00139. ಕಾಲದ ಗಡಿಯಾರ

00139. ಕಾಲದ ಗಡಿಯಾರ

ಕಾಲದ ಗಡಿಯಾರದ ನಿರಂತರ ಓಟ ಮತ್ತೊಂದು ವರ್ಷದತ್ತ ಇಣುಕುತ್ತ ಹೊಸವರ್ಷದ ಕದ ತೆರೆಸಿದೆ. ಕಾಲಕದು ಎಂದಿನ ಸಾಮಾನ್ಯ ಯಾನ, ಬದಲಾಗುವ ಸಹಜ ಋತು ಚಿತ್ರ. ಆ ಕಾಲದ ಬಯಲಲ್ಲಿ ತನ್ನೆಲ್ಲ ನಡುವಳಿಕೆಗಳ ಚೀಲ ಬಿಚ್ಚಿಟ್ಟ ಜೀವ ರಾಶಿಗೆ ಈ ಬದಲಾವಣೆಯ ತುದಿ ಮೊದಲ ಅಂಚುಗಳೆಂದರೆ ಏನೊ ಕುತೂಹಲ, ಅದಮ್ಯ ಉತ್ಸಾಹ. ಒಂದೆಡೆ ಮುಗಿದು ಹೋದ ತುದಿ ಗಳಿಸಿದ್ದೆಷ್ಟು , ಉಳಿಸಿದ್ದೆಷ್ಟು ಎಂಬ ಲೆಕ್ಕಾಚಾರಕ್ಕಿಳಿದರೆ ಹೊಸತಿನ ಆರಂಭದ ತುದಿಗೆ ಮುಂದೇನು ಅಡಗಿದೆಯ ಎಂಬ ಕುತೂಹಲವನ್ನು ಕೆದಕುವ ಹುನ್ನಾರ. ಒಟ್ಟಾರೆ ಮುಗಿಯುತ್ತ ಬಂದ ವರ್ಷ ಹಾಗೂ ಆರಂಭವಾಗುತ್ತಿರುವ ಹೊಸವರ್ಷದ ಸಂಧಿಕಾಲ ಎಲ್ಲರಲ್ಲು ಒಂದಲ್ಲ ಒಂದು ಬಗೆಯ ಸಂಚಲನೆ ಮೂಡಿಸುವುದು ಸುಳ್ಳಲ್ಲ – ಕೆಲವರಲ್ಲಿ ಹೆಚ್ಚು ಮತ್ತೆ ಕೆಲವರಲ್ಲಿ ಕಡಿಮೆಯ ಮಟ್ಟ ಎನ್ನುವುದನ್ನು ಬಿಟ್ಟರೆ.

ಯಾಂತ್ರಿಕ ಬದುಕಿನ ಏಕತಾನತೆಗೆ ತುಸು ಬೆನ್ನು ಹಾಕಿ ಈ ಕಾಲ ಚಲನೆಯ ಪರಿಯನ್ನು ಗಮನಿಸಿದರೆ ಉಂಟಾಗುವ ವಿಸ್ಮಯವೆ ಅದ್ಭುತ. ಯಾರು ಈ ಗಡಿಯಾರಕೆ ಕೀಲಿ ಕೊಟ್ಟು ನಡೆಸುತಿರುವ ವಿಧಾತನೆಂಬ ಪ್ರಶ್ನೆಗೆ ಉತ್ತರದ ಹುಡುಕಾಟ ನಿರಂತರ. ಯಾರ ಸೇವಾರ್ಥದಲಿ ನಡೆದ ಪ್ರಕೃತಿಯ ಕಾರುಬಾರು, ಕರಾರುವಾಕ್ಕು ಲೆಕ್ಕಾಚಾರದಲೆಳೆವ ಈ ಅಗಣಿತ ಶಕ್ತಿಯ ಮೂಲ, ಆಳ ಅಗಲ ಅಳೆಯಲಾಗದ ಕಾಲ ವಿಸ್ತಾರದ ಅನಂತ ಶೂನ್ಯ – ಎಲ್ಲವೂ ಅರಿವು, ತಿಳಿವಿನ ವ್ಯಾಪ್ತಿಯ ಹೊರಗಿನ ಸೋಜಿಗಗಳಾಗಿ ಕಾಡುತ್ತಲೆ ಇರುವ ನಿತ್ಯ ನಿರಂತರ. ಇದೆಲ್ಲದರ ನಡುವಿನ ಸಾಮಾನ್ಯ ಬದುಕಿಗೆ ಈ ವಿಸ್ಮಯ, ತಲ್ಲಣಗಳು ಕಾಡುವ ಬಗೆಯೆ ಬೇರೆ. ಕೆಲವು ವಿಷಾದದ ಕಾರಣಗಳಾದರೆ ಮತ್ತೆ ಹಲವು ಸಂಭ್ರಮದ ನೆಪಗಳಾಗುತ್ತವೆ. ಮೂಲತಃ ನಮ್ಮ ಸಂಸ್ಕೃತಿಯ ಬೇರಿನಿಂದ ಚಿಗುರದಿದ್ದರೂ, ಪ್ರಾಯಶಃ ನಮ್ಮೆಲ್ಲರ ಬದುಕಿನಲ್ಲಿ ಒಂದಲ್ಲ ಒಂದು ರೀತಿ ಹಾಸುಹೊಕ್ಕಾಗಿ ಪ್ರಭಾವ ಬೀರುವ ಹೊಸ ವರ್ಷದ ಆಚರಣೆ ಈ ನೆಪಕೊಂದು ಉದಾಹರಣೆ ಮತ್ತು ಈ ಜಾಗತಿಕ ಗೋಮಾಳದ ಜಾಗತೀಕರಣದ ಖದರಿನಲ್ಲಿ ಸಾಗರೋತ್ತರ ಸಂಸ್ಕೃತಿಗಳು ನಮ್ಮ ಬದುಕಿನ ಆಳಕ್ಕೂ ಇಳಿದು ಮಿಳಿತವಾಗುತ್ತಿರುವ ಬಗೆಗೊಂದು ವ್ಯಾಖ್ಯೆ.

ಅದೇನೆ ಇರಲಿ ಸಂಭ್ರಮಾಚರಣೆ ಶುಭ ಹಾರೈಕೆಗೆ ಸಮಯ, ಸಂಸ್ಕೃತಿ, ಪೂರಕತೆ ಇತ್ಯಾದಿಗಳ ಹಂಗಿರಬೇಕಿಲ್ಲ. ಅದಕೆಂದೆ ಈ ಜಾಗತಿಕ ಹೊಸ ವರ್ಷದ ಆಗಮನವನ್ನು ಮುಕ್ತ ಮನದಲ್ಲಿ ಸ್ವಾಗತಿಸೋಣ, ಹೊಸವರ್ಷ ಹೊಸ ಸಾಧನೆ, ಉನ್ನತಿಗೆ ಅಸ್ತಿಭಾರ ಹಾಕುವ ಹರಿಕಾರನಾಗಲೆಂದು ಆಶಿಸೋಣ. ಈ ಸಂಧರ್ಭದ ನೆಪದಲ್ಲೆ ಸಂಪದಿಗರು, ಇತರೆಲ್ಲ ಓದುಗರುಗಳಿಗೆ ಮತ್ತು ಈ ನಾಡಿನ, ರಾಷ್ಟ್ರದ ಜನತೆಗೆ ಹೊಸವರ್ಷದ ಶುಭಾಶಯಗಳನ್ನು ಕೋರುತ್ತ ಕಳೆದ ಸಾಲನ್ನು ಬೀಳ್ಕೊಡುತ್ತ, ಹೊಸತನ್ನು ಸ್ವಾಗತಿಸೋಣ. ಆ ನೆನಪಿನ ಕುರುಹಾಗಿ ಈ ಪುಟ್ಟ ಕವನ ಹೊಸ ವರ್ಷದ ಶುಭಾಶಯದೊಂದಿಗೆ ಸಮರ್ಪಿತ.

ಕಾಲದ ಗಡಿಯಾರ
___________________

ಕಾಲದ ಗಡಿಯಾರಕೆ ಕಿವಿ ಹಿಂಡಿ
ತಾಖೀತು ಮಾಡಿದ ಒಡೆಯ
ನಿಲದೆ ಓಡು ನಿರಂತರ
ಆಗುತಿದ್ದರು ಸರಿ ಪ್ರಳಯ ||

ಎಂಥ ವಿನಮ್ರ ಸೇವಕನಿವ ದೂತ
ಎಲ್ಲ ನಿಯಾಮಕನ ಸೇವಾರ್ಥ
ಗತದಲೆಂದೊ ಹತ್ತಿದ ಬಂಡಿ
ನಿಲ್ಲದೆ ಉರುಳಿ ಸಾಗಿದ ಕಾಲರಥ ||

ಅಚ್ಚರಿ, ಯಾರೆಳೆವರೊ ಬಂಡಿ ಸತತ
ಬರಿ ಸೂರ್ಯನೆಂದರೆ ಅಸಾಧ್ಯ
ರವಿರಥ ಮುನ್ನಡೆಸಿಹರಾರು
ಮೂಲದಿಂದಲೆ ತುಂಬಿ ಅಗಣಿತ ಶಕ್ತಿ ||

ಏನು ಕರಾರುವಾಕ್ಕು ಲೆಕ್ಕಾಚಾರದ ಗಾಲಿ
ತಿರುತಿರುಗಿ ಒಂದೆ ವೇಗದೆ ಖಯಾಲಿ
ತಡೆಯಿರದ ನಿರಂತರ ಪಾಳಿ
ಕಟ್ಟಿ ಕ್ಷಣ ನಿಮಿಷ ಗಂಟೆ ದಿನ ವಾರವುರುಳಿ ||

ತಿಂಗಳು ವರ್ಷಗಳ ಬೆನ್ನು ಋತುವಾಹನವೇರಿ
ಹಿಂದಟ್ಟಿ ಮುನ್ನಡೆಯುವ ಕಾಲ ಸವಾರಿ
ಮರುಕಳಿಸುತ ಪ್ರತಿ ವರ್ಷದ ತೊರೆ
ಬತ್ತಿರಲಿ ಬಿಡಲಿ ತುಂಬಿಸಿ ಕಾಲಮಾನ ಜಾರಿ ||

ಮೊಗಚಿಟ್ಟ ಬೋಗುಣಿ ಕಳಚಿಟ್ಟ ಅಗುಣಿ ಕಾಲ
ವಿಸ್ಮಯ ನಿರಂತರ ನಡೆಸಿ ಜಗ ಜೀವಜಾಲ
ಅದ್ಭುತವನಾಗಿಸುತ ಸಾಧಾರಣ ಕಲೆ
ಕಾಯಗಳನುರುಳಿಸುತ ಸಾಗಿದೆ ಕಾಲಯಾನ ||

ಕಾಲ ಚಕ್ರದ ಆಳ, ಅಳತೆ ಹಿಡಿಯಲೆಲ್ಲಿ ಮೊತ್ತ
ಹೊಸ ಸಾಲಿನ ಹೊಸ ಗಳಿಗೆ ಕಾಣಲಷ್ಟೆ ಶಕ್ಯ
ಆಚರಣೆಯ ಸಂಭ್ರಮ ಶುಭಾಶಯ ಗಳಿಗೆ
ಅನಿಯಂತ್ರಿತ ಕಾಲನ ಕನಿಷ್ಠ ನಮಿಸುವ ಹವಣಿಕೆ ||

————————————————————————————
ನಾಗೇಶ ಮೈಸೂರು, ೩೧. ಡಿಸೆಂಬರ. ೨೦೧೩, ಮೈಸೂರು
————————————————————————————-
(saMpada)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s