00166. ಕಥೆ: ಪರಿಭ್ರಮಣ..(04)

ಕಥೆ: ಪರಿಭ್ರಮಣ..(04)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

(ಪರಿಭ್ರಮಣ..(03)ರ ಕೊಂಡಿ – https://nageshamysore.wordpress.com/00164-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-03/ )

ಅತ್ತಕಡೆ ರಿಂಗಾಗುತ್ತಿರುವ ಸದ್ದಿನ ನಡುವೆಯೆ ಕಣ್ಣು ‘5000’ ಬಾತ್ ಎಂದಿದ್ದರ ಮೇಲೆ ಓಡಾಡುತ್ತ ‘ಅಬ್ಬಾ! ಅಷ್ಟು ದುಬಾರಿಯೆ’ ಅಂದುಕೊಳ್ಳುತ್ತಲೆ, ಮತ್ತೊಂದೆಡೆ ‘ಅಯ್ಯೊ…ನಾನೇನೂ ಮಾಡುತ್ತಿದ್ದೇನೆ? ಹೀಗೆ ಮಾಡುವುದಕ್ಕೆ ಅದೆಲ್ಲಿಂದ ಧೈರ್ಯ ಬರುತ್ತಿದೆ, ನನಗೆ? ಮೊದಲೆ ನೂರಾರು ತರಹ ರೋಗ, ರುಜಿನಗಳ ಹೆಸರು ಹೇಳಿ ಹೆದರಿಸುತ್ತಾರೆ..ನಾನು ಗೂಳಿಯ ಹಾಗೆ ನುಗ್ಗುತ್ತ, ಹಿಂದೆ ಮುಂದೆ ಆಲೋಚಿಸದೆ, ಯಾರಾರನ್ನೊ ಕರೆಸಲು ಹೋಗುತ್ತಿರುವೆನಲ್ಲ..’ ಎಂಬ ಗಾಬರಿ, ಭೀತಿಯೆಲ್ಲಾ ತಟ್ಟನೆ ಉದಿಸಿ ಅದುವರೆವಿಗಿದ್ದ ಸಾಹಸ, ಸಾಮರ್ಥ್ಯಗಳ ಬಲೂನು ಪುಸ್ಸನೆ ಕುಸಿದಂತೆ, ರಿಂಗಾಗುತ್ತಿದ್ದ ನಂಬರನ್ನು ಇನ್ನೆಲ್ಲಿ ಎತ್ತಿಕೊಂಡುಬಿಡುವರೊ ಎಂಬ ಆತಂಕದಲ್ಲೆ ತಡಬಡಾಯಿಸುತ್ತಾ ‘ಕಟ್’ ಮಾಡಿದ. ರಿಂಗಿನ ಶಬ್ದ ನಿಂತು ಮತ್ತೆ ‘ಸ್ಟಾಂಡ್ ಬೈ’ ಮೋಡಿಗೆ ಬಂದು ನಿಂತ ಫೋನಿನ ಡಿಸ್ಪ್ಲೇ ಮೋಡನ್ನು ನೋಡುತ್ತ ‘ಸದ್ಯ..ಕಾಲ್ ಎತ್ತಿಕೊಳ್ಳುವ ಮುನ್ನವೆ ಡ್ರಾಪ್ ಮಾಡಿಬಿಟ್ಟೆ – ಎಂತಹ ಅನಾಹುತವಾಗಿಬಿಡುತ್ತಿತ್ತು..’ ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟ. ಆ ನಿರಾಳದಲೆ ಬೀರಿನ ಗ್ಲಾಸಿಗೆ ತುಟಿಯಿಟ್ಟಾಗ, ‘ಆಗಿದ್ದಾಗಲೆಂದು ಒಂದು ಕೈ ನೋಡಿಯೆಬಿಡಬೇಕಾಗಿತ್ತೇನೊ? ಅದೇನಿರಬಹುದೆಂದು ನೋಡುವ ಛಾನ್ಸ್ ಕಳೆದುಕೊಂಡೆನೆ? ಈಗ್ಹಿಡಿದಿರುವ ಆತಂಕದ ಭೂತದಿಂದ ಹೀಗೆ ಹೊರಬರದೆ ನರಳಬೇಕೆ?..’ ಎಂಬ ನಿರಾಶೆಯ ಪಸೆಯೂ ಆವರಿಸಿ, ಇಡೀ ಗ್ಲಾಸಿನಲ್ಲಿದ್ದ ಬೀರನ್ನೆಲ್ಲಾ ಒಂದೆ ಸಾರಿಗೆತ್ತಿ ಗಟಗಟನೆ ಕುಡಿದುಬಿಟ್ಟ…ಕುಡಿದಿಟ್ಟ ಗ್ಲಾಸನ್ನು ಕೆಳಗೆ ಕುಕ್ಕಿ ಒಂದಷ್ಟು ಚಿಪ್ಸಿನ ಚೂರುಗಳನ್ನು ಕಿವುಚಿದ ಮುಖದೊಂದಿಗೆ ಎತ್ತಿ ಬಾಯಿಗಿಡುತ್ತಿದ್ದಂತೆ ಮೊಬೈಲು ಗುಣುಗುಣಿಸತೊಡಗಿತು.

ನಂಬರು ಕಾಣಿಸದೆ ಇದ್ದ ಕಾರಣ ಈಗ್ಯಾರು ಪೋನು ಮಾಡಿದರು, ಅದೂ ರಜೆಯ ದಿನ – ಎಂದಾಲೋಚಿಸುತ್ತಲೆ ಕೈಗೆತ್ತಿಕೊಂಡರೆ, ಅತ್ತಕಡೆಯಿಂದಾವುದೊ ರಾಗವಾದ ಥಾಯ್ ಮಾತಾಡುವ ಹೆಣ್ಣಿನ ದನಿ ಕೇಳಿಸಿತು. ‘ಧಿಂ’ ಅನಿಸುತಿದ್ದ ತಲೆಯನ್ನು ಮೆಲುವಾಗಿ ಜೋಲಾಡಿಸುತ್ತಲೆ ಶ್ರೀನಾಥ, ‘ಹಲೊ..ಹೂ ಇಸ್ ಸ್ಪೀಕಿಂಗ್’ ಅನ್ನುತ್ತಿದ್ದಂತೆ ಅತ್ತ ಕಡೆಯಿಂದ ದನಿಯೂ ಇಂಗ್ಲಿಷಿಗೆ ಬದಲಾಯ್ತು. ಆಕೆ ಮಧುರ ದನಿಯ ಥಾಯ್-ರಾಗದ ಇಂಗ್ಲೀಷಿನಲ್ಲಿ, ಅವನ ಹೆಸರು ವಿಳಾಸ ಇತ್ಯಾದಿಗಳೆಲ್ಲ ಕೇಳಿದಾಗ, ‘ಯಾರೀಕೆ, ಇದೆಲ್ಲ ಕೇಳುತ್ತಿದ್ದಾಳಲ್ಲ’ ಎಂಬ ಪ್ರಶ್ನೆ ಬಂದರೂ, ಬಹುಶಃ ಸಂಭಾಷಣೆಗೆ ಮುಂಚೆ ವೆರಿಫೈ ಮಾಡುತ್ತಿರಬಹುದು, ಯಾವುದೊ ಕ್ರೆಡಿಟ್ ಕಂಪನಿಯೊ, ಕಾಲ್ ಸೆಂಟರೊ ಇರಬಹುದೆಂದುಕೊಂಡು ಅವಳು ಕೇಳಿದ ವಿವರ ಕೊಟ್ಟು, ಕಾಲ್ ಕಟ್ ಮಾಡೋಣವೆನಿಸಿದರೂ ಸುಂದರವಾದ ದನಿ ತುಸು ಹೆಚ್ಚು ಹೊತ್ತು ಕೇಳಲೆಂದು ಹಾಗೆ ಮುಂದುವರೆಸಿದ. ಆಕೆ ಮುಂದುವರೆದು,’ಯೂ ವಾಂಟ್ ಏಷಿಯನ್ ಆರ್ ಯೂರೋಪಿಯನ್? 5,000 ಅಂಡ್ 10,000 ಬಾತ್ ‘ ಅಂದಾಗಲಷ್ಟೆ, ಅದು ಬೇರಾವುದೂ ಆಗಿರದೆ ಕೆಲಕ್ಷಣದ ಹಿಂದೆ ಅವನು ಕರೆಮಾಡಿದ ಜಾಗದಿಂದ ಹಿಂದಿರುಗಿಸಿದ ಕರೆಯಾಗಿತ್ತೆಂದು ಗೊತ್ತಾಗಿದ್ದು!

ಅದು ಅರಿವಾಗುತ್ತಿದ್ದಂತೆ, ಗಡಬಡಿಸಿ ಎದ್ದವನೆ ‘ಸಾರಿ..ಸಾರಿ..ದಿಸ್ ಈಸ್ ರಾಂಗ್ ನಂಬರು…’ ಎಂದು ಇಟ್ಟುಬಿಡಲು ಯತ್ನಿಸಿದರೂ ಬಿಡದೆ ಆಕೆ ಈ ಮನೆಯಲ್ಲಿ ಬೇರಾರಾದರೂ ಕಾಲ್ ಮಾಡಿರಬಹುದು, ಯಾಕೆಂದರೆ ಕಾಲ್ ಇದೆ ನಂಬರಿನಿಂದ ಬಂದಿದೆ ಎಂದು ಖಚಿತವಾಗಿ ಹೇಳಿದಳು. ಅದನ್ನು ಅಲ್ಲಗಳೆಯಲಾಗದೆ, ‘ಮೇಬಿ, ಮೇಬಿ…ಬಟ್ ಇಟ್ ಮೇಬಿ ರಾಂಗ್ ನಂಬರ್..’ ಎಂದು ಹೇಳುತ್ತಲೆ ಹೋದ, ಅವಳಿಗೂ ಮಾತನಾಡಲು ಅವಕಾಶ ಕೊಡದೆ. ಮನದೊಂದು ಮೂಲೆ ಮಾತ್ರ – ‘ತಾನೆ ತಾನಾಗಿ ಬರುತ್ತಿದೆ ಅವಕಾಶ , ಬಿಡಬೇಡ..ಹಿಡಿದುಕೊ….’ ಎನ್ನುತ್ತಿದ್ದರೂ ಬಾಯಿಂದ ಮಾತ್ರ ಅದನ್ನು ಸಾಕಾರಗೊಳಿಸುವ ಮಾತೆ ಹೊರಡದೆ ‘ನಾಟ್ ಮೀ’ ಅನ್ನುತ್ತಲೆ ಹೋದ. ಇಂಥಹವರನ್ನು ಸಾಕಷ್ಟು ನೋಡಿ ಅನುಭವವಿದ್ದವಳಾಕೆ.. ‘ನೊ ವರಿ ಸಾರ್…ಯೂ ಕ್ಯಾನ್ ಸಿ ಫಸ್ಟ್…ಇಫ್ ಯು ಡೊಂಟ್ ಲೈಕ್, ನೋ ಆಬ್ಲಿಗೇಶನ್…ಅಲ್ ಹೈ ಕ್ಲಾಸ್, ಸೇಫ್ ಅಂಡ್ ಯಂಗ್…ವಿ ವಿಲ್ ಸೆಂಡ್ ದೆಮ್ ಟು ಯುವರ್ ಪ್ಲೇಸ್ ಫಸ್ಟ್..’ ಎನ್ನುತ್ತಿದ್ದರೂ ‘ನೋ…ನೋ..’ ಎಂದು ಪೋನಿಟ್ಟುಬಿಟ್ಟ.. ಇಟ್ಟ ಮೇಲೆ ಪಿಚ್ಚನೆಯ ಭಾವ…ಒಪ್ಪಿಕೊಂಡುಬಿಡಬೇಕಿತ್ತೇನೊ ಎಂಬ ದ್ವಂದ್ವ ಕಾಡುವುದು ಮಾತ್ರ ನಿಲ್ಲಲಿಲ್ಲ. ‘ಮತ್ತೊಮ್ಮೆ ಪೋನ್ ಮಾಡಿಬಿಡಲೆ’ ಎಂಬನಿಸಿಕೆಯನ್ನು ಬಲವಂತದಿಂದ ಮರೆಸಲು ಮತ್ತೊಂದು ಗ್ಲಾಸು ಭರ್ತಿ ಮಾಡಿ ಮೇಲೆತ್ತಿದ್ದ….

ಬದುಕಿನಲ್ಲಿ ನಡೆವ ಎಷ್ಟೊ ಸಂಘಟನೆಗಳು ಎಷ್ಟು ವಿಚಿತ್ರವೆಂದರೆ, ಕೆಲವೊಮ್ಮೆ ಕಲ್ಪನೆಯೆ ಅವುಗಳ ಮುಂದೆ ಪೇಲವವೆನಿಸಿಬಿಡುತ್ತದೆ. ಶ್ರೀನಾಥನಿಗೂ ಅಂತಹದ್ದೆ ಸಂಧಿಕಾಲವೊ ಏನೊ, ಅವನಿಗೇ ಊಹಿಸಲೂ ಆಗದಂತಹ ಘಟನೆಗಳೆಲ್ಲ ನಡೆಯಲಾರಂಭವಾಗಿತ್ತು. ಅದೇನು ಏಕಾಕಿತನವೆಬ್ಬಿಸಿದ ಆಂತರಿಕ ತಾಕಲಾಟದ ಪರಿಣಾಮವೊ, ಕಂಡೂ ಕಾಣದ ನಾಡಿನಲ್ಲಿ ಏಕಾಂಗಿಯಾಗಿದ್ದು ಅಭ್ಯಾಸವಿಲ್ಲದ ಹೊಡೆತವೊ, ಗುಂಪಿನಲ್ಲಿ ತಾನೇನು ಕಡಿಮೆಯೆಂಬಂತೆ ಗುರುತಾಗಬೇಕೆಂಬ ‘ಅಹಂ’ ಪ್ರೇರಿತ ಹಂಬಲವೊ ಅಥವ ಎಲ್ಲವನ್ನೂ ಮೀರಿಸಿದ ವಯೋಮಾನದ ಸಹಜ ಹಲುಬೊ – ಒಟ್ಟಾರೆ, ಅವನೆ ನಂಬಲಾಗದಷ್ಟು ಬದಲಾವಣೆ, ಅವನರಿವಿಲ್ಲದೆಯೆ ಅವನನ್ನಾವರಿಸುತ್ತಿತ್ತು. ಅದೇನು ‘ಮಿಡ್ ಲೈಫ್ ಕ್ರೈಸಿಸ್’ ನ ತರವೊ ಅಥವಾ ಪಕ್ವತೆಯತ್ತ ಸರಿಯುವ ಮನ ಸಹಜದಲ್ಲೆ ಅನುಭವಿಸುವ ಆತಂಕವೊ ? ಎಂದೆಲ್ಲಾ ಚಿಂತಿಸಿ, ಉತ್ತರ ದೊರೆಯದೆ ಹತಾಶನಾಗಿದ್ದ. ಕೊನೆಗೆ, ಅದದ್ದಾಗಲಿ, ಬಂದದ್ದನ್ನು ಬಂದಂತೆ ಸ್ವೀಕರಿಸುತ್ತಾ ಪ್ರವಾಹದೊಂದಿಗೆ ಹೆಚ್ಚು ಚಿಂತಿಸದೆ ಹೋಗುವುದೆ ಸರಿ ಎನ್ನುವ ನಿಲುವಿಗೆ ಬರುವಷ್ಟರಲ್ಲಿ ಸಾಕು ಸಾಕಾಗಿತ್ತು – ಜತನದಿಂದ ಕಾದುಕೊಂಡಿದ್ದ ತತ್ವವೊಂದನ್ನು ಸಡಿಲಗೊಳಿಸಿ, ಹೊಂದಾಣಿಕೆಯ ತೊಗಲಿಗೆ ತಲೆಬಾಗಬೇಕೆಂದಾಗ…

ಅದೂ ಕೆಲದಿನವಷ್ಟೆ…ಮೊದಲ ಬಾರಿ ಮಾಡುವಾಗಿದ್ದ ಕಳ್ಳ ಕೆಲಸದ ಆತಂಕ, ಒತ್ತಡ ನಂತರದ ಯತ್ನಗಳಲ್ಲಿ ಇರುವುದಿಲ್ಲವಂತೆ; ಅದರಲ್ಲೂ ‘ಪ್ರಥಮ ಚುಂಬನೆ ದಂತಭಗ್ನೆ’ ಆಗದಿದ್ದರಂತೂ ಮಾತಾಡುವ ಹಾಗೆ ಇಲ್ಲ – ಯಶದ ಅನುಭವವೆ ಅಗಾಧ ಧೈರ್ಯದ ಪ್ರೇರಕಶಕ್ತಿಯಾಗಿ ಮುಂದಿನ ಯತ್ನಗಳ ಭಂಡ ಧೈರ್ಯವಾಗಿಬಿಡುವುದಂತೆ. ಆದರೆ ಶ್ರೀನಾಥನಿಗಿದ್ದ ತೊಂದರೆಯೂ ಇಲ್ಲಿಯೆ; ಇತ್ತ ಕಡೆ ಪ್ರಥಮ ಚುಂಬನವಾಗದೆ ಇದ್ದ ಕಾರಣ ತೆಪ್ಪಗೆ ಮೂಲೆ ಹಿಡಿಯುವ ಹಾಗೂ ಇಲ್ಲ; ಯಶ ಕಂಡ ಯತ್ನಗಳಿಂದ ರುಚಿಯುಂಡ ಬೆಕ್ಕಂತೆ ಮುನ್ನುಗ್ಗುವ ಭಂಡ ಧೈರ್ಯವೂ ಇಲ್ಲ. ಈ ಎಡಬಿಡಂಗಿತನ ಹುಟ್ಟಿಸಿದ ಕೀಳರಿಮೆಯೆ ಯಶಾಪಯಶಗಳ ಸುಖ ದುಃಖಗಳಿಗೂ ಮೀರಿದ ವೇದನೆಯಾಗಿ ಹೇಗೇಗೊ ಆಡಿಸಿ, ಏನೇನೋ ಮಾಡಿಸುತ್ತಿತ್ತು. ಇದರ ನಡುವೆ ಈ ರೀತಿ ಸರಕ್ಕನೆ ಉಕ್ಕುವ ಅರೆಗಳಿಗೆಯ ವೀರಾವೇಶ ಪೋನು ಮಾಡುವ ಮಟ್ಟಕ್ಕೇರಿಸಿದರೆ, ಮತ್ತರೆಗಳಿಗೆಯ ಅಂಜುಬುರುಕುತನ ಹೇಡಿತನದ ಪರಮಾವಧಿಯಾಗಿ ಕುಕ್ಕರಿಸಿಬಿಡುವಂತಾಗಿಬಿಡುತ್ತಿತ್ತು. ಆದರೆ ಈ ದಿನ ಮಾತ್ರ ಅಂತರ್ಮನದ ಕಾಮನೆಗೆದುರಾಗಿ ಬೇಡವೆಂದು ಹಠ ತೊಟ್ಟವನ ಮನೋಬಲವನ್ನೂ ಪೂರ್ತಿಯಾಗೆ ಪರೀಕ್ಷಿಸಬಿಡಬೇಕೆಂದು ಯಾರೊ ನಿಶ್ಚಯಿಸಿಬಿಟ್ಟಂತೆ ಕಾಣುತ್ತಿತ್ತು, ದೂರಾಗುವ ದುರ್ಬಲ ಯತ್ನಗಳ ಬಲವನ್ನೂ ಮೀರಿ…

ಮತ್ತೊಂದು ಗ್ಲಾಸು ಮೇಲೆತ್ತಿ ಕೂತವನಿಗೆ ಆ ಗಳಿಗೆಯನ್ನು ಗೆದ್ದ ಖುಷಿಗಿಂತ ಆ ಛಾನ್ಸು ಕಳೆದುಕೊಂಡ ವೇದನೆಯೆ ಅಪಾರವೆನಿಸಿದಾಗ, ಆ ನೋವಿನ ಆಳ ಇನ್ನೂ ಹೆಚ್ಚಾದಂತೆನಿಸಿತು. ಆ ಗೆಲುವನ್ನೆ ಹೀರೊವನ್ನಾಗಿಸಿ ವೈಭವಿಕರಿಸಿ ನೋಡುತ್ತಾ ಆ ಹೀರೋ ತಾನೆ ಆದಂತೆ ಭ್ರಮಿಸಲು ಯತ್ನಿಸಿದರೂ ಅದೂ ಒಂದೆರಡೆ ಗಳಿಗೆಯಲ್ಲಿ ಮುದುಡಿ ಮೂಲೆ ಸೇರಿತು – ಆ ಗಳಿಗೆಯಲ್ಲಿ ಗೆದ್ದಂತೆನಿಸಿದ್ದು ನೈತಿಕತೆಯ ಬಲ, ನಿಜಾಯತಿಗಿಂತ ಹೆಚ್ಚಾಗಿ ಆ ಮಟ್ಟಕ್ಕಿಳಿಯಲು ಇರಬೇಕಾದ ಕನಿಷ್ಟ ಧೈರ್ಯವೂ , ಸಾಹಸವೂ ಇರದ ದೌರ್ಬಲ್ಯದಿಂದ ಎಂದರಿತಾಗ. ಅವನು ಸತ್ಯ ಹರಿಶ್ಚಂದ್ರನಾಗಿ, ಶ್ರೀರಾಮಚಂದ್ರನಾಗಿ ಇರಬೇಕಾದ ಅನಿವಾರ್ಯ ಬಂದದ್ದು ಅವರ ಆದರ್ಶಗಳಿಗಿಂತ ಹೆಚ್ಚಾಗಿ ನೀಚಮಟ್ಟಕ್ಕಿಳಿದು ರಾವಣ, ಕುಂಭಕರ್ಣರಾಗುವ ತಾಕತ್ತೂ, ಧೈರ್ಯವೂ ಅವನಿಗಿಲ್ಲದೆ ಇದ್ದುದ್ದು. ಪ್ರಾಯಶಃ ಅವನೇ ಏನೂ, ಸುಮಾರು ಜನರೆಲ್ಲ ಸತ್ಯಸಂಧರಾಗಿರುವುದು ತತ್ವನಿಷ್ಟೆಗಿಂತ ಹೆಚ್ಚಾಗಿ, ತತ್ವ ಭ್ರಷ್ಟರಾಗುವ ಎದೆಗಾರಿಕೆಯಿಲ್ಲದ್ದರಿಂದ ಎಂದೆ ನಂಬಿದ್ದ. ಆ ಕಾರಣದಿಂದಲೆ, ಪುಂಡ ರಾಜಕಾರಣಿಗಳನ್ನು, ಪುಡಿ ನಾಯಕರನ್ನು ಕಂಡರೆ ಅಸಹ್ಯವಾಗುವುದಕ್ಕಿಂತ, ತಾನು ಅವರಷ್ಟೂ ಆಗಲಿಕ್ಕೆ ಸಾಧ್ಯವಿಲ್ಲವಲ್ಲ ಎಂಬ ಅರಿವೆ ಹೆಚ್ಚು ಖೇದಗೊಳಿಸುತ್ತಿತ್ತು. ಅದನ್ನೆ ಯೋಚಿಸುತ್ತಾ, ತನ್ನನ್ನೆ ಮರೆತು ಕುಳಿತ ಶ್ರೀನಾಥನನ್ನು ಕರೆಗಂಟೆಯ ಸದ್ದು ಮತ್ತೆ ವಾಸ್ತವ ಜಗಕ್ಕೆ ತಂದಿಳಿಸಿತು.

ರೂಮು ಸರ್ವೀಸಿನವರಿರಬಹುದೆಂದುಕೊಂಡು, ‘ಶನಿವಾರ, ಭಾನುವಾರ ರಜೆಯಿದ್ದರೂ ಇವರೇಕೆ ಬರುತ್ತಾರೊ’ ಎಂದು ಮನದಲ್ಲೆ ಬೈದುಕೊಳ್ಳುತ ಗಾಳಿಯಲ್ಲಿ ತೇಲಿದಂತೆ ಮೆಲುವಾಗಿ ತೂರಾಡುತ್ತಲೆ ನಡೆದು ಬಾಗಿಲು ತೆರೆದರೆ, ಅವನ ಕಣ್ಣನ್ನು ಅವನೇ ನಂಬಲಾಗಲಿಲ್ಲ… ಅದು ರೂಮು ಸರ್ವೀಸಿನವರಾಗಿರದೆ, ಅವನ ಜೀವಮಾನದಲ್ಲೆ ಕಂಡರಿಯದ ಇಬ್ಬರು ಅತ್ಯಂತ ಸುಂದರ ತರುಣಿಯರಾಗಿದ್ದರು ! ತೆಳ್ಳಗೆ ಸಪೂರವಾಗಿ ಪ್ರಮಾಣಬದ್ದ ಮೈಕಟ್ಟಿನ ದೇಹದ ಸುಂದರ ಹಂದರದ, ಫಳಫಳನೆ ಹೊಳೆಯುತ್ತ ನಿಂತ ಈ ಅಪ್ಸರೆಯರನ್ನು ಕಂಡಾಗ ಅವನ ಬಾಯಿಂದ ಮಾತೆ ಹೊರಡಲಿಲ್ಲ. ಬಿಟ್ಟ ಬಾಯಿ ಬಿಟ್ಟಂತಿದ್ದರೆ ಒಳ ಸೇರಿದ್ದ ಬೀರಿನ ವಾಸನೆಯೆಲ್ಲಿ ಬಯಲಗುವುದೋ ಎಂಬ ಪ್ರಜ್ಞೆ ಬಾಯಿ ಮುಚ್ಚಿಸಿದರೂ, ಮಾತಿಲ್ಲದೆ ಮೂಕನಂತೆ ನಿಂತವನನ್ನು ಕಂಡಾ ಲಲನೆಯರು ದಾಳಿಂಬೆಯಂತ ದಂತಪಂಕ್ತಿಯನ್ನು ಮಿಂಚಿಸಿದ ನಗೆ ಚೆಲ್ಲುತ್ತ ‘ಹಲೋ..ಸಾರ್…ಮೇ ವಿ ಕಮ್ ಇನ್..?’ ಎಂದು ಥಾಯ್ ರಾಗದ ಇಂಗ್ಲೀಷಿನಲ್ಲಿ ಉಲಿದಾಗ, ಗಟ್ಟಿಯಾಗಿ ಅವರ ಮೈಯನ್ನು ಬಿಗಿದಪ್ಪಿದ್ದ ಬಿಗಿಯುಡುಗೆಯೂ ಮುಚ್ಚಲಸಮರ್ಥವಾಗಿದ್ದ, ಸವಾಲಿನಂತೆ ಅನಾವರಣವಾಗಿದ್ದ ಬಂಗಾರದ ಮೈ ಹೊಳಪನ್ನು ತುದಿಗಣ್ಣಲ್ಲೆ ಕದ್ದುಕದ್ದು ನೋಡುತ್ತ ಮೈಮರೆಯುತ್ತಿದ್ದ ಶ್ರೀನಾಥ, ಒಳಗೂ ಕರೆಯದೆ ಬಾಗಿಲಲ್ಲೆ ನಿಲ್ಲಿಸಿದ್ದು ಅರಿವಾಗಿ ಪೆಚ್ಚು ಪೆಚ್ಚಾಗಿ ನಗುತ್ತ, ‘ಪ್ಲೀಸ್..ಕಮ್’ ಎಂದವನೆ ದಾರಿ ಬಿಟ್ಟಿದ್ದ…

ಸುಂದರಾಂಗಿಯರ ಸಖ್ಯದಿಂದಾದ ದಿಗ್ಮೂಢತೆಗೊ ಏನೊ, ಇನ್ನೂ ಆ ‘ಶಾಕ್’ ನಿಂದ ಹೊರಬಂದಿರದ ಕಾರಣ, ಅವರಾರು ಏನು ಎಂದು ವಿಚಾರಿಸದೆ ಈಗ ಒಳಗೂ ಬಿಟ್ಟಿದ್ದ ಶ್ರೀನಾಥ, ಅವರು ಹಜಾರದತ್ತ ನಡೆಯುತ್ತಿದ್ದ ಹಾಗೆ ಎಚ್ಚೆತ್ತವನಂತೆ ಬಾಗಿಲು ಹಾಕಿ ಬಂದವನೆ ಸೋಫಾದಲ್ಲಿ ಅವರ ಎದುರು ಕುಳಿತ, ‘ಏನು?’ ಎಂಬ ಪ್ರಶ್ನಾರ್ಥಕ ಚಿಹ್ನೆ ಹೊತ್ತ ಮುಖಭಾವದಲ್ಲಿ. ಒಂದರೆಗಳಿಗೆ ಪರಸ್ಪರ ಮುಖ ನೋಡಿಕೊಂಡ ಆ ಸುಂದರಿಯರು ತುಸು ಅಚ್ಚರಿಗೊಂಡಂತೆ ಕಂಡರೂ, ಕಡೆಗವರಿಬ್ಬರಲ್ಲೊಬ್ಬಳು – ಬಹುಶಃ ತುಸು ಇಂಗ್ಲೀಷಿನ ಪರಿಣಿತಿಯಿದ್ದವಳೇನೊ, ಮೆಲುವಾದ ದನಿಯಲ್ಲಿ, ‘ಯು ಲೈಕ್ ಮೀ ಆರ್ ಶೀ? ‘ ಎಂದಾಗ, ಕೂತಲ್ಲೆ ಕರೆಂಟು ಹೊಡೆದವನಂತೆ ಬೆಚ್ಚಿಬಿದ್ದ. ಅವನು ನೆಗೆದೆದ್ದ ಪರಿ ನೋಡಿಯೆ ಅವರಿಗೆ ಏನೊ ಎಡವಟ್ಟಿರಬೇಕೆಂದು ಅರಿವಾಗಿ, ಆ ಇನ್ನೊಬ್ಬಳು – ‘ಮೇಡಂ ಸೆಂಡ್ ಅಸ್..ಯು ಸೆಲೆಕ್ಟ್ ದ ವನ್ ಯು ಲೈಕ್..’ ಎಂದು ಸಾಕಷ್ಟು ಸುಂದರವಾದ ಇಂಗ್ಲೀಷಿನಲ್ಲೆ ಉಲಿದಾಗ, ಅವನಿಗೆ ನಿಧಾನವಾಗೆಲ್ಲ ಅರ್ಥವಾಗತೊಡಗಿತು… ತಾನು ಬೇಡವೆಂದು ನಿರಾಕರಿಸಿ ಪೋನು ಇಟ್ಟಿದ್ದರೂ ಬಿಡದೆ, ಇಬ್ಬರು ಪರಮಾಯಿಶಿ ಸುಂದರಿಯರನ್ನು ಅವನತ್ತ ಕಳುಹಿಸಿ ಅವನ ‘ಭೀಷ್ಮ ಪ್ರತಿಜ್ಞೆ’ಯನ್ನು ಮತ್ತೆ ಪರೀಕ್ಷೆಗೊಡ್ಡಿದ್ದಳು ಆ ಚಾಣಾಕ್ಷ, ವ್ಯವಹಾರ ತಜ್ಞೆ; ಮುನಿಗಳು ತಪಕ್ಕಿಳಿದಾಗೆಲ್ಲ ಅದನ್ನು ಭಂಗಗೊಳಿಸಲೆಂದೆ ಅಪ್ಸರೆಯರನ್ನು ಅಟ್ಟಿ ಅವರ ಮನೋಬಲದ, ಕಾಮ ನಿಗ್ರಹದ ಶಕ್ತಿಯನ್ನು ಪರೀಕ್ಷೆಗೊಡ್ಡುತ್ತಿದ್ದ ಸುರೇಂದ್ರನಂತೆ..ಅದೇನೂ ಕನಸೊ, ನನಸೋ ಅರಿವಾಗದೆ ಒಂದರೆಕ್ಷಣ ದಿಗ್ಭ್ರಾಂತನಾಗಿ ಮಾತೆ ಹೊರಡದೆ ಕೂತು ಬಿಟ್ಟ…

(ಇನ್ನೂ ಇದೆ)
_____________

(ಪರಿಭ್ರಮಣ..(05)ರ ಕೊಂಡಿ: https://nageshamysore.wordpress.com/00167-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-05/ )

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s