00203. ಕೃತಿಚೌರ್ಯದ ಕಸರತ್ತು

00203. ಕೃತಿಚೌರ್ಯದ ಕಸರತ್ತು
______________________

ಹೇಳಿ ಕೇಳಿ ನಮ್ಮದು ರಾಮ ಕೃಷ್ಣರನ್ನು ಪೂಜಿಸುವ ಸಂತತಿ. ನೀತಿ ನಿಯತ್ತಿನ ವ್ಯಕ್ತಿತ್ವಗಳು ಇದ್ದಷ್ಟೆ ತುಂಟ ಕೃಷ್ಣನಂತಹ ಹುಡುಗಾಟದ ವ್ಯಕ್ತಿತ್ವಗಳು ಇಲ್ಲಿ ಅಗಾಧ. ಹೇಳಿ ಕೇಳಿ ಇಬ್ಬರೂ ಪುರಾಣ ಪುರುಷರೆ, ಇಬ್ಬರೂ ಅವರವರ ರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪ್ರಭಾವ ಬೀರಿದವರು, ಈಗಲೂ ಬೀರುತ್ತಾ ನಡೆದಿರುವವರೆ. ಹೀಗಾಗಿ ಒಂದೆಡೆ ರಾಮನ ಪಾತ್ರದ ಶ್ರೇಷ್ಠತೆಯನ್ನು ಎಲ್ಲರಲ್ಲೂ ಕಾಣಬಯಸುವಷ್ಟೆ ಸಹಜವಾಗಿ, ಮತ್ತೊಂದೆಡೆ ಕೃಷ್ಣನ ರೀತಿಯ ಹೋಲಿಕೆಯಡಿ ಅದೇ ರೀತಿಯ ತುಂಟಾಟ, ಹುಡುಗಾಟಿಕೆಗಳನ್ನು ಕ್ಷಮಿಸಿಬಿಡುವ ಉದಾರ ಜನರೂ ಇಲ್ಲಿನ ವೈಶಿಷ್ಠ್ಯ. ಹೀಗಾಗಿಯೆ ಏನೊ ಸಣ್ಣ ಪುಟ್ಟ ಕಳ್ಳತನ , ಮೋಸ, ವಂಚನೆಗಳನ್ನು ಮಾಡುವವರಿಗೆ ಏಮಾರಿಸಲು ಜನ ಸಿಗುವುದು ಸುಲಭ. ಮೋಸ ಹೋದವರೂ ಹಾಳಾಗಲಿ ಬಿಡು ಎಂದು ಶಪಿಸಿ ಸುಮ್ಮನಾಗಿಬಿಡುವುದು ಅಷ್ಟೆ ಸಹಜ. ಈ ಸರಿ, ಬೆಸದ ವ್ಯಕ್ತಿತ್ವದ ಮನೋಭಾವಕ್ಕೆ ಆ ಮಹಾಪುರುಷರ ವ್ಯಕ್ತಿತ್ವ ಎಷ್ಟು ಪ್ರಭಾವ ಬೀರಿದೆಯೊ ಇಲ್ಲವೊ ಎನ್ನುವುದು ಚರ್ಚಾರ್ಹ ವಿಷಯವಾದರೂ, ಅನೈಚ್ಚಿಕವಾಗಿ ಅವರ ವ್ಯಕ್ತಿತ್ವದ ಬೇರೆ ಬೇರೆ ಅಂಶಗಳು ಪ್ರತಿಯೊಬ್ಬರಲ್ಲೂ ಬಗೆಬಗೆಯಾಗಿ ಬೀರಿರಬಹುದಾದ ಪ್ರಭಾವವನ್ನು ಅಲ್ಲಗಳೆಯಲಾಗದು. ಒಬ್ಬ ವ್ಯಕ್ತಿಯಲ್ಲಿ ತುಸು ರಾಮನ, ತುಸು ಕೃಷ್ಣನ ಹಾಗೂ ಅದೇ ರೀತಿಯ ಮತ್ತಲವಾರು ಪಾತ್ರಗಳ (ಬೇರೆಯದೆ ಮತಧರ್ಮಗಳ ವ್ಯಕ್ತಿತ್ವ / ಪ್ರಭಾವವೂ ಸೇರಿದಂತೆ) ಕಲಸು ಮೇಲೋಗರ ಒಟ್ಟಾರೆಯಾಗಿ ಪ್ರಭಾವ ಬೀರಿರುವುದು ಸುಲಭದಲ್ಲಿ ಕಾಣಸಿಗುವ ಅಂಶ. ಬಹುಶಃ ಇದರಿಂದಲೆ ಬೇರೆ ಬೇರೆ ಸಂಧರ್ಭಗಳಲ್ಲಿ ಬೇರೆ ಬೇರೆ ರೀತಿಯ ಗುಣ ನಡುವಳಿಕೆಗಳನ್ನು ಕಾಣಬಹುದು – ಪ್ರತಿಯೊಬ್ಬನಲ್ಲು. ಋಣಾತ್ಮಕವೆ ಇರದ ಬರಿಯ ಧನಾತ್ಮಕ ವ್ಯಕ್ತಿತ್ವ ಕಾಣ ಸಿಗುವುದು ಹೇಗೆ ಅಪರೂಪವೊ, ಅದೇ ರೀತಿ ಬರಿಯ ಋಣಾತ್ಮಕ ವ್ಯಕ್ತಿತ್ವವೂ ಸಾಮಾನ್ಯ ಜೀವನದಲ್ಲಿ ಅಪರೂಪ. ಸಾಧಾರಣ ಎಲ್ಲರೂ ಎರಡರ ಸಮ್ಮಿಶ್ರ ರೂಪಗಳೆ – ಸಂಯೋಜನೆಯ ಮಿಶ್ರಣದ ಪರಿಮಾಣದಲಷ್ಟೆ ವ್ಯತ್ಯಾಸ.

ಈ ದಿನದ ಕದಿಯುವ ಹವ್ಯಾಸದ ಕುರಿತಾದ ಕವಿ ನಾಗರಾಜರ ಬರಹ ಕೃತಿಚೌರ್ಯದ ಕುರಿತು ಆಲೋಚಿಸುವಂತೆ ಮಾಡುತ್ತಲೆ ಈ ಮೇಲಿನ ಭಾವನೆ ಮೂಡಿಬಂತು. ಅದನ್ನೆ ಸಾಲುಗಳಾಗಿಸಿ ಪ್ರಕಟಿಸುತ್ತಿದ್ದೇನೆ ಕವಿ ನಾಗರಾಜರಿಗೆ ಕೃತಜ್ಞತೆ ಹೇಳುತ್ತ. ಅಂದಹಾಗೆ ಕವಿಗಳೆ, ಇದು ಒಂದು ರೀತಿಯಲ್ಲಿ ನಿಮ್ಮ ‘ಕೃತಿಚೌರ್ಯ’ ಎನ್ನುವ ಐಡಿಯಾದ ಕೃತಿಚೌರ್ಯ 🙂

ಕೃತಿಚೌರ್ಯದ ಕಸರತ್ತು
__________________

ಕುರುಚಲು ಹುಲುಸಿರಬೇಕು
ಗಡ್ಡದ ಬೆಳೆ ಚೌರಕೆ
ಕಿಸೆಯೊಳು ಕಾಸಿರಬೇಕು
ಕೆರೆವ ಬ್ಲೇಡ ಕಾಯಕಕೆ ||

ಅದೆಲ್ಲ ಏನು ಬೇಡ ಬಿಡಿ
ಹೊಸ ಕವಿಯಾಗಲಿಕ್ಕೆ
ಕಥೆ ಕವಿತೆ ಎಲ್ಲಿದೆ ನೋಡಿ
ಗುಟ್ಟಾಗಿ ಕದಿಯುವುದಕ್ಕೆ ||

ಕದ್ದದೆಲ್ಲ ಆಗುವುದೆ ಪ್ರಕಟ
ಎನ್ನುವ ಅನುಮಾನ ಏಕೆ?
ಫೇಸ್ಬುಕ್ಕು ಬ್ಲಾಗು ಆಡಿದ್ದೆ ಆಟ
ಕಳ್ಳ ಸಂಪಾದನೆಗು ಬೆಳಕೆ ||

ದಿಢೀರ ಕೀರ್ತಿ ರಾತ್ರೋರಾತ್ರಿ
ನೀತಿ ನೈತಿಕತೆ ತೊಡಕು
ಹೇಗಾದರು ಹೆಸರು ಬೇಕು ಖಾತ್ರಿ
ಬರಿ ಅಡ್ಡದಾರಿಯ ಹುಡುಕು ||

ಯಾರದೊ ಬಸಿರ ಕದ್ದು ಮಗು
ತನದೆನ್ನುವುದು ಸುಲಭ
ಲಾಲನೆ ಪಾಲನೆ ಪೋಷಣೆ ಕೂಗು
ಲಘುವಲ್ಲ ದೊರಕದು ಲಾಭ ||

ಹೆತ್ತವರ ಮನ ವಿಲವಿಲ ಕದನ
ಶಿಕ್ಷಿಸೊ ಕ್ಷಮಿಸೊ ಔದಾರ್ಯ
ನಂಬುವುದು ಹೇಗೊ ಜಗದೀ ಜನ
ನೇಮ ನಿಯತ್ತುಗಳೆ ಅನಾರ್ಯ ||

ಬಿಡಿ, ಹುಂಬ ಧೈರ್ಯವಿರಬೇಕು
ಪರರ ಕೃತಿಯ ಚೌರ್ಯಕೆ
ಹಾಳು ಭಂಡ ಧೈರ್ಯವು ಬೇಕು
ವಿಕೃತ ಮನದಾ ಶೌರ್ಯಕೆ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Nagesha Mysore

ಕೃತಿಚೌರ್ಯದ ಕಸರತ್ತು, ಕೃತಿಚೌರ್ಯ, ಕಸರತ್ತು, ನಾಗೇಶ ಮೈಸೂರು, ನಾಗೇಶ, ಮೈಸೂರು, ನಾಗೇಶಮೈಸೂರು, nagesha mysore, nageshamysore, nagesha, mysore,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s