00162. ಕಥೆ: ಪರಿಭ್ರಮಣ..(01)

ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

(ಪೀಠಿಕೆ / ಹಿನ್ನಲೆ: ಒಂದು ವರ್ಷಕ್ಕಿಂತ ಹೆಚ್ಚು ಕಾಲ ಥಾಯ್ಲ್ಯಾಂಡಿನಲ್ಲಿದ್ದಾಗ ಅಲ್ಲಿ ಕಂಡ ಜನ ಜೀವನದ ತುಣುಕುಗಳನ್ನು ಕಥಾನಕವೊಂದರ ರೂಪದಲ್ಲಿ ದಾಖಲಿಸಬೇಕೆಂದು ಬಹಳ ದಿನಗಳಿಂದ ಅನಿಸುತಿತ್ತು. ಸರಿಯಾದ ಕಥಾ ಹಂದರ ಹೊಳೆಯದೆ ಅದಕ್ಕೆ ಸರಿಯಾದ ರೂಪು ಕೊಡಲು ಆಗಿರಲಿಲ್ಲ. ಇನ್ನು ಹೀಗೆ ಬಿಟ್ಟರೆ ಅದನ್ನು ದಾಖಲಿಸುವ ಉತ್ಸಾಹಕ್ಕೆ ಭಂಗ ಬಂದೀತೆನಿಸಿದಾಗ, ಆದದ್ದಾಗಲಿ ಎಂದು ಆರಂಭಿಸಿಬಿಟ್ಟೆ. ಇದನ್ನು ಸಣ್ಣಕಥೆಯೆಂದು ವರ್ಗಿಕರಿಸಬೇಕೊ, ನೀಳ್ಗತೆಯೆನ್ನಬೇಕೊ ನನಗೆ ಗೊಂದಲವಿದ್ದರೂ ಬ್ಯಾಂಕಾಕಿನಂತಹ ಮಹಾನಗರ ಜೀವನದ ಒಂದು ಪಲುಕಿನ ಪರಿಚಯವಾದೀತೆಂಬ ಆಶಯದೊಂದಿಗೆ ಸಂಪದದಲ್ಲಿ ಸೇರಿಸುತ್ತಿದ್ದೇನೆ. ಇದರಲ್ಲಿ ಕೆಲವು ಸ್ಥಳ, ದೃಶ್ಯ, ಹೆಸರುಗಳು ಅಲ್ಲಿ ನೈಜ್ಯವಾಗಿ ಕಂಡವುಗಳ ಪ್ರತ್ಯಕ್ಷ್ಯ ವರ್ಣನೆಯಾದರೆ ಕಥಾನಕದ ಮಿಕ್ಕ ಅಂಶಗಳೆಲ್ಲ ಕಲ್ಪನೆಯ ಮೂಸೆಯಿಂದ ಹೊರಹೊಮ್ಮಿದ್ದು. ಕಥೆಯೊಡನೆ ಅನುಭವ, ಗೊಂದಲ, ತಾಕಲಾಟಗಳ ವಿವಿಧ ಮಜಲುಗಳನ್ನು ಹತ್ತಿ ಇಳಿಯುವ ಕಥಾನಾಯಕನ ಚಿತ್ರಣಕ್ಕನುಗುಣವಾಗಿ, ಕಥೆಯನ್ನು ನಾಲ್ಕು ಪ್ರಮುಖ ಭಾಗಗಳಾಗಿ (ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…) ವಿಂಗಡಿಸಿದ್ದರೂ ಇವೆಲ್ಲವೂ ಪರಸ್ಪರಾವಲಂಬಿ ಸರಣಿ ಕೊಂಡಿಯಿಂದ ಬಂಧಿಸಲ್ಪಟ್ಟ “ಪರಿಭ್ರಮಣ” ಕಥಾನಕದ ಪೂರಕ ಅಂಗಗಳೆನ್ನಲು ಅಡ್ಡಿಯಿಲ್ಲ; ಭಾಗಗಳನ್ನೆಲ್ಲ ಬದಿಗೊತ್ತಿ, ಒಂದೇ ನೀಳ ಕಥಾನಕವೆಂದರೂ ಸರಿಯೆ. ಓದುಗರಿಗೆ ಸ್ವಲ್ಪ ಹತ್ತಿರವಾಗಿರಲೆಂದು, ಬ್ಯಾಂಕಾಕಿನಲ್ಲಿ ತಾತ್ಕಾಲಿಕವಾಗಿ ನೆಲೆಸಿದ ಭಾರತೀಯನೊಬ್ಬನ ಕಥೆಯ ಹಂದರವನ್ನು ಆರಿಸಿಕೊಂಡು, ಆ ಪಾತ್ರದ ಮೂಲಕ ಅಲ್ಲಿನ ಕಲೆ, ಆಚಾರ, ವಿಚಾರಗಳನ್ನು ಭಾರತೀಯ ದೃಷ್ಟಿಕೋನದಲ್ಲಿ ಹಿಡಿಯಲು ಯತ್ನಿಸಿದ್ದೇನೆ. ಕಥಾನಕ ಬೋರು ಹೊಡೆಸುವಂತಿದ್ದರೆ ಕ್ಷಮೆಯಿರಲಿ – ಒಂದೆ ಸಾರಿ ಬೋರು ಹೊಡೆಸದಿರಲು ಕಂತಿನಲ್ಲಿ ಹಾಕುತ್ತಿದ್ದೇನೆ 🙂 )

_______________________________________________________________________________

ಕಥೆ: ಪರಿಭ್ರಮಣ..(01)

ಭಾಗ 01. ಅವರೋಹಣ…
________________

ಬ್ಯಾಂಕಾಕಿನ ನಡು ಮಧ್ಯಾಹ್ನದ ಬಿಸಿಲಿಗೆ ಮುಖದ ಮೇಲಿಂದ ಜಾರಲ್ಹವಣಿಸುತ್ತಿದ್ದ ಬೆವರಿನ ಹನಿಗಳನ್ನು ಒರೆಸಲು, ಬಲದ ಕೈಯಲಿದ್ದ ಕಿರು ಬ್ರೀಫ್ಕೇಸನ್ನು ಎಡಗೈಗೆ ವರ್ಗಾಯಿಸಿ ಪ್ಯಾಂಟಿನ ಜೇಬಿನಿಂದ ಕರವಸ್ತ್ರ ತೆಗೆದ ಶ್ರೀನಾಥ. ಒಂದು ಸುತ್ತು ಒರೆಸುತ್ತಿದ್ದಂತೆ ಎಲ್ಲೊ ಅಡಗಿದ್ದ ಸೈನಿಕರಂತೆ ಪುಳುಪುಳನೆ ಬರಲ್ಹವಣಿಸುತ್ತಿದ್ದ ಹೊಸ ಬೆವರ ಧಾರೆಯನ್ನು ಮೂಲದಲೆ ತಡೆಗಟ್ಟಲು ಸಮೀಪದ ಅಂಗಡಿಯ ನೆರಳೊಂದರ ಪಕ್ಕ ನಿಂತು, ಬ್ರೀಫ್ ಕೇಸನ್ನು ಕೆಳಗಿರಿಸಿದ. ಕುತ್ತಿಗೆಯನ್ನು ಬಿಗಿಯುತ್ತಿದ್ದ ಟೈಯನ್ನು ತುಸುವೆ ಸಡಿಲಿಸಿ ಕರ್ಚೀಫನ್ನು ಕತ್ತಿನ ಹಿಂದಿನಿಂದ ಮುಂದಲೆಯತನಕ ಒತ್ತಿ ನೀಳ ನಿಟ್ಟುಸಿರೆಳೆದುಕೊಂಡ – ಬಿಸಿಲಿನ ನಡುವಲೂ ಅಂಗಡಿಯೊಳಗಿನ ಫ್ಯಾನಿಂದ ಬೀಸಿದ ಬಿಸಿ ಗಾಳಿಯ ಆಹ್ಲಾದವನ್ನು ಸವಿಯುತ್ತ.

ಅಂದು ಶನಿವಾರವಾದ್ದರಿಂದ ಸಿಲೋಮ್ ರಸ್ತೆಯಲ್ಲಿ ಅಷ್ಟಾಗಿ ಜನಸಂದಣಿಯಿರಲಿಲ್ಲ. ಎದುರು ಸಾಲಿನ ಪಾಟ್ಪೋಂಗ್ ರಸ್ತೆಗಳೂ ಸಹ ಇನ್ನು ಗಿಜಿಗುಟ್ಟಲೂ ಆರಂಭವಾಗಿರಲಿಲ್ಲ. ಇನ್ನೊಂದೆರಡು ಗಂಟೆಗಳಲ್ಲಿ ಈಗ ಖಾಲಿಯಿರುವ ಪಾಟ್ಪೋಂಗ್ ರಸ್ತೆಯೆನ್ನುವ ಗಲ್ಲಿಗಳೆಲ್ಲ, ಕಾಲಿಡಲಾಗುವ ಕಾಲುಹಾದಿಯನ್ನು ಬಿಟ್ಟು ಮಿಕ್ಕೆಲ್ಲಾಕಡೆ ಜಗಮಗವೆನುತ ತೆರೆದುಕೊಳ್ಳುವ ಸಂತೆ ಅಂಗಡಿಗಳಾಗಿಬಿಡುತ್ತವೆ – ಅದು ರಸ್ತೆಯೆನ್ನುವ ಗುರುತು ಸಿಗದಂತೆ. ಒಂದು ವೇಳೆ ಆ ಅಂಗಡಿಯ ಸಾಲು ಗುರುತಿಟ್ಟುಕೊಂಡು ಯಾರಾದರೂ ಬೆಳಗಿನ ಹೊತ್ತು ಆ ಜಾಗ ಹುಡುಕಿಕೊಂಡು ಬಂದರೆಂದರೆ ಅಷ್ಟೆ – ಇಡೀ ನಿರ್ಜನವಾದ ರಸ್ತೆ ಮಾತ್ರ ಏನೂ ಅರಿಯದ ಮುಗ್ದೆಯ ಹಾಗೆ ಮಲಗಿರುವುದನ್ನು ಕಂಡು, ತಾವು ಬಂದ ಜಾಗದ ಅಡ್ರೆಸ್ಸೆ ತಪ್ಪಿರಬೇಕೆಂದುಕೊಂಡು ಮರಳುವಂತೆ ಮಾಡಿಬಿಡುತ್ತವೆ. ಬೀದಿಯ ಹೆಸರಿನ ನೆನಪಿಟ್ಟುಕೊಂಡಿದ್ದರಷ್ಟೆ ಬಚಾವ್! ಕನಿಷ್ಟ ಹೆಸರಿನಿಂದ ಇದೇ ಜಾಗವೆಂದು ಊಹಿಸಬಹುದಷ್ಟೆ ವಿನಹಃ, ಖಡಾಖಂಡಿತವೆಂದು ಇದೆ ಜಾಗವೆಂದು ಹೇಳಲಾಗದು..

ಆ ಬಿಸಿಲಿನ ರಾಚುವ ಬೇಗೆಗೆ ಹಾಗೆ ಏನಾದರೂ ತಂಪಾಗಿ ಕುಡಿದರೆ ವಾಸಿಯೆನಿಸಿ ಪಕ್ಕದ ಪುಟ್ಟ ಕನ್ವೀನಿಯೆನ್ಸ್ ಸ್ಟೋರಿನತ್ತ ಹೆಜ್ಜೆಯಿಡಲು ಚಿಂತಿಸುತ್ತಿರುವಂತೆಯೆ ತಟ್ಟನೆ ಮುಖದ ಮುಂದೊಂದು 300 ಮಿಲಿಯ ಪ್ಲಾಸ್ಟಿಕ್ಕಿನ ಬಾಟಲಿಯ ದ್ರವ್ಯ ತೂಗಾಡಿ, ಮುಂದಿಡುತ್ತಿದ್ದ ಹೆಜ್ಜೆಯನ್ನು ಅಲ್ಲೆ ನಿಲ್ಲಿಸಿತು. ಆ ಹುಡುಗಿಯ ಕೈಲೊಂದು ಕಿತ್ತಲೆ ಹಣ್ಣಿನ ರಸ ತುಂಬಿದ ಪ್ಲಾಸ್ಟಿಕ್ಕಿನ ಬಾಟಲಿ; ಬಗಲಲ್ಲಿ ಪುಟ್ಟಿ ತುಂಬಿದ ಮತ್ತಷ್ಟು ಬಾಟಲುಗಳು ಐಸಿನಲ್ಲಿ ತೇಲಾಡುತ್ತಿವೆ – ಒಂದು ರೀತಿ ಮೊಬೈಲ್ ಫ್ರಿಡ್ಜಿನ ಹಾಗೆ. ಅಷ್ಟು ದಿನಗಳ ವಾಸದಲ್ಲಿ ಶ್ರೀನಾಥನ ಅಂತರಾತ್ಮದ ಅರಿವಿಗೆ ಬಂದ ಮೊದಲ ಅಂಶವೆಂದರೆ ಅವರ ನಗು; ಯಾರು ಎಲ್ಲೆ ಸಿಗಲಿ, ಪರಿಚಯವಿರಲಿ ಬಿಡಲಿ – ಮೊದಲು ವಿನಿಮಯವಾಗುವುದು ಮಾತ್ರ ನಗೆಯೆ. ಅದಕ್ಕೆ ಏನೊ ತಮ್ಮನ್ನು ತಾವೆ, ‘ಲ್ಯಾಂಡ್ ಅಫ್ ಸ್ಮೈಲ್ಸ್’ ಅಂತ ಕರೆದುಕೊಳ್ಳುವುದು! ನಗುತ್ತಿದ್ದ ಆ ವಕ್ರ ಹಲ್ಲಿನ ಹುಡುಗಿಯ ಬಾಯಿಂದ, ‘ಸಿಪ್ ಬಾತ್..ಸಿಪ್ ಬಾತ್’ ಎಂಬ ಎರಡು ಪದಗಳಷ್ಟೆ ಬರುತ್ತಿದ್ದುದು. ಅದಕ್ಕೂ ಮೀರಿ ಅವನಿಗೇನೂ ಅರ್ಥವಾಗದೆಂದು ಇಬ್ಬರಿಗೂ ಗೊತ್ತು. ‘ಸಿಪ್’ ಎಂದರೆ ‘ಥಾಯ್’ ಭಾಷೆಯಲ್ಲಿ ‘ಹತ್ತು’ ಎಂದರ್ಥ; ರೂಪಾಯಿಯ ಹಾಗೆ ಅವರಲ್ಲಿ ‘ಬಾತ್’ ವಿನಿಮಯದ ಕರೆನ್ಸಿ. ಶರಟಿನ ಜೇಬಿನಿಂದ ಹತ್ತರ ನಾಣ್ಯವೊಂದನ್ನು ತೆಗೆದಿತ್ತು, ತಣ್ಣನೆಯ ಬಾಟಲಿನ ಸುತ್ತ ಹಸ್ತದಲಿ ನೇವರಿಸಿ ಹೊರಗಂಟಿದ ನೀರಿನ ತಂಪನ್ನೆ ಅನುಭವಿಸುತ್ತಾ, ಮುಚ್ಚಳ ತೆಗೆದು ಆರೆಂಜು ಜ್ಯೂಸನ್ನು ಹೀರುತ್ತ ಎದುರಿನ ‘ಸಾಲಾ ಡೆಂಗ್’ ಸಿಟಿ ರೈಲ್ವೇ ಸ್ಟೇಷನ್ನನ್ನೆ ದಿಟ್ಟಿಸ ತೊಡಗಿದ.

ನಿಜ ಹೇಳಬೇಕೆಂದರೆ ಆ ಸಿಲೋಮ್ ರಸ್ತೆಯೆಂಬುದು ಒಂದು ರೀತಿಯ ವಿಚಿತ್ರ ವಿಶ್ವ. ಬ್ಯಾಂಕಾಕಿನ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಒಂದಾದ ಈ ರಾಜಬೀದಿ, ತನ್ನ ಒಡಲಲ್ಲೆ ಎಲ್ಲಾ ತರದ ವಿಪರ್ಯಾಸಗಳನ್ನು ಬಚ್ಚಿಟ್ಟುಕೊಂಡ ಕರ್ಮ ಭೂಮಿ. ಒಂದು ತರದಲ್ಲಿ, ಈ ಒಂದು ರಸ್ತೆಯನ್ನು ನೋಡಿ ಅರ್ಥ ಮಾಡಿಕೊಂಡರೆ ಅರ್ಧ ಬ್ಯಾಂಕಾಕನ್ನೆ ಅರಿತಂತೆ. ಹಾಗೆ ಅಲ್ಲೆ ತುಸು ಆಳಕ್ಕೂ ಇಳಿದಿರೆಂದರೆ ಥಾಯ್ಲ್ಯಾಂಡಿನ ಜನಗಳ ರೀತಿ, ನೀತಿ, ಆಚಾರ, ವಿಚಾರಗಳ ಪಕ್ಷಿನೋಟವೆ ಸಿಕ್ಕಿಹೋಗುತ್ತದೆ. ಒಂದೆಡೆ ವೈಭವದ ವಾಣಿಜ್ಯ ಜಗದ ಜತೆಗೆ ರೋಮ್ಯಾನ್ಸು ನಡೆಸುತ್ತಲೆ, ಮತ್ತೊಂದೆಡೆ ಅಲ್ಲಿನ ಕಪ್ಪು ಕರಾಳ ಮುಖದ ಮತ್ತೊಂದು ಮುಖವನ್ನು ಪರಿಚಯಿಸುವ ವೈಚಿತ್ರ ಬಹುಶಃ ಇನ್ನೆಲ್ಲು ಕಾಣಲು ಸಾಧ್ಯವಿಲ್ಲವೆಂದೆ ಕಾಣುತ್ತದೆ. ಇದು ಸಾಲದೆಂಬಂತೆ ಆ ಜನಮನದ ಮನೋಭಾವ, ಸ್ವಭಾವದ ನಾಡಿಯ ಮಿಡಿತವನ್ನೆ ಬಿಚ್ಚಿ ತೆರೆದಿಡುವ ಅಲ್ಲಿನ ಬೀದಿ-ವಾಣಿಜ್ಯದ ಸಮನಾಂತರ ಜಗವಂತೂ ಸೋಜಿಗದ ಮತ್ತೊಂದು ವಿಶ್ವರೂಪವೆಂದೆ ಹೇಳಬಹುದು.

ಸುಮಾರು ಆರು ತಿಂಗಳಿಂದ ಪ್ರಾಜೆಕ್ಟಿನ ಕೆಲಸಕ್ಕಾಗಿ ಅಲ್ಲಿರುವ ಶ್ರೀನಾಥ ಸದ್ಯಕ್ಕೆ ಒಬ್ಬಂಟಿ. ಇನ್ನು ಸುಮಾರು ಒಂದು ವರ್ಷದ ಪ್ರಾಜೆಕ್ಟಿನ ಜಂಜಾಟವಿದ್ದರು ಆರು ತಿಂಗಳು ಹೇಗೆ ಕಳೆಯಿತೆಂದೆ ತಿಳಿಯಲಿಲ್ಲ, ಅದೂ ಒಂಟಿಯಾಗಿ. ಹಾಗೆಂದು ಅವನೇನು ಬ್ರಹ್ಮಚಾರಿಯಲ್ಲ – ಕೈ ಹಿಡಿದವಳು ಹೋದಲ್ಲೆಲ್ಲಾ ಸದಾ ಜತೆಗೆ ಸುತ್ತುವ ಭಾಗ್ಯವೆ. ಆದರೆ ಈ ಬಾರಿ ಹೆರಿಗೆಗೆಂದು ತವರಿನ ಹಾದಿ ಹಿಡಿದು ಭಾರತದಲ್ಲಿದ್ದಾಳೆ. ಇನ್ನೂ ಆರು ತಿಂಗಳು ಬರುವಂತಿಲ್ಲ; ಇವನೂ ಹೋಗಲಾಗದಷ್ಟು ಕೆಲಸದ ಒತ್ತಡ. ಹೀಗಾಗಿ ಆಫೀಸಿಗೆ ಹತ್ತದಿನೈದು ನಿಮಿಷದ ಕಾಲ್ನಡಿಗೆಯ ದೂರದಲ್ಲೆ ಕೊಟ್ಟಿರುವ ದೊಡ್ಡ ಸರ್ವೀಸು ಅಪಾರ್ಟುಮೆಂಟಿನಲ್ಲಿ ಸದ್ಯಕ್ಕೆ ಇವನೊಬ್ಬನದೆ ಭೂತ. ಟ್ರಾಫಿಕ್ಕಿನ ಜಂಜಾಟವೆ ಬೇಡವೆಂದು ಹತ್ತಿರದಲ್ಲೆ ಮನೆಯನ್ನು ಕೊಡಲು ಬೇಡಿಕೆಯಿಟ್ಟಿದ್ದ ಕಂಪನಿಗೆ – ಅದರಲ್ಲು ಬ್ಯಾಂಕಾಕಿನ ಟ್ರಾಫಿಕ್ಕಿನ ಪರಿಗಣನೆಯಲ್ಲಿ. ದಿನವೂ ತಡವಾಗಿ ಹೊರಡುವುದಲ್ಲದೆ, ಶನಿವಾರ, ಭಾನುವಾರಗಳಂದೂ ಕೆಲಸಕ್ಕೆ ಬರಬೇಕಾದ ಅನಿವಾರ್ಯತೆಯಲ್ಲಿ, ತಂಗುವ ಜಾಗ ಬಹಳ ಮುಖ್ಯವಾದದ್ದಾಗಿತ್ತು. ಅದೃಷ್ಟಕ್ಕೆ, ಅವರೂ ಅದಕ್ಕೊಪ್ಪಿ ಇಲ್ಲೆ ಸರ್ವೀಸ್ ಅಪಾರ್ಟ್ಮೇಂಟಿನ ಸೌಕರ್ಯ ಮಾಡಿಕೊಟ್ಟಿದ್ದರು. ಅದರಿಂದ ಒಂದು ದೊಡ್ಡ ಹೊರೆಯೆ ಇಳಿದಂತಾಗಿತ್ತು. ಹೀಗಾಗಿಯೆ, ಈ ಶನಿವಾರದ ದಿನವೂ ಸರಾಗವಾಗಿ ಆಫೀಸಿಗೆ ಬಂದು, ಎರಡು ಮೂರು ಗಂಟೆಗಳಲ್ಲೆ ಕೆಲಸ ಮುಗಿಸಿ ವಾಪಸ್ಸು ಹೊರಟಿದ್ದ, ಪ್ರಖರ ಬಿಸಿಲಿನ ನಡುವೆಯೆ. ಆ ಉರಿಗೆ ಆರೆಂಜು ಜ್ಯೂಸು ಕುಡಿಯುತ್ತಲೆ ಮನ ಚಿಂತಿಸುತ್ತಿತ್ತು – ಈ ಬಿಸಿಲು ನೋಡಿದರೆ ‘ಇಂದು ಸಂಜೆಯೊಳಗಾಗಿ ಮಳೆಯಾಗುವುದು ಗ್ಯಾರಂಟಿ’ ಎಂದು.

ಸಿಲೋಮ್ ಸಾಲಾಡಾಂಗಿನಲ್ಲಿರುವ ಪ್ರಮುಖ ರಸ್ತೆ. ಸಾಲಾಡಾಂಗಿನ ಸಿಟಿ ಟ್ರೈನ್ ಸ್ಟೇಷನ್ನು ಇರುವುದು ಕೂಡಾ ಈ ರಸ್ತೆಯ ಮೇಲೆಯೆ. ಈ ಉದ್ದದ ರಸ್ತೆಯ ನೇರಕ್ಕೆ ನಡೆಯುತ್ತಾ ಹೋದರೆ ಸುಮಾರು ಅರ್ಧ, ಮುಕ್ಕಾಲು ಗಂಟೆಯ ಹಾದಿಗೆ ಒಂದು ಭಾರತೀಯ ದೇವಾಲಯ ಸಿಗುತ್ತದೆ – ಮಾರಿಯದು. ಅದರ ಸುತ್ತಮುತ್ತಲಲ್ಲಿ ಕೆಲವು ಪುಟ್ಟ ಭಾರತೀಯ ರೆಸ್ಟೊರೆಂಟುಗಳು ಇದ್ದರು ಒಂದೆ ಒಂದು ದಕ್ಷಿಣ ಭಾರತದ್ದು – ಮದ್ರಾಸ್ ಕಿಚೆನ್ ಅಂತ. ಅಲ್ಲಿ ಮಾತ್ರವೆ ಚೆನ್ನಾದ ಶಾಖಾಹಾರಿ ಊಟ ಸಿಗುವುದು. ಊಟ ಯಾವುದಿದ್ದರೂ ನಡೆದೀತು ಎನ್ನುವವರಿಗೆ ನಿಶ್ಚಿಂತೆ – ಸಾಲಾಡಾಂಗಿನ ಸುತ್ತ ಇರುವುದರಲ್ಲಿ ಅರ್ಧ ಬರಿ ತಿನ್ನುವ ಜಾಗಗಳೆ; ಮ್ಯಾಕ್ಡೋನಾಲ್ಡ್, ಕೇಯಫ್ಸಿ, ಪೀಡ್ಜಾಗಳಿಂದ ಹಿಡಿದು ಥಾಯ್, ಜಪಾನೀಸ್, ಚೈನೀಸ್ ಅಂತೆಲ್ಲ ಬೇಕಾದಷ್ಟು ರೆಸ್ಟೋರೆಂಟುಗಳು. ಕೇಯಫ್ಸಿಯಂತ ಬಹು ರಾಷ್ಟ್ರೀಯ ಶಾಖೆಗಳು ಅಲ್ಲಿ ಬದುಕುಳಿಯಲಿಕ್ಕಾಗಿ ಅಲ್ಲಿಯವರ ರೀತಿಯೆ ಅನ್ನದೊಂದಿಗೆ ಚಿಕನ್ ಮಾರುತ್ತಾರೆ- ಚೀಣದಲ್ಲಿ ಮ್ಯಾಕ್ಡೋನಾಲ್ಡಿನಲ್ಲಿ ಚೈನೀಸ್ ‘ಕಾಂಜಿ’ ಮಾರುವ ಹಾಗೆ. ಶ್ರೀನಾಥ ಶಾಕಾಹಾರಿಯಲ್ಲದಿದ್ದರೂ, ಅಲ್ಲಿನ ಊಟ ತಿಂಡಿಗಳನ್ನು ನೋಡಿದ ಮೇಲೆ ಹೆಚ್ಚುಕಮ್ಮಿ ಬರ್ಗರು, ಪೀಡ್ಜಾ, ಕೇಯಫ್ಸಿಗಳಲ್ಲೆ ದಿನ ತಳ್ಳುತ್ತಾನೆ. ಆಗ್ಗಾಗ್ಗೆ ಸಹ್ಯೋದ್ಯೋಗಿಗಳ ಜತೆ ಡಿನ್ನರು, ಪಾರ್ಟಿ ಅಂತ ಹೋದರೂ, ಮೇಲ್ನೋಟಕ್ಕೆ ನಮ್ಮ ತಿಳಿಸಾರಿನ ಹಾಗೆ ಕಾಣುವ ಪ್ರಾನಿನ ‘ಟೋಮ್ಯುಂ’ ಸೂಫಿನ ಜತೆ ಅನ್ನ ತಿಂದು ಬರುತ್ತಾನೆ. ಅವನ ಜತೆಯವರೊ ಇವನಿಗೆ ಈ ಸೂಪು ತುಂಬಾ ಇಷ್ಟವೆಂದುಕೊಂಡು ತಾವೂ ಕುಡಿಯದೆ ಇವನತ್ತಲೆ ತಳ್ಳುತ್ತಾರೆ. ಮೆಣಸಿನ ಕಾರದ, ಉಪ್ಪು ಹುಳಿ ರುಚಿಯಿರದ ಆ ಸೂಪನ್ನು ಹೇಗೊ ನಿಭಾಯಿಸಿ ಮುಗಿಸುವುದನ್ನು ಕಲಿತಿದ್ದಾನೆ, ಆದಷ್ಟು ಅನ್ನಕ್ಕೆ ಬೆರೆಸಿಕೊಂಡು ತಿನ್ನುತ್ತಾ.

ಆದರೆ ನಮ್ಮದಲ್ಲದ್ದನ್ನು ತಿನ್ನುವ ವಿಷಯದಲ್ಲಿ ತೀರಾ ಧಾರಾಳಿಯಾದ ಶ್ರೀನಾಥನಿಗೂ ಅಚ್ಚರಿ ತಂದ ಕೆಲವು ತಿನಿಸುಗಳು ಮಾತ್ರ ಅವನ ಕನಸು ಮನಸಿನಲ್ಲೂ ಊಹಿಸಿರದಂತಹದ್ದು. ಒಬ್ಬಂಟಿಯ ಒತ್ತಡದ ಜೀವನದ ನಡುವೆ ಅಡುಗೆ ಮಾಡಿಕೊಳ್ಳದೆ ಹೊರಗೇ ತಿನ್ನುವ ಅನಿವಾರ್ಯ, ಎಷ್ಟೊ ಬಾರಿ ತಡವಾದ ದಿನಗಳಲ್ಲಂತೂ ರಸ್ತೆ ಪಕ್ಕದ ತಿಂಡಿಯಂಗಡಿಯಲ್ಲಿ ಸಿಕ್ಕಿದ್ದು ತಿನ್ನುವ ಪಾಡು – ಒಂಭತ್ತಕ್ಕೆ ಆಚೀಚೆಯೆ ಎಲ್ಲಾ ರೆಸ್ಟೋರೆಂಟುಗಳು ಮುಚ್ಚಿಬಿಡುವುದರಿಂದಾಗಿ. ತಡವಾಗಿ ತೆರೆವ ಜಾಗಕ್ಕೆ ದಿನವೂ ಹೋಗಲಾಗದಷ್ಟು ದುಬಾರಿ; ಹಾಗೊಂದು ದಿನ ತೀರಾ ತಡವಾದಾಗ ದಾರಿಯ ನಡುವೆ ತಳ್ಳುಗಾಡಿಯೊಂದರಲ್ಲಿ ಮಾರುತ್ತಿದ್ದ ಪೊಟ್ಟಣಕ್ಕೆ ಅನ್ನ ತುಂಬುತ್ತಿದ್ದದ್ದನ್ನು ಕಂಡು ಕುತೂಹಲದಿಂದ ನೋಡುತ್ತ ನಿಂತವನಿಗೆ ಹತ್ತೆ ಬಾತಿಗೆ ಒಂದು ಪ್ಯಾಕೇಟ್ಟಿನ ಅನ್ನದ ಜತೆಗೆ ಒಂದು ದಪ್ಪ ಹಳದಿಯ ದೋಸೆಯಂತದ್ದೇನೊ ಹಾಕಿಕೊಟ್ಟದ್ದು ಕಂಡಿತು. ಕುತೂಹಲದಿಂದ ಒಂದು ಪ್ಯಾಕೇಟು ಖರೀದಿಸಿ ನೋಡಿದರೆ – ಆ ದಪ್ಪ ಹಳದಿ ರೊಟ್ಟಿ ಮತ್ತೇನೂ ಅಲ್ಲದೆ ‘ಥಾಯ್ ಆಮ್ಲೇಟು’ ಆಗಿತ್ತು! ಎರಡು ಮೊಟ್ಟೆಗೆ ಯಥೇಚ್ಚವಾಗಿ ಟೊಮೋಟೊ, ಎಣ್ಣೆ ಹಾಕಿ ನಮ್ಮ ಅಕ್ಕಿ ರೊಟ್ಟಿಯ ಮೂರರಷ್ಟು ಗಾತ್ರದ ಆಮ್ಲೇಟು ಮಾಡಿ ಅದನ್ನೆ ಅನ್ನದ ಜತೆ ಕೊಟ್ಟಿದ್ದರು. ಮನೆಗೆ ತಂದು ಅನ್ನಕ್ಕೆ ಹಾಕುವ ಗೊಜ್ಜೊ, ಹುಳಿಯೊ ಕೊಟ್ಟಿರಬಹುದೆಂದು ಹುಡುಕಿದರೂ ಸಿಗದಾಗ – ಅಲ್ಲೆ ತಿನ್ನುತ್ತಿದ್ದವನೊಬ್ಬ ಬರಿ ಬಿಳಿಯನ್ನವನ್ನೆ ಆಮ್ಲೇಟ್ಟಿನ ಜತೆಗೆ ತಿನ್ನುತ್ತಿದ್ದುದ್ದು ನೆನಪಾಗಿ, ತುಸು ಹೊತ್ತು ಆಮ್ಲೇಟಿನ ಜತೆ ಅನ್ನವನ್ನೆ ದಿಟ್ಟಿಸುತ್ತ ಕೂತುಬಿಟ್ಟಿದ್ದ. ಕೊನೆಗೂ ತಿನ್ನಲಾರಂಭಿಸಿದಾಗ ಕಾಡುತ್ತಿದ್ದ ಹಸಿವೆಗೊ, ಹೇಗೂ ಅನ್ನ ಮೊಟ್ಟೆ ತಾನೆ ಎಂಬ ಭಾವನೆಗೊ ಅಥವಾ ತೀರಾ ಬರಿ ಹತ್ತೆ ಬಾತಿಗೆ ಸಿಕ್ಕಿತ್ತಲ್ಲಾ ಎಂಬ ಲೆಕ್ಕಾಚಾರಕ್ಕೊ – ಅದೂ ಒಂದು ರೀತಿ ರುಚಿಯಾಗಿಯೆ ಕಂಡಿತ್ತು. ಅಲ್ಲಿಂದ ಮುಂದೆ ವಾರಕ್ಕೆರಡು ದಿನವಾದರೂ ಆ ಪ್ಯಾಕೆಟ್ಟಿನ ಆಮ್ಲೇಟ್ಟನ್ನ ಗಟ್ಟಿಯಾಗಿ ಹೋಯ್ತು!

ಆದರೂ ಈ ಬೀದಿ ತಿಂಡಿಗಳಲ್ಲಿ ಕಗ್ಗತ್ತಲಿನಲಿ ಹೊಳೆವ ಬೆಳ್ಳಿರೇಖೆಯಂತೆ ಕಂಡಿದ್ದು ಎರಡು – ಒಂದೂ, ಆಗ ತಾನೆ ಹೆಚ್ಚಿ, ಪ್ಯಾಕೇಟ್ಟುಗಳಲ್ಲಿ ತುಂಬಿ ಕೊಡುವ ದುಬಾರಿಯಲ್ಲದ ಹಣ್ಣುಗಳು- ಉಪ್ಪು ಕಾರದ ಸಮೇತ. ಮಾವಿನ ಹಣ್ಣು, ಸೀಬೆಯ ತರದ ರುಚಿಯಾದ ಹಣ್ಣನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಆಫೀಸಿನ ಸುತ್ತಮುತ್ತಲ ಜನ ನಿಬಿಡ ಸ್ಥಳಗಳಲ್ಲಿ ಮತ್ತು ಪುಟ್ಪಾತುಗಳಲ್ಲಿ ಐದತ್ತು ಬಾತಿಗೆ ಮಾರುವ ತಾಜಾ ಹಣ್ಣುಗಳು. ಎರಡನೆಯದೆಂದರೆ, ಬೆಳಿಗ್ಗೆ ಆಫೀಸಿಗೆ ಬರುವ ಹೊತ್ತಿಗೆ ಸರಿಯಾಗಿ ಒಳ ಹೋಗುವ ಮುನ್ನ ಮುಖದ್ವಾರದ ಅಕ್ಕಪಕ್ಕದ ಮೂಲೆಯ ಜಾಗಗಳಲ್ಲಿ ನಿಂತು ಮಾರಾಟ ಮಾಡುವ ಬಿಸಿಬಿಸಿ ‘ಸೋಯಾ ಹಾಲು’. ಪುಟ್ಟ ಹಂಡೆಯಂತಹ ಪಾತ್ರೆಯಿಂದ ಮೊಗೆಮೊಗೆದು ಪ್ಲಾಸ್ಟಿಕ್ಕಿನ ಪುಟ್ಟ ಚೀಲಕ್ಕೆ ತುಂಬಿ ಕೊಟ್ಟರೆ, ಹಿಡಿಕೆಯ ಪ್ಲಾಸ್ಟಿಕ್ಕಿನ ದಾರ ಮತ್ತು ‘ಸ್ಟ್ರಾ’ ದ ಸಹಾಯದಿಂದ ನಡೆದು ಹೋಗುತ್ತಲೆ ಕುಡಿಯುತ್ತಾ ಸಾಗುವ ದೃಶ್ಯ ಸಾಮಾನ್ಯ. ಸಕ್ಕರೆ ಬೆರೆಸಿದ್ದಾದರೆ ತುಸು ಹೆಚ್ಚು, ಬೆರೆಸದಿದ್ದರೆ ತುಸು ಕಡಿಮೆ ಬಾತುಗಳೆಂಬ ವ್ಯತ್ಯಾಸ ಬಿಟ್ಟರೆ, ಮಿಕ್ಕಂತೆ ಒಂದೆ ಸರಕಿನ ಮಾಲು. ಬಾಕಿ ಹೊತ್ತೆಲ್ಲ ಖಾಲಿಯಿರುವಾ ಆ ಜಾಗ, ಬೆಳಗಿನ ಹೊತ್ತು ಮಾತ್ರ ‘ಕ್ಯೂ…’ ; ಬಿಸಿ ಬೇಡವೆನ್ನುವವರಿಗೆ ಬಾಟಲಿನ ಆರೆಂಜು ಜ್ಯೂಸ್ ಇದ್ದೆ ಇದೆ. ಆಗಾಗ್ಗೆ ಇಣುಕುವ ದ್ರಾಕ್ಷಿ, ಡುರಿಯನ್, ಹಲಸು – ಹೀಗೆ ಫಲವತ್ತಾದ ಆಯ್ಕೆಯೆ ಇರುವುದರಿಂದಾಗಿ ಸಸ್ಯಹಾರಿಗಳೂ ತೀರಾ ಗೊಣಗುವಂತಿಲ್ಲ – ಪುಟ್ಪಾತಿನಲ್ಲಿ ಖರೀದಿಸಬೇಕಲ್ಲ ಎನ್ನುವುದು ಬಿಟ್ಟರೆ. ತೀರಾ ಮಡಿವಂತರಿಗೆ, ತುಸು ಹೆಚ್ಚಾದರೂ ಲೆಕ್ಕಿಸದವರಿಗೆ ಸೂಪರು ಮಾರ್ಕೆಟ್ಟುಗಳಂತೂ ಹೇರಳವಾಗಿವೆ…ಶ್ರೀನಾಥನಿಗಂತೂ ಬೆಳಿಗ್ಗೆ ಸಕ್ಕರೆಯಿಲ್ಲದ ಸೋಯಾ ಮಿಲ್ಕ್ ಮತ್ತು ಮಧ್ಯಾಹ್ನದ ಹಣ್ಣಿನ ಪ್ಯಾಕೇಟು ಖಾಯಂ.

ವಿಶಾಲವಾದ ಸಿಲೋಮ್ ರಸ್ತೆಯ ಮಧ್ಯಕ್ಕಿರುವ ಮೇಲು ರಸ್ತೆ ಸೇತುವೆ ಸಿಟಿ ಟ್ರೈನಿನ ಒಡಾಟಕ್ಕೆ ಮೀಸಲು – ಬ್ಯಾಂಕಾಕ್ ಟ್ರಾನ್ಸ್ಪೋರ್ಟ್ ಸರ್ವಿಸಿನ ಹೆಸರಿನಲ್ಲಿ. ಆ ಪಥವೆ ಇಡಿ ರಸ್ತೆಯನ್ನು ಎರಡಾಗಿಸಿ, ಎರಡು ಪ್ರತ್ಯೇಕ ಜಗಗಳನ್ನಾಗಿ ಮಾಡಿರುವುದು ಮತ್ತೊಂದು ರೀತಿಯ ಸೋಜಿಗ. ರಸ್ತೆಯಿಂದ ಮೇಲುಗಡೆಗೆ ಸಾಲಾಡಾಂಗ್ ಬಡಾವಣೆಯತ್ತ ನಡೆದರೆ, ಮೊದಲೆ ಹೇಳಿದಂತೆ ಸರ್ವೀಸ್ ಅಪಾರ್ಟುಮೆಂಟು , ಕಾಂಡೊಮಿನಿಯಮ್ ಮತ್ತು ಹೋಟೆಲುಗಳೆ ತುಂಬಿರುವ ತಾಣ – ಶ್ರೀನಾಥನ ಅಪಾರ್ಟುಮೆಂಟು ಸೇರಿದಂತೆ. ಆದರೆ ಅವೆಲ್ಲ ಸಾಲಾಡಾಂಗಿನ ಒಳಹೊಕ್ಕ ಮೇಲೆ ಮಾತ್ರ. ಇಡೀ ಸಾಲಾಡೆಂಗಿಗೆ ಸೆರಗಿನಂತೆ ಚಾಚಿಕೊಂಡಿರುವ ಸಿಲೋಮ್ ರಸ್ತೆಯ ಒಂದು ಬದಿಯ ಉದ್ದಕ್ಕೂ ಬರೀ ಆಫೀಸು ಕಟ್ಟಡಗಳು, ಬ್ಯಾಂಕುಗಳು, ದೊಡ್ಡ ಮಾಲುಗಳು, ಹೋಟೆಲುಗಳು ಮತ್ತು ನಡು ನಡುವೆ ರೆಸ್ಟೋರೆಂಟು, ಚಿಕ್ಕ ಪುಟ್ಟ ಅಂಗಡಿಗಳು ಇತ್ಯಾದಿ – ಬರಿಯ ವಾಣಿಜ್ಯ ಜಗವೆ ತುಂಬಿದ ಜಾಗ. ಹಗಲೆಲ್ಲ ಜಿಗಿಜಿಗಿ ಜಿಣುಗುಟ್ಟುವ ಈ ಜಾಗ ಇರುಳಲ್ಲಿ ಖಾಲಿ ಖಾಲಿ – ರೆಸ್ಟೊರೆಂಟು ಅಂಗಡಿಗಳನ್ನು ಬಿಟ್ಟರೆ. ಅಲ್ಲೆ ಇರುವ ಎಷ್ಟೋ ದೊಡ್ಡ ಬಯಲಿನಂತಹ ಮೈದಾನಗಳು ಹಗಲಿನಲ್ಲಿ ಸಂತೆಯ ಹಾಗೆ ಬಟ್ಟೆ, ಸೋಪು, ಟೇಪಿನಿಂದಿಡಿದು ಎಲ್ಲಾ ಮಾರುವ ದಿಢೀರ ಅಂಗಡಿಗಳಾಗಿ ಮಾರ್ಪಟ್ಟರೆ, ಅಲ್ಲೆ ಕೆಲವು ಸಾಲುಗಳು ತಾತ್ಕಾಲಿಕ ತಿಂಡಿ ಊಟದ ತಂಗುದಾಣಗಳಾಗುತ್ತವೆ – ತಂದು ಮಾರುವವರ, ಹೋಗಿ ಕೊಳ್ಳುವವರ ಸಹಯೋಗದಲ್ಲಿ. ಅದೇ ಸಂಜೆಗೆ ನೋಡಿದರೆ ಇಡಿ ಜಾಗವೆ ಖಾಲಿ ಖಾಲಿಯಾಗಿ ಸ್ಮಶಾನ ಮೌನ – ಅಲ್ಲೇನೂ ಇರಲೆ ಇಲ್ಲವೆನ್ನುವ ಹಾಗೆ. ರಾತ್ರಿಯಾಗುತ್ತಿದ್ದಂತೆ ಮತ್ತೊಂದು ಜಗ – ಇಡಿ ಬಯಲು ‘ಪಾರ್ಕಿಂಗ್ ತಾಣ’ ವಾಗಿ ಕಾರುಗಳಿಂದ ತುಂಬಿ ಹೋಗುತ್ತದೆ..ಮತ್ತೆ ಬೆಳಗಿನಿಂದ ಅದೇ ಕಥೆ ಪುನರಾವರ್ತನೆ – ದಿನದಿನವೂ! ಇಷ್ಟು ಚಲನಾತ್ಮಕವಾಗಿ ಒಂದೇ ದಿನದಲ್ಲಿ ಇಷ್ಟೆಲ್ಲಾ ಬದಲಾವಣೆಯ ರೂಪ ಕಾಣುತ್ತ ದೈನಂದಿನ ಜೀವನ ನಡೆಸುವ ಪರಿಯನ್ನು ಯಾವ ದೇಶದಲ್ಲೂ ಶ್ರೀನಾಥ ಕಂಡಿದ್ದೆ ಇಲ್ಲ..ಹಾಗಾಗಿ ಕೆಲವೊಮ್ಮೆ ಅವನು ತಮಾಷೆಗೆ ಹೇಳುವ ಮಾತು ನಿಜವೆ ಇರಬೇಕೆಂದು ಅವನಿಗೇ ಅನಿಸುತ್ತದೆ ಎಷ್ಟೋ ಬಾರಿ – ‘ಬಹುಶಃ ನಮ್ಮ ಬಾಂಬೆ ಡಬ್ಬಾವಾಲರ ಹಾಗೆ, ಇದೊಂದು ಬೆಸ್ಟು ಬಿಜಿನೆಸ್ ಕೇಸಿರಬಹುದೆ? …ನಾವು ಕಂಪನಿಗಳಲ್ಲಿ ಹೇಳುತ್ತಿರುತ್ತೇವೆ – ಗ್ರಾಹಕರಿದ್ದಲ್ಲಿಗೆ ಹೋಗಬೇಕು ಅಂತ. ಆದರಿಲ್ಲಿ ಪ್ರತಿದಿನವೂ ಮಾಡಿ ತೋರಿಸುತ್ತಿದ್ದಾರೆ – ಯಾವುದೆ ಸದ್ದು ಗದ್ದಲವಿಲ್ಲದೆ….ಬಹುಶಃ ಇದೊಂದು ರೀತಿಯ ಬೆಸ್ಟು ಬಿಜಿನೆಸ್ ಮಾಡೆಲ್ಲು ಅಂತ ಕಾಣುತ್ತದೆ..’

ಆದರೆ ಇದೇ ಸಿಲೋಮ್ ರಸ್ತೆಯ ಎದುರು ಬದಿಯ ಪ್ರಪಂಚಕ್ಕೆ ಬಂದರೆ ಒಂದು ರೀತಿಯ ವೈರುಧ್ಯದ ಪ್ರತಿ ವಿಶ್ವವೆ ಎದುರಾಗುತ್ತದೆಂದು ಹೇಳಬಹುದು. ಮಧ್ಯಕ್ಕೆ ವಿಭಾಜಿಸಿದ ರೈಲು ಮೇಲು-ರಸ್ತೆಯ ಆ ಬದಿಗಿರುವ ಈ ಜಾಗವನ್ನು ‘ಪಾಟ್ಪೋಂಗ್’ ಎಂದು ಕರೆಯುತ್ತಾರೆ. ಆ ಹೆಸರು ಕೇಳುತ್ತಿದ್ದಂತೆ ಕೆಲವರ , ಅದರಲ್ಲೂ ವಿದೇಶಿ ಪ್ರವಾಸಿಗರ ತುಟಿಯಲ್ಲಿ ತೆಳುವಾದ ಮುಗುಳ್ನಗು ಕಂಡೂ ಕಾಣದಂತೆ ಕುಣಿದು ಮಾಯವಾದರೆ ಅಚ್ಚರಿಯೇನೂ ಇಲ್ಲ. ಆದರೆ ಅದಕ್ಕಿರುವ ಕಾರಣವೆ ಬೇರೆ- ಸಿಲೋಮ್ ಹಗಲಿನ ವಾಣಿಜ್ಯ ಪ್ರಪಂಚದ ಬೆಳಕಿನ ಪ್ರತಿನಿಧಿಯಾದರೆ, ಪಾಟ್ಪೋಂಗ್ ಇರುಳು ಜಗತ್ತಿನ ‘ಬೇರೆಯದೆ’ ಆದ ವಾಣಿಜ್ಯದ ಪ್ರತಿನಿಧಿ. ಕೊಂಚ ರಸಿಕ ಭಾಷೆಯಲ್ಲಿ ಇದನ್ನು ಕೆಲವರು ‘ಸರ್ವೀಸ್ ಇಂಡಸ್ಟ್ರಿ’ ಎಂದರೆ, ಮತ್ತೆ ಕೆಲವರು ಇದನ್ನು “ಎಂಟರ್ಟೈನ್ಮೆಂಟ್ ಇಂಡಸ್ಟ್ರಿ” ಎನ್ನುತ್ತಾರೆ. ಯಾರು ಏನೆ ಕರೆಯಲಿ ಅಲ್ಲಿನ ಉದ್ಯಮದ ಆದಾಯಕ್ಕೆ ಹಗಲಿನ ವಾಣಿಜ್ಯದಷ್ಟೆ ಇರುಳಿನ ವಾಣಿಜ್ಯವೂ ಪ್ರಮುಖವಾದದ್ದು. ಇಲ್ಲಿಯೂ ಸೋಜಿಗವೆಂದರೆ ಸಿಲೋಮ್ ಹೇಗೆ ರಾತ್ರಿಯಾಗುತ್ತಿದ್ದಂತೆ ಸ್ಥಬ್ದವಾಗುವುದೋ, ಅದೇ ರೀತಿ ಪಾಟ್ಪೊಂಗ್ ರಸ್ತೆಗಳೆಲ್ಲ ಹಗಲಿನ ಸೆರಗೊದ್ದ ಸ್ಥಬ್ದ ಗರತಿಯಾಗಿಬಿಡುತ್ತವೆ, ಬೆಳಗಾಗುತ್ತಿದ್ದಂತೆ; ಪಾಳಿಗೆಂಬಂತೆ ಸಿಲೋಮ್ ಮತ್ತೆ ಶೃಂಗರಿಸಿಕೊಂಡು ಪತಿವ್ರತಾಧರ್ಮ ಪಾಲಿಸತೊಡಗಿದ ಹಾಗೆ, ತನ್ನ ರಾತ್ರಿಯ ಪಾಳಿಗೆ ಶೃಂಗರಿಸಿಕೊಂಡ ನಿತ್ಯ ಸುಮಂಗಲಿಯಾಗುವ ಮೊದಲಿನ ವಿಶ್ರಾಮಧಾಮವಾಗಿಬಿಡುತ್ತದೆ ಪಾಟ್ಪೋಂಗ್. ಆ ನಿರ್ಜನವಲ್ಲದಿದ್ದರೂ ತೆಳುವಾಗಿ ತುಂಬಿದ ರಸ್ತೆಗಳು ರಾತ್ರಿ ಅಲ್ಲೇನಾಗುವುದೆಂಬ ಸುಳಿವನ್ನೂ ಬಿಟ್ಟುಕೊಡದಷ್ಟು ಗಂಭೀರವಾಗಿಬಿಡುತ್ತವೆ.

ಪಾಟ್ಪೋಂಗಿನ ಆ ರಾತ್ರಿಯ ವಿಶ್ವವೆ ಒಂದು ರೀತಿಯ ವಿಲಕ್ಷಣ ಪ್ರಪಂಚ. ಸೂರ್ಯನಿನ್ನು ತನ್ನ ಪಾಳಿ ಮುಗಿಸಲು ಸಿದ್ದನಾಗುತ್ತಿರುವಂತೆ ಈ ಬೀದಿಗಳ ಉದ್ದಕ್ಕೂ ಜಗಮಗಿಸುವ ಬಣ್ಣಬಣ್ಣದ ದೀಪೋದ್ಘಾಟನೆಯಾಗಿಬಿಡುತ್ತದೆ. ದೀಪದ ಪ್ರಖರತೆ ಹೆಚ್ಚುತ್ತಿದ್ದ ಹಾಗೆ ಅದರಡಿಯಲ್ಲಿ ಕುಳಿತ ಲಲನೆಯರ ಮೈಯಿಯೂ ಫಳಫಳ ಹೊಳೆಯತೊಡಗುತ್ತದೆ. ಕೆಲವು ಮಿನುಗುವ ರಂಗಿನ ಬಟ್ಟೆಯಿಂದ ಹೊಳೆದರೆ, ಮತ್ತೆ ಕೆಲವು ಮುಚ್ಚಿರದ ಹೊಳಪಿನ ಚರ್ಮಗಳ ಮೇಲೆ ಪ್ರತಿಫಲಿಸಿ ರಂಗುರಂಗಾಗುತ್ತವೆ. ಅಲ್ಲಿನ ಸರಳ ನಿಯಮವೆ ಹಾಗೆ – ಕತ್ತಲೇರಿ ದೀಪದ ಜಗಮಗಿಸುವಿಕೆ ಹೆಚ್ಚುತ್ತಿದ್ದ ಹಾಗೆ ಮೈ ಮೇಲಿನ ಬಟ್ಟೆಯ ಹೊದಿಕೆ ಇಳಿಯುತ್ತಾ ಹೋಗುತ್ತದೆ. ಹೊಸ ನವರಂಗಿ ಪ್ರಪಂಚದ ಅನಾವರಣ; ಸಾಲಾಗಿ ಬೀದಿಯುದ್ದಕ್ಕೂ ಬರಿಯ ಇಂತದ್ದೆ ಸೇವಾಕೇಂದ್ರಗಳ ಮೆರವಣಿಗೆ. ಲೈವ್ ಶೋಗಳು, ಮಸಾಜ್ ಪಾರ್ಲರಿನ ಮಳಿಗೆಗಳು, ದುಬಾರಿ ಬೀರಿನ ಜತೆ ಲಲನಾಸಂಗದ ಮಾತಾಟದ ಗಳಿಗೆಗಳು – ಎಲ್ಲವೂ ಕತ್ತಲಲಿ ಕಣ್ಣು ಕುಕ್ಕುವ ಬೆಲೆಗೆ ಲಭ್ಯ. ಅದು ಆರಂಭಕ್ಕೆ ಮಾತ್ರ – ಅಲ್ಲಿನ ಕಿವಿಗಡಚಿಕ್ಕುವ ಸಂಗೀತದ ಜತೆ ಚಿತ್ರ ವಿಚಿತ್ರ ಅಂಗಾಂಗ ಕುಣಿತದ ನರ್ತನ – ಪ್ರದರ್ಶನ ಬಿಚ್ಚಿಕೊಂಡು, ಸಿನಿಮಾಗಳಲ್ಲಿ ನೋಡುವ ಕ್ಲಬ್ ಡಾನ್ಸ್ , ಐಟಂ ಡಾನ್ಸುಗಳ ನೆನಪು ತರಿಸುತ್ತದೆ. ಆದರೆ ಒಂದೆ ಒಂದು ವ್ಯತ್ಯಾಸ – ಸಿನೆಮಾಗಳಲ್ಲಿ ಮೈಮೇಲೆ ತುಸುವಾದರೂ ಬಟ್ಟೆಗಳು ಇರುತ್ತವೆ; ಇಲ್ಲಿ ಏನೂ ಇರುವುದಿಲ್ಲ. ಬೀದಿಯಲ್ಲಿ ಹಾದು ಹೋಗುವ ಆಸಕ್ತರನ್ನು ಆಕರ್ಷಿಸಲು ಹಲವಾರು ‘ಪ್ರಮೋಷನ್ನು’ಗಳೂ ಇರುತ್ತವೆ – ಪುಕ್ಕಟೆ ಮೊದಲ ಲೋಟದ ಬಿಯರಿಂದ ಹಿಡಿದು !

ಒಮ್ಮೆ ಅಲ್ಲಿಗೆ ಬಂದಿದ್ದ ಬಾಸಿನ ಕುತೂಹಲಕ್ಕೆಂದು ಶ್ರೀನಾಥನೂ ಒಂದು ಈ ತರದ ಲೈವ್ ಶೋಗೆ ಅರೆ ಮನಸಿನಿಂದಲೆ ಹೋಗಬೇಕಾಗಿ ಬಂದಿತ್ತು…ಹೀಗಾಗಿ ಅಲ್ಲಿನ ವ್ಯವಸ್ಥೆಯ ಒಂದು ಸ್ಥೂಲ ಚಿತ್ರಣವೂ ಸಿಕ್ಕಿತ್ತು. ಬಾಸಿನ ಜತೆ ಸೇರಿದಂತೆ ಪ್ರಾಜೆಕ್ಟು ಟೀಮಿನ ಆರೇಳು ಜನರ ಗುಂಪಲ್ಲಿ ಹೋಗಿದ್ದರೂ, ಆ ಕಾಣದ ದೇಶದಲ್ಲೂ ಯಾರಾದರೂ ಇಂತಹ ಜಾಗಕ್ಕೆ ಹೋಗುತ್ತಿರುವುದನ್ನು ನೋಡಿಬಿಟ್ಟರೆ ಹೇಗೊ ಎಂಬ ಭೀತಿ ಹಾಗೂ ಪಾಪ ಪ್ರಜ್ಞೆಯನ್ಹೊತ್ತುಕೊಂಡೆ ಜಾಕೇಟಿನ ಟೋಪಿಯಡಿ ಸಾಧ್ಯವಾದಷ್ಟು ಮುಖ ಮರೆಸಿಕೊಂಡೆ ಹೋಗಿದ್ದ. ಕೈಯಲ್ಲೊಂದೊಂದು ಬೀಯರಿನ ಮಗ್ ಹಿಡಿದು ಕೂತಾಗ ಎಲ್ಲೆಲ್ಲೊ ಮೂಲೆಯಲಿದ್ದ ಅರೆಬರೆ ವಸ್ತ್ರದ ಕಾಂತೆಯರು ಪಕ್ಕದಲ್ಲಿ ಬಂದು ಕೂರುವುದು, ‘ಕ್ಯಾನ್ ಐ ಸಿಟ್ ವಿಥ್ ಯೂ?’ ಅಂತಲೊ’ಕ್ಯಾನ್ ಯೂ ಆರ್ಡರ ಏ ಡ್ರಿಂಕ್ ಫಾರ ಮೀ?’ ಅಂತಲೊ ಬಂದು ಮೈಗೆ ಮೈ ತಾಗಿಸಿಕೊಂಡು ಕೂತಾಗ ಹೆದರಿಕೆಗೊ, ರೋಮಾಂಚನಕ್ಕೊ ಅಥವ ಹೇಳಿಕೊಳ್ಳಲಾಗದ ಇನ್ಯಾವ ದೇಹ ಸಂಚಲನಕ್ಕೊ – ಒಂದೆ ಗಳಿಗೆಯಲ್ಲಿ ಮೈಯೆಲ್ಲ ಜಿಲ್ಲನೆ ಬೆವರಿ ನಖಶಿಖಾಂತ ವದ್ದೆಯಾದಂತೆ ಆಗಿಹೋಗಿತ್ತು. ಇಕ್ಕಟ್ಟಿನಲ್ಲಿ ಕುಳಿತೆ ಮುದುರಿ ಮೂಲೆಗೊತ್ತರಿಸಿಕೊಳ್ಳುತ್ತಿದ್ದವನನ್ನು ಗಮನಿಸಿದ ಆ ಎಳೆ ತರುಣಿ, ‘ನೋ ವರಿ…ಮೀ ಗರ್ಲ್ , ಮೀ ನೋ ಟೈಗರ..’ ಅಂತ ಅರೆಬರೆ ಇಂಗ್ಲೀಷಲಿ ಉಲಿದಾಗ ಇನ್ನೂ ಪಾತಾಳಕ್ಕಿಳಿದವನಂತೆ ಬೆದರಿ ಏನೂ ಮಾತನಾಡಲಾಗದೆ ಪೆಚ್ಚು ಪೆಚ್ಚಾಗಿ ನಕ್ಕಿದ್ದಷ್ಟೆ ನೆನಪಿತ್ತು. ಅವಳ ಬೀರಿನ ದುಬಾರಿ ಗ್ಲಾಸಿಗೆ ದುಡ್ಡು ತೆತ್ತರೂ ಸಂಕೋಚದ ಮುದ್ದೆಯಾಗೆ ಕುಳಿತಿದ್ದವನನ್ನು ಕಂಡು ಆಕೆಗೇನನಿಸಿತೊ – ‘ ಮೀ ನೋ ಬ್ಯೂಟಿ? ಯೂ ಅದರ ಗರ್ಲ್ ವಾಂಟ್?’ ಅಂದಾಗಲೂ ಏನು ಮಾತಾಡದೆ ಸುಮ್ಮನೆ ಅವಳ ಮುಖದ ಮೇಕಪ್ಪನ್ನೆ ನೋಡಿದ್ದ. ‘ಫಸ್ಟ್ ಟೈಮ್? ಮೀ ಆಲ್ಸೊ ಫಸ್ಟ್ ಟೈಮ್’ ಎಂದಾಗಲೂ ಮಾತಾಡದಿದ್ದಾಗ ತುಸು ಹೊತ್ತು ಸುಮ್ಮನಿದ್ದವಳೆ ಸಿಗರೇಟೊಂದನ್ನು ಹೊತ್ತಿಸಿ ಕೈಯಲಿಡಿದು ‘ಬೇಕಾ?’ ಅನ್ನುವಾ ಹಾಗೆ ಪ್ಯಾಕೇಟನ್ನು ತೋರಿಸಿದಳು. ಇವನ ಅಡ್ಡಡ್ಡ ಆಡಿದ್ದ ತಲೆಯನ್ನು ಕಂಡು ನಸುನಕ್ಕು , ಧೀರ್ಘ ದಮ್ಮೊಂದನ್ನೆಳೆದು ಅವನ ಮುಖದ ತುಂಬೆಲ್ಲ ಹೊಗೆ ಬಿಡುತ್ತಾ, ಕಿವಿಯ ಹತ್ತಿರ ತುಟಿ ತಂದು – ‘ ರೂಮ್ ಹ್ಯಾವ್ ಇನ್ಸೈಡು ವಾಂಟ್? ಫೈವ್ ಹಂಡ್ರೆಡ್ ಬಾತ್ ಓನ್ಲಿ..ಸ್ಪೆಶಲ್ ಮಸಾಜ್ ಬ್ಯೂಟಿಪುಲ್ ಲೇಡಿ….?’ ಎಂದು ಪಿಸುಗುಟ್ಟಿದಾಗ ಮಾತ್ರ ಗಾಬರಿಬಿದ್ದವನಂತೆ ಮೇಲೆದ್ದು ‘ನೋ ಹ್ಯಾವ್..ನೋ ಹ್ಯಾವ್..’ ಎಂದು ತಡಬಡಾಯಿಸಿದ್ದ ಅವಳ ಸ್ಟೈಲಿನ ಇಂಗ್ಲೀಷಿನಲ್ಲೆ. ಅವನು ‘ನೋ ಹ್ಯಾವು..’ ಅಂದಿದ್ದು ತನ್ನ ಬಳಿ ಅಷ್ಟು ದುಡ್ಡಿಲ್ಲ ಅಂತಲೊ ಅಥವಾ ತನಗಷ್ಟು ಧೈರವಿಲ್ಲ ಅಂತಲೊ ಅವನಿಗೆ ಗೊತ್ತಿರಲಿಲ್ಲ. ಆ ಗಳಿಗೆಯಲ್ಲಿ ಬಾಯಿಗೆ ಬಂದದ್ದನ್ನು ಬಾಯಿ ಒದರಿದ್ದಷ್ಟೆ ಗೊತ್ತು!

ಕೊನೆಗೆ ಸಿಗರೇಟು ಮುಗಿಸಿ ಗ್ಲಾಸು ಖಾಲಿ ಮಾಡಿದ ಆ ಹೆಣ್ಣು ಇನ್ನು ಇವನಿಂದೇನು ಪ್ರಯೋಜನವಿಲ್ಲ ಎಂದರಿತೊ ಅಥವಾ ಇವನಿಂದ ಬೋರಾಗಿಯೊ, ‘ಬೈ ಬೈ ಸೀಯೂ’ ಅಂತ ಕೈಯಾಡಿಸಿ ಹೋದಾಗಷ್ಟೆ ಅಷ್ಟು ಹೊತ್ತು ಹಿಡಿದಿದ್ದ ನಿಟ್ಟುಸಿರು ನಿರಾಳವಾಗಿ ಹೊರಬಂದದ್ದು! ಉಳಿದವರೆಲ್ಲಾ ಮಜವಾಗಿ ಹರಟೆಯೊಡೆಯುತ್ತಾ ಇದ್ದರೆ ಇವನು ಏಕಾಂಗಿಯಾಗಿ ಲೈವ್ ಶೋ ನ ಅಂಗಾಗ ಪ್ರದರ್ಶನವನ್ನೆ ನೋಡುತ್ತಾ ಕುಳಿತಿದ್ದ. ಮನಸ್ಸು ಮಾತ್ರ ‘ಛೆ..ಛೆ! ಒಂದು ಹೆಣ್ಣಿನ ಜತೆಯೂ ಪಳಗದವನಾಗಿಬಿಟ್ಟೆನೆ? ನನ್ನ ಜೂನಿಯರುಗಳೆ ನನಗಿಂತ ಮುಂದಾಗಿ ಏನೆಲ್ಲಾ ನಡೆಸುತ್ತಿದ್ದರೆ, ನಾನು ಅಬ್ಬೆಪಾರಿಯ ಹಾಗೆ ಕೂಡುವ ಸ್ಥಿತಿ ಬಂತಲ್ಲಾ? ನಾನೇಕೆ ಇಷ್ಟು ಪುಕ್ಕಲ? ನನಗೇಕಿಂತಹ ಅಳುಕು, ಪಾಪ ಪ್ರಜ್ಞೆ?’ ಎಂದೆಲ್ಲಾ ಅನಿಸಿ ಅಲ್ಲೆ ಅಳು ಬಂದಂತಾಗಿತ್ತು. ಇದರ ಜತೆಗೆ, ಬಂದಿದ್ದ ಸಹೋದ್ಯೋಗಿಗಳೆಲ್ಲ ಇವನ ಬೆನ್ನ ಹಿಂದೆ ಏನೇನು ಕಿಚಾಯಿಸಿ, ಆಡಿಕೊಂಡು ತಮಾಷೆ, ಗೇಲಿ ಮಾಡಲಿದ್ದಾರೊ ಅನಿಸಿ ಇನ್ನೂ ಸಂಕಟವಾಗಿ, ಆ ಕಣ್ಣ ಮುಂದಿನ ಶೋವನ್ನು ನೆಟ್ಟಗೆ ನೋಡಲಾಗದೆ ಪರಿತಪಿಸಿದ್ದ. ಒಟ್ಟಾರೆ ಎಷ್ಟು ಹೊತ್ತಿಗೆ ಅಲ್ಲಿಂದ ಎದ್ದು ಬಂದೇನೊ ಅನಿಸಿಬಿಟ್ಟಿತ್ತಲ್ಲದೆ, ಯಾರಿಗೂ ತಿಳಿಯದ ಹಾಗೆ ಒಬ್ಬನೆ ಬಂದು ಧೈರ್ಯವಾಗಿ ಎಲ್ಲವನ್ನು ಮಾಡಿ ಪರಿಣಿತಿ ಗಳಿಸಿ, ಮತ್ತೊಮ್ಮೆ ಅವರ ಜತೆ ಬಂದು ಅವರ ತಲೆ ಮೇಲೆ ಹೊಡೆದಂತೆ ಮಾಡಿ ತೋರಿಸಬೇಕೆಂಬ ಉತ್ಕಟೇಚ್ಛೆಯನ್ನು ತಡೆ ಹಿಡಿಯಲಾಗದೆ, ಮುಂದೆಂದೊ ‘ರೇ’ ಪ್ರಪಂಚದಲಿ ಹಾಗೇ ನಡೆದಾಗ ತಾನು ಏನೇನು ಮಾಡುತ್ತಿರುತ್ತೇನೆ, ಹೇಗೆ ಮಾಡುತ್ತಿರುತ್ತೇನೆಂಬ ಕಲ್ಪನೆಯ ಸ್ಪಷ್ಟ ವಿವರಗಳಡಿ ಮನಸು ವಿಹರಿಸತೊಡಗಿದಾಗ ಅಲ್ಲಿ ಇಷ್ಟು ಹೊತ್ತು ಜತೆಯಿದ್ದ ಹೆಣ್ಣಿನ ಮೊಗವೆ ತುಂಬಿದ್ದು ಕಂಡು , ‘ ಹೌದು ..ಅವಳನ್ನೆ ಮತ್ತೆ ಹುಡುಕಿ ಹಿಡಿಯಬೇಕು..ಅವಳ ಮುಖದ ಮೇಲೆ ಹೊಡೆದ ಹಾಗೆ ಹೆಗಲಿಗೆ ಕೈಹಾಕಿ ನಾನು ಏನು ಅಂತ ತೋರಿಸಬೇಕು’ ಅಂತೆಲ್ಲಾ ಮನದಲ್ಲೆ ಮಂಡಿಗೆ ತಿನ್ನುತ್ತಾ ಹೊರಬಂದಿದ್ದ. ಜತೆಯಲಿದ್ದ ಬಾಸು ಹೊರ ಬಂದು ಇವನನ್ನು ನೋಡಿ ಕಣ್ಣು ಮಿಟುಕಿಸಿ ನಕ್ಕಾಗ ತನ್ನನ್ನು ಅವಹೇಳನ ಮಾಡಲೆ ಆ ನಗೆ ನಕ್ಕರೆ ಅಥವಾ ಮಾಮೂಲಿನ ನಗೆಯೆ ಅರಿವಾಗದ ಗೊಂದಲಕ್ಕೆ ಸಿಕ್ಕಿಬಿದ್ದು, ಬಾಸಿನ ಮೇಲೇನೂ ಮಾತಾಡಲಾಗದ ಅಸಹಾಯಕತೆಯೊಡನೆ ಪೆಚ್ಚು ನಕ್ಕಿದ್ದರೂ ಒಳಗೆಲ್ಲಾ ಏನೊ ಪಿಚ್ಚಾಗಿ ಖಾಲಿಯಾದ ಭಾವ ಶೂನ್ಯದಂತೆ ಕಾಡಿತ್ತು. ಕೊನೆಗಲ್ಲಿಂದ ಹೊರಬಂದ ಎಲ್ಲರೂ ಅಲ್ಲಿನ ರಾತ್ರಿಯ ಸಂತೆಯಂಗಡಿಯಲ್ಲಿನ ಅಸಲಿ, ನಕಲಿ ಮಾಲಿನ ಚೌಕಾಶಿ, ಖರೀದಿಗೆ ಇಳಿದಾಗ ಸದ್ಯ, ಗಮನವೆಲ್ಲ ಬೇರೆಡೆಗೆ ಹರಿಯಿತಲ್ಲವೆಂಬ ನಿರಾಳತೆಯೊಡನೆ ಜತೆ ನಡೆದಿದ್ದ.

ಅಂದ ಹಾಗೆ, ಈ ರಾತ್ರಿಯ ಮಾರುಕಟ್ಟೆಯ ಮೇಳ ಅಥವಾ ಇರುಳು ಸಂತೆ, ಸಿಲೋಮ್ ರೋಡಿನ ಮತ್ತೊಂದು ಆಯಾಮ ಅಥವಾ ಮಜಲು ಎನ್ನಬೇಕು. ಸಂಜೆಯವರೆಗೂ ಖಾಲಿಯಿರುತ್ತಿದ್ದ ಪಾಟ್ಪೋಂಗ್ ರಸ್ತೆಗಳ ಜಾಯಿಂಟುಗಳೆಲ್ಲ ರಾತ್ರಿ ರಾಣಿಯಾಗಲಿಕ್ಕೆ ರಂಗು ರಂಗಿನ ದಿರುಸು ಧರಿಸುತ್ತಿದ್ದ ಹಾಗೆ , ಎಲ್ಲೆಲ್ಲಿಂದಲೊ ಒಂದೇ ತರಹದ ಟ್ರಂಕಿನ ರೀತಿಯೆ ಕಾಣುವ ದೊಡ್ಡ ದೊಡ್ಡ ಚಕ್ರದ ಗಾಡಿಗಳು ಸಾಲು ಸಾಲಾಗಿ ಬರಲಾರಂಭವಾಗುತ್ತಿತ್ತು. ಪ್ರತಿಯೊಂದು ಡಬ್ಬವು ಒಂದೊಂದು ಸಂಚಾರಿ ಅಂಗಡಿಯ ಸರಕು. ಪ್ರತೀ ದಿನ ಸಂಜೆ ನಾಕು – ಐದರ ಹೊತ್ತಿಗೆ ಅವರೆಲ್ಲ ಸಾಲು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಬಂದು ತಮ್ಮ ಅಂಗಡಿಗಳನ್ನು ರಸ್ತೆಯಲ್ಲೆ ತೆರೆಯಲಾರಂಭಿಸುತ್ತಿದ್ದರು. ನೋಡನೋಡುತ್ತಿದ್ದಂತೆ ರಸ್ತೆಗೆ ಎರಡು ಬದಿಗೊಂದರಂತೆ ಸಾಲಂಗಡಿ ಮತ್ತು ನಡುರಸ್ತೆಗೆ ಪರಸ್ಪರ ಬೆನ್ನು ಹಾಕಿಕೊಂಡ ಮತ್ತೆರಡು ಸಾಲು – ಒಟ್ಟು ನಾಲ್ಕು ಸಾಲಿನ ನಕ್ಷತ್ರ ಮಳಿಗೆಯೆ ತೆರೆದುಕೊಂಡುಬಿಡುತ್ತಿತ್ತು. ಸುಮಾರು ಹತ್ತಾರು ಬೀದಿಗಳಲ್ಲಿ ಇದರದೆ ಪುನರಾವರ್ತನೆ – ಪ್ರಪಂಚದಲ್ಲಿ ಕಂಡ ಕೇಳಿದ ಎಲ್ಲಾ ರೀತಿಯ ವಾಚುಗಳ ನಕಲು, ಛತ್ರಿ, ಕೊಡೆ, ಬೆಲ್ಟು, ಕರ್ಚೀಪು, ಸೂಟು, ಬರ್ಮುಡಗಳು, ಮೇಣದ ವರ್ಣ ವೈವಿಧ್ಯಗಳು, ತರತರಹಾವರಿ ಆಟಿಕೆಯ ವೈವಿಧ್ಯಗಳು, ಶೋಕೇಸಿನಲ್ಲಿಡಬಹುದಾದ ಮರದ, ಲೋಹದ ತರತರದ ಆನೆ, ಬುದ್ಧ ಹಾಗೂ ಇತರೆ ಪ್ರತಿಮೆಗಳು, ಥಾಯ್ ಸಿಲ್ಕಿನ ನಮೂನೆಯ ಕರವಸ್ತ್ರಗಳು, ದಿಂಬುಗಳು, ಕವರುಗಳು, ಬಟ್ಟೆಯ ತುಂಡುಗಳು – ಹೀಗೆ ಏನೆಲ್ಲಾ ಊಹಿಸಬಹುದೋ ಅದೆಲ್ಲವನ್ನು ತುಂಬಿಸಿಟ್ಟ ಜಾತ್ರೆಯಾಗಿ ಹೋಗುತ್ತಿತ್ತು, ಆ ರಾತ್ರಿಯ ಮಾರುಕಟ್ಟೆ. ಅದೊಂದು ರೀತಿಯ ಲಲಿತ ಕಲೆ, ಸಂಸ್ಖೃತಿಯ ಪ್ರದರ್ಶನ ಮತ್ತು ಮಾರಾಟದಂತೆ ಕಂಡರೆ, ಅದೆ ರಸ್ತೆಯಲ್ಲಿ ಅದರ ಬೆನ್ನಲ್ಲೆ ಸೇವಾ ಮನರಂಜನೆಯ ಹೆಸರಿನಡಿ ಮತ್ತೊಂದು ಕತ್ತಲೆಯ ಬೆತ್ತಲೆ ಪ್ರಪಂಚ! ವಿಪರ್ಯಾಸವೆಂದರೆ ಎರಡು ಸಮಾನಾಂತರವಾಗಿ ಒಂದೆ ಹೊತ್ತಿನಲ್ಲೆ ಒಟ್ಟಾಗಿ ತಂತಮ್ಮ ಸ್ಥಿತಿಯಲಿ ಅಸ್ತಿತ್ವದಲಿದ್ದುಕೊಂಡೆ, ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ ಹಾಗೆ ತಮ್ಮ ತಮ್ಮ ವ್ಯವಹಾರದಲ್ಲಿ ಏನೂ ನಡೆದಿಲ್ಲದ ಹಾಗೆ ನಿರತವಾಗಿದ್ದುದ್ದು!

ಇನ್ನು ಸಿಲೋಮಿನ ಹಗಲಿನ ವಾಣಿಜ್ಯವೂ ಸೇರಿಬಿಟ್ಟರೆ – ಎರಡಲ್ಲ, ಮೂರು ಪ್ರಪಂಚಗಳ ತ್ರಿವಳಿ ನರ್ತನ! ಬಯಲಾಟದ ಪಾತ್ರಗಳಂತೆ ಪ್ರತಿಯೊಂದು ತಮ್ಮ ತಮ್ಮ ಪಾತ್ರ ನಿಭಾಯಿಸುತ್ತ , ನಿರ್ಲಿಪ್ತವಾಗಿ ಸಾಗಿದ್ದನ್ನು ಗಮನಿಸಿದರೆ, ಅದೇನೂ ಯಾಂತ್ರಿಕವಾಗಿ ಹಾಗೆ ಸಾಗುತ್ತಿದೆಯೆ? ಅಥವ ಅದನ್ನು ನಡೆಸುತ್ತಿರುವ ಹಿನ್ನಲೆ ವ್ಯವಸ್ಥೆಯೆ ಹಾಗೆ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆಸುತ್ತಿದೆಯೊ ಹೇಳಬರದ ಪರಿಸ್ಥಿತಿ. ಸ್ಥಳೀಯ ಕೆಲವರ ಗೊಣಗಾಟವನ್ನೆ ನಂಬುವುದಾದರೆ, ಇಡಿ ‘ಸರ್ವಿಸ್ ಇಂಡಸ್ಟ್ರಿ’ ಪೂರ್ಣವಾಗಿ ಒಬ್ಬರ ಹತೋಟಿಯಲ್ಲಿರುವ ಮಾಫಿಯ ತರದ ವ್ಯವಹಾರವಂತೆ…ಅಲ್ಲಿ ಯಾವ ಶೋಗೆ ಹೊಕ್ಕರೂ ಎಲ್ಲವು ಒಬ್ಬನ ಅಧೀನದಲ್ಲೆ ಇರುವ ಕಾರಣ ಕಡೆಗೆಲ್ಲ ಹೋಗಿ ಸೇರುವುದು ಅವನ ಪಾದದಡಿಯೆ ಅಂತೆ! ಶ್ರೀನಾಥನಿಗೇನೊ, ಅದು ಬರಿಯ ಸರ್ವಿಸ್ ಇಂಡಸ್ಟ್ರಿಗೆ ಮಾತ್ರವಲ್ಲ, ಅಲ್ಲಿಯ ರಾತ್ರಿಯ ಮಾರುಕಟ್ಟೆಗೂ , ಅಷ್ಟೇಕೆ ಹಗಲಿನ ವಾಣಿಜ್ಯಕ್ಕೂ ಅನ್ವಯ ಎಂದೆ ಗುಮಾನಿ!

ಅದೇನೆ ಇದ್ದರೂ ತೀರಾ ಬೇರೆಯಾದ, ಒಂದಕ್ಕೊಂದು ನೇರ ಸಂಬಂಧವೇ ಇಲ್ಲದ ಮತ್ತು ಅಷ್ಟೆ ಬೇರೆಯ ಸ್ತರದ ಈ ಮೂರು ಐಹಿಕ ಪ್ರಪಂಚಗಳು ಒಂದರ ಪಕ್ಕ ಒಂದು ವ್ಯವಹಾರ ನಡೆಸಿರುವ ಪರಿಯೆ ಶ್ರೀನಾಥನಿಗೆ ವಿಸ್ಮಯ. ಮೇಲು ನೋಟಕ್ಕೆ ಆ ಮೂರು ಬೇರೆಯೆ ಸಮಾನಾಂತರದಲ್ಲಿರುವ ಪ್ರಪಂಚವೆಂದು ಕಂಡರೂ ಅವೂ ಮೂರೂ ಇಲ್ಲಿ ಅದು ಹೇಗೊ ಒಂದಕ್ಕೊಂದು ಕೊಂಡಿಯ ಹಾಗೆ ಬೆಸೆದುಕೊಂಡು ಪೂರಕವಾಗಿರುವಂತೆಯೂ ಭಾಸವಾಗುತ್ತದೆ. ಆದರೆ ಆ ಕೊಂಡಿಯೆಲ್ಲೆಂದು ಕಾಣಲಾಗದ, ಕೈಯಿಡಲಾಗದ ಸ್ಥಿತಿ. ಮೊದಲಿಗೆ ಕೊಂಡಿಯಿದೆಯೊ ಇಲ್ಲವೊ ಎಂದು ಹೇಳಲೆ ನೂರೆಂಟು ತರ್ಕ, ವಿತರ್ಕಗಳ ತಕರಾರು. ಭೌತಿಕವಾಗಿ ಮೂರೂ ಒಟ್ಟಾಗಿರುವುದನ್ನೆ ಕೊಂಡಿಯೆನ್ನಬಹುದಾದರೆ – ಅದೊಂದು ಮಾತ್ರವೆ ತರ್ಕದ ನಿಲುಕಿಗೆಟಕುವ ಸಾಕ್ಷಿಯಾಗಿ ಕಾಣಿಸುತ್ತದೆ; ಅಥವಾ ಶ್ರೀನಾಥನಿಗೆ ಮಾತ್ರ ಹಾಗನಿಸಿತ್ತೊ, ಅವನಿಗೂ ಅಸ್ಪಷ್ಟ. ಅವನ ಕೆಳಗೆ ಕೆಲಸ ಮಾಡುವ ಸುರ್ಜಿತ್ ಕುಮಾರನೊಂದಿಗೆ ಒಮ್ಮೆ ಇದೆ ವಿಷಯವನ್ನು ಔಪಚಾರಿಕವಾಗಿ ಚರ್ಚಿಸುವಾಗ -‘ಅದರಲ್ಲೇನಿದೆ ಕಾಣದ್ದು ಶ್ರೀನಾಥ ಜಿ…? ತುಂಬಾ ಸಿಂಪಲ್ ಲಾಜಿಕ್ ಅಲ್ವಾ? ಹಗಲೆಲ್ಲಾ ಸಿಲೋಂನಲ್ಲಿ ದುಡಿದವರಿಗೆ ಅವರದೆ ಆದ ಪರ್ಸನಲ್ ಲೈಫ್ ಇರುತ್ತದಲ್ಲವೆ? ಎಲ್ಲಾ ಅವರವರ ‘ಪಾಟ್ಪೋಂಗ್’ ಹುಡುಕಿಕೊಂಡು ತಾನೆ ಹೋಗುವುದು? ಕೆಲವರಿಗೆ ಮನೆ ಸಂಸಾರದಲ್ಲಿ, ಇನ್ನು ಕೆಲವರಿಗೆ ಈ ರಾತ್ರಿ ರಾಣಿ ಬೀದಿಗಳಲ್ಲಿ, ಮತ್ತಲವರಿಗೆ ಇನ್ನೆಲ್ಲೊ….ಆದರೆ ‘ಪಾಟ್ಪೋಂಗ್’ ಒಂದೆ ಜೀವನ ಆಗಲ್ಲವಲ್ಲಾ…ಆ ‘ಪಾಟ್ಪೋಂಗ್ ಲೈಫು’ ನೆಟ್ಟಗಿರಬೇಕಾದ್ರೆ ಬೇರೆಲ್ಲಾ ತರದ ತೆವಲು, ಆಸೆಗಳು ತೀರಬೇಕು…ಅದನ್ನ ತೀರ್ಸೋಕೆ ಈ ನೈಟ್ ಮಾರ್ಕೆಟ್ಟೆಂಬ ಮಾಯಾಜಾಲ…ಹಾಗೆ ನೋಡಿದ್ರೆ, ಈ ಮೂರು ಒಂದು ಬಿಟ್ರೆ ಇನ್ನೊಂದು ಇಲ್ವೆ ಇಲ್ಲ..ದೇ ಫಾರ್ಮ್ ಏ ಟ್ರೂ ಆಂಡ್ ಬ್ಯುಟಿಫುಲ್ ‘ ಸಿಲೋಮ್ ಗೋಲ್ಡನ್ ಟ್ರೈಯಾಂಗಲ್ ಬೆಲ್ಟ್’ ಸಾರ್…ದೇ ಫೀಡ್ ಈಚ್ ಅದರ…’ ಅವನ ವಾದದಲ್ಲಿ ಸತ್ಯವಿತ್ತೊ ಇಲ್ಲವೊ, ಅದನ್ನು ಕೇಳಿದ ಶ್ರೀನಾಥನಿಗೆ ‘ಹೌದಲ್ಲಾ..ಇದೂ ಒಂದು ತರ ನಿಜವಲ್ಲವ’ ಎಂದನಿಸಿತ್ತಾದರೂ ಬರಿಯ ಸರಳ ವಾದದ ತರ್ಕದ ಮಟ್ಟಿಗೆ ಅದು ಸರಿಯೆನಿಸಿತಷ್ಟೆ; ಆಳದ ವಿವರಗಳಿಗೆ ಹೊಕ್ಕರೆ ಎಲ್ಲಾ ಸಂಕೀರ್ಣತೆಗಳಿಗೂ ಅದು ಉತ್ತರವಾಗಲಾರದೆನಿಸಿತು. ಹಾಗೆಂದು ಅವನ ವಾದದ ತಿರುಳನ್ನು ತಿರಸ್ಕರಿಸಲೂ ಆಗದೆ ಇನ್ನಷ್ಟು ಗೊಂದಲಕ್ಕೆ ಬಿದ್ದ.
………..

ಹೀಗೆಲ್ಲಾ ಯೋಚನೆಯ ಗಾಳದೊಳಗೆ ಸಿಕ್ಕವನಿಗೆ ತಟ್ಟನೆ ಬೆರಳ ಮೇಲೆ ಬಿದ್ದ ತಣ್ಣನೆಯ ಹನಿಯೊಂದು ವಾಸ್ತವಕ್ಕೆಳೆದು ತಂದಿತು. ಅರೆರೆ…ಕಿತ್ತಳೆ ರಸ ಕುಡಿಯುತ್ತ ಕೈಗೆ ಚೆಲ್ಲಿಕೊಂಡೆನೆ ಎಂದು ಗಾಬರಿಯಾಗಿ ನೋಡಿದವನಿಗೆ, ರಸವೆಲ್ಲೂ ಕಾಣದೆ ಅದು ಮೇಲಿಂದ ಬಿದ್ದ ಮೋಡದ ತನಿ ಎಂದರಿವಾಯ್ತು. ಆ ಹೊತ್ತಿಗೆ ಹೆಪ್ಪುಗಟ್ಟಿದಂತೆ ಮೋಡಗಳೆಲ್ಲ ಕ್ರೋಢಿಕರಿಸಿಕೊಂಡು ಬೆಳಕಿನ ಚೀಲದ ಸುತ್ತ ಸಂಜೆ ಮಬ್ಬಿನ ಮಸುಕಿನ ತೆಳು ಹಾಳೆಯೊಂದನ್ನು ಹಾಸಿದಂತೆ, ರಾಚುವ ಬೆಳಕು ಮರೆಯಾಗಿ ಭಾರದ ಸಂಜೆಯ ಅವತಾರ ಹಿಡಿಯಿತು. ಅದಕೆ ಪೂರಕವಾಗೆಂಬಂತೆ ಮೋಡದ ಚೀಲ ಹರಿದು ದಪ್ಪ ಪಪ್ಪ ಹನಿಗಳ ಕಣಜ ತೊಪತೊಪನೆ ಉದುರತೊಡಗಿದಾಗ ‘ಓಹ್ ! ಮಳೆ ಈಗಲೆ ಬಂದು ಬಿಟ್ಟಿತೆ?’ ಎಂದುದ್ಗರಿಸಿ ಜೋರಾಗುವ ಮುನ್ನವೆ ಸಾಲಾಡೆಂಗಿನ ಸ್ಟೇಶನ್ನಿನ ಒಳಗೆ ಸೇರಿಕೊಳ್ಳುವ ಹವಣಿಕೆಯಲ್ಲಿ ಓಡಿ, ಕಿರಿದಾದ ಎಸ್ಕಲೇಟರಿಗೆ ತೂರಿಕೊಂಡು ಹನಿಗಳಿಂದ ಒದ್ದೆಯಾದ ಕನ್ನಡಕ ಮತ್ತು ಮುಖಗಳನ್ನು ಒರೆಸಿಕೊಂಡ. ವಿಶಾಲವಾದ ಸ್ಟೇಶನ್ನಿನ್ನ ಮುಂದಾವರಣದಲ್ಲಿ ಆಗಲೆ ಸೇರುತ್ತಿದ್ದ ಜನಸಂದಣಿಯ ನಡುವೆ ಜಾಗ ಮಾಡಿಕೊಂಡು ನಿಲ್ಲುವ ಹೊತ್ತಿಗೆ ಧಾರಾಕಾರವಾಗಿ ಸುರಿಯತೊಡಗಿತು ಮಳೆ.

(ಇನ್ನೂ ಇದೆ)

https://nageshamysore.wordpress.com/00163-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-02/

One thought on “00162. ಕಥೆ: ಪರಿಭ್ರಮಣ..(01)”

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s