00147. ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ…

00147. ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ…

ಸರಿ ಸುಮಾರು 90ರ ಆಚೀಚೆಗೆ ಬರೆದಿದ್ದ ಸಂಕ್ರಾಂತಿ ಕವನ, ಲಘು ಹಾಸ್ಯದ ದಾಟಿಯಲ್ಲಿ. ಈಗೆಲ್ಲ ಮೋಟಾರು ಬೈಕುಗಳ ಜಾಗದಲ್ಲಿ ಕಾರುಗಳೆ ಬಂದು ಕೂತುಬಿಟ್ಟಿವೆಯೆಂದು ಕಾಣುತ್ತದೆ. ಆದರೂ ಮೂಲ ಥೀಮಿಗೆ ಕಾರು – ಬೈಕಿನ ಎಫೆಕ್ಟ್ ಒಂದೆ ಆದ್ದರಿಂದ, ಸಂಪದದಲ್ಲಿ ಹಾಕುತ್ತಿದ್ದೇನೆ – ಕವನದ ಪ್ರಬುದ್ಧತೆಗಿಂತ ಆ ದಿನಗಳ ತುಂಟ ಹಾಸ್ಯದ ಇಣುಕು ನೋಟವನ್ನು ಎತ್ತಿ ಹಿಡಿಯಲೆಂದು. ಎಳ್ಳು ಬೀರಲು ಹೊರಟ ಸಂಕ್ರಾಂತಿ ಹುಡುಗಿ ಮತ್ತು ಹಿಂದಿನ ದಿನ ಜಗಳವಾಡಿ ಮುನಿಸಿಕೊಂಡು ಕೂತಿದ್ದ ಹುಡುಗನ ಊಹಾತ್ಮಕ ಕಲ್ಪನೆಯ ಹಿನ್ನಲೆಯಲ್ಲಿ ಹೆಣೆದ ಕವನ , ಸಂಕ್ರಾಂತಿಯ ದಿನಕ್ಕೆ ಆ ಹುಡುಗ ಹುಡುಗಿಯರ ಮನಗಳಿಗೆ / ಮನೋಭಾವನೆಗಳಿಗೆ ಹೊಂದುತ್ತಾ ಮುದ ಕೊಡುವುದೆಂಬ ಆಶಯದಲ್ಲಿ 🙂
ಸಂಕ್ರಾಂತಿ ಹುಡುಗಿಯೂ, ಮೋಟಾರು ಬೈಕೂ…
——————————————————
ಸಂಕ್ರಾಂತಿಯ ಸಂಜೆ
ಹುಡುಗಿ ಬಂದಳು-
ರಂಗುರಂಗಿನ ದಿರುಸು
ಮೈಯ ಮರೆಸಿ
ಬಂದವಳ ಕಣ್ತುಂಬಾ
ಪ್ರೀತಿಯಾ ಸುರಿಮಳೆ
ತುಟಿ ತುಂಬಾ ಅರಳಿದ
‘ಕ್ಲೋಸ್ ಅಪ್ ಸ್ಮೈಲ್’ ಕಳೆ.
ಬಣ್ಣ ಬಣ್ಣದ ನವಿಲ
ಚಿತ್ತಾರ ಕೈತುಂಬಾ
ಸನಿಹ ನಿಂತೆಂದಳು
‘ಇಕೋ, ಸಂಕ್ರಾಂತಿಯ ಎಳ್ಳು’?
ನಿನ್ನೆಯ ವಿರಸದ
ಹಗಲು ನೆನಪಾಯ್ತು
ಚಕ್ಕನೆ ಚಾಚಿದ ಕೈಯ
ಹಿಂದಕಿಡಿದೆ
(ಹುಸಿ) ಮುನಿಸಿಂದ ಎಳ್ಳ
ಬೇಡವೆಂದೆ ..
ಅವಳೋ
ಮುದ್ದಾಗಿ ನಕ್ಕಳು
ಸಕ್ಕರೆ ಅಚ್ಚಿನಂತೆ..
ಅವಳ
ಕಣ್ಣು ಬರೆದ ಕವಿತೆಗೆ
ನಾನು ಸೋತೆ ..
ಕಣ್ಣಿನಾ ಕೊನೆಯಲ್ಲೇ
ಮಿಂಚು ಹರಿಸುತ್ತ
ಓರೆನೋಟದ ಬಲೆಗೆ
ನನ್ನ ಕೆಡವುತ್ತ
ಮೇಲೆತ್ತಿ ಸುರಿದಳು
ಕೈಯ ತುಂಬಾ
ನವಿನವಿರು ಕನಸುಗಳು
ಮೈಯ ತುಂಬಾ..!
ಕನಸುಗಳ ಅಪ್ಪಿ ನಾ
ಇಹವನ್ನೇ ಮರೆತು
ಹುಡುಗಿಯಾ ಕೈ ಹಿಡಿದು
ಕೆಲ ಕ್ಷಣಗಳುರುಳಿತ್ತು…
ಎಂಥ ಚಂದದ ನಲ್ಲೆ,
ನಗುವ ಸುಂದರ ಮೊಲ್ಲೆ,
ಸ್ವರ್ಗಕೊಂದಡಿ ಕೆಳಗೆ
ನಾ ವಿಹರಿಸಿದ್ದೆ..
ಎಂಥ ಸೊಗದವಕಾಶ
ಬಿಡಲು ನಾ ಪೆದ್ದೆ
ಅವಳ ಸನಿಹವದೆಂಥ
ಸೊಗದ ನಿದ್ದೆ?
ನನ್ನುಡುಗಿಯೆಂದಳು-
‘ನಿನದೆಷ್ಟು ಒಳ್ಳೆತನ..’
ಮನದಲ್ಲಿ ನಡೆದಿತ್ತು
ಕನಸುಗಳ ಸಂಕಲನ..
ಕೊನೆಗೂ ಅವಳೆಂದಳು
ದಿನ ಕೊನೆಯ ಮಾತು
‘ಹೊರಡಬೇಕಿದೆ ನನಗೆ
ವೇಳೆಯಾಯ್ತು……….’
ನಡುವೆ ತಡೆದು ದನಿಯ
ಉಗುಳು ನುಂಗಿ,
ಇನಿ ಇಳಿದಾ ದನಿಯಲಿ
ಜಗ್ಗಿ ಅಂಗೀ:
“ಊರೆಲ್ಲ ನಾನೀಗ ಎಳ್ಳು
ಹಂಚ ಬೇಕು
ತರಲಾರೆಯ
ನಿನ್ನ ಮೋಟಾರು ಬೈಕು ?”
==============================
ನಾಗೇಶ ಮೈಸೂರು
==============================

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s