00185. ಕಥೆ: ಪರಿಭ್ರಮಣ..(13)

00185. ಕಥೆ: ಪರಿಭ್ರಮಣ..(13)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

(ಪರಿಭ್ರಮಣ..(12)ರ ಕೊಂಡಿ – https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-12/ )

(ಕಿರು ಟಿಪ್ಪಣಿ: ಸಂಪದಿಗರಿಗೆ ಮತ್ತು ಸಮಸ್ತ ಕನ್ನಡಿಗರಿಗೆ ಈ ಜಯ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು. ಇದೆ ಸಂಧರ್ಭದಲ್ಲಿ ಪರಿಭ್ರಮಣದ ಈ 13ನೆ ಕಂತಿನಲ್ಲಿ ಥಾಯಿ ಸಂಸ್ಕೃತಿಯ ಎರಡು ಪ್ರಮುಖ ಹಬ್ಬಗಳ ಕುರಿತಾದ ವಿವರಣೆಯನೂ ಸೇರಿಸುತ್ತಿದ್ದೇನೆ – ಥಾಯ್ ಹೊಸ ವರ್ಷವೂ ಸೇರಿದಂತೆ)

ಇದಕ್ಕಿಂತಲೂ ವಿಶಿಷ್ಠವಾದ ಮತ್ತೊಂದು ಬಗೆಯ ಅನುಭವವೂ ಶ್ರೀನಾಥನಿಗಾಗಿತ್ತು. ಹೀಗೆ ನಡುವಲೊಮ್ಮೆ ಭಾರತದಿಂದ ಪ್ರವಾಸಕ್ಕೆ ಬಂದಿದ್ದ ಹಿರಿಯ ಸಹೋದ್ಯೋಗಿಯೊಬ್ಬರು ಸಿಂಗಪುರ, ಮಲೇಶಿಯಾ ಮುಖೇನ ಬ್ಯಾಂಕಾಕಿಗೂ ಭೇಟಿಯಿತ್ತಿದ್ದರು. ಹಾಗೆ ಬಂದ ಪ್ರಯಾಣಿಕರು ಸಾಮಾನ್ಯವಾಗಿ ಏನೆ ಎಲೆಕ್ಟ್ರಾನಿಕ್ಸ್ ಸಲಕರಣೆಗಳನ್ನು ಕೊಳ್ಳಬೇಕೆಂದರೂ ಸಿಂಗಾಪುರದಲ್ಲೆ ಕೊಳ್ಳುತ್ತಿದ್ದುದು ಜಾಸ್ತಿ. ಒಂದೂ, ಕಡಿಮೆ ಮಟ್ಟದ ತೆರಿಗೆ ಕಸ್ಟಂಸ್ ಡ್ಯೂಟಿಗಳಿಂದಾಗಿ ಬೆಲೆ ಕಡಿಮೆಯಿರುತ್ತದೆ; ಜತೆಗೆ ಮುಕ್ತ ಮಾರುಕಟ್ಟೆಯ ಸ್ಪರ್ಧೆಯೂ ಜತೆ ಸೇರಿ ಉತ್ತಮ ಬ್ರಾಂಡುಗಳೂ ಸಹ ಸೂಕ್ತ ಬೆಲೆಯಲ್ಲಿ ದೊರಕುತ್ತವೆ – ಎಂದು. ಆದರೆ ಆತ ಅಲ್ಲಿ ಬೆಲೆ ಹೆಚ್ಚೆಂದು ಪರಿಗಣಿಸಿ, ತಾವು ಕೊಳ್ಳಬೇಕೆಂದು ಬಯಸಿದ್ದ ಡಿಜಿಟಲ್ ಕ್ಯಾಮರವನ್ನು ಕೊಳ್ಳದೆ ಹಾಗೆ ಬಂದಿದ್ದರು. ಇಲ್ಲಿ ಕೊಳ್ಳಲು ಸಾಧ್ಯವೆ, ಬೆಲೆಯಲ್ಲಿ ಏನಾದರೂ ಅನೂಕೂಲಕರ ಸ್ಥಿತಿ ಇರಬಹುದೆ? ಎಂದು ಕೇಳಿದಾಗ ಶ್ರೀನಾಥನಿಗೂ ತಟ್ಟನೆ ಉತ್ತರಿಸಲಾಗಲಿಲ್ಲ. ಭಾರತಕ್ಕೆ ಹೋಲಿಸಿ ಕಡಿಮೆಯಿದೆಯೆಂದು ಧಾರಾಳವಾಗಿ ಹೇಳಬಹುದಿತ್ತಾದರೂ, ಸಿಂಗಪುರದ ಹೋಲಿಕೆಯಲ್ಲಿ ಹೇಗೆ ಎಂದು ಅವನಿಗೂ ತಿಳಿದಿರಲಿಲ್ಲ. ಅಲ್ಲದೆ ಅವನ ಬಳಿ ಈಗಾಗಲೆ ಇದ್ದ ವಿಡಿಯೊ ಕ್ಯಾಮೆರ ದೆಸೆಯಿಂದ ಆ ಕುರಿತು ವಿಚಾರಿಸುವ ಅಗತ್ಯವೂ ಕಂಡಿರಲಿಲ್ಲ. ಸರಿ ಅವರನ್ನೆ ಜತೆಗೊಯ್ದು ಜಾಗೆ ತೋರಿಸಿದರೆ ಅವರೆ ಹುಡುಕಿ ಹೋಲಿಸಿಕೊಳ್ಳಬಹುದಲ್ಲ – ಎನಿಸಿ ನಾಲ್ಕಾರು ಕಡೆ ಅಲೆದು ಟೆಸ್ಕೊ ಲೋಟಸ್ ಮಾರ್ಟಿಗು ಕರೆದೊಯ್ದಿದ್ದ. ಅಲ್ಲಿನ ಬೆಲೆ ನೋಡಿದ ಆತ ಅದು ಸಿಂಗಪುರಕ್ಕಿಂತ ಶೇಕಡ ಮೂವತ್ತು, ನಲ್ವತ್ತರಷ್ಟು ಕಡಿಮೆಯಿದೆಯೆಂದು ಗುರುತಿಸಿದ್ದು ಮಾತ್ರವಲ್ಲದೆ ಅಲ್ಲಿಯೆ ಕೊಂಡೂ ಬಿಟ್ಟಿದ್ದರು! ಸಾಲದಕ್ಕೆ ಎರಡು ಮುಂಚೂಣಿಯಲ್ಲಿರುವ ಬ್ರಾಂಡುಗಳನ್ನು ಪರಿಗಣಿಸಿ ಅದರಲ್ಲಿ ಎರಡನೆ ಸ್ಥಾನವೆಂದು ಪರಿಗಣಿಸಲ್ಪಟ್ಟ, ಹೋಲಿಕೆಯಲ್ಲಿ ಮೊದಲ ಶ್ರೇಣಿಯ ಬ್ರಾಂಡಿಗಿಂತ ತುಸುವೆ ಕಡಿಮೆ ಬೆಲೆಯಿದ್ದ ಕ್ಯಾಮರ ಕೊಂಡುಕೊಂಡರು. ಬೆಲೆಯಲ್ಲಿ ಎರಡಕ್ಕೂ ತೀರಾ ವ್ಯತ್ಯಾಸವಿರಲಿಲ್ಲವಾಗಿ ಶ್ರೀನಾಥನೂ ಕುತೂಹಲದಿಂದ ಬೆಲೆಯಲ್ಲಿ ಅಷ್ಟು ವ್ಯತ್ಯಾಸವಿರದಿದ್ದರೂ ಅವರೇಕೆ ಎರಡನೆ ದರ್ಜೆಯ ಕಂಪನಿ ಆರಿಸಿಕೊಂಡರೆಂದು ನೇರ ಅವರನ್ನೆ ಕೇಳಿದ್ದ. ಅದಕ್ಕೆ ಅವರಿತ್ತ ಉತ್ತರವೂ ಕುತೂಹಲಕರವಾಗಿತ್ತು. ಆತ ಸೇಲ್ಸ್ ವಿಭಾಗದಲ್ಲಿದ್ದ ಕಾರಣ ಈ ಅನುಭವವೂ ಹೆಚ್ಚಿತ್ತೆಂದು ಕಾಣುತ್ತದೆ – ಎರಡು ಮಾಡೆಲ್ಲುಗಳ ಫೀಚರುಗಳನ್ನು ತೋರಿಸಿ, ಒಂದೆ ಮಟ್ಟದ ಬೆಲೆಯದ್ದಾದರೂ ಅವರು ಆರಿಸಿದ ಆಯ್ಕೆಯಲ್ಲಿ ಸುಮಾರು ಹತ್ತು ಹದಿನೈದು ಹೊಸತಿನ ಫೀಚರುಗಳು ಈಗಾಗಲೆ ಅಳವಡಿಸಿಕೊಂಡಿರುವುದನ್ನು ತೋರಿಸಿ, ಅದೆ ಫೀಚರುಗಳನ್ನು ಹೊಂದಿದ್ದ ಮೊದಲ ದರ್ಜೆಯ ಮಾಡಲ್ಲಿನ ಬೆಲೆಯತ್ತ ಕೈ ತೋರಿಸಿದ್ದರು – ಸುಮಾರು ಮೂರು ಪಟ್ಟು ಹೆಚ್ಚು ಬೆಲೆಯಿರುವ ಚೀಟಿಯನ್ನು ತೋರಿಸುತ್ತ! ಒಟ್ಟಾರೆ ಕಡಿಮೆ ಬೆಲೆಗೆ ಹೆಚ್ಚಿನ ವೈವಿಧ್ಯತೆ, ಸೌಲಭ್ಯ, ಅನುಕೂಲಗಳನ್ನು ಹೊಂದಿದ ಮಾದರಿ ಆರಿಸಿದ್ದರು. ಆದರೂ ಶ್ರೀನಾಥನಿಗೆ ಅರ್ಥವಾಗದ ವಿಷಯ ಅದರ ಬೆಲೆ ಸಿಂಗಪುರಿಗಿಂತ ಹೇಗೆ ಕಡಿಮೆಯಾಯ್ತು ಎಂಬುದು. ಆ ಅನುಮಾನವನ್ನು ಅವರಲ್ಲೆ ತೋಡಿಕೊಂಡಾಗ, ಆ ಜಪಾನೀ ಬ್ರಾಂಡಿನ ತಯಾರಿಕಾ ಕಾರ್ಖಾನೆ ಥಾಯಿಲ್ಯಾಂಡಿನಲ್ಲೆ ಇರುವ ಮಾಹಿತಿ ನೀಡಿ ಅದರ ಕಾರಣ ಕೆಲವು ಅನಗತ್ಯ ವೆಚ್ಚಗಳು ಕಡಿತವಾಗುವ ಹಿನ್ನಲೆ ವಿವರಿಸಿದ್ದರು.

ಅದನ್ನು ಕೇಳುತ್ತಲೆ ಅವನಿಗೂ ಅದೆ ಮಾದರಿಯ ಮತ್ತೊಂದು ವಿಷಯ ನೆನಪಾಗಿತ್ತು. ಒಮ್ಮೆ ಅವನು ನೋಡಿದ್ದ ಒಂದು ಮಾಲ್ ನಲ್ಲಿ ಒಂದೆ ಕಂಪನಿಯ ಒಂದೆ ಮಾದರಿಯ, ಎಲ್ಲಾ ತರದಲ್ಲೂ ಸಮಾನವಾಗಿ ಕಾಣುವ ಎರಡು ಟೀವಿ ಸೆಟ್ಟುಗಳನ್ನು ಪಕ್ಕಪಕ್ಕದಲ್ಲಿ ಮಾರಾಟಕಿಟ್ಟಿದ್ದರು. ಮಾಡೆಲ್ಲಿನ ಸಂಖ್ಯೆಯಿಂದ ಹಿಡಿದು ಎಲ್ಲವೂ ಒಂದೆ ಆಗಿದ್ದ ಎರಡರ ನಡುವೆ ಇದ್ದ ಏಕೈಕ ವ್ಯತ್ಯಾಸವೆಂದರೆ, ಒಂದಕ್ಕೆ ಮುಂದಿನ ಪರದೆಯ ಸುತ್ತುವರಿದ ಪಟ್ಟಿ ತುಸು ಅಗಲವಿದ್ದರೆ, ಮತ್ತೊಂದಕ್ಕೆ ಆ ಪಟ್ಟಿಯ ಅಗಲ ಕಡಿಮೆಯಿತ್ತು. ನಿಜವಾದ ವ್ಯತ್ಯಾಸವಿದ್ದುದು ಮಾತ್ರ ಬೆಲೆಯಲ್ಲಿ. ಒಂದೆ ಕಂಪನಿಯ, ಒಂದೆ ಮಾದರಿಯ ಮಾಡಲ್ಲುಗಳಲ್ಲಿ ಅರ್ಧಕರ್ಧ ಬೆಲೆ ವ್ಯತ್ಯಾಸವಿರುವುದು ಹೇಗೆ ಸಾಧ್ಯ? ಏನಿದರಲ್ಲಿ ‘ಕ್ಯಾಚು’ ಎಂದು ತಲೆ ಕೆರೆದುಕೊಂಡರೂ ಉತ್ತರ ಗೊತ್ತಾಗಿರಲಿಲ್ಲ. ಅಲ್ಲೆ ನಿಂತಿದ್ದ ಸೇಲ್ಸ್ ಮನ್ ಕೂಡ ಏನು ಮಾಡಿದರೂ ಬಾಯ್ಬಿಟ್ಟಿರಲಿಲ್ಲ, ಅಷ್ಟು ವ್ಯತ್ಯಾಸದ ಬೆಲೆಗೆ ಏನು ಕಾರಣವೆಂದು. ಏನೊ ವ್ಯತ್ಯಾಸ ಇರಲೇಬೇಕೆಂದು ಶ್ರೀನಾಥನಿಗೆ ಖಚಿತವಾಗಿದ್ದರೂ, ಏನಿರಬಹುದೆಂದು ಊಹಿಸಲೆ ಆಗಿರಲಿಲ್ಲ. ಕೊನೆಗೊಮ್ಮೆ ಊಟದ ಹೊತ್ತಿನಲ್ಲಿ ಅಲ್ಲಿ ಯಾರು ಬಳಿಯಿರದ ಹೊತ್ತಿನಲ್ಲಿ ಹೋಗಿ ಸಂಶೊಧನೆ ನಡೆಸಿ ತಿಣುಕಾಡಿದಾಗ ಕೊನೆಗೂ ಆ ಅಂತರದ ಮೂಲ ಗೊತ್ತಾಗಿತ್ತು – ಆ ಸೆಟ್ಟುಗಳ ಹಿಂದೆ ಇದ್ದ ಗುರುತಿನ ಫಲಕಗಳ ಸೂಕ್ಷ್ಮ ಮುದ್ರಿಕೆಯನ್ನು ಗಮನಿಸಿದಾಗ. ಒಂದರಲ್ಲಿ ‘ಮೇಡಿನ್ ಜಪಾನ್’ ಎಂದಿದ್ದರೆ ಮತ್ತೊಂದು ‘ ಮೇಡ್ ಇನ್ ಮಲೇಶಿಯಾ’ ಎಂದಿತ್ತು! ಬಹುಶಃ ತಯಾರಿಕಾ ಕಾರ್ಖಾನೆಯನ್ನೆ ಜಪಾನಿನಿಂದ ಮಲೇಶೀಯಾಕ್ಕೆ ಸ್ತಳಾಂತರಿಸುತ್ತಿರುವ ಕಾರಣ ಸಂಧಿ ಕಾಲದಲ್ಲಿ ಎರಡು ಮಾದರಿಗಳು ಉಳಿದುಕೊಂಡಿವೆ. ತುಸು ವ್ಯತ್ಯಾಸ ಕಾಣಲೆಂದಷ್ಟೆ ಮುಂದಿನ ಪಟ್ಟಿಯನ್ನು ಬದಲಿಸಿದ್ದರೆ ಹೊರತು ಮತ್ತೇನು ಕಾರಣವಿದ್ದಂತೆ ಕಾಣಲಿಲ್ಲ. ಮಾರಾಟದ ಬಿಸಿ, ಸ್ಪರ್ಧಾಜಗದ ಒತ್ತಡಗಳು ಏನೆಲ್ಲ ತರದ ನಿರ್ಧಾರಗಳಿಗೆ ಕಾರಣವಾಗುತ್ತವೆ, ಈ ಕಾಲಮಾನದಲ್ಲಿ – ಅನಿಸಿ ಅಚ್ಚರಿಗೊಂಡಿದ್ದ ಶ್ರೀನಾಥ. ಆ ಅನುಭವದಿಂದಲೋ ಏನೊ, ಆತ ಯಾಕೆ ಎರಡನೆ ದರ್ಜೆ ಕಂಪನಿಯ ಸರಕನ್ನೆ ಕೊಂಡರೆಂದು ಚೆನ್ನಾಗಿ ಅರಿವಾಗಿತ್ತು. ಮತ್ತು ಆತನ ಗ್ರಾಹಕ ಚತುರತಾ ಮನೋಭಾವಕ್ಕೆ ಮೆಚ್ಚುಗೆಯೂ ಮೂಡಿತ್ತು. ಆ ಅನುಭವದ ಆಧಾರದ ಮೇಲೆ ಶ್ರೀನಾಥನಿಗೆ ಅದೆಷ್ಟು ಪರಿಣಿತಿ, ಹುಮ್ಮಸ್ಸು ಬಂದುಬಿಟ್ಟಿತ್ತೆಂದರೆ, ಮುಂದೆ ಬಂದವರಾರಾದರೂ ಕೊಳ್ಳಲು ಬಯಸಿದರೆ ಇವನೆ ಅವರಿಗೆ ಲೆಕ್ಚರು ಕೊಡುವಷ್ಟು ತಯಾರಾಗಿಬಿಟ್ಟಿದ್ದ !

ಹೊರದೇಶದಲ್ಲಿ ಅಪರಿಚಿತ ಬದುಕಿನ ನಡುವೆ ಸೇರಿಕೊಂಡವರನ್ನು ಕಾಡುವ ಅನಾಥ ಪ್ರಜ್ಞೆಯಿಂದ ಪಾರಾಗಲೆಂದೊ, ಅಥವ ಬೇರೇನೂ ಮಾಡಲಾಗದ ಅನಿವಾರ್ಯತೆಯಿಂದಲೊ ಒಂದೆಡೆಯಿರುವ ಅವರೆಲ್ಲರೂ ಒಂದಲ್ಲ ಒಂದು ನೆಪದಲ್ಲಿ ಜತೆ ಸೇರಿ ಒಟ್ಟಾಗಿ ಸಮಯ ಕಳೆಯುವುದು ನಡೆಯುತ್ತಲೆ ಇತ್ತು. ಅದರಲ್ಲಿ ಬಲು ಸರಳ ಹಾಗೂ ಸಹಜವಾಗಿ ಸಿಗುವ ಸುಲಭದ ಚಟುವಟಿಕೆಯೆಂದರೆ ಶಾಪಿಂಗ್. ಯಾವುದೆ ಯೋಜನೆ, ಸಿದ್ದತೆಯ ಅವಶ್ಯಕತೆಯಿರದೆ ಚಕಚಕನೆ ಮೇಲೆದ್ದು ದಿರುಸುಟ್ಟು ಹೋಗಬಹುದಾಗಿದ್ದ ಇದರ ದೆಸೆಯಿಂದಾಗಿ ಎಲ್ಲರಿಗೂ, ಅದರಲ್ಲೂ ಕುಟುಂಬ ಸಮೇತ ಬಂದವರಿಗೆ ಏಕತಾನತೆಯಿಂದ ಒಂದು ಬ್ರೇಕ್ ಸಿಕ್ಕಿದಂತೆ ಆಗಿ ನಿರಾಳವೆನಿಸುತ್ತಿತ್ತು. ಶ್ರೀನಾಥನು ಬಾಸ್ ಎಂಬ ಕಾರಣಕ್ಕೊ, ಒಂಟಿಯಾಗಿದ್ದನೆಂಬುದಕ್ಕೊ ಅವರ ದಿನ ನಿತ್ಯದ ಓಡಾಟ ಚಟುವಟಿಕೆಗಳಲ್ಲಿ ಪಾಲ್ಗೊಳದಿದ್ದರೂ ಆಗೊಮ್ಮೆ, ಈಗೊಮ್ಮೆ ಅದರಲ್ಲೂ ವಾರದ ಕೊನೆಯಲ್ಲಿ ಎಲ್ಲಿಗಾದರೂ ಹತ್ತಿರದ ಸ್ಥಳಕ್ಕೆ ಪಿಕ್ನಿಕ್ಕಿನಂತೆ ಹೋಗಿ ಬರುವ ಯೋಜನೆ ಹಾಕಿದಾಗ ಇವನನ್ನ ಆಹ್ವಾನಿಸುತ್ತಿದ್ದರು. ಶ್ರೀನಾಥನು ಸಮಯದನುಕೂಲದನುಸಾರ ಕೆಲವೊಮ್ಮೆ ಜತೆ ಹೋಗುತ್ತಿದ್ದುದು ಉಂಟು; ಹಾಗೀಗೊಮ್ಮೆ ಬೇಸರವಾದಾಗ ಹೋಗುತ್ತಿರಲಿಲ್ಲ – ಅವರ ನಡುವೆ ಇವನ ಇರುವಿಕೆಯಿಂದಲೆ ಮುಜುಗರವಾಗಬಾರದೆಂದು. ಆದರೆ ಬ್ಯಾಂಕಾಕಿನಿಂದ ಹೊರಗಿನ ಸ್ಥಳಕ್ಕೆ ಹೊರಟಾಗ ಸಾಧ್ಯವಾದಾಗಲೆಲ್ಲ ಜತೆ ಸೇರುತ್ತಿದ್ದ. ಅದರಲ್ಲೂ ಶುಕ್ರವಾರವೊ, ಸೋಮವಾರವೊ ರಜೆಯ ದಿನ ಬಂತೆಂದರೆ ಯಾರಾದರೊಬ್ಬರು ಎಲ್ಲಾದರೂ ಒಂದು ಕಡೆಗೆ ಹೋಗುವ ಯೋಜನೆ ತಪ್ಪದೆ ಹಾಕುತಿದ್ದರು. ಹಾಗೆ ಹೊರಟಾಗ ಇಡಿ ಗುಂಪಿನ ಎಲ್ಲರು ಹೊರಡುವುದು ಸಾಮಾನ್ಯವಾಗಿತ್ತು – ಒಟ್ಟಾಗಿದ್ದಾಗ ಭಾಷೆ, ಜಾಗದ ತೊಡಕು ನಿಭಾಯಿಸುವುದು ಸುಲಭವೆನ್ನುವುದರ ಕಾರಣವೊಂದೆ ಅಲ್ಲದೆ, ಹಾಗೆ ಹೊರಟಾಗ ಖರ್ಚೆಲ್ಲ ಹಂಚಿ ಹೋಗಿ ತೀರಾ ತುಟ್ಟಿಯಿಲ್ಲದೆ ಬರಲು ಸಾಧ್ಯವಾಗುತ್ತಿತ್ತು. ಫುಕೇತ್, ಪಟ್ಟಾಯಗಳಂತಹ ಪ್ರವಾಸಿ ತಾಣಗಳಿಗೆ ಎಲ್ಲರೂ ಭೇಟಿ ಕೊಡುವುದು ಸಾಮಾನ್ಯವಾಗಿದ್ದರೂ, ತುಸು ಅಪರೂಪದ ವಿಶೇಷತೆಯಿರುವ ಜಾಗಗಳನ್ನು ಹುಡುಕಿ ಹೋಗುತ್ತಿದ್ದ ಕಾರಣ ತುಸು ಅಚ್ಚರಿಯ ಅಂಶವೂ ಸೇರಿರುತ್ತಿತ್ತು. ಅಂತಹ ಒಂದು ಟ್ರಿಪ್ಪಿನಲ್ಲಿ ಜತೆಗೂಡಿದ್ದ ಶ್ರೀನಾಥನಿಗೆ ‘ಶ್ರೀ ರಚಾ ಟೈಗರು ಜೂ’ ನಂತಹ ಅಪರೂಪದ ಜಾಗವನ್ನು ನೋಡಲು ಸಾಧ್ಯವಾಗಿದ್ದು. ಸುಮಾರು ಇನ್ನೂರು ಹುಲಿಗಳಿರುವ ಹುಲಿಗಳಿಗೆಂದೆ ಮೀಸಲಾದ ಮೃಗಾಲಯವೆಂದೆ ಹೆಸರಾಗಿದ್ದರೂ ಅಲ್ಲಿ ಹುಲಿಗಳು ಮಾತ್ರವಲ್ಲದೆ ಹಂದಿ, ಆನೆ, ಹಾವು, ಮೊಸಳೆ, ಡಾಲ್ಪಿನ್ನು ಇತ್ಯಾದಿಗಳು ಸೇರಿ ಇಡಿ ದಿನದ ಮನರಂಜನೆಯಾಗುವಷ್ಟು ಪ್ರದರ್ಶನಗಳು ಸೇರಿದ್ದವು. ಹುಲಿಗಳ ಪ್ರದರ್ಶನ ಮಾತ್ರವಲ್ಲದೆ, ಮೊಸಳೆಗಳ ಬಾಯೊಳಗೆ ತಲೆಯಿಡುವ ಸಾಹಸ, ಆನೆಗಳ ಸರ್ಕಸ್ಸಿನ ತರದ ಮಾದರಿಯ ವಿವಿಧಾವತಾರಗಳು, ಡಾಲ್ಪಿನ್ನಿನ ಗುಂಪೊಂದರ ಜತೆ ನಡೆಸುವ ತರಹಾವಾರಿ ಚೆಲ್ಲಾಟಗಳು ಸೇರಿಕೊಂಡಿದ್ದವು. ಮೈ ಮೇಲೆಲ್ಲ ಚೇಳು ಹರಡಿಕೊಂಡ ಥಾಯ್ ಸುಂದರಿಯೊಬ್ಬಳ ಗುಹೆ ಒಂದು ಆಕರ್ಷಣೆಯಾದರೆ, ಒಂದೆ ಕೊಠಡಿಯಲ್ಲಿ ಸಹ ಜೀವನ ನಡೆಸುತ್ತಿರುವ ಹಂದಿ ಮತ್ತು ಹುಲಿ, ಹುಲಿ ಮರಿಗಳಿಗೆ ಹಾಲೂಡಿಸುತ್ತಿರುವ ಹೆಣ್ಣು ಹಂದಿಯ ದೃಶ್ಯವನ್ನು ಕಂಡು ವಿಸ್ಮಯ ಪಡದಿರಲೂ ಸಾಧ್ಯವಾಗುತ್ತಿರಲಿಲ್ಲ. ಇಷ್ಟೂ ಸಾಲದೆಂಬಂತೆ ದುಡ್ಡು ಕೊಟ್ಟು ಬಾಟಲಿ ಹಾಲು ಕೊಂಡುಕೊಂಡು ಮರಿ ಹುಲಿಗಳಿಗೆ ಪಂಜರದ ಕಿಂಡಿಯಿಂದಲೆ ಹಾಲೂಡಿಸುವ ಅವಕಾಶ, ಜತೆಗೆ ಮರಿಯನ್ನು ತೊಡೆಯ ಮೇಲಿಟ್ಟುಕೊಂಡು ಹಾಲೂಡಿಸುತ್ತಲೆ ಪೋಟೋ ಕ್ಲಿಕ್ಕಿಸಿಕೊಳ್ಳುವ ಪ್ರಚೋದನೆ – ಅದರದರನುಸಾರ ನಿಗದಿಸಿದ ಬೆಲೆ ತೆರುವ ಇಚ್ಛೆಯಿದ್ದರೆ! ಮತ್ತೊಂದು ಊರಿನ ಬೌದ್ದ ದೇವಾಲಯವೊಂದರಲ್ಲಿ ಮಾಂಕುಗಳ ಜತೆಯೆ ಸಹಜೀವನ ನಡೆಸುವ ಹುಲಿಗಳನ್ನು ನೋಡುವ ಸಾಧ್ಯತೆ.. ನಾಯಿ, ಕುದುರೆಗಳ ಹಾಗೆ ಹುಲಿಯಂತ ಕ್ರೂರ ಕಾಡು ಮೃಗಗಳನ್ನು ಪಳಗಿಸಿ, ಬೋನುಗಳಿಲ್ಲದೆ ತಮ್ಮ ಜತೆಗೆ ಓಡಾಡಿಸುತ್ತ, ನದಿಯಲ್ಲಿ ಈಜಾಟ – ಸ್ನಾನ ಮಾಡಿಸುತ್ತ, ಹೊತ್ತೊತ್ತಿಗೆ ಸರಿಯಾಗಿ ಅದಕ್ಕೆ ನಿಗದಿಸಿದ ಊಟ ತಿನಿಸುತ್ತ ಸಾಧು ಪ್ರಾಣಿಗಳಂತೆ ಇಟ್ಟುಕೊಂಡಿರುವ ಬಗೆ ನೋಡಿದರೆ ಯಾವುದೊ ಬೇರೆಯದೆ ಪ್ರಪಂಚಕ್ಕೆ ಬಂದ ಅನುಭವವಾಗುತಿತ್ತು.

ಇದಾವುದೂ ಇಲ್ಲದ ವಾರಗಳಲ್ಲಿ ಶ್ರೀನಾಥನಿಗೆ ಪ್ರಿಯವಾದ ಚಟುವಟಿಕೆಯೆಂದರೆ ಅವನ ಅಪಾರ್ಟ್ಮೆಂಟಿನ ಹತ್ತಿರದಲ್ಲೆ ಇದ್ದ ‘ಲುಂಪಿನಿ’ ಪಾರ್ಕಿನಲ್ಲಿ ವಾಕಿಂಗ್ ಹೋಗುವುದು ಅಥವಾ ಸುಮ್ಮನೆ ಅಡ್ಡಾಡುವುದು. ಪಾರ್ಕೆಂದರೆ ಬರಿ ಹೋಲಿಕೆಗಷ್ಟೆ ಪಾರ್ಕ್ ಎನ್ನಬೇಕೆ ಹೊರತು ಅದರ ವಿಸ್ತಾರ, ವ್ಯಾಪ್ತಿ, ಒಳಗಿನ ಸಲಕರಣೆಗಳನ್ನು ನೋಡಿದರೆ ಅದನ್ನು ಕೇವಲ ಪಾರ್ಕೆಂದು ಕರೆಯುವುದೆ ಅದಕ್ಕೆ ಮಾಡಿದ ಅಪಚಾರವಾಗುತಿತ್ತು – ಅಷ್ಟು ಸಮಗ್ರತೆ, ವೈಶಾಲ್ಯತೆಯಿಂದ ಕೂಡಿತ್ತು ಆ ಜಾಗ. ಸುತ್ತಲು ವಾಕಿಂಗು ಹೊರಟರೆ ಸುತ್ತು ಹಾಕಿ ಬರುವಷ್ಟರಲ್ಲೆ ಸುಮಾರು ಕಿಲೊಮೀಟರುಗಳಾಗುವಷ್ಟು ದೊಡ್ಡದಿದ್ದ ಆ ಉದ್ಯಾನವನದಂತ ವಿಶಾಲ ಸ್ಥಳವನ್ನು ಇಂತಹ ಜನನಿಭಿಡ, ವಾಣಿಜ್ಯೋದ್ದೇಶ ಪ್ರೇರಿತ ನಗರದ ನಟ್ಟನಡುಮಧ್ಯ ಪ್ರದೇಶದಲ್ಲಿ ಮೀಸಲಿರಿಸಿ ಅಭಿವೃದ್ಧಿ ಪಡಿಸಿದ ಅಲ್ಲಿನ ಸರಕಾರಿ ಆಡಳಿತ ಮತ್ತು ಜನಗಳ ಅಭಿರುಚಿಯ ಕುರಿತು ಗೊಂದಲವು ಉಂಟಾಗುತ್ತಿತ್ತು. ಒಂದೆಡೆ ಪ್ರಗತಿಯ ಸಾಂಕೇತಿಕವಾಗಿದ್ದ ಕಾಂಕ್ರೀಟು ಕಾಡಿನ ಬಹು-ಮಹಡಿ ಕಟ್ಟಡಗಳ ನಡುವೆಯೆ, ಇನ್ನೊಂದೆಡೆ ಈ ರೀತಿಯ ಉದ್ಯಾನ, ದೇಗುಲ, ಅರಮನೆಗಳನ್ನು ಪೋಷಿಸಿಕೊಂಡು ಬರುವ ದ್ವಂದ್ವ ಸಾಮಾನ್ಯದ್ದಲ್ಲವೆಂದೆ ಅನಿಸುತ್ತಿತ್ತು. ಆದರೆ ನಗರ ಮಧ್ಯದಲ್ಲಿನ ಹದಗೆಟ್ಟ ಹವಾಗುಣದಿಂದ ಪಾರಾಗಿ ಶುದ್ಧ ಹವೆಯನ್ನು ಸೇವಿಸಲು ಶ್ರೀನಾಥನಿಗಂತೂ ಇದು ತುಂಬಾ ಸೂಕ್ತ ಸ್ತಳವಾಗಿತ್ತು. ಸಾಧ್ಯವಿದ್ದಾಗೆಲ್ಲ ನಡೆದಾಡಿ ಬರಲು ಹೋಗುತ್ತಿದ್ದುದು ಮಾತ್ರವಲ್ಲದೆ ಆಗಾಗ್ಗೆ ಅಲ್ಲಿ ನಡೆಯುತ್ತಿದ್ದ ಪ್ರದರ್ಶನಗಳು, ಕಾರ್ಯಕ್ರಮಗಳಲ್ಲು ಪಾಲ್ಗೊಳ್ಳುತ್ತಿದ್ದ. ಏನೂ ಇರದ ದಿನ ಅಲ್ಲಿದ್ದ, ಇಡಿ ಉದ್ಯಾನದೆಲ್ಲೆಡೆ ಆವರಿಸಿಕೊಂಡ ಸರೋವರದ ಮುಂದೆ ಬೆಂಚಿನ ಮೇಲೆ ಕುಳಿತು ನೀರನ್ನೆ ದಿಟ್ಟಿಸುವುದು ಮತ್ತೊಂದು ಪ್ರಿಯವಾಗಿದ್ದ ಹವ್ಯಾಸ. ಬೇಕಿದ್ದರೆ ಅಲ್ಲೆ ಬೋಟಿಂಗ್ ಹೋಗಲೂ ವ್ಯವಸ್ಥೆಯಿತ್ತು. ಅಲ್ಲಿ ಕುಳಿತಾಗ ಬೀಸುವ ಚೇತೋಹಾರಿ ಮಾರುತದ ಜತೆ ಸುತ್ತಲಿನ ಗಿಡ ಮರದಿಂದುರುಳಿ ಬೀಳುತಿದ್ದ ಹೂವುಗಳ ಜತೆ ಚೆಲ್ಲಾಟವಾಡುವುದೆ ಮನರಂಜನೆಯಾಗಿಬಿಡುತ್ತಿತ್ತು. ಹೀಗೆ ಒಮ್ಮೆ ಸಂಜೆಯ ಹೊತ್ತಿನಲ್ಲಿ ಅಲ್ಲಿ ಕುಳಿತಿದ್ದಾಗಲೆ ಅಲ್ಲಿನ ‘ಲೋಯ್ ಕ್ರಾಥೊಂಗ್’ ವಿಶೇಷ ಹಬ್ಬದ ಸಾಕ್ಷಿಯಾಗುವ ಅವಕಾಶ ಸಿಕ್ಕಿದ್ದು. ಇದೊಂದು ತೀರ ವಿಶೇಷವಾದ ಥಾಯ್ ಸಾಂಸ್ಕೃತಿಕ ಆಚರಣೆಯೆಂದೆ ಹೇಳಬಹುದು. ಸಾಮಾನ್ಯ ನವೆಂಬರ ತಿಂಗಳಿನ ಹುಣ್ಣಿಮೆಯ ಚಂದಿರನ ಬೆಳಕಿನಡಿ ತಮ್ಮ ಹತ್ತಿರವಿರುವ ನದಿಯೊ, ಕೊಳವೊ, ಸಾಗರವೊ – ನೀರಿರುವ ಯಾವ ಎಡೆಯಾದರೂ ಸರಿ, ಸ್ಥಳೀಯರು ತಪ್ಪದೆ ಹೋಗಿ ಆಚರಿಸುವ ಹಬ್ಬ. ‘ಲೋಯ್ ಕ್ರಾಥೊಂಗ್’ – ಇದರ ಶಬ್ದಶಃ ಅರ್ಥ ‘ತೇಲುವ ಬುಟ್ಟಿ’ ಎಂದೆನ್ನಬಹುದು. ಬಾಳೆಯ ದಿಂಡು, ಬಾಳೆಯೆಲೆ ಬಳಸಿ ಸುಂದರವಾದ ತೇಲುವ ಬುಟ್ಟಿಗಳನ್ನು ಮಾಡಿ ಅದರ ಸುತ್ತಲು ಸೊಗಸಾದ ಹೂವುಗಳಿಂದ ಅಲಂಕರಿಸಿ ಮಧ್ಯದಲ್ಲಿ ಮೊಂಬತ್ತಿಯೊಂದನ್ನು ಹಚ್ಚಿಡುತ್ತಾರೆ – ಬಹುಶಃ ಹಿಂದಿನ ದಿನಗಳಲ್ಲಿ ಹಣತೆಯಿಡುತ್ತಿದ್ದರೊ ಏನೊ? ಈ ಬುಟ್ಟಿಯನ್ನು ಹೊತ್ತು ಸಮೀಪದ ನೀರಿರುವ ಜಾಗಕ್ಕೆ ಬರುವ ಜನರು, ಹೀಗೆ ಹಚ್ಚಿಟ್ಟ ಲೋಯ್ ಕ್ರಾಥೋಂಗನ್ನು ತೇಲಿ ಬಿಡುತ್ತಾ – ಆ ಹಿಂದಿನ ವರ್ಷ ಜಲದ ಬಳಕೆಯಿಂದಾಗಿರಬಹುದಾದ ದೋಷಗಳನ್ನೆಲ್ಲ ಮನ್ನಿಸಿ ಅದೃಷ್ಟ ತರುವಂತೆ ಪ್ರಾರ್ಥಿಸುತ್ತಾರೆ. ಹಾಗೆ ತೇಲಿ ಬಿಡುತ್ತಲೆ ತಮ್ಮ ಮನದ ಆಶಯ, ಬಯಕೆಗಳನ್ನು ಪೂರೈಸುವ ಬೇಡಿಕೆಯನ್ನು ಸಲ್ಲಿಸುತ್ತಾರೆ. ಪ್ರೇಮಿಗಳಾದರೆ ಒಟ್ಟಾಗಿ ತೇಲಿಬಿಡುವುದು ಸಂಪ್ರದಾಯ. ಈ ತೇಲುಬುಟ್ಟಿಯ ದೀಪ ಕಣ್ಮರೆಯಾಗುವತನಕ ಆರದಂತೆ ದೂರ ಸಾಗಿದರೆ ತಮ್ಮ ಆಶಯ ಈಡೇರುವುದೆಂಬ ನಂಬಿಕೆ. ಸಾವಿರಾರು ಜನ ಸೇರಿಕೊಂಡು ಒಟ್ಟಾಗಿ ತೇಲಿಬಿಡುವ ಈ ರೀತಿಯ ಸಾವಿರಾರು ಮಿನಿ ತೆಪ್ಪಗಳನ್ನು , ಹುಣ್ಣಿಮೆ ರಾತ್ರಿಯ ಚಂದಿರನಡಿಯ ಹಾಲು ಬೆಳಕಿನಲ್ಲಿ ಸರೋವರದ ದಡದಲ್ಲಿ ತಂಪಾಗಿ ಬೀಸುವ ಗಾಳಿಯಲ್ಲಿ ಕೂತು ನೋಡಿ ಆನಂದಿಸುವ ಅನುಭೂತಿಯೆ ಬೇರೆ ಲೋಕದ್ದು. ಥಾಯ್ಲ್ಯಾಂಡಿನ ಉತ್ತರ ಭಾಗಗಳಲ್ಲಿ (ಬಹುಶಃ ನೀರಿನ ಅನುಕೂಲವಿಲ್ಲದ ಕಡೆ), ‘ಖೋಮ್ ಲೋಯ್’ ಎನ್ನುವ ಹೆಸರಿನಲ್ಲಿ ಹೀಗೆ ದೀಪ ಹಚ್ಚಿದ ಆಕಾಶಬುಟ್ಟಿಗಳನ್ನು ಹಾರಿಬಿಡುತ್ತಾರೆಂದು ಶ್ರೀನಾಥ ಕೇಳಿದ್ದನಾದರೂ ಇಲ್ಲಿ ಕಾಣಲಾಗಿರಲಿಲ್ಲ. ಒಟ್ಟಾರೆ ಈ ರೀತಿಯಲ್ಲಿ ಪಾರ್ಕಿನ ಭೇಟಿಯ ನೆಪದಲ್ಲಿ, ಅಲ್ಲಿನ ರೀತಿ ನೀತಿಗಳು ತಂತಾನೆ ಅರಿವಾಗಿ ಅಲ್ಲಿನ ಬದುಕಿನ ವೈವಿಧ್ಯಗಳನ್ನು ಪರಿಚಯ ಮಾಡಿಕೊಟ್ಟಿದ್ದವು.

ಇದೊಂದು ತೀರಾ ಸಾಂಪ್ರದಾಯಿಕ ಹಬ್ಬವಾದರೂ ಸಾರ್ವಜನಿಕ ರಜೆಯಿರದ ಕಾರಣ ಅಷ್ಟು ಹೆಚ್ಚು ಪ್ರಚಾರವಾಗದ ಆಚರಣೆಯಾಗಿತ್ತು, ಹೊರಗಿನವರಲ್ಲಿ. ಲುಂಪಿನಿ ಪಾರ್ಕಿನ ದೆಸೆಯಿಂದಾಗಷ್ಟೆ ಶ್ರೀನಾಥನಿಗೆ ನೋಡಲು ಸಾಧ್ಯವಾಗಿತ್ತೆ ಹೊರತು, ವಾಕಿಂಗಿನ ನೆಪ ಇಲ್ಲವಾಗಿದ್ದಿದ್ದರೆ ಅಷ್ಟು ಸುಲಭದಲ್ಲಿ ಕಾಣ ಸಿಗುತ್ತಿರಲಿಲ್ಲ. ಉಳಿದವರಿಗೂ ಸೇರಿದಂತೆ ರಜೆಯಿಲ್ಲದ ಕಾರಣ ಭಾರತೀಯ ಹಬ್ಬಗಳ ದಿನಗಳೂ ಗೊತ್ತಾಗುತ್ತಿರಲಿಲ್ಲವಾದರೂ, ಸಂಪ್ರದಾಯದ ಆಚರಣೆಯ ಮೇಲೆ ಒಂದು ಕಣ್ಣಿಟ್ಟೆ ಇರುವ ರಾಮಾನುಜಂ ತರದ ಕುಟುಂಬದವರಿಂದಾಗಿ ಕೆಲವು ಮುಖ್ಯ ಹಬ್ಬದ ದಿನಗಳು ಗೊತ್ತಾಗುತ್ತಿತ್ತು, ಮತ್ತು ಆಗೀಗ ಹಬ್ಬದ ತಿಂಡಿಯ ಸೇವೆಯೂ ಆಗುತ್ತಿತ್ತು – ಒಮ್ಮೊಮ್ಮೆ ಹಬ್ಬದ ದಿನ, ಕೆಲವೊಮ್ಮೆ ಅದರ ಮರುದಿನ. ಬ್ಯಾಂಕಾಕಿನ ಸಾರ್ವಜನಿಕ ರಜೆಯ ದಿನಗಳೆಲ್ಲ ಹೆಚ್ಚು ಕಡಿಮೆ ಸ್ಥಳೀಯ ಹಬ್ಬ, ಆಚರಣೆಗೆ ಮೀಸಲಾದವಾಗಿದ್ದವು. ಅದರಲ್ಲಿ ಮಾಮೂಲಿ ಪಾಶ್ಚಾತ್ಯ ಹೊಸ ವರ್ಷದ ಮತ್ತು ಕಾರ್ಮಿಕ ದಿನದಂತಹ ರಜೆಯೊಂದೆರಡನ್ನು ಮಾತ್ರವೆ ಸ್ಥಳೀಯವಲ್ಲವೆಂದು ಹೇಳಬೇಕು – ಮಿಕ್ಕೆಲ್ಲಾ ಪೂರಾ ಸ್ಥಳೀಯವೆ. ರಾಜ, ರಾಣಿಯಯ ಹುಟ್ಟುಹಬ್ಬಕ್ಕೆರಡು ದಿನ, ಚಕ್ರೀ ದಿನಾಚರಣೆಯಂತಹ ರಾಜವಂಶದ / ಸಂತತಿಯ ಸ್ಥಾಪನಾ ದಿನಾಚರಣೆ (ಈಗಿನ ರಾಜರು ಈ ‘ಚಕ್ರೀ’ ಆಳುವ ವಂಶದ ಒಂಭತ್ತನೆ ರಾಜರು) ಮತ್ತು ಈಗಿನ ರಾಜರ ಪಟ್ಟಾಭೀಷೇಕದ ದಿನದಾಚರಣೆಯಂತಹವುಗಳನ್ನು ಬಿಟ್ಟರೆ ಮಿಕ್ಕ ಬಹುತೇಕ ರಜೆಗಳು ಬೌದ್ಧ ಧಾರ್ಮಿಕಾಚರಣೆಗೆ ಸಂಬಂಧಿಸಿದ ಹಬ್ಬಗಳು. ಹೀಗಾಗಿ ಆ ರಜೆಯಲ್ಲಿ ಇವರಾರಿಗೂ ಆಚರಿಸಲೇನು ವಿಶೇಷವಿರದೆ ರಜೆಯನ್ನು ಆನಂದಿಸುವುದಷ್ಟೆ ಸಾಧ್ಯವಾಗುತ್ತಿತ್ತಾದರೂ, ತಮ್ಮ ಯಾವುದಾದರೂ ಹಬ್ಬಗಳಿಗೆ – ಕನಿಷ್ಠ ಹೊಸ ವರ್ಷಕ್ಕಾದರೂ ರಜೆಯಿದ್ದರೆ ಒಟ್ಟಾಗಿ ಆಚರಿಸಬಹುದಿತ್ತಲ್ಲ ಎಂದು ಅನೇಕ ಬಾರಿ ಅನಿಸದಿರುತ್ತಿರಲಿಲ್ಲ. ಅದೃಷ್ಟವಶಾತ್ ಅವರ ಅನಿಸಿಕೆಯ ಪೂರೈಕೆಗೊ, ಕಾಕತಾಳೀಯವಾಗಿಯೊ ಆ ಬಾರಿ ಥಾಯ್ ಹೊಸ ವರ್ಷದ ಹಬ್ಬ ‘ಸೊಂಗ್ಕ್ರಾನ್’ ಏಪ್ರಿಲ್ ಮಾಸದಲ್ಲಿ ಆಗಮಿಸಿದ ಹೊತ್ತಿನಲ್ಲೆ, ಯುಗಾದಿ ಹಬ್ಬವೂ ಸೇರಿಕೊಂಡು ಯುಗಾದಿಗೆ ರಜೆ ಸಿಕ್ಕಂತಹ ಸಂಧರ್ಭವುಂಟಾದಂತಾಗಿ, ಇವರೆಲ್ಲರಿಗೂ ಸಂಭ್ರಮದಾಚರಣೆಗೆ ದಾರಿ ಮಾಡಿಕೊಟ್ಟಿತ್ತು. ಸೊಂಗ್ಕ್ರಾನ್ ಬಲು ದೊಡ್ಡ ಥಾಯ್ ಹಬ್ಬ; ಚೀನಿಯರಿಗೆ ಹೊಸ ವರ್ಷಾಚರಣೆ ಹೇಗೆ ಸಂಭ್ರಮಪೂರ್ಣವೊ ಅಷ್ಟೆ ಮಟ್ಟದ ಹರ್ಷೋಲ್ಲಾಸದಿಂದ ಈ ತಮ್ಮ ಹೊಸವರ್ಷವನ್ನು ಆಚರಿಸುತಿದ್ದರು. ಈ ಹೊತ್ತಿನಲ್ಲಿ ಆಚರಣೆಯ ಮೂರು ದಿನವೂ ರಜೆಯಿರುತ್ತಿದ್ದ ಕಾರಣ ಹೆಚ್ಚು ಕಡಿಮೆ ವಾರ ಪೂರ್ತಿ ರಜೆಯ ವಾತಾವರಣವೆ. ಅದರಲ್ಲೂ ಉತ್ತರ ಥಾಯ್ಲ್ಯಾಂಡಿಗೆ ಹೋದರೆ ಈ ಆಚರಣೆ ಕನಿಷ್ಠ ಒಂದು ವಾರ ನಡೆಯುತ್ತಿತ್ತು. ಆದರೆ ಇದೆಲ್ಲವನೂ ಮೀರಿದ ಮತ್ತೊಂದು “ವಿಶೇಷ ಅಂಶ” ಸೇರಿಕೊಂಡು ಈ ಆಚರಣೆಯನ್ನು ಮತ್ತಷ್ಟು ವಿಶಿಷ್ಠವಾಗಿಸಿತ್ತು – ಅದರಿಂದಲೆ ಈ ಹಬ್ಬಕ್ಕೆ ‘ನೀರಿನ ಹಬ್ಬ(ವಾಟರ್ ಫೆಸ್ಟಿವಲ್)’ ಎಂದು ಕರೆಯುತ್ತಿದ್ದುದು!

ಏಪ್ರಿಲ್ ತಿಂಗಳೆಂದರೆ ಬ್ಯಾಂಕಾಕಿನಲ್ಲಿ ಬೆವರಿಳಿಸುವ ಸುಡುಸುಡು ಬಿಸಿಲಿನ ದಿನಗಳು. ಆ ಹೊತ್ತಿನಲ್ಲಿ ಬರುವ ಈ ಹೊಸವರ್ಷಾಚರಣೆಗೆ ಈ ಬಿಸಿಲೆ ನಿರುತ್ತೇಜಕ ಅಂಶವಾಗುತ್ತಿತ್ತೊ ಏನೊ? ಬಹುಶಃ ಆ ಕಾರಣದಿಂದಲೆ ಈ ಪದ್ದತಿ ಹುಟ್ಟಿಕೊಂಡಿರಬಹುದೆಂದು ಶ್ರೀನಾಥನ ಅನುಮಾನ – ಹೊಸ ವರ್ಷ ಆಚರಣೆಯ ಆ ಸಂಧರ್ಭದಲ್ಲಿ ಮೂರು ದಿನಗಳ ಹಗಲಿನ ಹೊತ್ತಿನಲ್ಲಿ ಬಕೆಟ್ಟುಗಳಲ್ಲಿ ನೀರು ತುಂಬಿಕೊಂಡು, ಮನೆ ಮುಂದೆ, ರಸ್ತೆಗಳಲ್ಲಿ, ಸರ್ಕಲ್ಲುಗಳಲ್ಲಿ – ಹೀಗೆ ಎಲ್ಲೆಂದರಲ್ಲಿ ಕಾದಿರುತ್ತಿದ್ದರು ಜನ; ಯಾರೆ ಅಲ್ಲಿ ಓಡಾಡುತ್ತ ಬಂದರೂ ಅವರ ಮೈಗೆ ಸಂಪೂರ್ಣ ತಣ್ಣೀರ ಸ್ನಾನ ಖಂಡಿತ! ಒಂದೆಡೆ ರವರವ ಬಿಸಿಲಿಗೆ ಆ ನೀರು ತಂಪೆರೆಯುವ ಸಂಜೀವಿನಿಯಂತೆನಿಸಿದರೂ ಮತ್ತೊಂದೆಡೆ ಹೊರಗೆ ಹೊರಟ ಹೊತ್ತಲ್ಲೆ ಉಟ್ಟ ಬಟ್ಟೆಯೆಲ್ಲ ಒದ್ದೆಮುದ್ದೆಯಾಗಿ, ಒದ್ದೆ ಬಟ್ಟೆಯ ಮೈಯಲ್ಲೆ ಹಾಗೆ ಮುಂದುವರೆಯಬೇಕಾದ ಅನಿವಾರ್ಯ. ಒಬ್ಬರಿಂದಾದ ಸ್ನಾನ ಅಷ್ಟಕ್ಕೆ ನಿಲ್ಲುತ್ತಿರಲಿಲ್ಲ – ಬದಲು ಮುಂದೆ ಮುಂದೆ ಸಾಗಿದಷ್ಟೂ, ಮತ್ತಷ್ಟು ಮಂದಿಯಿಂದ ಸ್ನಾನ ಎರಚಾಟ ಮುಂದುವರೆದಿರುತ್ತಿತ್ತು. ಅಲ್ಲಲ್ಲಿ ಕಾಣ ಸಿಗುವ ಒಂದೆ ವ್ಯತ್ಯಾಸವೆಂದರೆ ಕೆಲವರು ಬಕೆಟ್ಟು, ಪಾತ್ರೆಗಳ ಬದಲು ಮಕ್ಕಳಾಟ ಆಡುವ ವಾಟರ ಗನ್ನುಗಳನ್ನು ಹಿಡಿದು ಅದರಿಂದಲೆ ಪಿಚಕಾರಿ, ಕಾರಂಜಿ ಸೃಷ್ಟಿಸಿ ಜಳಕ ಮಾಡಿಸುತ್ತಿದ್ದರು. ಅವೇನೂ ಸಣ್ಣಪುಟ್ಟ ಆಟಿಕೆಯಂತಿರದೆ ಪುಟ್ಟ ಪ್ಲಾಸ್ಟಿಕ್ ಮೇಷಿನ್ ಗನ್ನುಗಳಂತೆಯೆ ಕಾಣಿಸುತ್ತಿದ್ದವು. ಮೊದಮೊದಲೂ ಹಬ್ಬಕ್ಕೆ ಮುನ್ನ ಟೆಸ್ಕೋ ಲೋಟಸ್ ನಲ್ಲಿ ಅವು ರಾಶಿ ರಾಶಿ ಬಿದ್ದಿದ್ದೇಕೆಂದು ಶ್ರೀನಾಥನಿಗೆ ಆಗ ಅರ್ಥವಾಗಿರಲಿಲ್ಲವಾದರು , ಹಬ್ಬದ ದಿನದ ಪ್ರತ್ಯಕ್ಷ ಅನುಭವದಿಂದಾಗಿ ಅದರ ಬಳಕೆ ಉಪಯೋಗ ಸಂಪೂರ್ಣ ಮನವರಿಕೆಯಾಗಿತ್ತು. ಥಾಯ್ ಹೊಸವರ್ಷದ ಹಬ್ಬದ ಮೊದಲನೆಯ ದಿನವೇ ಯುಗಾದಿಯಾದ ಕಾರಣ ಎಲ್ಲರೂ ರಾಮಾನುಜಂ ಮನೆಯಲ್ಲಿ ಸೇರುವುದೆಂದು ನಿರ್ಧಾರವಾಗಿತ್ತು. ಅದರಂತೆ ಶ್ರೀನಾಥನೂ ಬೇಗನೆ ಸ್ನಾನಾದಿಗಳನ್ನು ಮುಗಿಸಿ ಬ್ಯಾಂಕಾಕಿನ ಬೀ.ಟೀ.ಎಸ್ (ಬ್ಯಾಂಕಾಕ್ ಟ್ರಾನ್ಸಿಟ್ ಸರ್ವೀಸ್) ಟ್ರೈನೊಂದನ್ನು ಹಿಡಿದು ಅವರ ಮನೆಯತ್ತ ಸಾಗಿದ್ದ. ಟ್ರೈನು ಸ್ಟೇಷನ್ನು ತಲುಪಿದಾಗ ಅಲ್ಲಿಂದಿಳಿದು ಅವರ ಮನೆ ಹಾದಿ ಹಿಡಿಯುತ್ತಿದ್ದಂತೆ ಎಲ್ಲಿಂದಲೊ ಅವಿತಿದ್ದವರೆಲ್ಲ ಓಡಿ ಬಂದಂತೆ ಎಲ್ಲಾ ಕಡೆಯಿಂದಲೂ ನೀರಿನ ಅಭ್ಯಂಜನ ಮಾಡಿಸತೊಡಗಿದ್ದರು….ಎಲ್ಲಾ ಕಡೆಯಿಂದ ಬರುತ್ತಿದ್ದ ನೀರಿನ ಧಾಳಿ ಶಿಸ್ತಾಗಿ ಬೀಳುವ ಮಳೆಗಿಂತಲೂ ಭೀಕರವಾಗಿ ಅಪ್ಪಳಿಸಿ ಒಂದೆ ಗಳಿಗೆಯಲ್ಲಿ ಅವನನ್ನು ಒದ್ದೆಮುದ್ದೆಯಾಗಿಸಿಬಿಟ್ಟಿದ್ದವು. ಕೇವಲ ಎರಡೆ ಬೀದಿ ದಾಟಬೇಕಿದ್ದರೂ , ಅವರ ಮನೆ ತಲುಪುವವರೆಗೂ ಉದ್ದಕ್ಕೂ ಪಿಚಕಾರಿ ಸೇವೆ ಪಡೆದುಕೊಂಡೆ ಸಾಗಬೇಕಾಗಿ ಬಂದಿತ್ತು – ಬೇರೆ ವಿಧಿಯಿಲ್ಲದೆ! ಇವನು ತಲುಪುವ ಹೊತ್ತಿಗೆ ಬಂದು ಸೇರಿದ ಇತರರದು ಇದೇ ಸ್ಥಿತಿ. ಎಲ್ಲರೂ ತೊಟ್ಟಿಕ್ಕುವ ತಲೆ, ಒದ್ದೆ ಬಟ್ಟೆಯೊಡನೆ ರಾಮಾನುಜಂನ ಮನೆಯೊಳಗೂ ಹೋಗಲಾರದೆ, ಹೊರಗೂ ನಿಲ್ಲಲಾರದೆ ಒದ್ದಾಡುವ ಪರಿಸ್ಥಿತಿಯಾಗಿತ್ತು. ಅಷ್ಟು ಜನರಿಗೂ ಬದಲಿಸಬೇಕೆಂದರೆ ಬಟ್ಟೆಯಾದರೂ ತರುವುದೆಲ್ಲಿಂದ? ಸಿಕ್ಕ ಟವಲ್ಲು ಬಟ್ಟೆಗಳನ್ನೆ ಮೈಯೊರೆಸಿಕೊಳ್ಳಲು ಕೊಟ್ಟರೂ, ಒದ್ದೆಮುದ್ದೆಯಾದ ಮೈಗಳಿಗೆ ಅದ್ಯಾವ ಮೂಲೆಗೆ? ಒದ್ದೆಯಲ್ಲಿ ಅದುರುತ್ತಲೆ ಫ್ಯಾನಿನ ಸುತ್ತಾ ನೆರೆದು ಅದರ ಗಾಳಿಯಲ್ಲೆ ಬಟ್ಟೆ ಆರಿಸುವ ಹವಣಿಕೆ ಎಲ್ಲರದು. ಆ ಗುಂಪಿನಲ್ಲಿ ಜಾಗ ಸಾಲದೆಂದು ಗ್ರಹಿಸಿದ ಶ್ರೀನಾಥ ಅದರ ಬದಲಾಗಿ ಹೊರಗೆ ಬಿಸಿಲಿಗೆದುರಾಗಿ ನಿಂತು ಒದ್ದೆ ಆರಿಸುವ ಯತ್ನ ಮಾಡಿದ್ದ. ಹಾಗೂ ಹೀಗೂ ಸಾವರಿಸಿಕೊಂಡು ಒಳ ಸೇರಿದಾಗ ಕಡೆಯವನಾಗಿ ಬಂದ ಸುರ್ಜಿತ್ ಕುಮಾರ, ‘ಬರಿ ಯುಗಾದಿ ಒಂದೆ ಸಾಲದು ಅಂತ ಹೋಳಿಯನ್ನು ಜತೆಯಲ್ಲಿ ಆಚರಿಸುವಂತೆ ಮಾಡಿಬಿಟ್ಟರಲ್ಲ? ಸದ್ಯ ಬಣ್ಣವೊಂದಿಲ್ಲವಲ್ಲ’ ಎಂದಾಗ ಅವನೊಡನೆ ಎಲ್ಲರೂ ನಕ್ಕಿದ್ದರು ಪೆಚ್ಚುಪೆಚ್ಚಾಗಿ.

ಅಂತೂ ಈ ಸಾರ್ವಜನಿಕ ಸ್ನಾನದ ಭೀತಿಯಿಂದಾಗಿ ಊಟ ಮುಗಿಸಿ ಮಧ್ಯಾಹ್ನದೊಳಗೆ ಹಿಂತಿರುಗಬೇಕೆಂದುಕೊಂಡಿದ್ದವರೆಲ್ಲ ತಮ್ಮ ಆಲೋಚನೆ ಬದಲಿಸಿ ಸಂಜೆ ಕತ್ತಲಾಗುವವರೆಗೂ ಅಲ್ಲೆ ಕಳೆಯುವ ನಿರ್ಧಾರಕ್ಕೆ ಬರಬೇಕಾಯ್ತು. ಅಲ್ಲಿಯತನಕ ಮಾಡುವುದೇನು ಎಂದು ತೋಚದಿದ್ದಾ ಹೊತ್ತಲ್ಲೆ, ರಾಮಾನುಜಂ ಕೈಯಲ್ಲಿ ‘ಹೌಸಿ ಹೌಸಿ’ ಪೆಟ್ಟಿಗೆ ಹಿಡಿದುಕೊಂಡು ಬಂದಾಗ ಎಲ್ಲರ ಮುಖದಲ್ಲಿ ಮುಗುಳ್ನಗೆಯರಳಿತ್ತು. ಅಲ್ಲಿಂದಾಚೆಗೆ ಊಟ ಮುಗಿಸಿ ಹೌಸಿ ಹೌಸಿ, ರಮ್ಮಿ, ಕೇರಂ ಆಡಿಕೊಂಡೆ ಕಾಲ ಕಳೆದಿದ್ದೆ ಗೊತ್ತಾಗಲಿಲ್ಲ. ಆ ಬಿರು ಬಿಸಿಲಿನ ದಿನ ಸಂಜೆಯ ಹೊಸಿಲೇರುತ್ತಿದ್ದ ಹಾಗೆ ಮಹಾಲಕ್ಷ್ಮಿ, ತನ್ನ ಪುಟ್ಟ ಮಗುವಿನ ಜತೆ ಹೆಣಗಿಕೊಂಡೆ ಸೊಗಸಾದ ಮಸಲಾ ಟೀ, ಬಿಸಿಬಿಸಿ ಬಜ್ಜಿ, ಪಕೋಡಗಳನ್ನು ತಂದಿಟ್ಟಾಗ ವರ್ಷಾಂತರದಿಂದ ಕಾದಿದ್ದವರಂತೆ ಮುಗಿಬಿದ್ದು ತಿಂದಿದ್ದರು ಪ್ರತಿಯೊಬ್ಬರು. ಇಟ್ಟಂತೆ ಖಾಲಿಯಾಗುತ್ತಿದ್ದ ತಟ್ಟೆಯನ್ನು ಅಷ್ಟೆ ಭರದಲ್ಲಿ ತುಂಬಲೆತ್ನಿಸುತ್ತಿದ್ದ ಆಕೆಯ ಯತ್ನವೂ ಒಂದು ಹಂತದ ತನಕ ಕೆಲಸ ಮಾಡಿ, ಊರಿಂದ ತಂದಿಟ್ಟುಕೊಂಡಿದ್ದ ಹಿಟ್ಟಿನ ಪ್ಯಾಕೆಟ್ ಮುಗಿಯುತ್ತಲೆ ವಿಧಿಯಿಲ್ಲದೆ ನಿಲ್ಲಿಸಬೇಕಾಯ್ತು. ಇವರಿಗೆಲ್ಲ ಅವರಿಗಾಗಿ ಇಟ್ಟುಕೊಂಡಿದ್ದನ್ನೆಲ್ಲ ಖಾಲಿ ಮಾಡಿಬಿಟ್ಟೆವೆಂಬ ‘ಗಿಲ್ಟಿ’ ಫೀಲಿಂಗಿನಲ್ಲೆ ಸ್ವಲ್ಪ ಕಸಿವಿಸಿಯಾದರೂ ರುಚಿಯಾದ ತಿನಿಸನ್ನು ಹೊಗಳಿ ‘ಸಾರಿ’ ಹೇಳುವುದರ ಹೊರತು ಮತ್ತೇನು ಮಾಡುವಂತಿರಲಿಲ್ಲ. ಕೊನೆಗೆ ಮಧ್ಯಾಹ್ನದ ಅಡುಗೆಯನ್ನೆ ರಾತ್ರಿಗೂ ಸ್ವಲ್ಪ ಸ್ವಲ್ಪ ತಿಂದು ಮತ್ತೆ ಎಲ್ಲರೂ ಬೀ.ಟಿ.ಎಸ್. ಹತ್ತಿದಾಗ ರಾತ್ರಿ ಒಂಭತ್ತು ದಾಟಿತ್ತು. ಹೀಗೆ ಆ ದಿನ ಯೋಜಿತ ಸಿದ್ದತೆಯೇನೂ ಇರದೆಯೆ ಒಂದು ಸೊಗಸಾದ ದಿನವಾಗಿ ಕಳೆದುಹೋಗಿತ್ತು. ಆದರೆ, ಆ ವಾರದ ಮಿಕ್ಕ ದಿನಗಳ ಕುರಿತು ಹಾಗೆ ಹೇಳುವಂತಿರಲಿಲ್ಲ. ರಜೆಯಿದ್ದರೂ ಹೊರಗೆಲ್ಲೂ ಹೋಗಲಾಗದ ಪರಿಸ್ಥಿತಿ – ನೀರಿನ ಹಬ್ಬದ ದೆಸೆಯಿಂದಾಗಿ. ಹಾಗೂ ಒಮ್ಮೆ ಬೀ.ಟಿ.ಎಸ್. ಸ್ಟೇಷನ್ನೊಂದಕ್ಕೆ ಅಂಟಿಕೊಂಡೆ ಇರುವ ‘ಮಾಬುಕಾಂಗ್ (ಎಂ.ಬಿ.ಕೆ)’ ಸ್ಟೇಷನ್ನಿನ ಅದೇ ಹೆಸರಿನ ಹೆಸರಾಂತ ಮಾಲ್ ನೋಡಲು ಹೊರಟಿದ್ದ ಶ್ರೀನಾಥ. ಅಲ್ಲಿ ಬ್ರಾಂಡೆಡ್ ಸರಕಿನ ಜತೆ ಜತೆಗೆ ಅಗ್ಗದ ಬೆಲೆಯಲ್ಲಿ ಮಾಮೂಲಿ ಸರಕುಗಳು ಸಿಗುತ್ತಿದ್ದ ಕಾರಣ ಯಾವಾಗಲೂ ಜನ ಜಂಗುಳಿಯಲ್ಲಿ ಗಿಜಗಿಡುತ್ತಿತ್ತು. ಪೂರಾ ಟ್ರೈನಿನಲ್ಲೆ ಪಯಣಿಸಿ ಸ್ಟೇಷನ್ನಿನಿಂದಲೆ ನೇರ ಶಾಪಿಂಗ್ ಮಾಲ್ ಕಟ್ಟಡಕ್ಕೆ ಹೋಗುವ ಸಾಧ್ಯತೆಯಿದ್ದ ಕಾರಣ ಯಾರ ಕೈಗೂ ಸಿಗದೆ ನೀರಿನ ಸ್ನಾನವಿಲ್ಲದಂತೆ ನಿಭಾಯಿಸಬಹುದಿತ್ತು – ಟ್ರೈನ್ ಸ್ಟೇಷನ್ನಿನತನಕ ನೆನೆಯದೆ ತಲುಪಿಕೊಂಡರೆ. ಹೇಗೊ ತಲುಪಿದ ಮೇಲೆ ಒಳ ಹೊಕ್ಕು ನೋಡಿದರೆ – ಅಲ್ಲೇನಿದೆ? ಎಲ್ಲವೂ ಖಾಲಿ ಖಾಲಿ! ಹಬ್ಬಕ್ಕೆಂದು ಎಲ್ಲ ಅಂಗಡಿಗಳು ಮುಚ್ಚಿಕೊಂಡು ಬರಿ ಮೌನವೆ ಭಣಭಣಗುಡುತ್ತಿತ್ತು. ಅಲ್ಲದೆ, ಈ ಹಬ್ಬದ ಹೊತ್ತಿನಲ್ಲಿ ಎಲ್ಲಾ ಕೆಲಸಗಾರರು ರಜೆ ಹಾಕಿ ತಂತಮ್ಮ ಊರುಗಳಿಗೆ ಹೋಗಿಬಿಡುವುದರಿಂದ ಅಂಗಡಿ ತೆರೆಯಬೇಕೆಂದುಕೊಂಡರೂ ಜನರು ಸಿಕ್ಕುತ್ತಿರಲಿಲ್ಲ. ನಿರಾಶೆಯಿಂದ ಮರಳಿದವನು ಅಂದು ರಾತ್ರಿ ಬ್ಯಾಂಕಾಕ್ ನೈಟ್ ಮಾರ್ಕೆಟ್ಟಾದರೂ ತೆರೆದಿದೆಯೆಂದುಕೊಂಡು ಹೊರಟರೆ ಅಲ್ಲೂ ಅದೇ ಕಥೆ. ಅತ್ತ ಆಫೀಸಿಗೂ ಹೋಗಲಾಗದೆ, ಮನೆಯಲ್ಲಿ ಸುಮ್ಮನೆ ಕೂರಲೂ ಆಗದೆ ರಜೆ ಮುಗಿದರೆ ಸಾಕೆನುವಂತಾಗಿಬಿಟ್ಟಿತ್ತು. ಸದ್ಯ, ಮನೆಯಲಿದ್ದ ವೀಸಿಡಿ-ಡೀವಿಡಿ ಪ್ಲೇಯರಿನಿಂದಾಗಿ ಕೆಲವು ಇಂಗ್ಲೀಷ್ ಮತ್ತು ಸಬ್ ಟೈಟಲ್ಲುಗಳಿರುವ ಥಾಯ್ ಚಲನ ಚಿತ್ರಗಳನ್ನು ನೋಡುತ್ತ ಕಾಲ ತಳ್ಳಿದ್ದಾಗಿತ್ತು.

(ಇನ್ನೂ ಇದೆ)
_____________

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

(ಪರಿಭ್ರಮಣ..(14)ರ ಕೊಂಡಿ – https://nageshamysore.wordpress.com/0018x-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-14/ )
_______

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s