00168. ನಸುಕಲಿ ಚಂದ್ರಮನ …..

00168. ನಸುಕಲಿ ಚಂದ್ರಮನ …..
____________________

ಎಂದಿನಂತೆ ಆಫೀಸಿಗೆ ಹೊರಡುವ ದಾರಿಯಲ್ಲಿ ಇಂದೂ ನಡೆದಿದ್ದೆ. ಈಚಿನ ದಿನಗಳಲ್ಲಿ ತುಸು ಬಿಸಿಲು ಹೆಚ್ಚು; ಹೀಗಾಗಿ ಬೆಳಗಿನ ಹೊತ್ತಲೆ ಸೂರ್ಯ ಆಗಲೆ ಪ್ರಖರನಾಗಿ ಬೆವರಿಳಿಸುವ ದಿನಗಳು. ಆದರೆ ಇಂದೇಕೊ ಸ್ವಲ್ಪ ಕನಿಕರ ತೋರುತ್ತ ತುಸುವೆ ತಂಪಾಗಿರುವಂತೆ ಕಂಡಿತು. ಹಾಗೆ ತಲೆಯೆತ್ತಿ ನೋಡಿದಾಗ ಅಪರೂಪಕ್ಕೆ ಹಗಲಲಿ ಕಣ್ಣಿಗೆ ಬೀಳುವ ಚಂದ್ರಮನ ಅರ್ಧ ಚಂದ್ರಾಕೃತಿ ಮಸುಕುಮಸುಕಾಗಿ ಕಣ್ಣಿಗೆ ಬಿತ್ತು. ನನಗೆ ನೆನಪಿರುವಂತೆ ಕೇವಲ ಕೆಲವೆ ದಿನಗಳಲ್ಲಿ ಮಾತ್ರ, ಅದೂ ತೀರ ಬೆಳಿಗ್ಗೆ ಅಥವಾ ಸಂಜೆ ಸೂರ್ಯನು ಮುಳುಗುವ ಮುನ್ನ ಚಂದ್ರಮ ಕಣ್ಣಿಗೆ ಬೀಳುತ್ತಿದ್ದುದು. ಅದು ಬಿಟ್ಟರೆ ಬಹುಶಃ ರಂಜಾನಿನ ದಿನಗಳಲ್ಲಿರಬೇಕು – ಒಂದು ದಿನ ಮಧ್ಯಾಹ್ನದ ಹೊತ್ತಿನಲ್ಲೆ ತುಂಬು ಚಂದಿರನ ಬಿಂಬ ಕಣ್ಣಿಗೆ ಬಿದ್ದಿದ್ದಿದ್ದು. ಇಂದು ಶಶಾಂಕನ ಈ ಸ್ವರೂಪ ಕಣ್ಣಿಗೆ ಬೀಳುತ್ತಿದ್ದಂತೆ ‘ವಾಹ್’ ಅನಿಸಿ ಚಳಿಯ ಹೋಗಲಾಡಿಸಿಕೊಳ್ಳಲು ಎಳೆ ಬಿಸಿಲಿನ ಮಜ್ಜನಕ್ಜೆ ಬಂದ ಚಂದ್ರಮನಿರಬಹುದೆ ಎಂಬ ಭಾವ ಮನಃಪಟಲದಲ್ಲಿ ಹಾದು ಹೋಯ್ತು. ಅದೆ ಖದರಿನಲ್ಲಿ ಒಂದೆರಡು ಪದಗಳ ಗುನುಗು ಮೂಡತೊಡಗಿದಾಗ ‘ಅರೆರೆ..ಇದೊಂದು ಶಿಶುಗೀತೆಯಾಗಬಹುದಲ್ಲಾ?’ ಎನಿಸಿ ಅದನ್ನು ಹಾಗೆ ನಡೆಯುತ್ತಲೆ ಪೋನಿನ ಎಡಿಟರಿನಲ್ಲಿ ಟೈಪಿಸತೊಡಗಿದೆ. ನಾನು ಹಾದು ಹೋಗುವ ಉದ್ಯಾನವನ ದಾಟಿ, ಆಫೀಸಿನ ಬಾಗಿಲು ತಲುಪುವಷ್ಟರ ಹೊತ್ತಿಗೆ ಒಂದು ಪುಟ್ಟ ಪದ್ಯದ ಹಂದರ ಸಿದ್ದವಾಗಿತ್ತು. ಅದನ್ನೆ ಈಗ ತುಸು ತಿದ್ದಿ ತೀಡಿ ಶಿಶುಗೀತೆಯಾಗಿ ಹಾಕುತ್ತಿದ್ದೇನೆ ಸಂಪದದಲ್ಲಿ -ಚಂದ್ರಮನಿಗೊಂದು ಧನ್ಯವಾದ ಹೇಳುತ್ತ 🙂

ನಸುಕಲಿ ಚಂದ್ರಮನ …..
_______________________________

ಹಗಲಲಿ ಕಾಣುವ ಚಂದ್ರನ ಗೋಳ
ಯಾರಿಗೆ ಹೇಳೋಣ?
ಚಳಿಯಾಯ್ತೆಂದು ಸ್ನಾನಕೆ ಬಂದನೆ
ಬನ್ನಿರಿ ಕೇಳೋಣ ||

ಬಿಚ್ಚಿದ ಕಿತ್ತಳೆ ತೊಳೆಯಂತಿಹನು
ಗಗನದಲಿಹ ಮಗುವಾ?
ಕಿಲಿಕಿಲಿ ಬೊಚ್ಚಲು ಬಿಚ್ಚಿತೆ ಬಾಯಿ
ನಗೆಯರಳಿ ತುಟಿಯಗಲ ||

ಮರೆತಿಲ್ಲ ದಿವಸ ದಿನಗೂಲಿ ಕೆಲಸ
ಬರಿ-ಅರ್ಧರ್ಧವೆ ಮಜ್ಜನಕೆ
ಕಣ್ಬೆಳಕೆಲ್ಲ ತಿರುಗಿಸಿರುವೆ ಕತ್ತಲಿಗೆ
ಒಡ್ಡಿರುವೆನು ಮೈ ತುಸು ಗಳಿಗೆ ||

ಬೆಳಗಿನ ಸೂರ್ಯನ ಬಡಾಯಿ ಕಮ್ಮಿ
ಬಿಸಿ ನೆನೆದರು ಕರಗುವೆನೆ?
ಕಾವಿಗೆ ಕರಿದು ಕಪ್ಪಾಗಿಸೊ ಮೊದಲೆ
ಮರೆಯಾಗುವೆ ಹಗಲಲ್ಲ ಮನೆ ||

ಕರಗುವ ಮೊದಲೆ ಜರುಗುವೆನಿಲ್ಲಿಂದ
ಸರಸರ ಜಳಕದೆ ಬಿಸಿಲ ಮಳೆ
ಹರುಷದ ಕೊಡ ತುಂಬಿರಲು ಕೊಡುವೆನು
ಹರಿದ ಸುಧೆಗೆ ತಂಪಾಗೊ ಇಳೆ ||

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s