00157. ಮರಗುದುರೆಯ ಬೆನ್ನೇರಿ ಬಂದ ಚೀನಿ ಹೊಸ ವರ್ಷ…

00157. ಮರಗುದುರೆಯ ಬೆನ್ನೇರಿ ಬಂದ ಚೀನಿ ಹೊಸ ವರ್ಷ…
_______________________________________

ಈ ತಿಂಗಳ ೩೧ ಮತ್ತು ಫೆಬ್ರವರಿ ೦೧ ಈ ಬಾರಿಯ ಚೀನಿ ಹೊಸ ವರ್ಷದ ಆರಂಭ. ಚೀನಿ ಕ್ಯಾಲೆಂಡರಿನ ಕೆಲವು ಕೌತುಕಮಯ ಅಂಶಗಳು ಹೇಗೆ ಹೊಸವರ್ಷಕ್ಕೆ ತಳುಕು ಹಾಕಿಕೊಂಡಿವೆಯೆಂದು ನೋಡುವ ಒಂದು ಪುಟ್ಟ ಯತ್ನ ಈ ಲೇಖನದ್ದು. ತನ್ಮೂಲಕ ಆ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಇರಬಹುದಾದ ಸಾಮ್ಯತೆ, ಅಂತರಗಳ ತುಲನೆಗೊಂದಷ್ಟು ಪೂರಕ ಮಾಹಿತಿ ಒದಗಿಸುವ ಹುನ್ನಾರ ಸಹ. ಈ ಹಿಂದೆ ಈ ಕುರಿತು ಕೆಲವು ಪರಿಚಯ ಲೇಖನಗಳು ಈಗಾಗಲೆ ಬಂದಿರಬಹುದಾದ ಹಿನ್ನಲೆಯಲ್ಲಿ ತುಸು ವಿಶಿಷ್ಠವಾದ ವಿಷಯಗಳನ್ನೆಲ್ಲ ಕ್ರೋಢೀಕರಿಸಿ ಸಮಗ್ರ ಚಿತ್ರಣ ಕಟ್ಟಿಕೊಡುವ ಆಶಯ ಕೂಡ.

ಈಗಾಗಲೆ ಕೆಲವು ಓದುಗರಿಗೆ ಗೊತ್ತಿರುವಂತೆ ಚೀನಿ ಕ್ಯಾಲೆಂಡರಿನ ಲೆಕ್ಕಾಚಾರಕ್ಕೆ ಸಾಧಾರಣ ಬಳಕೆಯಲ್ಲಿರುವುದು ಪಕ್ಕಾ ಒಂದು ಡಜನ್ ಪ್ರಾಣಿಗಳು. ಹನ್ನೆರಡು ಚೀನಿ ವರ್ಷಗಳ ಒಂದು ಜೊಂಪೆಯನ್ನು ಹನ್ನೆರಡು ವಿವಿಧ ಪ್ರಾಣಿಗಳಿಗೆ ಆರೋಪಿಸಿ ಪ್ರತಿ ವರ್ಷಕ್ಕೊಂದು ಪ್ರಾಣಿಯ ವರ್ಷವನ್ನಾಗಿ ಆಚರಿಸುವುದು ಇದರ ಮೂಲ ಸಿದ್ದಾಂತ. (ನೋಡಿ, ಚೀನಾದಲ್ಲೂ ಮನುಷ್ಯರಿಗಿಂತ ಪ್ರಾಣಿಗಳೆ ವಾಸಿ ಎಂದು ಯಾವಾಗಲೋ ತೀರ್ಮಾನಿಸಿಬಿಟ್ಟಿದ್ದಾರೆ; ಒಟ್ಟಾರೆ ಎಲ್ಲೆಡೆಯೂ ಮನುಷ್ಯನ ಬೆಲೆ ಕನಿಷ್ಠವೆ ಬಿಡಿ!). ನಮ್ಮಲ್ಲಿ ಹೇಗೆ ಹನ್ನೆರಡು ಜನ್ಮ ರಾಶಿಗಳಿವೆಯೊ, ಹಾಗೆಯೆ ಚೀನಿ ಸಂಪ್ರದಾಯದ ಹನ್ನೆರಡು ಪ್ರಾಣಿಗಳೂ ಮನುಷ್ಯರ ಜನ್ಮ ಕುಂಡಲಿ ಬರೆಯುತ್ತವೆ. ಅದು ಹೇಗೆ, ಏನು ಎತ್ತ ಎಂದು ಅರ್ಥಮಾಡಿಕೊಳ್ಳಲು ಸ್ವಲ್ಪ ಆಳಕ್ಕೆ ಹೊಕ್ಕೆ ನೋಡಬೇಕು. ಮೊದಲು ಆ ವಿಸ್ತೃತ ಪರಿಕಲ್ಪನೆಯ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಸ್ವಲ್ಪ ಸ್ಥೂಲವಾಗಿ ಅರ್ಥ ಮಾಡಿಕೊಳ್ಳಲು ಸುಲಭವಾಗುವಂತೆ ಒಬ್ಬ ಚೀನಿ ಮಗುವೊಂದರ ಹುಟ್ಟನ್ನು ಫೆಬ್ರವರೀ ಐದನೆ ತಾರೀಖು ೨೦೧೪ ಎಂದು ಇಟ್ಟುಕೊಳ್ಳೋಣ. ಈ ತಾರೀಕಿಗೆ ಆಗಲೆ ಹೊಸವರ್ಷದ ಆಗಮನವಾಗಿಬಿಟ್ಟಿರುತ್ತದೆ. ಈ ಬಾರಿಯ ಸರದಿಯ ಪ್ರಾಣಿ ಕುದುರೆ – ಹೀಗಾಗಿ ಈ ಮಗು ಹುಟ್ಟಿದ ವರ್ಷ ‘ಕುದುರೆಯ’ ವರ್ಷವೆಂದು ನಿರ್ಧಾರವಾದಂತಾಯ್ತು. ತಾಳಿ ಇಷ್ಟು ಸುಲಭವೆ ? ಎಂದು ಮೂಗು ಮುರಿಯಬೇಡಿ. ಮೊದಲನೆಯದಾಗಿ ಚೀನಿ ಕ್ಯಾಲೆಂಡರಿನ ಆರಂಭ ದಿನಾಂಕ ನಾವು ಸಾಮಾನ್ಯವಾಗಿ ಅನುಕರಿಸುವ ಇಂಗ್ಲಿಷ್ ಕ್ಯಾಲೆಂಡರು (ಅರ್ಥಾತ್ ಗ್ರೆಗೋರಿಯನ್ ಕ್ಯಾಲೆಂಡರು – ಜನವರಿಯಿಂದ ಡಿಸೆಂಬರದ ಲೆಕ್ಕಾಚಾರದ್ದು) – ಎರಡೂ ಬೇರೆ ಬೇರೆ. ನಮ್ಮ ಪಂಚಾಂಗದ ಹಾಗೆ ಚೀನಿ ಪಂಚಾಂಗವು ಸಹ ಬೇರೆ ಮಾನದಂಡವನ್ನು ಅನುಕರಿಸುತ್ತದೆ. ಜತೆಗೆ ಪ್ರತಿ ಪಶುವಿನ ಜತೆಗೊಂದು ಮೂಲಧಾತುವನ್ನು ಸಹ ಸೇರಿಸಿರುತ್ತಾರೆ (ಐದು ಧಾತುಗಳಲ್ಲೊಂದನ್ನು – ಈ ಐದು ಧಾತುಗಳೆಂದರೆ ಲೋಹ (ಮೆಟಲ್), ಜಲ (ವಾಟರ), ಮರ (ವುಡ್ – ವೃಕ್ಷ), ಅಗ್ನಿ (ಫಯರ – ಬೆಂಕಿ), ಭುವಿ (ಅರ್ಥ್ – ಭೂಮಿ, ನೆಲ)) . ಈ ಐದು ಧಾತುಗಳನ್ನು ದೈವಿ ಕಾಂಡಗಳೆಂದು (ಹೆವನ್ಲೀ ಸ್ಟೆಮ್), ಹನ್ನೆರಡು ಪ್ರಾಣಿಗಳನ್ನು ಭೂ ಟೊಂಗೆಗಳೆಂದು (ಅರ್ಥ್ಲಿ ಬ್ರಾಂಚ್) ಕರೆಯುತ್ತಾರೆ. ಆಕಾಶ ಮತ್ತು ಗಾಳಿಯನ್ನು ಹೊರತುಪಡಿಸಿ ಮಿಕ್ಕ ಮೂರು ನಮ್ಮ ಪಂಚಭೂತಗಳ ಹೆಸರೆ ಆಗಿರುವುದು ಗಮನೀಯ.

ಇದನ್ನು ಸರಳವಾಗಿ ವಿವರಿಸುವುದಾದರೆ ಈಗ ಬರಲಿರುವ ವರ್ಷ ಬರಿಯ ಕುದುರೆ ವರ್ಷ ಮಾತ್ರವಲ್ಲ: ಕುದುರೆ – ಮರ (ವೃಕ್ಷ) ಸೇರಿದ ‘ಮರಗುದುರೆಯ’ ವರ್ಷ. ಇನ್ನು ಹನ್ನೆರಡು ವರ್ಷ ಕಳೆದ ಮೇಲೆ ಮತ್ತೊಮ್ಮೆ ಕುದುರೆ ವರ್ಷ ಬರುತ್ತದೆ. ಆಗ ಮರದ ಬದಲು ಮತ್ತೊಂದು ಧಾತು ಜತೆಯಾಗುತ್ತದೆ. ಆ ವರ್ಷ ‘ಅಗ್ನಿ ಕುದುರೆ’ಯಾದರೆ, ಮತ್ತೆ ಹನ್ನೆರಡು ವರ್ಷದ ತರುವಾಯ ‘ಭೂ ಕುದುರೆಯ’ ಬಾರಿ ; ಕೊನೆಗೆ ಮತ್ತೆ ಹನ್ನೆರಡನ್ನೆರಡು ವರ್ಷ ಮಿಕ್ಕೆರಡು ಬಾರಿ ಪುನರಾವರ್ತಿಸಿ ‘ಲೋಹಾಶ್ವ’ ಮತ್ತು ‘ಜಲಾಶ್ವ’ಗಳ ವರ್ಷವಾಗಿಬಿಡುತ್ತದೆ. ಅಂದರೆ ಮುಂದಿನ ಸಾರಿ ಮತ್ತೆ ‘ಮರಗುದುರೆ’ಯನ್ನು ಕಾಣಬೇಕಾದರೆ ಅರವತ್ತು ವರ್ಷ ಕಾಯಬೇಕು! ಅಷ್ಟಕ್ಕು ಬಿಡದೆ ಮೊದಲ ಅರವತ್ತು ವರ್ಷ ‘ಯಂಗ್’ ಎನ್ನುವ ಅಂಶ ಜತೆಯಿದ್ದರೆ, ಮುಂದಿನ ಅರವತ್ತು ವರ್ಷ ‘ಯಿನ್’ ಅಂಶ ಜತೆಯಾಗಿರುತ್ತದೆ.ಈ ಲೆಕ್ಕಾಚಾರದಲ್ಲಿ ಮರಗುದುರೆಯ ಯಂಗ್ ವರ್ಷ ಒಂದು ಬಾರಿ ಬಂದರೆ, ಮತ್ತೆ ಮುಂದಿನ ಬಾರಿ ಬರಲು ನೂರಿಪ್ಪತ್ತು ವರ್ಷ ಕಾಯಬೇಕು.ಅಂದರೆ ಹೆಚ್ಚುಕಡಿಮೆ ಮನುಷ್ಯನೊಬ್ಬನ ಜೀವಿತ ಕಾಲದಲ್ಲಿ ಮೂರರ ಒಂದು ಪಕ್ಕಾ ಜೋಡಣೆ ಕೇವಲ ಒಂದು ಬಾರಿ ಮಾತ್ರವೆ ಕಾಣಲು ಸಾಧ್ಯ ಎಂದಾಯ್ತು (ನೂರಿಪ್ಪತ್ತು ವರ್ಷಕ್ಕೂ ಮೀರಿ ಬದುಕಿದ್ದರೆ ಅದು ಬೇರೆ ವಿಷಯ ಬಿಡಿ).

ಬಹುಶಃ ಆ ಕಾರಣದಿಂದಲೋ ಏನೊ – ಸಾಧಾರಣ ಪರಿಗಣನೆಯಲ್ಲಿ ‘ಯಂಗ್ – ಯಿನ್’ ಹೊರತುಪಡಿಸಿ , ಪ್ರತಿ ಪ್ರಾಣಿಯ ವರ್ಷವೂ ಅರವತ್ತು ವರ್ಷಕ್ಕೊಮ್ಮೆ ಮರುಕಳಿಸುವುದೆಂದು ಲೆಕ್ಕ ಹಾಕುತ್ತಾರೆ. ಆದರೆ ಜಾತಕ , ಜೋತಿಷ್ಯ ಫಲದ , ಭವಿಷ್ಯದ ಲೆಕ್ಕಾಚಾರದಲ್ಲಿ ಇಬ್ಬರು ವ್ಯಕ್ತಿಗಳು ಕುದುರೆ ವರ್ಷದಲ್ಲಿ ಹುಟ್ಟಿದ್ದಾರೆಂದರೆ ಅವರಿಬ್ಬರ ಗುಣ ಧರ್ಮ, ಫಲಶ್ರುತಿ ಒಂದೆ ಇರುವುದೆಂದು ಅರ್ಥವಲ್ಲ. ಒಂದು ವೇಳೆ ಇಬ್ಬರಿಗು ಅರವತ್ತು ವರ್ಷ ಅಂತರವಿದ್ದು ಒಂದೆ ಪ್ರಾಣಿ – ಮೂಲಧಾತು ಗುಂಪಿಗೆ ಸೇರಿದ್ದರೂ ಯಂಗ್-ಯಿನ್ ಪರಿಗಣನೆಯಿಂದಾಗಿ ಅಜಗಜಾಂತರವಾಗಿಬಿಟ್ಟಿರುತ್ತವೆ, ಎರಡು ವ್ಯಕ್ತಿತ್ವಗಳು. ನೋಡಿ, ಹೆಚ್ಚು ಕಡಿಮೆ ಒಬ್ಬನ ಜೀವಿತ ಕಾಲದಲ್ಲಿ ಅವನ ವ್ಯಕ್ತಿತ್ವ ಮತ್ತೊಬ್ಬರಿಗೆ ಸುಲಭದಲ್ಲಿ ಆರೋಪಿಸಲಾಗದಂತೆ ಮಾಡುವ ಪರಿ (ಒಟ್ಟಾಗಿ ಜನಿಸಿದ ಸಮಕಾಲೀನರನ್ನು ಬಿಟ್ಟು).

ಅಂದ ಹಾಗೆ ‘ಯಿನ್’ ಮತ್ತು ‘ಯಂಗ್’ ಎಂಬುದರ ಸರಳ ಭಾವಾರ್ಥ ‘ಸರಿ’ ಮತ್ತು ‘ಬೆಸ’ ಎಂದು. ಮೊದಲ ಅರವತ್ತು ವರ್ಷದ ಚಕ್ರದಲ್ಲಿ ಪ್ರಾಣಿಯ ಜತೆ ‘ಯಿನ್’ ಇದ್ದರೆ ಮುಂದಿನ ಅರವತ್ತು ವರ್ಷ ಅದೇ ಪ್ರಾಣಿಯ ಜತೆ ‘ಯಂಗ್’ ಇರುತ್ತದೆ. ಆದರೂ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಪುನರಾವರ್ತಿಸುವ ಅದೆ ಪ್ರಾಣಿಯ ‘ಯಿನ್’ ಗುಣ ಲಕ್ಷಣಗಳು ಪೂರಾ ಬೇರೆಯದಂತೆ ! ಅದೆಲ್ಲ ಗೊಂದಲವನ್ನು ಬದಿಗಿರಿಸಿ ಅದೆರಡರ ಅಸ್ಥಿತ್ವವನ್ನು ಮತ್ತು ಅದು ಅರವತ್ತು ವರ್ಷದ ಚಕ್ರದಲ್ಲಿ ಅದಲು ಬದಲಾಗುವುದನ್ನು ನೆನಪಿನಲಿಟ್ಟುಕೊಂಡರೆ ಸಾಕು.

ಇನ್ನು ಪ್ರಾಣಿಗಳ ವಿಷಯಕ್ಕೆ ಬಂದರೆ ಈ ಗುಂಪಿನ ಮೊದಲ ಪ್ರಾಣಿ ‘ಮೂಷಕ’ (ನಮ್ಮಲ್ಲಿ ಎಲ್ಲಕ್ಕೂ ಮೊದಲು ಪೂಜಿಸುವುದು ಗಣಪನನ್ನಾದರೆ, ಚೀನಿ ರಾಶಿ ಲೆಕ್ಕಾಚಾರದಲ್ಲಿ ಮೊದಲ ಪ್ರಾಣಿ ಗಣೇಶನ ವಾಹನವಾದ ಇಲಿ – ಒಂದು ರೀತಿ ಅವರೂ ಪರೋಕ್ಷವಾಗಿ ಮೊದಲ ಪೂಜೆ ಗಣೇಶನಿಗೆ ಸಲ್ಲಿಸಿದಂತೆ ಎಂದುಕೊಳ್ಳಬಹುದೆ?). ಇನ್ನು ಎರಡನೆಯ ಪ್ರಾಣಿ ‘ ಬಸವ’ (ಮೂಲ ಆಂಗ್ಲದಲ್ಲಿ ‘ಕೌವ್’ ಎಂದಿರುವುದರಿಂದ ‘ಹಸು’ ಎಂದು ಕರೆಯಬಹುದು). ಮೊದಲು ಗಣೇಶನ ವಾಹನವಾಯಿತು, ಈಗ ಮುಂದಿನದೆ ಅಪ್ಪನ ಸರದಿ. ಸಾಧು ಮೃಗಗಳು ಮಾತ್ರವೇನು ಲೆಕ್ಕ ನಮ್ಮ ದೇವರುಗಳಿಗೆ? ಕ್ರೂರ ಮೃಗಗಳು ವಾಹನವೆ. ಅಂತೆಯೆ ಮೂರನೆಯ ಚೀನಿ ರಾಶಿ ಪ್ರಾಣಿ ನಮ್ಮ ಅಯ್ಯಪ್ಪ ಬೆನ್ನ ಮೇಲೇರಿ ಬಂದ ‘ವ್ಯಾಘ್ರ’ (ಟೈಗರ) ಜಗನ್ಮಾತೆಯ ಕೆಲವು ರೂಪಗಳು ಹುಲಿರಾಯನನ್ನು ಆಸೀನವಾಗಿಟ್ಟುಕೊಂಡಿರುವುದು ಸಾಮಾನ್ಯವೆ. ಈ ಗುಂಪಿನ ಮುಂದಿನ ಪ್ರಾಣಿ ಸಾಹೇಬ ‘ಶಶಾಂಕ’ ಅರ್ಥಾತ್ ಮೊಲ . ಮುದ್ದುಮುದ್ದಿನ ಈ ಮೊಲದ ವರ್ಷ ಪ್ರತಿ ಹನ್ನೆರಡು ವರ್ಷದ ಗುಂಪಿನ ನಾಲ್ಕನೆ ವರ್ಷದ ಯಜಮಾನ.

ಐದನೆ ವರ್ಷದ ಸಾರಥ್ಯ ವಹಿಸುವ ಪ್ರಾಣಿ ‘ಡ್ರ್ಯಾಗನ್’ ಹಾವಿನ ದೇಹದ ಉಗ್ರಮೊಗದ ಈ ವಿಶಿಷ್ಠ ಪ್ರಾಣೀ ಚೀನಿ ನಂಬಿಕೆಯಲ್ಲಿ ಬಹಳ ಮಹತ್ತರ ಸ್ಥಾನ ಗಳಿಸಿದ ಪಶು. ಜತೆಗೆ ಈ ವರ್ಷದಲ್ಲಿ ಹುಟ್ಟಿದ ಮಗು ಬಲು ಅದೃಷ್ಟಶಾಲಿ ಎಂಬ ನಂಬಿಕೆ ಸಹ. ಹೀಗಾಗಿ ಈ ವರ್ಷದಲ್ಲಿ ಹುಟ್ಟಲು ಮಕ್ಕಳಿಗೂ ಪೈಪೋಟಿ (ಅಂದರೆ ಅಪ್ಪ ಅಮ್ಮಗಳು ಪ್ರಯತ್ನಪೂರ್ವಕವಾಗಿ ಸಂತಾನ ಭಾಗ್ಯ ಪಡೆಯಲು ಯತ್ನಿಸುವ ವರ್ಷ). ಡ್ರ್ಯಾಗನ್ನಿನ ಬೆನ್ನಲ್ಲೆ ಹಿಂಬಾಲಿಸಿ ಬರುವ ಆರನೆ ವರ್ಷದ ಸರದಾರ ‘ಸರ್ಪ’ ಅಥವಾ ‘ಹಾವಿನ ವರ್ಷ’. ಸರ್ಪ ಸರಿಯುತ್ತಿದ್ದಂತೆ ನಾಗಾಲೋಟದಲ್ಲಿ ಕಾಲಿಕ್ಕುವ ‘ಕುದುರೆ’ ಈ ಗುಂಪಿನ ಏಳನೆ ವರ್ಷಕ್ಕೆ ಅಶ್ವಶಕ್ತಿ. ಮಿಂಚಿನ ವೇಗದಲ್ಲಿ ಬಂದು ಮಾಯವಾಗೋ ಪಳಗಿಸಬಹುದಾದ ಕುದುರೆಯ ಹಿಂದೆಯೆ ಬರುವ ಸಾಧು ಪ್ರಾಣಿ ‘ ಕುರಿ’ ಅಥವ ‘ಮೇಕೆ’ ಎಂಟನೆ ವರ್ಷದ ಆಗುಹೋಗಿನ ಸರ್ವಾಧಿಕಾರಿ.

ಆಡನ್ನು ಕಳಿಸುತ್ತಿದ್ದ ಹಾಗೆ ಹಿಂದೆಯೆ ಬರುವ ಚೆಲ್ಲಾಟದ ಕಪಿಚೇಷ್ಟೆಯ ಪ್ರಾಣಿ ‘ಮಂಗ ಅಥವ ಕೋತಿ’ಯದು ಒಂಭತ್ತನೆ ವರ್ಷದ ಅಧಿಪತ್ಯ. ಹತ್ತನೆ ವರ್ಷವನ್ನಾಳುವ ಪ್ರಾಣಿ ‘ಹುಂಜ ಅಥವಾ ಕೋಳಿ’ಯಾದರೆ ನಮ್ಮ ಸಾಧಾರಣ ಸಾಕು ಪ್ರಾಣಿಯಾದ ‘ನಾಯಿ ಅಥವ ಶ್ವಾನ’ಕ್ಕೆ ‘ಏಕದಶಾ’ದ ಚಕ್ರಾಧಿಪತ್ಯ. ಇನ್ನು ಈ ದ್ವಾದಶ ವರ್ಷದ ಗೊಂಚಲಿನ ಕೊನೆಯ ಪ್ರಾಣಿ ‘ನಿದಿರಾ ಪೋತ’ನೆಂದೆ ಹೆಸರಾದ ‘ವರಹಾ’ ಅರ್ಥಾತ್ ‘ಹಂದಿ’.

ಚೀನಿ ರಾಶಿಫಲ ಲೆಕ್ಕಾಚಾರದಲ್ಲಿ ಈ ಹನ್ನೆರಡು ಪ್ರಾಣಿಗಳನ್ನು ಆಧರಿಸಿ, ವ್ಯಕ್ತಿಯ ಹುಟ್ಟಿದ ವರ್ಷದ ಪ್ರಕಾರ ಹೊಂದಾಣಿಸಿ ಭವಿಷ್ಯ ಹೇಳುತ್ತಾರೆ. ನಿಮ್ಮ ಹುಟ್ಟಿದ ದಿನಾಂಕದ ಮೇಲೆ ನಿಮ್ಮ ‘ಜನ್ಮಪಶು’ ಯಾವುದೆಂದು ನಿರ್ಧಾರವಾಗುತ್ತದೆ. ಹೀಗಾಗಿ ಚೀನದಲ್ಲಿ ಯಾರನ್ನೂ ವಯಸ್ಸೆಷ್ಟು ಎಂದು ಕೇಳುವುದಿಲ್ಲವಂತೆ – ಬದಲಿಗೆ ಅವರು ಯಾವ ಪ್ರಾಣಿಯ ಗುಂಪಿಗೆ ಸೇರಿದವರು ಎಂದು ಕೇಳುತ್ತಾರಂತೆ. ಪ್ರತಿ ಪ್ರಾಣಿಯ ಬಾರಿ ಹನ್ನೆರಡು ವರ್ಷಕ್ಕೊಮ್ಮೆ ಮರುಕಳಿಸುವುದರಿಂದ ಅವರ ವಯಸನ್ನು ಅಂದಾಜು ಮಾಡುವುದು ಸುಲಭ ನೋಡಿ ! ಅಂದ ಹಾಗೆ ನೀವು ಕೂಡ ನಿಮ್ಮ ಜನ್ಮದಿನಾಂಕವನ್ನು ಬಳಸಿಕೊಂಡು ನೀವು ಯಾವ ಪ್ರಾಣಿಯ ಗುಂಪಿಗೆ ಸೇರಿದವರೆಂದು ಕಂಡು ಹಿಡಿದುಕೊಳ್ಳಬಹುದು. ಆದರೆ ಸರಿಯಾದ ವೆಬ್ಸೈಟನ್ನು ಬಳಸಬೇಕು, ಅದು ತುಂಬಾ ಮುಖ್ಯವಾದದ್ದು ಅನ್ನುತ್ತಾರೆ ಕೆಲವು ಪ್ರಖ್ಯಾತ ಚೀನಿ ಜ್ಯೋತಿಷ ಶಾಸ್ತ್ರಿಗಳು.

ಹೀಗೆ ಹೇಳಲು ಒಂದು ಕಾರಣವಿದೆ. ಇಂಟರ್ನೆಟ್ಟಿನಲ್ಲಿ ನಿಮ್ಮ ಜನ್ಮರಾಶಿ ಪ್ರಾಣಿಯನ್ನು ಕಂಡು ಹಿಡಿಯಲು ಬೇಕಾದಷ್ಟು ವೆಬ್ಸೈಟುಗಳು ಲಭ್ಯವಿದೆ. ಆದರೆ ಅದರಲ್ಲಿ ಅರ್ಧಕ್ಕರ್ಧ ತಪ್ಪು ತಪ್ಪಾಗಿ ಲೆಕ್ಕ ಹಾಕುತ್ತವೆ ಎಂದು ಈ ಶಾಸ್ತ್ರಿಗಳ ವಾದ. ಚೀನೀಯರಿಗಿಂತ ಇತರ ಪಾಶ್ಚಾತ್ಯರೆ ನಡೆಸುವ ಹಲವಾರು ಈ ತರಹದ ಸೈಟುಗಳನ್ನು ಗಮನಿಸಿದರೆ ಈ ವಾದದಲ್ಲೂ ತಥ್ಯವಿದೆ ಎಂದು ಅನಿಸದೆ ಇರದು. ಅದಕ್ಕೂ ಮಿಗಿಲಾಗಿ ಈ ಚೀನಿ ಶಾಸ್ತ್ರಿಗಳು ಹೇಳುವ ಮಾತಿನಲ್ಲು ಒಂದು ಶಾಸ್ತ್ರಿಯ ತರ್ಕ ಅಡಕವಾಗಿದೆ. ಈ ಲೆಕ್ಕಾಚಾರ ಮಾಡುವ ಸುಮಾರು ಸೈಟುಗಳು ತಮ್ಮ ಲೆಕ್ಕಕ್ಕೆ ಆಧಾರವಾಗಿ ಬಳಸುವುದು ಚೀನಿ ಹೊಸ ವರ್ಷದ ದಿನವನ್ನು ಆಧರಿಸಿ. ಆದರೆ ಶಾಸ್ತ್ರೀಯ ಗಣನೆಯ ಪ್ರಕಾರ ಇದು ಸರಿಯಾದ ಲೆಕ್ಕಾಚಾರವಲ್ಲವಂತೆ. ಸರಿಯಾದ ಲೆಕ್ಕಾಚಾರ ಬೇಕೆಂದರೆ ನಿಖರವಾಗಿ ಹುಟ್ಟಿದ ದಿನ ಮತ್ತು ಹುಟ್ಟಿದ ಸಮಯ ಎರಡನ್ನು ಸೇರಿಸಿ ಲೆಕ್ಕಿಸಬೇಕೆಂದು ಇವರ ಸಿದ್ದಾಂತ. ಅಲ್ಲದೆ ಈ ಲೆಕ್ಕಾಚಾರದ ಗಣನೆಗೆ ಚೀನಿ ಹೊಸವರ್ಷದ ಆರಂಭ ದಿನವನ್ನು ಮೊದಲ ದಿನವಾಗಿ ಪರಿಗಣಿಸಬಾರದಂತೆ. ಬದಲಿಗೆ ವಸಂತ ಕಾಲದ ಆರಂಭ ದಿನ (ಚೀನಿ ಲೆಕ್ಕದಲ್ಲಿ ಹುಲಿ ತಿಂಗಳು) ಆಧಾರವಾಗಬೇಕಂತೆ. ಸ್ಥೂಲವಾಗಿ ಹೇಳುವುದಾದರೆ ಈ ಹುಲಿ ತಿಂಗಳ ಮೊದಲಿನ ದಿನಕ್ಕು ಮೊದಲೆ ಹುಟ್ಟಿದ್ದರೆ ಅವರ ಪ್ರಾಣಿ ರಾಶಿ ಕಳೆದ ವರ್ಷದ ಪ್ರಾಣಿಯಾಗಿರುವ ಸಾಧ್ಯತೆಯೆ ಹೆಚ್ಚು! ಚೀನಿ ಹೊಸವರ್ಷದ ಪ್ರಕಾರ ನೋಡಿಕೊಂಡು ಎಷ್ಟೊ ಜನ ತಪ್ಪುತಪ್ಪಾಗಿ ತಮ್ಮ ಪಶುರೂಪದ ಲೆಕ್ಕಾಚಾರ ಹಾಕಿಕೊಂಡಿದ್ದರೂ ಪಾಪಾ, ಅವರಿಗೆ ಗೊತ್ತಿರುವುದಿಲ್ಲ 🙂

ನಿಖರವಾಗಿ ದಿನ ಗಂಟೆಯನ್ನು ನೋಡುವುದರಿಂದ ಬಹುಶಃ ಇದೆ ಸರಿಯಾದ ಕ್ರಮವೆಂದು ನನಗೂ ಅನಿಸಿತು. ಸ್ವಲ್ಪ ಕುತೂಹಲಕ್ಕಾಗಿ ನನ್ನ ವಿಷಯದಲ್ಲೂ ಈ ರೀತಿ ಏರುಪೇರಾಗಿದೆಯೆ ನೋಡೋಣವೆಂದು ಆ ವೆಬ್ಸೈಟಿನಲ್ಲಿ ಹೊಕ್ಕು ಪರಿಶೀಲಿಸಿದೆ – ಭಗವಂತ! ಅದುವರೆಗೆ ನಾನು ಅಂದುಕೊಂಡಿದ್ದ ಪ್ರಾಣಿ ತಪ್ಪೆಂದು, ಅದರ ಹಿಂದಿನ ವರ್ಷದ ಪ್ರಾಣಿಯೆ ನನ್ನ ಪ್ರತಿನಿಧಿ ಎಂದು ತೋರಿಸಿಬಿಡುವುದೆ?! ಅಲ್ಲಿಗೆ ಪ್ರತಿ ವರ್ಷ ರಾಶಿ ಫಲಿತ ಓದುವಾಗ ತಪ್ಪುತಪ್ಪಾಗಿ ನೋಡುತ್ತಿದ್ದೆ ಎಂದು ಅನುಭವಕ್ಕೆ ಬಂತು.

ನಿಮಗೂ ನಿಮ್ಮ ಜಾತಕ ರಾಶಿಯ ಪ್ರಾಣಿ ಯಾವುದಿರಬಹುದು (ಚೀನಿ ಲೆಕ್ಕಾಚಾರದ ಪ್ರಕಾರ) ಎಂಬ ಆಸಕ್ತಿ ಇದ್ದರೆ ನಿಮ್ಮ ಹುಟ್ಟು ಹಬ್ಬದ ದಿನ ಮತ್ತು ವೇಳೆಯನ್ನು ಈ ಕೆಳಗಿನ ಸೈಟಿನಲ್ಲಿ ಹಾಕಿ ನೋಡಿ. ನಿಮ್ಮ ಸಂಕ್ಷಿಪ್ತ ಜಾತಕದ ಪಟ್ಟಿ ತಕ್ಷಣವೆ ಹೊರಬೀಳುತ್ತದೆ. ಅಲ್ಲೆ ಸ್ವಲ್ಪ ಕೊಂಡಿಯನ್ನು ಗಿಂಡಿ ಅಡ್ದಾಡಿದರೆ ಮತ್ತೊಂದು ಪುಟದಲ್ಲಿ ಜೀವಿತ ಕಾಲ ಪೂರ್ತಿಯ ಸಾರಾಂಶವನ್ನು ನಕ್ಷೆಯ ರೂಪದಲ್ಲಿ ತೋರಿಸಿಬಿಡುತ್ತದೆ – ನಿಮ್ಮ ಜೀವಮಾನದ ಶ್ರೇಷ್ಠ ಇಪ್ಪತ್ತು ವರ್ಷಗಳನ್ನು ಎತ್ತಿ ತೋರಿಸುವುದರ ಜತೆಗೆ. ಬೇಕಿದ್ದರೆ ಈ ಕೊಂಡಿಗಳನ್ನು ಜಾಲಾಡಿಸಿ ನೋಡಿ! ಅಂದ ಹಾಗೆ ಸರಿಯದ ಟೈಮ್ ಜೋನ್ ಆಯ್ದುಕೊಳ್ಳುವುದನ್ನು ಮರೆಯಬೇಡಿ.

ಈ ಸೈಟಿನ ಲಿಂಕಿನಲ್ಲಿ ನಿಮ್ಮ ಗುಂಪಿನ ಪ್ರಾಣಿಯ ಹೆಸರು ಮತ್ತು ಮೂಲಧಾತುವಿನ ವಿವರ ಸಿಗುತ್ತದೆ: http://www.chinesefortunecalendar.com/Astro/ChineseNewYearHoroscope.htm

ಈ ಸೈಟಿನ ಲಿಂಕಿನಲ್ಲಿ ಜೀವಮಾನದ ಏಳು ಬೀಳಿನ ನಕ್ಷೆಯನ್ನು ಕಾಣಬಹುದು. ಮೊದಲ ಪುಟ ಬಂದಾಗ ಮತ್ತೊಂದು ಲಿಂಕು ಕ್ಲಿಕ್ಕು ಮಾಡಿದರಷ್ಟೆ ಈ ನಕ್ಷೇ ಕಾಣುವುದು – “ಚೈನೀಸ್ ಅಸ್ಟ್ರಾಲಜಿ ಆಂಡ್ ಹೋರೋಸ್ಕೋಪ್ ಲೈಫ್ ರೈಸ್ ಆಂಡ್ ಫಾಲ್ ಚಾರ್ಟ್” ಎಂಬಲ್ಲಿ ಗಿಂಡಿ. http://www.chinesefortunecalendar.com/chineseastrology.htm

ಅಂದ ಹಾಗೆ ಈ ಹನ್ನೆರಡು ಪ್ರಾಣಿಗಳ ಹೆಸರೆ ಏಕೆ ಆಯ್ಕೆಯಾಯಿತು ಎಂಬುದಕ್ಕೆ ಒಂದೆರಡು ದಂತ ಕಥೆಯೆ ಇದೆ. ಅದನ್ನು ಕಥೆಯ ರೂಪದಲ್ಲಿ ಹೇಳುವ ಬದಲು ಒಂದು ಧೀರ್ಘ ಹಾಗೂ ಸರಳ ಪದ್ಯ ರೂಪದಲ್ಲಿ ಕೊಟ್ಟಿದ್ದೇನೆ – ಮಕ್ಕಳು ಕಥೆಯನ್ನು ಅರ್ಥೈಸಿಕೊಳ್ಳಲು ಸುಲಭವಾಗುವಂತೆ.

ಚೀನಿ ದಂತಕಥೆ :
____________________

ತಿಳಿದುಕೊಳ್ಳಬೇಕೆ ಚೀನಿ ರಹಸ್ಯ
ಭವಿಷ್ಯದ ರಾಶಿ ಹನ್ನೆರಡರ ಪ್ರಾಸ
ಪ್ರತಿವರ್ಷಕ್ಕೊಂದು ಪ್ರಾಣಿಯ ಲೆಕ್ಕ
ಐದು ಸುತ್ತಿನ ಪ್ರಾಸ ಅರವತ್ತು ವರ್ಷ ||

ಭುವಿಸ್ವರ್ಗಾಧಿಪತಿ ದೊರೆ ಜೇಡ್ ಆಹ್ವಾನ
ಪ್ರಾಣಿಗಳೆಲ್ಲಕು ಪಂಥ ನೀಡಿದಾ ಜಾಣ
ಮೊದಲು ಬಂದವಗೆ ಆ ವರ್ಷದ ಹೆಸರು
ಸಾಲು ಹನ್ನೆರಡು ಗೆಲಬಹುದು ಎಲ್ಲರೂ ||

ಪ್ರಾಣಿಗಳಾಗುತ ಸರ್ವಸಿದ್ದತೆ ಔತಣಕೆ
ಸುಲಭವಲ್ಲ ನದಿ ದಾಟೆ ಅರಮನೆಗೆ
ಆದರು ಹೊರಟವು ವರ್ಷವ ಹಡೆಯಲು
ನಾನು ತಾನೆಂದು ತಿಕ್ಕುತ ಹೆಗಲು ||

ಮುಂಚೂಣಿಯಲಿತ್ತು ಬಡಪಾಯಿ ಎತ್ತು
ಸಾಧು ಹಸು ಕಷ್ಟ ಸಹಿಷ್ಣುತೆ ಹೊತ್ತು
ಕಿಲಾಡಿ ಇಲಿ ಮರಿ ಬೆಕ್ಕಿನ ಜತೆ ಸೇರಿ
ಹೊರಟರೆ ಪಾಪ, ನದಿ ನೀರೆ ಕಿರಿಕಿರಿ ||

ಬಸವ ಬಲ್ಲ ಈಜಾಡುವ ಪರಿ ಶಕ್ತಿ ಸ್ಥೈರ್ಯ
ಇಲಿ ಬೆಕ್ಕು ಕೇಳುತೆ ಮಾಡೆಯಾ ಸಹಾಯ ?
ಕನಿಕರಿಸೆ ಎತ್ತಿನ ಬೆನ್ನು ಮಾರ್ಜಾಲ ಮೂಷಕ
ನದಿಗುಂಟ ಸಾಗಿದ್ದರು, ಕಚ್ಚಾಡುತ ಹುಳುಕ ||

ಇಕ್ಕಟ್ಟಲೆ ಕೂತರು ಮೂಷಕನದೆ ಕಾಟ
ತಡೆಯಲಾಗದೆ ಮಾರ್ಜಾಲ ಗದರುತ
ತುಂಟ ಇಲಿಯೇನು ಕಮ್ಮಿ ಘಾಟಿಯೆ?
ಬೆಕ್ಕ ನೀರಿಗೆ ತಳ್ಳಿ ತಣ್ಣ ಕೂತ ಸರಿಯೆ ||

ತಪ್ಪಿ ಹೋಯ್ತು ಹೀಗೆ ಬೆಕ್ಕಿಗೊಂದು ಸ್ಥಾನ
ಅದಕೆಂದೆ ಮೂಷಕನ ಅಟ್ಟಾಡಿಸುವ ಕ್ಯಾಣ
ಕೇಡಿ ದಂಶಕ ಚತುರ ಎತ್ತ ಕಿವಿಗೆ ಊದಿ
ದಡ ಕಾಣುತೆ ಜಿಗಿದ ಮೊದಲರಮನೆ ಹಾದಿ ||

ಹೀಗಾಯ್ತು ಮೊದಲ ವರ್ಷ ಇಲಿಯಾ ಪಾಲು
ಸುಸ್ತಾದ ಬಸವನಿಗೆ ಸಿಕ್ಕಿತು ಎರಡನೆ ಸಾಲು
ಕೇಳಿತಾಗ ಘರ್ಜನೆ ಬಂದ ಮೂರನೆಯ ವೀರ
ಮೂರನೆ ವರ್ಷದ ದೊರೆ ಹುಲಿರಾಯ ವ್ಯಾಘ್ರ ||

ಜೇಡ್ ದೊರೆಗೆ ಅಚ್ಚರಿ ಹುಲಿ ಏನಾಯ್ತು ದಾರಿ
ಯಾಕಯ್ಯ ಶೂರ ತಡವಾಯ್ತು ನಿನ್ನ ಸವಾರಿ ?
ಬಿಗುಮಾನ ಬಿಡದ ಹುಲಿರಾಯ ಗೊಣಗುತ್ತ
ನದಿ ನೀರ ಪ್ರವಾಹ ಈಜಿದ್ದೆ ಸಾಹಸ ಗೊತ್ತ ! ||

ಅಷ್ಟರಲಿ ಟಣ್ಣನೆ ಬಂತು ಜಿಗಿದು ನಾಲ್ಕನೆ ಸ್ಥಾನ
ನದಿ ಕಲ್ಲಿಂದ ಕಲ್ಲಿಗೆ ಕುಪ್ಪಳಿಸಿ ಬಿಳಿ ಮೊಲದಣ್ಣ
ನದಿಗೆ ಬಿದ್ದರು ನಡುವಲಿ ಹಿಡಿದ ಮರ ಕೊರಡು
ತಲುಪಿಸಿತು ದಡವನು ಸುರಕ್ಷತೆಯಲಿ ಜಾಡು ||

ಪಂಚಮ ಸ್ಥಾನದೆ ಬಂದವ ಬಲಶಾಲಿ ಡ್ರ್ಯಾಗನ್ನು
ಅಚ್ಚರಿ ಕುತೂಹಲ ದೊರೆಗೆ, ಏನಾಯ್ತು ಕೇಳಿದನು
ಭೂವಾಸಿಗಳಿಗೆ ಮಳೆ ಸುರಿಸಿ ಬರುವಾ ಅವಸರಕೆ
ಮುಳುಗೇಳುತಿದ್ದ ಮೊಲ ಕೊರಡ ಊದಿದೆ ದಡಕೆ ||

ಮೆಚ್ಚಿದ ದೊರೆ ತ್ಯಾಗಕೆ, ಮೊದಲ ಸ್ಥಾನ ಬಲಿದಾನ
ಚಪ್ಪಾಳೆ ತಟ್ಟುತ ಹಾರ ಹಾಕುತ್ತಿರೆ ಖುರಪುಟ ಗಾನ
ಕೆನೆದು ನೆಗೆದು ಬಂದಾ ಕುದುರೆ ಗೊರಸಲಿ ಹಾವು
ಬೆಚ್ಚಿದಶ್ವ ತುಸು ಹಿಂಜರಿಯೆ ಸರ್ಪಕೆ ಆರನೆ ವರ್ಷವು ||

ಏಳಕಾಗಿ ತೃಪ್ತ ಹಯ, ಮೋಸ ವಂಚನೆ ಜಗಮಾಯ
ಮೇಕೆ ಮಂಗ ಹುಂಜ ದಡ ಸೇರಿಸೆ ಪರಸ್ಪರ ಸಹಾಯ
ತೆಪ್ಪ ಹುಡುಕಿದ ಕೋಳಿ, ಕುರಿ, ಕೋತಿ ಜತೆ ಪಯಣ
ತಳ್ಳಾಡಿ ಬಳ್ಳಿ ಬಿಳಲು ದೂಡಿ ಕೆಳೆ ಜಲ ಸಹಜೀವನ ||

ಆಡಿಗೆ ಎಂಟು ಮಂಗನಿಗೊಂಭತ್ತು ಕುಕ್ಕುಟವಾಗಿ ಹತ್ತು
ಬೌಬೌ ಬೊಗಳುತ ಬಂತು ಶ್ವಾನ ಈಜು ರಾಜನ ಗತ್ತು
ಜಲಕ್ರೀಡೆಯಾಡುತ ಮೈ ಮರೆತ ವಿಷಯ ಮುಚ್ಚಿಡುತ
ನೆಪವಿತ್ತ ಮೊದಲೆ ತಲುಪಿದೆ ಮಜ್ಜನದೆ ಮರೆತೋಯ್ತ ||

ಹನ್ನೊಂದಾಯಿತು ಲೆಕ್ಕ ಯಾಕೊ ಬರಲಿಲ್ಲವೆ ಯಾರು
ಪಂಥ ಮುಗಿವ ಹಂತದೆ ಕೊನೆಗಳಿಗೆಯಲಿ ಗುಟುರು
ಹೊಟ್ಟೆಬಿರಿಯ ಹಬ್ಬದೂಟ ನಿದ್ದೆಗೆ ಜಾರಿ ವರಹ ಭೂಪ
ಹಂದಿಗಾಯ್ತು ಹನ್ನೆರಡನೆ ವರ್ಷ, ರಾಶಿ ಚಕ್ರ ಸಮಾಪ್ತ ||

ಒದ್ದೆಮುದ್ದೆ ಮಾರ್ಜಾಲ ಪೆದ್ದೆ, ಹದಿಮೂರಾಗಿ ಆಗಮನ
ಮುಚ್ಚಿದ ಬಾಗಿಲು ಮೋಸಕೆ ತಪ್ಪಿಹೋಗಿತ್ತು ರಾಶಿ ಸ್ಥಾನ
ರೊಚ್ಚೆದ್ದು ಬೆನ್ನು ಹತ್ತಿದ ಮೂಷಕನ ಚೆಂಡಾಡುವ ಪರಿ
ಇಂದಿಗು ನಡೆದಿದೆ ಅಟ್ಟಾಡಿಸೊ ಬೆಕ್ಕಿಗೆ ಇಲಿಯೆ ವೈರಿ ||

ಮತ್ತೊಂದು ಕಥನ ಬುದ್ಧ ಸ್ವರ್ಗಕೆ ಹೊರಟ ಸುದಿನ
ಬೀಳ್ಕೊಡಲು ಕರೆದ ಪ್ರಾಣಿಗಳಾ ಜತೆ ಸಮ್ಮೇಳನ
ಬಂದ ಹನ್ನೆರಡಕು ಹರಸಿ ಕೊಟ್ಟ ರಾಶಿಚಕ್ರದೆ ಸ್ಥಾನ
ಹೀಗಾಗಿ ಪ್ರತಿ ವರ್ಷಕೊಂದು ಪಶುವಾಯ್ತು ಕಾರಣ ||

ಆಯಾ ಪ್ರಾಣಿಯ ವರ್ಷದೆ ಹುಟ್ಟಿದ ಮನುಜ ನಡತೆ
ಅದದೆ ಪ್ರಾಣಿಯ ರೀತಿ, ಭವಿತವಿಹುದಂತೆ ಅದರಂತೆ
ವರ್ಷದ ಜತೆಗೆ ಮಾಸ , ದಿನದ ಪ್ರಾಣಿಯ ಲೆಕ್ಕ ಗಣಿಸಿ
ಬರೆಯುವರಂತೆ ರಾಶಿ ಫಲ ಇಡಿ ಜೀವನ ಪರಿಗಣಿಸಿ ||

ನಮ್ಮ ಭಾರತೀಯ ಜೋತಿಷ್ಯಾಸ್ತ್ರದ ಪರಿಚಯವಿರುವವರಿಗೆ ತುಲನಾತ್ಮಕವಾಗಿ ಹೋಲಿಸಿ ನೋಡಲು ಈ ಲೇಖನದಲ್ಲಿ ನೀಡಿದ ಮಾಹಿತಿ ಉಪಯುಕ್ತವಾದೀತೆಂದು ಭಾವಿಸುತ್ತೇನೆ. ಅಂತೆಯೆ ಸಾಂಸ್ಖೃತಿಕ ಸಾಮ್ಯತೆ, ಭಿನ್ನತೆಗಳ ಮೇಲೂ ತುಸು ಬೆಳಕು ಚೆಲ್ಲಲು ಸಹಕಾರಿಯಾದೀತೆಂದು ಆಶಿಸುತ್ತೇನೆ. ಯಾರ ಪದ್ದತಿಯಾದರೂ ಸರಿ, ಈ ಮರಗುದುರೆಯ ವರ್ಷ ನಮಗೆಲ್ಲರಿಗು ಸಿರಿಸಂಪದಗಳ ಸೌಭಾಗ್ಯವೊದಗಿಸುತ್ತ ಜಗತ್ತಿನ ಶಾಂತಿ, ಸಹಕಾರಗಳಿಗೆ ಪ್ರೇರಕವಾಗಲೆಂದು ನಿರೀಕ್ಷಿಸೋಣ.

ಅಡಿ ಟಿಪ್ಪಣಿ: ಈ ಲೇಖನದಲ್ಲಿ ಬಳಸಿದ ಎಲ್ಲ ಮಾಹಿತಿ ಮತ್ತು ಚಿತ್ರಗಳನ್ನು ಬಹುತೇಕ ಈ ಮೇಲಿನ ಸೈಟಿನಿಂದಲೆ ಪರಿಗ್ರಹಿಸಲಾಗಿದೆ.

ಮಿಕ್ಕುಳಿದ ಅಂಶಗಳನ್ನು ವಿಕಿಯಿಂದ ಆಯ್ದುಕೊಳ್ಳಲಾಗಿದೆ. (ಮಿಕ್ಕುಳಿದ ಚಿತ್ರಕೃಪೆ : ಅಂತರ್ಜಾಲದಿಂದ)

ವಿಕಿಯ ಮಾಹಿತಿಗೆ ಈ ಕೆಳಗಿನ ಕೊಂಡಿಯನ್ನು ಗಿಂಡಿ ನೋಡಿ: http://en.wikipedia.org/wiki/Chinese_zodiac

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s