00188. ದೊಂಬರಾಟ

00188. ದೊಂಬರಾಟ

ಮತ್ತೊಂದು ಚುನಾವಣೆಯ ಪ್ರಕ್ರಿಯೆ ಶುರುವಾಗಿದೆ – ಯಥಾರೀತಿ ಎಲ್ಲ ಪಕ್ಷಗಳ ದೊಂಬರಾಟ ಸಹ. ಕೆಸರೆರಚಾಟ, ಆರೋಪ – ಪ್ರತ್ಯಾರೋಪ, ದೋಷಾರೋಪಣೆ, ಭಟ್ಟಂಗಿತನ – ಎಲ್ಲವೂ ತಂತಮ್ಮ ಶಕ್ತಾನುಸಾರ ಪ್ರಭಾವ ಬೀರುತ್ತ ತಾಕತ್ತು ತೋರಿಸಲಿವೆ. ಗದ್ದುಗೆಯೇರುವ ಹಂಬಲದಲ್ಲಿ ಎಲ್ಲಾ ತರದ ಸರ್ಕಸ್ಸಿನ ಪೈಪೋಟಿಯಲ್ಲಿ ಪಕ್ಷಗಳೆಲ್ಲವೂ ನಿರತವಾಗಿರುವಾಗ ನೀತಿ, ನಿಜಾಯತಿಯೆಲ್ಲ ಗಾಳಿಗೆ ತೂರಿ ಹೋರಾಡುವ ಹುನ್ನಾರಕ್ಕಿಳಿಯುತ್ತವೆಯಾದರೂ ಇದುವರೆವಿಗೂ ಯಾವ ಪಕ್ಷವೂ ಕನಿಷ್ಠ ಸರಳ ಬಹುಮತವನ್ನು ಕೇವಲ ತನ್ನ ಸ್ವಸಾಮರ್ಥ್ಯದಲ್ಲೆ ಪಡೆಯುವ ಕಸುವನ್ನು ತೋರಿಸಿಲ್ಲ. ದುರಂತವೆಂದರೆ ಯಾವುದೆ ಪಕ್ಷ ಅಧಿಕಾರಕ್ಕೆ ಬಂದರೂ ಸರಳ ಬಹುಮತವಿರದೆ ಅವರಿವರನ್ನವಲಂಬಿಸುವ ಕಿಚಡಿ ಮಿಶ್ರಣವಾದರೆ ಈಗಿನ ಗೋಳೆ ಇನ್ನು ಮುಂದುವರೆಯುತ್ತದೆ. ಈ ಬಾರಿಯಾದರೂ ಜನತೆ ಕನಿಷ್ಠ ಬಹುಮತವನ್ನು ಯಾವುದಾದರೊಂದು ಪಕ್ಷಕ್ಕೆ ಕರುಣಿಸಿದರೆ ಕನಿಷ್ಠ ಬೆಂಬಲದ ಹೆಸರಿನಲ್ಲಿ ಬ್ಲಾಕ್ ಮೇಲಿಗೊಳಗಾಗದೆ ನಿರಾತಂಕವಾಗಿ ಆಡಳಿತ ನಡೆಸಬಹುದು. ಇದಕ್ಕೆ ಜತೆಯಾಗಿ ದೇಶಕ್ಕೊಳಿತು ಮಾಡುವ ಸದಾಶಯದ ಒಬ್ಬ ಸೂಕ್ತ ನಾಯಕನಿದ್ದರೆ ಅರ್ಧ ಕೆಲಸ ಆದಂತೆಯೆ. ಹಾಗೆಯೆ ಚುನಾವಣೆ ಮುಗಿದ ನಂತರ ಯಾರೆ ಗೆಲ್ಲಲಿ , ಸೋಲಲಿ – ಕ್ಷುಲ್ಲಕ ರಾಜಕೀಯಕ್ಕಿಳಿಯದೆ ದೇಶದ ಪ್ರಗತಿಗೆ ಹೆಗಲನ್ನು ಜೋಡಿಸುವ ಸದಾಶಯದಿಂದ ಸಹಕರಿಸಿದರೆ, ಜಾಗತಿಕ ಭೂಪಠದಲ್ಲಿ ತಲೆಯೆತ್ತಿ ನಿಲ್ಲುವ ದಿನಗಳು ದೂರವಿರಲಾರದು. ಅಂತೆಯೆ ಸಚ್ಚಾರಿತ್ರವಿಲ್ಲದ ಅಭ್ಯರ್ಥಿಗಳನ್ನು ಜಾತಿ ಮತ ಪಕ್ಷ ಭೇಧ ಮರೆತು ಸೋಲಿಸಿ ಕಳಿಸುವುದು ಅತ್ಯಂತ ಅಗತ್ಯವಾದುದು. ಯಾವ ಪಕ್ಷವಾದರೂ ಸರಿ, ಅಂತಹ ಫಲಿತಾಂಶ ಕೊಡುವ ಉತ್ಸಾಹ ಬರುವಂತೆ ಸರಳ ಬಹುಮತ ಬರಿಸುವುದು – ಅದರಲ್ಲೂ ನಿಜವಾದ ನಾಯಕತ್ವದ ಸತ್ವವಿರುವ ಪಕ್ಷಕ್ಕೆ ಅಧಿಕಾರ ಕೊಡುವುದು ಈ ದಿನಗಳ ಪ್ರಮುಖ ಅಗತ್ಯ.

ಹಾಗಾಗಲೆಂಬ ಸದಾಶಯದೊಂದಿಗೆ ಈ ಒಂದು ಪದ್ಯ – ದೊಂಬರಾಟ 🙂

ದೊಂಬರಾಟ
__________________

ರಾಜಕೀಯ ದೊಂಬರಾಟ
ಮರೆತು ಮತ್ತೆ ಕಲಿವ ಪಾಠ
ತಿರುತಿರುಗಿ ಮಾಡಿದರು ತಪ್ಪು
ಮರಳಿ ಮಾಡಿ ಆಗುವ ಬೆಪ್ಪು ||

ಗೆದ್ದವ ಸೋತವ ಎಲ್ಲರ ಮನ
ಮಾಡುತಲಿ ಮರಳಿ ಪ್ರಯತ್ನ
ಸಾಕಲ್ಲವೆ ಮನ ಗೆದ್ದರೆ ಓಟಲಿ
ನಂತರ ದಿನ ನೋಟು ಬಾಟಲಿ ||

ಕೈ ಮುಗಿದು ಮತವ ಬೇಡುತ
ಹರುಕಲ ತಿರುಕಗು ನಗೆ ಮುಕ್ತ
ಅಣ್ಣ ಅಪ್ಪ ಅಕ್ಕ ಅವ್ವ ಅಮ್ಮನ
ಹೆಸರಲ್ಲೆ ಕಾಲ್ಹಿಡಿವಾ ಗುಮ್ಮನ ||

ಕಟ್ಟಿದ ಬ್ಯಾನರು ಹಂಚೊ ಚೀಟಿ
ಆಣೆ ಪ್ರಮಾಣದಲೆ ಮನಲೂಟಿ
ಪ್ರಣಾಳಿಕೆಗಳಾ ಹೇಳಿಕೆ ಕೋಟಿ
ಗೆದ್ದಮೇಲೆ ಬರಿ ಸೋಡಾ ಚೀಟಿ ||

ಆಳಲಿರಬೇಕು ಸುಗಮ ಸತತ
ಅಲ್ಲಾಡಿಸಲಾಗದಾ ಬಹುಮತ
ಕಿಚಡಿಪಕ್ಷದ ಕಲಬೆರೆಕೆ ಮೊತ್ತ
ಒಂದೆ ಧ್ವಜದಡಿಗೆ ಸೇರಿದ್ಯಾವತ್ತ ? ||

ನಂಟಾಗಿ ಬಿಡುವ ಗಂಟುಕಳ್ಳರು
ಸಂತೆಗಷ್ಟೆ ಮೊಳ ನೇಯುವರು
ಇದ್ದೊಂದು ಹಣ್ಣನೆಷ್ಟು ಹಂಚಲೆ
ಸೀಳಿದರು ಕುರ್ಚಿಗೆರಡೇ ಕಾಲೆ ||

ಬೇಡ ಬಿಡು ಪೂರ್ಣ ಬಹುಮತ
ಇದ್ದರೆ ಸಾಕಲ್ಲ ಸರಳದೆ ಗಣಿತ
ಆಳಲ್ಯಾರಾದರು ಹಾಳಾದ ಲೆಕ್ಕ
ಕುಂಟಿಸದಂತಿರಲಿ ನಂಬಿ ಅಕ್ಕಪಕ್ಕ ||

ಇದ್ದರೆ ಸಾಕೊಬ್ಬ ದಕ್ಷನಿಹ ನಾಯಕ
ಕಚ್ಚಾಟ ಒಳಜಗಳವಿಲ್ಲದ ಕೈ ಚಳಕ
ಮುಂದಿಟ್ಟರೆ ಸಾಕು ಹತ್ತೆ ಹೆಜ್ಜೆ ದೇಶ
ಎಂಟೆಜ್ಜೆ ಹಿಂದಿಕ್ಕಿದರು ಎರಡಕೆ ಲಕ್ಷ್ಯ ||

ಹೊಡೆದಾಡಿ ಬಡಿದಾಡಿ ಗೆಲ್ಲೊತನಕ
ಮುಗಿದ ಮೇಲಿನ್ನು ಸಹಕಾರಾ ಬೇಕ
ಮರೆತೆಲ್ಲ ವೈರ ಮತ್ಸರ ಹಿಂದಿಕ್ಕುತ
ದೇಶದ ಪ್ರಗತಿಗೊಂದಾಗಲೆಷ್ಟು ಹಿತ ||

ಶುರುವಾಗಬೇಕೆ ಹೊಸ ದೊಂಬರಾಟ
ಸಹಜ ರೀತಿಯ ಪ್ರಗತಿಯೆಡೆ ಜಿಗುಟ
ಮರೆತೆಲ್ಲ ಭೇಧ ಭಾವಾ ಚುನಾವಣೆಗೆ
ಒಂದಾಗಿ ನಡೆವ ಆಶಯ ಅಭಿವೃದ್ದಿಗೆ ||

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

ದೊಂಬರಾಟ, ಚುನಾವಣೆ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, Nagesha, Nagesha mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s