00196. ಸತ್ಯದ ಚೌಕಟ್ಟಿನಲ್ಲಿ ಇತಿಹಾಸದ ಜುಟ್ಟು…

00196. ಸತ್ಯದ ಚೌಕಟ್ಟಿನಲ್ಲಿ ಇತಿಹಾಸದ ಜುಟ್ಟು…
___________________________________

(ಸೂಚನೆ: ಈ ಬರಹದ ಗದ್ಯ ಭಾಗ ಸಿಂಗಪುರದ ಕನ್ನಡ ಸಂಘದ ಮಾಸ ಪತ್ರಿಕೆ ‘ಸಿಂಚನ – ಏಪ್ರಿಲ್ 2014’ ರ ಸಂಚಿಕೆಯ “ಚಿಂತನ ಚಾವಡಿ” ವಿಭಾಗದಲ್ಲಿ ಪ್ರಕಟವಾಗಿದೆ. ಈ ಕೆಳಗಿನ ಕೊಂಡಿಯನ್ನು ಗಮನಿಸಿ: http://singara.org/wp-content/uploads/2014/04/April-14-Sinchana_Final_1.pdf)

ಇತಿಹಾಸದತ್ತ ಬೀರುವ ಅಗಾಧ ಕುತೂಹಲ ತಮ್ಮ ಬೇರುಗಳನ್ನರಿಯುವ ಮನುಜ ಪ್ರವೃತ್ತಿಯ ಸಹಜ ಪ್ರಕ್ರಿಯೆ. ಅರಿವಿನಾಳದ ಮೊತ್ತ ವ್ಯಕ್ತಿಯಿಂದ ವ್ಯಕ್ತಿಗೆ ಒಂದೇ ಅಳತೆಯಲಿರದಿದ್ದರೂ, ಪ್ರತಿಯೊಬ್ಬರ ಅಂತರಾಳದಲ್ಕೂ ಆ ಪ್ರಜ್ಞೆ ಯಾವುದೊ ಒಂದು ರೀತಿಯಲ್ಲಿ ಜಾಗೃತವಾಗಿರುವುದು ಅಷ್ಟೆ ಸ್ವಾಭಾವಿಕ. ಕೆಲವರಲ್ಲಿ ಅದು ಸ್ತಬ್ದ ಪ್ರಜ್ಞಾವಸ್ಥೆಯಿಂದ ಹೊರಬಿದ್ದು ಅನಾವರಣವಾಗುವ ಗಾಢ ತೀವ್ರತೆಯ ಮಟ್ಟದಲಿದ್ದರೆ ಮತ್ತೆ ಹಲವರಲ್ಲಿ ಸುಪ್ತವಾಗಷ್ಟೆ ಪ್ರವಹಿಸುವ ಅಂತರ್ಗಂಗೆಯಾಗಿ ಪ್ರಸ್ತುತ. ಅದು ಯಾವ ನಿಲುಕಿನಲ್ಲೆ ಇದ್ದರು ಚರಿತ್ರೆಯ ಕುರಿತ ಬಾಹ್ಯ ಪ್ರಚೋದನೆಯೊಂದು ಛೇಡಿಸಿದಾಗ ತರತರದ ಭಾವನಾತ್ಮಕ ಹಾಗೂ ವಾಸ್ತವಿಕ ನೆಲೆಗಟ್ಟಿನಲ್ಲಿ ಪ್ರತಿಕ್ರಿಯಿಸುವುದು ಬಹುಶಃ ಈ ಅಂತರಾಳದರಿವಿನ ಸುಪ್ತ ಪ್ರಜ್ಞೆಯಿಂದಲೆ ಇರಬೇಕು.

ಇದೆಲ್ಲಾ ತರದ ಚಿಂತನೆಗೆ ಚಾಲನೆ ಸಿಕ್ಕಿದ್ದು ಇತ್ತೀಚೆಗೆ ಚರಿತ್ರೆ, ಇತಿಹಾಸದ ಕುರಿತು ಕೆಲವು ದಾಖಲೆಗಳನ್ಬು ಪರಿಶೀಲಿಸುತ್ತಿದ್ದಾಗ. ಇತಿಹಾಸದ ದಾಖಲೆಗಳನ್ನು ಅವಲೋಕಿಸುವಾಗ ಕಂಡುಬರುವ ಒಂದು ಸಾಮಾನ್ಯ ಅಂಶವೆಂದರೆ ದಾಖಲಾತಿಯ ನಿಖರತೆಯ ಮಟ್ಟ; ಒಂದು ಮಟ್ಟದಿಂದಾಚೆಗೆ ನಿಖರತೆಯ ಸಾಕ್ಷಾಧಾರಗಳ ಖಚಿತತೆ ಸಡಿಲವಾಗುತ್ತ ಹೋಗಿ, ಒಂದು ಸ್ತರದಲ್ಲಿ ಊಹೆಗಳನ್ನು, ದಂತ ಕಥೆಗಳನ್ನು, ರೋಚಕತೆಯ ಸರಕನ್ನು, ಪ್ರಕ್ಷೇಪಿತ ಸತ್ಯಗಳನ್ನು ಸಮೀಕರಿಸಿ ಸಂಪೂರ್ಣ ಸತ್ಯದ ಹಂದರವನ್ನು ಸಡಿಲಾಗಿಸುತ್ತ ಕಥಾನಕಗಳಾಗುವ ಹಾದಿಯಲ್ಲಿ ಸಾಗುವುದು ಕಾಣುತ್ತದೆ. ನಿಜವಾದ ತೊಂದರೆ ಆರಂಭವಾಗುವುದು ಇಲ್ಲಿಂದಲೆ – ಶುದ್ಧ ಸಾಕ್ಷಾಧಾರದ ಪ್ರಮಾಣಿಕೃತ ಸತ್ಯವನ್ನಷ್ಟೆ ನಂಬಲು ಸಿದ್ದವಿರುವ ಮನಸುಗಳಿಗೆ ಕಲೆಸಿದ ಗೊಂದಲದ ಚಿತ್ರಣದಲ್ಲಿ ನೈಜ್ಯದ ಪಾಲೆಷ್ಟು, ಉತ್ಪ್ರೇಕ್ಷೆಯ ಪಾಲೆಷ್ಟು ಎಂದು ತೀರ್ಮಾನಿಸಲಾಗದೆ ಗೊಂದಲದಲ್ಲಿ ಬೀಳಿಸುತ್ತದೆ. ಯಾವಾಗ ಸರ್ವ ಸಮ್ಮತ ತೀರ್ಮಾನ ಸಾಧ್ಯವಿಲ್ಲವೊ ಆಗ ವಿಷಯದಲ್ಲಿರುವ ಸತ್ಯದ ಪಾಲು ಸಹ ಸಂಶಯಾಸ್ಪದ ದೃಷ್ಟಿಯಿಂದಲೆ ನೋಡಲ್ಪಡುತ್ತದೆ. ಅಲ್ಲಿಂದಲೆ ಶುರುವಾಗುವ ವಾದ, ವಿವಾದ, ಸಿದ್ದಾಂತ ಬೇಧಗಳು ಸನ್ನಿವೇಶವನ್ನು ಮತ್ತಷ್ಟು ಕ್ಲಿಷ್ಟಗೊಳಿಸುವುದಷ್ಟೆ ಅಲ್ಲದೆ ತಮ್ಮದೆ ಆದ ಗುಂಪುಗಳನ್ನು ಸೃಷ್ಟಿಸಿಕೊಂಡು ಮುಂದುವರೆಯುತ್ತವೆ. ಅದೇ ಹೊತ್ತಿನಲ್ಲಿ ಈ ಸತ್ಯಗಳೇನಾದರೂ ಪ್ರಸ್ತುತ ವಾಸ್ತವದಲ್ಲಿ ಸೂಕ್ಷ್ಮ ಪರಿಣಾಮ ಬೀರುವಂತಿದ್ದರಂತೂ ಮುಗಿಯಿತು; ಇತಿಹಾಸ ವಾಸ್ತವಕ್ಕೆ ನಿಲುವುಗನ್ನಡಿಯಾಗಬಾರದೆನ್ನುವುದರಿಂದ ಹಿಡಿದು, ಇತಿಹಾಸವನ್ನೆ ತಿರುಚಿ ಮತ್ತೊಂದು ಸಮಾಂತರ ಇತಿಹಾಸವನ್ನು ಹುಟ್ಟುಹಾಕಿ ಮತ್ತಷ್ಟು ಗೊಂದಲವನ್ನು , ವೈಚಾರಿಕ ದೊಂಬಿಯನ್ನು ಹುಟ್ಟಿಸುವುದರಲ್ಲಿ ಪರ್ಯಾವಸಾನವಾಗುತ್ತದೆ.

ಈ ದೃಷ್ಟಿಯಿಂದಲೆ ಬಹುಶಃ ನಿಖರವಾದ ದಾಖಲೆಯನ್ನು ದಾಖಲಿಸಿಡುವುದು ಬಲು ಮುಖ್ಯ – ಮುಂದಿನ ಪೀಳಿಗೆಗೆ ಬಳಕೆಗೆ ಬರುವ ಹಾಗೆ. ಇದರಿಂದ ಪ್ರಸಕ್ತ ಪೀಳಿಗೆ ಸಂತತಿಗೆ ನೇರ ಉಪಯೋಗವಾಗದಿದ್ದರೂ, ಮುಂದಿನ ಪೀಳಿಗೆಗೆ ಗೊಂದಲವನ್ನು ಕಡಿಮೆ ಮಾಡಿಸುವಲ್ಲಿ ಖಂಡಿತ ನೆರವಾಗುತ್ತದೆ. ಅದನ್ನು ಮಾಡುವ ಆಸಕ್ತಿಯುಳ್ಳ ಮನಸುಗಳಿಗೆ ಸರಿಯಾದ uನೈತಿಕ ಹಾಗೂ ಭೌತಿಕ ನೆಲೆಗಟ್ಟು ಒದಗಿಸಿಕೊಟ್ಟರೆ ಈ ಕಾರ್ಯ ಸ್ವಯಂಪ್ರೇರಿತವಾಗಿನಡೆಯುವುದರಲ್ಲಿ ಯಾವ ಸಂಶಯವೂ ಇಲ್ಲ ಎನ್ನಬಹುದು. ಹಾಗಾದಲ್ಲಿ, ಬೋಧಿಧರ್ಮನೆಂಬ ಜೆನ್ ಸಿದ್ದಾಂತದ ಮೊದಲ ಗುರು ಮೂಲತಃ, ದಕ್ಷಿಣ ಭಾರತದ ರಾಜನೊಬ್ಬನ ಪುತ್ರನಾಗಿ ಜನಿಸಿ ನಂತರ ಚೀನಾಗೆ ಹೋಗಿ ಅಲ್ಲಿ ನೂರಾರು ಬೌದ್ಧ ವಿಹಾರಗಳನು ಸ್ಥಾಪಿಸಿದ್ದೆ ಅಲ್ಲದೆ ಶಾವೋಲಿನ್ನಂತಹ ಆತ್ಮರಕ್ಷಣೆಯ ಕಲೆಗೆ ನಾಂದಿ ಹಾಡಿದನೆಂದು ತಿಳಿದುಕೊಳ್ಳಲು ಚೀನಿ ಇತಿಹಾಸ ಹುಡುಕುತ್ತ ಒದ್ದಾಡುವ ಅಗತ್ಯವಿರುವುದಿಲ್ಲ. ಅಂತೆಯೆ ಇತಿಹಾಸದ ನಿಜವನರುಹುವ ಉದ್ದೇಶದಿಂದ ಬರೆದ ಪುಸ್ತಕಗಳ ಪ್ರಸ್ತುತತೆ, ಸತ್ಯಾಸತ್ಯತೆಯನ್ನೆ ಪ್ರಶ್ನಿಸಿ ವಾದ ವಿವಾದಕ್ಕಿಳಿಯುವ ಅಗತ್ಯವೂ ಬರುವುದಿಲ್ಲ. ಸಿಹಿಯಾಗಲಿ ಕಹಿಯಾಗಲಿ – ಇತಿಹಾಸದ ಸತ್ಯಗಳು ಎಚ್ಚರಿಕೆಯ ಗಂಟೆಯಾಗಿಯೊ, ಕಹಿ ಮರುಕಳಿಸದಂತೆ ಜಾಗೃತರಾಗಿಸುವ ಪಾಠವಾಗಿಯೊ ಜವಾಬ್ದಾರಿ / ಭೂಮಿಕೆ ನಿಭಾಯಿಸಿದರೆ ಸಾಕು – ಅದು ಇತಿಹಾಸ, ವಾಸ್ತವ ಮತ್ತು ಭವಿತಕ್ಕೆ ಮಾಡುವ ಮಹದುಪಕಾರವಾಗುತ್ತದೆ.

ಸತ್ಯದ ಚೌಕಟ್ಟಲಿ ಇತಿಹಾಸದ ಜುಟ್ಟು
_________________________

ಸತ್ಯದ ಚೌಕಟ್ಟಲಿ ಇತಿಹಾಸದ ಜುಟ್ಟು
ವಿಲ ವಿಲ ಒದ್ದಾಡಿಸುತೆಲ್ಲ ಎಡವಟ್ಟು
ಇದ್ದುದನಿದ್ದಂತೆ ಹೇಳದಿದ್ದರೆ ಹೇಗೆ ಚರಿತ್ರೆ
ರಟ್ಟಾದರು ಗುಟ್ಟು ಸುಳ್ಳಾದರೆ ಕಹಿ ಮಾತ್ರೆ ||

ಯಾವುದೊ ಕಾಲಧರ್ಮ ಕಾಣಲೆ ಮರ್ಮ
ಕಾಲದಂತರಾಳಕೆ ಹೊಕ್ಕ ಮನೋಧರ್ಮ
ಹುಡುಕಲೆ ತುಣುಕುಗಳ ಪೋಣಿಸಿ ಹಾರ
ತುಂಡಾದ ದಾರದಲೆ ಕಟ್ಟಬೇಕು ವಿಚಾರ ||

ಬಿಟ್ಟ ಪದ ತುಂಬಿದಷ್ಟು ಸಲೀಸಲ್ಲ ಚಿತ್ರ
ದಿಟ ನೈಜ್ಯತೆ ಬರೆಯಲ್ಹೊರಟರಿಲ್ಲ ಮಿತ್ರ
ಅರೆಬರೆ ಅಸ್ತಿ ಪಂಜರಕೆ ತುಂಬಿ ಮಾಂಸ
ತರಿಸಬೇಕು ಆಕಾರಕೆ ಆಗದಂತೆ ವ್ಯರ್ಥ ||

ಹುಡುಕಾಡಿ ಸಿಗೆ ಬಿಂದು ಕಳಚಿ ಕೊಂಡಿ
ಕಾಣೆಯಾದ ಸರಪಳಿ ಕಟ್ಟೆ ಊಹೆಯಡಿ
ಬದ್ಧತೆ ಸಿದ್ದಾಂತಗಳೆಲ್ಲ ಹೂರಣವಾಗಿತ್ತ
ತರ್ಕದ ಕಲ್ಪನೆಯಡಿಯೆ ಅರಳಿಸಿ ಚಿತ್ತ ||

ದಂತಕಥೆ ರೋಚಕತೆ ಕಥೆಯ ಘನತೆ
ಸೇರಿದ ಚರಿತ್ರೆ ಇತಿಹಾಸ ತಿರುಚಿತ್ತೆ ?
ಗೊಂದಲ ಅನುಮಾನ ಸಂಶಯ ದಟ್ಟ
ಸತ್ಯದ ಚೌಕಟ್ಟಲಿ ಬರಿ ಇತಿಹಾಸದ ಜುಟ್ಟ? ||

————————————————————————————
ನಾಗೇಶ ಮೈಸೂರು, ೧೦. ಮಾರ್ಚಿ. ೨೦೧೪, ಸಿಂಗಪುರ
————————————————————————————-

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s