00167. ಕಥೆ: ಪರಿಭ್ರಮಣ..(05)

00167. ಕಥೆ: ಪರಿಭ್ರಮಣ..(05)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

ಕಥೆ: ಪರಿಭ್ರಮಣ..(05)

(ಪರಿಭ್ರಮಣ..(04)ರ ಕೊಂಡಿ – https://nageshamysore.wordpress.com/00165-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-04/ )

ಅವಳ ಮಾತಿಗೂ ಉತ್ತರಿಸದೆ ಚಿಂತನೆಯಲ್ಲಿ ತಲ್ಲೀನನಾದಂತೆ ಕುಳಿತವನ ಕಂಡು, ಅದೇ ತರುಣಿ – ‘ಡು ಯು ಲೈಕ್ ಮೀ ? ದೆನ್ ಶೀ ವಿಲ್ ಗೊ..’ ಎಂದಾಗ, ತಾನೂ ಈಗಾಗಲೆ ಬೇಡವೆಂದು ನಿರಾಕರಿಸಿದ್ದೆ ಎಂದು ಹೇಳಿ ಅವರನ್ನು ಹಿಂದೆ ಕಳಿಸುವ ಮನಸಾಗದೆ, ಇಬ್ಬರು ಅಪ್ರತಿಮ ಸುಂದರಿಯರ ನಡುವೆ ಇವಳಾದರೂ ತುಸು ಇಂಗ್ಲೀಷು ಮಾತಾಡುತ್ತಾಳಲ್ಲ ಎನಿಸಿ, ‘ಹೂಂ’ ಎನ್ನುವಂತೆ ತಲೆಯಾಡಿಸಿದ. ಅಷ್ಟಾದದ್ದೆ ತಡೆ, ಅವರಿಬ್ಬರೂ ಕಣ್ಣಿನಲ್ಲೆ ಏನೊ ಮಾತನಾಡಿಕೊಂಡು, ಆ ಜತೆಯಲ್ಲಿದ್ದವಳು ‘ಬೈ..ಬೈ..’ ಎಂದು ಹೇಳುತ್ತ ಹೊರಟು ಹೋದಳು. ಕೊನೆಗೆ ಒಬ್ಬಳಾಗಿ ಉಳಿದ ಆ ಮೋಹಕ ತರುಣಿ, ಎದುರಿನ ಸೋಫಾದಿಂದೆದ್ದು ನೇರ ಅವನ ಪಕ್ಕಕ್ಕೆ ಬಂದು ಕುಳಿತು ಸುಂದರವಾದ ಮುಗುಳ್ನಗುವಿನೊಂದಿಗೆ ಅವನ ಹೆಗಲ ಮೇಲೆ ಕೈ ಹಾಕಿದಾಗ, ಹೆದರಿಕೆಗೊ, ರೋಮಾಂಚನಕ್ಕೊ ಅಥವಾ ಹೆಸರಿಸಲಾಗದ ಯಾವುದೊ ಭಾವೋತ್ಕರ್ಷಕ್ಕೊ – ಮೈಯೆಲ್ಲಾ ಥರಥರನೆ ಕಂಪಿಸಿ, ಜಿಲ್ಲನೆ ಒಳಗೆಲ್ಲ ಬೆವರೊಡೆದು ಮುಖದಿಂದಲೂ ಜಿನುಗಲಿಕ್ಕೆ ಶುರುವಾಯ್ತು ಆ ಹವಾನಿಯಂತ್ರಿತ ಹಾಲಿನಲ್ಲೂ.

ಇವನ ಪಾಡು ಕಂಡು, ಇವನಂಥಹ ನೂರಾರು ಹೊಸ ಮುಖಗಳನ್ನು ಪಳಗಿಸಿದ ಅನುಭವವಿದ್ದ ಆ ಮನೋಹರಿ, ಮತ್ತೆ ಮೋಹಕ ಮೆಲು ನಗೆ ನಕ್ಕು, ‘ಡೊಂಟ್ ವರಿ …ಐ ಯಾಮ್ ನಾಟ್ ಟೈಗರ’ ಎಂದು ಜೋಕ್ ಮಾಡುತ್ತ ಹೆಗಲ ಹಿಂದಿನಿಂದ ಬಳಸಿದ್ದ ಕೈಯನ್ನು, ಅವನು ತೊಟ್ಟಿದ್ದ ಟೀ ಶರಟಿನಿಂದಲೆ ಜಾರಿಸಿ ತನ್ನ ಮೃದುವಾದ, ನವಿರು ಚಿಗುರು ಬೆರಳುಗಳನ್ನು ಅವನ ಮೇಲೆ ನಯವಾಗಿ ಆಡಿಸಿದಾಗ, ಇಡಿ ಮೈಯೆಲ್ಲ ಸೆಟೆದು ಕಂಬದಂತೆ ಬಿಗಿದು ಹುರಿಗಟ್ಟಿದ ಅನುಭವವಾಗಿ ಕೂತಲ್ಲೆ ಮರಗಟ್ಟಿ ಹೋದ ಶ್ರೀನಾಥ. ತುದಿಗಣ್ಣಿನಿಂದ ಅದನ್ನೆ ಗಮನಿಸುತ್ತಿದ್ದ ಆ ನುರಿತ ಹೆಣ್ಣು, ಬಲಿ ಹದಕ್ಕೆ ಬರುತ್ತಿದೆಯೆಂದರಿತವಳೆ ತುಸು ಸಡಿಲಾಗಿ ಹೊಂದಿಕೆಗೆ ಸಮಯ ಕೊಟ್ಟು ತಿಳಿಗೊಳಿಸುವ ಉದ್ದೇಶದಿಂದಲೊ ಎಂಬಂತೆ ಕೈಯನ್ಹಿಂದೆತ್ತಿಕೊಂಡು ಮತ್ತೆ ಹೆಗಲ ಮೇಲಿಡುತ್ತ ಅವನ ಕಣ್ಣಲ್ಲೆ ಕಣ್ಣಿಟ್ಟು ನೋಡುತ್ತ ,

“ಕ್ಯಾನ್ ಯು ಗೀವ್ ಮೀ ದ ಮನಿ ಫಸ್ಟ್? ಐ ಶುಡ್ ಇನ್ಫಾರ್ಮ್ ದ ಮೇಡಂ ಅಫ್ಟರ ಕಲೆಕ್ಟಿಂಗ್ ಮನಿ” – ಎಂದಳು.

ಒಳ ಸೇರಿದ್ದ ಬಿಯರ, ಊಹಿಸಲೂ ಆಗದಿದ್ದ ಸಂಘಟನೆಗಳ ವೇಗ, ಸಾಂಧರ್ಭಿಕವಾಗಿ ಮತ್ತು ಸಂಧರ್ಭಾನುಕ್ರಮಣದಲಿ ಪ್ರತಿಕ್ರಿಯಿಸಬೇಕಾದ ಅನಿವಾರ್ಯತೆ, ಇದೆಲ್ಲಾ ಸೇರಿ ಶ್ರೀನಾಥನಿಗೆ ತಾನೇನು ಮಾಡಬೇಕು, ಏನು ಮಾಡಬಾರದೆಂಬ ಪರಿಜ್ಞಾನವಾಗಲಿ, ಅದನೆಲ್ಲಾ ಚಿಂತಿಸಿ ವಿವೇಚಿಸುವ ಸಂಯಮ ತಾಳ್ಮೆಗಳಾಗಲಿ ಕೆಲಸ ಮಾಡದೆ ಸ್ಥಬ್ದವಾಗಿ ಹೋಗಿತ್ತು. ಸಣ್ಣ ಸ್ಪರ್ಷವೊಂದರಿಂದಲೆ ಇಡೀ ಮೈಯಲ್ಲಿ ಬೆಂಕಿಯ ಕಿಡಿಯೆಬ್ಬಿಸಿದ ಸುಂದರಿ ಹೆಣ್ಣು ಉದ್ವೇಗ, ಉದ್ದೀಪನದ ಕುದುರೆಯೇರುವ ಮೊದಲೆ ಲಗಾಮು ಎಳೆದು ಮೊದಲು ಕರ ತೆತ್ತು ನಂತರ ಮುಂದೆ ಹೋಗೆನ್ನುವ ಸುಂಕದವಳಂತೆ ಹಣದ ಮಾತೆತ್ತಿದಾಗ, ಆ ವ್ಯವಹಾರದ ಕೌಶಲ್ಯತೆಯ ಹಿಂದಿನ ಚಾಣಾಕ್ಷತೆ ಕಂಡು ಸೋಜಿಗವೂ ಆಯ್ತು.

ಈ ವ್ಯವಹಾರದ ಮನೋಭಾವವೆ ಹೀಗೇನೊ – ಮೊದಲು ಶಿಖರವೇರುವಾಗ ಇರುವ ತವಕ, ಉತ್ಸಾಹ, ಉದ್ವೇಗ, ಕಾತುರಾತುರಗಳು ಗಮ್ಯ ತಲುಪಿದ ಮೇಲೂ ಹಾಗೆಯೆ, ಅಷ್ಟೇ ಪ್ರಮಾಣದಲ್ಲಿ ಇರುವುದಿಲ್ಲವಲ್ಲ? ಗಮ್ಯದ ತೃಪ್ತಿ, ಅತೃಪ್ತಿಯ ಅನಾವರಣದೊಡನೆ ಯಾವ ರೀತಿಯ ಮನೋವಾಂಛೆ ಮುಂಚೂಣಿಗೆ ಬಂದು ಪ್ರಭಾವ ಬೀರುತ್ತದೊ ಹೇಳಲಾಗದು. ತೆವಲು ತೀರಿದ ಹೊತ್ತಲಿ, ಕಳೆದುಕೊಂಡ ಭಾವನೆಯೂ ತೀವ್ರಗತಿಯಲ್ಲಿ ಆವಿರ್ಭವಿಸಿ, ಒಳಗೆಲ್ಲ ಖಾಲಿ ಖಾಲಿಯಾದ ಅನುಭವವನ್ನು ಜತೆಗೇ ಕಟ್ಟಿಕೊಡುವುದರಿಂದ ಆ ಗಳಿಗೆಯ ಸಂತೃಪ್ತಿ, ಅತೃಪ್ತಿಗಳು ಅವನು ಕೊಡಬೇಕಾದ ಹಣದ ಮನಸ್ಥಿತಿಯ ಮೇಲೂ ಕೆಲಸಮಾಡುತ್ತವೆ. ಅತೃಪ್ತಿಯ ತೀಟೆ ತೆರುವ ಕಾಸಿಗೆ ಸಂಚಕಾರ ತರಬಾರದೆಂದಿದ್ದರೆ, ಮೊದಲೆ ಕಬ್ಬಿಣ ಕಾದಿರುವಾಗಲೆ ವಸೂಲಿ ಮಾಡಿಬಿಡಬೇಕು; ಹಾಗೆಯೆ ಅದನ್ನು ಕೇವಲ ತೋರಿಕೆಗಾದರೂ, ಹಣದ ವ್ಯಾಪಾರದಂತೆ ಕಾಣದ ಹಾಗೆ ಮುಚ್ಚಿಡಲು ಬಂದ ಕೂಡಲೆ ಆ ಮಾತೆತ್ತದೆ, ಸ್ಪರ್ಷ-ಕರ್ಷಗಳಿಂದ ಮೊದಲು ಮೆಲುವಾಗಿ ಪ್ರಚೋದಿಸಿ, ಕಬ್ಬಿಣ ಹದವಾಗಿದೆ ಎಂದರಿವಾದೊಡನೆ ಬಡಿದುಹಾಕುವ ಜಾಣ ಹುನ್ನಾರ! – ಗುಡ್ ಬಿಸಿನೆಜ್ ಪ್ರೋಸಸ್ ಎಂದು ಆ ಕ್ಷಣದಲ್ಲೂ ಮನದಲ್ಲೆ ಮೆಚ್ಚಿಕೊಳ್ಳುತ್ತ, ‘ಹೌ ಮಚ್’ ಎಂದು ಕೇಳಿದ ಶ್ರೀನಾಥ. ಆ ಚಿಂತನೆಯೆಲ್ಲಾ ಜರಡಿಯಾಗಿ ಮನಃಪಟಲದಿಂದ ಸೋಸಿ ಬಾಯಲ್ಲಿನ ಎರಡು ಪದಗಳಾಗಿ ಹೊಮ್ಮುವಷ್ಟು ಹೊತ್ತಿಗೆ, ಕುಡಿದ ಅಮಲಿನ ಜತೆ ಜರ್ರೆಂದು ಮೇಲೆರಿದ್ದ ತನುವಿನ ಧಗಧಗತೆಯ ಅಮಲು, ಗಾಳಿಯಲ್ಲಿ ಕಾವಾರಿಸಿಕೊಳ್ಳುವ ಬಿಸಿ ಲೋಹದಂತೆ ತುಸು ತಹಬಂದಿಗೆ ಬಂದಂತೆ ಕಾಣುತ್ತಿತ್ತು.

ಅವಳು ಕಣ್ಣಲ್ಲೆ ಮೋಹಕ ನಗೆ ಬೀರುತ್ತ, ತುಟಿಯಿಂದ ಮತ್ತಷ್ಟು ಅರಳು ಮಲ್ಲಿಗೆಯನ್ನು ಸುರಿಸಿ – ‘ಟು ಮೇಡಂ 5000 ಬಾತ್…ಲೇಟರ್ ಇಫ್ ಯೂ ಆರ್ ಹ್ಯಾಪೀ, ಗೀವ್ ಮೀ ಮೋರ್ ವಾಟೇವರ್ ಯೂ ಲೈಕ್…’ಎಂದು ಕಣ್ಣು ಮಿಟುಕಿಸಿದಳು. ಯಾಕೊ, ಅವಳು ಹಣದ ವಿಷಯ ಎತ್ತುತ್ತಿದ್ದಂತೆ ಇವನಲ್ಲಿನ ಅವಳ ಕುರಿತಾದ ಉದ್ವೇಗದ ಬೆಂಕಿಯೂ ತುಸುತುಸುವೆ ನೀರಲದ್ದಿದ ಬಿಸಿ ಲೋಹವಾಗುತ್ತಿದ್ದಂತೆ ಭಾಸವಾದರು, ಹಣ ತರಲು ಮೇಲೆದ್ದ. ತಾನು ತೂರಾಡುತ್ತಿರುವುದು ಅವಳ ಗಮನಕ್ಕೆ ಬಾರದಿರದಂತೆ ಆದಷ್ಟು ಸಮತೋಲಿಸುವಂತೆ ನಿಧಾನ ನಡೆಯಲು ಹವಣಿಸುತ್ತಿರುವಾಗಲೆ ಅವಳು – ‘ವೇರ್ ಇಸ್ ದ ಬಾತ್ ರೂಮ್? ಐ ವಿಲ್ ಟೇಕ್ ಶವರ ಫಸ್ಟ್’ ಎಂದಳು. ಅವಳಿಗೆ ಹಾಲಿನ ಮೂಲೆಯ ಹಿಂದೆ ಅಡಗಿದ್ದ ಕಾಮನ್ ಬಾತ್ ರೂಮ್ ತೋರಿಸಿ, ಅವಳತ್ತ ಹೋಗುತ್ತಿದ್ದಂತೆ ತಾನು ಸಾವಾರಿಸಿಕೊಂಡು ಹೋಗುವ ಯತ್ನಕ್ಕೆ ತಿಲಾಂಜಲಿಯಿತ್ತು, ಅಡ್ಡಾದಿಡ್ಡಿಯಾಗಿಯೆ ರೂಮಿನತ್ತ ನಡೆದ. ಪರ್ಸಿನಿಂದ ಐದು ಸಾವಿರದ ಜತೆಗೆ ಮತೈನೂರನ್ನು ಬೇರೆಯಾಗಿ ಜೇಬಿನಲ್ಲಿ ಎತ್ತಿಟ್ಟುಕೊಂಡು, ಐದು ಸಾವಿರವನ್ನು ಮಾತ್ರ ಟೀ ಶರ್ಟಿನ ಜೇಬಿನಲಿಟ್ಟುಕೊಂಡು ನಡೆದು ಬಂದು ಮತ್ತೆ ಸೋಫಾದಲ್ಲಿ ಕುಳಿತವನೆ ಟೀವಿ ಚಾನಲ್ ತಿರುಗಿಸತೊಡಗಿದ. ಅಲ್ಲಿ ಬಿ.ಬಿ.ಸಿ, ಸಿ.ಎನ್.ಎನ್. ಗಳಂತಹ ಒಂದೆರಡು ನ್ಯೂಸ್ ಚಾನಲ್ಲುಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಬರಿ ಥಾಯ್ ಮಾತ್ರವೆ ಬರುತ್ತಿದ್ದುದ್ದು. ಒಂದಷ್ಟು ಹೊತ್ತು ನೋಡಿದ್ದ ಸುದ್ದಿಯನ್ನೆ ಪದೆ ಪದೆ ನೋಡಿ ಬೇಸರವಾಗಿ ರಿಮೋಟಿನಿಂದ ಟೀವಿ ಆರಿಸುತ್ತಿದ್ದಂತೆ ಬಾತ್ ರೂಮಿನ ಬಾಗಿಲು ತೆರೆಯಿತು. ಅಲ್ಲಿಂದ ಗಮ್ಮೆನ್ನುವ ಪರಿಮಳದೊಂದಿಗೆ ಮೈಗೆ ಬಿಳಿಯ ಟವೆಲ್ ಮಾತ್ರ ಸುತ್ತಿಕೊಂಡ ಲಲನೆ, ಲಾಲಿತ್ಯದಿಂದ ಹೆಜ್ಜೆ ಹಾಕುತ್ತ ನಿಧಾನವಾಗಿ ಅವನ ಸೋಫಾದ ಮುಂದೆ ಬಂದು ಗಟ್ಟಿ ಮರದ ಟೀಫಾಯಿಯ ತುದಿಯಲ್ಲಿ ಎದುರಾಗಿ ಕುಳಿತು ಮುಂದೆ ಬಗ್ಗಿ ತನ್ನ ಹಣೆಯನ್ನು ಅವನ ಹಣೆಗೆ ಆನಿಸಿ, ಕೈಯಿಂದ ಅವನ ಕತ್ತು ಬಳಸಿದವಳೆ, ‘ಡಿಯರ್..ಐ ಯಾಮ್ ರೆಡಿ’ ಎಂದಳು.

ಅದೆ ಹೊತ್ತಿನಲ್ಲಿ, ಅವಳ ಕಣ್ಣು ಜೋಬಿನಿಂದ ಇಣುಕಿ ನೋಡುತ್ತಿದ್ದ ಗರಿಗರಿ ನೋಟುಗಳನ್ನು ಗಮನಿಸಿ, ಅವನ್ನು ಹಾಗೆ ಹೆಕ್ಕಿ, ಎಣಿಸಿ ಪಕ್ಕದಲ್ಲಿದ್ದ ಪರ್ಸಿನೊಳಗಡೆಗೆ ಸೇರಿಸಿತು. ಹಾಗೆಯೆ ತುಂಟತನದಿಂದ – ‘ಮನೀ ಫಾರ್ ಮೈ ಟ್ಯಾಕ್ಸಿ..?’ ಎಂದಾಗ ಇನ್ನೊಂದು ಜೇಬಿನಲ್ಲಿದ್ದ ಐನೂರನ್ನು ನಿರ್ಲಿಪ್ತನಂತೆ ಎತ್ತಿ ಕೊಟ್ಟು ಬಿಟ್ಟ. ಅವಳ ಕಣ್ಣಲ್ಲಿ ಮಿನುಗಿದ ಖುಷಿಯ ತುಣುಕನ್ನು ಗಮನಿಸುತ್ತಿದ್ದ ಹಾಗೆ, ಅವಳು ಮತ್ತೆ ಅವನ ಪಕ್ಕದಲ್ಲಿ ಬಂದು ಕುಳಿತು ಅವನ ಮೇಲೆ ಕೈಯಿಟ್ಟಳು. ಯಾಕೊ ಏನೊ ಈ ಬಾರಿ ಅವಳ ಸ್ಪರ್ಷವಾಗಲಿ, ಅವಳ ದೇಹದಿಂದೊಮ್ಮುತ್ತಿದ್ದ ಮಧುರ ಸುವಾಸನೆಯ ಸೊಗಡಾಗಲಿ ಅವನಲ್ಲಾವ ಭಾವತೀವ್ರತೆಯನ್ನು ಎಬ್ಬಿಸದೆ ಬರಿಯ ಯಾಂತ್ರಿಕ ಚಟುವಟಿಕೆಯ ಭಾಗ ರೂಪವಾಗಿ ಕಂಡುಬಂದು ಅವನ ದೇಹದಲ್ಲಾವ ಬದಲಾವಣೆಯನ್ನಾಗಲಿ, ಪ್ರತಿಕ್ರಿಯೆಯನ್ನಾಗಲಿ ಹುಟ್ಟಿಸದೆ ಬರಿಯ ಮರಗಟ್ಟಿದ ಕೊರಡಿನ ಹಾಗೆ ಸ್ಥಬ್ದವಾಗಿದ್ದಂತೆ ಅನಿಸಿತು.

ಅದನ್ನು ಸೂಕ್ಷ್ಮವಾಗಿಯೆ ಗಮನಿಸಿದ ಆಕೆ, ಇನ್ನು ಮುಖದ ಹತ್ತಿರ ಮುಖ ತಂದು ಕೆನ್ನೆಯಿಂದ ಕೆನ್ನೆಗೆ ತಾಗುವಂತೆ ಮೆಲುವಾಗಿ ನೇವರಿಸಿ, ಅವನ ಕೈಹಿಡಿದುಕೊಂಡಳು. ಸೂಕ್ತ ಪ್ರತಿಸ್ಪಂದನವಿರದಿದ್ದರು ಅವಳ ಕೈ ಹಿಡಿದು ಮೇಲೆದ್ದ ಶ್ರೀನಾಥ ಗರಿಗಟ್ಟಿದಂತಿದ್ದ ದೇಹ ಮತ್ತೆ ಮರಗಟ್ಟಿದು ಏಕೆ ಎನ್ನುವ ಒಗಟನ್ನು ಬಿಡಿಸಲೆತ್ನಿಸುತ್ತ ಅವಳ ಕೈ ಹಿಡಿದು ಯಾಂತ್ರಿಕವಾಗಿಯೆಂಬಂತೆ ಜತೆ ನಡೆದ. ಹಾಲಿನಲ್ಲಿ ಹತ್ತಿರದಲ್ಲಿದ್ದ ರೂಮಿನ ಒಳ ಸೇರುತ್ತಿದ್ದಂತೆ ಸ್ವಚ್ಚ ಬಿಳಿ ಚಾದರ ಹೊದ್ದ ಹಾಸಿಗೆಯ ಮೇಲೆ, ಪಕ್ಕದಲ್ಲೆ ಕುಳಿತು ಹಿಂದಿನಿಂದ ಬಿಗಿದಪ್ಪಿದಳು. ಈ ಬಾರಿ ಮತ್ತೆ ಸಂವೇದನೆಯ ತುಣುಕೇನೊ ಬಡಿದೆಬ್ಬಿಸಿದಂತೆ ತುಸು ಬಿಸಿಯೇರಿಸಿದಂತಾದಾಗ, ಬಳಸಿದ್ದ ಅವಳ ಎರಡು ಕೈಗಳನ್ನೆ ಹಿಡಿದು ಬಣ್ಣ ಹಚ್ಚಿದ್ದ ಉದ್ದನೆಯ ಚಿಗುರು ಬೆರಳನ್ನೆ ನೋಡುತ್ತಿದ್ದ ಅವನನ್ನು ಹಾಗೆ ಮೇಲೆಳೆದು ಹಾಸಿಗೆಗೊರಗಿಸಿ ಮತ್ತೆ ಮುಖದತ್ತ ಮುಖ ತಂದವಳೆ, ‘ಪ್ಲೀಸ್ ..’ ಎಂದು ಕಣ್ಮುಂದೆ ಏನೊ ಹಿಡಿದಳು..

ಅದೇನೆಂದು ಕುತೂಹಲದಿಂದ ಅವಳ ಕೈ ನೋಡಿದರೆ ‘ಕಾಂಡೋಮ್’ ಪ್ಯಾಕೇಟ್…..!

ಕಡಿವಾಣರಹಿತ ಲೈಂಗಿಕ ಜೀವನದ ಅಪರಿಚಿತ ಸಾಂಗತ್ಯಗಳ ನಡುವೆಯೆ ಜೀವಿಸಬೇಕಾದ ಅನಿವಾರ್ಯದಲ್ಲಿ ರೋಗ ರುಜಿನಗಳ ಗೂಡಾಗದೆ ತಮ್ಮನ್ನು ತಾವೆ ರಕ್ಷಿಸಿಕೊಳ್ಳಲು, ಈ ದೇಹ ವ್ಯಾಪಾರದ ಬಿಜಿನೆಸ್ಸಿಗಿಳಿದಿರುವ ಪ್ರತಿ ಹೆಣ್ಣು ತಪ್ಪದೆ ಬಳಸುವ ಉಪಾಯವೆಂದರೆ ಇದೆ. ಬರಿ ತಮ್ಮದೆ ಅಲ್ಲದೆ ಗಿರಾಕಿಗಳ ಸುರಕ್ಷತೆಗೂ ಇದು ಅನಿವಾರ್ಯ ಎಂಬ ಹಿನ್ನಲೆ. ಇದೆಲ್ಲಕ್ಕಿಂತಲು ಮಿಕ್ಕಿದ ಕಾರಣ ಅವರ ಮೇಡಮ್ಮುಗಳು ತಯಾರು ಮಾಡುವಾಗಲೆ ಪದೆಪದೆ ಹೇಳಿ ತಲೆ ತುಂಬಿರುವ ಒಂದೆ ಸಾಲಿನ ನಿಯಮ – ‘ಅದು ಯಾರೆ ಆದರೂ ಸರಿ, ಗಿರಾಕಿಯನ್ನು ಸುರಕ್ಷತೆಯನ್ನು ಬಳಸದೆ ಮಾತ್ರ ಸೇರಬಾರದು’ ಎಂಬುದು. ಅದನ್ನು ಆ ಹುಡುಗಿಯರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲು ಮಿಲನೋತ್ಸವದ ಆ ಜಾಗದಲ್ಲಿ ಮೇಡಮ್ಮುಗಳು ಇರುವುದಿಲ್ಲವಾದರೂ, ಅವರು ಬಳಸುವ ಮಂತ್ರವೊಂದು ಅವರಿಲ್ಲದೆಯು ಅಷ್ಟೆ ಸಮರ್ಪಕವಾಗಿ ಕೆಲಸ ಮಾಡುತ್ತದೆ. ಹೇಳಿ ಕೇಳಿ ಈ ವೃತ್ತಿಗಿಳಿಸಿದ ಹೆಣ್ಣು ಮಕ್ಕಳಲ್ಲಿ ಬಹು ಪಾಲು ಬೇರೆ ಯಾವುದಾವುದೊ ಸುತ್ತ ಮುತ್ತಲ ಅಥವಾ ದೂರದ ಹಳ್ಳಿ , ಪಟ್ಟಣಗಳಿಂದ ಬಂದವರು. ಅವರಲ್ಲೆಷ್ಟೊ ಜನ ಮನೆಯಲ್ಲಿ ಸತ್ಯ ವಿಚಾರ ಹೇಳದೆ ಯಾವುದ್ಯಾವುದೊ ಸುಳ್ಳು ನೆಪದಲ್ಲಿ ಬಂದು ಸೇರಿಕೊಂಡವರೆ ಹೆಚ್ಚು. ಹೇಗೊ ಒಂದಷ್ಟು ದಿನ ಕಳೆದು ಆದಷ್ಟು ಕಾಸು ಮಾಡಿಕೊಂಡು ಎಷ್ಟು ಬೇಗನೆ ಸಾಧ್ಯವೊ ಅಷ್ಟು ಬೇಗನೆ ಊರಿಗೆ ಹೋಗಿಬಿಡಬೇಕೆಂಬ ತವಕದಿಂದ ಆದಷ್ಟು ಗುಟ್ಟಿನಲ್ಲಿ, ಆದಷ್ಟು ಸುರಕ್ಷಿತವಾಗಿ ಇರಲು ಬಯಸುವ ಮನದಾತಂಕ ಆ ನಿಯಮ ಪಾಲನೆಯ ಮಂತ್ರದಂಡದಂತೆ ಕಾರ್ಯ ನಿರ್ವಹಿಸಿಬಿಡುತ್ತದೆ. ಜತೆಗೆ ಬೇಡದ ಬಸಿರಿನ ಭೀತಿಯೂ ಸೇರಿಕೊಂಡುಬಿಡುತ್ತದೆ. ಹೀಗಾಗಿ, ಅದಿಲ್ಲದೆ ಯಾರೂ ಮುಂದುವರೆಯುವುದಿಲ್ಲ. ಅದಕ್ಕೆ ಒಲ್ಲದ ಗಿರಾಕಿಯ ಮನವೊಲಿಸುವ ಎಲ್ಲಾ ತರದ ‘ಚಮಕ್’ಗಳನ್ನು, ಚತುರತೆಯನ್ನು ತೋರಿಸುವುದೆ ಅವರ ವೃತ್ತಿ ನೈಪುಣ್ಯತೆಯ ಮಾನದಂಡವೂ ಆಗಿಬಿಡುತ್ತದೆ.

ವಿಪರ್ಯಾಸವೆಂದರೆ ಹಾಗೆ ಬಂದ ನೂರಕ್ಕೆ ತೊಂಬತ್ತೊಂಭತ್ತು ಜನ ಮತ್ತೆ ಹಿಂದಿರುಗಿ ಹೋಗುವುದೆ ಇಲ್ಲ. ಹೋಗುವ ಇರಾದೆಯಿಂದಲೆ ಆರಂಭವಾಗಿ ಪ್ರತಿ ತಿಂಗಳು ಅಲ್ಲಿಂದಲೆ ಊರಿಗೆ ಹಣ ಕಳಿಸುತ್ತ, ಅಷ್ಟಿಷ್ಟು ಕೂಡಿಡುತ್ತ ಆರಂಭವಾಗುವ ಬದುಕು ಬಹು ಬೇಗನೆ ತನ್ನದೆ ಆದ ವಿಷವರ್ತುಲದೊಳಕ್ಕೆ ಸಿಕ್ಕಿಕೊಳ್ಳಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಇದ್ದಕ್ಕಿದ್ದಂತೆ ಬರಲಾರಂಭಿಸಿದ ಹಣದ ರುಚಿ ಮನೆಯವರಲ್ಲಿ ಆಸೆಗಳ ಬೆಟ್ಟಗಳನ್ನೆ ಸೃಷ್ಟಿಸುತ್ತ, ನಿರಂತರ ಧಾರೆಯನ್ನು ಬಯಸುವ ನಿರೀಕ್ಷೆಯಾಗಲಿಕ್ಕೆ ಅದೆಷ್ಟು ಹೊತ್ತು? ಅದರಿಂದಲೆ ತಾನು ವಾಪಸ್ಸು ಹೋಗುವುದಕ್ಕಿಂತಲು ಆದಷ್ಟು ಇಲ್ಲೆ ಕಾಲದೂಡುವುದೆ ಜಾಣತನವೆಂದು ಯಾರೂ ಹೇಳಿಕೊಡದಿದ್ದರೂ ಅರಿವಾಗಿಸಿಬಿಡುತ್ತದೆ, ವಾಸ್ತವಗಳ ಅನಿವಾರ್ಯ. ಹೀಗೆ ಒಂದು, ಎರಡು, ಮೂರು….ಎನ್ನುತ್ತಲೆ ವರ್ಷಗಳು ಉರುಳಿ ಹೋದಾಗ, ಒಮ್ಮೆ ಹೊರಳಿ ನೋಡಿದರೆ ತಾವು ಮತ್ತೆ ಹಿಂದಿರುಗಲಾಗದ ಹಾದಿಯಲ್ಲಿ ಬಹುದೂರ ಸಾಗಿ ಬಂದಿರುವುದು ಮನದಟ್ಟಾಗಿಹೋಗಿರುತ್ತದೆ. ಒಲ್ಲದ ವೃತ್ತಿಯೊ, ಸಲ್ಲದ ವೃತ್ತಿಯೊ ಈಗ ಅದೆ ಬದುಕಿನ ಬಂಡಿಯೆಳೆಯುವ ಹರಿಕಾರ. ಈಗ ವೃತ್ತಿ ಪರಿಣಿತಿಯ ಜಾಣತನ ಮೇಡಮ್ಮುಗಳು ಹೇಳಲಿ, ಬಿಡಲಿ ತಾನಾಗೆ ಕೆಲಸ ಮಾಡುತ್ತದೆ. ಅವರಿಗೆ ಚೆನ್ನಾಗಿ ಗೊತ್ತು – ರೂಪು, ವಯಸ್ಸು, ಬಣ್ಣಗಳಿರುವತನಕವಷ್ಟೆ ಇಲ್ಲಿ ಬೆಲೆ. ರೋಗದ ಮೂಟೆಯಾದರು ಇಲ್ಲಿ ಕೇಳುವವರು ದಿಕ್ಕಿಲ್ಲ ; ಬಸಿರಾಗಿ ಹಡೆದು ಬಿಗಿ ಸಡಿಲಾದರೂ ಮೂಸುವವರು ಸಿಕ್ಕದೆ ತೀರ ಕೆಳಸ್ತರಕ್ಕಿಳಿಯಬೇಕಾಗುತ್ತದೆ. ಅದಕ್ಕೆ ವೃತ್ತಿಗೆ ಹೊಸಬರಿರಲಿ, ಹಳಬರಿರಲಿ ವ್ಯಾನಿಟಿ ಬ್ಯಾಗಿನಲ್ಲಿ ಮೇಕಪ್ಪಿನ ಜತೆಗೊಂದು ಕಾಂಡೋಮ್ ಪ್ಯಾಕೆಟ್ಟಿಲ್ಲದೆ ಅವರು ಹೊರಗೆ ಹೊರಡುವುದೆ ಇಲ್ಲ…

ಮೊಟ್ಟಮೊದಲ ಬಾರಿಗೆ ತಾನು ಬಯಸಿದ ಸ್ತ್ರೀ ಸೌಖ್ಯವೊಂದು ಕೈಗೂಡುತಿರುವಾಗ ಈ ಕೃತಕತೆಯ ತೆಳುಗೋಡೆ ಮಿಲನದ ಸ್ವೇಚ್ಛೆಗಳಿಗೆಲ್ಲ ಹಾಕಿದ ಅಡ್ಡಗೋಡೆಯಂತಾಗಿಬಿಡುವುದಿಲ್ಲವೆ? ಒಂದಾಗಲೆಂದು ನಿರ್ಧರಿಸಿದ ಮೇಲೆ ಯಾವುದೆ ಬಂಧನ, ತಡೆಗಳಿಲ್ಲದ ಸ್ವೇಚ್ಛಾಚಾರದ ವ್ಯಾಪಾರವಾಗಬೇಕು…ಇಲ್ಲದಿದ್ದರೆ, ಒಲ್ಲದ ಮನಸಿನಿಂದ ಯಾಂತ್ರಿಕವಾಗಿ ನಟಿಸಿ ಮೇಲೆದ್ದರೆ ಮಿಲನೋತ್ತರ ತೃಪ್ತಿಗಿಂತ, ಏನೊ ಅಸಂಪೂರ್ಣ ಅನುಭವದ ಅತೃಪ್ತಿಯಾಗಿ ಮತ್ತಷ್ಟು ಕಾಡುವುದಿಲ್ಲವೆ? ಹಾಗೆಂದು ಅವಳು ಯಾರಾರ ಸಂಗ ಸುಖದಲಿದ್ದು ಬಂದವಳೊ ಏನೊ? ಯಾವ ರಕ್ಷಣೆಯೂ ಇರದೆ ರತಿ ಸುಖ ಸುರಕ್ಷಿತವಲ್ಲದೆಯೂ ಇರಬಹುದು….ಆದರೂ, ಯಾಕೊ ಸುರಕ್ಷೆ ಬಳಸಬೇಕೆಂಬ ಒತ್ತಾಯ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ತಲೆಗೇರುತ್ತಿದ್ದ ಕಾಮನೆಯ ಬಿಸಿಯೂ ನೀರಲದ್ದಿದ ಕೆಂಡದಂತೆ ಇಂಗಿಹೋದ ಅನುಭೂತಿ…ಬೇರೆಲ್ಲರ ಜತೆ ಅವಳು ಯಾವಾಗಲೂ ಸುರಕ್ಷತೆ ಬಳಸಿದ್ದರೆ, ಕನಿಷ್ಠ ತನ್ನ ಮಟ್ಟಿಗಾದರೂ ಆ ಭೀತಿ ಇರುವುದಿಲ್ಲವಲ್ಲ? ನನ್ನೊಬ್ಬನೊಡನೆ ಅದಿಲ್ಲದೆಯು ಸುಖಿಸಬಹುದಲ್ಲ ಎಂಬ ಸ್ವಯಂವಾದಸರಣಿಯನ್ನು ತನ್ನಲ್ಲೆ ಮೂಡಿಸಿಕೊಳ್ಳುತ್ತ, ಅದು ಬೇಡವೆನ್ನುವ ಹಾಗೆ ಪಕ್ಕಕ್ಕೆ ಸರಿಸಿದ….ಅವಳ ನಗುತ್ತಿದ್ದ, ಮುದ್ದು ಮುಖದಲ್ಲಿ ಅರೆಗಳಿಗೆ ತಟಕ್ಕನೆ ಕಠೋರತೆಯ ತೆಳುರೇಖೆಯೊಂದು ಹಾದುಹೋಯ್ತು..

“..ನೋ..ನೋ…ಯು ಆರ್ ಎ ಫ್ಯಾಮಿಲಿ ಮ್ಯಾನ್..ಇಟ್ ಇಸ್ ನಾಟ್ ಸೇಫ್ ಫಾರ್ ಬೋಥ್..” ಮತ್ತೆ ಮುಂದೊಡ್ಡಿದ್ದಳು. ಬೀರಿನ ಅಮಲಿನಲ್ಲಿ ಮರ್ಕಟದಂತಿದ್ದ ಮನ ‘ದುಡ್ಡು ಕೊಟ್ಟರೂ ಇವಳೇಕೆ ಬಿನ್ನಾಣವಾಡುತ್ತಾಳೆ? ಒಂದೆ ಹೆಣ್ಣಿನ ಸಹವಾಸದಲ್ಲಿದ್ದ ನಾನೆ ರಿಸ್ಕು ತೆಗೆದುಕೊಳ್ಳುತ್ತಿಲ್ಲವೆ? ತುಸು ಒತ್ತಾಯ ಮಾಡಿದರೆ ಒಪ್ಪಿಕೊಳ್ಳದಿರುವಳೆ?’ ಎಂದೆಲ್ಲಾ ಆಲೋಚಿಸಿ,

“ಐ ಡೊಂಟ್ ಲೈಕ್ ಇಟ್…” ಎಂದು ಬಡಬಡಾಯಿಸಿದ.

ಅವಳಿಗದೇನೆನಿಸಿತೊ? ತಟ್ಟನೆ ಮೇಲೆದ್ದವಳೆ, “ಓಕೆ…ಐ ವೀಲ್ ಗೀವ್ ದಿ ಮನೀ ಬ್ಯಾಕ್…ನೋ ಕಾಂಡೋಮ್ ನೋ ಬಿಜಿನೆಸ್…ಸಾರಿ..” ಎಂದು ಕಡೆಯ ಅಸ್ತ್ರ ಬಳಸಿದಾಗ ನಿರುತ್ತರನಾಗಿ, “..ಓಕೆ..ಓಕೆ.. ” ಎಂದ ಪೆಚ್ಚಾದ ದನಿಯಲ್ಲಿ.

ಎರಡು ದೇಹಗಳ ಮಿಲನಕ್ಕೆ ಈ ಲೌಕಿಕ ಜಗದಲ್ಲಿ ಅದೆಷ್ಟು ಗೋಡೆಗಳಪ್ಪ? ಎಂಬ ವೇದಾಂತದ ಪ್ರಶ್ನೆ ಆ ಹೊತ್ತಿನಲ್ಲೂ ಸೈದ್ದಾಂತಿಕ ಜಿಜ್ಞಾಸೆಯೊ ಎಂಬಂತೆ ಶ್ರೀನಾಥನ ಮನದಲ್ಲಿ ಮೂಡಿ, ಬಿಸಿಯೇರುತ್ತಿದ್ದ ಮೈ ಮತ್ತೆ ತಣ್ಣಗಾಗತೊಡಗಿತು. ಮೈ ಬಿರುಸಿಲ್ಲದ ಮುದುರಿದ ಬಟ್ಟೆಯ ಹಾಗೆ ಮುದುಡಿದಾಗ, ಅವಳು ‘ವಾಟ್ ಹ್ಯಾಪೆನ್ಡ್?’ ಅಂದಳು. ಇವನು ಉತ್ತರಿಸದೆ ಪೆಚ್ಚುಪೆಚ್ಚಾಗಿ ನಕ್ಕಿದ್ದ….

ಕಾಸು ಕೈ ಸೇರಿದ ಮೇಲೆ ವೃತ್ತಿ ಧರ್ಮದ ನಿಯತ್ತು ಮೀರದಂತೆ ಕಾಪಾಡಿಕೊಂಡು ಹೋಗುವುದು ಈ ಜಗದ ಮತ್ತೊಂದು ಅಲಿಖಿತ ನಿಯಮ. ಅದು ಬರಿ ಆ ಒಂದು ಗಂಟೆಯ ಮಾತಲ್ಲ..ವ್ಯವಹಾರದ ನಿರಂತರತೆಯನ್ನು ಕಾಪಾಡುವ ಸೂಕ್ಷ್ಮ ವ್ಯವಹಾರ. ಗಿರಾಕಿ ತೃಪ್ತನಾದರಷ್ಟೆ ಆ ವೃತ್ತಿಚಕ್ರ ನಿಲ್ಲದೆ ಉರುಳುವುದಕ್ಕೆ ಸಾಧ್ಯ; ಪುರುಷ ಪ್ರಕೃತಿಗಳು ಬದಲಾಗುತ್ತವೆ ಹೊರತು ಆ ಪ್ರಕ್ರಿಯೆ ಮಾತ್ರ ಯಾವ ‘ಮಾರ್ಕೆಟಿಂಗ್’ನ ಬಿಗಿ ಯತ್ನವಿಲ್ಲದೆಯೆ ತಂತಾನೆ ಮುನ್ನಡೆಯುತ್ತದೆ. ದೈಹಿಕ ಹಸಿವೆಯ ಮೂಲಭೂತ ಅಗತ್ಯದ ಸರಕಿಗೆ ಯಾವ ಮಾರ್ಕೆಟಿಂಗ್ ಅಗತ್ಯವೂ ಇರದು. ಅದೆ ಗಿರಾಕಿ ತೃಪ್ತನಾಗದೆ ಭ್ರಮನಿರಸನಗೊಂಡರಂತೂ ವ್ಯವಹಾರಕ್ಕೆ ಏಟು. ಬರಿ ಬಾಯಿ ಮಾತಲ್ಲೆ ಪ್ರಚಾರ ಸಿಕ್ಕುವ ಹಾಗೆ, ಅಪಪ್ರಚಾರವೂ ಸಿಕ್ಕಿಬಿಡುತ್ತದೆ. ಅದರಲ್ಲೂ ಮೊದಮೊದಲ ಬಾರಿ ಈ ನೀರಿಗಿಳಿದು ಆಳ ನೋಡುತ್ತಿರುವವರಾದರೆ ಇನ್ನೂ ಎಚ್ಚರದಿಂದಿರಬೇಕು. ಯಾಕೆಂದರೆ, ಒಂದು ವೇಳೆ ಆ ಯತ್ನದಲ್ಲಿ ಸೋತು ಮುಖಭಂಗವಾಗಿಬಿಟ್ಟರೆ ಆ ಅಪಮಾನಕ್ಕೊ ಅಥವಾ ಸೋಲಿನ ಭೀತಿಗೊ – ಮತ್ತೆ ಆ ಕಡೆ ತಲೆ ಹಾಕದೆ ಇದ್ದರೂ ಇದ್ದು ಬಿಟ್ಟಾರು! ಹಾಗೇನಾದರೂ ಆದಿತೆಂದರೆ ಒಂದು ಹೊಸ ಗಿರಾಕಿ ಶಾಶ್ವತವಾಗಿ ಕಳೆದುಹೋದ ಹಾಗೆ ಲೆಕ್ಕ…ಹಾಗಾಗಿಯೆ, ಗಿರಾಕಿಯ ಏನೆ ದೌರ್ಬಲ್ಯ, ಕೀಳರಿಮೆಗಳಿರಲಿ ಅದನ್ನು ಕಂಡು ಕಾಣದಂತೆ ಸ್ಪೂರ್ತಿಕೊಡುತ್ತ, ಹುರಿದುಂಬಿಸಿ ವಿಜೃಂಭಿಸುವಂತೆ ನೋಡಿಕೊಳ್ಳಬೇಕು…ಆಂಗಿಕ-ಭಾವಭಿನಯ, ಮುಲುಕಾಟಗಳಲ್ಲಿ ಸುಖದ ಉಚ್ಛಂಗಕ್ಕೇರಿ ಮೈ ಮರೆತವರಂತೆ ಮಿಡಿದು ನುಲಿಯಬೇಕು, ಉಲಿಯಬೇಕು.. ಅವನಿಗೆ ಗೆದ್ದ ಭಾವ ಬಂತೆಂದರೆ, ಅದು ಅವನ ಅಹಂಕಾರ, ಹಮ್ಮನು ತಣಿಸುವ ಹೆಮ್ಮೆಯ ಭುಗಿಲೆಬ್ಬಿಸುವ ಅರ್ಜ್ಯ..ನಿಜವಾದ ದೈಹಿಕ ಸುಖಕಿಂತ, ಆ ಮಾನಸಿಕ ಸಂತೃಪ್ತಿ ಬಲು ಮುಖ್ಯ. ಅದರಲ್ಲೂ ಯಾವುದಾವುದೊ ವೈಯಕ್ತಿಕ ಕಾರಣ, ಗೊಂದಲ, ಗಡಿಬಿಡಿಯಲ್ಲಿ ಕಳುವಾದವರು ಈ ದಾರಿ ಹಿಡಿದಾಗ ತಮಗರಿವಾಗದ ಏನನ್ನೊ ಹುಡುಕುತ್ತಾ ಅಲ್ಲಿಗೆ ಬರುತ್ತಾರೆ..ಅವರು ಹುಡುಕಿದ್ದು ಅಲ್ಲಿ ಸಿಗದಿದ್ದರೂ, ಆ ಹೊತ್ತಿನ ತಾತ್ಕಾಲಿಕ ಜಯ ಕೊಂಚಮಟ್ಟಿಗಾದರೂ ಮೂಲ ಯಾತನೆಯನ್ನು ಕಡಿಮೆ ಮಾಡಿ, ಕೃತಕ ಗೆಲುವಿನ ವೈಭವದಲ್ಲಿ ಮೈಮರೆಸುತ್ತದೆ…ಗೆಲುವೆ ಇಲ್ಲದ ಕಡೆ, ಯಾವ ಗೆಲುವಾದರೂ ಸರಿ – ಕೃತಕವೊ, ನೈಜ್ಯವೊ, ತಾತ್ಕಾಲಿಕವೊ, ಶಾಶ್ವತವೊ…ಆ ಹೊತ್ತಿನ ಮಟ್ಟಿಗೆ ಅದು ಗೆಲುವೆ….

ಅದರ ಅರಿವಿರುವುದರಿಂದಲೆ ಈ ಜಗತ್ತಿನ ನಿಯಮ ಯಾವ ಹಿನ್ನಲೆಯನ್ನು ಕೆದಕಿ, ಕೆಣಕಿ ನೋಡಲು ಹೋಗುವುದಿಲ್ಲ…ಬಂದವರನ್ನು ತೆರೆದ ಬಾಹುಗಳಿಂದ ಅಪ್ಪುತ್ತಲೆ ‘ನಿನ್ನನ್ನು ಬಿಟ್ಟರಿಲ್ಲ’ ಎನ್ನುವ ಭಾವನೆ ಬರಿಸಲು ಶತಗತಾಯ ಪ್ರಯತ್ನಿಸುತ್ತದೆ. ಈ ಹೆಣ್ಣುಗಳು ಅಷ್ಟೆ..ಮುಂದುವರೆಯಲಾಗದ ಪುರುಷ ದೌರ್ಬಲ್ಯಕೆ ಅಣಕಿಸುವ ಬದಲು, ಅದನ್ನು ಅರಿತ ಮಾನಸಿಕ ವೈದ್ಯ, ಸೂಕ್ಷ್ಮಜ್ಞರಂತೆ ನಿವಾರಿಸುವ ದಾರಿ ಹುಡುಕುತ್ತಾರೆ. ವೃತ್ತಿಗೆ ಹೊಸಬರಾದರೆ ಸ್ವಲ್ಪ ಪಳಗುವತನಕ ಅಡ್ಡಕಸುಬಿಗಳಾಗಿದ್ದರೂ, ಹೆಣ್ಣು ಮನದ ಸೂಕ್ಷ್ಮಜ್ಞತೆಯಿಂದಾಗಿ ಬಲು ಬೇಗನೆ ನೈಪುಣ್ಯತೆ ಸಂಪಾದಿಸಿಬಿಡುತ್ತಾರೆ…ನುರಿತ ಹೆಣ್ಣುಗಳಂತು ಗಿರಾಕಿಯನ್ನು ನೋಡುತ್ತಲೆ ಅವನ ಮನಃಸತ್ವ ಇಂತದ್ದೆಂದು ಅಳೆದುಬಿಡುತ್ತಾರೆ..ಅದಕ್ಕೆ ತಕ್ಕ ವೇಷ, ಮಾತು, ನಡತೆ ತಾನಾಗೆ ಹೊರಬೀಳುತ್ತದೆ. ಮಾತ್ರವಲ್ಲ, ಅವರ ಯಾವುದೆ ದೋಷ ದೌರ್ಬಲ್ಯಗಳನ್ನು ಕಂಡರೂ ಕಾಣದವರಂತೆ ಇರುತ್ತಾರೆ, ಎಲ್ಲಿಯೂ ಎತ್ತಾಡದೆ. ತಮ್ಮ ಸಹೋದ್ಯೋಗಿಗಳಲ್ಲಿ ಬಹುಶಃ ಹಂಚಿಕೊಂಡರೂ ಹಂಚಿಕೊಳ್ಳಬಹುದೇನೊ – ಟೈಮ್ಪಾಸಿನ ಸಮಯದಲ್ಲಿ, ಬರಿ ಕಾಲಹರಣಕ್ಕೆ. ಅಲ್ಲಿ ಯಾರು ಯಾರ ಬಗ್ಗೆ ಛೇಡಿಸಿದರೂ ಅಲ್ಲಿಲ್ಲದ ವ್ಯಕ್ತಿತ್ವವೊಂದರ ಲೇವಡಿ, ಅವಹೇಳನ ಕೇವಲ ಹುಸಿ ಛೇಡನೆಯ ಮಟ್ಟದ್ದೆ ಹೊರತೂ ಮತ್ತಾವ ದುರುದ್ದೇಶವೂ ಅಲ್ಲಿರುವುದಿಲ್ಲ. ಬ್ಯಾಂಕಾಕಿನಂತಹ ಪ್ರವಾಸಿ ಜಾಗದಲ್ಲಿ ಅಲ್ಲೆ ಇರುವವರಿಗಿಂತ ಕೆಲದಿನಗಳ ಮಟ್ಟಿಗೆ ಇರಲು ಬಂದ ಬಂದು ಹೋಗುವ ಗಿರಾಕಿಗಳೆ ಹೆಚ್ಚು…ಹೀಗಾಗಿ, ಹೋಟೆಲಿನಲ್ಲಿ ಯಾರಾದರೂ ಗಿರಾಕಿ ಕರೆದರೆ ಅಷ್ಟು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ…ಆದರೆ ಈ ರೀತಿ ಮನೆಗೆ ಕರೆಸಿಕೊಳ್ಳುವ ಗಿರಾಕಿಯೆಂದರೆ ಸ್ವಲ್ಪ ವಿಶೇಷ ಉಪಚಾರ….ಮತ್ತೆ ಬರಬಹುದಾದ ಸಾಧ್ಯತೆಗಳು ಹೆಚ್ಚಿರುವುದರಿಂದ.

ಶ್ರೀನಾಥನ ಚಹರೆಯನ್ನೆ ಗಮನಿಸುತ್ತಿದ್ದ ಈ ಅನುಭವಿ ಹುಡುಗಿಗೆ ಈ ದಾರಿಗೆ ಇವನು ಹೊಸಮುಖ, ಎಳಸು ಎಂದು ಚೆನ್ನಾಗಿ ವೇದ್ಯವಾಗಿ ಹೋಗಿತ್ತು. ಅವನ ನಡತೆಯ ಆಧಾರದ ಮೇಲೆ ಒಬ್ಬಂಟಿಯಾಗಿರುವ ಸಂಸಾರಸ್ತ, ಭಾವನಾತ್ಮಕ ಪ್ರಾಣಿ ಎಂಬುದನ್ನು ಅರಿತುಕೊಂಡಿತ್ತು ಆ ಸೂಕ್ಷ್ಮ ಮನಸ್ಸು. ಇಂತಹವರ ಎದುರಿಗೆ ಬೆತ್ತಲೆ ಮೈ ಪ್ರದರ್ಶಿಸಿ ನಿಲ್ಲುವುದಕ್ಕಿಂತ, ಏನಿದ್ದರೂ ಸ್ವಲ್ಪ ಸೆಂಟಿಮೆಂಟಲ್ ರೂಟೆ ಹಿಡಿಯಬೇಕೆನಿಸಿ ಅವನ ಪಕ್ಕ ಹತ್ತಿರಕ್ಕೆ ಬಂದು ಮೆಲುವಾಗಿ ಅವನನ್ನಪ್ಪಿಕೊಂಡು ಕೂತು ಅವನ ಭುಜದ ಮೇಲೆ ತಲೆಯೊರಗಿಸಿಕೊಂಡು ಕೈ ಬೆಸೆಯುತ್ತ , ‘ ಯೂ ಆರ್ ಎ ನೈಸ್ ಮ್ಯಾನ್…ಯು ಹ್ಯಾವ್ ಲವ್ಲಿ ಕರ್ಲೀ ಹೇರ್ಸ್ ‘ ಅಂದಳು…ಅದು ಅವನನ್ನು ಮೆಲು ಮಾತಿನ ಮೂಲಕ ಉಬ್ಬಿಸಿ ಸಿದ್ದವಾಗಿಸುವ ಹುನ್ನಾರ…ಮತ್ತೊಂದು ಕೈಯಿಂದ ತಲೆಗೂದಲಿನ ಗುಂಗುರಲ್ಲಾಡಿಸುತ್ತಾ ಲಲ್ಲೆಗರೆಯುತ್ತಿದ್ದಂತೆ ಮತ್ತೆ ಬಿಸಿಯಾಗುತ್ತಿರುವ ಮೈ ಅವಳ ಅನುಭವಕ್ಕು ಬಂದು, ಮುಖದಲ್ಲಿ ಕಿರುನಗೆ ಮೂಡಿತು. ಇನ್ನೇನು ಮುಂದುವರೆಯಬಹುದೆಂಬ ಅನಿಸಿಕೆ ಮೂಡುತ್ತ ಅವನ ಮುಖದ ಹತ್ತಿರಕ್ಕೆ ಮುಖ ತರುತ್ತಿದ್ದಂತೆ, ಇದ್ದಕ್ಕಿದ್ದಂತೆ ಜೋರಾದ ಸದ್ದೊಂದು ಇಬ್ಬರನ್ನು ಮೆಲುವಾಗಿ ಬೆಚ್ಚಿಸಿ ಮತ್ತೆ ವಾಸ್ತವ ಜಗಕ್ಕಿಳಿಸಿತು….

ಶ್ರೀನಾಥನಿಗೆ ಮಾತ್ರ ಆ ಸದ್ದು ಕೇಳುತ್ತಿದ್ದಂತೆ ಎದೆ ಧಸಕ್ಕೆಂದಿತು; ಅದು ಅವಳಿಗೆ ಅಪರಿಚಿತವಾದರೂ ಅವನಿಗದು ಚಿರಪರಿಚಿತ, ಪ್ರತಿನಿತ್ಯ ಕೇಳುವ ಬಾಗಿಲ ಕರೆಗಂಟೆಯ ಸಂಗೀತದ ಸದ್ದು!

ತಲೆಯ ಮೇಲೆ ಶಿಖರ ಬಿದ್ದವನಂತೆ ತಡಬಡಾಯಿಸಿಕೊಂಡು ಎದ್ದ ಶ್ರೀನಾಥ..ಯಾಕೊ ಕರೆಗಂಟೆಯ ಸದ್ದಿಗೆ ಅರ್ಧಕರ್ಧ ಬೀರಿನ ಅಮಲು ಇಳಿದಂತೆ ಆಗಿತ್ತು…ಸಾಮಾನ್ಯವಾಗಿ ಯಾರೂ ಬರದ ವೇಳೆಯಲ್ಲಿ, ಯಾರು ಬಂದು ಬಾಗಿಲಲ್ಲಿ ನಿಂತಿದ್ದಾರೊ ಎಂಬ ಅರೆ ಭೀತಿ ಅರೆ ಕುತೂಹಲದೊಂದಿಗೆ ಸದ್ದಿರದ ಹಾಗೆ ಮೆಲ್ಲಗೆ ಹೆಜ್ಜೆಯಿಡುತ್ತ ಬಾಗಿಲ ಹತ್ತಿರ ಬಂದು ಗಾಜಿನ ಇಣುಕು ಕಿಂಡಿಯಿಂದ ಯಾರೆಂದು ನೋಡುತ್ತಿದ್ದಂತೆ ಜಂಘಾಬಲವೇ ಉಡುಗಿ ಹೋದಂತಾಯ್ತು ! ಎಂದೂ ಮುಂಚಿತವಾಗಿ ತಿಳಿಸದೆ ಯಾರೂ ಬಂದು ಹೋಗುವ ಅಭ್ಯಾಸವೆ ಇರಲಿಲ್ಲ ; ಜತೆಗೆ, ಹತ್ತಿರದಲ್ಲಿ ಯಾರೂ ವಾಸವಿರದ ಕಾರಣ ಬೇಕೆಂದಾಗ ಬಂದು ಹೋಗುವಂತೆಯೂ ಇರಲಿಲ್ಲ…ಆದರೆ ಇಂದು ನೋಡಿದರೆ – ಗ್ರಹಚಾರವೆ ಸರಿಯಿದ್ದಂತಿಲ್ಲ.. ಪ್ರಾಜೆಕ್ಟಿನಲ್ಲಿ ಜತೆಗೆ ಕೆಲಸ ಮಾಡುವ ಸಹೋದ್ಯೋಗಿ ‘ರಾಮಾನುಜಂ’ ನಿಂತಿದ್ದಾನೆ ಬಾಗಿಲಲ್ಲಿ ! ಬರಿ ಅವನೊಬ್ಬನೆ ಸಾಲದು ಎಂಬಂತೆ ಪಕ್ಕದಲ್ಲಿ ಅವನ ಸತಿ ಶಿರೋಮಣಿಯೂ ನಿಂತಿದ್ದಾಳೆ, ಕೈಯಲ್ಲಿ ಎರಡು ವರ್ಷದ ಮಗಳನ್ನು ಹೊತ್ತುಕೊಂಡು…..!!

ಒಂದರೆಗಳಿಗೆ ಏನು ಮಾಡಬೇಕೆಂದೆ ತೋಚಲಿಲ್ಲ ಶ್ರೀನಾಥನಿಗೆ….ಆ ಗಡಿಬಿಡಿಯಲ್ಲಿ ಮೊದಲು ಮಾಡಿದ ಕೆಲಸ ಟೇಬಲು ಮೇಲೆ ಹರಡಿದ್ದ ಬೀರು, ಗ್ಲಾಸು ಇತ್ಯಾದಿಗಳನ್ನೆಲ್ಲ ಎತ್ತಿಕೊಂಡು ಅಡುಗೆ ಮನೆಗೆ ದಬ್ಬಿದ್ದು… ಮತ್ತೆ ಮತ್ತೆ ಒತ್ತುತ್ತಿದ್ದ ಕರೆಗಂಟೆಯ ಸದ್ದಿನ ನಡುವೆಯೆ ಅವಳ ಡ್ರೆಸ್ಸು, ಬ್ಯಾಗಿನ ಸಮೇತ ದರದರ ಕೈಯಿಡಿದೆಳೆದುಕೊಂಡವನೆ, ಹಾಲಿನ ಹತ್ತಿರವಿದ್ದ ರೂಮಿನಿಂದ ತುಸು ಒಳಗೆ ಹಿಂದುಗಡೆಗಂಟಿಕೊಂಡಂತಿದ್ದ ಮಾಸ್ಟರ್ ಬೆಡ್ರೂಮಿಗೆ ಸೇರಿಸಿದ. ಅಷ್ಟೆ ಆತುರಾತುರವಾಗಿ ಪರಿಚಿತರಾರೊ ಬಂದಿರುವುದನ್ನು ಅರುಹುತ್ತಾ ಅವರನ್ನು ಸಂಭಾಳಿಸಿ ಕಳಿಸುವವರೆಗೆ, ಕರೆಯುವ ತನಕ ಹೊರಗೆ ಬರಬಾರದೆಂದು ಹೇಳುತ್ತ ಬಾಗಿಲೆಳೆದುಕೊಂಡು ಹೊರಗಿನಿಂದ ಲಾಕ್ ಮಾಡಿಕೊಂಡ. ಅವಳ ಮುಖದಲ್ಲು ಆತಂಕ ನೂರೆಂಟು ಪ್ರಶ್ನೆಗಳಿದ್ದರೂ ಸಾಂಧರ್ಭಿಕ ಸಮಯೋಚಿತತೆಯನ್ನರಿತವಳಂತೆ ಆಗಲೆಂದು ತಲೆಯಾಡಿಸಿದ್ದು ಎಷ್ಟೊ ನಿರಾಳವಾಗಿದ್ದರೆ, ಮತ್ತೊಂದೆಡೆ ಯಾಕಪ್ಪ ಇವಳನ್ನು ಕರೆಸಿ ಇಕ್ಕಟ್ಟಿಗೆ ಸಿಕ್ಕಿಕೊಂಡೆ – ಅದೂ ಮೊದಲ ಬಾರಿಯೆ ಹೀಗಾಗಬೇಕೆ? ಎಂದು ಹಲುಬುತ್ತ ಬಾಗಿಲತ್ತ ನಡೆಯುತ್ತಿದ್ದಂತೆ ಟೀಫಾಯ್ ಮೇಲಿದ್ದ ಮೊಬೈಲಿನ ಸದ್ದಾಯಿತು…ಎತ್ತಿಕೊಂಡು ನೋಡಿದರೆ, ಹೊರಗಿನಿಂದ ಕರೆಗಂಟೆ ಒತ್ತಿ, ಒತ್ತಿ ಸಾಕಾಗಿದ್ದ ರಾಮಾನುಜಂನ ಪೋನ್ ಕರೆ..ತುಸು ಹೊತ್ತು, ಅದನ್ನು ಹಾಗೆ ಹೊಡೆದುಕೊಳ್ಳಲು ಬಿಟ್ಟವನೆ, ಆರೇಳು ಬಾರಿ ಗುಣುಗುಣಿಸಿದ ಮೇಲೆ ರಿಸೀವ್ ಮಾಡಿಕೊಳ್ಳುತ್ತ, ಆಗ ತಾನೆ ನಿದ್ದೆಯಿಂದ್ದೆದ್ದವನ ಹಾಗೆ ಆಕಳಿಸುತ್ತ ‘ಹಲೋ…’ ಎಂದ……

(ಇನ್ನೂ ಇದೆ)
___________

(ಪರಿಭ್ರಮಣ..(06)ರ ಕೊಂಡಿ – https://nageshamysore.wordpress.com/00168-2/ )

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s