00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…

00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…
(ಸೂಚನೆ: ಕನ್ನಡ ಪ್ರಭದ 16. ಮಾರ್ಚ್. 2014ರ ಖುಷಿ ಮ್ಯಾಗಜೈನ್ ವಿಭಾಗದಲ್ಲಿ ಈ ಬರಹದ ಪರಿಷ್ಕೃತ (ಬಹುತೇಕ) ಭಾಗಾಂಶ “ಸಿಂಗಾಪುರದಲ್ಲಿ ತಾಜಾ ಕಿರುಕುಳ” ಎನ್ನುವ ಹೆಸರಿನಡಿ ಪ್ರಕಟವಾಗಿತ್ತು. ಅದರ ಕೊಂಡಿ ಇಲ್ಲಿದೆ: http://kannadaprabha.epapr.in/241615/Khushi/16-March-2014?show=plainjane#dual/14/1)

ಅಂದು ಏನೂ ಅರಿಯದ ಅಬ್ಬೆ ಪಾರಿಯ ಹಾಗೆ ನೂರೈವತ್ತು ಕೇಜಿ ಲಗೇಜನ್ನು ಆಟೋದಲ್ಲಿ ಸ್ಕೂಲು ಮಕ್ಕಳನ್ನು ತುಂಬಿದ ಹಾಗೆ ತುಂಬಿಕೊಂಡು ವಿಮಾನ ಹತ್ತಿದಾಗ ಅದು ಇಷ್ಟು ಸುಧೀರ್ಘ ಪಯಣವಾಗಲಿದೆಯೆಂಬ ಅರಿವೆ ಇರಲಿಲ್ಲ. ಮದುವೆಯಾದ ಹೊಸತು, ಪ್ರಾಜೆಕ್ಟಿನ ಲೆಕ್ಕಾಚಾರದಲ್ಲಿ ಒಂದೆರಡು ವರ್ಷ ವಿದೇಶ ಸುತ್ತಿ ಬರುವ ಹುರುಪು ಮತ್ತು ಏನಿರಬಹುದೀ ವಿದೇಶದ ಗಮ್ಮತ್ತು ಎಂಬ ಕುತೂಹಲ ಬಿಟ್ಟರೆ ನಮ್ಮ ಪದಾರ್ಥಗಳು, ಊಟಾತಿಂಡಿಗಳು ಅಲ್ಲಿ ಸಿಗುವುದಿಲ್ಲವಂತೆ ಎಂಬ ಅಂತೆ ಕಂತೆಗಳಷ್ಟೆ ಕೆಲಸ ಮಾಡಿ ಕೇಜಿ ಕೇಜಿಗೂ ಲೆಕ್ಕಾ ಹಾಕುವ ವಿಮಾನದ ಲಗೇಜನ್ನು ನೂರೈವತ್ತಕ್ಕೆ ಏರಿಸಿಬಿಟ್ಟಿತ್ತು – ಹುಣಸೆಹಣ್ಣು, ಬೇಳೆ, ಕಾರದ ಪುಡಿ, ಹಿಟ್ಟುಗಳಿಂದ ಹಿಡಿದು ಹಪ್ಪಳ ಸಂಡಿಗೆಗಳ ಪೊಟ್ಟಣಗಳ ತನಕ. ನಾನು ಹೋಗುತ್ತಿರುವ ಸಿಂಗಪುರವೆಂಬ ಜಾಗದಲ್ಲಿ ಒಂದು ಪುಟ್ಟ ಭಾರತವೆ ನೆಲೆಸಿದೆಯೆಂಬ ಸತ್ಯದ ಅರಿವನ್ನು ಯಾರಾದರೂ ಮನವರಿಕೆ ಮಾಡಿಕೊಟ್ಟಿದ್ದರೆ ಕನಿಷ್ಠ ಅದರ ಅರ್ಧದಷ್ಟಾದರೂ ತೂಕ ಕಡಿಮೆಯಾಗುತ್ತಿತ್ತೊ ಏನೊ? ಆದರೆ ತೊಂಭತ್ತೆಂಟರ ಆಸುಪಾಸಿನ ಆ ವರ್ಷದಲ್ಲಿ ನಮ್ಮ ಕಂಪನಿಯಿಂದ ಅಲ್ಲಿಗೆ ಹೋದವರ ಸಂಖ್ಯೆ ಅಷ್ಟು ಹೆಚ್ಚಿರಲಿಲ್ಲ; ಜತೆಗೆ ಈಗಿನ ಹಾಗೆ ಆಗ ಇನ್ನು ಇಂಟರ್ನೆಟ್ಟಲ್ಲೆ ಎದ್ದು, ಉಸಿರಾಡಿ, ಮಲಗಿ ನಿದ್ದೆ ಮಾಡುವಷ್ಟು ಸೌಕರ್ಯಗಳೂ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮೊದಲ ವಿದೇಶೀ ಪ್ರಯಾಣ – ಅದದ್ದಾಗಲಿ ಎಂಬ ಹುಂಬ ಧೈರ್ಯ. ನಮ್ಮೂರಿನ ಹಾಗೆ ದಾರಿಯಲ್ಲಿ ಸಿಕ್ಕವರನ್ನು ಕೇಳಿ ಅಡ್ರೆಸ್ ಪತ್ತೆ ಹಚ್ಚುವ ಹಾಗೆ, ಬೇಕಾದ್ದೆಲ್ಲ ಒಂದೊಂದಾಗಿ ಅವರಿವರನ್ನು ಕೇಳಿ ತಿಳಿದುಕೊಂಡರಾಯ್ತು ಎನ್ನುವ ಉಡಾಫೆ ಬೇರೆ.

ಪುಣ್ಯಕ್ಕೆ, ನಾನು ಹೊರಟಿದ್ದ ದೇಶ ಸಿಂಗಪುರವಾಗಿದ್ದ ಕಾರಣ, ಜತೆಗೆ ಇಲ್ಲಾಗಲೆ ತಳವೂರಿದ ಸಾಕಷ್ಟು ದೊಡ್ಡ ಭಾರತೀಯ ಸಮುದಾಯದ ಕೃಪೆಯಿಂದಾಗಿ ಆ ಹುಂಬತನವಾಗಲಿ, ಉಢಾಫೆಯಾಗಲಿ ಬಲವಾಗಿ ಕೈ ಕಚ್ಚಲಿಲ್ಲ. ಜತೆಗೆ ಸಿಕ್ಕ ಅಷ್ಟಿಷ್ಟು ಗೆಳೆಯರು ಆಘಾತಗಳ ಅರಿವೆ ಆಗದ ಹಾಗೆ ಸುತ್ತ ಮೆತ್ತೆಯಾಗಿ ನಮ್ಮ ವಿದೇಶಿ ಬದುಕಿಗೆ ಶುಭಕರ ನಾಂದಿ ಹಾಡುವ ರೂವಾರಿಗಳಾದರು.

ಹಾಗೆಂದು ಎಲ್ಲ ಹೂವಿನ ಹಾಸಿಗೆಯೆ ಆಗಿತ್ತೆಂದಲ್ಲ ; ಜೀವನದಲ್ಲೆ ಮೊದಲ ಶಾಕ್ ಆಗಿದ್ದು ಅಲ್ಲಿನ ಮನೆಗಳ ಬಾಡಿಗೆಯ ದರ ನೋಡಿದಾಗ! ಚಿಕ್ಕ ಊರೆ ದೇಶವಾಗಿ, ಇರುವ ಜಾಗದಲ್ಲೆ ಸಾವರಿಸಿಕೊಂಡಿರುವ ಬದುಕಿಗೆ ಇಲ್ಲಿನ ಜನ ತೆರುವ ಬೆಲೆ – ದುಬಾರಿ ಮನೆ ಮತ್ತು ದುಬಾರಿ ಕಾರು. ಆದರೆ ಇಲ್ಲಿನ ಸಾರ್ವಜನಿಕ ಸಾಗಾಣಿಕಾ ವ್ಯವಸ್ಥೆ ಅದೆಷ್ಟು ಅದ್ಭುತವಾಗಿದೆಯೆಂದರೆ, ನಾವು ಇಂದಿಗೂ ಕಾರಿನ ಬಗ್ಗೆ ಕಿಂಚಿತ್ತೂ ಚಿಂತಿಸದೆ ಬಸ್ಸು, ಟ್ರೈನೂ, ಟ್ಯಾಕ್ಸಿಗಳಲ್ಲೆ ಆರಾಮವಾಗಿ ಓಡಾಡಿಕೊಂಡಿದ್ದೇವೆ. ಇನ್ನು ಮನೆ ಬಾಡಿಗೆ – ಬೇರೆ ದಾರಿಯೆ ಇಲ್ಲ; ಅದೃಷ್ಟಕ್ಕೆ ಇಲ್ಲಿನ ಸಂಬಳದ ಲೆಕ್ಕಾಚಾರ ಈ ವೆಚ್ಚವನ್ನು ಪರಿಗಣಿಸಿಯೆ ನಿರ್ಧಾರವಾಗುವುದರಿಂದ, ಮಿಕ್ಕ ದಿನನಿತ್ಯ ಜೀವನದ ಪರಿ ಈ ‘ಆಘಾತ’ವನ್ನು ತುಸು ತುಸುವೆ ಮೆದುವಾಗಿಸುತ್ತದೆ.

ಆದರೂ ಮೊದಮೊದಲ ಶಾಕಿನಿಂದ ಹೊರಬರುವುದು ಅಷ್ಟು ಸುಲಭವೇನಲ್ಲ. ದೊಡ್ಡ ಶಾಕುಗಳ ಪರಿಣಾಮ ಚಿಕ್ಕ ಪುಟ್ಟ ವಿಷಯಗಳಲ್ಲೂ ತಲೆ ತೂರಿಸದೆ ಬಿಡುವುದಿಲ್ಲ. ಅದರಲ್ಲಿ ಪ್ರಮುಖವಾದದ್ದು ‘ವಿನಿಮಯ ದರ’. ತರಕಾರಿಯಿಂದ ಹಿಡಿದು ರೆಸ್ಟೋರೆಂಟಿನ ಇಡ್ಲಿ ದೋಸೆಯವರೆಗೂ ಕೊಳ್ಳುವ, ಆರ್ಡರ ಮಾಡುವ ಮುನ್ನ ಆಯಾಚಿತವಾಗಿ ಬಂದು ಗುನುಗಿ ಹೋಗುವ ಅಂಶವೆಂದರೆ ಅದೆಲ್ಲದರ ರೂಪಾಯಿಯ ಅಳತೆ. ‘ಅಬ್ಬಾ! ಒಂದು ಪ್ಲೇಟು ಉಟಕೆ ಐನೂರು ರೂಪಾಯಿಯೆ? ಒಂದು ಕಂತೆ ಕೊತ್ತಂಬರಿ ಸೊಪ್ಪಿಗೆ ನಲವತ್ತು ರೂಪಾಯೆ? ನ್ಯೂಸ್ ಪೇಪರಿಗೆ ಐವತ್ತು ರೂಪಾಯಿಯೆ?’ ಹೀಗೆ ಎಲ್ಲ ಕಡೆಯೂ ಕೈ ಕಟ್ಟಲೆತ್ನಿಸುವ ಹೋಲಿಕೆಯ ಮಾಯಾಜಾಲದಿಂದ ಹೊರಬಂದು ಅಲ್ಲಿನ ಬದುಕಿನ ಲೆಕ್ಕಾಚಾರಕ್ಕೆ ಹೊಂದಾಣಿಕೆಯಾಗಲೂ ಸಾಕಷ್ಟು ಸಮಯ ಹಿಡಿಯುತ್ತದೆ – ಅದೂ ಅಗತ್ಯವಿದ್ದ ಅಂಶಗಳಿಗೆ ಮಾತ್ರ. ಹೊರಗೆ ತಿನ್ನುವುದಕ್ಕಿಂತ ಮನೆಯೂಟವೆ ಅಗ್ಗವೆಂಬ ಜಾಣತನ, ಆಫೀಸಿನ ಊಟಕ್ಕೂ ಬೆಳಿಗ್ಗೆಯೆ ಕಟ್ಟಿಕೊಂಡು ಹೋಗಿ, ಬಿಸಿ ಪೆಟ್ಟಿಗೆಯಲ್ಲಿ ಬಿಸಿ ಮಾಡಿಕೊಂಡು ತಿನ್ನುವ ಶಿಸ್ತಾಗಿ ಬಿಡುತ್ತದೆ. ಮನೆಗೆ ತರುವ ಐಷಾರಾಮಿ ಸರಕುಗಳೂ, ಸೇಲಿನಲ್ಲೊ, ಡಿಸ್ಕೌಂಟಿನಲ್ಲೊ, ಕೆಲವೊಮ್ಮೆ ಸೆಕೆಂಡ್ ಹ್ಯಾಂಡಿನಲ್ಲೊ ತರುವ ಬುದ್ದಿವಂತಿಕೆಯ ಜಾಣತನವಾಗಿಬಿಡುತ್ತದೆ. ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆ ಸ್ವದೇಶದಲ್ಲಿ ‘ ಅಲ್ಲೇನು ಬಿಡ್ರಪ್ಪಾ, ರಾಜ ರಾಣಿ ಹಂಗಿರ್ಬೋದು’ ಅನ್ನುವ ಭಾವನೆಯನ್ನು ನೇರವಾಗಿ ಅಲ್ಲಗಳೆಯಲೂ ಸಾಧ್ಯವಾಗದಂತೆ ನಟಿಸಬೇಕಾದದ್ದು ಅದೆಷ್ಟು ಬಾರಿಯೊ? ಹೀಗಿದ್ದೂ, ಅದೇನು ವಿದೇಶೀ ಮೋಹವಪ್ಪಾ, ಅನ್ನುತ್ತೀರಾ? ಅಲ್ಲೆ ಇರುವುದು ಸೂಕ್ಷ್ಮ !

ಬದುಕುವುದು ವಿದೇಶವೆ ಆದರೂ, ಬಂದ ಹೊಸತರಲ್ಲಿ ಎಲ್ಲರ ಮನದ ಹಿನ್ನಲೆಯಲ್ಲಿ ಅರಿತೊ ಅರಿಯದೆಯೊ ಕೆಲಸ ಮಾಡುವ ಭಾವನೆ – ಕೆಲ ವರ್ಷಗಳಷ್ಟೆ ದುಡಿದು ಹಣ ಸಂಪಾದನೆ ಮಾಡಿಕೊಂಡು ಮತ್ತೆ ಊರಿಗೆ ಹೋಗಿಬಿಡುತ್ತೇವೆಂಬ ಹವಣಿಕೆ. ಹೀಗಾಗಿ, ಇಲ್ಲಿನ ಸಂಬಳ, ಉಳಿತಾಯ ಏನೇ ಇರಲಿ ಅದನ್ನು ಸ್ಥಳೀಯ ಲೆಕ್ಕದಲ್ಲಿ ನೋಡುವುದಿಲ್ಲ. ಎಲ್ಲಾ ಖರ್ಚು ಕಳೆದು ತಿಂಗಳಿಗೆ ಬರಿ ಐನೂರು ಡಾಲರು ಉಳಿಸಿದರೂ, ಅದನ್ನು ರೂಪಾಯಿಗೆ ಬದಲಿಸಿ, ಹನ್ನೆರಡರಿಂದ ಗುಣಿಸಿ ವರ್ಷಕೆಷ್ಟು ರೂಪಾಯಿ ಉಳಿತಾಯ ಎಂಬ ಗುಣಾಕಾರದಲ್ಲಿ ನೋಡುವುದರಿಂದ, ಬೇರೆಲ್ಲ ತರದ ಹೊಂದಾಣಿಕೆಗೂ ಮನ ಸಿದ್ದವಾಗಿಬಿಡುತ್ತದೆ. ಆ ಮನಸತ್ವವೆ ಹೆಚ್ಚೆಚ್ಚು ಉಳಿಸಲು ಮತ್ತಷ್ಟು ಪ್ರೇರೇಪಿಸಿ ದಿನದಿನದ ಎಲ್ಲಾ ವಿಷಯಗಳಲ್ಲೂ ತನ್ನ ಪ್ರಭಾವ ಬೀರತೊಡಗುತ್ತದೆ – ವೀಕೆಂಡ್ ಮೂವಿ ಬೇಕಾ, ಟೀವಿ ಮೂವಿ ಸಾಕಾ? ಒಂದಷ್ಟು ಜನ ಸೇರಿ ಸೀಡಿ ತಂದು ಶೇರು ಮಾಡಿದರೆ ಸಾಕಾ? ಟ್ಯಾಕ್ಸಿಯ ಬಸ್ಸಾ? ಟೂರು ಹೋಗಬೇಕಾ, ಬೇಡವಾ? ಹೀಗೆ ದಿನದಿನದ ಎಲ್ಲಾ ಸಂಗತಿಗಳಲ್ಲೂ ನಮ್ಮರಿವಿಲ್ಲದೆ ಹಸ್ತಕ್ಷೇಪ ಮಾಡುವ ಉಳಿತಾಯದ ಲೆಕ್ಕಾಚಾರ, ಪ್ರತಿಯೊಂದನ್ನು ರೂಪಾಯಿಗೆ ಬದಲಿಸಿ ವಿನಿಮಯ ಮೌಲ್ಯ ನೋಡುವ ತೆವಲನಷ್ಟೆ ಹಿನ್ನಲೆಗೆ ತಳ್ಳುತ್ತದೆ.

ವರ್ಷಗಳುರುಳುತ್ತಿದ್ದಂತೆ ಸಾಮಾನ್ಯವಾಗಿ ಶುರುವಾಗುವ ದ್ವಂದ್ವ ಅಲ್ಲಿನ ಜೀವನಕ್ಕೆ ಒಗ್ಗಿಕೊಂಡ ನಂತರ ಹುಟ್ಟುವ ಸಹಜ ಸ್ಥಿತ್ಯಂತರ. ನೀಟಾಗಿ ಗೆರೆ ಎಳೆದಂತೆ ಉರುಳುವ ಜೀವನದ ಗಾಲಿ ಪ್ರಕ್ಷುಬ್ದತೆಯಲ್ಲಿ ಸಿಕ್ಕಿ ತರಗಲೆಯಂತೆ ಸ್ಪಷ್ಟತೆಯಿಲ್ಲದೆ, ಗಾಳಿ ತೂರಿಸಿದತ್ತ ತೂರಿಕೊಳ್ಳುವ ಸ್ವದೇಶಿ ಜೀವನದ ತುಮುಲಕ್ಕಿಂತ, ಏರಿಳಿತವಿಲ್ಲದ ಸ್ಪಷ್ಟ ದಿಕ್ಕು ದೆಸೆಯುಳ್ಳ ವಿದೇಶಿ ಜೀವನವೆ ವಾಸಿಯೆಂಬ ಭಾವ ನಿಧಾನವಾಗಿ ಬೇರೂರತೊಡಗುತ್ತದೆ. ಅದು ನಿಜವೊ ಸುಳ್ಳೊ ಅದು ಬೇರೆ ವಿಷಯ; ಆದರೆ ರಜೆಗೆಂದು ಊರಿಗೆ ಬಂದಾಗಲೂ ಇಲ್ಲಿನ ಟ್ರಾಫಿಕ್ಕು, ಯಾವ ಕ್ರಿಮಿನಲ್ಲಿಗೂ ಕಡಿಮೆಯಿಲ್ಲದವರ ರೀತಿ ಪರಿಗಣಿಸಿ ಕಾಟ ಕೊಡುವ ‘ವಲಸೆ ಅಧಿಕಾರಿಗಳು’, ಧೂಳಿಗೆ ಜಡ್ಡು ಹಿಡಿಯುವ ದೇಹ ಪ್ರಕೃತಿ – ಹೀಗೆ ಕಂಡಲ್ಲೆಲ್ಲ ಬರಿ ವಿಕೃತಿ, ರೇಜಿಗೆಗಳೆ ಮೊದಲು ಮೂಡುವ ಭಾವಗಳು. ಕೆಲ ದಿನಗಳ ನಂತರ ಭೂಮಿಗಿಳಿದರೂ ವಿದೇಶದ ಜೀವನದ ‘ಪ್ರೆಡಿಕ್ಟಬಿಲಿಟಿ’ ಸ್ವದೇಶೀ ಅನುಭೂತಿಗಳಲ್ಲಿ ಸಂಶಯಗಳನ್ನು ಹುಟ್ಟು ಹಾಕಿಸತೊಡಗುತ್ತದೆ. ಆಗ ಆರಂಭವಾಗುವ ದ್ವೈತದ ಮೊದಲ ಬಲಿ ‘ಇಲ್ಲಿರೋದು ನಮ್ಮನೆ, ಅಲ್ಲಿರೋದು ಸುಮ್ಮನೆ..’ ತತ್ವ.

ಅಲ್ಲಿಯತನಕ ಕೆಲ ವರ್ಷದ ಮಟ್ಟಿಗೆಂದು ಮಾತ್ರವೆ ಚಿಂತಿಸುತ್ತಿದ್ದ ಮನ, ಈಗ ‘ಮೀಡೀಯಂ ಟರ್ಮಿಗೂ’ ವಿಸ್ತರಿಸಿಕೊಳ್ಳುತ್ತದೆ. ಆಗ ರೂಪಾಯಿಯ ಉಳಿತಾಯದ ಮೊತ್ತ ಕೆಲಸಕ್ಕೆ ಬರುವುದಿಲ್ಲ. ಸ್ಥಳೀಯ ಖರ್ಚುವೆಚ್ಚಗಳ ಆಧಾರವೆ ಪರಿಗಣಿಸಬೇಕು. ಅಷ್ಟು ಹೊತ್ತಿಗೆ ಕೆಲಸ ಬದಲಾಗೊ, ಸಂಬಳ ಹೆಚ್ಚಾಗೊ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯಾಗುವ ಕಾರಣ, ಈಗ ಮನದ ಚಿಂತನೆ ಈ ನೆಲದಲೆ ಸಾಕಷ್ಟು ಕಾಲ ಬದುಕಬೇಕಾದ ಅನಿವಾರ್ಯಕ್ಕೆ ಸಿದ್ದವಾಗತೊಡಗುತ್ತದೆ. ಮನೆ, ಕಾರು ಕೊಳ್ಳುವ ಬಗ್ಗೆ ಚಿಂತಿಸತೊಡಗುತ್ರದೆ. ಮಕ್ಕಳ ಶಾಲೆ, ಕಾಲೇಜುಗಳ ಕುರಿತು ಆಲೋಚಿಸುತ್ತದೆ. ಸ್ವದೇಶದಲಿದ್ದ ‘ಭವಿಷ್ಯ ನಿಧಿ’ಯ ಹಣವೆಲ್ಲ ಲೆಕ್ಕಕಿಲ್ಲದ ಸಣ್ಣ ಗಂಟಾಗಿ ಕಂಡು, ಅದನ್ನು ವಿಸರ್ಜಿಸಿ, ಸ್ಥಳೀಯ ನಿವೃತ್ತಿ ಸಲಕರಣೆಗಳತ್ತ ಗಮನ ಹರಿಸುತ್ತದೆ. ಎಲ್ಲವೂ ಮೀಡಿಯಂ ಟರ್ಮ್ ಹೆಸರಿನಲ್ಲೆ – ಯಾಕೆಂದರೆ, ಏನಿಲ್ಲವೆಂದರೂ ರಿಟೈರಾಗುವಾಗಲಾದರೂ ಸ್ವಂತ ನೆಲಕ್ಕೆ ಹಿಂದುರುಗಬಹುದೆಂಬ ಆಶಯ ಮನದ ಮೂಲೆಯಲಿ ಕೆಲಸ ಮಾಡುತ್ತಲೆ ಇರುತ್ತದೆ.

ಇದೇ ಹೊಟ್ಟೆ ತುಂಬಿದ ಹೊತ್ತಿನಲ್ಲೆ ಧುತ್ತನೆ ಬಂದು ಮತ್ತೆ ಕಾಡುವ ಭೂತ ‘ಐಡೆಂಟಿಟಿ ಕ್ರೈಸಿಸ್’. ತನದಲ್ಲದ ನೆಲದಲ್ಲಿ ತನ್ನತನದ ಹುಡುಕಾಟ ಭಾಷೆಯ ಹೆಸರಲ್ಲೊ, ಸಂಘ -ಸಂಸ್ಥೆ-ಸಮಮನಸ್ಕರ ಜತೆಯೊಡನಾಟದ ನೆಪದಲ್ಲೊ, ಬರಹದ ರೂಪಲ್ಲೊ, ಹಾಡಿನ ಸೊಗಡಲ್ಲೊ – ಒಟ್ಟಾರೆ ಮಾನಸಿಕ ಹಸಿವೆಯ ತೀರುವಿಕೆಯ ದಾರಿಗಳನ್ನು ಹುಡುಕತೊಡಗಿ, ಹೊಸ ಮಜಲಿನತ್ತ ಚಲಿಸತೊಡಗುತ್ತದೆ ಜೀವನ. ಆ ಹುರುಪಿನಲ್ಲೆ ಕಟ್ಟಿಕೊಂಡ ಹೊಸ ಬಂಧ, ಪ್ರವೃತ್ತಿಗಳು ಮೇಲ್ನೋಟಕ್ಕೆ ಗಾಡವಾಗಿ ಕಂಡರೂ ಆ ಒಳಗಿನ ದ್ವಂದ್ವ ಮಾಯವಾಗಿರುವುದಿಲ್ಲ. ಎನ್ನಾರೈ ಎಂಬ ಹೆಸರಿನಲ್ಲೊ, ಹೊರದೇಶದಲಿದ್ದರೂ ಬಿಟ್ಟುಕೊಡದ ಪಾಸ್ಪೋರ್ಟಿನಲ್ಲೊ, ವಿಸರ್ಜಿಸದೆ ದುಡ್ಡು ಕಟ್ಟುತ್ತಲೆ ಕಾಪಾಡಿಕೊಂಡು ಬರುವ ಸ್ವದೇಶಿ ಬ್ಯಾಂಕು ಅಕೌಂಟಿನಲ್ಲೊ, ದೂರದಾಶೆಯಿಂದ ಬಿಡದೆ ಕಟ್ಟಿಕೊಂಡು ಬಂದ ವಿಮಾ ಪಾಲಿಸಿಯ ಪ್ರೀಮಿಯಂನಲ್ಲೊ, ಕೊಂಡ ಸೈಟು, ಮನೆಗಳ ಹೆಸರಿನಲ್ಲೊ – ಕೊಂಡಿಯಂತೂ ಕಮಲದೆಲೆಗಂಟಿದ ನೀರಿನಂತೆ ಅಂಟಿಕೊಂಡೆ ಇರುತ್ತದೆ – ತನ್ನರಿವಿಲ್ಲದೆ ಎರಡು ದೋಣಿಯಲ್ಲಿ ಕಾಲಿಟ್ಟ ಪಯಣಿಗನ ಹಾಗೆ. ಅದು ಸ್ಪಷ್ಟವಾಗಿ ಗೊತ್ತಾಗುವ ಹೊತ್ತಿಗೆ, ಇಗಾಗಲೆ ಎರಡೂ ಕಡೆಯ ದಡಗಳಿಂದ ದೂರ ಬಂದಾಗಿಬಿಟ್ಟಿರುತ್ತದೆ. ಅತ್ತಕಡೆಯೂ – ಇತ್ತಕಡೆಯೂ ಇರದ ನಡು ನೀರಿನಲ್ಲೆ ಈಜಾಡುವ ಮೀನಿನ ಹಾಗೆ.

ಇದೆಲ್ಲದರ ನಡುವೆ ಎಲ್ಲರಿಗೂ ಎಲ್ಲವೂ ಸುಗಮವೆಂದೇನಲ್ಲ. ಹದಗೆಡುವ ಆರ್ಥಿಕ ಪರಿಸ್ಥಿತಿ, ಜಾಗತಿಕ ಗೋಮಾಳದಲ್ಲಿ ಉಂಟುಮಾಡುವ ‘ಉಲ್ಕಾಪಾತಕ್ಕೆ’ ಯಾರೂ ಅತೀತರಲ್ಲ ; ಹೊರದೇಶಕ್ಕೆ ಬಂದು ಹೆಣಗುವ ದಿನಗಳ ಒಂದು ಬೆಳಗು ತಟ್ಟನೆ – ಆ ಕೆಲಸವಿಲ್ಲವೆಂದು ಘೋಷಿಸಿ ಮನೆಗೆ ಹೋಗಬೇಕಾದ ಸಂಧರ್ಭಗಳೆಷ್ಟೊ. ಸಿಕ್ಕ ಸಿಕ್ಕ ಸಣ್ಣ ಪುಟ್ಟ ತಾತ್ಕಾಲಿಕ ಕೆಲಸ ಹಿಡಿದು ಹೊಡೆದಾಡುತ್ತ ಜೀವನ ಸಾಗಿಸುವ ಅನಿವಾರ್ಯಗಳೆಷ್ಟೊ, ಅದೂ ಸಾಧ್ಯವಾಗದೆ ಬೇರೆ ದೇಶಗಳತ್ತ ಮುಖಮಾಡಿ , ಸಾರಾಸಗಟೆ ಹೊಸ ಜೀವನ ಆರಂಭಿಸಿದ ಸಂಘಟನೆಗಳಿನ್ನೆಷ್ಟೊ. ಯಾವುದೂ ಅಲ್ಲದೆ ಪ್ರಾಜೆಕ್ಟುಗಳೆಂಬ ತ್ರಿಶಂಕು ಸ್ವರ್ಗದ ಬೆನ್ನು ಹತ್ತಿ ಹಲವಾರು ದೇಶ ಸುತ್ತಾಡಿದರೂ, ಅತ್ತ ಹಣ ಮಾಡುವ ವಿದೇಶಿ ಕೆಲಸವೂ ಅಲ್ಲದ, ಮನೆಯಲ್ಲಿ ನೆಮ್ಮದಿಯಾಗಿದ್ದೆವೆಂಬ ಭಾವನೆಗೂ ಸಲ್ಲದ ಎಡಬಿಡಂಗಿ ಅವತಾರಗಳೇನೂ ಕಡಿಮೆಯಿಲ್ಲ. ಒಟ್ಟಾರೆ ಎಲ್ಲೆಡೆ ಕಾಡುವ ದ್ವಂದ್ವ, ಅನಿಶ್ಚಿತತೆ ಇಲ್ಲೂ ಗಾಢ – ಅನಿಶ್ಚಿತ ಜೀವನ ಶೈಲಿಯೆ ಈಗಿನ ಜೀವನದ ಹೊನಲಲಿ ಬದುಕುವ ಸಹಜ ಶೈಲಿಯೆ ಎಂಬ ಅನುಮಾನವೂ ಸರಿದು, ಹೌದು ಅದೇ ಜೀವನ ಶೈಲಿಯೆಂದು ನಂಬಿಕೆ ಹುಟ್ಟಿಸುವಷ್ಟರ ಮಟ್ಟಿಗೆ.

ಈ ಸುತ್ತಾಟದಲ್ಲೆ ಹದಿನೈದು ವರ್ಷಗಳು ಉರುಳಿಹೋದವು. ಥೈಲ್ಯಾಂಡ್, ಫಿಲಿಪೈನ್ಸ್, ಚೈನಾ, ಜರ್ಮನಿ, ನೆದರಲ್ಯಾಂಡು, ಪೋರ್ಚುಗಲ್ ಎಂದೆಲ್ಲಾ ಸುತ್ತಾಡಿ ಈಗ ಮತ್ತೆ ಸಿಂಗಪೂರದಲ್ಲೆ ತಳವೂರಿದ್ದಾಯ್ತು – ಎರಡು ದೋಣಿಯ ಅದೆ ದ್ವಂದ್ವದಲ್ಲಿ. ಈಗ ವಿನಿಮಯ ದರ, ರೂಪಾಯಿ ಲೆಕ್ಕಾಚಾರ ಕಾಡುವುದಿಲ್ಲ.

ಮೊನ್ನೆ ಪ್ರೈಮರಿ ಪಾಸಾದ ಮಗನೊಂದಿಗೆ ಹೊರಗೆ ಹೋಗಿದ್ದಾಗ “ಅಪ್ಪಾ, ಟ್ರೈನಿನಲ್ಲೆ ಹೋಗೋಣ..ಟ್ಯಾಕ್ಸಿ ಬೇಡ” ಎಂದ. ಅಂಗಡಿಯಲ್ಲಿ ಏನೊ ಕೊಳ್ಳುವಾಗಲೂ ತುಟ್ಟಿಯದನ್ನೆಲ್ಲ ಎತ್ತಿಟ್ಟು ಅಗ್ಗದ ದರದವನ್ನೆ ಆಯ್ದುಕೊಳ್ಳುತ್ತಿದ್ದ. ನಂತರ ರೆಸ್ಟೋರೆಂಟೊಂದರಲ್ಲಿ ಊಟ ಆರ್ಡರು ಮಾಡುವಾಗಲೂ ಯಾವುದೋ ಐಸ್ಕ್ರೀಮು ಬೇಕೆಂದವನು, ‘ಬೇಡಪ್ಪ ವೆರಿ ಎಕ್ಸ್ಪೆನ್ಸೀವ್’ ಎಂದು ಬೇರೇನೊ ಹುಡುಕತೊಡಗಿದಾಗ ನಾನು ಹೇಳಿದೆ – ” ಅದನ್ನೆ ಆರ್ಡರು ಮಾಡು..” ಅವನು ನನ್ನತ್ತ ಕಣ್ಣೆತ್ತಿ ನೋಡಿದ. “ದಿನಾ ಅದೆ ಬೇಕು ಅನ್ಬೇಡ..ಬಟ್ ನೌ ಯೂ ಗೊ ಅಹೆಡ್..” ಎಂದೆ. ಅವನಿಗರಿವಿಲ್ಲದೆ ಅವನ ಕಣ್ಣು ಮುಖವೆರಡು ಅರಳಿದ್ದು ನೋಡಿದೆ. “ತಿಂದಾದ ಮೇಲೆ ಆ ಅಂಗಡಿಗೆ ಮತ್ತೆ ಹೋಗೋಣ ಬಾ..ನಿನಗೆ ಇಷ್ಟವಾದ ಆ ಗೇಮ್ ಬೇಕೂಂದ್ರೆ ತೆಗೆದುಕೊಳ್ಳುವೆಯಂತೆ…” ಅವನಿಗೆ ಯಾಕೊ ಇನ್ನು ಅನುಮಾನ….”ಅದು ತುಂಬಾ ಜಾಸ್ತಿಯಪ್ಪ…” ನಾನು ಅವನ ಕಣ್ಣಲ್ಲೆ ಕಣ್ಣಿಟ್ಟು – ” ಡು ಯೂ ಲೈಕ್ ಇಟ್ ಆರ್ ನಾಟ್? ಇಫ್ ಯೂ ಲೈಕಿಟ್..ಜಸ್ಟ್ ಬೈ..ನೀ ಪಾಸಾದ್ದಕ್ಕೆ ಸ್ಪೆಶಲ್ ಗಿಪ್ಟು..” ಎಂದೆ.

ಅವನು ಖುಷಿಯಿಂದ ತಲೆಯಾಡಿಸಿದ. ನಾವಂತೂ ಎರಡು ದೋಣಿಯ ದ್ವಂದ್ವದಿಂದ ಹೊರಬರಲಾಗದೆ ಒದ್ದಾಡಿದ್ದು ಆಯ್ತು. ಕನಿಷ್ಠ ನಮ್ಮ ಮುಂದಿನ ಪೀಳಿಗೆಗೆ ಆ ಗಿಲ್ಟ್ ಆದರೂ ಮನಸಿಂದ ದೂರವಾಗಿಸಿದರೆ ಸಾಕು ಎಂದುಕೊಂಡೆ ಮನಸಲ್ಲೆ.

ಈ ಎರಡು ದೋಣಿಯ ಪಯಣದ ಕಥೆ ಒಬ್ಬಿಬ್ಬರದಲ್ಲ. ಸಾಕಷ್ಟು ಜನ ದಟ ಮುಟ್ಟಿದವರೂ ಉಂಟು. ಏಗಲಾಗದೆ ಹಿಂದಿರುಗಿದವರೂ ಉಂಟು. ಇಕ್ಕೆಲದ ಇಬ್ಬಂದಿಯಲ್ಲಿ ಸಿಕ್ಕು ಎರಡು ದೋಣಿಯ ಪಯಣವೆ ಬದುಕಿನ ಲಯವೆಂದುಕೊಂಡು ಹಾಗೆಯೆ ಮುಂದುವರಿದಿರುವ ಕರ್ಮ ಸಿದ್ಧಾಂತಿಗಳೂ ಉಂಟು.

ಆದರೆ ಜೀವನದ ಕಟು ವಾಸ್ತವವೆಂದರೆ, ಎಲ್ಲಿ ಹೇಗೆ ಇದ್ದರೂ ಪ್ರತಿಯೊಬ್ಬರೂ ಜೀವನದಿಂದ ಸಂಪಾದಿಸಿದ್ದರ ನಿವ್ವಳ ಮೊತ್ತ, ಸಮತೋಲಿಸಿದ ಶೂನ್ಯವಷ್ಟೆ (ಹಣವೊಂದರ ಗಣನೆಯಲ್ಲ -ಒಟ್ಟಾರೆ ಪಡೆದದ್ದು, ಗಳಿಸಿದ್ದು, ಕಳೆದುಕೊಂಡಿದ್ದರ ನಿವ್ವಳ ಮೊತ್ತ). ಹೀಗಾಗಿ ಕೆಲವು ಸರಳ ಗಾದೆ ಮಾತುಗಳಂತೂ ಅದೆಷ್ಟು ಅರ್ಥಪೂರ್ಣ ಹಾಗೂ ಸುಸಂಗತವೆನಿಸುತ್ತದೆ, ಈ ದ್ವಂದ್ವದ ಆಳಕ್ಕಿಳಿದು ಅರ್ಥ ಹುಡುಕಿದರೆ – “ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ”, “ದೂರದ ಬೆಟ್ಟ ನುಣ್ಣಗೆ”, ” ಗುಡ್ಡ ಕಡಿದು ಇಲಿ ಹಿಡಿದಂತೆ”, ಇತ್ಯಾದಿ..

ಅದೇನೆ ಆದರೂ ಎರಡೂ ಕಡೆ ನೀರಿರುವತನಕ, ಎರಡು ದೋಣಿಯ ಸಹವಾಸ ತಪ್ಪಿಸಿಕೊಳ್ಳಲಾಗದ ಸೆಳೆತವೆಂಬುದಂತೂ ನಿಜ 🙂

2 thoughts on “00138. ಎರಡು ದೋಣಿಯ ಮೇಲೆ ಕಾಲಿಟ್ಟ ಬದುಕು…”

Leave a reply to nageshamysore ಪ್ರತ್ಯುತ್ತರವನ್ನು ರದ್ದುಮಾಡಿ