00174. ಶಿವನಿಲ್ಲದ ಶಿವರಾತ್ರಿ..

00174. ಶಿವನಿಲ್ಲದ ಶಿವರಾತ್ರಿ..
________________________

ಈ ಬಾರಿಯ ಶಿವರಾತ್ರಿಯ ಹಬ್ಬದ ಬೆಳಿಗ್ಗೆ, ಶಿವನ ಸತಿ ಪಾರ್ವತಿ ಬೇಗನೆ ಎದ್ದು ಪತಿಗೆ ಹಬ್ಬದ ಶುಭಾಶಯ ಹೇಳಿ ಅಚ್ಚರಿ ಪಡಿಸಬೇಕೆಂದುಕೊಂಡು ನೋಡಿದರೆ ಪಕ್ಕದಲ್ಲಿ ಶಿವನೆ ಕಾಣಲಿಲ್ಲ. ಇನ್ನು ನಸುಕಿನ ಜಾವದ ಹೊತ್ತು, ಇಷ್ಟು ಬೇಗನೆ ಎದ್ದು ಹೋದದ್ದಾದರೂ ಎಲ್ಲಿಗೆ ಎಂದು ಯೋಚಿಸುತ್ತಲೆ ಬಹುಶಃ ಇಲ್ಲೆ ಅಕ್ಕ ಪಕ್ಕ ಎದ್ದು ಹೋಗಿರಬೇಕೆಂದುಕೊಂಡು, ತಾನು ಬೇಗನೆ ಎದ್ದು ಸ್ನಾನಾದಿಗಳನ್ನು ಮುಗಿಸಿ ಮಡಿಯುಟ್ಟು ಸಿದ್ದವಾಗಿ ನಿಂತಳು, ಪತಿ ಮಹಾದೇವನ ಆಗಮನವನ್ನೆ ಕಾಯುತ್ತ. ಅಂದೇಕೊ ಏನೊ ಎಷ್ಟು ಹೊತ್ತಾದರೂ ಶಿವಪ್ಪನ ಪತ್ತೆಯೆ ಇಲ್ಲ. ಕಾತರ ಆತಂಕ ತಡೆಯಲಾಗದೆ ಅಲ್ಲೆ ಸುತ್ತ ಮುತ್ತ ಎಲ್ಲಾದರೂ ಇರಬಹುದೆ ಎಂದು ಹುಡುಕತೊಡಗಿದಳು. ಬಹುಶಃ ಇಲ್ಲೆ ಎಲ್ಲೊ ಹತ್ತಿರದಲ್ಲೆ ಅಡಗಿಕೊಂಡು ಆಟವಾಡಿಸುತ್ತಿರಬಹುದೆಂಬ ಸಂಶಯವೂ ಬಂತಾದರೂ, ಎಂದೂ ಇಷ್ಟು ಹೊತ್ತಿನ ತನಕ ಮರೆಯಾಗಿ ಕಾಡದ ಪತಿದೇವರ ಸ್ವಭಾವದ ನೆನಪಾಗಿ ಆ ಸಂಭವನೀಯತೆ ಕಡಿಮೆಯೆನಿಸಿತು. ಆದರೂ ಅನುಮಾನವೇಕೆಂದು ಒಂದು ಬಾರಿ ಸುತ್ತಲೂ ಹುಡುಕಿ ಬಂದರೂ ಈಶ್ವರನ ಪತ್ತೆಯೆ ಕಾಣದು. ಈಗಂತೂ ಜಗನ್ಮಾತೆಗೆ ಏನೂ ಮಾಡಲೂ ತೋಚದೆ ಕಣ್ಣೀರೆ ಬರುವಂತಾಯ್ತು. ಪರಶಿವನಿಗೆ ಅಚ್ಚರಿ ಪಡಿಸಲು ಹೋಗಿ, ತಾನೆ ಸಂಕಟಕ್ಕೆ ಸಿಲುಕಿದಂತಾಯ್ತೆ ಎಂದು. ಹೀಗೆ ಕಾದು ಕಾದೂ ಸೂರ್ಯ ಮೇಲೇರಿ ನಡು ಹಗಲಾದರೂ ಮಹಂತೇಶನ ಸುಳಿವೆ ಇಲ್ಲ. ಇನ್ನು ಸುಮ್ಮನಿದ್ದರೆ ಆಗದು ಎಂದು ತೀರ್ಮಾನಿಸಿದ ಜಗದಾಂಬೆಯು ಶಿವನನ್ನರಸುತ್ತ ಎಲ್ಲೆಡೆಯೂ ಹುಡುಕಿಕೊಂಡು ಹೊರಟಳು. ಶ್ರೀ ಮಾತೆ ಎಲ್ಲೆಲ್ಲಿ ಹುಡುಕಿದಳು? ಹೇಗೆ ಹುಡುಕಿದಳು? ಕೊನೆಗೆ ಶಿವ ಸಿಕ್ಕಿದನೆ? ಸಿಕ್ಕಿದ್ದರೆ ಎಲ್ಲಿ? ಇತ್ಯಾದಿಗಳೆಲ್ಲ ತಿಳಿಯುವ ಕುತೂಹಲವಿದ್ದರೆ ‘ಓಂ ನಮಃ ಶಿವಾಯ’ ಎಂದು ಜಪಿಸುತ್ತ ಈ ಕೆಳಗಿನ ಕಾವ್ಯ ಓದಿ…!

ಶಿವರಾತ್ರಿ / ಜಾಗರಣೆಯ ಶುಭಾಶಯಗಳು 🙂

ಶಿವನಿಲ್ಲದ ಶಿವರಾತ್ರಿ
____________________

ಸತಿ ಶಿವನ ಶಕ್ತಿ, ಅರ್ಧನಾರಿ ಸ್ತುತಿ
ಶಿವರಾತ್ರಿಯ ಬೆಳಗೆ ಕಾಣದಿರೆ ಪತಿ
ಹುಡುಕುಡುಕುತ್ತ ಕೈಲಾಸ ಹಿಮಗಿರಿ
ಎಲ್ಲಿ ನೋಡಿದರು ಕಾಣದೆ ಗಾಬರಿ ||

ಮತ್ತೆಲ್ಲಿ ಹೊರಟಾನು ಬಾರದಿಹನೆ
ತನ್ನದೇ ಹಬ್ಬವ ಮರೆಯುವವನೆ ?
ಅನಿಸಿದರು ಚಿತ್ತ, ಚಂಚಲಾ ಚಪಲ
ಕಾಣದವನರಸಿ ಪಾರ್ವತಿ ಕಂಗಾಲ ||

ಯಾಕೊ ನಿಲಲಾಗದೆ, ನಿಂತ ಕಡೆ
ಚಡಪಡಿಕೆ ಅರ್ಧನಾರೀಶ್ವರ ಕಾಡೆ
ಮನ ತಡೆಯದೆ ಹೊರಟಳಾ ಶಕ್ತಿ
ಬ್ರಹ್ಮ ವಿಷ್ಣು ಜತೆಗಿರಬಹುದೆ ಪತಿ? ||

ವೈಕುಂಠದಲಿ ಜೋಡಿ ಬ್ರಹ್ಮ ವಿಷ್ಣು
ಯಾಕೊ ಕಾಣಿಸಲಿಲ್ಲದಾ ಮುಕ್ಕಣ್ಣು
ಬಾ ತಂಗಿಯೆಂದರು ಹರಿಗು ಬೆರಗು
ಮಾತಾಡಲಿಲ್ಲ ಬಿಗುಮಾನ ಬೆಡಗು ||

ತ್ರಿಮೂರ್ತಿಗಳ ಜತೆಯಿಲ್ಲದ ಮೇಲೆ
ಎಲ್ಲಿರುವನೆಂದು ಹೇಗೇ ಹುಡುಕಲೆ ?
ಉದ್ಗರಿಸಿ ಕಳವಳಿಸಿ ಹಲುಬಿ ಅಲ್ಲೆ
ನೋಡದಾ ಎಡೆಯಿಲ್ಲ ಶಿವ ಕಾಣನಲ್ಲೆ ||

ಅನುಮಾನವೇಕೆಂದು ಸ್ಮಶಾನಕೆ ಲಗ್ಗೆ
ಬೂದಿ ಕೆದಕಿ ಕೊಡವಿದ್ದೆ ನಿರಾಶೆ ಬುಗ್ಗೆ
ಭೂತ ಪ್ರೇತ ಪಿಶಾಚ ಗಣಕು ಅರಿವಿಲ್ಲ
ಗಣನಿಗು ಸುಬ್ರಮಣ್ಯನಿಗು ತಿಳಿದಂತಿಲ್ಲ ||

ತಡೆಯದೆ ಆತಂಕ ಸಂಕಟದಲಿ ಮಾತೆ
ಕಾಣದ ಶಿವನಿಗೆ ಬಿಡದೆ ಹಂಬಲಿಸುತೆ
ಹೋಗಿದ್ದೆಲ್ಲೊ ಹೇಳದೆ ನ್ಯಾಯವೆ ನಾಥ
ಹಬ್ವದ ದಿನ ನೀನಿರದೆ ಮನಸೆ ಅನಾಥ ||

ಕವಿಯುತ ಕತ್ತಲು ಶಿವರಾತ್ರಿ ಮುತ್ತಲು
ತಟ್ಟನೆ ಅನಿಸಿತು ನೋಡಲೆ ಇಳೆಯೊಳು
ಭಕ್ತ ಪರಾಧೀನನೆ ಬಿಲ್ವಪತ್ರೆಯ ಪೂಜೆಗೆ
ಲಿಂಗದೊಳಗೈಕ್ಯವಾಗಿ ಮೈಮರೆತ ಗಳಿಗೆ ||

ಅಹೋರಾತ್ರಿ ಜಾಗರಣೆ ಪೂಜೆ ವಿಜೃಂಭಣೆ
ಸಂಭ್ರಮೋಲ್ಲಾಸದಲಿ ಭೂಲೋಕ ಸ್ಮರಣೆ
ವಿರಾಜಮಾನ ಶಿವನನಲ್ಲಿ ಕಂಡಾಗ ಸರಳ
ನಕ್ಕು ಪರಶಿವನ ಪಕ್ಕದೆ ಕೂತಾಗ ನಿರಾಳ ||

ಉದ್ಘೋಷ ಮೊರೆತ ಓಂ ನಮಃ ಶಿವಾಯ
ಪಿಸು ನುಡಿ ಮೆಲ್ಲಗೆ ಬಿಟ್ಟು ಬಂದೆ ಸರಿಯಾ?
ಅರ್ಧನಾರೀಶ್ವರಿ ನಾನೆಲ್ಲಿರೆ ನೀನಲ್ಲೆ ಇರುವೆ
ಅರ್ಧಾಂಗಿನಿ ಬರುವೆ ನೀ, ಬಿಟ್ಟು ಹೇಗಿರುವೆ ? ||

ತಪ್ಪೊಪ್ಪಿಗೆ: ಶಿವರಾತ್ರಿಯ ಸ್ಮರಣೆಯನ್ನು ಲಘು ಲಹರಿಯಲ್ಲಿ ಹರಿಯಬಿಟ್ಟಿದ್ದಕ್ಕೆ ಬೇಸರವಾದರೆ ಕ್ಷಮೆಯಿರಲಿ (ಶಿವ ಪಾರ್ವತಿಯರೂ ಸೇರಿದಂತೆ ಕ್ಷಮಿಸಿಬಿಡಿ). ಹೀಗಾದರೂ ಸ್ಮರಣೆಯಾದೀತು ಎನ್ನುವ ದೂರದಾಸೆ?

ಶುಭ ಶಿವರಾತ್ರಿ 🙂

20140227-223046.jpg

20140227-223110.jpg

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s