ರಾಜರತ್ನಂ ನೆನಪಿಗೆ…
______________
.
ನಾಳೆ (೦೫ ನೆ ಡಿಸೆಂಬರ) ಅಭಿಮಾನಿ ಬಳಗದಲ್ಲಿ ಪ್ರೀತಿಯಿಂದ ಗುಂಡು ಪಂಡಿತರೆಂದೆ ಕರೆಸಿಕೊಳ್ಳುವ ಕನ್ನಡದ ಹಿರಿಯ ಪ್ರಖ್ಯಾತ ಕವಿ ಜಿ.ಪಿ.ರಾಜರತ್ನಂರವರ ಜನ್ಮದಿನ. ಎಷ್ಟೋ ಸಾಮಾನ್ಯ ಜನರಿಗೆ ಅವರ ಹೆಸರು ಗೊತ್ತಿರದಿದ್ದರೂ, ಅವರ ಗುಂಡಿನ ಪದ್ಯಗಳು ಚೆನ್ನಾಗಿ ತಿಳಿದಿರುತ್ತವೆ – ಅಷ್ಟರಮಟ್ಟಿಗೆ ಪ್ರಸಿದ್ದವಾದ ಕುಡಿತದ ಹಾಡುಗಳು ಶ್ರೀ ರಾಜರತ್ನಂ ರವರದು. ‘ರತ್ನನ ಪದಗಳು’ ಕವಿಯಾಗಿ ಇವರ ಹೆಸರನ್ನು ಅಜರಾಮರಗೊಳಿಸಿದರೆ, ಉತ್ಕೃಷ್ಟ ಹಾಗೂ ಅಡಂಬರವಿಲ್ಲದ ಜನಪದದ ಯಥಾವತ್ ದಾಖಲೆಯಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಗಟ್ಟಿಯಾಗಿ ನೆಲೆಯೂರಿಬಿಟ್ಟಿದೆ. ಭೂಮಿನ್ ತಬ್ಬಿದ್ ಮೋಡ್ ಇದ್ದಂಗೆ, ಬ್ರಹ್ಮ ನಿಂಗೆ ಜೋಡಿಸ್ತೀನಿ, ಯಂಡ ಯಡ್ತಿ ಕನ್ನಡ್ ಪದಗಳ್ ಅಂದ್ರೆ ರತ್ನಂಗ್ ಪ್ರಾಣ, ಬೇವರ್ಸಿ ನನ್ ಪುಟ್ನಂಜಿ, ನೀನ್ ನನ್ ಅಟ್ಟಿ ಬೆಳಕ್ ಇದ್ದಂಗೆ – ಹೀಗೆ ಕುಡುಕ ರತ್ನನ ಲೋಕದ ಹಾಡುಗಳೆಲ್ಲ ಅಚ್ಚೊತ್ತಿದಂತೆ ನಿಂತುಬಿಟ್ಟಿವೆ ಕನ್ನಡಿಗರ ಮನದಲ್ಲಿ. ಅದನ್ನು ಇನ್ನು ಆಳದಲ್ಲಿ ಅಳ್ಳಾಡದಂತೆ ಬೇರೂರಿಸುವ ಕಾರ್ಯ ಮಾಡಿದವರು ನಮ್ಮ ಭಾವಲೋಕದ ಗಾನ ಗಂಧರ್ವರು. ಈ ಪದಗಳಿಗೆ ಮಧುರವಾದ ರಾಗ ಹಾಕಿ ಹಾಡಿನ ಮುಖಾಂತರ ಪಂಡಿತರಿಂದ ಪಾಮರರತನಕ ಈ ಸೊಗಡಿನ ಸಾಹಿತ್ಯವನ್ನು ನಿರರ್ಗಳವಾಗಿ ಹರಿಯುವಂತೆ ಮಾಡಿದರು. ಹೀಗಾಗಿ ರಾಜರತ್ನಂರ ಹೆಸರು ಕನ್ನಡ ಸಾಹಿತ್ಯಾಭಿಮಾನಿಗಳ ಮನದಲ್ಲಿ ಒಂದು ವಿಶಿಷ್ಟ ಸ್ಥಾನ ಗಳಿಸಿ ಶಾಶ್ವತವಾಗಿ ನಿಂತುಬಿಟ್ಟಿದೆ. ಅದರಲ್ಲೂ ಸ್ವತಃ ತಾವೆ ಕುಡಿಯದ ರಾಜರತ್ನಂ ಅದು ಹೇಗೆ ಅಷ್ಟು ಚೆನ್ನಾಗಿ ಅನುಭಾವಿಸಿ , ಸತ್ವಯುತವಾಗಿ, ಪ್ರಭಾವಶಾಲಿಯಾಗಿ ಬರೆಯಲು ಸಾಧ್ಯವಾಯಿತೆಂಬುದು ಈ ವ್ಯಕ್ತಿತ್ವದ ಪ್ರತಿಭೆ, ಹಿರಿಮೆಯ ಮತ್ತೊಂದು ದ್ಯೋತಕ.
.
ಬರಿ ಕುಡುಕ ರತ್ನನ ಹಾಡುಗಳಿಗೆ ಮಾತ್ರವಲ್ಲದೆ ರಾಜರತ್ನಂ ಮಕ್ಕಳ ಪದ್ಯದಿಂದಲೂ ಅಷ್ಟೆ ಹೆಸರಾದವರು. ಬಣ್ಣದ ತಗಡಿನ ತುತ್ತೂರಿ, ನಾಯಿಮರಿ ನಾಯಿಮರಿ ತಿಂಡಿ ಬೇಕೆ, ನಮ್ಮ ಮನೆಯಲೊಂದು ಸಣ್ಣ ಪಾಪ – ಹೀಗೆ ಇನ್ನೂ ಅನೇಕ ಪ್ರಖ್ಯಾತ ಶಿಶು ಗೀತೆಗಳ ಜನಕರಾಗಿ ತಮ್ಮದೆ ಆದ ಛಾಪು ಮೂಡಿಸಿದವರು. ಅವರ ಜನ್ಮದಿನದ ಹೊತ್ತಿನಲ್ಲಿ, ಅವರ ನೆನಪಿಗಾಗಿ ಈ ಎರಡು ಕವನಗಳ ಕಿರು ಕಾಣಿಕೆ, ಅರ್ಪಣೆ ವಿನಮ್ರತೆಯಿಂದ
.
01. ಕುಡೀದಿದ್ರೂ ಒಂದೇ ಒಂತೊಟ್ಟು
02. ಗುಂಡು ಪಂಡಿತ ರಾಜರತ್ನಂ
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
.
.
ಕುಡೀದಿದ್ರು ಒಂದೇ ಒಂತೊಟ್ಟು …
___________________________
(ರಾಜರತ್ನಂ ನೆನಪಿಗೆ – 01)
.
ವತ್ತಾರೆ ಹೊತ್ನಲ್ಲಿ ರಾತ್ರಿ ಕತ್ಲಲ್ಲಿ
ಮೂರೊತ್ತು ಇದ್ದಂಗೆ ಹೆಂಡದ್ಮತ್ನಲಿ
ಕುಡೀದಿದ್ರು ರಾಜ ಒಂದೇ ಒಂತೊಟ್ಟು
ಕುಡ್ದವ್ರ ಪದ-ರತ್ನ ಉದುರಿ ಕಟ್ಕಟ್ಟು || 01 ||
.
ನರ್ಕ ನಾಲ್ಗೆ ಎದ್ ಬಿದ್ದಾಯ್ತು
ಕೊಚ್ಚೆಲದ್ದಿ ಮೇಲುಕ್ಕೆದ್ದಾಯ್ತು
ಮೂಗಷ್ಟೆ ಸಾಲ್ದು ಬಿಚ್ಬೇಕು ಹೊಲ್ಗೆ
ಜೋರಾಗ್ಬೇಕೀಗ ‘ಸಿರಿಗನ್ನಡಂ ಗೆಲ್ಗೆ’ || 02 ||
.
ಕುಡ್ದವರೆ ವಾಸಿ ನಮ್ಕನ್ನಡದಾ ಆಸ್ತಿ
ಬೈಯೋದುಗಿಯೋದೆಲ್ಲ ಕನ್ನಡ್ದಲ್ಲೆ ಜಾಸ್ತಿ
ಕುಡುಕ್ರಲ್ಲದ್ಮರ್ವಾದಸ್ತ್ರು ಆಡಿದ್ದೆ ಕಮ್ಮಿ
ಬುಟ್ಟಾಕಿ ಕನ್ನಡಾನೆ ಆಡ್ತಾರಿಂಗ್ಲಿಷ್ ರಮ್ಮಿ || 03 ||
.
ಯಾಕ್ರಣ್ಣ ನಾಚ್ತೀರ ತಾಯ್ಭಾಷೆ ಮಸ್ತ
ಆಡ್ಕೊಂಡು ಹಾಡಾಡ್ತ ಬೆಳ್ಸೋಕೇನ್ ಕಸ್ಟ
ಒಂದೊಪ್ಪತ್ತು ತಿಂದ್ರೂನು ಕನ್ನಡ್ದಲ್ ಅಳ್ತಾ
ಬಾಯ್ಬಿಕ್ತಾನೆ ಬದ್ಕಿಲ್ವಾ, ಆಗ್ದಂಗೆ ಸಸ್ತಾ? || 04 ||
.
ಪುಟ್ನಂಜ ಪುಟ್ನಂಜಿ ರಾಜ್ರತ್ನಂ ಮೊಕ್ತ
ಬಂದ್ ಹೋಗ್ರಪ್ಪ ಸ್ವಲ್ಪ ಮಾತಲ್ಲೆ ಇಕ್ತಾ
ಹಂಗಾದ್ರೂ ಮೇಲೇಳ್ಲಿ ಕನ್ನಡದ ಗಾಳಿ
ಧೂಳೀಪಟ ಮಾಡ್ತಾ ನುಗ್ದಂಗೆ ಗೂಳಿ || 05 ||
.
————————————————————————————
ನಾಗೇಶ ಮೈಸೂರು, ೦೪. ಡಿಸೆಂಬರ. ೨೦೧೩, ಸಿಂಗಾಪುರ
————————————————————————————-
.
.
ಗುಂಡು ಪಂಡಿತ ರಾಜರತ್ನಂ
_________________________
(ರಾಜರತ್ನಂ ನೆನಪಿಗೆ – 02)
.
ಕುಡ್ಕುರ ಕಿರೀಟ ರಾಜರತ್ನ
ಪುಟ್ನಂಜ ನಂಜಿ ಗ್ಯೆಪ್ತಿ ಯತ್ನ
ಕುಡ್ದಿದ್ದೆ ಕನ್ನಡ್ಸಾರಾಯಿ ಹೆಸರು
ಬಾಯ್ವಾಸನೆ ಬರಿ ಕನ್ನಡದುಸ್ರು || 01 ||
.
ಅದೇನಪ್ಪಾ ಇಲ್ಲೆಡವಟ್ಟು
ಪಾಠನ್ ಮಾಡ್ದಂಗೆ ಗಟ್ಟು
ವದರೊಕಾಗುತ್ತಾ ಪುನುಗು
ಯಾರ್ದೊ ಅನುಭವ ಬರ್ದು || 02 ||
.
ಗುನುಗಲ್ಲೆ ಗುಂಡು ಹಾಕ್ತ
ರತ್ನನ ಪರ್ಪಂಚನೆ ಸಾಕ್ತಾ
ನೋಡ್ನೋಡ್ತಾನೆನೆ ಪರಿಣಿತ
ರಾಜರತ್ನಂ ಗುಂಡು ಪಂಡಿತ || 03 ||
.
ಕುಡ್ದು ಬಿದ್ದೋರ ಕಥನ
ನೋಡ್ತಾ ಕೇಳ್ತಾನೆ ಮಥನ
ಹೇಗ್ಬಂತೊ ಸರಸರ ಕವನ
ಜನ ಜೀವ್ನಾನೆ ಪದ್ಯಾನ? || 04 ||
.
ಕುಡ್ದು ಹಾಳಾಗೊರ್ ಬಾಳಾಟ
ಬಿದ್ದು ತೂರಾಡ್ಸೊ ಹಾರಾಟ
ತೊದಲೊ ಮಕ್ಕಳ್ ಸಾವಾಸ
ಕನ್ನಡಕ್ಕೊಸ್ಕರ ಏನೇನ್ ವೇಸ || 05 ||
.
————————————————————————————
ನಾಗೇಶ ಮೈಸೂರು, ೦೪. ಡಿಸೆಂಬರ. ೨೦೧೩, ಸಿಂಗಾಪುರ
————————————————————————————-
.
00130. ರಾಜರತ್ನಂ ನೆನಪಿಗೆ
Advertisements
ಅದ್ಭುತವಾಗಿದೆ ನಾಗೇಶ್ ರವರೆ,
ನಿಮ್ಮ ಲೇಖನಿಯ, ಅಲ್ಲಲ್ಲ, (ಐ ಪ್ಯಾಡ್ ಮೇಲಿನ) ಬೆರಳುಗಳ ಚಮತ್ಕಾರ, ಕನ್ನಡದ ಮೇಲಿನ ಮಮಕಾರ ಹಾಗೂ ಕಲ್ಪನಾ ಆವಿಶ್ಕಾರ, ಸಾಗಲಿ ನಿರಂತರ .
ದೀಪಕ್ ಜಿ ಕೆ
LikeLike
ಧನ್ಯವಾದಗಳು ದೀಪಕರೆ, ಹೀಗೆ ನಿರಂತರವಾಗಿರಲಿ ತಮ್ಮ ಪ್ರೋತ್ಸಾಹದ ಪೂರ 🙂
LikeLike