00154. ಮುದ್ದಣನೆಂಬ ಕನ್ನಡದ ಆಸ್ತಿ

00154. ಮುದ್ದಣನೆಂಬ ಕನ್ನಡದ ಆಸ್ತಿ

ನಾಳೆ ಅಂದರೆ ಇಪ್ಪತ್ನಾಲ್ಕನೆ ಜನವರಿ ಮಹಾಕವಿ ಮುದ್ದಣನ ಜನ್ಮದಿನವೆಂದು ನನ್ನ ಸಾಹಿತ್ಯಾಭಿಮಾನಿ ಕೂಟದ ಮಿಂಚಂಚೆ ನೆನಪಿಸಿದಾಗ, ಕವಿ ಮುದ್ದಣನ ಕುರಿತು ನೆಟ್ನಲ್ಲಿ ಏನಿದೆಯೆಂದು ನೋಡಲು ಯತ್ನಿಸಿದೆ. ವಿಕಿ ಕನ್ನಡ, ವಿಕಿ, ಕಣಜ ಮತ್ತಿತರ ಕಡೆ ಕೆಲವು ವಿಷಯ ಸಿಕ್ಕಿತು. ಜತೆಗೆ ಮುದ್ದಣನ ಕುರಿತಾದ ಪುಸ್ತಕ ಮತ್ತು ಎಂಪಿ 3 ಕುರಿತು ಮಾಹಿತಿ ಸಿಕ್ಕಿತು. ಅದನ್ನೆಲ್ಲ ಕಲೆ ಹಾಕಿ ಈ ಕೆಳಗಿನ ಪುಟ್ಟ ಕವನದಲ್ಲಿ ಹಿಡಿದಿಡಲು ಯತ್ನಿಸಿದ್ದೇನೆ. ಕವನದ ರೂಪವನ್ನು ನೋಡುವ ಮುನ್ನ ಕೆಲವು ಕುತೂಹಲಕಾರಿ ಸಂಗತಿಗಳು :

1. ಮುದ್ದಣ ಬದುಕಿದ್ದು ಕೇವಲ ಮುವ್ವತ್ತೊಂದೆ ವರ್ಷಗಳು ಮಾತ್ರ. ಬಡತನದಲ್ಲೆ ಬಳಲಿದವನನ್ನು ಕ್ಷಯ ರೋಗ ತಿಂದು ಹಾಕಿತ್ತು
2. ಪ್ರಕಟವಾಗುವುದೊ ಇಲ್ಲವೊ ಎಂಬ ಆತಂಕದಲ್ಲಿ ಮುದ್ದಣ ತನ್ನೆಲ್ಲ ಬರವಣಿಗೆಯನ್ನು ತನ್ನ ಹೆಸರಲ್ಲಿ ಪ್ರಕಟಿಸಲೆ ಇಲ್ಲ. ಯಾರೊ ವಂಶಸ್ಥ ಪೂರ್ವಜರ ಬರಹ ತಾನು ಸಂಗ್ರಹಿಸಿ ಪ್ರಕಟಿಸುತ್ತಿರುವುದಾಗಿ ಹೇಳಿಕೊಂಡ. ಇದರಿಂದಾಗಿ ಮುಂದೆ ಈ ಪುಸ್ತಕಗಳು ಪಠ್ಯ ಪುಸ್ತಕಗಳಾಗಿ ಆಯ್ಕೆಯಾದಾಗ ಮುದ್ದಣನಿಗೆ ಸಿಗಬೇಕಾದ ಹೆಸರು, ಗೌರವ, ಮನ್ನಣೆಗಳೂ ಸಿಗಲಿಲ್ಲ. ಅದರಿಂದ ದೊರಕಬಹುದಾದ ಹಣವೂ ಕೈ ತಪ್ಪಿ ಹೋಯ್ತು!
3. ಇದನ್ನೆಲ್ಲ ನಿಜವಾಗಿ ಬರೆದದ್ದು ಮುದ್ದಣನೆ ಎಂದು ಅವನು ಬದುಕಿರುವತನಕವೂ ಯಾರಿಗೂ ತಿಳಿಯಲಿಲ್ಲ. ಸತ್ತು ಸುಮಾರು ಇಪ್ಪತೆಂಟು ವರ್ಷಗಳ ನಂತರವಷ್ಟೆ ಪಂಜೆ ಮಂಗೇಶರಾಯರಂತಹ ಗೆಳೆಯರ ಪರಿಶ್ರಮದಿಂದಾಗಿ ಈ ವಿಷಯ ಬೆಳಕಿಗೆ ಬಂತು.
4. ಮುದ್ದಣನ ನಿಜವಾದ ಹೆಸರು ಲಕ್ಷ್ಮಿನಾರಾಣಪ್ಪ. ಹುಟ್ಟೂರು ನಂದಳಿಕೆ. ನೋಡಲು ಆಕರ್ಷಕವಾಗಿ ಮುದ್ದಾಗಿದ್ದವನಿಗೆ ಕರೆಯುತ್ತಿದ್ದ ಮುದ್ದಣ ಎಂಬ ಹೆಸರೆ ಅನ್ವರ್ಥಕವಾಗಿ ಹೋಯ್ತು. ಸತಿ ಮನೋರಮೆಯ ಜತೆಗಿನ ಸರಸಮಯ ಸಂವಾದ ಸಂಭಾಷಣೆ ಕನ್ನಡ ಸಾಹಿತ್ಯ ಲೋಕದಲ್ಲಿ ಸದಾ ಹಸಿರು ಹಸಿರು (ಒಂದೆಡೆ ಪತ್ನಿಯ ಹೆಸರು ಕಮಲ, ಮಗನ ಹೆಸರು ರಾಧಾಕೃಷ್ಣ ಎಂದು ನೋಡಿದೆ, ಗೊತ್ತಿದ್ದವರು ದಯವಿಟ್ಟು ತಿಳಿಸಿಕೊಡಿ)
5. ಮಿಕ್ಕ ವಿವರಗಳೆಲ್ಲ ಈ ವಿಕಿಕನ್ನಡದ ಕೊಂಡಿಯಲ್ಲಿದೆ. ಮೇಲ್ಕಾಣಿಸಿದ ಬಹುತೇಕ ಮಾಹಿತಿಗೂ ಈ ಕೊಂಡಿಯೆ ಆಧಾರ.

http://kn.wikipedia.org/wiki/ಮುದ್ದಣ

ಈಗ ಕವನದ ಆಸ್ವಾದನೆಗೆ :

ಮುದ್ದಣನೆಂಬ ಕನ್ನಡದ ಆಸ್ತಿ
_____________________

ಹುಟ್ಟೂರು ನಂದಳಿಕೆ
ನಾಚಿಕೆ ವಿನಯದ ತೆಕ್ಕೆ
ಹೆಸರಾಗಿ ಲಕ್ಷ್ಮಿ ನಾರಾಣಪ್ಪ
ಕವಿ ಮುದ್ದಣನೆಂಬೀ ಅಪರೂಪ ||

ಬದುಕು ಮೂರೆ ದಶಕ
ಬರೆದ ನಾಲ್ಕೈದೆ ಪುಸ್ತಕ
ಹೊಡೆದಂತೆ ಸರಸರ ಶತಕ
ಅಜರಾಮರ ಎಂತ ಕೈ ಚಳಕ ||

ಹೆಸರ ಹೇಳೆ ನಾಚಿಕೆ
ಬಚ್ಚಿಟ್ಟು ಬರೆದು ಬೆಳಕೆ
ಮುದ್ರಿಸೆ ಪೂರ್ವಜ ಹೆಸರೆ
ಸತ್ತರು ಗೊತ್ತಾಗದೆ ಗುಟ್ಟಾಗಿರೆ ||

ಮತ್ತೆ ಮೂರು ದಶಕ
ಗೆಳೆಯರೆ ತೆರೆದ ಚಿಲಕ
ರಟ್ಟಾಯಿತು ಮುದ್ದಣನೆ ಕವಿ
ಹಿರಿಯರ ಹೆಸರಷ್ಟೆ ಮುದ್ರಣದಲಿ ||

ಸುಂದರ ಆಕರ್ಷಕ ರೂಪ
ಮುದ್ದಾಗಿಹ ಮುದ್ದಣ ಭೂಪ
ಲಾವಣ್ಯವತಿ ಮನೋರಮೆ ಸತಿ
ಸರಸ ಸಲ್ಲಾಪದ ಕೃತಿಗವಳೆ ಸ್ಪೂರ್ತಿ ||

ಶುರು ರತ್ನಾವತಿ ಕಲ್ಯಾಣ
ಕುಮಾರ ವಿಜಯ ಯಕ್ಷಗಾನ
ಅದ್ಭುತ ರಾಮಾಯಣ ತಳಹದಿ
ಶ್ರೀ ರಾಮ ಪಟ್ಟಾಭಿಷೇಕಂ ತಾ ಷಟ್ಪದಿ ||

ಶ್ರೀ ರಾಮಾಶ್ವಮೇಧಂ ಲೆಕ್ಕ
ಬರೆದರು ಸಿಗದಾ ಕೀರ್ತಿ ಸುಖ
ಬಡತನ ಕ್ಷಯರೋಗ ಕಾಡಿದ ಕಾಲ
ಹೆಸರೇಳಲು ಬಿಡದೆ ಹೊತ್ತೊಯ್ದ ಖಳ ||

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s