ ಶುರು!

“ಬೀರಿನ” ದೇವರು ಒಳಗಿಳಿದರೆ ಶುರು !
_____________________________

ಈಗಿನ ಆಧುನಿಕ ಸಮಾಜದ ಸಾಮಾಜಿಕ ಪರಿಸರದಲಿ ‘ಸಾಮಾಜಿಕ ಕುಡಿತದ’ ಹೆಸರಿನಲ್ಲಿ ಸಾಧಾರಣ ಬಹುತೇಕರು ‘ಬೀರಬಲ್ಲ’ರಾಗಿರುವುದು ಎದ್ದು ಕಾಣುವ ಪ್ರಕ್ರಿಯೆ. ‘ಕುಡಿಯದ’ ಖಂಡಿತವಾದಿಗಳೂ ಸಹ, ಬೀರಬಲ್ಲರಾಗದಿದ್ದರೂ ಬೀರ’ಬಲ್ಲವ’ರಾಗಿರುವುದಂತೂ ಖಚಿತ. ಕೆಲವು ತೂಕದ ಬೀರಬಲ್ಲರು ಕುಡಿದರೂ ಇರುವೆ ಕಚ್ಚದ ಹಾಗೆ ಸಮತೋಲನದಲ್ಲಿರಬಲ್ಲ ಘನಿಷ್ಟರಾದರೆ, ಮತ್ತೆ ಕೆಲವರು ತಮ್ಮ ‘ಲಿಮಿಟ್’ ತಿಳಿದುಕೊಂಡು, ಅದು ಮೀರದಂತೆ ಹತೋಟಿ ಕಾಯ್ದುಕೊಂಡು ಸಂಭಾಳಿಸುವವರು. ಮತ್ತುಳಿದ ‘ಬೀರ್ದಾಸರು’ ಸಿಕ್ಕಿದವರಿಗೆ ಸೀರುಂಡ ಎಂದುಕೊಂಡು ಸಿಕ್ಕಿದ್ದೆಲ್ಲ ಉಡಾಯಿಸಿ ಮಾತು, ಮನಸು, ದೇಹ – ಎಲ್ಲವನ್ನು ಸಡಿಲಬಿಟ್ಟು ಬೀರಾಡಿ, ತೂರಾಡುತ, ಹಾರಾಡುವ ಪರಿಯೂ ಅಷ್ಟೆ ಸಾಮಾನ್ಯವಾಗಿಹ ದೃಶ್ಯ.

ಅಂತಹ ದೃಶ್ಯವನ್ನು ದಿನರಾತ್ರಿಯೂ ಕಾಣುತ್ತಿದ್ದ ಬಾಲ್ಯದ ನೆನಪು ಇನ್ನು ಹಚ್ಚ ಹಸಿರು. ಆ ದಿನಗಳಲ್ಲಿ ನಾವು ವಾಸಿಸುತ್ತಿದ್ದ ಸ್ಥಳದಲ್ಲಿ ಬೀರಬಲ್ಲರೂ ಇದ್ದರು, ಅವರನ್ನು ಮೀರಿಸಿದ ‘ಪ್ಯಾಕೆಟ್ಟಿನ’ ಗಿರಾಕಿಗಳೂ ಇದ್ದರು. ಅದರಲ್ಲೂ ತರಾತುರಿಯಲ್ಲಿ ಪ್ಯಾಕೆಟೊಂದನ್ನು ಜೇಬಿನಿಂದ ಎಳೆಯುತ್ತ, ಕೈಯಲ್ಲೊಂದೆರಡು ಉಪ್ಪಿನ ಹರಳು ಹಿಡಿದು ನಂಚಿಕೊಳ್ಳುತ್ತ ಗಟಗಟ ಏರಿಸಿಬಿಟ್ಟರೆಂದರೆ ಸಾಕ್ಷಾತ್ ಪರಮಾತ್ಮನ ಅಪರಾವತಾರವೆ ಇಳಿದುಬಂದಂತೆ. ವೈನ್ ಶಾಪುಗಳಿಂದ ರಮ್ಮು, ವಿಸ್ಕಿ, ಬ್ರಾಂದಿಯಂತಹ ‘ಹಾಟ್ ಡ್ರಿಂಕ್ಸಿಗೆ’ ಶರಣಾದವರ ಸಂಖ್ಯೆಯೇನೂ ಕಡಿಮೆಯಿರುತ್ತಿರಲಿಲ್ಲ. ಕುಡಿತದ ಮೂಲ ಪ್ರಕೃತಿ ಯಾವುದೆ ಆದರೂ, ನಂತರದ ನಡುವಳಿಕೆಯ ಪ್ರವೃತ್ತಿ ಮಾತ್ರ ಹೆಚ್ಚುಕಡಿಮೆ ಒಂದೆ ಆಗಿರುತ್ತಿತ್ತು. ಆಗೆಲ್ಲ ಮನೆ ಬಾಗಿಲ ಹೊರಗೆ ಕುಳಿತು ನಿದ್ದೆ ಬರುವ ತನಕ ಈ ಬಿಟ್ಟಿ ಮನರಂಜನೆಯನ್ನು ಆಸ್ವಾದಿಸುವುದು ನಮಗೊಂದು ತರಹ ಮಜವಾಗಿರುತ್ತಿತ್ತು.

ಗೆಳೆಯರ ಜತೆಯೊ, ಇನ್ನಾವುದೊ ತರದ ‘ಗುಂಡು’ ಪಾರ್ಟಿಯಲ್ಲಿ ಕುಡಿದು ಕೊನೆಗೆ ಮನೆಗೆ ಹೊರಟಾಗ ಹೊರ ಜಗತ್ತಿನ ಕಣ್ಣಿಗೆ ಆದಷ್ಟು ಸಮತೋಲನದಲಿರುವಂತೆ ಕಾಣಿಸಲು ಹೆಣಗಾಡುತ, ಮನೆ ಸೇರಿದ ಮೇಲೂ ಬಾಯಿಯ ವಾಸನೆ ಅರಿವಾಗದಂತೆ, ಕುಡಿದದ್ದು ಗೊತ್ತಾಗದಂತೆ ಹೇಗೊ ತೂರಾಟ ನಿಯಂತ್ರಿಸಲು ಒದ್ದಾಡುತ್ತ ಮಲಗುವ ಜಾಗ ಸೇರುವುದು ಮತ್ತೊಂದು ಸಾಧಾರಣ ಚಿತ್ರ. ಅದನ್ನು ನೋಡಿಯೂ ಗೊತ್ತಿದ್ದು ಗೊತ್ತಿಲ್ಲದವರಂತೆ ಕ್ಷಿಪ್ರ ಶಯನಕೆ ಅನುವು ಮಾಡಿಕೊಡುವ ಮನೆಯವರದು ಇನ್ನೊಂದು ಬಗೆಯ ಚಿತ್ರಣ. ಒಟ್ಟಾರೆ ಎಲ್ಲಾ ಒಂದು ತನ್ನದೆ ಆದ ಪರಿಸರದ ‘ಎಕೋ ಸಿಸ್ಟಂ’ನಲ್ಲಿ ನಡೆದಂತೆ ಭಾಸವಾಗುತ್ತವೆ.

ಆ ದಿನಗಳಲ್ಲಿ ಕಂಡ ದೃಶ್ಯಗಳ, ಘಟನೆಗಳ ತುಣುಕುಗಳನೆಲ್ಲ ‘ಬೀರಿನ’ ದೇವರ ಹೆಸರಲ್ಲಿ ಕಟ್ಟಿಡುವ ಯತ್ನ ಈ ಕವನದಲ್ಲಿದೆ.

“ಬೀರಿನ” ದೇವರು ಒಳಗಿಳಿದರೆ ಶುರು !
_____________________________

ಬೀರಿನ ದೇವರು
ಒಳಗಿಳಿದರೆ ಶುರು
ರತ್ನನ ಪದಗಳು
ಹರಿದಾಡುವ ಜೋರು ||

ಎಳೆದಾ ತೇರು
ಬಾಟಲಿನಲೆ ಬೆವರು
ಹತ್ತಿಯಂತೆ ಹಗುರ
ಹೆಚ್ಚೆಚ್ಚು ಕುಡಿದಂತೆ ನೀರಾ ||

‘ಜುಂ’ ಹಿಡಿದ ತೊಗಲೊ
ತಿಳಿಯದ ಹಗಲೊ ಇರುಳೊ
ಮಂಕು ದೀಪದ ಕೆಳಗೆ
ಸೂರ್ಯನ ಕಾಯಿಲೆಗೆ ದಿಗಿಲು ||

ಮಾತೆಲ್ಲಾ ಸದರ
ಅಯೋಮಯದವತಾರ
ಕೇಳಿದ್ದೆಲ್ಲ ಮಂಜೂರಾತಿ
ಲೆಕ್ಕವಿಡಲು ಬೀರಿನ ಸರತಿ ||

ನಡೆದದ್ದೆ ನೆಟ್ಟಗೆ
ನೆಲ ಮೇಲ್ಮೇಲೆದ್ದು ಲಟಿಕೆ
ಬೀರ್ಭಾರಕೆ ಭೂಕಂಪಿಸೆ
ಸುಳ್ಳೆ ತೂರಾಟ ಆರೋಪಿಸೆ ||

ಬುದ್ದಿಯೆಲ್ಲ ಹತೋಟಿ
ಮಾತಷ್ಟೆ ತುಸು ಲಂಗೋಟಿ
ಅರ್ಧಂಬರ್ಧ ತೊದಲಿಟ್ಟು
ಎಲ್ಲ ಮಾದೇಶನಾದೇಶ ಗಟ್ಟಿ ||

ನೇರಕ್ಕೆ ನಡೆದು ಸೊಟ್ಟ
ಹೇಗೊ ಸೇರಿದ ಅಟ್ಟ
ಬಾಯ್ವಾಸನೆ ಬಿಗಿದ ತುಟಿ
ಮಲಗೊ ರಾತ್ರಿ ಶಿವನೆ ಗತಿ ||

————————————————————————————
ನಾಗೇಶ ಮೈಸೂರು, ಸಿಂಗಾಪುರ
————————————————————————————

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s