00131. ಮಳೆಯಾಗುತ ಸಾಂಗತ್ಯ….

ಮಳೆಯಾಗುತ ಸಾಂಗತ್ಯ….
________________________

ಮಳೆಗಳಿಗೂ ಭಾವನೆಗಳಿಗೂ ಅವಿನಾಭಾವ ಸಂಬಂಧ. ಭಾವನೆಯ ಹೂರಣವೆ ಪ್ರೀತಿ, ಪ್ರೇಮ, ಮುನಿಸು, ದ್ವೇಷಾಸೂಯೆಗಳ ಸಂಕಲನ. ಹೀಗಾಗಿ ಮಳೆ ಬಂದಾಗ ಭಾವ ಪುಳಕಿತವಾದಷ್ಟೆ ಸಹಜವಾಗಿ, ಹೂರಣದ ಪದರಗಳು ಉದ್ದೀಪನಗೊಳ್ಳುತ್ತವೆ. ಸನಿಹ ಮುನಿಸಾಗುವುದಾಗಲಿ, ಮುನಿಸ ಮರೆತ ಸಿಹಿ ಮನಸಾಗುವುದಾಗಲಿ – ಚೆಲ್ಲಾಡಿದ ಹನಿಗಳ ಪ್ರೇರೇಪಣೆ ಯಾವ ರೀತಿಯ ಉದ್ಘೋಷವನೆಬ್ಬಿಸಿ, ಮನದಾವ ಮೂಲೆಯ ಅನುರಣಿತವನ್ನು ಅಲುಗಾಡಿಸಿ ಧೂಳೆಬ್ಬಿಸುವುದೊ ಅರಿವಾಗದು. ಗೊತ್ತಾಗುವುದೇನಿದ್ದರೂ, ಒಳಗಿನಿಂದಾವುದೊ ಲಹರಿ; ಝಿಲ್ಲೆನುವ ಝರಿಯಾಗಿ ತಟ್ಟನೆ ಚಿಮ್ಮಿ ಹರಿದು ಅಲ್ಲಿಯವರೆಗೆ ಆವರಿಸಿದ್ದ ಭಾವದ ತೆರೆಗೆ ಅಪ್ರಸ್ತುತತೆಯ ಮುಸುಕೆಳೆದು, ಹೊಸತಿನ ಹುರುಪು, ಉಲ್ಲಾಸ, ಹರ್ಷಗಳನ್ನು ಕಟ್ಟಿಕೊಡುವ ಹರಿಕಾರನಾಗಿಬಿಡುತ್ತದೆ.

ಆ ಭಾವ ಸೀಮೋಲ್ಲಂಘನೆಯ ಪ್ರಣತಿ ಮಳೆಯ ಲಯಬದ್ದ ಗಾನದಲ್ಲಿ ಕವಿತೆಯಾಗಬಹುದು, ಜೀವಿಗಳೆರಡರ ನಡುವಿನ ಮೌನಗಾನದ ಸೇತುವೆಯಾಗಬಹುದು, ಅಸಹನೀಯತೆಯನ್ನು ಸಹನೀಯತೆಯ ಮೇರು ಶಿಖರಕ್ಕೇರಿಸುವ ಮಾಂತ್ರಿಕ ಸ್ಪರ್ಷವಾಗಿಬಿಡಬಹುದು; ಅದೇ ಮಳೆ ಮಧುರ ಮಂದಾರದ ಮಂದಾಕಿನಿಯ ಸೋಗು ಬಿಟ್ಟು ರುದ್ರಾವತಾರ ತಾಳುವ ವರ್ಷಗಾನವಾದರೆ ಉಂಟಾಗುವ ದುರಂತ, ಕ್ರೌರ್ಯಗಳು ಎಚ್ಚರಿಕೆಯ ಗಂಟೆಯಾದಷ್ಟೆ ಸಹಜವಾಗಿ, ಕೊಚ್ಚಿ ಹಾಕುವ ರೊಚ್ಚಾಗಬಹುದು – ಭೌತಿಕವಾಗಿ, ಮಾನಸಿಕವಾಗಿ.

ಅದಕೇ ಏನೊ ತುಸು ಕಾಲ ಬೀಳುವ ಮಳೆಯನ್ನು ಪ್ರೀತಿಸುವಷ್ಟೆ ಸಹಜವಾಗಿ, ಸತತವಾಗಿ ಸುರಿಯುವ ಮುಸಲಧಾರೆಯನ್ನು ಅವಿರತವಾಗಿ ಅಪ್ಪಿಕೊಳ್ಳಲಾಗುವುದಿಲ್ಲ . ಬೇರೆಲ್ಲ ಹೊಂದಾಣಿಕೆ, ಚಡಪಡಿಕೆಗಳು ಭಾವಾವೇಷವನ್ನು ಬದಿಗೊತ್ತಿ ವಾಸ್ತವದ ಅನಿವಾರ್ಯತೆಯನ್ನು ಮನವರಿಕೆ ಮಾಡಲೆಣಿಸುವ ಹುನ್ನಾರದಲ್ಲಿ, ಭ್ರಮಾಧೀನತೆಯ ಸ್ತರದಿಂದ ಲೌಕಿಕಕ್ಕೆ ಇಳಿಸಿಬಿಡುತ್ತವೆ. ಭಾವನೆ, ಪ್ರೀತಿ, ಪ್ರೇಮ, ಪ್ರಣಯಗಾನಗಳು ಮಳೆಯ ಹಾಗೆಯೆ; ಯಾವಾಗ ಜಾದೂವಿನ ರೂಪ ತಾಳುವುದೊ, ಯಾವಾಗ ಬಿರುಗಾಳಿಯಾಗುವುದೊ ಹೇಳಬರದು.

ಮಳೆಯೊಂದರ ಬೆನ್ನಲ್ಲೆ ಬಂದ ಭಾವಗಳಿಗೆ ಕವನ ರೂಪ ಕೊಡಲೆತ್ನಿಸಿದಾಗ ಹುಟ್ಟಿದ ಕವನ ‘ಮಳೆಯಾಗುತ ಸಾಂಗತ್ಯ’. ಮಳೆ ಬರಿ ನೆಪವಾಗಿ ಮಾಡುವ ಏನೆಲ್ಲಾ ಭಾವ ತಾಕಲಾಟಗಳನ್ನು ಬದಿಗಿರಿಸಿ ಶುದ್ಧ ಮಳೆಯಾಗಿ ನೋಡಿದ ಭಾವ. ಆದರೂ ಅದೆಬ್ಬಿಸುವ ಮಳೆಯಿಂದಾಚೆಯ ಅವಿತ ಭಾವತೀವ್ರತೆಯ ತುಣುಕು ಅಲ್ಲಲ್ಲಿ ಇಣುಕುತ್ತದೆ.

ಮಳೆಯಾಗುತ ಸಾಂಗತ್ಯ….
___________________

ಮಳೆಯಾಗುತ ಸಾಂಗತ್ಯ
ಹನಿಹನಿ ಬರೆದುದೆಲ್ಲ ಸಾಹಿತ್ಯ
ಕೊಚ್ಚೆ ರಚ್ಚೆ ಕೆಸರ ರಾಡಿ
ಕಥೆ ಕಾವ್ಯಗಳೆಲ್ಲೆಡೆ ಕೈಯಾಡಿ||

ಕಿಟಕಿಯ ಸರಳಿನ ಹಿಂದೆ
ಆಸರೆಯಾದಾ ಹೆಂಚಿಗು ಸದ್ದೆ
ಸುರಿದದ್ದೆ ತಡೆ ಹಿಡಿದದ್ದೆ
ಎರಡಕು ಅವುಗಳದದೇ ಶ್ರದ್ಧೆ ||

ಎರಚಲು ಹನಿ ಕುರುಚಲು
ಕಚಗುಳಿಯಿಟ್ಟ ಪುಟ ನೆಗೆದ ತೆಳು
ಭಾವನಾ ಲೋಕ ಉದ್ಘಾಟನ
ಸಿಹಿ ಯಾತನೆಗಳಾಗಿ ಉದ್ದೀಪನ ||

ಕುಲುಕಿತೇನೊ ಮಾಯೆ
ಕಲಕಿದಂತೆ ಭೂತ ಭವಿತ ಛಾಯೆ
ವರ್ತಮಾನದ ಬರಿ ಸ್ವಗತ
ಅಳಿಸುತಿದೆ ಏಕೊ ನಗುನಗುತ ||

ಪಟಪಟನೆ ಹನಿ ಪಟಾಕಿ
ಸಿಡಿದು ಹಾರಿದ ಲಾಸ್ಯ ಚಟಾಕಿ
ಜುಮ್ಮೆನಿಸಿ ರೋಮಾಂಚನ
ಬೆರಳುಗಳರಿವಿಲ್ಲದೆ ಬೆಸೆದು ಮನ ||

————————————————————————————
ನಾಗೇಶ ಮೈಸೂರು, ೨೯. ನವೆಂಬರ. ೨೦೧೩, ಸಿಂಗಾಪುರ
————————————————————————————-

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s