00161. ಒಂದು ಸುತ್ತಿಗೂ ಬಾರದ…

ವಾಸ್ತವ, ಐನೂರರ ನೋಟು, ಗಾಂಧಿ ತಲೆ, ಲಘು ಹಾಸ್ಯ, ಒಂದು ಸುತ್ತಿಗೂ ಬಾರದ, ಐನೂರರ, ನೋಟು, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, Nagesha mysore, nagesha

00161. ಒಂದು ಸುತ್ತಿಗೂ ಬಾರದ…
____________________________

ಹಣದುಬ್ಬರದೊತ್ತಡಕೊ, ಪ್ರಗತಿಯ ಹೆಸರಲಿ ಹೆಚ್ಚುತ್ತಿರುವ ಜೀವನ ಮಟ್ಟದ ಸ್ತರ ಪರಿಣಾಮಕೊ – ಒಟ್ಟಾರೆ ಏನಾದರೂ ಕೊಳ್ಳಲು ಹೋದಲ್ಲಿ ಅರಿವಾಗುವ ಮೊದಲಂಶ – ಎಲ್ಲದಕ್ಕೂ ಸರಸರನೆ ಎಳೆದುಕೊಡುತ್ತಾ ಹೋದಂತೆ ಖಾಲಿಯಾಗುತ್ತ ಹೋಗುವ ಹಣದ ಲೆಕ್ಕ. ನೆಂಟರ ಮನೆಗೊಯ್ಯುವ ಹಣ್ಣು ಹಂಪಲದಿಂದಿಡಿಡು, ದೇವರಿಗೊಯ್ಯುವ ಹೂವ್ವಿನ ಖರೀದಿಯ ತನಕ ತುಟ್ಟಿಯಾದ ಬೆಲೆಯು ಖಾಲಿಯಾಗುತ್ತ ಹೋಗುವ ಐನೂರು ಸಾವಿರದ ನೋಟುಗಳ ಮೂಲಕ ವ್ಯಕ್ತವಾಗುತ್ತ ಹೋಗುತ್ತವೆ. ಈ ಎರಡು ಭಾಗದ ಕವನದಲ್ಲಿ ಮೊದಲ ಭಾಗದಲ್ಲಿ ಸಾಮಾನ್ಯ ದೈನಂದಿನ ಅಗತ್ಯಗಳ ಬೆಲೆಯ ಕುರಿತ ಕಾಳಜಿ ಇದ್ದರೆ, ಎರಡನೆ ಪದ್ಯದಲ್ಲಿ ತುಸು ದೈನಂದಿನವಲ್ಲವಾದರೂ ನಿಯಮಿತ ಕಾಲಾವಧಿಯಲ್ಲೊ, ಸಾಂಧರ್ಭಿಕವಾಗಿ ಹುಟ್ಟುವ ಅಗತ್ಯದಲ್ಲೊ ಕಾಣಬರುವ ಅಗತ್ಯಗಳ ಬೆಲೆಯೇರಿಕೆ ಹೊಡೆತವನ್ನು ಮಿಡಿಸುತ್ತದೆ (ಗ್ಯಾಸ್, ಚಂದಾದಾರರ ಕಾಟ ಇತ್ಯಾದಿ). ಒಟ್ಟಾರೆ ಗಾಂಧಿ ತಲೆಯನ್ಹೊತ್ತಿದ್ದರೂ ನಿಕೃಷ್ಟವಾಗುವ ಪಾಡು ಈ ಕಾವ್ಯದ ಅಂತರ್ಗತ ಭಾವ – ಈ ಕವನದ್ದು.

ಅಂದ ಹಾಗೆ ಇಲ್ಲಿ ಐನೂರೆಂಬುದು ಸಾಂಕೇತಿಕ ಮತ್ತು ಕಾಲಾವಲಂಬಿ ಪ್ರತಿಮೆ. ಒಮ್ಮೆ ಅದು ಹತ್ತೊ, ನೂರೊ ಆಗಿದ್ದಿರಬಹುದು; ಈಗ ಸಾವಿರವೂ ಆಗಿರಬಹುದು. ಮೌಲ್ಯ ಕಳೆದುಕೊಳ್ಳುವ ಹಣದ ಗುಣವಷ್ಟೆ ಇಲ್ಲಿ ಪ್ರಮುಖ, ಮುಖಬೆಲೆ ಗೌಣ. ಈ ಕವನದ ಲಘು ಹಿನ್ನಲೆ – ಪ್ರತಿ ಬಾರಿ ಊರಿಗೆ ಬಂದಾಗ ಕೊಳ್ಳುವ ವಸ್ತುಗಳಿಗೆ ತೆರುವ ಬೆಲೆ ಹಿಂದಿನ ಬಾರಿಗಿಂತ ಹೆಚ್ಚುತ್ತಿರುವ ವೇಗ ಉಂಟು ಮಾಡಿದ ದಿಗಿಲು ಪಡೆದ ಪದಗಳ ರೂಪವಿದು. ಜನ ಸಾಮಾನ್ಯರಿಗೆ ಇದು ಹೇಗೆ ನಿಭಾಯಿಸಲು ಸಾಧ್ಯ ಎಂಬ ಅಚ್ಚರಿಯೂ ಮಿಳಿತವಾದ ಸೋಜಿಗ.

ಒಂದು ಸುತ್ತಿಗೂ ಬಾರದ…
_______________________

ಒಂದು ಸುತ್ತಿಗೂ ಬಾರದ ಐನೂರರ ನೋಟು
ಖಾಲಿಯಾಗುವ ವೇಗವೆ ಮೀರಿಸಿತೆ ರಾಕೆಟ್ಟು
ಬೀಡಾ ತಂಬಾಕಿನ ಹಾಳು ಚಟ ತುಟ್ಟಿಯೇಟು
ಪ್ಯಾಕರ್ಧಕಟ್ಟೂ ಸಿಗದ ಬಾರಿ ಬೀಡಿ ಸಿಗರೇಟು ||

ಹಂಪಲು ಹಣ್ಣಿನ ತೆವಲು ಆರೋಗ್ಯದಾ ದಿಗಿಲು
ಕೆಜಿಯೆರಡು ಕೆಜಿಗೆ ಐನೂರೇ ಸಾಲದೆ ತೊದಲು
ನೆಂಟರಿಷ್ಟರ ಮನೆಗಪರೂಪದ ಭೇಟಿಯೆ ಸಿಹಿ
ಕೊಳ್ಳಲು ಕೈಯಿಟ್ಟರೆ ಐನೂರಾರು ಕಾರ್ಡ ಕಹಿ ||

ಜಡೆ ಮುಡಿಸೊ ಹೂವ್ವಿಂದ್ಹಿಡಿದು ದೇವರತನಕ
ಆರತಿ ಅರ್ಚನೆ ಪೂಜೆಗೂ ನೂರೆಂದರೆ ಶುನಕ
ಸೇವಾರ್ಥಗಳ ಲೆಕ್ಕ ಯಾರಿಗೆ ಬೇಕು ಹತ್ತಾರು
ಲೆಕ್ಕ ಪುಸ್ತಕ ತೆರೆದು ಬರೆಯೆ ಮೊದಲೈನೂರು ||

ಹೊರಗಿನೂಟ ತಿಂಡಿ ರೆಸ್ಟೋರೆಂಟಿನ ಒಳಗ್ಹಿಂಡಿ
ಸಾವಿರಗಳೇನು ಲೆಕ್ಕ ಸರತಿ ಕಾದರೂ ಮಂದಿ
ಎಲ್ಲೆಡೆ ಬೆಲೆಯೇರಿಕೆಯುಬ್ಬರ ದಿನಸಿ ಖೋತ
ತಿನ್ನುವನ್ನವೆ ಚಿನ್ನ ಎಷ್ಟಿದ್ದರೇನು ಐನೂರ ಖಾತ ||

ಶ್ರೀಸಾಮಾನ್ಯನ ಸಂಬಳಗಳೇರಿವೆಯೆ ಅರಿಯೆ
ಏರಿದ್ದರು ಇರಲಾರದೂ ಈ ಮಟ್ಟಕೆ ಸರಿಯೇ
ಒಟ್ಟಾರೆ ಸುತ್ತೊಂದಕು ಬರದ ಐನೂರರ ಕಷ್ಟ
ಗಾಂಧೀ ತಲೆ ಹೊತ್ತು ಕೂಡ ಆಗಬೇಕೆ ನಿಕೃಷ್ಟ ||

————————————————-
ನಾಗೇಶ ಮೈಸೂರು
————————————————–

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s