00164. ಕಥೆ: ಪರಿಭ್ರಮಣ..(03)

ಕಥೆ: ಪರಿಭ್ರಮಣ..(03)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

ಕಥೆ: ಪರಿಭ್ರಮಣ..(03)

(ಪರಿಭ್ರಮಣ..(02)ರ ಕೊಂಡಿ – https://nageshamysore.wordpress.com/00163-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-02/ )

ಭಾಗ 02. ಆಕ್ರಮಣ :
________________

ಅಷ್ಟೊತ್ತಿನವರೆಗೂ ಸುರಿಯುತ್ತಲೆ ಇದ್ದ ಧಾರಾಕಾರ ಮಳೆಯ ಜತೆಗೆ ಬೀಸುತ್ತಿದ್ದ ತಂಗಾಳಿಯೂ ಸೇರಿ ಬಿಸಿ ಬಾಣಲೆಯಲಿಟ್ಟಂತಿದ್ದ ಮೈಯಿಂದ ಹರಿಯುತ್ತಿದ್ದ ಬೆವರಿನ ಪದರವೆಲ್ಲಾ ಆವಿಯಾದಂತೆ ಸರಿದು ಹೋಗಿ ವಾತಾವಾರಣ ಈಗ ಹೆಚ್ಚು ಸಹನೀಯವಾಗಿ ತಂಪಾಗಿತ್ತು. ಮಳೆಯ ಸದ್ದಿನೊಂದಿಗೆ ಸುತ್ತ ಕಣ್ಣಾಡಿಸುತ್ತಲೆ ನೋಡಿದ ಶ್ರೀನಾಥನಿಗೆ ಅಲ್ಲಲ್ಲಿ ಚದುರಿದಂತೆ ನಿಂತಿದ್ದ ಹತ್ತಾರು ಜನರನ್ನು ಬಿಟ್ಟರೆ ಹೆಚ್ಚು ಜನರೇನೂ ಕಾಣಲಿಲ್ಲ. ಇಷ್ಟು ಹೊತ್ತು ಹತ್ತಿರದಲ್ಲೆ ನಿಂತಿದ್ದ ಟ್ಯಾಕ್ಸಿ ಡ್ರೈವರನಿಗೆ ಯಾವುದೊ ಪೋನ್ ಬಂದ ಕಾರಣ ಮಾತಾಡುತ್ತಲೆ ‘ಬೈ’ ಹೇಳುತ್ತ ಕೈಯಲೊಂದು ಕೊಡೆ ಹಿಡಿದುಕೊಂಡು, ಟ್ರೈನು ಸ್ಟೇಷನ್ನಿನ ಹೊರಗೆ ಹೊರಟುಹೋದ. ಬಹುಶಃ ಯಾವುದೊ ಗಿರಾಕಿಯ ಕರೆಯಿರಬಹುದೇನೊ..ಮತ್ತೇನು ಮಾಡಲೂ ತೋಚದೆ ಶ್ರೀನಾಥ ಅಲ್ಲೆ ಗ್ರಾಹಕರಿಗಿಟ್ಟ ಮಾಹಿತಿ ಪ್ರಚಾರ ಪತ್ರಗಳಲ್ಲಿ ಇಂಗ್ಲೀಷಿನ ಒಂದೆರಡು ಕರಪತ್ರ ಹುಡುಕಿ ನೋಡುತ್ತಾ ನಿಂತ. ಅದೇ ಸಮಯಕ್ಕೆ ಆ ಡ್ರೈವರನಿದ್ದ ಜಾಗಕ್ಕೆ ಯಾರೊ ಬಂದಂತಾಗಿ ನೋಡಿದರೆ – ಅಪರೂಪದ ಅತಿಶಯ ಸೌಂದರ್ಯರಾಶಿಯೆ ಎಂದೆನ್ನಬಹುದಾದ ಯುವತಿಯೊಬ್ಬಳು ಪೇಪರ ಕರ್ಚೀಫಿನಿಂದ ಮುಖ ವರೆಸುತ್ತಾ ನಿಂತಿದ್ದಾಳೆ. ಅಬ್ಬಾ…ಅದೇನು ರೂಪ! ದೇವಲೋಕದ ಅಪ್ಸರೆಯೆ ಭುವಿಗಿಳಿದು ಬಂದಳೇನೊ ಎಂಬಂತಿದ್ದ ಆ ಅದ್ಭುತಾತಿಶಯದ ರೂಪನ್ನು ನೊಡುತ್ತಲೆ ಅವಾಕ್ಕಾಗಿ ದಿಗ್ಭ್ರಾಂತನಂತೆ ನಿಂತುಬಿಟ್ಟ ಶ್ರೀನಾಥ…ಆ ಸೌಂದರ್ಯವುಂಟು ಮಾಡಿದ ‘ಶಾಕ್’ನ ಪರಿ ಹೇಗಿತ್ತೆಂದರೆ ತಲೆಯೆತ್ತಿ ಹಾಗೆ ನೇರ ದಿಟ್ಟಿಸುವುದು ಸಂಸ್ಕಾರ, ಸಭ್ಯತೆಯಲ್ಲವೆಂದು ತಿಳಿದೂ ನೋಡದಿರಲಾಗದ ಚಡಪಡಿಕೆಯ ಸ್ಥಿತಿ…ಅವಳ ಅಪ್ರತಿಮ ರೂಪಿಗೆ ಶ್ರೀನಾಥನಿಗೆ ಗರ ಬಡಿದಂತಾಗಿ, ಅವಳ ಮೇಲಿಂದ ಕಣ್ತೆರೆಯಲೆ ಆಗಲಿಲ್ಲ. ಕರಪತ್ರವನ್ನು ಅಡ್ಡ ಹಿಡಿದು ಓದುವ ನೆಪದಲ್ಲಿ ಅವಳ ಸುಂದರ ಮುಖ, ಸಪೂರ ಸೂಕ್ತಾಕಾರದ ದೇಹ, ಅವಳು ಹಾಕಿದ್ದ ಸ್ಕರ್ಟು, ಮತ್ತದಕ್ಕೊಂದುವ ಬ್ಲೌಸು ಮತ್ತು ಮೇಲಿನ ತೆಳು ಕೋಟು ಅವಳೇನು ಆಕಾಶದಿಂದ ಇಳಿದು ಬಂದ ಆಧುನಿಕ ಅಪ್ಸರೆಯೊ ಅನಿಸುವಂತೆ ಮಾಡಿತ್ತು. ಎಲ್ಲಕ್ಕಿಂತಲು ಆಕರ್ಷಕವಾಗಿ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಕಣ್ಣುಗಳು ಮೇಕಪ್ಪಿನ ದೆಸೆಯಿಂದ ಇನ್ನೂ ಆಕರ್ಷಣೀಯವಾಗಿ ಕಾಣುತ್ತಿದ್ದರೆ, ಬಣ್ಣ ಹಚ್ಚಿದ ಅಂತಹ ಸುಂದರ ತುಟಿಗಳನ್ನು ಅವನ ಜನ್ಮದಲ್ಲೆ ನೋಡಿರಲಿಲ್ಲವೇನೊ ಅನಿಸುವಂತಿತ್ತು. ಆ ಮೂಗಂತೂ ಗ್ರೀಕ್ ದೇವತೆಯಿಂದ ಎರವಲು ಪಡೆದು ಅವಳ ಮುಖದ ಮೇಲೆ ನೇರ ನೆಟ್ಟ ಹಾಗೆ ಕಾಣಿಸುತ್ತಿತ್ತು. ಥಾಯಿಯಲ್ಲೂ ಇಷ್ಟು ಸುಂದರಿಯರಿರುವುದು ಸಾಧ್ಯವೆಂದು ತನಗೆ ಗೊತ್ತೆ ಇರಲಿಲ್ಲವಲ್ಲ? ಎಂದು ಸೋಜಿಗಪಡುತ್ತಾ, ನಾಚಿಕೆ ಬಿಟ್ಟು ಆ ಸೌಂದರ್ಯವನ್ನೆ ತದೇಕನಾಗಿ ದಿಟ್ಟಿಸುತ್ತ ನಿಂತುಬಿಟ್ಟ ಶ್ರೀನಾಥನಿಗೆ, ಮಳೆ ಕಡಿಮೆಯಾಗಿ ನಿಂತು ಹೋದದ್ದೂ ಅರಿವಿಗೆ ಬರಲಿಲ್ಲ!

ಇಷ್ಟು ಹೊತ್ತು ಗರ್ಭವೆ ಹರಿದು ಬಸಿರೊಡೆಯುವಷ್ಟು ರೋಷದಲ್ಲಿ ಸುರಿಯುತ್ತಿದ್ದ ಮಳೆ ಈಗ ತಟ್ಟಕ್ಕನೆ ಪಿಟಪಿಟ ಜಿನುಗುವ ಹನಿಯಾಗಿ ಬದಲಾಗಿದ್ದಕ್ಕೆ ಯಾಕೊ ಶ್ರೀನಾಥನ ಮನಸ್ಸು ತುಂಬ ಖೇದಗೊಂಡಿತು. ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಭುವನೈಕ ಸುಂದರಿಯೇನೊ ಅನ್ನುವಂತಾ ಹೆಣ್ಣೊಬ್ಬಳನ್ನು ನೋಡುವ ಅವಕಾಶ ಸಿಕ್ಕಿದ್ದಾಗ ಇನ್ನಷ್ಟು ಹೊತ್ತು ರಚ್ಚೆ ಹಿಡಿಯುವುದು ಬಿಟ್ಟು, ಬಂದಷ್ಟೆ ವೇಗವಾಗಿ ನಿಂತುಹೋಗಿದ್ದು ಪ್ರಕೃತಿ ಮಾಡಿದ ಕ್ಷಮಿಸಲಾಗದ ಅನ್ಯಾಯವೆಂದೆ ಅನಿಸಿತು. ಹಾಗೆ ನೋಡುತ್ತ ಏನು ಮಾಡುತ್ತಿದ್ದನೆಂದು ಅವನಿಗೂ ಗೊತ್ತಿರಲಿಲ್ಲ; ಆದರೆ ಆ ಅಪರೂಪದ ಸೌಂದರ್ಯ ರಾಶಿಯನ್ನು ಇನ್ನೊಂದಷ್ಟು ಹೊತ್ತು ನೋಡುವ ಅವಕಾಶ ಕುಂಠಿತವಾಯ್ತಲ್ಲ ಎಂಬ ಸಂಕಟಕ್ಕೆ ಹೊಟ್ಟೆಯೊಳಗೇನೇನೊ ಕಲಸಿದಂತಾಗಿ ನಿರಾಸೆಯ ಮೋಡ ಒಡೆದು ಚೂರಾದಂತೆ ನೀರವ ಭಾವ ಆವರಿಸಿಕೊಂಡುಬಿಟ್ಟಿತು.. ಸರಿ, ಹಣೆಯಲ್ಲಿ ಬರೆದಂತೆ ತಾನೆ ಎಲ್ಲಾ ಲಭ್ಯ? ಎಂಬ ನಿರಾಶವಾದದ ಕರ್ಮ ಸಿದ್ದಾಂತವನ್ನು ಅಪ್ಪಿಕೊಳ್ಳುತ್ತ ಮತ್ತೆ ಬ್ರೀಫ್ಕೇಸನ್ನು ಕೈಗೆತ್ತಿಕೊಂಡು ಹೊರಡಲಣಿಯಾದ, ಆಕೆ ಇನ್ನೂ ಅಲ್ಲೆ ನಿಂತಿದ್ದರು…

ಜಿನುಗುತ್ತಿದ್ದ ಮಳೆಯಲ್ಲೆ ಬೇಗ ಮನೆಯಾದರೂ ಸೇರಿಕೊಂಡು ಒಂದು ಬಿಯರಾದರೂ ಇಳಿಸೋಣವೆನ್ನುತ್ತಾ ಹೊರಟವ ಎಸ್ಕಲೇಟರು ಇಳಿಯುವಾಗಲೂ ಮೈಮೇಲಿನ ಪರಿವೆಯೆ ಇಲ್ಲದವನ ಹಾಗೆ ನಿಂತಿದ್ದ, ಇಳಿಯುವ ತುದಿ ತಲುಪಿದರೂ. ಸತತ ಚಲನೆಯ ಆ ಮೆಟ್ಟಿಲಿನ ದೂಡುವಿಕೆಯಿಂದ ಮುಗ್ಗುರಿಸುವಂತಾಗುವವರೆಗೂ ಮೈ ಮರೆತಂತಿದ್ದವ, ಹೇಗೊ ಬೀಳದಂತೆ ತಡಬಡಾಯಿಸಿಕೊಂಡವನೆ ಮುಚ್ಚಿದ ಬಾಗಿಲಿನ ಅಂಗಡಿಯೊಂದರ ಮುಂದೆ ನಿಂತು ಮೈ ಕೊಡವುತ್ತ ಕೊಡೆಯನೆತ್ತಿಕೊಳ್ಳಲು ಬ್ರೀಫ್ಕೇಸ್ ತೆರೆಯಲು ನಿಂತ. ಅಡಿಯಲಿದ್ದ ಪುಟ್ಟ ಕೊಡೆಯನ್ನು ಹೊರ ಸೆಳೆಯುವಾಗ ಯಾರೊ ಹೆಣ್ಣು ದನಿ ಕರೆದಂತೆನಿಸಿದಾಗ ‘ಯಾಕೊ ಈ ದಿನವೆಲ್ಲಾ ಭ್ರಮಾಲೋಕದಲ್ಲಿಯೆ ಸುತ್ತುತ್ತಿರುವಂತೆಯೆ ಇದೆಯಲ್ಲಾ’ ಎಂದು ಹುಡುಕಾಟ ಮುಂದುವರೆಸಿದವನಿಗೆ ಮತ್ತದೆ ಹೆಣ್ಣು ದನಿ ಕರೆದಂತಾದಾಗ, ಅದು ಭ್ರಮೆಯಲ್ಲವೆನಿಸಿ ತಲೆಯೆತ್ತಿ ನೋಡಿದವನೆ ಬೆಚ್ಚಿಬಿದ್ದ…ಅಷ್ಟೊತ್ತು ಅವನು ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದ ಆ ಸುಂದರಿ ಹೆಣ್ಣು ಈಗ ಅವನ ಮುಂದೆಯೆ ನಿಂತಿದ್ದಾಳೆ, ಮತ್ತು ಅವನ ಜತೆಗೆ ಮಾತನಾಡುತ್ತಿದ್ದಾಳೆ.. ! ಶ್ರೀನಾಥನಿಗೆ ಅದು ಕನಸೊ, ನನಸೊ ಎಂದೆ ಅನುಮಾನವಾಯ್ತು. ಮೈ ಜಿಗುಟಿ ನೋಡಿಕೊಂಡರೂ ಅವನಿಗೆ ನಂಬಲೇ ಆಗುತ್ತಿಲ್ಲ. ಆದರೆ ನಂಬಲೆ ಬೇಕೆನ್ನುವಂತೆ ಆ ಹೆಣ್ಣೆ ಸಾಕ್ಷಾತ್ ಅವನ ಮುಂದೆಯೆ ನಿಂತಿದ್ದಾಗಲೂ ಹೇಗೆ ನಂಬದಿರಲು ಸಾಧ್ಯ?

ಇವನ ಕಣ್ಣೆದುರಿಗೆ ನಿಂತಿದ್ದ ಆ ಸುಕೋಮಲೆ ಇವನತ್ತಲೆ ನೋಡಿ ‘ಹಲೊ’ ಎಂದದ್ದೆಂದು ಖಚಿತ ಪಡಿಸಿಕೊಂಡು ಇವನೂ ‘ಹಲೊ, ಯೆಸ್?’ ಎಂದು ಅವಳತ್ತ ಪ್ರಶ್ನಾರ್ಥಕವಾಗಿ ನೋಡಿದ್ದ. ಆಕೆ ತನ್ನ ಅದೆ ಮಧುರವಾದ ರಾಗದ ದನಿಯಲ್ಲಿ ‘ ಸವಾಡಿ ಕಾ…ಪೊಂ ಮೀ ಪನ್ ಹಾ…ಐ ಇನ್ ಪ್ರಾಬ್ಲಮ್…’ ಎಂದು ಮುರುಕು ಇಂಗ್ಲೀಷಿನಲ್ಲು ಸೇರಿಸಿ ಉಲಿದಾಗ ಸದ್ಯ ಇಂಗ್ಲೀಷು ಬರುತ್ತದಲ್ಲ ಅನಿಸಿ ಖುಷಿ ಹಾಗೂ ಸಮಾಧಾನದಿಂದ ‘ ವಾಟ್ ಪ್ರಾಬ್ಲಂ? ನೀಡ್ ಏನಿ ಹೆಲ್ಪ್?’ ಎಂದಿದ್ದ. ಅಮೇಲಿನದೆಲ್ಲಾ ಒಂದು ಚಲನಚಿತ್ರದಂತೆ ನಡೆದುಹೋಗಿತ್ತು. ಅವಳ ಜತೆಗೆ ಹತ್ತಿರದ ರೆಸ್ಟೋರೆಂಟಲಿ ಕೂತು ಕಾಫಿ ಕುಡಿಯುತ್ತ ಅವಳ ಹರುಕು ಮುರುಕು ಭಾಷೆಯಲ್ಲಿ ಅರ್ಥ ಮಾಡಿಕೊಂಡಿದ್ದಿಷ್ಟು – ಅವಳು ಮೂಲತಃ ಬ್ಯಾಂಕಾಕಿನವಳಲ್ಲ, ಚಿಂಗ್ಮಾಯಿಗೆ ಸೇರಿದವಳು ಸಂಬಂಧಿಕರೊಬ್ಬರ ಮನೆ ಹುಡುಕಿಕೊಂಡು ಈ ಮಹಾನಗರಕ್ಕೆ ಬಂದಿದ್ದಳು, ಯಾವುದೊ ಇಂಟರ್ವ್ಯೂ ಅಟೆಂಡ್ ಮಾಡುವ ಸಲುವಾಗಿ. ಆದರೆ ಬರುವಾಗ ಟ್ರೈನಿನಲ್ಲಿ ನೆಂಟರ ಅಡ್ರೆಸ್ಸು ಕಳೆದು ಹೋಗಿ ಕೊನೆಗೆ ಹೇಗೊ ಬಂದು ಲಾಡ್ಜೊಂದರಲ್ಲಿ ಉಳಿದು ಇಂಟರ್ವ್ಯೂ ಮುಗಿಸಿದ್ದಳಂತೆ. ಆದರೆ ಇಲ್ಲಿನ ದುಬಾರಿ ಬೆಲೆಗಳು ಗೊತ್ತಿಲ್ಲದೆ ಇದ್ದಬದ್ದ ದುಡ್ಡೆಲ್ಲ ಖರ್ಚಾಗಿ ಈಗ ಲಾಡ್ಜು ಖಾಲಿ ಮಾಡಿ ಹೊರಡಲು ಮತ್ತು ಟ್ರೈನಿನ ಟಿಕೆಟ್ಟಿಗೂ ದುಡ್ಡಿಲ್ಲದೆ ಅಸಹಾಯಕ ಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಳು… ರೂಮಿನ ಬಾಡಿಗೆ ತೆರಲು ಹಾಗೂ ಟ್ರೈನಿನ ಟಿಕೆಟ್ಟಿಗೆ ದುಡ್ಡು ಸಾಲವಾಗಿ ಕೊಟ್ಟರೆ, ಊರಿಗೆ ಹೋಗುತ್ತಿದ್ದಂತೆ ಮತ್ತೆ ಕಳಿಸಿಕೊಡುವ ಭರವಸೆ ನೀಡುತ್ತಾ ಅಂಗಲಾಚುತಿದ್ದಳು…ಅವಳ ಆ ಕಥೆ ನಿಜವೊ, ಸುಳ್ಳೊ ಅವಳು ಕೇಳಿದರೆ ದುಡ್ಡೇನು, ಏನು ಬೇಕಾದರೂ ಮಾಡುವ ಮನಸ್ಥಿತಿಯಲ್ಲಿದ್ದ ಶ್ರೀನಾಥನ ಆತಂಕವೆ ಬೇರೆ ತರದ್ದಾಗಿತ್ತು – ತಕ್ಷಣ ದುಡ್ಡು ಕೊಟ್ಟರೆ, ಅವಳು ತೆಗೆದುಕೊಂಡು ಹೊರಟುಬಿಡುವಳಲ್ಲಾ? ಎಷ್ಟು ಹೆಚ್ಚು ಸಾಧ್ಯವಿದ್ದರೆ ಅಷ್ಟು ಹೊತ್ತು ಹೆಚ್ಚಾಗಿ ಕಾಲದೂಡುವ ಆಸೆ ಅವಳೊಂದಿಗೆ…ಹೀಗಾಗಿ, ಅವಳ ಸ್ಥಿತಿಯಲ್ಲಿ ಅವಳೊಬ್ಬಳೆ ಹೆಣಗುವ ಬದಲು ತಾನೂ ಅವಳ ಜತೆ ಲಾಡ್ಜಿಗೆ ಬಂದು ದುಡ್ಡು ಕಟ್ಟಿ, ರೈಲಿಗೆ ಹತ್ತಿಸುವೆನೆಂದುಬಿಟ್ಟ. ಬರುವ ಅಗತ್ಯವೇನೂ ಇಲ್ಲವೆಂದು, ಬರಿ ಒಂದು ಸಾವಿರ ಬಾತ್ ಹಣ ಸಾಲ ಕೊಟ್ಟರೆ ಸಾಕೆಂದು ಅವಳೆಷ್ಟು ಬೇಡಿದರೂ ಬಿಲ್ಕುಲ್ ಒಪ್ಪಲಿಲ್ಲ. ಕೊನೆಗೆ ಅವಳೂ ವಿಧಿಯಿಲ್ಲದೆ ಜತೆಗ್ಹೊರಡಲು ಒಪ್ಪಿ ಮುಂದೆ ಹಣ ತೀರಿಸಲು ಬೇಕಾದ ಅಡ್ರೆಸ್ಸು, ಪೋನ್ ನಂಬರ ಬರೆದಿಟ್ಟುಕೊಂಡಳು..

ಸುಂದರಿಯೊಬ್ಬಳ ಜತೆಗಿರುವ ಅವಕಾಶ ಸಿಕ್ಕಿದ್ದೆ ಪ್ರಪಂಚವನ್ನೆ ಮರೆತ ಶ್ರೀನಾಥ ಅಪಾರ್ಟುಮೆಂಟಿಗೂ ಬರುವಂತೆ ಆಹ್ವಾನಿಸಿದರೂ, ಆಕೆ ನಯವಾಗೆ ತಿರಸ್ಕರಿಸಿ ಅಂದೆ ರೈಲು ಹಿಡಿಯಬೇಕಾದ ಅವಸರ ಅನಿವಾರ್ಯದ ನೆಪ ಹೇಳಿ ಅಲ್ಲಿಂದ ಮೂರು ಸ್ಟೇಷನ್ ಮುಂದೆಯಿರುವ ‘ಮಾಬುಕಾಂಗ್ (ಎಂಬಿಕೆ)’ ಹತ್ತಿರದ ಬರಿ ರೂಮುಗಳೆ ತುಂಬಿರುವ ಲಾಡ್ಜಿನಂತಹ ಜಾಗಕ್ಕೆ ಕರೆದೊಯ್ದಿದ್ದಳು. ಅಲ್ಲಿ ತಲಪುತ್ತಿದ್ದಂತೆ ಅವನಿಂದ ಹಣ ಪಡೆದು ಆಫೀಸಿಗೆ ಕಟ್ಟಿ ಬರುವೆನೆಂದು ಹೇಳಿ ಹೋದವಳು, ಕೀ ಕೊಟ್ಟು ಹೋಗೆಂದರೂ ಕೊಡದೆ ಅಲ್ಲೆ ಬಾಗಿಲಲ್ಲೆ ಕಾಯುವಂತೆ ಹೇಳಿ ಹೋಗಿದ್ದಳು. ಸುಮಾರು ಹತ್ತು ನಿಮಿಷದ ನಂತರ ಹಿಂದಿರುಗಿ ಬಂದವಳೆ ಜತೆಯಲ್ಲಿ ಕರೆದುಕೊಂಡು ರೂಮೊಂದರತ್ತ ನಡೆದು ಬಾಗಿಲು ತೆಗೆದು ಇದೆ ರೂಮು ಎಂದಾಗ ಅವನಿಗೆ ಅಚ್ಚರಿಯೆ ಆಗಿತ್ತು. ಅಲ್ಲಿ ಮಂಚ ಹಾಸಿಗೆಯಿದ್ದ ಜಾಗ ಮತ್ತಿತರ ಪರಿಕರಗಳು ಹೊಸದಾಗಿ ಬಂದಾಗ ಹೇಗಿರುವುದೊ ಹಾಗೆ ಇದ್ದವು. ಸಾಲದೆಂಬಂತೆ ಅಲ್ಲೆಲ್ಲೂ ಅವಳ ಲಗೇಜಿನ ಚೀಲವಾಗಲಿ, ಅದರ ಕುರುಹಾಗಲಿ ಕಾಣದೆ, ಅವಳನ್ನೆ ನೇರವಾಗಿ ಕೇಳಿದಾಗ , ತನಗ್ಯಾವ ಲಗೇಜು ಇಲ್ಲವೆಂದು ಒಂದೆರಡೆ ದಿನವಾದ್ದರಿಂದ ಉಟ್ಟ ಬಟ್ಟೆಯ ಜತೆ ಮತ್ತೊಂದು ಕೈ ಚೀಲವೆ ಸಾಕಾಗಿ ಬೇರೇನೂ ತರಲಿಲ್ಲವೆಂದಾಗಲೆ ಯಾಕೊ ಅನುಮಾನವಾಗಿತ್ತು. ಇವಳೇನಾದರೂ ಈಗ ತಾನೆ ಹೊಸದಾಗಿ ಈ ರೂಮು ತೆಗೆದುಕೊಂಡು ತನ್ನಿಂದ ದುಡ್ಡು ಕೀಳಲು ಹೀಗೆ ಏಮಾರಿಸಿರಬಹುದೆ ಎಂಬ ಸಂಶಯ ತನ್ನ ಬೀಜವನ್ನು ಬಿತ್ತಿ, ಅದೆ ಅನುಮಾನದಲ್ಲೆ ಅವಳು ಹೇಳಿದ್ದೆಲ್ಲ ನಿಜವೆ, ಅಥವಾ ಕಟ್ಟುಕಥೆಯೆ ಎಂದು ಗದರಿಸಿದ. ಕೊಂಚ ವಿಚಲಿತಳಾದಂತೆ ಕಂಡರೂ, ತಾನು ಹೇಳಿದ್ದೆಲ್ಲ ನಿಜವೆ ಎಂದು ಸಾಧಿಸುತ್ತಿದ್ದವಳನ್ನು ಕಂಡು ಅನುಮಾನ ಇನ್ನೂ ಹೆಚ್ಚಾಗಿ, ‘ನಿಜ ಹೇಳು ಇಲ್ಲದಿದ್ದರೆ ಈಗ ಕೊಟ್ಟ ಹಣವನ್ನು ವಾಪಾಸು ಕೊಡು’ ಎಂದು ಬೆದರಿಸಿದಾಗ ಸ್ವಲ್ಪ ಹೆಚ್ಚು ಕಂಗೆಟ್ಟಂತೆ ಕಂಡಳು… ‘ ಪ್ಲೀಸ್..ಹಣ ಮಾತ್ರ ಕೇಳಬೇಡ..ನನಗೆ ಅದರ ಅವಶ್ಯಕತೆ ತುಂಬಾ ಇದೆ…’ ಎಂದ ದನಿಯಲ್ಲೆ ಯಾಚನೆ, ತಪ್ಪಿತಸ್ತ ಭಾವನೆ ಪ್ರತಿಧ್ವನಿಸಿದಂತಾಗಿ ಅವಳ ಮಾತಿಗೆ ಒಗೊಡದವನಂತೆ ಅವಳ ಹಣವಿಟ್ಟುಕೊಂಡ ಕೈ ಚೀಲವಿಟ್ಟಿದ್ದ ಕಡೆಗೆ ನಡೆದ. ಇನ್ನವನು ಅಲ್ಲಿಂದ ಹಣೆ ವಾಪಸ್ಸೆತ್ತಿಕೊಳ್ಳುವನೆಂದು ಖಾತ್ರಿಯಾಗುತಿದ್ದಂತೆ ಬೆದರಿದ ಹರಿಣಿಯ ಹಾಗೆ ಓಡಿ ಬಂದು ಕೈ ಚೀಲವನ್ನು ಕಿತ್ತುಕೊಂಡವಳೆ, ಅವನ ಬಲದ ಕೈಯನ್ನು ತನ್ನ ಮೃದುವಾದ ಅಂಗೈಗಳಲ್ಲಿ ಭದ್ರವಾಗಿ ಹಿಡಿದುಕೊಂಡುಬಿಟ್ಟಳು..ಅಲ್ಲಿಯತನಕ ಯಾವುದೊ ಆವೇಶದಲ್ಲಿ ಮುನ್ನುಗ್ಗುತ್ತಿದ್ದವ, ಅವಳ ಕೈಯ ಸ್ಪರ್ಶವಾಗುತ್ತಿದ್ದಂತೆ ಯಾವುದೊ ಮಾಂತ್ರಿಕ ಶಕ್ತಿಯ ಬಲೆಯಡಿ ಸಿಲುಕಿದವನಂತೆ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ನಿಂತುಬಿಟ್ಟ..! ಸರಕ್ಕನೆ ಅವನಲ್ಲಾದ ಈ ಬದಲಾವಣೆಯ ಮೃದುತ್ವವನ್ನು ಗಮನಿಸಿದವಳಂತೆ ಅವಳು ತನ್ನ ಹಿಡಿತವನ್ನು ತುಸು ಮೃದುವಾಗಿಸಿ ಇನ್ನಷ್ಟು ಹತ್ತಿರಕ್ಕೆ ಬಂದು ನಿಂತಳು..ಪರಸ್ಪರ ಬಿಸಿಯುಸಿರು ತಗುಲುವಷ್ಟು ಹತ್ತಿರ ಬಂದು ನಿಂತ ಅನುಭೂತಿಗೆ ಶ್ರೀನಾಥನಿಗೆ ಪ್ರಜ್ಞೆಯೆ ಅವಜ್ಞೆಯಾಗಿ ಯಾವುದೊ ಮಾಯ ಲೋಕದಲ್ಲಿ ತೇಲಿ ಹೋದ ಅನುಭವ…ಅವಳ ಮೈಯಿಂದ ಹೊಮ್ಮುತ್ತಿದ್ದ ಸುಗಂಧಭರಿತ ಸುವಾಸನೆ, ಅಡಿಯಿಂದ ಮುಡಿಯವರೆಗೆ ಆವರಿಸಿ ಜ್ಞಾನೇಂದ್ರಿಯ ಕರ್ಮೇಂದ್ರಿಯಗಳೆಲ್ಲ ನಿಶ್ಚೇತನಗೊಂಡಂತಾಗಿ ಇಹಪರಗಳೆಲ್ಲ ಮರೆತುಹೋದ ಅಯೋಮಯ ಲೋಕವೊಂದರಲ್ಲಿ ಕಳೆದುಹೋದವನಂತೆ ಸ್ತಂಭೀಭೂತನಾಗಿ ನಿಂತುಬಿಟ್ಟ. ಅವಳು ಇನ್ನಷ್ಟು ಸಮೀಪ ಸರಿದವಳೆ ಅವನ ಹೆಗಲ ಮೇಲೆ ತಲೆಯಿರಿಸಿಕೊಂಡು ಅವನನ್ನು ಮೃದುವಾಗಿ ಅಪ್ಪಿಕೊಳ್ಳುವವಳಂತೆ ಸಾಮೀಪ್ಯದಲ್ಲಿ ಅಂಟಿಕೊಂಡೆ ನಿಂತುಕೊಂಡು ಕೈಲಿದ್ದ ಚೀಲವನ್ನು ಹತ್ತಿರವಿದ್ದ ಸ್ಟೂಲಿನ ಮೇಲಿರಿಸಿದಳು.

ಆ ಹೊತ್ತಿನ ತನಕ ಯಾವುದೊ ಸಂಸ್ಕಾರದ ಒತ್ತಾಯದಡಿ ನಿಯಂತ್ರಣದ ಕಡಿವಾಣ ಹಾಕಿಕೊಂಡಿದ್ದವನಿಗೆ ಅವಳ ಈ ಚರ್ಯೆಗಳೆಲ್ಲ ಉತ್ತೇಜಕ ಪ್ರೇರಣೆಗಳಂತೆ ತೋರಿ, ಪಕ್ಕನೆ ಮನದಲೇನೇನೊ ಆಸೆ ಉದಿಸಿ ಅಂತರಂಗದ ಕಾಮಪ್ರಜ್ಞೆ ಜಾಗೃತಗೊಂಡು ನಖಶಿಖಾಂತ ಬಿಸಿ ಕಂಪನದ ಮಜ್ಜನವಾಗಿ ಹೋದಂತೆ ದ್ರವಿಸಿ ಹೋಯ್ತು. ಅದೆ ತುರುಸಿನಲ್ಲಿ ಅವಳ ಕೈ ಹಿಡಿದು ಮತ್ತಷ್ಟು ಹತ್ತಿರಕ್ಕೆಳೆದುಕೊಂಡಾಗ ಅವಳ ಕಣ್ಣು ಕುಕ್ಕುವ ಸೌಂದರ್ಯದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಅನಿಸಿತು…ಹತ್ತಿರವೆಳೆದುಕೊಂಡರೂ ಪ್ರತಿಭಟಿಸದಿದ್ದ ಅವಳ ಪ್ರತಿಕ್ರಿಯೆ ಮತ್ತಷ್ಟು ಹುರುಪಿತ್ತು ಅದನ್ನು ತನ್ನೊಡನೆಯ ಸಾಂಗತ್ಯಕ್ಕೆ ನೀಡಿದ ಮೌನ ಸಮ್ಮತಿಯ ಮುದ್ರೆಯೆಂದೆ ಭಾವಿಸಿ ಇಡೀ ದೇಹವೆ ಹೂವ್ವಂತೆ ಹಿಗ್ಗಿ ಅರಳಿಹೋಯ್ತು..ಇಂತಹ ಸೌಂದರ್ಯ ರಾಶಿಯ ಒಡನಾಟ ಸಿಕ್ಕಿದ ತಾನೆಷ್ಟು ಭಾಗ್ಯಶಾಲಿ ಎಂದುಕೊಳ್ಳುತ್ತಲೆ ಅವಳ ಸೌಂದರ್ಯವನೆಲ್ಲ ಕಣ್ಣಲ್ಲೆ ಹೀರಿ ಕುಡಿದುಬಿಡುವವನಂತೆ ಭಾವೋನ್ಮಾದದ ಹೊದರಲ್ಲಿ ಅವಳ ಅರೆ ನಿಮಿಲಿತ ನೇತ್ರಗಳನ್ನೆ ನೋಡುತ್ತಿದ್ದವನಿಗೆ…..ಇದ್ದಕ್ಕಿದ್ದಂತೆ ಅದೇನಾಯಿತೊ, ಹೇಗಾಯಿತೊ? ಮತ್ತೊಂದು ಕೈಯಲ್ಲಿದ್ದ ಬ್ರೀಫ್ಕೇಸನ್ನು ನೆಲಕ್ಕೆ ಕುಕ್ಕಿ ಅವಳನ್ನು ಇನ್ನಷ್ಟು ಬಿಗಿಯಾಗಿ ಅಪ್ಪಿಕೊಂಡು, ಅವಳು ಕೊಸರಿಕೊಳ್ಳುತ್ತಿದ್ದರೂ ತನ್ನ ಹಿಡಿತವನ್ನು ಸಡಿಲಗೊಳಿಸದೆ ಪಕ್ಕದ ಮಂಚದ ಹತ್ತಿರ ಸೆಳೆಯತೊಡಗಿದ….ಅವಳ ಅರೆಬರೆ ಮನದ ತಿರಸ್ಕಾರ ಇವನಲ್ಲಿನ ಕಾಮಕ್ಕೆ ಇನ್ನಷ್ಟು ಅರ್ಜ್ಯ ಸುರಿದಂತಾಗಿ , ತಟ್ಟನೆ ಪಾಟ್ಪೋಂಗಿನ ಆ ಬೆಲೆವೆಣ್ಣಿನ ಚಿತ್ರ , ರೂಪುಗಳೆಲ್ಲ ಕಣ್ಮುಂದೆ ಬಂದಂತಾಗಿ ಅಲ್ಲಿ ಸೋತ ಗಂಡಸುತನದ ರೋಷವೆಲ್ಲ ಇಲ್ಲಿ ಹೆಡೆ ಹೆತ್ತಿ ನಿಂತುಬಿಟ್ಟಿತ್ತು. ಇವನು ಎದುಸಿರು ಬಿಡುತಿದ್ದ ರೀತಿ, ಆವೇಶಾವೇಗಗಳ ಬಿರುಸು ಮತ್ತು ಇವನ ಉಗ್ರ ನರಸಿಂಹಾವತಾರಕ್ಕೆ ಮೊದಲೆ ಗಾಬರಿಗೊಂಡಿದ್ದ ಆ ಹೆಣ್ಣು, ಕದಲಿ ಬೆದರಿದ ಹರಿಣಿಯಂತಾಗಿ ಅವನ ತೋಳುಗಳನ್ನು ಬಲವಂತದಿಂದ ಬಲವಾಗಿ ಹಿಡಿದು ‘ತಾಳೂ, ತಾಳೂ…ಸ್ವಲ್ಪ ತಾಳು’ ಎಂದು ತಡೆಯೊಡ್ಡಿದಾಗ, ಹೇಗೂ ಸಹಕರಿಸುತ್ತಿರುವವಳು ಬಹುಶಃ ಇನ್ನಷ್ಟು ಹಣ ಕೇಳಬಹುದೊ ಏನೊ, ಅದಕ್ಕೆ ತಡೆಯುತ್ತಿರುವಳೆಂದು ಉಹಿಸುತ್ತ, ಅದೇನು ಹೇಳುವಳೊ ಕೇಳಿಬಿಡುವ ಅಂದುಕೊಂಡು ತುಸು ನಿಧಾನಿಸಿ ಅವಳನ್ನೆ ದಿಟ್ಟಿಸಿದ – ‘ಏನೂ?’ ಅನ್ನುವಂತೆ. ಅವನು ತುಸು ಶಾಂತನಾದಂತೆ ಕಂಡಾಗ ನಿರಾಳ ನಿಟ್ಟುಸಿರೊಂದನ್ನು ಚೆಲ್ಲುತ್ತ ತಣ್ಣನೆಯ ಸ್ವರದಲ್ಲಿ – ‘ಸಾರಿ….ನಾನು..ನಾನು ನಿನಂದುಕೊಂಡಂತೆ ಹೆಣ್ಣಲ್ಲ…’ ಅಂದುಬಿಟ್ಟಳು..!

ಪಕ್ಕದಲ್ಲಿ ಬಾಂಬ್ ಬಿದ್ದಿದ್ದರೂ ಅಷ್ಟು ದಿಗ್ಭ್ರಮೆಯಾಗುತ್ತಿರಲಿಲ್ಲ ಶ್ರೀನಾಥನಿಗೆ….ತನ್ನಿಂದ ತಪ್ಪಿಸಿಕೊಳ್ಳಲು ಏನೊ ಹೊಸ ಆಟ ಕಟ್ಟುತ್ತಿರುವಳೆಂಬ ಸಂಶಯದ ಕೀಟ ಕೊರೆಯುತ್ತಿರುವ ಹಾಗೆಯೆ ಅವಳತ್ತ ಅಪನಂಬಿಕೆಯಿಂದ ದಿಟ್ಟಿ ಬದಲಿಸದೆ ನೋಡತೊಡಗಿದ. ತನ್ನಿಂದ ತಪ್ಪಿಸಿಕೊಳ್ಳಲು ಮತ್ತೊಂದು ಆಟ ಕಟ್ಟುತಿಹಳೆಂದುಕೊಂಡು ‘ಎಲ್ಲಾ ಸುಳ್ಳು’ ಎನ್ನುತ್ತ ಮತ್ತೆ ಒತ್ತಾಯಿಸಿದಾಗ ಅವಳು,
ಅವನಿಗೆ ನಂಬಿಕೆ ಬರಿಸಲು ಚಡ್ಡಿಯೊಂದನ್ನೆ ಧರಿಸಿ ಅವನ ಮುಂದೆ ನಿಂತಾಗ – ಇವನಿಗೆ ಯಾರೊ ಜೋರಾಗಿ ಕಪಾಳಕ್ಕೆ ಬಾರಿಸಿದಂತಾಗಿ ಬಿಗಿಯಾಗಿ ಹಿಡಿದಿದ್ದ ತನ್ನ ಹಿಡಿತ ಸಡಿಲಿಸಿ ದೊಪ್ಪನೆ ಅದೆ ಮಂಚದ ಮೇಲೆ ಕುಸಿದು ಕುಳಿತ…ಅಲ್ಲಿಯವರೆಗೆ ತಲೆಗ್ಹತ್ತಿದ್ದ ಕಾಮವೆಲ್ಲ ಜರ್ರನೆ ಪಾದಕ್ಕಿಳಿದು ಭೂಮಿ ಸೇರಿದಂತಾಗಿ ಇವನು ತಟ್ಟನೆ ವಿಷಣ್ಣವದನನಾಗಿ ಮೇಲೆದ್ದ. ಇವನ ಹಠಾತ್ ರೂಪ ಪರಿವರ್ತನೆಯ ವಿವಿಧಾವತಾರಗಳನ್ನು ಹತ್ತೆ ನಿಮಿಷದ ಅಂತರದಲ್ಲಿ ಕಂಡಿದ್ದ ಆ ವ್ಯಕ್ತಿಗೆ ಅದೇನೆನಿಸಿತೊ – ‘ ಐ ಯಾಮ್ ಸಾರೀ…ನಾನೊಬ್ಬ ‘ಗೇ…ಸಲಿಂಗ ಕಾಮಿ’. ನಿನಗೆ ಸಲಿಂಗಕಾಮಿಯ ಜತೆ ಓಕೆ ಎಂದಾದರೆ ನನಗೆ ಕೂಡಲೂ ಏನು ಅಭ್ಯಂತರವಿಲ್ಲ…ನಾನೇಳಿದ್ದು ಯಾವುದು ಸುಳ್ಳಲ್ಲ ಇದೊಂದು ವಿಷಯ ಬಿಟ್ಟು. ಹುಡುಗಿಯೆಂದರೆ ಹಣ ಪಡೆಯುವುದು ಸುಲಭವೆಂದು ಹೀಗೆ ಮಾಡಿದೆ..ಬೇಜಾರು ಮಾಡಿಕೊಳ್ಳಬೇಡಾ’ ಎಂದಳು. ಶ್ರೀನಾಥನಿಗೊ ಮಾತೆ ಹೊರಡದ ಅಚೇತನ ಸ್ಥಿತಿಯಲ್ಲಿ, ದಿಗ್ಬ್ರಾಂತನಂತೆ ಬ್ರೀಫ್ಕೇಸ್ ಎತ್ತಿ ಹೊರಡಲನುವಾದಾಗ, ಏನನಿಸಿತೊ? ಅವನು ಕೊಟ್ಟಿದ್ದ ಸಾವಿರ ಬಾತಿನ ನೋಟನ್ನು ಅವನಿಗೆ ಮತ್ತೆ ವಾಪಸ್ಸು ಹಿಡಿದಳು(ನು). ಅವಳ ಮುಖವನ್ನೆ ಚಣಕಾಲ ದಿಟ್ಟಿಸಿದವನೆ , ‘ಒ.ಕೇ….ಪರವಾಗಿಲ್ಲ ಇಟ್ಟುಕೊ’ ಎಂದವನೆ ಹಿಂತಿರುಗಿಯೂ ನೋಡದೆ ಸರಸರನೆ ಅಲ್ಲಿಂದೆದ್ದು ಹೊರಗೆ ಬಂದು ಎದುರಿಗೆ ಕಂಡ ಟ್ಯಾಕ್ಸಿಯೊಂದರಲ್ಲಿ ನುಗ್ಗಿ ‘ಸಾಲಾಡೆಂಗ್ ಕಾಪ್’ ಎಂದಿದ್ದ.

ಮುಂದಿನ ನಾಕಾರೂ ದಿನದವರೆಗೂ ಈ ಘಟನೆ ಮತ್ತು ಇಲ್ಲೂ ಏಮಾರಿದೆನೆಂಬ ನೋವು ಸತತ ಕಾಡುತ್ತಲೆ ಇತ್ತು… ಎಲ್ಲಕ್ಕಿಂತ ಅವನನ್ನು ಕುಗ್ಗಿಸಿದ್ದೆಂದರೆ ಹಣ ಕೊಟ್ಟು ಮೂರ್ಖನಾಗಿದ್ದಲ್ಲ…ಕೊನೆಗಳಿಗೆಯತನಕ ಅವಳು ಹೆಣ್ಣಲ್ಲ, ಹೆಣ್ಣಿನ ವೇಷದ ನಪುಂಸಕ ಗಂಡೆಂದು ಗುರುತಿಸದೆ ಮುಟ್ಠಾಳನಾದೆನಲ್ಲ ಎಂಬ ನೋವು ಹೆಚ್ಚು ಭಾಧಿಸುತ್ತಿತ್ತು! ಒಂದೆ ಒಂದು ಸಮಾಧಾನವೆಂದರೆ ಜತೆಯಲ್ಲಿ ಯಾರೂ ಇರದೆ ಇವನೊಬ್ಬನೆ ಇದ್ದುದ್ದು – ಹೀಗಾಗಿ ಇವನ ಪೆದ್ದುತನಕ್ಕೆ ಇವನಲ್ಲದೆ ಬೇರಾವ ಸಾಕ್ಷಿಯೂ ಇರದಿದ್ದುದು..

ಈ ಘಟನೆ ನಡೆದು ತಿಂಗಳೆ ಉರುಳಿದರೂ ಅದುಂಟುಮಾಡಿದ ಕೀಳರಿಮೆಯಿಂದ ಹೊರಬರಲು ಶ್ರೀನಾಥನಿಗೆ ಸಾಧ್ಯವಾಗಲೆ ಇಲ್ಲ. ಒಬ್ಬ ಸಲಿಂಗಕಾಮಿ ‘ಗೇ’ಯೊಬ್ಬನನ್ನು ಗುರುತಿಸಲಾಗದೆ ಹೆಣ್ಣೆಂದು ತಿಳಿದು ಹಿಂದೆ ಬಿದ್ದೆನಲ್ಲಾ ಎಂಬ ನೆನಪೆ ಕುಗ್ಗಿಸಿ, ಕೃಶನನ್ನಾಗಿಸಿಬಿಡುತ್ತಿತ್ತು. ಅದೂ ಮಾತ್ರವಲ್ಲದೆ ಅವಳು ಎಂದುಕೊಂಡು ಅಪ್ಪಿ ಮುದ್ದಾಡುವ ಮಟ್ಟಕ್ಕೂ ಹೋದೆನಲ್ಲಾ ಎನಿಸಿ ಪದೆ ಪದೆ ಖೇದವಾಗುತ್ತಿತ್ತು. ಇದಕ್ಕೆಲ್ಲಾ ಮೂಲಕಾರಣ, ಆ ಲೈವ್ ಶೋ ನ ಹೆಣ್ಣಿನ ಜತೆ ನಡೆದ ಘಟನೆಯೆ. ಅಲ್ಲಿಯತನಕ ಯಾವ ವಿಕಲ್ಪಗಳೂ ಇರದೆ ಶುಭ್ರವಾಗಿದ್ದ ಮನ, ಆ ಘಟನೆಯಿಂದಾಚೆಗೆ ದಿಕ್ಕುಗೆಟ್ಟ ಪತಂಗದ ಹಾಗೆ ಪತರಗುಟ್ಟುತ್ತಲೆ, ಹಲುಬುತ್ತಲೆ ಸಾಗಿದೆ – ಎಲ್ಲಾ ಆ ಘಟನೆಯಿಂದಲೆ ಆದದ್ದು ಎಂದು ಕ್ರೋಧದಿಂದ ಹಲ್ಲು ಕಡಿದು ಪರಿತಪಿಸುವುದು ಮಾಮೂಲಾಗಿ ಹೋಗಿತ್ತು ಈಚೆಗೆ. ದಿನ ಕಳೆದಂತೆ ಇದರ ಪ್ರಭಾವ ಕೆಲಸದ ಮೇಲೂ ಆಗುತ್ತ ಅಲ್ಲೂ ಇತರರ ಮೇಲೆ ಕಾರಣವಿಲ್ಲದೆ ರೇಗಾಡುವುದೂ, ಸಿಡಿಮಿಡಿಗೊಳ್ಳುವುದು ಶುರುವಾಗಿದ್ದುದು, ಆತಂಕಕ್ಕೆ ಮತ್ತೊಂದು ಕಾರಣವಾಗಿತ್ತು. ಒಮ್ಮೆಯಂತು ಈ ಗತಿ ತನ್ನ ಪರಕಾಷ್ಟೆಯನ್ನೂ ಮುಟ್ಟುವ ಘಟನೆ ನಡೆದುಹೋಯ್ತು. ಈ ಬಾರಿ ಸ್ಥಳೀಯ ಥಾಯ್ ಸಹೋದ್ಯೋಗಿಯೊಬ್ಬರ ಜತೆಯೆ ಈ ಜಟಾಪಟಿ ನಡೆಯಲಾಗಿ, ಇದು ಹೀಗೆ ಮುಂದುವರೆದರೆ ತೀರಾ ಪ್ರಕೋಪಕ್ಕೆ ಹೋಗಬಹುದಾಗಿ, ಅದಾಗುವ ಮೊದಲೆ ಏನಾದರೂ ಉಪಶಮನದ ದಾರಿ ಕಂಡುಕೊಳ್ಳದಿದ್ದರೆ ಇವೆಲ್ಲ ದೂರುಗಳ ರೂಪದಲ್ಲೊ, ಅದಕ್ಷತೆಯ ಹೆಸರಿನಲ್ಲೊ ಬಾಸನ್ನು ತಲುಪಿದರೆ ಕಷ್ಟಪಟ್ಟು ಮಾಡಿದ್ದ ಕೆಲಸವೆಲ್ಲವು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆಂದು ಚೆನ್ನಾಗಿ ತಿಳಿದಿತ್ತು. ಅಂದು ಆದದ್ದಾದರೂ ತೀರ ಕ್ಷುಲ್ಲಕ ವಿಷಯವೆ; ಪ್ರಾಜೆಕ್ಟಿನ ಟೀಮಿಗೆ ‘ಟೀಂ ಬಿಲ್ಡಿಂಗಿ’ನ ಸಲುವಾಗಿ ಮತ್ತು ಆಂಗ್ಲ ಭಾಷೆ ಸರಿಯಾಗಿ ಬರದೆ ಪರದಾಡುವ ಸ್ಥಳೀಯ ಥಾಯ್ ಉದ್ಯೋಗಿಗಳಿಗಾಗಿ ವಾರಕ್ಕೆರಡು ದಿನ ನಡೆಯುವ “ಅಣುಕು ಭಾಷಾ ತರಗತಿ” ಏರ್ಪಡಿಸಿತ್ತು; ಇಲ್ಲಿ ಪ್ರತಿಯೊಬ್ಬರೂ ಇಂಗ್ಲೀಷಿನಲ್ಲೆ ಮಾತನಾಡಬೇಕು – ಎಷ್ಟು ಬಂದರೂ ಸರಿ, ತಪ್ಪಾಗಿದ್ದರೂ ಸರಿಯೆ! ಲಘುಹಾಸ್ಯದ ಧಾಟಿಯ ನಡುವೆ ಯಾವುದೆ ಒತ್ತಡವಿಲ್ಲದೆ ಮಾತಾಡುವ ಮುಕ್ತ ಅವಕಾಶ. ಆ ದಿನವೂ ಹೊಸದೊಂದು ಇಂಗ್ಲೀಷ್ ಪದ ‘ಜ್ಯೂಸ್’ ಅನ್ನು ಹೇಳಿಕೊಡಲಾಗುತ್ತಿತ್ತು. ಅವರಿಗೆ ಈ ಇಂಗ್ಲಿಷು ಪದ ಉಚ್ಚರಿಸುವುದು ಬಹಳ ಕಷ್ಟವೆಂದೆ ಕಾಣುತ್ತದೆ – ಬಹುಶಃ ಮಾತೃ ಭಾಷೆಯಲ್ಲಿ ಚಿಂತಿಸಿ, ಮನದಲ್ಲೆ ಇಂಗ್ಲೀಷಿಗೆ ಅನುವಾದಿಸಿ ನಂತರ ಮಾತಾಡಬೇಕು; ಈ ಪ್ರಕ್ರಿಯೆಯಲ್ಲಿ ಒಳಗಿನ್ನೇನೇನು ಗೊಂದಲವುಂಟಾಗುತ್ತಿತ್ತೊ, ಏನೊ – ‘ಡ್ರಿಂಕ್ ವಾಟರ’ ಅನ್ನುವುದು ಹೋಗಿ ‘ಈಟ್ ವಾಟರ’ ಆಗಿಹೋಗಿರುತ್ತಿತ್ತು… ಹಾಗೆಯೆ ಜ್ಯೂಸ್ ಅನ್ನುವ ಪದಕ್ಕೆ ಯಾವಾಗಲೂ ‘ಜೂಯಿಸ್’ ಎಂದೆ ಕರೆಯುತ್ತಿದ್ದರು – ಸ್ಪೆಲ್ಲಿಂಗಿನಲ್ಲಿರುವ ‘ಐ’ನ ದೆಸೆಯಿಂದಾಗಿ. ಅವರಲ್ಯಾರಾದರೊಬ್ಬರು ‘ಜೂಯಿಸ್’ ಎಂದರೆ ತನ್ನನ್ನೆ ಕರೆದರೇನೊ ಎಂಬಂತೆ ಭಾಸವಾಗಿ, ತಂಡದಲ್ಲಿದ್ದ ‘ಜೋಯಿಸ್’ ‘ಯಸ್’ ಎನ್ನುತ್ತ ತಿರುಗಿ ನೋಡುತ್ತಿದ್ದುದು ತುಸು ಹಾಸ್ಯ ಸನೀವೇಶದ ಸೃಷ್ಟಿಗೂ ಕಾರಣವಾಗಿತ್ತು…ಅಂದೂ ಸಹ ಒಬ್ಬಾಕೆ ಪದೆ ಪದೆ ಹೇಳಿಕೊಟ್ಟರೂ ‘ಜೂಯಿಸ್, ಜೂಯಿಸ್’ ಅಂತಲೆ ಹೇಳುತ್ತಿದ್ದಳೆಂದು ಅವಳ ಮೇಲೆ ಸಿಕ್ಕಾಪಟ್ಟೆ ಎಗರಾಡಿಬಿಟ್ಟಿದ್ದ, ಆಕೆ ‘ಕಸ್ಟಮರ್’ ಅನ್ನುವುದನ್ನೂ ಮರೆತು…

ಕಥೆ ಅಷ್ಟಕ್ಕೆ ಮುಗಿದಿದ್ದರೆ ಪರವಾಗಿರಲಿಲ್ಲ..ಆದರೆ ಆ ಹೆಂಗಸಿಗೆ ಇವನಂದದ್ದು ಅದೆಷ್ಟು ಅರ್ಥವಾಯಿತೊ,ಇನ್ನೆಷ್ಟು ಅನರ್ಥವಾಯಿತೊ? ಮೊದಲೆ ಭಾಷೆಯ ತೊಡಕು ಬೇರೆ. ಅದರಲ್ಲೂ ಗುಂಪಲ್ಲೆ ಕೂಗಾಡಿದ್ದರಿಂದ ಆಕೆಗೆ ಅವಮಾನವೆ ಆದಂತಾಗಿತ್ತು. ಅದರಲ್ಲೂ ವಿದೇಶಿಯನೊಬ್ಬ ಎಲ್ಲರ ಮುಂದೆಯೆ ಕೂಗಾಡಿದ್ದು ಇನ್ನಷ್ಟು ಅವಮಾನವೆನಿಸಿರಬೇಕು. ಹೀಗೆಲ್ಲಾ ಭಾವಗಳು ಕಲಸುಮೇಲೋಗರವಾಗಿ ಸೇರಿಕೊಂಡು ಯಾವ ಭಾವೋತ್ಕರ್ಷವನ್ನೆಬ್ಬಿಸಿದವೊ – ಆಕೆ ಅಲ್ಲಿಂದ ಹೊರ ಹೋದವಳೆ ‘ಗೊಳೊ’ ಎಂದು ಬಿಕ್ಕಿಬಿಕ್ಕಿ ಅಳತೊಡಗಿದಳು. ಅದನ್ನೆಲ್ಲಾ ಸಂಭಾಳಿಸಿ, ಅವಳಿಗೆ ಯಾರಾರ ಮೂಲಕವೊ ಸಮಾಧಾನಗೊಳಿಸಿ ಒಂದು ಹಂತಕ್ಕೆ ತರುವ ವೇಳೆಗೆ ಸಾಕುಸಾಕಾಗಿ ಹೋಗಿತ್ತು ಶ್ರೀನಾಥನಿಗೆ.

ಇಷ್ಟು ವರ್ಷಗಳ ಅನುಭವದಲ್ಲಿ ಈ ರೀತಿ ಹಿಂದೆಂದೂ ಆಗಿರಲಿಲ್ಲ. ತನ್ನ ಸದ್ಯದ ಮನಸ್ಥಿತಿಯೆ ಇದಕ್ಕೆಲ್ಲ ಕಾರಣವೆಂದು ಅನಿಸಿ, ಹೇಗಾದರೂ ಈ ಕೀಳರಿಮೆಯ ಹೊದಿಕೆಯಿಂದ ತಾನು ಹೊರಬರಲೆಬೇಕೆಂಬ ಅನಿಸಿಕೆ ತೀವ್ರವಾಗಿ ಭಾಧಿಸತೊಡಗಿತು. ದಿನ ದಿನ ಕಳೆದಂತೆ ಆ ತೀವ್ರತೆಯ ಒತ್ತಡ ದುಪ್ಪಟ್ಟು, ಮುಪ್ಪಟ್ಟು, ಹಲವು ಪಟ್ಟಾಗಿ ಇದರಿಂದ ಬಿಡುಗಡೆಯಾಗದಿದ್ದರೆ ತಲೆಯೆ ಸಿಡಿದು ಹೋಗುವುದೇನೊ ಅನ್ನುವ ಹಾಗೆ ಪದೆ ಪದೆ ತಲೆನೋವಿನ ರೂಪದಲ್ಲಿ ಕಾಡತೊಡಗಿತು. ಇಂಥದೆ ಒಂದು ವಾರದ ಕೊನೆಯ ಭಾನುವಾರದ ಮಧ್ಯಾಹ್ನ , ಬಿಯರಿನ ಬಾಟಲೊಂದು ಖಾಲಿ ಮಾಡುತ್ತ ಏಕಾಂತವಾಗಿ ಕೆಲಸಕ್ಕೆ ಬಾರದ ಟೀವಿ ಚಾನೆಲ್ ನೋಡುತ್ತ ಕುಳಿತಿದ್ದಾಗ , ಬೀರು ಏರಿಸಿದ ಅಮಲಿಗೊ, ಅಥವಾ ಹೆಪ್ಪುಗಟ್ಟಿ ತಲೆಯಲ್ಲಿ ಗುಂಗುಡಿಸುತ್ತಿದ್ದ ಹಲವು ದಿನಗಳ ಕೀಳರಿಮೆಯ ಒತ್ತಡಕ್ಕೊ – ಆ ದಿನ ಇದಕ್ಕೇನಾದರೂ ಇಂದು ಮದ್ದು ಮಾಡಲೇಬೇಕು ಎಂಬ ಕಾತುರವುದಿಸಿ, ಏನು ಮಾಡಬೇಕೆಂಬ ಅರಿವಿಲ್ಲದೆ ತೂರಾಡುವ ಮೆದುಳಿನ ಚಿಂತನೆಯಲ್ಲೆ ತೂಗಾಡುತ್ತ ಕುಳಿತವನ ಕಣ್ಣಿಗೆ ತಟ್ಟನೆ ಟೀವಿ ಸ್ಟ್ಯಾಂಡಿನ ಕೆಳಗೆ ಹಳದಿ ಬಣ್ಣದಲ್ಲಿ ರಾರಾಜಿಸುತ್ತಿದ್ದ ಟೆಲಿಫೋನ್ ಡೈರೆಕ್ಟರಿ ಕಣ್ಣಿಗೆ ಬಿತ್ತು..

ಅದೇನು ಮಾಯದ ಗಳಿಗೆಯೊ ಏನೊ – ಅದನ್ನು ನೋಡುತ್ತಿದ್ದಂತೆ ಅವನ ಚಿತ್ತದಲ್ಲಿ ಏನೇನೊ ಯೋಚನೆ, ಯೋಜನೆಗಳು ಸಿನೆಮಾ ರೀಲಿನಂತೆ ಓಡತೊಡಗಿ ತಟಕ್ಕನೆ ಯೋಜನೆಯೊಂದು ಮನದೊಳಗಿಂದ ಉದ್ಭವವಾಗಿ ಹಣೆಯ ಸುತ್ತ ನರ್ತಿಸತೊಡಗಿತು…ಆ ಆಲೋಚನೆಯ ಪರಿಧಿ ವಿಸ್ತರಿಸುತ್ತ ಹೋದಂತೆ,’ಅರೆರೆ ! ತಾನೇಕೆ ಈ ಕುರಿತು ಈ ಬಗ್ಗೆ ಇದುವರೆಗೂ ಆಲೋಚಿಸಲೆ ಇಲ್ಲಾ? ಇದು ಎಲ್ಲೂ ಹೋಗದೆ ಇದ್ದ ಜಾಗದಲ್ಲೆ ಯಾರ ಕಣ್ಣಿಗೂ ಬೀಳದ ಹಾಗೆ ಸುರಕ್ಷಿತವಾಗಿ ಮಾಡಬಹುದಿತ್ತಲ್ಲಾ..ಇದುವರೆವಿಗೂ ಇದ್ಯಾಕೆ ಹೊಳೆಯಲಿಲ್ಲ..?’ ಎಂಬ ಸೋಜಿಗದಲ್ಲೆ ತೂರಾಡುತ್ತ ಮೇಲೆದ್ದು ಆ ಯಲ್ಲೋ ಪೇಜಸ್ಸಿನ ಡೈರೆಕ್ಟರಿಯನ್ನು ಕೈಗೆತ್ತಿಕೊಂಡು, ತೂರಾಡುತ್ತಲೆ ಸೋಫಾಕ್ಕೆ ಮರಳಿ ಪುಟಗಳನ್ನು ತಿರುವಿ ಹಾಕತೊಡಗಿದ…ಭಾಷೆ ಅರಿಯದಿದ್ದರೂ ಸುಮ್ಮನೆ ಪುಟ ತಿರುವುತ್ತಲೆ ಕಣ್ಣಿಗೆ ಬಿದ್ದ ಅರೆಬರೆ ಚಿತ್ರಗಳಿಂದಲೆ ‘ಎಸ್ಕಾರ್ಟ್’ ಹಾಗೂ ‘ಮಸಾಜ್’ ರೀತಿಯ ಪುಟಗಳನ್ನು ತಿರುವತೊಡಗಿದ…ಆ ಭಾಷೆಯಲಿದ್ದ ವಿವರವೇನೂ ಗೊತ್ತಾಗದಿದ್ದರೂ ಅಲ್ಲಿದ್ದ ಚಿತ್ರಗಳು, ದೂರವಾಣಿ/ಮೊಬೈಲಿನ ಸಂಖ್ಯೆಗಳು ಮತ್ತು ಪಕ್ಕದಲ್ಲಿರುತ್ತಿದ್ದ ‘ಬಾತ್’ ನ ಸಂಕೇತದೊಂದಿಗೆ ಗಂಟೆ, ದಿನಗಳ ಲೆಕ್ಕದಲ್ಲೆಷ್ಟು ಹಣವೆಂಬ ದರಪಟ್ಟಿಯೆ ಅವನಿಗೆ ಬೇಕಾದ ಕಥೆಯನ್ನೆಲ್ಲ ಭಾಷೆಯ ಹಂಗಿಲ್ಲದೆ ಬಿತ್ತರಿಸುತ್ತಿತ್ತು. ಆ ಅಮಲಿನ ಮತ್ತಿನಲ್ಲೂ ಜಾಗೃತವಾಗಿದ್ದ ಸುಪ್ತ ಮನ ಮಾತ್ರ ದೂರದಲೆಲ್ಲಿಂದಲೊ ಜಾಗಟೆ ಬಾರಿಸಿದ ಹಾಗೆ, ‘ಇದು ತಪ್ಪು..ಇದು ಕೂಡದು ….ಇದು ಅಪಾಯಕಾರಿ ‘ ಅಂತೆಲ್ಲಾ ಬಡಿದುಕೊಳ್ಳುತ್ತಿದ್ದರೂ, ಯಾವುದಕ್ಕೂ ಸೇಫಾಗಿರಲು ಹೆಚ್ಚು ಹಣವಾದರೂ ಸರಿ ಅಗ್ಗದ ಸಹವಾಸಕ್ಕೆ ಹೋಗಬಾರದೆಂದು ದುಬಾರಿ ಬೆಲೆಯಿದ್ದ ಬಣ್ಣ ಬಣ್ಣದ ಚಿತ್ರ ಲಗತ್ತಿಸಿದ್ದ ದೂರವಾಣಿಯನೊಂದನ್ನು ಆರಿಸಿ ಮೊಬೈಲಿನಲಿ ಡಯಲ್ ಮಾಡಿಯೆಬಿಟ್ಟ…!

(ಇನ್ನೂ ಇದೆ)
_________________

(ಪರಿಭ್ರಮಣ..(04)ರ ಕೊಂಡಿ) https://nageshamysore.wordpress.com/00165-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-04/)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s