00200. ಆನೆ ಹಾಕಿದ್ದೆ ಹೆಜ್ಜೆ, ನಡೆದಿದ್ದೆ ಹಾದಿ..
___________________________________
ಆನೆಯಂತಹ ಭಾರಿ ಗಾತ್ರದ ಜೀವಿಗೆ ಆ ದೇಹದ ಅಗಾಧ ಭಾರ ತೊಡಕೂ ಹೌದು ಅನುಕೂಲವೂ ಹೌದು. ಅಂತಹ ಭಾರಿ ಗಾತ್ರ ಹೊತ್ತು ಜೀವಮಾನವಿಡಿ ಹೆಣಗಾಡಿ ಬದುಕುವ ಕಾಟವೊಂದೆಡೆ, ತಿನ್ನಲು ಬೇಕಾದ ಆಹಾರದ ಪರಿಮಾಣದಿಂದಿಡಿದು ಇಡುವ ಹೆಜ್ಜೆ ಹೆಜ್ಜೆಗೂ ಆ ಭಾರ ಹೊತ್ತು ನಡೆಯುವ ಅನಿವಾರ್ಯ ಹುಟ್ಟಿಸಿದರೆ ಮತ್ತೊಂದೆಡೆ, ಆ ಗಾತ್ರದ ಧೀಮಂತಿಕೆ, ಗಾಂಭೀರ್ಯ, ಶಕ್ತಿ ಸಾಮರ್ಥ್ಯಗಳೆ ವ್ಯಕ್ತಿತ್ವದ ಆಸ್ತಿಯಾಗಿ ಭಾರಿ ಅನುಕೂಲವನ್ನು ಒದಗಿಸಿಕೊಡಬಲ್ಲದು. ದೊಡ್ಡ ವ್ಯಕ್ತಿತ್ವದ ವ್ಯಕ್ತಿಗಳು ಸಹ ಹಾಗೆಯೆ – ಅವರ ವ್ಯಕ್ತಿತ್ವದ ಭಾರ ಅವರಿಗೆ ವರವೂ ಹೌದು – ಜನಪ್ರಿಯತೆ, ಪ್ರಸಿದ್ಧಿಯ ದೃಷ್ಟಿಯಲ್ಲಿ ; ಅಂತೆಯೆ ಶಾಪವೂ ಹೌದು – ವೈಯಕ್ತಿಕ ಸ್ವಾತ್ಯಂತ್ರ, ಸ್ವೇಚ್ಛೆಯ ಪರಿಧಿಯಲ್ಲಿ. ಕಾಡಿನ ಸ್ವತಂತ್ರ ವಾತಾವರಣದಲಿದ್ದರೆ ನಿರ್ಭಿಡೆಯಿಂದ ಅಡ್ಡಾಡುವ-ಬದುಕುವ ವರ ಸಿಕ್ಕರೂ , ಹೆಸರಾಗುವ-ಗುರುತಾಗುವ ಸಾಧ್ಯತೆ ಇರುವುದಿಲ್ಲ. ಅಂತೆಯೆ ಕಾಡು ತೊರೆದು ಮೃಗಾಲಯದಂತ ನಿರ್ಬಂಧಿತ ವಾತಾವರಣದಲಿದ್ದರೆ ಸ್ವೇಚ್ಛೆಗೆ ಕಡಿವಾಣ; ಹೆಸರಾಗಿ ಪ್ರಸಿದ್ಧಿಯ ಮಜಲೇರಲು ಸುಗಮ. ಇಂತಹ ವ್ಯಕ್ತಿತ್ವಗಳಿಗೆ ಇವೆರಡು ತುದಿಗಳ ನಡುವಿನ ಆಯ್ಕೆಯೆ ಒಂದು ಕಠಿಣ ಪ್ರಕ್ರಿಯೆ. ಎರಡು ತುದಿಗಳಿಗೂ ಸೇರದೆ ನಡುವಿನ ಸಮತೋಲನದ ಹಾದಿ ಹಿಡಿದವರಷ್ಟೆ ಅಲ್ಲಿಯು ಸಂದು ಇಲ್ಲಿಯೂ ಸಲ್ಲುವ ಹಿರಿಮೆ, ಅದೃಷ್ಟ, ತಾಳ್ಮೆ, ಜಾಣ್ಮೆಯುಳ್ಳವರಾಗುವುದು. ಅಂಥಹ ಅಪರೂಪದ ಕೆಲವೆ ವ್ಯಕ್ತಿತ್ವಗಳಲ್ಲಿ ಸದಾ ನೆನಪಿನಲ್ಲುಳಿಯುವ ಒಂದು ಮೇರುಸದೃಶ್ಯ ವ್ಯಕ್ತಿ ಡಾಕ್ಟರ ರಾಜಕುಮಾರರದು.
ಆನೆ ಹಾಕಿದ್ದೆ ಹೆಜ್ಜೆ, ನಡೆದಿದ್ದೆ ದಾರಿ ಎನ್ನುತ್ತಾರೆ. ಯಾಕೆಂದರೆ ಕಾಡಿನಲ್ಲಿ ಓಡಾಡುವ ಆನೆಯ ಅಗಾಧ ದೇಹ ಮತ್ತು ಭಾರಕ್ಕೆ ಸರಿದೂಗುವ ರಸ್ತೆಯಂಥಹ ಹಾದಿ ಎಲ್ಲೆಡೆ ಇರುವುದೆಂದು ಹೇಳಬರುವುದಿಲ್ಲ. ಆದರೆ ರಸ್ತೆಯ ಚಿಂತೆಯಿರುವುದು ಸಾಮಾನ್ಯರಿಗಷ್ಟೆ; ಆನೆಗೆ ಚೆನ್ನಾಗಿ ಗೊತ್ತು ತಾನು ಕಾಲಿಟ್ಟ ಕಡೆಯೆ ರಸ್ತೆಯೊಂದು ತಾನಾಗೆ ನಿರ್ಮಾಣವಾಗುತ್ತದೆಯೆಂದು. ಹೆಜ್ಜೆಯ ಭಾರ ಗುರುತಾಗಿಸಿದ ಕಡೆಯೆಲ್ಲಾ ಹೊಸ ಕಾಲುಹಾದಿಗೊಂದು ಮುನ್ನುಡಿ ಬರೆದಂತಾಗುತ್ತದೆಂದು. ಕನ್ನಡ ಚಿತ್ರರಂಗದಲ್ಲಿ ಅಂಥದ್ದೊಂದು ಧೀಮಂತಿಕೆ, ಧೈರ್ಯದ ಛಾಪನೊತ್ತಿ ಮುನ್ನುಗ್ಗುತ್ತಲೆ ಇಡಿ ಕನ್ನಡ ಚಿತ್ರರಂಗವನ್ನೆ ತಮ್ಮೊಡನೆ ಮುಂದೆಳೆದುಕೊಂಡು ಹೋದ ವ್ಯಕ್ತಿತ್ವ ಈ ರಾಜಾನೆಯದು. ಹೆಜ್ಜೆಯೇನೊ ಎತ್ತಿಕ್ಕಿದ್ದು ಸರಿ – ಅದು ಎಡಕೊ, ಬಲಕೊ, ನೇರಕೊ, ಹಿಂದಕೊ, ಮೇಲಕೊ, ಕೆಳಕೊ – ಹೇಳುವವರಾದರೂ ಯಾರು? ಆದರೆ ಆನೆಗದೆಲ್ಲ ಲೆಕ್ಕವೂ ಇಲ್ಲ ಬಿಡಿ. ಹೋಗುವುದೆತ್ತ ಎಂದು ತಲೆಕೆಡಿಸಿಕೊಳ್ಳುತ್ತ ಕೂರಲಾದರೂ ಯಾಕೆ? ಆನೆ ಹೋದದ್ದೆ ತಾನೆ ಹಾದಿ? ಸರಿಯೆನಿಸಿಗಿದ ಕಡೆ ನುಗ್ಗುತ್ತಿರುವುದಷ್ಟೆ ತಾನೆ ಕೆಲಸ? ಕನ್ನಡ ಚಿತ್ರರಂಗದಲ್ಲಿ ರಾಜ್ ಮಾಡಿದ್ದು ಅದೆ ಕೆಲಸ. ಸರಿಯೊ ತಪ್ಪೊ ಎಲ್ಲಾ ‘ಶಿವ ನಿನ್ನ ಲೀಲೆ’ ಎಂಬಂತೆ ಮುನ್ನುಗ್ಗಿದ ಈ ರಾಜಾನೆ ಹಾಗೆ ನುಗ್ಗುವ ಅವಸರದಲ್ಲಿ ಹೊಲ ಗದ್ದೆ ತೋಟಕೆ ನುಗ್ಗಿ ದಾಂಧಲೆಯೆಬ್ಬಿಸದೆ ಯಾರಿಗೂ ಆಘಾತವಾಗದಂತೆ ನಡೆದ ರೀತಿಯೆ ಅನನ್ಯ. ಹಾಗೆ ನಡೆಯುತ್ತಲೆ ಹೋದ ಸಲಗದ ಹಿಂದೆಯೆ ಕಣ್ಣು ಮುಚ್ಚಿಕೊಂಡು ಹಿಂಬಾಲಿಸುತ್ತ ನಡೆದಿದ್ದೆ ಕನ್ನಡ ಚಿತ್ರರಂಗ ಮತ್ತು ಅಭಿಮಾನಿ ಬಳಗ ಮಾಡಬೇಕಿದ್ದ ಕೆಲಸ ; ಅದು ಹಾಗೆ ನಡೆಯಿತು ಕೂಡ. ಆ ಹೆಜ್ಜೆ ಅದೆಷ್ಟು ಗಾಢವಾದದ್ದೆಂದರೆ ಅದು ಇಂದಿಗು, ಮುಂದಿಗು ಮತ್ತೆಂದೆಂದಿಗೂ ಪ್ರಸ್ತುತವೆನಿಸುವಷ್ಟು.
ಹಾಗೆ ನೋಡಿದರೆ ಇಂತಹದ್ದೊಂದು ಪಥದ ಮೇಲ್ಪಂಕ್ತಿ ಹಾಕಿಕೊಡಲು ಯಾವುದೆ ರೀತಿಯ ಘನತರದ ರೂಪುರೇಷೆಯಾಗಲಿ, ಯೋಜನೆಯಾಗಲಿ ಹಾಕಿಕೊಂಡು ಹೊರಟ ವ್ಯಕ್ತಿತ್ವವಲ್ಲ ಡಾ.ರಾಜರದು. ನಿಜ ಹೇಳುವುದಾದರೆ ಹಾಗೊಂದು ಪಥ ಹಿಡಿದು ಹೊರಟ ಹೊತ್ತಿನಲ್ಲಿದ್ದುದು ಹೊಟ್ಟೆ ತುಂಬಿಸುವ ವೃತ್ತಿಯ ಅನಿವಾರ್ಯತೆ ಮತ್ತು ಅದಕ್ಕಾಗಿ ವೃತ್ತಿ ಧರ್ಮದ ಪರಿಧಿಯಲ್ಲಿ ಏನು ಮಾಡಲಾದರೂ ಸೈ ಎನ್ನುವಂತ ಹುಮ್ಮಸ್ಸಿನ ಸರಳತೆ. ಆದರೆ ಇಂತಹ ಸರಳ ಮನಃಸತ್ವಗಳ ಹಿಂದೆ ಕೆಲಸ ಮಾಡುವ ತೀರಾ ಸರಳ ಅನಿಸಿಕೆ, ‘ಯೋಜನೆಗಳಲ್ಲದ ಯೋಚನೆ’ಗಳೆ ನೈಜ್ಯತೆಯ ಭೂಮಿಕೆಯಲ್ಲಿ ಅಗಾಧ ವ್ಯಾಪ್ತಿ, ವಿಸ್ತಾರಗಳ ಆಳವನ್ನು ಹೊಂದಿರುವ ಸಾಮರ್ಥ್ಯವಿರುವಂತಹವು. ತೋರಿಕೆಗಿರುವ ಹೊಳಪು, ಬಿಂಕ, ಬಿನ್ನಾಣಗಳಿಗಿಂತ ನೇರ ಕಾರ್ಯ ಸಾಧನೆಗೆ ಬೇಕಾದ ಕನಿಷ್ಠ ಅಗತ್ಯದ ಹೂರಣ ಇಲ್ಲಿ ತಂತಾನೆ ಅನಾವರಣಗೊಳ್ಳುತ್ತದೆ. ಅದರ ಹಿರಿಮೆ, ಗರಿಮೆ ಆ ಹೊತ್ತಿನಲ್ಲಿ ಸಗಟಾಗಿ ಎದ್ದು ಕಾಣದಿದ್ದರೂ, ಅದುಂಟು ಮಾಡುವ ದೂರಗಾಮಿ ಪರಿಣಾಮಗಳು ಕಾಲಾನುಕಾಲದಲ್ಲಿ ತಾವೆ ಗೋಚರವಾಗುತ್ತ ಪ್ರಕಟಗೊಳ್ಳುವ ಶಕ್ತಿಯುಳ್ಳವುಗಳು. ರಾಜ್ ತಮ್ಮ ಹೊಟ್ಟೆಪಾಡಿನ ಅಭಿನಯ ವೃತ್ತಿಯಲ್ಲಿ ಕಲಾರಾಧನೆಯ ಪ್ರವೃತ್ತಿಯನ್ನು ಬೆರೆಸಿ ‘ಆನೆ ಹಾಕಿದ್ದೆ ಹೆಜ್ಜೆ, ನಡೆದಿದ್ದೆ ಹಾದಿ ‘ ಎಂದು ಮುನ್ನಡೆದ ಕಾರಣದಿಂದಲೆ ಇಂದು ಆ ಹಾದಿಗಳೆಲ್ಲ ಸುವರ್ಣ ಪಥಗಳಾಗಿ ಇನ್ನೂ ಆ ಹೆಜ್ಜೆಯಲ್ಲೆ ಎಲ್ಲರೂ ಓಡಾಡುತ್ತ, ತಮತಮಗೆ ಬೇಕಾದ ಕಾಲುದಾರಿ, ಕವಲು ದಾರಿ ಆರಿಸಿಕೊಳ್ಳುತ್ತ, ಇಡೀ ಹಾದಿಯೆ ಸದಾಸರ್ವದಾ ಜನಜಂಗುಳಿಯಿಂದ ಗಿಜಿಗುಡುವಂತಹ ವಾತಾವರಣ ನಿರ್ಮಾಣವಾಗಿಹೋಯ್ತು. ಆ ಹಾದಿಯಲ್ಲಿ ರಾಜ್ ನೆಟ್ಟ ಗಿಡಗಳು ಒಂದೆ ಎರಡೆ? ಅಲ್ಲಿ ಹೆಜ್ಜೆಯಿಟ್ಟೆಡೆಯೆಲ್ಲಾ ಅರಳಿಸಿದ ತರತರದ ಹೂಗಳು ಅಗಣಿತ. ಪೌರಾಣಿಕವೊ, ಐತಿಹಾಸಿಕವೊ, ಸಾಮಾಜಿಕವೊ, ನಿಗೂಢ ಪತ್ತೇದಾರಿಕೆಯೊ, ನಾಯಕನದೊ, ಖಳನಾಯಕನದೊ – ಆಳಿಂದ ಅರಸನತನಕ ಇಂತದ್ದಿಲ್ಲವೆನ್ನುವಂತೆ ಬಿರಿದ ಹೂತೋಟದ ಕಾನನ ಇಂದಿಗೂ ದಾರಿಹೋಕರಿಗೆಲ್ಲ ಸುವಾಸನೆ ಬೀರುತ್ತ ತನ್ನನ್ನು ಆಘ್ರಾಣಿಸಿದವರಿಗೆಲ್ಲ ತನ್ನ ಸೊಬಗಿನ ತುಣುಕನ್ನು ಹಂಚುತ್ತಲೆ ಸಾಗಿರುವುದು ಈ ಕಾಲಮಾನದ ಅಚ್ಚಳಿಯದ ಸೋಜಿಗಗಳಲ್ಲೊಂದು. ಡಾ.ರಾಜ್ ಇರಲಿ, ಬಿಡಲಿ ಅದು ತನ್ನಂತಾನೆ ಸಂಭಾಳಿಸಿಕೊಂಡು ಚಿಗುರಿ ಮೊಳೆತು, ಬಿರಿದು ಪಸರಿಸುತ್ತಲೆ ಸಾಗಿರುವುದು ಆ ಮೇರು ವ್ಯಕ್ತಿತ್ವದ ಅಂತರಾತ್ಮ ಅಲ್ಲಿ ಇನ್ನೂ ಜೀವಂತವಾಗಿರುವುದರ ಕುರುಹು.
ಆನೆಯಂತಹ ಅಸಾಧಾರಣ ಬಲದ ದೈತ್ಯ ಗಾತ್ರದ ಪ್ರಾಣಿಯೂ ಬದುಕುವುದು ಕೇವಲ ಸಸ್ಯಾಹಾರವನ್ನು ತಿಂದುಕೊಂಡೆ. ಹಾಗೆ ನೋಡಿದರೆ ಆನೆ, ಒಂಟೆ, ಕುದುರೆಯಂತಹ ಎಷ್ಟೊ ದೊಡ್ಡ ದೈತ್ಯದೇಹಿಗಳೆಲ್ಲದರ ಮೂಲಶಕ್ತಿಯ ಸರಕು ಸಸ್ಯಾಹಾರದಿಂದಲೆ ಬರುವ ಪ್ರಕೃತಿ ವಿಶೇಷವೂ ಅಚ್ಚರಿ ತರುವಂತಹದ್ದು. ಅಂತೆಯೆ ಡಾ. ರಾಜ್ ರಂತಹ ಗಜಸಮಾನ ವ್ಯಕ್ತಿತ್ವದ ಮೂಲ ಸಾಮಾಗ್ರಿ ಅವರಲ್ಲಿ ಹೇರಳವಾಗಿದ್ದ ಸಾತ್ವಿಕ ಗುಣ. ಆ ಬಲದ ಶಕ್ತಿಯದೆಷ್ಟು ಉನ್ನತ ಮಟ್ಟದಲ್ಲಿತ್ತೆಂದರೆ ಅದೊಂದರ ದೆಸೆಯಿಂದಲೆ ಕಾಡಿ ಕಂಗೆಡಿಸಬಹುದಿದ್ದ ತಾಮಸ ಮತ್ತು ರಾಜಸ ಶಕ್ತಿಗಳನ್ನು ನಿಯಂತ್ರಿಸಿ ಹದ್ದುಬಸ್ತಿನಲ್ಲಿಡಲು ಸಾಧ್ಯವಾಯಿತು. ಡಾ. ರಾಜ್ ರವರ ಸಜ್ಜನಿಕೆ, ಸರಳತೆ, ನಿರಹಂಕಾರಿ ಗುಣ, ಸಚ್ಚಾರಿತ್ರಪೂರ್ಣ ಸನ್ನಡತೆ, ನಯ, ವಿನಯ, ಭಯ, ಭಕ್ತಿಗಳೆಲ್ಲದರ ಮೂಲ ಶಕ್ತಿ – ಈ ಸಾತ್ವಿಕತೆ ಮತ್ತು ಅದರ ಮೇಲೆ ಅವರು ಸಾಧಿಸಿದ್ದ, ಗಳಿಸಿದ್ದ, ಹೊಂದಿದ್ದ ಅಮೋಘ – ಅಸಾಧಾರಣ ಹತೋಟಿ. ವಯಸಿನ ಪಕ್ವತೆ, ಪ್ರಬುದ್ದತೆ, ಮಾಗುವಿಕೆಯನ್ನು ಮೀರಿ ಅವರು ಪುಟ್ಟ ಮಗುವಿನ ಅಂತಃಕರಣವನ್ನು ಹೊಂದಲು ಸಾಧ್ಯವಾಗಿಸಿದ್ದೆ ಈ ಶಕ್ತಿ ವಿಶೇಷಣದಿಂದಾಗಿ. ತೆರೆಯ ಮೇಲಿನ ಆ ಪ್ರಬುದ್ಧ , ಅಮೋಘ ಅಭಿನಯವನ್ನು ಕಂಡಾಗ ಊಹಿಸಿಕೊಳ್ಳುವ ವ್ಯಕ್ತಿತ್ವವನ್ನು ಮೀರಿದ ಸಂಪೂರ್ಣ ಬೇರೆಯೆ ತೆರನಾದ ಸಹಜ, ಸರಳ ವ್ಯಕ್ತಿತ್ವ ಹೊಂದಿದ್ದಂತಹ ಅವರಂತಹ ವ್ಯಕ್ತಿತ್ವ ಬೇರಾರಲ್ಲೂ ಕಾಣುವುದಾಗಲಿ, ಊಹಿಸಿಕೊಳ್ಳುವುದಾಗಲಿ ಕಷ್ಟ. ಅವರ ಜೀವಿತ ಕಾಲದಲ್ಲಿ ಅವರನ್ನು ಮೆಚ್ಚದಿದ್ದವರೂ ಸಹ ಒಂದು ರೀತಿಯ ಗೌರವ ಭಾವವನ್ನಿಡುವಷ್ಟು ಪ್ರಖರ ತೇಜ ಆ ವ್ಯಕ್ತಿತ್ವದ ಪ್ರಭಾವ. ಅವರಿರುವತನಕ ಅವರು ತುಂಬಿದ್ದ ಸ್ಥಾನ ವಿಸ್ತಾರ, ವೈವಿಧ್ಯತೆ, ಸಂಭಾವಿತ ಮನೋಭಾವನೆ, ಹೃದಯ ವೈಶಾಲ್ಯ ಮತ್ತು ಮಿಕ್ಕೆಲ್ಲವನ್ನು ಮೀರಿಸಿದ್ದ ಕನ್ನಡ ನಾಡು ನುಡಿಯ ಕುರಿತಾದ ಪ್ರೇಮಾದರಗಳ ಅರಿವಿದ್ದವರೂ ಮತ್ತು ಅರಿವಿರದವರೂ ಇಂದು ಸಹ ಅದೇ ತೀವ್ರತೆಯಿಂದ ಆ ಗಾಢ ಶೂನ್ಯತೆಯ ಮುಚ್ಚಲಾಗದ ಕಂದಕವನ್ನು ಅನುಭವಿಸುತ್ತಿದ್ದರೆ ಅದಕ್ಕೆ ಕಾರಣ, ತನ್ನ ವ್ಯಕ್ತಿತ್ವವೊಂದರಿಂದಲೆ ಆ ಕಂದಕವನ್ನು ಮುಚ್ಚಬಲ್ಲ ಶಕ್ತಿಯುಳ್ಳ ಡಾ. ರಾಜ್ ರಂತಹ ವ್ಯಕ್ತಿತ್ವದ ಕೊರತೆ. ಪ್ರಾಯಶಃ ಆ ಕೊರತೆ ಎಂದೆಂದಿಗೂ ನೀಗುವುದಿಲ್ಲ – ಹಾಗಾಗಿ , ಡಾ. ರಾಜ್ ಕುರಿತಾದ ಈ ಗುಣಗಾನ ಸಹ ನಿಲ್ಲುವುದಿಲ್ಲ – ಅನವರತ.
ಚಿತ್ರ ಕೃಪೆ: ಅಂತರ್ಜಾಲದಿಂದ