00155. ಮುಗಿದಂತೆ ಸಹಸ್ರನಾಮ

00155. ಮುಗಿದಂತೆ ಸಹಸ್ರನಾಮ
_____________________________

ಲಲಿತ ಸಹಸ್ರನಾಮದ ವಿವರಣೆಯ ಅನುವಾದ ಕಾರ್ಯ ಕೈಗೊಂಡ ಶ್ರೀಧರರು ಇದೀಗ ತಾನೆ ಕೊನೆಯ ಕಂತನ್ನು ಮುಗಿಸಿದ ಸಂತೃಪ್ತಿಯಲ್ಲಿದ್ದಾರೆ. ಆ ಭಕ್ತಿ ಯಾತ್ರೆಯಲಿ ಅದೆಷ್ಟೊ ಆಸಕ್ತ ಭಕ್ತ ಸಂಪದಿಗರು ಮಿಂದು ಕೃತಾರ್ಥರಾಗಿದ್ದಾರೆ. ನನಗೆ ವೈಯಕ್ತಿಕವಾಗಿ ಅದೊಂದು ಅದ್ಭುತ ಅನುಭವ. ವಿವರಣೆಯ ಜತೆಗೂಡಿದ ಅನೇಕಾನೇಕ ಸೈದ್ದಾಂತಿಕ, ಬೌದ್ಧಿಕ, ಅಧ್ಯಾತ್ಮಿಕ, ವೈಜ್ಞಾನಿಕ ವಿಷಯಗಳು ಜತೆ ಜತೆಯಲ್ಲೆ ಬೆಸೆದುಕೊಂಡು, ಒಂದು ಸಮಗ್ರತೆಯ ಸಮಷ್ಟಿಯನ್ನು ಕಟ್ಟಿಕೊಟ್ಟಿದ್ದು ಅಚ್ಚರಿಯ ವಿಷಯ. ಮಾಮೂಲಿ ನಾಮದ ವಿವರಣೆಯನ್ನು ಅರಿತವರು ಯಾರಾದರೂ ಕೊಡಬಹುದು; ಆದರೆ ಅದರ ಜತೆಗೆ ವೇದ, ಉಪನಿಷತ್, ಭಗವದ್ಗೀತೆ, ಬೈಬಲ್ ಇತ್ಯಾದಿ ಇತರೆ ಗ್ರಂಥಗಳಿಂದೆಲ್ಲ ಆಯ್ದ ವಿವರಣೆಯನ್ನು ಸಮಗ್ರವಾಗಿ ಸೇರಿಸಿ ಹೀಗೆ ಸೊಗಸಾದ ಮಲ್ಲಿಗೆ ದಂಡೆಯಂತೆ ಕಟ್ಟಿಕೊಡುವ ಕೈಂಕರ್ಯ ಅಸಾಧಾರಣವಾದದ್ದು. ಆ ದೃಷ್ಟಿಯಿಂದ ಮೂಲ ಲೇಖಕ ಶ್ರೀಯುತ ರವಿ ಮತ್ತು ಶ್ರೀಧರ ಬಂಡ್ರಿಯವರಿಬ್ಬರು ಅಭಿನಂದನಾರ್ಹರು. ಭಕ್ತಿ ಇರಲಿ ಬಿಡಲಿ, ನಂಬಿಕೆ ಇರಲಿ ಬಿಡಲಿ ಕೇವಲ ಜ್ಞಾನ ಗ್ರಹಿಸುವ ಉದ್ದೇಶದಿಂದ ನೋಡಿದರೂ ಎಷ್ಟೊಂದು ವಿಷಯ ವೈವಿಧ್ಯಗಳು ಜತೆಗೂಡಿವೆ ಎಂಬುದು ವರ್ಣಿಸಲಸದಳ.

ಈಗ ಆ ಮಹಾನ್ ಕಾರ್ಯ ಮುಕ್ತಾಯ ಹಂತ ತಲುಪಿದೆ. ಜತೆಗೆ ಆ ಒಂದು ಯಾನವನ್ನು ಕಾವ್ಯ ರೂಪದಲ್ಲಿ ಹಿಡಿಯುತ್ತ ನನ್ನ ಜಡ್ಡುಗಟ್ಟಿ ಮೂಲೆಯಲ್ಲಿ ಕೂತಿದ್ದ ಕವಿತ್ವದ ಅಭಿವ್ಯಕ್ತಿಗೊಂದು ದಾರಿ ಮಾಡಿಕೊಟ್ಟಿದೆ. ಈ ಯಾನದ ಸವಿ ನೆನಪಿಗಾಗಿ ಮತ್ತೊಂದು ಕವನವನ್ನು ಸೇರಿಸುತ್ತಿದ್ದೇನೆ , ಓದಿದ ತುಣುಕುಗಳ ಸಾರಾಂಶದ ತುಣುಕನ್ನೆಲ್ಲ ಹೆಕ್ಕಿ ಜೋಡಿಸುತ್ತ (ನೆನಪಿಗೆ ಬಂದಷ್ಟು). ಇದೊಂದು ರೀತಿ ಶ್ರೀಧರರಿಗೆ ಮಾತ್ತು ರವಿಯವರಿಗೆ ಹೇಳಿದ ‘ಥ್ಯಾಂಕ್ಸ್’ ಕೂಡ 🙂

ಮುಗಿದಂತೆ ಸಹಸ್ರನಾಮ
__________________________

ಮುಗಿಸುತ ಸಹಸ್ರ ನಾಮ
ನಮ್ಮ ಮನಗಳಾಗಿ ಪರಮ
ಹಂಚಿದ ಭಕ್ತಿಯ ಸವಿ ಜೇನು
ಜತೆಗೂಡಿದ ಜ್ಞಾನದ ಫಲವನು ||

ತಿಂಗಳುಗಳ ಮೀರಿದ ಯಾನ
ಹೂವ್ವೆತ್ತಿದಂತೆ ಹಗುರ ಮನ
ಸರಳ ಸಾಂಗತ್ಯದಲಿ ಪರಿಷೆ
ಸುಲಲಿತ ಹರಿಯುತ ಭಾಷೆ ||

ಪಂಡಿತರಿಗು ಹಚ್ಚುತ ಜಿಜ್ಞಾಸೆ
ಪಾಮರರಿಗು ಹಂಚಿ ಜ್ಞಾನದ ಪಸೆ
ಕಟ್ಟಿ ಸೇತುವೆ ಅಮೂರ್ತದೆ ಮೂರ್ತಕೆ
ದಾಟಿಸುತ ಸಾಮಾನ್ಯರನೂ ಔನ್ಯತ್ಯಕೆ ||

ನಾಮಾವಳಿ ಹೆಸರಲಷ್ಟೆ ಪ್ರಸ್ತಾಪ
ಒಳಗದೆಷ್ಟು ಆಳದ ಜ್ಞಾನ ದೀಪಿಕ
ತಿಳುವಳಿಕೆ ಜಗೆದೆಲ್ಲ ಆಗು ಹೋಗು
ವೇದೊಪನಿಷತ್ತುಗಳೂ ಕತೆ ಸೆರಗಾಗು ||

ವೇದಾಂತ ಭಾಷ್ಯ ಭಗವದ್ಗೀತೆ ಲಾಸ್ಯ
ಲಲಿತೆ ಕೃಷ್ಣ ಶಿವರೆಲ್ಲ ಒಂದೆಂಬ ಸತ್ಯ
ಬ್ರಹ್ಮ ಪರಬ್ರಹ್ಮ ವ್ಯಕ್ತಾವ್ಯಕ್ತ ಅರಿವಾಗುತ್ತ
ಮಾಯೆ ಮುಸುಕಿದಾತ್ಮ ಪರಮಾತ್ಮ ಸಹಿತ ||

ಪ್ರಜ್ಞಾವಸ್ಥೆ ಹಂತ ತತ್ವಗಳ ಮೂಲಭೂತ
ಮೂಲಪ್ರಕೃತಿ ಪುರುಷ ಪ್ರಕೃತಿ ಸಮೇತ
ನಾದಬ್ರಹ್ಮ ಚಕ್ರಗಳೆಲ್ಲ ಪರಿಚಯಿಸುತ
ಕುಂಡಲಿನೀ ಮುಖೇನ ಬ್ರಹ್ಮರಂಧ್ರದತ್ತ ||

ಸೃಷ್ಟಿ ಸ್ಥಿತಿ ಲಯಗಳ ತ್ರಿ ಕಾರ್ಯ ಸೂತ್ರ
ತಿರೋದಾನ ಅನುಗ್ರಹ ಧಾರಣ ಪಾತ್ರ
ತ್ರಿಪುಟಿಗಳೆಲ್ಲವನು ಮುಷ್ಟಿಯಲಿರಿಸಿ ಸರಳ
ಹಿಗ್ಗಿ ಜ್ಞಾನಮಹಾಸ್ಪೋಟ , ಕುಗ್ಗಿ ಅಜ್ಞಾನ ತಳ ||

———————————————————–
ನಾಗೇಶ ಮೈಸೂರು, ೧೮. ಜನವರಿ. ೨೦೧೪, ಸಿಂಗಪುರ
———————————————————-

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s