00160. ಕಾವ್ಯನಮನ – ಜಿ.ಎಸ್. ಶಿವರುದ್ರಪ್ಪ ನೆನಪಲಿ

00160. ಕಾವ್ಯನಮನ – ಜಿ.ಎಸ್. ಶಿವರುದ್ರಪ್ಪ ನೆನಪಲಿ

ಇತ್ತೀಚೆಗೆ ತಾನೆ ವಿಧಿವಶರಾಗಿ (23.ಡಿಸೆಂಬರ.2013) ನಮ್ಮನ್ನೆಲ್ಲಾ ಅಗಲಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ವಿದಾಯದ ನೆನಪು ಮಾಸುವ ಮುನ್ನವೆ ಅವರ ಹುಟ್ಟಿದ ದಿನ ಬರುತ್ತಿದೆ – ಮತ್ತೆ ನೆನಪಿನ ಹಣತೆಗೆ ಎಣ್ಣೆ ಬತ್ತಿಯಿಟ್ಟು ನಮನದ ಕಿರುಜ್ಯೋತಿಯನ್ನು ಬೆಳಗಿಸುವ ಸಲುವಾಗಿಯೇನೊ ಎಂಬಂತೆ. ನಾಳೆ ಅಂದರೆ ಏಳನೆ ಫೆಬ್ರವರಿಯಂದು ಈ ಎದೆ ತುಂಬಿ ಹಾಡುತ್ತಲೆ ಮನೆ ಮನಗಳಲ್ಲಿ ಹಣತೆ ಹಚ್ಚಿದ ಈ ಕವಿ ಮಹೋದಯರ ಜನ್ಮದಿನ. ಅವರು ನಮ್ಮನಗಲಿದ ಹೊತ್ತಿನಲ್ಲಿ ಅವರ ಕುರಿತ ಕೆಲವು ಲೇಖನಗಳು ಸಂಪದದಲ್ಲೂ ಪ್ರಕಟವಾಗಿದ್ದವು. ಹೆಚ್ಚುಕಡಿಮೆ ಒಂದೂವರೆ ತಿಂಗಳ ನಂತರ ಅವರ ಜನ್ಮದಿನ ಆಗಮಿಸಿರುವುದರಿಂದ ಅವರನ್ನು ಮತ್ತೆ ನೆನೆಯುವ ಪುಣ್ಯಕಾರ್ಯಕ್ಕೆ ಮತ್ತೊಂದು ಅವಕಾಶ.

ಕವಿಗಳು ಸಾಮಾನ್ಯವಾಗಿ ಕಾವ್ಯರಸಿಕರ , ಜನಮಾನಸರ ಮನದಲ್ಲಿ ಹೆಚ್ಚಾಗಿ ಜೀವಂತವಿರುವುದು ಅವರ ಸ್ವಂತ ಹೆಸರಿನಿಂದಲ್ಲ – ಬದಲಿಗೆ ಅವರ ಸದಾ ಗುನುಗುಟ್ಟಿಸುವ ಕಾವ್ಯ ಗಾಯನಗಳಿಂದ. ಎಷ್ಟೋಬಾರಿ ಕವಿ ಯಾರೆಂದೂ ತಿಳಿಯದಿದ್ದರೂ ಹಾಡನ್ನು ಮೆಲುಕು ಹಾಕುವವರದೆಷ್ಟು ಮಂದಿಯೊ. ಹೀಗಾಗಿ ಅವರ ಮಹಾನ್ ಚೇತನಕ್ಕೆ ನಮಿಸಲು ಸಹ ಕವನ ಅಥವ ಗಾಯನ ರೂಪವೆ ಸೂಕ್ತ ಮಾರ್ಗವೆನಿಸುತ್ತದೆ. ಅವರ ಕುರಿತಾದ ವಿವರಣೆಗಳ , ಸಾಧನೆಗಳ ನೆನಪು ಈಗಾಗಲೆ ಸಾಕಷ್ಟು ಮಾಧ್ಯಮಗಳಲ್ಲಿ ಅನುರಣಿತಗೊಂಡಿದೆ. ಅದರ ಬದಲಿಗೆ ಅವರು ದಿವಂಗತರಾದ ಹೊತ್ತಿನಲ್ಲಿ ನಮನದ ಕುರುಹಾಗಿ ಹೆಣೆದಿದ್ದ ಪದ್ಯವೊಂದನ್ನು ಇಲ್ಲಿ ಅವರ ನೆನಪಿನ ಅಂಗಳಕಿಟ್ಟ ಕಿರುಹಣತೆಯಾಗಿ ಅರ್ಪಿಸುತ್ತಿದ್ದೇನೆ ಈ ” ಕೆಲವರು ಹಚ್ಚಿದ ದೀಪ”ದ ಮೂಲಕ.

ಕೆಲವರು ಹಚ್ಚಿದ ದೀಪ
____________________

ಕೆಲವರು ಹಚ್ಚಿದ ದೀಪ
ಆರುವುದಿಲ್ಲ
ಯಾರೂ ಬತ್ತಿ ತೀಡುವುದಿಲ್ಲ
ಎಣ್ಣೆ ಬೇಡುವುದೂ ಇಲ್ಲ;
ಯಾವ ಮೂಲೆಯ ಮೂಲದ
ಅಖಂಡ ಜ್ಯೋತಿಯ
ಉರಿಯಿರದೆ ಬೆಳಗೊ ಪ್ರಕಾಶ
ಬಳಸಿ ತೀರುವ ಸರಕಲ್ಲ !

ಹಚ್ಚಿಟ್ಟ ಹಣತೆಯ ಹಾದಿ
ಅವರಿಗಲ್ಲ, ಅವರಿಗಿಲ್ಲ
ಬೆಳಕಡಿಯ ಕತ್ತಲಲಿ ಬೆತ್ತಲಾಗಿ
ಕರುಕಲು ಬತ್ತಿಯಾಗಿ
ಮೈ ಕೊಬ್ಬಲೆ ಎಣ್ಣೆಯಾಗಿ
ದಾರಿ ದೀಪವಾದ ಕುರುಹು,
ಬಿಟ್ಟುಕೊಡುವುದೆ ಇಲ್ಲ –
ವಿಷಾದ ಮುಚ್ಚಿಟ್ಟ ಮುಗ್ದ ನಗೆ.

ಹಲವರದದೆ ಸ್ವರೂಪ ಸದಾ
ಮತ್ತಲವರದಕಂಟಿದ ಶಾಪ
ಮತ್ತದೆ ಕತ್ತಲ ಬೆಳಕ ಚೆಲ್ಲಾಟ
ಮೈಗೆ ಮಲ್ಲಿಗೆ ಚೆಲ್ಲಿದ್ದು ಉಂಟು,
ಮೈಲಿಗೆ ಗುಂಡಿಗೆ ತಳ್ಳಿದ್ದು ಉಂಟು;
ಅದೆ ಸ್ನಿಗ್ಧ ಮಂದಸ್ಮಿತ
ಕೊಡವುತ ಮೇಲೇಳೊ ಅವಿರತ
ಅನವರತ ಭಗೀರಥ .

ಮೌನದಲೆ
ಸದ್ದಿರದ ಬಾಣ ಬಿರುಸು
ಸುಟ್ಟು ಕತ್ತಲ ಬೆಳಕನ್ಹೆತ್ತ ಮಹರ್ಷಿ-
ಆ ದಾರಿ ಮರೆಯಾಗುವುದಿಲ್ಲ;
ಪಥ ಹೆಜ್ಜೆ ನೆರಳ ಮರೆ ಸೇರುವುದಿಲ್ಲ,
ತಮದಾವರಣವ ನುಂಗುತಲೆ
ಅನಾವರಣವಾಗುತಲೆ ಇರುವ
– ನಿತ್ಯ ನಿರಂತರ ಸಂಘರ್ಷ.

———————————————-
ನಾಗೇಶ ಮೈಸೂರು, ೨೪. ಡಿಸೆಂಬರ. ೨೦೧೩
———————————————–

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s