00144. ಗಣತಿಗಿಲ್ಲದ ಪ್ರಗತಿ

ಗಣತಿಗಿಲ್ಲದ ಪ್ರಗತಿ
______________

ನಮ್ಮ ದೇಶದ ಆಗುಹೋಗುಗಳ, ವಿದ್ಯಾಮಾನಗಳ ನಡುವೆ ಇದೊಂದು ಸಂಕ್ರಮಣದ ಕಾಲವೆಂದು ಕಾಣುತ್ತದೆ. ಇನ್ನೇನು ಮಕರ ಸಂಕ್ರಮಣ ಕಾಲಿಡುವ ಹೊತ್ತಿನಲ್ಲೆ, ಇದ್ದಕ್ಕಿದ್ದಂತೆ ರಾಜಕೀಯ ಚಟುವಟಿಕೆಗಳು ಯಾರೊ ನಿದ್ರೆಯಿಂದ ಬಡಿದೆಬ್ಬಿಸಿದಂತೆ ಕಾರ್ಯಪ್ರವೃತ್ತವಾಗುತ್ತಿರುವಂತಿದೆ. ಈಚಿನ ಚುನಾವಣೆಯ ಪರಿಣಾಮವೊ, ಮುಂದಿನ ಮಹಾ ಚುನಾವಣೆಯ ಭೀತಿಯೊ – ಆಡಳಿತ ಪಕ್ಷದಲ್ಲಿ ಆತ್ಮಾವಲೋಕನ, ಬದಲಾವಣೆಯ ಗಾಳಿ ಬೀಸುತ್ತಿದೆ. ಸಾಮಾನ್ಯ ಜೀವಿಯ ಬ್ಯಾನರಿನಡಿ ಆಮ್ ಆದ್ಮಿ ಪಕ್ಷವೆಬ್ಬಿಸಿದ ಧೂಳು ವಿರೋಧಪಕ್ಷಗಳನ್ನು ಮೈ ಕೊಡವಿಕೊಂಡು ಮೇಲೇಳುವಂತೆ ಮಾಡಿದೆ. ಊಹಿಸಲೂ ಸಾಧ್ಯವಿರದಿದ್ದ ರಾಜಕೀಯ ಮರು ಧ್ರುವೀಕರಣಗಳು ಸಂಭವಿಸುವ ಸಾಧ್ಯತೆಗಳೂ ನಿಚ್ಛಳವಾಗಿವೆ (ಉದಾಹರಣೆಗೆ ನಮ್ಮಲ್ಲಿನ ಇತ್ತೀಚಿಗಿನ ಯೆಡಿಯೂರಪ್ಪನವರ – ‘ಮರಳಿ ತವರಿಗೆ’ ಪ್ರಕರಣ).

ಮೋದಿ ಅಲೆಯೊ, ಕೇಜ್ರೀವಾಲರ ‘ತ್ಸುನಾಮಿ ಶಾಕ್ ಟ್ರೀಟ್ ಮೆಂಟೊ’ ಅಥವಾ ಎಚ್ಚೆತ್ತ ಜನಸಮಷ್ಟಿ ಪ್ರಜ್ಞೆಯ ನಿರ್ಲಕ್ಷಿಸಲಾಗದಷ್ಟು ಬಲವಾದ ಶಕ್ತಿಯೊ – ಬದಲಾವಣೆಯ ಗಾಳಿ, ಸಂಕ್ರಮಣದ ಮುನ್ನುಡಿಯೋ ಎಂಬಂತೆ ತುಸು ವೇಗದ ಹಾದಿಯಲ್ಲಿ ನಡೆಯಲ್ಹವಣಿಸುತ್ತಿರುವುದು ವಿದಿತ. ಮೊದಲು ಊಹಿಸಲೂ ಸಾಧ್ಯವಿರದಿದ್ದ ವೇಗದಲ್ಲಿ ಲೋಕಾಯುಕ್ತ ಮಸೂದೆಯನ್ನು ಲೋಕಸಭೆ, ರಾಜ್ಯ ಸಭೆಗಳಲ್ಲಿ ಅಂಗಿಕರಿಸಿದ್ದು ಈ ಬದಲಾವಣೆಯ ತೀವ್ರತೆಯ ಬಿಸಿಗೆ ಒಂದು ಉದಾಹರಣೆ. ಇದಕ್ಕೆ ಕಾರಣೀಭೂತವಾದ ಆಮ್ ಆದ್ಮಿ ಸಂಚಲನೆ ಕೇವಲ ಚಹಾದೊಳಗಿನ ಸುಂಟರಗಾಳಿಯೆ, ಇಡಿ ವ್ಯವಸ್ಥೆಯ ಬುಡಮೇಲಾಗಿಸುವ ಬಿರುಗಾಳಿಯೆ ಎನ್ನುವುದನ್ನು ಕಾಲವೆ ನಿರ್ಧರಿಸಬೇಕಾದರೂ, ಆ ಬಗೆಯ ಒಂದು ಧನಾತ್ಮಕತೆಯ ಆಶಾವಾದವನ್ನು ಈ ಬೆಳವಣಿಗೆ ಹುಟ್ಟಿಸಿರುವುದಂತೂ ನಿಜ. ಇದೆ ಹೊತ್ತಿನಲ್ಲಿ ಮೋದಿ ನಾಯಕತ್ವದ ಮತ್ತೊಂದು ಅಲೆ ಬೀಜೇಪಿಯಲ್ಲಿ ಸಂಚಲನವನೆಬ್ಬಿಸುತ್ತಿದೆ. ಈ ನಿರ್ಣಾಯಕ ಹಂತದಲ್ಲಿ ಮತದಾರನ ಮುಂದೆ ‘ಯಾರು ಹಿತವರು ನಿನಗೆ, ಈ ಮೂವ್ವರೊಳಗೆ’ ಎಂಬ ಹೊಸ ಸಂದಿಗ್ದವನ್ನು ತಂದಿರಿಸಲಿದೆ. ಕ್ಷಿಪ್ರ ಬದಲಾಗಿ ಸ್ವಚ್ಛವಾಗುವ ಹವಣಿಕೆಯಲ್ಲಿರುವಂತೆ ಕಾಣಿಸುತ್ತಿರುವ ಆಡಳಿತ ಪಕ್ಷದ ಜತೆ, ಹೊಸ ದಕ್ಷತೆಯ ಮೋದಿ ನಾಯಕತ್ವದ ಭರವಸೆಯೊಂದಿಗೆ ಬೀಜೇಪಿ ಮತ್ತು ವೈಲ್ಡ್ ಕಾರ್ಡ್ ಎಂಟ್ರಿಯಾಗಿ ನಡುಕ ಹುಟ್ಟಿಸುತ್ತಲೆ, ರಾತ್ರೋರಾತ್ರಿಯಲ್ಲೆ ಆಳೆತ್ತರದಿಂದ ಆಕಾಶದೆತ್ತರಕ್ಕೆ ಬೆಳೆಯುವ ಹಾಗೆ ತೋರುತ್ತಿರುವ ಏಏಪಿ – ಮೂರು ಒಂದಲ್ಲಾ ಒಂದು ರೀತಿ ಮತದಾರರ ತಲೆ ಕೆಡಿಸುವುದಂತೂ ಸತ್ಯ.

ಇದೆಲ್ಲದರ ರಾಜಕೀಯ ಭಾಧ್ಯತೆಯ ಹೊರತಾಗಿ ನಮ್ಮ ದೇಶ ನಿಜಕ್ಕೂ ಕಾಣಬೇಕಾದ್ದು ನಿಜವಾದ, ಅಳೆಯಬಹುದಾದ ಪ್ರಗತಿ. ಇದುವರೆವಿಗೂ ಪ್ರಗತಿಯ ಮಾತು ಎಲ್ಲೆಡೆಯೂ ಕೇಳಿಬರುವ ಮಂತ್ರವೆ ಆದರೂ, ಅದೊಂದು ಗಣತಿಗಿಲ್ಲದ , ಮಾನದಂಡದಿಂದಳೆಯಲಾಗದ, ಅಪಾರದರ್ಶಕ, ಗೊಂದಲಪೂರ್ಣ ಪ್ರಗತಿಯಂತೆ ಕಾಣುತ್ತದೆ. ಭ್ರಷ್ಟಾಚಾರವೊ, ಅದಕ್ಷತೆಯೊ, ಪ್ರಾಮಾಣಿಕತೆಯ ಕೊರತೆಯೊ, ಒಟ್ಟಾರೆ ಜಗದ ಕಣ್ಣಿಗೆ ನಗೆಪಾಟಲಾಗಿ ಕಾಣುವ ರೀತಿ – ಎಷ್ಟು ದೊಡ್ಡ ಸಾಧ್ಯತೆಗಳಿರುವ ದೇಶದಲ್ಲಿ ಎಂತಹ ಅರಾಜಕ ಪರಿಸ್ಥಿತಿ, ಎಂಬ ಖೇದ. ಇದೆಲ್ಲವನ್ನು ಅಳಿಸಿ ನಮ್ಮ ಮತ್ತು ಹೊರಗಿನವರೆಲ್ಲ ಕಣ್ಣಲ್ಲಿ ತಲೆಯೆತ್ತಿ ನಿಲ್ಲುವ ಹಾಗೆ ಮಾಡಬಲ್ಲ ಒಂದೆ ಮಂತ್ರ ನಿಜವಾದ ಸ್ತರದಲ್ಲಿ, ಅರ್ಥದಲ್ಲಿ ಆಗುವ – ಗಣತಿಗೆ ಸಿಕ್ಕುವ ‘ಪ್ರಗತಿ’. ಆ ಪ್ರಗತಿಯ ಹಾದಿಗೆ ಇಂದು ಮುಖ್ಯವಾಗಿ ಬೇಕಾದದ್ದು ಸಮರ್ಥ, ಪ್ರಾಮಾಣಿಕ ಆಶಯದ, ನಿಸ್ವಾರ್ಥಿ ನಾಯಕತ್ವದ ಮಾರ್ಗದರ್ಶನ. ಈ ಆಯ್ಕೆಗಳ ಗಡಿಬಿಡಿಯ ನಡುವೆಯೂ ಆ ಸಮರ್ಥ ನಾಯಕತ್ವ, ಯಾವುದೆ ಹಂಗಿನ ಸೋಗಿಲ್ಲದೆ, ತನ್ನ ಸ್ವಂತ ಬೆಂಬಲದಲ್ಲೆ ಸರಕಾರ ರಚಿಸುವಷ್ಟು ಬಹುಮತದೊಂದಿಗೆ ಹೊರಬಿದ್ದರೆ, ಆ ಪ್ರಗತಿಯ ಹಾದಿಯಲ್ಲಿ ಅಧಿಕಾರ ಉಳಿಸಿಕೊಳ್ಳುವ ‘ಚಮಕು’ಗಳ ಹಂಗಿಲ್ಲದೆ ಮುನ್ನಡೆಸಲು ಸಾಧ್ಯವಾದೀತು. ಆ ರೀತಿಯ ‘ಹಂಗ್’ ಪಾರ್ಲಿಮೆಂಟಿರದ ರೀತಿ ಚುನಾವಣೆಯ ಫಲಿತಾಂಶ ಬಂದಲ್ಲಿ, ಪ್ರಗತಿಯ ನಿಜ ರೂಪುರೇಷೆಗೆ ಹೊಸ ನಕ್ಷೆಯ ಆಸರೆಯೊಂದು ದೊರಕಿದಂತಾಗುತ್ತದೆ.

ಆ ಆಶಾವಾದಕ್ಕೆ ಈ ಹೊಸ ಸಂಕ್ರಮಣ ನಾಂದಿ ಹಾಡಲಿ, ಆಶಯ ನಿಜವಾಗಿಸಲಿ ಎಂಬ ಹಾರೈಕೆಯೊಡನೆ ಈ ಪ್ರಸ್ತುತ ಪ್ರಗತಿಯ ಕುರಿತಾದ ಕಿರುಗವನ ‘ಗಣತಿಗಿಲ್ಲದ ಪ್ರಗತಿ’ – ಇನ್ನಾದರೂ ‘ಗಣನೆಗಿಲ್ಲದ ಪ್ರಣತಿ’ಯಾಗದಿರಲೆಂಬ ಆಶಾವಾದದೊಂದಿಗೆ ಸಂಪದಿಗರ ಮಡಿಲಿಗೆ.

ಗಣತಿಗಿಲ್ಲದ ಪ್ರಗತಿ
_______________

ಗಣತಿಗಿಲ್ಲದ ಪ್ರಗತಿ
ಗಣನೆಗಿಲ್ಲದ ಪ್ರಣತಿ
ತೂತು ಮಡಿಕೆಗೆ ತುಂಬ
ನೀರು ತುಂಬುವ ರೀತಿ ||

ಸಂಪನ್ಮೂಲ ಸಿಕ್ಕಂತೆ
ಚೆಲ್ಲಾಡಿ ಕಂತೆ ಕಂತೆ
ಕೊಡವಿರದೆ ಸೇದಿದಂತೆ
ಫಲಿತಾಂಶ ಕಾಣದ ಕಥೆ ||

ಅಡ್ಡ ದಾರಿಗಳೆಲ್ಲ ಹಾಯ್ದು
ಉದ್ದಗಳ ತುಂಡಿರಿಸಿದ ಮೆದ್ದು
ಮುಗಿಸಿದರೇನು ಬಂತು ಕೆಲಸ
ಸಮಷ್ಟಿಯಲಿರದಿರೆ ಕೈ’ಲಾಸ’ ||

ಕಟ್ಟುತಿರುವ ಸೇತುವೆ ದಿಟ
ಮಾಯವಾಗೊ ಇಟ್ಟಿಗೆ ಬೆಟ್ಟ
ಗಟ್ಟಿ ಮುಟ್ಟಾದೀತೇನೊ ಪೆದ್ದ
ಹಾಯುವವನಾವನೊ ಕೆಳಬಿದ್ದ ||

ನೀತಿ ನಿಯ್ಯತ್ತಿನಲಿ ಮಾಡಿ ಕೆಲಸ
ಧರ್ಮ ಕರ್ಮ ನೋಡೀ ಮೋಸ
ಮಾಡಿಬಿಡಲೆಲ್ಲವನು ಸುಸಂಬದ್ಧ
ಮಾತ್ಯಾರದು ಬರದಂತೆ ಅಸಂಬದ್ಧ ||

—————————————–
ನಾಗೇಶ ಮೈಸೂರು
—————————————–

2 thoughts on “00144. ಗಣತಿಗಿಲ್ಲದ ಪ್ರಗತಿ”

ನಿಮ್ಮ ಟಿಪ್ಪಣಿ ಬರೆಯಿರಿ