00202. ಕಥೆ: ಪರಿಭ್ರಮಣ..(19)

00202. ಕಥೆ: ಪರಿಭ್ರಮಣ..(19)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

( ಪರಿಭ್ರಮಣ..(18)ರ ಕೊಂಡಿ – https://nageshamysore.wordpress.com/00200-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-18/ )

ಇಷ್ಟೆಲ್ಲಾ ವೈಯಕ್ತಿಕ ಹೊಯ್ದಾಟಗಳ ನಡುವೆಯೆ ಪ್ರಾಜೆಕ್ಟಿನ ಚಟುವಟಿಕೆಗಳು ಟೆಸ್ಟಿಂಗ್-ಟ್ರೈನಿಂಗಿನ ಹಂತ ದಾಟಿ ‘ಗೋಲೈವ್’ (ನೈಜ್ಯ ‘ಶುಭಾ’ರಂಭದ ಗಮ್ಯ) ದಿನವನ್ನು ಸಮೀಪಿಸುತ್ತಿತ್ತು. ಹೀಗಾಗಿ ಶ್ರೀನಾಥನ ಜತೆ ತಂಡದ ಮಿಕ್ಕವರಿಗೂ ಕೈತುಂಬಾ ಕೆಲಸ. ಟೆಸ್ಟಿನಲ್ಲಿ ಹಿಡಿದು ಹಾಕಿದ್ದ ಕೈ ಕೊಟ್ಟಿದ್ದ ಪ್ರೋಗ್ರಾಮುಗಳ ರಿಪೇರಿ ಮತ್ತು ಮರು ಪರೀಕ್ಷಣೆ, ಹಳೆ ಸಿಸ್ಟಂ ಮಾಹಿತಿಯನ್ನು ಸೋಸಿ ಹೊಸದಕ್ಕೆ ಸಾಗಿಸುವ ತಲೆ ಚಿಟ್ಟು ಹಿಡಿಸುವ ಪರಿಪರಿ ‘ಪರಾಕ್ರಮ’, ಕೊನೆ ಗಳಿಗೆಯಲ್ಲಿ ಕೈ ಕೊಟ್ಟ ಅಂಶಗಳ ಮೂಲ ಕಾರಣ ಹುಡುಕಿ, ಬೆನ್ನಟ್ಟಿ ಸರಿಪಡಿಸಿ ಸಕ್ರಮಗೊಳಿಸುವ ಕರ್ಮ; ಇದೆಲ್ಲದರ ನಡುವೆ, ಯಾವ ಹೊತ್ತಿನಲ್ಲಿ ಯಾವ ‘ಮರ್ಫಿ’ ಬಂದು ಕಾಡುವನೊ ಎಂಬ ಆತಂಕವನ್ನು ಅನುಭವಿಸುತ್ತಲೇ, ತಂಡದೆಲ್ಲರ ಪ್ರಯತ್ನಗಳ ಮೊತ್ತವನ್ನು ಏಮಾರಿಸಿ, ಹಾಗೇನಾದರೂ ಅನಿರೀಕ್ಷಿತ ‘ಮರ್ಫಿ’ ಬಂದರೆಗಿದರೆ ಅದನ್ನು ಎದುರಿಸುವ ಅಂತಿಮ ಮಾರ್ಗವಾಗಿ, ಕಂಡು ಕಾಣದ ಎಲ್ಲಾ ದೈವಗಳಿಗೆ ಅಂತರಂಗಿಕ ಪ್ರಾರ್ಥನೆ, ಕೋರಿಕೆ – ಹೀಗೆ ಎಲ್ಲವು ಒಂದೆ ಸಮಯದ ಚೌಕಟ್ಟಿನಲ್ಲಿ, ಸಮಾನಾಂತರ ಟ್ರಾಕಿನಲ್ಲಿ ನಡೆಯುತ್ತ ಎಲ್ಲರಲ್ಲು ಪ್ರಾಜೆಕ್ಟಿನ ಬಿಸಿ ಮುಟ್ಟಿಸುವಲ್ಲಿ ಸಫಲವಾಗಿದ್ದ ಹೊತ್ತು. ಈ ಹೊತ್ತಿನಲ್ಲಿ ಪ್ರಾಜೆಕ್ಟ್ ಪ್ಲಾನಿಂಗಿನ ಎಲ್ಲಾ ಮುಖಗಳನ್ನು ಮತ್ತೆ ಮತ್ತೆ ಪರಿಶೀಲಿಸಿ, ಎಲ್ಲಾದರೂ ಏನಾದರೂ ಎಡವಟ್ಟಾಗಿದೆಯೆ ಅಥವಾ ಆ ದಿಸೆಯತ್ತ ನಡೆದಿರುವ ಅಂಶಗಳೇನಾದರೂ ಕಾಣುತ್ತಿವೆಯೆ ಎಂದು ಹುಡುಕುತ್ತಿದ್ದ ಶ್ರೀನಾಥ. ಪ್ರಾಜೆಕ್ಟುಗಳಲ್ಲಿ ಹೆಣಗಾಡಿದ್ದವರಿಗೆ ಇಂತಹ ಸಂಧರ್ಭದಲ್ಲೆ ಅನುಭವದ ನಿಜವಾದ ಪರೀಕ್ಷೆಯಾಗುವುದೆಂದು ಗೊತ್ತಿರುವುದರಿಂದ ಮೇಲ್ನೋಟಕ್ಕೆ ಎಲ್ಲಾ ಸರಿಯಾಗಿರುವಂತೆ ಕಂಡರೂ, ಒಳಗೆಲ್ಲೊ ಏನೋ ಹೆಚ್ಚುಕಮ್ಮಿ ಇನ್ನು ಉಳಿದುಕೊಂಡಿರಬೇಕೆಂಬ ಅನುಮಾನ ಸದಾ ಬಿಡದೆ ಕಾಡಿರುತ್ತದೆ… ಶ್ರೀನಾಥನಿಗಂತೂ ಎಲ್ಲಾದರೂ ಏನಾದರೂ ಸರಿಯಿರದಿದ್ದರೆ, ಮೇಲ್ನೋಟಕ್ಕೆ ಕಾಣಿಸದಿದ್ದರೂ ಒಳಗಿನ ಯಾವುದೊ ಒಳಗುದಿ ಎಲ್ಲೊ ಏನೊ ಸರಿಯಿಲ್ಲವೆಂಬ ಸುಳಿವು ನೀಡುತ್ತಲೆ ಇರುತ್ತಿತ್ತು ಅನುಭವದ ಕಾರಣದಿಂದಾಗಿ. ಅಂತಹ ಸಾಕ್ಷ್ಯಾಧಾರರಹಿತ, ಬರಿಯ ತೀವ್ರ ಅನಿಸಿಕೆಯ ಇಂಟ್ಯೂಶನ್ನಿನ ಮೇಲೆ ಅವಲಂಬಿಸಿಯೆ ಸುಮಾರು ನಿರ್ಧಾರ ಕೈಗೊಳ್ಳುವ ಪ್ರಾಜೆಕ್ಟ್ ಮ್ಯಾನೇಜರುಗಳ ಗುಂಪಿಗೆ ಸೇರಿದವರಲ್ಲಿ ಶ್ರೀನಾಥನೂ ಒಬ್ಬ. ಆರನೆ ಇಂದ್ರಿಯದ ಯಾವುದೊ ಮೂಲೆಯಿಂದ ಈ ಬಾರಿಯೂ, ಎಲ್ಲೊ ಏನೊ ಕೊರತೆಯಿದೆ ಎಂಬ ಅನಿಸಿಕೆ ಮರಳಿ ಮರಳಿ ಅನುಭವಕ್ಕೆ ಬರುತ್ತಿದ್ದರೂ ಎಲ್ಲಿ ತಪ್ಪಾಗಿದೆಯೆಂದು ಗೊತ್ತಾಗಿರಲಿಲ್ಲ. ಎಲ್ಲಾ ಸರಿಯಿರುವಂತೆಯೆ ಕಾಣುತ್ತಿದೆಯಲ್ಲ? ಎಲ್ಲಿ ತಪ್ಪಿರಬಹುದು ? ಎಂದೆಲ್ಲಾ ಸುಮಾರು ಹೊತ್ತು ತಡವಿದರೂ ಗೊತ್ತಾಗದೆ ಕೊನೆಗೆ ಯಾವುದಕ್ಕು ಒಂದು ಬಾರಿ ವೇರ್ಹೌಸಿಗೊಂದು ಬಾರಿ ಭೇಟಿಯಿತ್ತು, ಅಲ್ಲಿಯೂ ಎಲ್ಲಾ ಸರಿಯಿದೆಯೆ ಎಂದು ಪರಿಶೀಲಿಸಿ ಬರಬೇಕೆಂದು ನಿರ್ಧರಿಸಿದಾಗ ಸ್ವಲ್ಪ ಆತಂಕ ಕಡಿಮೆಯಾಗಿತ್ತು.

ಹಾಗೆ ಹೊರಡಲು ನಿರ್ಧರಿಸಿದ ಹೊತ್ತಿನಲ್ಲೆ ಒಬ್ಬನೇ ಹೋಗುವ ಬದಲು ಯಾರಾದರು ಜತೆಯಿದ್ದರೆ ಒಳಿತೆನಿಸಿ, ಸೀಟಿನ ಸುತ್ತಾ ಕಣ್ಹಾಯಿಸಿದಾಗ ಸದಾ ಪ್ರೋಗ್ರಾಮಿಂಗಿನಲ್ಲೆ ನಿರತನಾಗಿದ್ದು ಬರಿ ತಂತ್ರಾಶದ ಜತೆಗೆ ಒಡನಾಡಿಕೊಂಡಿರುವ ಸೌರಭ್ ದೇವ್ ಕಣ್ಣಿಗೆ ಬಿದ್ದಿದ್ದ… ಆ ಪ್ರಾಜೆಕ್ಟಿನ, ಕಾಗದದ ಮೇಲೆ ಮುದ್ರಿತವಾಗಬೇಕಿದ್ದ ಇನ್ವಾಯ್ಸ್, ಡೆಲಿವರಿ ನೋಟ್ ರೀತಿಯ ಎಲ್ಲಾ ‘ಫಾರಂ’ (ನಮೂನೆ) ಗಳ ಪ್ರೊಗ್ರಾಮಿಂಗಿನ ಜವಾಬ್ದಾರಿ ಅವನದೆ. ಇನ್ವಾಯ್ಸ್, ಡೆಲಿವರಿ ನೋಟ್, ಪ್ಯಾಕಿಂಗ್ ಸ್ಲಿಪ್ ಗಳೆಲ್ಲ ಹೊಸ ಸಿಸ್ಟಂನಿಂದ ಸರಿಯಾಗಿ ಪ್ರಿಂಟ್ ಆಗಿ ಬರಬೇಕೆಂದರೆ ಅವನ ಕೈ ಚಳಕ ಸರಿಯಿದ್ದರಷ್ಟೆ ಸಾಧ್ಯ… ಅವನು ಡೆವಲಪ್ ಮಾಡಿರುವ ಫಾರಂಗಳನ್ನೆಲ್ಲ ಬಳಸಬೇಕಿರುವುದು ವೇರ್ಹೌಸಿನಲ್ಲೆ ಆದಕಾರಣ, ಅಲ್ಲೊಮ್ಮೆ ಹೋಗಿ ಎಲ್ಲಾ ಸರಿಯಿರುವುದೆ ಇಲ್ಲವೆ ಪರೀಕ್ಷಿಸಿ ನೋಡಿದ್ದರೊ ಇಲ್ಲವೊ ಎಂದು ಅನುಮಾನವೂ ಇತ್ತು. ಸಾಮಾನ್ಯವಾಗಿ ಈ ಡೆವಲಪರುಗಳು ನೇರವಾಗಿ ಕಸ್ಟಮರುಗಳ ಜತೆ ಒಡನಾಟ ಇಟ್ಟುಕೊಂಡಿರುವುದಿಲ್ಲ. ಇಬ್ಬರಿಗೂ ಮಧ್ಯವರ್ತಿಯಾಗಿ ಕೊಂಡಿಯ ಹಾಗೆ ಮತ್ತೊಬ್ಬ ಸಂಚಾಲಕನಿರುತ್ತಾನೆ – ಸಿಸ್ಟಮ್ ಅನಲಿಸ್ಟ್ ಅಥವಾ ಬಿಜಿನೆಸ್ ಅನಲಿಸ್ಟ್ ಹೆಸರಿನಲ್ಲಿ. ಗ್ರಾಹಕ / ಬಳಕೆದಾರರ ಬೇಡಿಕೆಗಳನ್ನೆಲ್ಲ ಪರಿಷ್ಕರಿಸಿ ತಾಂತ್ರಿಕ ರೂಪಕ್ಕೆ ಬದಲಾಯಿಸಿ ಡೆವಲಪರನಿಗೆ ಸೂಕ್ತ ಮಾಹಿತಿ ವಿವರ ಕೊಡುವ ಪ್ರಮುಖ ಕೊಂಡಿಯ ಕೆಲಸ ಈ ಅನಲಿಸ್ಟುಗಳದೆ. ಅಂತೆಯೆ ಕೊನೆಗೆ ಎಲ್ಲಾ ಸಿದ್ದವಾದ ಮೇಲೆ ಅದನ್ನು ಪರಿಶೀಲಿಸಿ, ಪರೀಕ್ಷಿಸಿ ಬಳಕೆದಾರನ ಕೋರಿಕೆಯನುಸಾರ ಇದೆಯೆ ಇಲ್ಲವೆ ಎಂದು ನಿರ್ಧರಿಸಿ, ಪರಿಷ್ಕರಣೆಯ ಅಗತ್ಯವಿದ್ದರೆ ಮತ್ತೆ ಅದನ್ನೆಲ್ಲ ಸಮೀಕರಿಸಿ, ನವೀಕರಿಸಿ ಅಂತಿಮವಾಗಿ ಗ್ರಾಹಕನ ಒಪ್ಪಿಗೆಯನ್ನು ಪಡೆಯಬೇಕಾದ ಹೊಣೆಯೂ ಅವರದೆ. ಈ ಕೆಲಸವೆಲ್ಲ ನೇರ ಡೆವಲಪರನ ಪಾಲಿಗೆ ಬರುವುದಿಲ್ಲವಾದರೂ ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯ ಪ್ರತ್ಯಕ್ಷ್ಯ ಅಥವಾ ಪರೋಕ್ಷ ಸಹಯೋಗವಿದ್ದೆ ಇರುತ್ತದೆ. ಈ ಪ್ರಾಜೆಕ್ಟಿನಲ್ಲಿ ಆ ಪ್ರಮುಖ ಕೊಂಡಿಯ ಕೆಲಸ ಮಾಡುತ್ತಿದ್ದವ ಬಿಜಿನೆಸ್ ಅನಲಿಸ್ಟ್ ಸಂಜಯ ಶರ್ಮ. ಈಗಾಗಲೆ ಟೆಸ್ಟಿಂಗೆಲ್ಲ ಮುಗಿದು ಎಲ್ಲಾ ಫಾರಂಗಳು ‘ಓಕೆ’ಯಾಗಿದ್ದರೂ ಕೂಡ, ನೈಜ್ಯ ವಾತಾವರಣದಲ್ಲಿ ಅದು ಸಮರ್ಪಕವಾಗಿ ಕೆಲಸ ಮಾಡುತ್ತದೆಂದು ಹೇಳಬರುವುದಿಲ್ಲ. ಅಲ್ಲದೆ, ಈ ವೇರ್ಹೌಸುಗಳು ಸಾಮಾನ್ಯ ಆಫೀಸಿನಿಂದ ದೂರದ ಜಾಗಗಳಲ್ಲಿರುವ ಕಾರಣ ಈ ಕನ್ಸಲ್ಟೆಂಟುಗಳು ಸಾಮಾನ್ಯವಾಗಿ ಆಫೀಸಿನಲ್ಲೆ ‘ಅಣುಕು ಪರೀಕ್ಷೆ’ ಮಾಡಿ ಟೆಸ್ಟಿಂಗ್ ಮುಗಿಸಿಬಿಡುತ್ತಾರೆ. ಕೊನೆಗಳಿಗೆಯ ತನಕ ಇದರ ಪರಿಣಾಮದ ಅರಿವಿರದೆ, ಗೋಲೈವಿನ ನೈಜ್ಯ ವಾತಾವರಣದಲ್ಲಿ ಯಾವುದೊ ಅನಿರೀಕ್ಷಿತ ತೊಡಕು ಉದ್ಭವಿಸಿ ಕೈ ಕೊಟ್ಟು ರಾಡಿಯೆಬ್ಬಿಸುವುದು ಈ ಪ್ರಾಜೆಕ್ಟುಗಳಲ್ಲಿ ಕೆಲಸ ಮಾಡಿದವರ ಸಾಮಾನ್ಯ ಅನುಭವಕ್ಕೆ ಬರುವ ವಿಷಯ. ಶ್ರೀನಾಥನಿಗೂ ಹಳೆಯ ಅನುಭವಗಳಿಂದ ಈ ಜಾಗದಲ್ಲೆ ಏಟು ಬೀಳುವ ಅರಿವಿದ್ದ ಕಾರಣ, ಸೌರಭ್ ದೇವನಿಗೆ ‘ವೇರ್ಹೌಸಿನಲ್ಲೇನಾದರೂ ಹೋಗಿ ಟೆಸ್ಟಿಂಗ್ ನಡೆಸಿದ್ದರಾ?’ ಎಂದು ಕೇಳಿದಾಗ ನಿರೀಕ್ಷೆಯಂತೆ ನಕಾರಾತ್ಮಕ ಉತ್ತರವೆ ಬಂತು. ಸರಿ, ಅಂದ ಮೇಲೆ ಎಂದಿನಂತೆ – ಆಫೀಸಿನಲ್ಲಿ ಕೆಲಸ ಮಾಡಿದ ಮೇಲೆ ವೇರ್ಹೌಸಿನಲ್ಲೂ ಕೆಲಸ ಮಾಡದಿರುತ್ತದೆಯೆ? ಎಂದು ಉಡಾಫೆ ಮಾಡಿರಬೇಕು.. ಈ ಅಂಶದ ಹಿನ್ನಲೆಯಲ್ಲೆ ಎಲ್ಲೊ ತನ್ನಂತರಾತ್ಮಕ್ಕನಿಸುತ್ತಿರುವ ತಳಮಳ, ಕಳವಳ ಭಾವದ ಹುಳುಕು ಅಡಗಿರುವಂತಿದೆ, ಯಾವುದಕ್ಕೂ ಒಮ್ಮೆ ಸ್ವತಃ ಪರಿಶೀಲಿಸಿ ನೋಡಿಬಿಡುವುದು ವಾಸಿ ಎನಿಸಿ ಸೌರಭ್ ದೇವನನ್ನು ಜತೆಗೆ ಹೊರಡಿಸಿಕೊಂಡೆ ವೇರ್ಹೌಸಿಗೆ ಹೊರಟ ಶ್ರೀನಾಥ; ಬರಿ ತಾಂತ್ರಿಕ ವಾತಾವರಣದಲ್ಲೆ ಇರುವ ಅವನಿಗೂ ಅವನ ಕೆಲಸದ ಪ್ರಾಯೋಗಿಕತೆಯ ಅರಿವಾಗಲಿ ಎನ್ನುವುದು ಒಂದು ಉದ್ದೇಶ; ಎರಡನೆ ಸೂಕ್ಷ್ಮವೆಂದರೆ ಬಿಜಿನೆಸ್ ಅನಲಿಸ್ಟ್ ಶರ್ಮನನ್ನು ಜತೆಗೆ ಕರೆದರೆ, ಅವನ ಮೇಲಿನ ಅಪನಂಬಿಕೆಯಿಂದ ಅವನ ವ್ಯಾಪ್ತಿಯಲ್ಲಿ ಬರುವ ಚಟುವಟಿಕೆಗಳಲ್ಲಿ ತಲೆ ಹಾಕುತ್ತಿರುವನೆಂಬ ಭಾವನೆ ಬರಬಹುದು… ಪ್ರ್ರಜೆಕ್ಟು ಮ್ಯಾನೇಜರನಾಗಿ ಸ್ಥಾನಾಧಿಕಾರದ ವ್ಯಾಪ್ತಿ ಎಷ್ಟೆ ಇದ್ದರೂ, ಅದನ್ನು ಅಗತ್ಯವಿದ್ದಾಗಲಷ್ಟೆ ಎಷ್ಟು ಬೇಕೊ ಅಷ್ಟೆ ಬಳಸುವುದು ಶ್ರೀನಾಥನ ಕಾರ್ಯ ವಿಧಾನ. ಆದರೂ ಶರ್ಮನಿಗರಿವಿಲ್ಲದೆ ಅವನ ಕಾರ್ಯಕ್ಷೇತ್ರಕ್ಕೆ ಕಾಲಿಡುವುದು ನೈತಿಕವಾಗಿ ಸರಿಯಲ್ಲವಾದ ಕಾರಣ, ದೇವ್ ಜತೆ ಉಗ್ರಾಣಕ್ಕೆ ಹೋಗುತ್ತಿರುವುದನ್ನು ತಿಳಿಸಿ, ಅಲ್ಲೇನಾದರೂ ತೊಡಕಿದ್ದರೆ ಅವನ ಗಮನಕ್ಕೆ ತರುವುದಾಗಿ ಹೇಳಿ ಸೌರಬ್ ದೇವ್ ನೊಂದಿಗೆ ಟ್ಯಾಕ್ಸಿ ಹತ್ತಿದ್ದ. ಆ ಹೊತ್ತಿನ ಪ್ರಮುಖ ಆದ್ಯತೆಯಾಗಿದ್ದ ‘ಗೋ ಲೈವ್’ ಇನ್ನು ಕೇವಲ ಮೂರೇ ದಿನ ಬಾಕಿ ಇದ್ದ ಕಾರಣ ಯಾವ ಬಗೆಯ ರಿಸ್ಕನ್ನು ತೆಗೆದುಕೊಳ್ಳುವಂತಿರಲಿಲ್ಲ… ಏಟು ತಿಂದು ಆಮೇಲೆ ನರಳುತ್ತ ಮದ್ದು ಲೇಪಿಸಿಕೊಳ್ಳುವುದಕ್ಕಿಂತ ತುಸು ಮುಂಜಾಗರೂಕತೆ ವಹಿಸಿ ಏಟು ಬೀಳದಂತೆ ನೋಡಿಕೊಳ್ಳುವುದು ಯಾವಾಗಲೂ ಸುರಕ್ಷಿತ ವಿಧಾನ ಎಂದೆ ಬಲವಾಗಿ ನಂಬಿದ್ದವ ಶ್ರೀನಾಥ.

ಅಂದೇಕೊ ತುಸು ಚಳಿ ಹೆಚ್ಚಾಗಿಯೆ ಇದ್ದಂತಿದ್ದ ಕಾರಣ ಟ್ಯಾಕ್ಸಿಯೊಳಗೆ ಇಬ್ಬರೂ ತೊಟ್ಟ ಜಾಕೆಟ್ಟಿನ ಸಮೇತ ಕುಳಿತುಕೊಂಡಿದ್ದರು. ಎಂದಿನಂತೆ ಟ್ರಾಫಿಕ್ಕಿನ ಹರಿದಾಟ ಹೆಚ್ಚಾಗಿದ್ದ ಕಾರಣ ಹೋಗಿ ತಲುಪಲು ಕನಿಷ್ಠ ಒಂದು ಗಂಟೆಯಾದರೂ ಆಗಬಹುದೆಂದು ಸರಿಯಾಗಿಯೆ ಊಹಿಸಿದ ಶ್ರೀನಾಥ, ಟ್ರಾಫಿಕ್ಕಿನಲ್ಲಿ ಹೆಣಗಾಡುತ್ತ ಸಾಗಿದ್ದ ಆ ಹೊತ್ತಿನಲ್ಲೆ ಸೌರಭ್ ಜತೆ ಮಾತಿಗಿಳಿದು ಆ ಫಾರಂಗಳ ಕುರಿತು ವಿವರವಾಗಿ ವಿಚಾರಿಸತೊಡಗಿದ. ಆ ಮಾತಿನ ನಡುವೆ ನಾಲ್ಕು ಪ್ರಮುಖವಾದ ‘ದಾಖಲಾತಿ’ಗಳು ವೇರ್ಹೌಸಿನ ಆಫೀಸಿನಿಂದಲೇ ಪ್ರಿಂಟ್ ಮಾಡಬೇಕಾಗಿರುವ ವಿಷಯ ಮನದಟ್ಟಾಯ್ತು. ಮಿಕ್ಕ ಕೆಲವು ಫಾರಂಗಳು, ರಿಪೋರ್ಟುಗಳು ಅಲ್ಲೆ ಮುದ್ರಿತವಾಗಬೇಕಿದ್ದರೂ, ದಿನಂಪ್ರತಿ ಬಳಕೆಯದಲ್ಲವಾದ ಕಾರಣ ಅವುಗಳ ಕುರಿತು ತಕ್ಷಣಕ್ಕೆ ಅಷ್ಟು ತಲೆ ಕೆಡಿಸಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ದಿನಂಪ್ರತಿ ದೊಡ್ಡ ಸಂಖ್ಯೆಯಲ್ಲಿ ಮುದ್ರಿಸಬೇಕಾಗಿದ್ದ ಆ ನಾಲ್ಕು ಮಾತ್ರ ತೀರಾ ಮುಖ್ಯವಾದ ದಾಖಲಾತಿ ಪ್ರತಿಗಳು – ಅದರಲ್ಲೂ ಇನ್ವಾಯ್ಸ್, ಡೆಲಿವರಿ ನೋಟ್ ಗಳಿಲ್ಲದೆ ಸರಕನ್ನು ಹೊರಸಾಗಿಸುವುದು ಕಾನೂನಿನ ಪ್ರಕಾರ ಅಕ್ರಮವಾಗುವ ಕಾರಣ ಅವೆರಡು ಆ ನಾಲ್ಕರಲ್ಲೂ ತೀರಾ ಮುಖ್ಯವಾದ ದಾಖಲೆಗಳು. ಸಾಲದೆಂಬಂತೆ ಮೂಲ ಪ್ರತಿಗಳ ಜತೆ ನಕಲು ಪ್ರತಿಗಳು ಒಟ್ಟಾಗಿ ಸರಕಿನ ಜತೆಗೆ ಹೋಗಬೇಕು. ಆ ಎರಡು ಫಾರಂಗಳಲ್ಲೇನಾದರು ಎಡವಟ್ಟಾದರೆ, ಸರಕಿನ ಮಾರಾಟವೆ ನಿಂತು ಹೋದ ಹಾಗೆ ಲೆಕ್ಕ. ದಿನವು ನೂರಾರು ಗ್ರಾಹಕರಿಗೆ ದೇಶಾದ್ಯಂತ ಸರಕು ರವಾನೆ ಮಾಡಬೇಕಾದ ಕಾರಣ ಇಂತಹ ನೂರಾರು ದಾಖಲೆಗಳನ್ನು ದಿನವೂ ತಯಾರಿಸಿಡಬೇಕು ಮತ್ತು ಸರಕಿನ ಜತೆಗಿಟ್ಟು ರವಾನಿಸಬೇಕು. ಸಾಗಾಣಿಕೆಗೆಂದು ವೇರ್ಹೌಸಿನಿಂದ ಹೊರ ಹೊರಟಾಗಲಷ್ಟೆ ಸರಕು ಮಾರಿದ ಲೆಕ್ಕಾಚಾರ; ಅದನ್ನೆ ದೈನಂದಿನ ಮಾರಾಟ ವಹಿವಾಟಿನ (ಸೇಲ್ಸ್ ಟರ್ನ್ ಓವರ) ಲೆಕ್ಕಕ್ಕೆ ಸೇರಿಸುವುದು. ಮ್ಯಾನೇಜ್ಮೆಂಟಿನಿಂದ ಈ ಅಂಕಿ ಅಂಶ ಪ್ರತಿದಿನವೂ ಪರಿಶೀಲಿಸಲ್ಪಡುತ್ತದೆ ಮತ್ತು ಅದು ಯಾವ ದಿನವೂ ಗುರಿಗಿಂತ ಕೆಳಗೆ ಬೀಳದಂತೆ ಅತೀ ಎಚ್ಚರದ ನಿಗಾ ವಹಿಸಿ ಗಮನಿಸಲಾಗುತ್ತಿರುತ್ತದೆ. ಹೀಗಾಗಿ, ಅವೆರಡು ಫಾರಂಗಳು ಯಾವುದೆ ತೊಂದರೆಯಿಲ್ಲದೆ ಕೆಲಸ ಮಾಡುವುದು ಶ್ರೀನಾಥನ ಪ್ರಧಾನ ಆದ್ಯತೆಗಳಲ್ಲೊಂದಾಗಿತ್ತು. ಆ ಎರಡರ ಜತೆಗೆ ತಳುಕು ಹಾಕಿಕೊಂಡಂತೆ ಮಿಕ್ಕೆರಡು ಫಾರಂಗಳ ಹಣೆಬರಹವು ಸೇರಿಕೊಂಡಿದ್ದ ಕಾರಣ ಅವುಗಳನ್ನು ಕಡೆಗಣಿಸುವಂತಿರಲಿಲ್ಲ; ಡೆಲಿವರಿ ನೋಟ್ ಸದಾ ಇನ್ವಾಯ್ಸಿನ ಜತೆಯಲ್ಲೆ ಕಳಿಸಬೇಕೆಂಬ ನಿಯಮವಿದ್ದ ಕಾರಣ ಎರಡು ದಾಖಲೆಯೂ ಜತೆಗಿಡಬೇಕಿತ್ತು. ಅಲ್ಲದೆ ಈ ಸರಕು ಸಾಗಾಣಿಕೆಯ ಜವಾಬ್ದಾರಿಯನ್ನೆಲ್ಲ, ಹೊರಗಿನ ನುರಿತ ಸಾಗಾಣಿಕಾ ಕಂಪನಿಗಳು ನಿಭಾಯಿಸುತ್ತಿದ್ದ ಕಾರಣ ಅವರು ಸರಕು ಪಡೆದ ದಾಖಲೆ, ಅಂತಿಮ ಗ್ರಾಹಕರಿಗೆ ವಿಲೇವಾರಿ ಮಾಡಿದ ದಾಖಲೆ ಇತ್ಯಾದಿಗಳಿಗೆಲ್ಲ ಈ ಡೆಲಿವರಿ ನೋಟ್ ದಾಖಲೆಯೆ ಪ್ರಮುಖ ಸಾಕ್ಷ್ಯವಾಗಿತ್ತು – ಸಂಧರ್ಭಾನುಸಾರ ಮೊಹರು, ಸಹಿಗಳು ಬಿದ್ದ ಮೇಲೆ. ಇನ್ನು ಮೂರನೆಯ ಫಾರಂನದೆ ಸ್ವಲ್ಪ ವಿಚಿತ್ರ ಕೇಸು ; ಇದರ ಬೆನ್ನಲ್ಲಿ ಯಾವುದೆ ಕಾನೂನಿನ ನಿರ್ಬಂಧವಿರದಿದ್ದರೂ ಒಂದಕ್ಕಿಂತ ಹೆಚ್ಚು ಸಾಗಾಣಿಕಾ ಕಂಪನಿಗಳು ಸೇವೆಯಲ್ಲಿದ್ದ ಕಾರಣದಿಂದಾಗಿ, ಆಯಾ ಕಂಪನಿಯ ಹೆಸರು ಅಡ್ರೆಸ್ಸಿನ ಅನುಸಾರ ‘ವೇ ಬಿಲ್’ ತಯಾರಿಸಿ ಅದರ ಒಂದು ಪ್ರತಿಯನ್ನು ಮುಂಗಡವಾಗಿ ಗ್ರಾಹಕರಿಗೆ ಕೊರಿಯರ ಮುಖಾಂತರ ಕಳಿಸಿಕೊಡಬೇಕಾಗಿತ್ತು. ಇನ್ನು ಕೊನೆಯದಾದ ‘ಪಿಕ್ ಸ್ಲಿಪ್’ಯಾ ‘ಪುಟ್ ಅವೇ ಸ್ಲಿಪ್’ – ಖಾಲಿ ‘ಏ೪’ ಹಾಳೆಯಲ್ಲಿ ಲೇಸರ್ ಪ್ರಿಂಟರಿನಲ್ಲಿ ಮುದ್ರಿಸುವ ದಾಖಲೆಗಳು – ಮೊದಲನೆಯದು ಸರಕಿನ ಹೊರ ಸಾಗಾಣಿಕೆಗೆ ಬಳಸಿದರೆ, ಎರಡನೆಯದು ಅದರ ಮತ್ತೊಂದು ಆವೃತ್ತಿ – ಸರಕು ಉಗ್ರಾಣಕ್ಕೆ ಬಂದಾಗ ಬಳಸುವ ದಾಖಲೆ. ಆದರೆ ಈ ದಾಖಲೆಗಳೆರಡು ಬರಿಯ ವೇರ್ಹೌಸಿನ ಆಂತರಿಕ ಬಳಕೆಗೆ ಮಾತ್ರ ಸೀಮಿತವಾಗಿದ್ದ ಕಾರಣ ಅವನ್ನು ಸರಕಿನ ಜತೆ ಕಳಿಸುವ ಅಗತ್ಯವಿರಲಿಲ್ಲ. ಜತೆಗೆ, ಖಾಲಿ ಹಾಳೆಯಲ್ಲಿ ಮುದ್ರಿಸುತ್ತಿದ್ದ ಕಾರಣ ಅವು ನಿಜಕ್ಕೂ ‘ಫಾರಂ’ ಗುಂಪಿಗೆ ಸೇರಿದವಾಗಿರಲಿಲ್ಲ. ಆದರೆ ಉಗ್ರಾಣದ ಸಿಬ್ಬಂದಿಗೆ ಸಾಗಾಣಿಕೆಗಾಗಿ ಸರಕು ಹೆಕ್ಕುವ ಅಥವಾ ಒಳಗೆತ್ತಿಡುವ ಕೆಲಸಕ್ಕೆ ಇವೆ ಸೂಚನಾಪತ್ರಗಳಾಗಿದ್ದ ಕಾರಣ, ಮಿಕ್ಕ ಮೂರರ ಜತೆ ಇವೂ ಪ್ರಮುಖ ದಾಖಲೆಗಳೆಂದೆ ಪರಿಗಣಿತವಾಗಿದ್ದವು. ಹೀಗಾಗಿ ಈ ನಾಲ್ಕು ದಾಖಲಾತಿಗಳನ್ನು ಒಟ್ಟಾಗಿ ಪ್ರಿಂಟು ಮಾಡಬೇಕಾದ್ದಷ್ಟೆ ಅಲ್ಲದೆ, ಮುದ್ರಣದಲ್ಲಿ ಯಾವುದೊ ಅಡೆ ತಡೆ, ತೊಡಕಿಲ್ಲದೆ ಇರದಂತೆ ಖಾತರಿಯಾಗಿ ನೋಡಿಕೊಳ್ಳುವುದು ಬಲು ಮುಖ್ಯವಾಗಿತ್ತು. ಆಫೀಸಿನ ಟೆಸ್ಟಿಂಗಿನಲ್ಲಿ ಎಲ್ಲವೂ ಸೂಕ್ತವಾಗಿಯೆ ಮುದ್ರಿತವಾಗಿದ್ದರೂ, ನೈಜ್ಯ ಉಗ್ರಾಣದ ವಾತಾವರಣದಲ್ಲಿ ಒಮ್ಮೆ ಪರೀಕ್ಷಿಸಿ ನೋಡದಿದ್ದರೆ ಅದರ ಖಚಿತತೆಯ ಖಾತರಿಯಿರುವುದಿಲ್ಲ, ಮನಸಿಗೂ ಸಮಾಧಾನವಿರುವುದಿಲ್ಲ… ಇದರಿಂದಾಗಿಯೆ, ಟ್ರಾಫಿಕ್ಕಿನ ಮಧ್ಯದಲ್ಲೆ ಇನ್ನು ಏಗುತ್ತ, ಕುಂಟುತ್ತಾ ಸಾಗಿದ್ದ ಟ್ಯಾಕ್ಸಿಯಲ್ಲೆ ವೇರ್ಹೌಸಿನಲ್ಲಿ ಅಂತಿಮ ಪ್ರಿಂಟಿಂಗನ್ನು ಹೇಗೆ ನಿಭಾಯಿಸುವ ಯೋಜನೆ ಮಾಡಲಾಗಿದೆ ಎಂದು ಸೌರಭ್ ದೇವ್ ನಿಂದ ಹೆಚ್ಚಿನ ವಿವರ ಕಲೆ ಹಾಕತೊಡಗಿದ ಶ್ರೀನಾಥ, ಅವನಿಗೆ ತಿಳಿದಿರುವಷ್ಟರ ಮಟ್ಟಿಗೆ.

ಆ ವಿವರ ಕುರಿತಾಡುತ್ತಿದ್ದ ಮಾತಿನ ನಡುವೆಯೆ ಸೌರಭ್ ಇಂಗ್ಲೀಷಿನಲ್ಲಿ, ‘ಶ್ರೀನಾಥ್ ಸಾರ್, ಹೋದ ವಾರ ಶರ್ಮಾಜಿ ಒಂದು ಹೊಸ ಬ್ರಿಲಿಯಂಟ್ ಐಡಿಯಾ ಜತೆ ಬಂದು, ಅದನ್ನ ತಕ್ಷಣವೆ ಕಾರ್ಯಗತವಾಗಿಸಬೇಕು , ತುಂಬಾ ಅರ್ಜೆಂಟು..ಅಂದರು..ತುಂಬಾ ಹೊಸ ತರದ ಮೇಜರ್ ಚೇಂಜ್..ಹೋದವಾರವೆಲ್ಲ ನೈಟ್ ಔಟ್ ಮಾಡಿ ಪ್ರೊಗ್ರಾಮ್ ಬರೆದು ತಿದ್ದಬೇಕಾಯ್ತು..ಅವರು ಕೇಳಿದ್ದ ರೀತಿ ತುಂಬಾ ವಿಶಿಷ್ಠವಾದದ್ದಾದ ಕಾರಣ ಅದನ್ನ ತಾಂತ್ರಿಕವಾಗಿ ಸಾಕ್ಷಾತ್ಕರಿಸಲು ತುಂಬಾ ಕಷ್ಟಪಡಬೇಕಾಯ್ತು. ಅದಕ್ಕೆ ಬೇಕಾದ ಫಂಕ್ಷನ್ ಮಾಡ್ಯೂಲ್ ಸಿಕ್ಕಿರಲಿಲ್ಲ – ಕೊನೆಗೆ ಇಂಟರ್ನೆಟ್ಟಿನಲ್ಲಿ ಮೂರುದಿನ ಹೆಣಗಾಡಿ ಸಿಕ್ಕಿದ ಮಾಹಿತಿಯನ್ನು ಬಳಸಿದೆ. ನನ್ನ ಇದುವರೆಗಿನ ಅನುಭವದ ಅತ್ಯಂತ ಕಷ್ಟದ ಪ್ರೋಗ್ರಾಮು ಇದು. ಆದರೂ, ಮೊನ್ನೆ ರಾತ್ರಿಯೆಲ್ಲ ಜಾಗರಣೆ ಮಾಡಿ ನಿನ್ನೆ ಬೆಳಿಗ್ಗೆ ತಾನೇ ಎಲ್ಲಾ ರೆಡಿ ಮಾಡಿ ಕೊಟ್ಟುಬಿಟ್ಟೆ..ಇಟ್ ಇಸ್ ವರ್ಕಿಂಗ್ ಫೈನ್..ನೌ…’ ಎಂದಾಗ ತಟ್ಟನೆ ಬೆಚ್ಚಿಬಿದ್ದ ಶ್ರೀನಾಥ…! ಅವನ ದನಿಯಲ್ಲಿದ್ದ ಹೆಮ್ಮೆ, ಪಟ್ಟ ಕಷ್ಟವನ್ನು ಎತ್ತಿ ತೋರಿಸುವುದಕ್ಕಿಂತ ಹೆಚ್ಚಾಗಿ ತೀರಾ ಅಸಾಧ್ಯವಾದ ಕಾರ್ಯವೊಂದನ್ನು ಸಾಧಿಸಿದಾಗ ಸಿಗುವ ತೃಪ್ತಿಯನ್ನು ಹಂಚಿಕೊಳ್ಳುವ ಹವಣಿಕೆಯಿತ್ತು – ಅದರಲ್ಲೂ ಪ್ರಾಜೆಕ್ಟಿನ ಮ್ಯಾನೇಜರನ ಜತೆ ಇವೆಲ್ಲ ಚರ್ಚಿಸುವ ಅವಕಾಶ ಸದಾ ಸಿಗದ ಕಾರಣ. ಆದರೆ ಅವನ ಮಾತು ಕೇಳುತ್ತಿದ್ದಂತೆ ಅದರ ತಕ್ಷಣದ ಮತ್ತು ದೂರಗಾಮಿ ಪರಿಣಾಮಗಳೆಲ್ಲ ಕಲಸಿಕೊಂಡು ತಟ್ಟನೆ ಕಣ್ಣಿನ ಮುಂದೆ ಒಟ್ಟಾಗಿ ಸುಳಿದಂತಾಗಿ ಬೆಚ್ಚಿಬಿದ್ದಿದ್ದ ಶ್ರೀನಾಥ. ಟೆಸ್ಟಿಂಗೆಲ್ಲ ಮುಗಿದ ಮೇಲೆ ಪ್ರಮುಖ ಬದಲಾವಣೆಯೆಂದರೆ ಸಾಧಾರಣವಾಗಿ ಯಾವುದೊ ಮುಖ್ಯ ತೊಂದರೆ ಎದುರಾಗಿರಬೇಕೆಂದು ಅರ್ಥ..ಇಲ್ಲವಾದರೆ ಚೆನ್ನಾಗಿ ಅನುಭವವಿರುವ ಯಾರೂ, ಕೊನೆಗಳಿಗೆಯಲ್ಲಿ ಬದಲಾವಣೆಗೆ ಕೈ ಹಾಕಲು ಹೋಗುವುದಿಲ್ಲ. ಇಲ್ಲಿಯವರೆಗೂ ಯಾವುದೆ ಪ್ರಮುಖ ತೊಂದರೆಯಿದೆಯೆಂಬ ದೂರು ಬಂದಿರದ ಕಾರಣ ಇದೇಕೊ ತುಸು ವಿಚಿತ್ರವೆನಿಸಿತು. ಅಥವಾ ಸಮಸ್ಯೆಯ ತೀವ್ರತೆಯನ್ನು ತನಗರಿವಾಗದಂತೆ ಸಾವರಿಸಲು ಏನಾದರೂ ಮುಚ್ಚಿಟ್ಟಿರಬಹುದೆ ಎಂಬ ಅನುಮಾನವೂ ಉಂಟಾಯಿತು. ಎಷ್ಟೊ ಸಾರಿ ಪ್ರಾಜೆಕ್ಟ್ ಮ್ಯಾನೇಜರನಿಗೆ ಗೊತ್ತಾಗದಂತೆ ಎಷ್ಟೊ ವಿಷಯ ಮುಚ್ಚಿಟ್ಟು, ಎಲ್ಲರಿಗೂ ಸಾರ್ವತ್ರಿಕವಾಗಿ ಗೊತ್ತಾಗುವ ಮೊದಲೇ ಹೇಗಾದರೂ ಒಳಗೊಳಗೆ ಸಂಭಾಳಿಸಿ ನಿಭಾಯಿಸುವ ಎಷ್ಟೊ ಪ್ರಕರಣಗಳ ಅರಿವಿತ್ತು ಶ್ರೀನಾಥನಿಗೆ. ಆದರಿಲ್ಲಿ ಆ ಮಾಮೂಲಿನ ಪರಿಸ್ಥಿತಿಯಲ್ಲ – ಇನ್ನೆರಡು ಮೂರು ದಿನದಲ್ಲಿ ಇಡಿ ವ್ಯಾಪಾರ ವಹಿವಾಟು ಈ ಪ್ರಾಜೆಕ್ಟಿನ ಯಶಸ್ಸಿನ ತಳಹದಿಯ ಮೇಲನುಸರಿಸಿ ಹೊಸ ಸಿಸ್ಟಂನಲ್ಲಿ ನಿಭಾವಣೆಯಾಗಬೇಕು, ಯಶಸ್ವಿ ಗೋಲೈವಿನ ರೂಪದಲ್ಲಿ. ಅಂತಹ ದೊಡ್ಡ ರಿಸ್ಕು ಕಣ್ಮುಂದೆಯೆ, ಇರುವಾಗ ತೀರಾ ದೊಡ್ಡ ‘ಕೊನೆಗಳಿಗೆ’ ಪ್ರಯೋಗಕ್ಕೆ ಹೋಗಬಾರದು. ಹಾಗೆ ಯತ್ನಿಸಿದ ಎಷ್ಟೋ ಹಳೆಯ ಪ್ರಾಜೆಕ್ಟುಗಳಲ್ಲಿ ಒಂದಲ್ಲ ಒಂದು ರೀತಿ ಏಟು ತಿಂದು ಪಾಠ ಕಲಿತ ಅನುಭವವಿತ್ತು ಶ್ರೀನಾಥನಿಗೆ. ಆ ಕಹಿಯನುಭವದ ಭೀತಿ ಉಂಟುಮಾಡಿದ ಕಾತರದಲ್ಲಿ ಆತಂಕಿಸುತ್ತಲೆ, ಆ ಕೊನೆಗಳಿಗೆಯ ಬದಲಾವಣೆಯ ಮತ್ತಷ್ಟು ವಿವರಗಳನ್ನೆಲ್ಲ ಕಲೆಹಾಕತೊಡಗಿದ. ಶ್ರೀನಾಥನ ಆತಂಕ ಅರಿವಾದವನಂತೆ ಸೌರಭ್ ದೇವ್ ತುಸು ಉತ್ಪ್ರೇಕ್ಷೆಯ ದನಿಯಲ್ಲಿ ‘ಸಾಫ್ಟ್ ವೇರ ಪ್ರೋಗ್ರಾಮ್ ಏನು ಮುಟ್ಟಿಲ್ಲ ಸಾರ್…ಬರಿ ಪ್ರಿಂಟಿಂಗ್ ಮಾಡುವ ರೀತಿ ಮಾತ್ರ ಬದಲಾಯಿಸಿದ್ದೇವೆ ಅಷ್ಟೆ..ಮೊದಲು ಪ್ರತಿಯೊಂದು ಪ್ರಿಂಟಿಗು ಒಂದೊಂದಾಗಿ ಸೆಪರೇಟಾಗಿ ಕಮಾಂಡ್ ಕೊಡಬೇಕಾಗಿತ್ತು…ವೇರ್ಹೌಸಿನಲ್ಲಿ ಕೆಲಸ ಮಾಡುವವರು ಸಾಮಾನ್ಯ ಹೆಚ್ಚು ಓದು ಬರಹ ಬರದವರು, ಜತೆಗೆ ಸಿಸ್ಟಂನಲ್ಲಿ ಅಷ್ಟು ಪರಿಣಿತರಲ್ಲದವರು..ಅಲ್ಲಿ ಅವರು ನಾಲ್ಕು ಬಾರಿ ಬೇರೆ ಬೇರೆ ಪ್ರಿಂಟು ಮಾಡುವ ಬದಲು ಒಂದೆ ಕಮಾಂಡಿನಲ್ಲಿ ಒಂದು ಕ್ಲಿಕ್ಕಿಗೆ ಎಲ್ಲಾ ನಾಲ್ಕು ಒಟ್ಟಾಗಿ ಪ್ರಿಂಟ್ ಮಾಡಲು ಸಾಧ್ಯವೆ ಅಂತ ಕೇಳಿದರು. ನಾನು ಎಲ್ಲಾ ನಾಲ್ಕು ಫಾರಂಗಳ ಪ್ರೋಗ್ರಮುಗಳನ್ನು ಒಟ್ಟುಗೂಡಿಸೊ ಸ್ಕ್ರಿಪ್ಟೊಂದನ್ನು ಬರೆದು ಒಂದು ‘ಕಾಮನ್ ಟ್ರಿಗರ ಪ್ರೋಗ್ರಾಮ್’ ಸೃಷ್ಟಿಸಿ ಕೊಟ್ಟೆ…ಈಗ ವೇರ್ಹೌಸಿನ ಜನ ಕೇವಲ ಒಮ್ಮೆ ಕ್ಲಿಕ್ ಮಾಡಿದರೆ ಸಾಕು..ನಾಲ್ಕು ಫಾರಂಗಳು ಪ್ರಿಂಟಾಗಿ ಬಿಡುತ್ತದೆ ಒಂದರ ಹಿಂದೆ ಒಂದು…’. ಅವನ ಮಾತು ಕೇಳುತ್ತಿದ್ದಂತೆ ಶ್ರೀನಾಥನಿಗೇಕೊ ತನ್ನ ಇಂಟ್ಯೂಶನ್ ನುಡಿಯುತ್ತಿದ್ದ ಮರ್ಫಿಯ ಭೂತ ಇದರಲ್ಲೆ ಅಡಗಿದೆಯೇನೊ ಎಂಬ ಅನುಮಾನ ಬಲವಾಗತೊಡಗಿತು.. ಪ್ರಶ್ನೆ ತಾಂತ್ರಿಕ ಪರಿಪೂರ್ಣತೆಯದಾಗಿರದೆ ಅದರ ನೈಜ್ಯ ಬಳಕೆಯ ಬದಲಾದ ರೀತಿಯಲ್ಲಿರಬಹುದಾದ ಸಾಧಕ ಭಾಧಕಗಳ ಕುರಿತಾಗಿತ್ತು.. ಆ ಕೋನದಲ್ಲಿ ಡೆವಲಪರುಗಳು ಮತ್ತು ಕನ್ಸಲ್ಟೆಂಟುಗಳು ಯೋಚಿಸುವುದು ಕಡಿಮೆ. ಇಲ್ಲಿ ಆಳದಲ್ಲಿರಬಹುದಾದ ನಿಜ ಮರ್ಫಿಯ ಭೂತ ಏನಿರಬಹುದೆಂಬ ಆಲೋಚನೆಯಲ್ಲೆ ತುಸು ಅನ್ಯಮನಸ್ಕ ದನಿಯಲ್ಲಿ, ‘ಬದಲಾಯಿಸಿದ ಮೇಲೆ ಮತ್ತೆ ಟೆಸ್ಟ್ ಮಾಡಿದಿರಾ?’ ಎಂದು ಕೇಳಿದ್ದ. ‘ ನಾನೂ, ಶರ್ಮ ಸಾರ್ ಆಫೀಸಿನಲ್ಲೆ ಸುಮಾರು ಸಾರಿ ಟೆಸ್ಟ್ ಮಾಡಿದ್ದೇವೆ..ನಥಿಂಗ್ ಟು ವರಿ ..ಇಟ್ ಇಸ್ ವರ್ಕಿಂಗ್ ಫೈನ್..ಸಾರ್ ‘ ಎಂದು ದೇವ್ ಭರವಸೆ ಕೊಟ್ಟರೂ ಯಾಕೊ ಶ್ರೀನಾಥನಿಗೆ ಸಮಾಧಾನವಿಲ್ಲದ ಕಳವಳ, ಆತಂಕದ ಭಾವ. ಆರನೇ ಇಂದ್ರಿಯದ ಸತತ ಜಾಗಟೆ ಏನೋ ಗುಮ್ಮನಿರುವುದನ್ನು ಸಂಕೇತಿಸುತ್ತಿರುವಂತೆ ತೀವ್ರವಾಗಿ ಕಾಡುತ್ತಿರುವ ಹಾಗೆ, ಆ ಚಿಂತನೆಯಲ್ಲೆ ಟ್ಯಾಕ್ಸಿ ವೇರ್ಹೌಸ್ ತಲುಪಿದ್ದರಿಂದ ಅವನ ಆಲೋಚನೆಗೂ ಅಲ್ಲೆ ತಾತ್ಕಾಲಿಕ ತಡೆ ಬಿತ್ತು… ಆದರೂ ಏನೊ ಅನಿರೀಕ್ಷಿತವನ್ನು ಎದುರಿಸಬೇಕಾದೀತೆಂಬ ಆತಂಕದಲ್ಲೆ ವೇರ್ಹೌಸ್ ಸೂಪರವೈಜರ ಕುನ್. ಸೋವಿಯ ಆಫೀಸಿನತ್ತ ಹೆಜ್ಜೆ ಹಾಕಿದ್ದ ಶ್ರೀನಾಥನನ್ನು ಹೆಚ್ಚುಕಡಿಮೆ ಓಡುವವನ ಹಾಗೆ ಹಿಂಬಾಲಿಸುತ್ತ ನಡೆದ ಸೌರಭ್ ದೇವ್. ಅವನಿಗೆ ತಾನೀ ವಿಷಯವನ್ನು ಶ್ರೀನಾಥನ ಹತ್ತಿರ ನೇರವಾಗಿ ಎತ್ತಬಾರದೆಂದು ಅನಿಸತೊಡಗಿತ್ತು..ಅದೇನಿದ್ದರೂ ಶರ್ಮನ ಕಾರ್ಯಕ್ಷೇತ್ರ, ಜವಾಬ್ದಾರಿ. ತಾನು ಸುಮ್ಮಸುಮ್ಮನೆ ಈ ವಿಷಯವನ್ನೆತ್ತಿ ‘ಚಾಡಿಕೋರ’ನೆಂಬ ಹಣೆಪಟ್ಟಿಯೊಂದಿಗೆ ಶರ್ಮಾಜಿಯ ಕೆಂಗಣ್ಣಿಗೆ ಗುರಿಯಾಗುವನೇನೊ ಎಂಬ ಭೀತಿ ಒಂದೆಡೆಯಾದರೆ, ಶ್ರೀನಾಥನನ್ನು ‘ಇಂಪ್ರೆಸ್’ ಮಾಡಲು ಹೋಗಿ ಇಲ್ಲದ ತಾಕಲಾಟಕ್ಕೆ ಸಿಕ್ಕಿಕೊಂಡೆನೇನೊ ಎನ್ನುವ ಕಳವಳ. ಆದರೆ ಅವನ ವೃತ್ತಿ ಜೀವನದಲ್ಲೇ ಇದೊಂದು ಮರೆಯಲಾಗದ ಪಾಠ ಕಲಿಸುವ ಅಧ್ಯಾಯವಾಗಲಿದೆಯೆಂದು ಆಗವನಿಗೆ ಗೊತ್ತಾಗಿರಲಿಲ್ಲ.

ಆ ವಿಶಾಲ ಸರಕಿನ ಉಗ್ರಾಣದ ಭೂಮಿಕೆಯಲ್ಲಿ, ಕುನ್. ಸೋವಿಯಿರುವ ಆಫೀಸು ಮಾತ್ರ ಏರ್ಕಂಡೀಷನರ್ ಇರುವ ಜಾಗ. ಮಿಕ್ಕೆಡೆಯೆಲ್ಲಾ ಬರೀ ಶೆಲ್ಪುಗಳು, ಸರಕುಗಳು, ಟ್ರಾಲಿಗಳು, ಪೋರ್ಕ್ ಲಿಪ್ಟುಗಳ ರೀತಿಯ ಸಲಕರಣೆ, ತರತರದ ಸರಕು ತುಂಬಿ ಜೋಡಿಸಿದ ರಟ್ಟಿನ, ಮರದ ಪೆಟ್ಟಿಗೆ ಇತ್ಯಾದಿಗಳಿಂದ ತುಂಬಿದ ವೇರ್ಹೌಸಿನ ಮಾಮೂಲಿ ಚಿತ್ರ. ಮೊಟ್ಟ ಮೊದಲ ಬಾರಿಗೆ ಇವನ್ನೆಲ್ಲ ನೋಡುತ್ತಿದ್ದ ಸೌರಭ್ ದೇವನಿಗೆ ಇದೆಲ್ಲ ಹೊಸತಾಗಿದ್ದ ಕಾರಣ ಕುತೂಹಲ – ತಾನು ಮಾಡುವ ಪ್ರೋಗ್ರಾಮಿಂಗ್ ಕೆಲಸ ಇಲ್ಲಿ ಹೇಗೆ ಹೊಂದಾಣಿಕೆಯಾಗುತ್ತಿದೆಯೆಂಬ ಸೋಜಿಗವೂ ಜತೆಜತೆಗೆ. ಆದರೆ ಶ್ರೀನಾಥನಿಗೆ ಇವೆಲ್ಲ ವೇರ್ಹೌಸಿನ ಮಾಮೂಲಿ ದೃಶ್ಯ. ಇಬ್ಬರೂ ಆಫೀಸಿನತ್ತ ನಡೆದು ಕುನ್. ಸೋವಿಯ ಕ್ಯಾಬಿನ್ ತೆರೆದು ಒಳಹೊಕ್ಕು ನೋಡಿದರೆ, ಅಲ್ಲಿ ಕುನ್. ಸೋವಿ ಕಾಣಿಸಲಿಲ್ಲ. ಅದೇ ಹೊತ್ತಿಗೆ ಅಲ್ಲಿ ಹೊರಗೆ ಬಾಗಿಲ ಹತ್ತಿರವಿದ್ದ ಫ್ಯಾಕ್ಸ್ ಮೆಷಿನ್ನೊಂದರ ಪಕ್ಕದಲ್ಲಿ ನಿಂತು ಯಾರಿಗೋ ಫ್ಯಾಕ್ಸು ಕಳಿಸುವ ಕೆಲಸ ಮಾಡುತ್ತಿದ್ದ ಥಾಯ್ ಹುಡುಗಿಯೊಬ್ಬಳು ಇವರಿಬ್ಬರನ್ನು ಕಂಡು ಯಥಾರೀತಿಯ ತಲೆ ಬಗ್ಗಿಸಿದ ‘ಥಾಯ್ ಮುಗುಳ್ನಗೆ’ ಬೀರಿ ಇವರಿಬ್ಬರು ಬಂದಿರುವ ಸುದ್ದಿ ತಿಳಿಸಲು ಹೊರಗೆ ಹೋಗುತ್ತಿದ್ದ ಅದೇ ಹೊತ್ತಿಗೆ ಸರಿಯಾಗಿ ಪಕ್ಕದ ಗಾಜಿನ ಪರದೆಯ ಮೂಲಕ ಇವರಿಬ್ಬರನ್ನು ದೂರದಿಂದಲೆ ಕಂಡು ಗುರುತಿಸಿ, ಗಾಳಿಯಲ್ಲಿ ಕೈ ಬೀಸಿ ಆಫೀಸಿನತ್ತ ಬರುತ್ತಿರುವ ಕುನ್. ಸೋವಿಯ ಆಕಾರ ಕಾಣಿಸಿದಾಗ, ತುಸು ನಿರಾಳರಾಗಿ ಇಬ್ಬರೂ ಅವನ ಬರುವಿಕೆಯನ್ನು ಕಾಯುತ್ತ ಅವನ ಖಾಲಿಯಿದ್ದ ಸೀಟಿನ ಎದುರಿನ ಕುರ್ಚಿಯಲ್ಲಿ ಆಸೀನರಾದರು. ಕುನ್. ಸೋವಿ ಒಳ್ಳೆಯ ವ್ಯಕ್ತಿ; ಇಡೀ ವೇರ್ಹೌಸಿನಲ್ಲಿ ಚೂರುಪಾರು ಇಂಗ್ಲೀಷ್ ಮಾತನಾಡಬಲ್ಲ ಸಾಮರ್ಥ್ಯವಿರುವವನೆಂದರೆ ಅವನೊಬ್ಬನೆ. ವ್ಯಾಕರಣದ ಸರಿಯಾದ ಅರಿವಿರದಿದ್ದರೂ ಸಂಭಾಷಣೆಯನ್ನು ಹೇಗೊ ನಿಭಾಯಿಸುವಷ್ಟು ಮಟ್ಟದ ಪಾಂಡಿತ್ಯ ಸಂಪಾದಿಸಿಕೊಂಡಿದ್ದವ. ಶ್ರೀನಾಥನಿಗೆ ಮೊದ ಮೊದಲಂತೂ ಅವನು ಮಾತನಾಡುವಾಗ ನಗದಿರಲು ಸಾಧ್ಯವೇ ಇಲ್ಲವೇನೊ ಎಂಬಷ್ಟು ಪೆದ್ದುಪೆದ್ದೆಂದೆನಿಸಿದರೂ, ಪದೆಪದೆ ಕೆಲವು ಭೇಟಿಗಳಾದ ನಂತರ ಅವನ ಮಾತಿನ ಶೈಲಿ, ರೀತಿ – ನೀತಿಗೆ ಒಗ್ಗಿಹೋದಂತಾಗಿತ್ತು. ಹೀಗಾಗಿ , ‘ಅವನು ಇನ್ ಮೈ ಒಪಿನಿಯನ್’ ಅನ್ನುವ ಬದಲು ‘ ಇನ್ ‘ದ’ ಮೈ ಒಪೀನಿಯನ್’ ಎಂದಾಗಲಾಗಲಿ, ‘ಐ ಡೊಂಟ್ ಅಗ್ರೀ’ ಅನ್ನುವ ಬದಲು ‘ ಐ ಡೊಂಟ್ ‘ನಾಟ್’ ಅಗ್ರೀ’ ಎಂದಾಗಲಾಗಲಿ, ಅಷ್ಟೇಕೆ ಬಹುತೇಕ ಬಟ್ಲರ ಥಾಯ್ ಗಳ ಹಾಗೆ ‘ಐ ಡೊಂಟ್ ಹ್ಯಾವ್’ ಅನ್ನು ‘ ಐ ನೋ ಹ್ಯಾವ್’ ಎನ್ನುವುದನ್ನು ಸೇರಿದಂತೆ – ಅವನ ಮಾತನ್ನು ತಕ್ಕಮಟ್ಟಿಗೆ ಅರ್ಥೈಸಿಕೊಳ್ಳುವ ಮಟ್ಟಿಗೆ ಪಳಗಿದ್ದ. ವೇರ್ಹೌಸಿನಲ್ಲಿ ಅವನನ್ನು ಬಿಟ್ಟು ಬೇರೆ ಯಾರ ಜತೆ ಸಂಭಾಷಣೆ ನಡೆಸಬೇಕಾದರೂ, ಅವನೊಬ್ಬನೆ ಅಲ್ಲಿರುವ ದುಭಾಷಿ. ಹೀಗಾಗಿ ಅವನನ್ನವಲಂಬಿಸದೆ ಬೇರೆ ಯಾವ ದಾರಿಯೂ ಇರಲಿಲ್ಲ.. ಈಗ ನೋಡಬೇಕೆಂದುಕೊಂಡಿರುವ ವಿಷಯಕ್ಕು ಇದೇ ಕಾರಣದಿಂದಲೆ ಕೇವಲ ಅವನನ್ನು ಮಾತ್ರವೆ ಕಾಯುವ ಅನಿವಾರ್ಯವುಂಟಾಗಿದ್ದುದ್ದು. ಅವನು ಆಫೀಸಿನೊಳಗೆ ಬರುತ್ತಲೆ ‘ಹಲೊ’ ‘ಸವಾಡೀಕಾಪ್’ ಗಳ ವಿನಿಮಯಾನಂತರ ಶ್ರೀನಾಥ ತಾವು ಬಂದ ಉದ್ದೇಶ ವಿವರಿಸಿದ. ಅದನ್ನೆಲ್ಲ ಕೇಳಿದ ಕುಂ. ಸೋವಿ ಅವನ ವಿವರಣೆಯೆಲ್ಲ ಮುಗಿದ ತಕ್ಷಣವೆ ಈ ಪ್ರಾಯೋಗಿಕತೆಯನ್ನು ನೋಡಲನುವಾಗುವಂತೆ ಅವರೆಲ್ಲರನ್ನು ಕಂಪ್ಯೂಟರಿರುವ ಆಫೀಸಿನತ್ತ ಕರೆದೊಯ್ದವನೆ ತಾನೆ ಕಂಪ್ಯೂಟರಿನ ಮುಂದೆ ಕುಳಿತ ಸಿಬ್ಬಂದಿಯ ಪಕ್ಕ ನಿಂತ, ಥಾಯ್ ಭಾಷೆಯಲ್ಲಿ ಸೂಕ್ತ ಸೂಚನೆ ನೀಡುವ ಸಲುವಾಗಿ. ಟೆಸ್ಟಿಂಗಿನಲ್ಲಿ ಆಫೀಸಿನಲ್ಲಿ ಪ್ರಮುಖವಾಗಿ ಭಾಗವಹಿಸಿದವನು ಅವನೇ ಆಗಿದ್ದ ಕಾರಣ, ಬೇರಾರಿಗೂ ಆ ಕುರಿತ ಪರಿಣಿತಿಯೂ ಇರಲಿಲ್ಲ. ಜತೆಗೆ ಸಿಬ್ಬಂದಿಯ ತರಬೇತಿಯ ಹೊಣೆಯೂ ಅವನದೆ ಆಗಿತ್ತು.

ಅದೊಂದು ಕಿರಿದಾದ ಓಣಿಯಂತಿದ್ದ ರೂಮು.. ಕೆಲವು ಹಗುರ ಲೋಹ ಮತ್ತು ಮಂದ ಗಾಜನ್ನು ಬಳಸಿ ತಾತ್ಕಾಲಿಕ ಗೋಡೆಗಳಂತೆ ಜೋಡಿಸಿ ಆಯತಾಕಾರದ ಕೊಠಡಿಯ ರೂಪ ಕೊಡಲಾಗಿತ್ತು. ಅಗಲ ಕಡಿಮೆಯಿದ್ದ ಕಾರಣ ಇಕ್ಕಟ್ಟಾಗಿದ್ದ ಜಾಗದಲ್ಲೆ ಗೋಡೆಗೆ ಸೇರಿದ ಬದಿಯಲ್ಲಿ ಉದ್ದಕ್ಕೂ ಕೆಲವು ಮೇಜುಗಳನ್ನು ಕೂರಿಸಿ ಅದರ ಮುಂದೆ ಮಿಕ್ಕ ಜಾಗದಲ್ಲಿ ಚಕ್ರ ಜೋಡಿಸಿದ ಕುರ್ಚಿಗಳನ್ನಿರಿಸಿತ್ತು. ಹೀಗಾಗಿ ಅಲ್ಲಿ ಒಬ್ಬರು ಕುಳಿತರೆ ಮತ್ತೊಬ್ಬರು ಸಲೀಸಾಗಿ ತೂರಲಾಗದ ಇಕ್ಕಟ್ಟು.. ಏನಿದ್ದರು ಬೆನ್ನ ಹಿಂದೆ ಸಾವರಿಸಿಕೊಂಡು ನಿಲ್ಲಬಹುದಷ್ಟೆ – ಅದೂ ಕುರ್ಚಿಯಲ್ಲಿ ಕುಳಿತವ ಅಲುಗಾಡದೆ ಜರುಗದೆ ನಿಭಾಯಿಸಿದರೆ. ಅಲ್ಲಿದ್ದ ಆ ರೀತಿಯ ಎರಡು ಕುರ್ಚಿಗಳ ಮುಂದೆಯೂ ಒಂದೊಂದು ಕಂಪ್ಯೂಟರು ಇತ್ತು – ಅಲ್ಲಿಂದಲೆ ವೇರ್ಹೌಸಿನ ಎಲ್ಲಾ ಕಂಪ್ಯೂಟರ್ ಕೆಲಸ ನಡೆಯಬೇಕಾಗಿದ್ದುದು. ಅದರ ಎಡತುದಿಯಲ್ಲಿ ಒಂದು ಓಬಿರಾಯನ ಕಾಲದ ಎಪ್ಸನ್ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರು; ಪಕ್ಕದಲ್ಲಿ ಕಂಪ್ಯೂಟರಿನಲ್ಲಿ suukta ಆಯ್ಕೆ ಆಯ್ದು ಮುದ್ರಿಸುವ ಗುಂಡಿ ಒತ್ತಿದರೆ, ಎಡಪಕ್ಕದಿಂದಲೆ ಪ್ರಿಂಟಿಂಗ್ ಆಗುತ್ತಾ ಕೈಗೆಟಕುವ ದೂರದಿಂದ ಹೊರಬರುವ ಹಾಗೆ.. ಬಲದ ತುದಿ ಮೂಲೆಯಲ್ಲಿ ಮತ್ತೊಂದು ನೆಟ್ವರ್ಕಿಗೆ ಸೇರದ ಸ್ಟ್ಯಾಂಡ್ ಅಲೋನ್ ಕಂಪ್ಯೂಟರ್.. ಅಲ್ಲಿ ಪ್ರತಿ ಸಾಗಾಣಿಕಾ ಸಿದ್ದತೆಗೆ ಬೇಕಾದ ಲೇಬಲ್ಲುಗಳನ್ನು ಪ್ರಿಂಟು ಮಾಡಿಕೊಳ್ಳಬಹುದಾದ ಅನುಕೂಲ. ಎಲ್ಲಾ ಸರಿಯಾಗಿ ನಡೆಯುತ್ತಿದ್ದರೆ ಕಂಪ್ಯೂಟರಿನಲ್ಲಿ ಆಯ್ಕೆಯ ಗುಂಡಿ ಒತ್ತಿ, ಎಡಗಡೆಯಿಂದ ಪ್ರಿಂಟಾದ ಇನ್ವಾಯ್ಸ್ , ಡೆಲಿವರಿ ನೋಟ್, ವೇ ಬಿಲ್ ಸಂಗ್ರಹಿಸಿ ಅದರ ಮೇಲಿನ ಸೂಚನೆಗನುಸಾರವಾಗಿ ಬಲ ಪಕ್ಕದಲ್ಲಿ ಲೇಬಲ್ ಮುದ್ರಿಸಿಕೊಂಡು ಮತ್ತೆ ಕಂಪ್ಯೂಟರಿಗೆ ವಾಪಸ್ ಬಂದು ಇನ್ನೊಂದು ಆಪ್ಶನ್ನಿನ್ನ ‘ಕನ್ಫರಮ್’ ಗುಂಡಿ ಒತ್ತಿದರೆ ಅದು ನೇರ ಆಚೆಯಿರುವ ಮತ್ತೊಂದು ಲೇಸರ್ ಪ್ರಿಂಟರಿನಲ್ಲಿ ‘ಪಿಕ್ ಸ್ಲಿಪ್’ ‘ಪುಟ್ ಅವೇ ಸ್ಲಿಪ್’ ಗಳನ್ನು ಮುದ್ರಿಸುತ್ತದೆ – ಅದು ಅಲ್ಲಿನ ಕೆಲಸದವರಿಗೆ ಸರಕನ್ನು ಭೌತಿಕವಾಗಿ ಆಯ್ದು ತರಲು ಅಥವಾ ಒಯ್ದು ಒಳಗಿಡಲು ಕೊಟ್ಟ ಸೂಚನೆ. ಇವೆಲ್ಲ ಕ್ರಿಯೆಗಳು ಒಂದು ಕೊಂಡಿಯ ಹಾಗೆ ಪರಸ್ಪರ ಅವಲಂಬಿಸಿದ್ದರೂ ನೂರೆಂಟು ಬಾರಿ ಓಡಾಡುವುದನ್ನು ತಪ್ಪಿಸಲು, ಒಂದಷ್ಟು ಆರ್ಡರುಗಳನ್ನು ಒಗ್ಗೂಡಿಸಿ ಗುಂಪು ಮಾಡಿ ಆಯಾ ಗುಂಪಿನ ದಾಖಲೆಗಳನ್ನು ಒಂದೆ ಬಾರಿಗೆ ಪ್ರಿಂಟು ಮಾಡಿಕೊಳ್ಳುವುದು ವೇರ್ಹೌಸಿನಲ್ಲಿ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಪದ್ಧತಿ – ಎಲ್ಲಾ ಇನ್ವಾಯ್ಸುಗಳು ಒಂದು ಕಂತೆಯಲಿ, ಎಲ್ಲಾ ಡೆಲಿವರಿ ನೋಟಿನ ಕಟ್ಟು ಎರಡನೆ ಕಂತೆಯಲ್ಲಿ, ಮೂರನೆ ಗುಂಪಲ್ಲಿ ಎಲ್ಲಾ ವೇ ಬಿಲ್ಲುಗಳ ಸಮೂಹ ಇತ್ಯಾದಿ. ಹೀಗೆ ಮಾಡುವುದರಿಂದಾಗುವ ಅನುಕೂಲವೆಂದರೆ ಬೆಳಿಗ್ಗೆಗೊಮ್ಮೆ ಮತ್ತು ಮಧ್ಯಾಹ್ನಕೊಮ್ಮೆ ಅರ್ಧರ್ಧ ಗಂಟೆ ಕಂಪ್ಯೂಟರಿನ ಮುಂದೆ ಕೂತು ಪ್ರಿಂಟು ಹಾಕಿಬಿಟ್ಟರೆ ಮುಗಿಯಿತು – ಮತ್ತೆ ಅಲ್ಲಿಗೆ ತಲೆ ಹಾಕದೆ ಅವರ ಪಾಡಿಗವರು ಸರಕು ಸಿದ್ದತೆ, ಸಾಗಾಣಿಕೆಯತ್ತ ಗಮನ ಹರಿಸಬಹುದು. ವೇರ್ಹೌಸಿನ ಕಾಂಟ್ರಾಕ್ಟ್ ಸಿಬ್ಬಂದಿಗಳಿಗೆ ಹೆಚ್ಚಿನ ಕಂಪ್ಯೂಟರ್ ಜ್ಞಾನ ಮತ್ತು ಅದಕ್ಕೆ ಬೇಕಾದ ಚಾಲೂಕು ಚುರುಕುತನ ಇರದ ಕಾರಣ, ಆದಷ್ಟು ಸರಳ ರೀತಿಯಲ್ಲಿ ಬಳಸಲು ಸಾಧ್ಯವಾಗುವಂತೆ ಕೆಲಸದ ವಿನ್ಯಾಸ ಮಾಡಿರುವುದು ಸಾಮಾನ್ಯವಾಗಿ ಕಾಣುವ ಅಂಶ. ಅಲ್ಲಿನ ಉಗ್ರಾಣದ ನಿಭಾವಣಾ ವ್ಯವಸ್ಥೆಯೂ ಇದಕ್ಕಿಂತ ಭಿನ್ನವಾಗೇನೂ ಇರಲಿಲ್ಲ. ಹಿಂದೊಮ್ಮೆ ಯಥಾಸ್ಥಿತಿಯ ಅಧ್ಯಯನದ ಹೊತ್ತಲ್ಲಿ ಇದನ್ನೆಲ್ಲಾ ಕಣ್ಣಾರೆ ಕಂಡೂ ಇದ್ದ ಶ್ರೀನಾಥ. ಈಗ ಮೂವರೂ ಆ ಕೊಠಡಿಯನ್ನು ಹೊಕ್ಕಾಗ ಅಲ್ಲಿದ್ದ ಸಿಬ್ಬಂದಿ ವರ್ಗದವನೊಬ್ಬ ಇವರನ್ನು ಕಂಡಾಗ ಎದ್ದು ನಿಲ್ಲಲು ಹೋಗಿದ್ದ . ಅವನನ್ನು ಕುನ್. ಸೋವಿ ಮತ್ತೆ ಅಲ್ಲೇ ಕೂರಿಸಿದ್ದ ಥಾಯ್ ಭಾಷೆಯಲ್ಲೇನೊ ಹೇಳುತ್ತ. ನಂತರ ಆ ಇಕ್ಕಟ್ಟಿನಲ್ಲೆ ಸಾವರಿಸಿಕೊಂಡು ನಿಂತಿದ್ದವರತ್ತ ತಿರುಗಿ, ಆ ಸಿಬ್ಬಂದಿಯೆ ಕಂಪ್ಯೂಟರಿನಲ್ಲಿ ಮಾಡಿ ತೋರಿಸುವನೆಂದಾಗ ಹಿಂದೆ ನಿಂತಿದ್ದ ಸೌರಭ್ ದೇವ್ ದಾರಿ ಮಾಡಿಕೊಂಡು ಆ ವ್ಯಕ್ತಿಯ ಪಕ್ಕಕ್ಕೆ ಹೋಗಿ ನಿಂತ – ಆ ಸಿಬ್ಬಂದಿಗೆ ಸಹಾಯಕನಂತೆ.

ಯಾಕೋ ಶ್ರೀನಾಥನಿಗೆ ಇನ್ನೂ ಸಮಾಧಾನವಿಲ್ಲ.. ಎಲ್ಲೋ ಏನೊ ಹದ ತಪ್ಪಿದ ಭಾವನೆ ಬಲವಾಗುತ್ತಿದ್ದರೂ ಇನ್ನು ಅದೇನಿರಬಹುದೆಂದು ಖಚಿತವಾಗಿ ಅರಿವಾಗುತ್ತಿಲ್ಲ.. ಅದು ಬರಿಯ ಅನಿಸಿಕೆಯಿರಬಹುದಷ್ಟೆ ಎಂದು ನಿರ್ಲಕ್ಷಿಸಿ ಪಕ್ಕಕ್ಕೆ ತಳ್ಳಲೂ ಆಗುತ್ತಿಲ್ಲ.. ಏನಿದ್ದರೂ ಈಗ ಗೊತ್ತಾಗಲೇಬೇಕಲ್ಲ? ಎಂದು ಆಲೋಚಿಸುತ್ತಲೆ ಮುಂದೆ ನಡೆಯಲಿರುವುದನ್ನು ಎದುರು ನೋಡತೊಡಗಿದ. ಸೌರಭ್ ದೇವ್ ಆ ಸಿಬ್ಬಂದಿಯ ಮುಂದೆ ಪರೀಕ್ಷಣಾ ಆವೃತ್ತಿಯ ಪರದೆ ತೆರೆದಿಟ್ಟು ಕೊಟ್ಟ. ನಂತರ ಕುನ್. ಸೋವಿ ಕೈಯಲ್ಲೊಂದು ಕಾಗದ ಹಿಡಿದುಕೊಂಡು ಅದರಲ್ಲಿರುವ ಸೂಚನೆಯ ಪ್ರಕಾರವೆ ಒಂದೊಂದೆ ಹೆಜ್ಜೆಯಲ್ಲಿ ಏನು ಮಾಡಬೇಕೆಂದು ಸೂಚನೆ ಕೊಡತೊಡಗಿದ – ನಡುನಡುವೆ ಅನುಮಾನವಿದ್ದೆಡೆಯೆಲ್ಲ ಸೌರಭ್ ದೇವ್ ನಿಂದ ಸಂಶಯ ಪರಿಹರಿಸಿಕೊಳ್ಳುತ್ತ. ಅದನ್ನು ನೋಡುತ್ತಾ ಹೋದಂತೆ ಶ್ರೀನಾಥನಿಗೆ ದೇವ್ ಹೇಳಿದ್ದ ‘ತೀರಾ ಇತ್ತೀಚೆಗೆ ಮಾಡಿದ್ದ’ ಬದಲಾವಣೆಯ ಸ್ಪಷ್ಟ ಪ್ರತ್ಯಕ್ಷ ಚಿತ್ರಣ ಸಿಗತೊಡಗಿತು. ಎಲ್ಲವನ್ನು ಸರಳಿಕರಿಸಿ ಸುಲಭಗೊಳಿಸುವ ಆಶಯದಲ್ಲಿ ಮೂರು ಬೇರೆ ಬೇರೆಯಾಗಿದ್ದ ಬಿಡಿ ಟ್ರಾನ್ಸ್ಯಾಕ್ಷನ್ನುಗಳ ಬದಲಿಗೆ ಈಗ ಒಂದೆ ಒಂದು ಟ್ರಾನ್ಸ್ಯಾಕ್ಷನ್ ಕೋಡ್ ಮಾಡಿ ಮೂರು ಬಾರಿ ಮಾಡಬೇಕಿದ್ದ ಕೆಲಸವನ್ನು ಒಂದು ಬಾರಿಗೆ ಸಾಕಾಗುವಂತೆ ಬದಲಾಯಿಸಿಬಿಟ್ಟಿದ್ದರು. ಅಂದರೆ ಆ ಕೆಲಸಗಾರ ಕೆಲವು ಮಾಹಿತಿಗಳನ್ನು ಟೈಪ್ ಮಾಡಿ ಎಂಟರ ಬಟನ್ ಒತ್ತುತ್ತಿದ್ದ ಹಾಗೆಯೇ ‘ ಡು ಯು ವಾಂಟ್ ಟು ಪ್ರಿಂಟ್ ಇನ್ವಾಯ್ಸ್, ಡೆಲಿವರೀ ನೋಟ್, ವೇ ಬಿಲ್ ಫಾರ್ ದಿಸ್ ಆರ್ಡರ ?’ ಎಂದು ಪ್ರಶ್ನೆಯ ರೂಪದಲ್ಲಿ ಒಂದು ಮಾಹಿತಿ ಕಿಟಕಿ ತೆರೆದುಕೊಳ್ಳುತ್ತಿತ್ತು . ಆ ಕೆಲಸಗಾರ ‘ಎಸ್’ ಎಂದೊತ್ತಿದರೆ ಸಾಕು ಪಕ್ಕದಲ್ಲಿರುವ ಒಂದು ಪ್ರಿಂಟರಿನಿಂದ ಮೂರು ಫಾರಂಗಳು ಒಂದರ ಹಿಂದೆ ಒಂದು ಮುದ್ರಿತವಾಗಿ ಬರಬೇಕು ಏಕಕಾಲದಲ್ಲಿ. ಅದೇ ಹೊತ್ತಲ್ಲಿ ನಾಲ್ಕನೆಯದಾದ ಪಿಕ್-ಸ್ಲಿಪ್ ಹೊರಗಿನ ಮತ್ತೊಂದು ಉಗ್ರಾಣದಲ್ಲಿರುವ ಲೇಸರ್ ಪ್ರಿಂಟರಿನಲ್ಲಿ ಪ್ರಿಂಟಾಗಬೇಕು. ಈ ಲೆಕ್ಕಾಚಾರದಲ್ಲಿ ಸಿಸ್ಟಮ್ಮಿನಲ್ಲಿ ಮಾಡಬೇಕಾದ ಕೆಲಸ ಕೇವಲ ಮೂರನೇ ಒಂದು ಭಾಗಕ್ಕೆ ಇಳಿಯುವುದರಿಂದ ದಕ್ಷತೆ ಹೆಚುವುದು ಮಾತ್ರವಲ್ಲದೆ ತುಂಬಾ ಸರಳವಾಗಿ, ಸುಲಲಿತವಾಗಿ ಕೆಲಸ ಮುಗಿದುಹೋಗುತ್ತದೆ… ಹೀಗಾಗಿ ಯೂಸರುಗಳ ಕಡೆಯಿಂದ ತುಂಬಾ ಒಳ್ಳೆಯ, ಉತ್ತೇಜಕ ಪ್ರತಿಕ್ರಿಯೆ ದೊರಕುತ್ತದೆ.. ಮ್ಯಾನೇಜ್ಮೆಂಟಿಗೆ ಸಿಸ್ಟಮ್ಮಿನಿಂದಾದ ಅನುಕೂಲಗಳನ್ನು ಎತ್ತಿ ತೋರಿಸಲು ಕೇಸು ಸಿಕ್ಕಂತೆ ಆಗುತ್ತದೆ.. ಹೀಗೆಲ್ಲಾ ಯೋಚಿಸಿಯೇ ಶರ್ಮ ಮತ್ತು ದೇವ್ ಈ ಚತುರೋಪಾಯವನ್ನು ಹುಡುಕಿರಬೇಕು.. ಹೀಗೆ ಈ ಬದಲಾವಣೆಯ ಹಿನ್ನಲೆ ಮುನ್ನಲೆಯ ಕುರಿತು ಶ್ರೀನಾಥನ ತಲೆಯೊಳಗೆಲ್ಲ ತರತರದ ಆಲೋಚನೆಗಳು ಪರಿಭ್ರಮಿಸುತ್ತಿದ್ದ ಹೊತ್ತಲ್ಲೆ ಆ ಸಿಬ್ಬಂದಿ ತನ್ನ ಮೊದಲ ಎಂಟ್ರಿ ಮುಗಿಸಿ ‘ಎಸ್’ ಅನ್ನು ಒತ್ತಿದ್ದ. ಅದರ ಹಿಂದೆಯೆ ಪ್ರಿಂಟರಿನ ಹೆಡ್ ಕರಕರ ಸದ್ದು ಮಾಡುತ್ತಾ ಒಂದರ ಹಿಂದೆ ಒಂದರಂತೆ ಮೂರು ದಾಖಲೆಗಳನ್ನು ಮುದ್ರಿಸಿ ಹಾಕಿತು ತನ್ಹೊಟ್ಟೆಯಲಿಟ್ಟಿದ್ದ ಪೇಪರಿನ ತುದಿಯನ್ನು ಹಂತಹಂತವಾಗಿ ನುಂಗುತ್ತ. ಆ ಪ್ರಿಂಟರು ಹೊರ ಹಾಕಿದ ಮೂರು ಫಾರಂಗಳನ್ನು ಬಗ್ಗಿ ಕೈಗೆತ್ತಿಕೊಂಡ ಸೌರಭ್ ದೇವ್ ‘ ನಾನು ಮೊದಲೇ ಹೇಳಿರಲಿಲ್ಲವೇ?’ ಎನ್ನುವ ಹಾಗೆ ಹೆಮ್ಮೆಯ ಗೆಲುವಿನ ನಗೆ ಬೀರುತ್ತ ಶ್ರೀನಾಥನತ್ತ ದಿಟ್ಟಿಸಿದ. ಆಗಲೂ ಕೂಡ ಕೇವಲ ಮಾಮೂಲಿ ಪ್ರಿಂಟಿಂಗ್ ಪೇಪರಿನಲ್ಲಿ ಮುದ್ರಿಸಿದ್ದ ಪ್ರತಿಗಳನ್ನು ನೋಡುತ್ತಿದ್ದಂತೆಯೆ, ಸರಕ್ಕನೆ ಏನೋ ಮಿಂಚು ಹೊಳೆದಂತೆ ಶ್ರೀನಾಥನಿಗೆ ಇಷ್ಟು ಹೊತ್ತು ಮರೆಯಲ್ಲಿ ಅವಿತುಕೊಂಡು ಕಾಡುತ್ತಿದ್ದ ಮರ್ಫಿ ಯಾವುದೆಂದು ಬಹುತೇಕ ಅರ್ಥವಾಗಿಹೋಯ್ತು. ಆದರೂ ಪೂರ್ತಿಯಾಗಿ ಖಚಿತವಾಗುವ ತನಕ ಅಂತಿಮ ನಿಲುವಿಗೆ ಬರಬಾರದೆಂದುಕೊಂಡು ಪಕ್ಕದಲ್ಲಿದ್ದ ಕುನ್. ಸೋವಿಯತ್ತ ತಿರುಗಿ ವೇರ್ಹೌಸಿನಲ್ಲಿ ಒಟ್ಟು ಎಷ್ಟು ಪ್ರಿಂಟರುಗಳಿವೆಯೆಂದು ಮತ್ತೊಮ್ನೆ ಕೇಳಿ ಖಚಿತಪಡಿಸಿಕೊಂಡ; ಹಾಗೆಯೇ ಈ ರೂಮಿನಲ್ಲಿ ಇದೊಂದೆ ಪ್ರಿಂಟರು ಇರುವುದನ್ನು ಖಾತರಿ ಮಾಡಿಕೊಂಡಾದ ಮೇಲೆ ಮತ್ತೊಂದು ಬಾರಿ ಅದೇ ಸಿಬ್ಬಂದಿಯ ಕೈಲಿ ಮತ್ತದೇ ಚಕ್ರವನ್ನು ಪುನರಾವರ್ತಿಸಲು ಹೇಳಿ ಅದಕ್ಕೆ ತಗಲುವ ಸಮಯವನ್ನು ಗುರುತು ಹಾಕಿಕೊಂಡ.. ಅದೆಲ್ಲ ಆದ ಮೇಲೆ ಮಿಕ್ಕ ಚರ್ಚೆಯನ್ನು ಕುನ್. ಸೋವಿಯ ಆಫೀಸಿನಲ್ಲಿ ಮುಂದುವರೆಸೋಣವೆಂದು ಹೇಳಿ ಹೊರಗೆ ಬಂದ. ಇಷ್ಟು ಸೊಗಸಾದ ಪ್ರೋಗ್ರಾಮ್ ಬರೆದು ದಕ್ಷತೆಯನ್ನು (ಪ್ರೊಡಕ್ಟಿವಿಟಿ) ಹೆಚ್ಚಿಸುವ ಸಾಧನೆ ಮಾಡಿದ್ದರೂ ತನ್ನ ಪ್ರಾಜೆಕ್ಟ್ ಮ್ಯಾನೇಜರನೇಕೆ ಮ್ಲಾನವದನನಾಗಿ, ಪೆಚ್ಚು ಮುಖ ಹಾಕಿಕೊಂಡು ಹೊರಬಂದನೆಂದು ಅರಿವಾಗದೆ ಅವನ ಮುಖವನ್ನೇ ನೋಡುತ್ತ ಅವನನ್ನು ಹೊಂಬಾಲಿಸಿ ನಡೆದ ಸೌರಬ್ ದೇವ್ ನಿಗೆ ತನ್ನ ವೃತ್ತಿ ಜೀವನದಲ್ಲೇ ಅದೊಂದು ದೊಡ್ಡ ಪಾಠ ಕಲಿಸುವ ದಿನವಾಗಲಿದೆಯೆಂಬ ಕಿಂಚಿತ್ ಅರಿವೂ ಆಗಲೂ ಇರಲಿಲ್ಲ!

ಕುನ್. ಸೋವಿಯ ಆಫೀಸು ತಲುಪುವ ತನಕ ಯಾರೂ ಮಾತಾಡಲಿಲ್ಲ. ಬಂದು ಕೂರುವ ಹೊತ್ತಿಗೆ ಸರಿಯಾಗಿ ಟೇಬಲ್ಲಿನ ಮೇಲೆ ಖಾಲಿ ಕಪ್ಪು ಸಾಸರಿನ ಜತೆ ಫ್ಲಾಸ್ಕಿನಲಿಟ್ಟ ಕಾಫಿ ಕಾಯುತ್ತಿತ್ತು. ಮೂವ್ವರಿಗು ಕಾಫಿ ಬಗ್ಗಿಸುತ್ತಿದ್ದ ಕುನ್. ಸೋವಿಯನ್ನು ಶ್ರೀನಾಥ ಅವರು ಬಳಸುವ ಇನ್ವಾಯ್ಸ್, ಡೆಲಿವರಿ ನೋಟ್ ಮತ್ತು ವೇ ಬಿಲ್ ಗಳ ತಲಾ ಒಂದೊಂದೊಂದು ನಮೂನೆ (ಸ್ಯಾಂಪಲ್) ತರಿಸಲು ಹೇಳಿ ಕಾಫಿ ಹೀರುತ್ತ ಕುಳಿತ. ಅವನನಿಸಿಕೆ ನಿಜವಾಗಿದ್ದರೆ, ಗೋಲೈವಿಗೆ ಎರಡೆ ದಿನಗಳ ದೂರವಿರುವಾಗ ದೊಡ್ಡದೊಂದು ಕಂಟಕವೆ ಕುತ್ತಿಗೆಗೆ ಗಂಟು ಹಾಕಿಕೊಳ್ಳಲಿದ್ದ ಕಾರಣ, ಯಾಂತ್ರಿಕವಾಗಿ ಕುಡಿಯುತ್ತಿದ್ದರೂ ಮನಸೆಲ್ಲ ಎಲ್ಲೊ ಕಳುವಾದಂತೆ ಅನ್ಯಮನಸ್ಕ ಭಾವ ಎದ್ದು ಕಾಣುತ್ತಿತ್ತು. ಅಷ್ಟು ಹೊತ್ತಿಗೆ ಕುನ್. ಸೋವಿಯ ಪೋನ್ ಕರೆಯನುಸಾರ ವೇರ್ಹೌಸಿನ ಹುಡುಗನೊಬ್ಬ ಮೂರು ನಮೂನೆಗಳನ್ನು ತಂದುಕೊಟ್ಟು ಹೋದ. ಅದನ್ನು ಒಂದೊಂದಾಗಿ ಕೈಗೆತ್ತಿಕೊಂಡು ಪರಿಶೀಲಿಸತೊಡಗಿದ ಶ್ರೀನಾಥ, ಪರೀಕ್ಷಣೆ ಮುಗಿದ ನಂತರ ಅದನ್ನು ಒಂದೊಂದಾಗೆ ದೇವ್ ಕೈಗೆ ರವಾನಿಸುತ್ತ. ಅದರಲ್ಲಿ ದೊಡ್ಡ ಗಾತ್ರದ್ದೆಂದರೆ ಇನ್ವಾಯ್ಸ್; ‘ಏ೪’ ಗಾತ್ರದ ‘ಲ್ಯಾಂಡ್ಸ್ಕೇಪಿನ’ ಆರು ಪ್ರತಿಗಳುಳ್ಳ ಫಾರಂ. ಡೆಲಿವರೀ ನೋಟ್ ಅದೇ ಗಾತ್ರವಾದರೂ ‘ಪೋರ್ಟ್ರೇಟ್’ ಆಯಾಮದಲ್ಲಿದ್ದುದು – ನಾಲ್ಕು ಪ್ರತಿಯುಳ್ಳದ್ದು – ಇನ್ವಾಯ್ಸನ್ನು ಲಂಬಕ್ಕೆ ಸರಿಯಾಗಿ ತಿರುಗಿಸಿ ಹಿಡಿದರೆ ಡೆಲಿವರೀ ನೋಟಿನ ಆಕಾರಕ್ಕೆ ಹೊಂದಿಕೆಯಾಗುವಂತೆ. ಇನ್ನು ವೇ ಬಿಲ್, ಡೆಲಿವರೀ ನೋಟ್ ನ ಅರ್ಧದಷ್ಟು ‘ ‘ಏ೫’ ಗಾತ್ರದ್ದು – ಮೂರು ಪ್ರತಿಯುಳ್ಳದ್ದು. ಮೂರರ ಆಕಾರ, ಗಾತ್ರ ಮತ್ತು ಪ್ರತಿಗಳ ಸಂಖ್ಯೆ ಸಂಪೂರ್ಣ ವಿಭಿನ್ನವಾದದ್ದು. ಮೂರನ್ನು ದೇವ್ ಕೈಗಿತ್ತ ಮೇಲೂ ಅವನ್ನು ಈಗಾಗಲೇ ಸಾಕಷ್ಟು ಬಾರಿ ನೋಡಿದ್ದವನಿಗೆ ಯಾಕೆ ಅವನ್ನು ಮತ್ತೆ ತೋರಿಸುತ್ತಿದ್ದಾನೆಂದು ಗೊತ್ತಾಗಲಿಲ್ಲ. ಸರಿ, ಇವನಿಗೆ ಪ್ರೋಗ್ರಾಮಿಂಗಿನಲ್ಲಿ ಸದಾ ಮುಳುಗಿ ಹೋಗಿ ಸಾಮಾನ್ಯ ವ್ಯವಹಾರ ಪ್ರಜ್ಞೆಯೇ ಮಾಯವಾಗಿ ಹೋದಂತಿದೆ.. ಸ್ವಲ್ಪ ಚುರುಕು ಮುಟ್ಟಿಸುವುದೆ ವಾಸಿಯೆನಿಸಿ, ಮತ್ತೊಮ್ಮೆ ಕಂಪ್ಯೂಟರು ರೂಮಿಗೆ ವಾಪಸ್ಸು ಹೋಗಿ ಆ ನಿಜವಾದ ಫಾರಂಗಳ ಮೇಲೆ ಒಂದರ ಹಿಂದೆ ಒಂದರಂತೆ ಮತ್ತೆರಡು ಬಾರಿ ಪ್ರಿಂಟು ಹಾಕಿ , ಪ್ರತಿಯೊಂದಕ್ಕು ತೆಗೆದುಕೊಂಡ ಒಟ್ಟಾರೆ ಆವರ್ತನ ಸಮಯವನ್ನು ಗುರುತು ಹಾಕಿಕೊಂಡು ಬರುವಂತೆ ಹೇಳಿದ, ಪ್ರಾಯೋಗಿಕವಾಗಿ ನೋಡಿದ ಮೇಲಾದರೂ ನಿಜವಾದ ತೊಂದರೆಯೇನೆಂದು ಅರಿವಾಗಬಹುದೆಂಬ ಆಶಯದಲ್ಲಿ. ಕುನ್. ಸೋವಿಯೊಂದಿಗೆ ದೇವ್ ಅಲ್ಲಿಗೆ ಹೋಗುತ್ತಿದ್ದಂತೆ, ಅವರು ಮತ್ತೆ ವಾಪಸ್ಸು ಬರುವ ತನಕ ಈ ಸಂಕಷ್ಟ ಪರಿಹಾರಕ್ಕೆ ಸಾಧ್ಯವಿರುವ ಮಾರ್ಗಗಳನ್ನೆಲ್ಲ ಆಲೋಚಿಸುತ್ತಾ ಕುಳಿತ ಶ್ರೀನಾಥ. ಈ ಬಾರಿ ಕೇವಲ ಎರಡೆ ಪ್ರತಿಯ ಆವರ್ತನವಾಗಿದ್ದರೂ, ಅವರಿಬ್ಬರೂ ವಾಪಸ್ಸು ಬರಲೇ ಅರ್ಧ ಗಂಟೆಗು ಹೆಚ್ಚು ಕಾಲ ಹಿಡಿದಿತ್ತು. ಆದರೆ ಈ ಬಾರಿ ದೇವ್ ಮುಖ ಪೂರ್ತಿ ಪೆಚ್ಚಾಗಿದ್ದುದು ಮಾತ್ರ ದೂರದಿಂದಲೆ ಕಾಣುತ್ತಿತ್ತು. ಪ್ರಾಯಶಃ ತಾನು ಏಕೆ ಇಷ್ಟೊಂದು ಬಾಧಿತನಾಗಿ, ಚಿಂತಿತನಾಗಿರುವನೆಂದು ಈಗಲಾದರೂ ಅರಿವಾಗಿರಬಹುದು ಎಂದುಕೊಳ್ಳುವಷ್ಟರಲ್ಲಿ ಇಬ್ಬರೂ ಬಂದು ಮಾತನಾಡದೆ ಸುಮ್ಮನೆ ಕುಳಿತುಕೊಂಡರು. ಈ ಬಾರೀ ಕುನ್. ಸೋವಿಯ ಮುಖದಲ್ಲೂ ಆತಂಕ ಎದ್ದು ಕಾಣುತ್ತಿತ್ತು. ಅಲ್ಲಿಗೆ ಈಗ ಇಬ್ಬರಿಗೂ ನಿಜವಾದ ತೊಡಕೇನೆಂದು ಮನವರಿಕೆಯಾಗಿರಬೇಕೆಂದು ಮನದಲ್ಲೇ ತೀರ್ಮಾನಿಸಿಕೊಂಡರೂ, ಅದರ ನಿಜವಾದ ಏಟಿನ ಗಾತ್ರ ಅರಿವಾಗಿದೆಯೇ ಇಲ್ಲವೇ ಎಂದು ಗೊತ್ತಿರಲಿಲ್ಲ. ಈ ಪರಿಸ್ಥಿತಿ ಗೋ ಲೈವ್ ದಿನಾಂಕವನ್ನೆ ಬದಲಿಸಬೇಕಾದ ಒತ್ತಡಕ್ಕೂ ಕಾರಣವಾಗಬಹುದೆಂದು ಅವರು ಊಹಿಸಿರಲಾರರಾದ ಕಾರಣ, ಸಂಧರ್ಭದ ತೀವ್ರತೆಯನ್ನು ಅವರಿಗೆ ಗೊತ್ತಾಗುವಂತೆ ಮಾಡಬೇಕಿತ್ತು – ತೀರಾ ಆಘಾತಕರವಾಗದ ರೀತಿಯಲ್ಲಿ. ಹಾಗೆಯೇ, ಇದರಿಂದ ಪಾರಾಗಲು ಅಥವಾ ತೀವ್ರತೆಯನ್ನು ತಪ್ಪಿಸಬಲ್ಲ ದಾರಿಯನ್ನು ಹುಡುಕಲು ಯತ್ನಿಸಬೇಕಾಗಿತ್ತು. ಜತೆಯಲ್ಲಿಯೆ, ಗದ್ದಲದಲ್ಲಿ ಗೊಂದಲಕ್ಕೆ ಬಿದ್ದು ತಾರುಮಾರಾಗದ ಹಾಗೆ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿತ್ತು. ಆ ಸಾಧ್ಯತೆಯ ಎಲ್ಲಾ ದಾರಿಗಳನ್ನು ಮನದ ಮೂಸೆಯಲ್ಲಿ ಮೊಗುಚಿ ಹಾಕುತ್ತ ಬೆಪ್ಪನಂತೆ ಕುಳಿತೆ ಇದ್ದ ಶ್ರೀನಾಥ. ತುಸು ಹೊತ್ತು ರಾಜ್ಯವಾಳುತ್ತಿದ್ದ ಮೌನವನ್ನು ಮೊದಲು ಮುರಿದ ಕುನ್. ಸೋವಿ ತನ್ನ ಎಂದಿನ ಥಾಯಾಂಗ್ಲದಲ್ಲಿ, ‘ ಇನ್ ‘ದ’ ನೌ, ವಿ ಪ್ರಿಂಟ್ ಫೈವ್ ಮಿನಿಟ್ ಒನ್ ‘ದ’ ಸೆಟ್ ಡಾಕ್ಯುಮೆಂಟ್ಸ್.. ಬಟ್ ಇನ್ ‘ದ’ ಟುಮಾರೋ ಇಟ್ ಟೇಕಿಂಗ್ ಟ್ವೆಂಟಿ ಫೈವ್ ಮಿನಿಟ್ಸ್’ ಎಂದ ಚಿಂತಿತನಾದವನ ದನಿಯಲ್ಲಿ.

(ಇನ್ನೂ ಇದೆ)
__________

(ಪರಿಭ್ರಮಣ..20ರ ಕೊಂಡಿ – https://nageshamysore.wordpress.com/4058-2/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s