00204. ಋತು ಚಿತ್ತ ಬದಲಾಗುವತ್ತ

00204. ಋತು ಚಿತ್ತ ಬದಲಾಗುವತ್ತ
________________________

ಬಿರುಸಿನ ಬೇಸಿಗೆ ಎಲ್ಲೆಡೆ ಹಾಸಿಕೊಂಡು ಬೆವರಿಸುತ್ತ, ಬಾಯರಿಸುತ್ತ ‘ಹಾಳು ಬಿಸಿಲೆ’ ಎಂದು ನಿಡುಸುಯ್ದು ಬೈದುಕೊಂಡಿರುವ ಹೊತ್ತಿನಲ್ಲೇ, ವಿಪರ್ಯಾಸವೆಂಬಂತೆ ಸುತ್ತಲ ಪ್ರಕೃತಿಯ ವನರಾಜಿ ವಸಂತನ ಆಗಮನದೊಂದಿಗೆ ಹೊಸತಿನುಡುಗೆ ತೊಡುಗೆ ತೊಟ್ಟು ನಲಿಯುವ ರೀತಿಯೆ ಅನನ್ಯ. ಅಲ್ಲಿಯ ತನಕ ಬರಿ ಎಲೆಗಳಿಂದಷ್ಟೆ ತುಂಬಿಕೊಂಡಿದ್ದ ಗಿಡ ಮರಗಳೆಲ್ಲ ಮೈ ತುಂಬಿಕೊಂಡು ಹಸಿರಾಗಿ ನಳನಳಿಸುವುದಷ್ಟೆ ಅಲ್ಲದೆ ಅದುವರೆಗೂ ಕಾಣಿಸದಿದ್ದ ಬಣ್ಣ ಬಣ್ಣದ ಹೂಗಳು ಮೊಗ್ಗುಗಳಾಗಿ ಇಣುಕುತ್ತ , ಕಾಯಾಗಿ, ಹಣ್ಣಾಗುವ ದೃಶ್ಯ ಮತ್ತಾ ಪ್ರಕ್ರಿಯೆಯಲ್ಲೆ ಇಡಿ ನಿಸರ್ಗಕ್ಕೆ ಹಚ್ಚುವ ಬಣ್ಣದ ಲೇಪನ ಮನಮೋಹಕ. ಅರಳಿ ಬಾಡುವ ಅಲ್ಪ ಕಾಲದಲ್ಲೆ ಮನವ ಸೆರೆ ಹಿಡಿಯುವ ಈ ಕುಸುಮ ಕುಂಚ ರಮಣೀಯ ನೋಟ ಪ್ರಕೃತಿಯೊಡಲಲಿ ನಡೆದಿರುವ ನಿಸರ್ಗ ಸಹಜ ಸೃಷ್ಟಿಕ್ರಿಯೆಯ ಪ್ರತೀಕವೂ ಹೌದು. ಸೃಷ್ಟಿ ಬದಲಾವಣೆಯ ಚಿತ್ತ; ಬದಲಾವಣೆ ಅನಾವರಣವಾಗುವ, ಪ್ರಕಟವಾಗುವ ಭೌತಿಕ ವಾಹನ. ಈ ಜಗದಲಿ ಬದಲಾವಣೆಯೊಂದೆ ನಿರಂತರವೆಂಬ ಸಂಕೇತ.

ಪ್ರಕೃತಿಯ ಬದಲಾವಣೆಯ ನಿಯಮಕ್ಕೆ ಮಾರು ಹೋದಂತೆ ಜೀವಿಗಳ ಬಾಹ್ಯ ಜಗ, ಅದರಲ್ಲೂ ಮನುಜ ಜೀವನದ ಪರಿ ಬದಲಾವಣೆಯ ರಾಗ ಹಾಡುತ್ತ ಅಸಾಧಾರಣ ವೇಗದಲ್ಲಿ ಮುನ್ನುಗ್ಗುತ್ತಿದೆ. ಎಲ್ಲೆಡೆಯೂ ಬದಲಾವಣೆಯೊಂದೆ ಶಾಶ್ವತವೆಂದು ಸಾರುತ್ತ, ಅಡಿಯಿಂದ ಮುಡಿಯತನಕ ಎಲ್ಲವನ್ನು ಬದಲಿಸುತ್ತ ನಡೆದಿದೆ – ತಾವೂ ಸಹ ನಿಸರ್ಗವನ್ನೇ ಅನುಸರಿಸುತ್ತಿದ್ದೇವೆ ಎನ್ನುವಂತೆ. ಪ್ರಕೃತಿಯ ರೀತಿ ಬದಲಾಗುತ್ತಿದೆ ಈ ಜಗ ಅನ್ನುವುದೇನೋ ನಿಜ – ಆದರೆ ಒಂದೆ ಒಂದು ವ್ಯತ್ಯಾಸ; ಪ್ರಕೃತಿ ಬದಲಾದಂತೆ ಮೇಲ್ನೋಟಕ್ಕೆ ಅನಿಸಿದರೂ, ನಿಜದಲ್ಲಿ ಅದೊಂದು ಆವರ್ತನ ಚಕ್ರವನ್ನು ಅನುಕರಿಸುತ್ತಾ ಪ್ರತಿ ಋತುವಿನಲ್ಲೂ ಅದೇ ಚಕ್ರವನ್ನು ಪುನರಾವರ್ತಿಸುತ್ತಿರುತ್ತದೆ. ಅದನ್ನು ಅನುಕರಿಸುತ್ತಿದ್ದೇವೆನ್ನುವ ಭ್ರಮೆಯಲ್ಲಿ ಮಾನವ ಜಗ ಮತ್ತೆ ಮರಳಲಾಗದ ಬದಲಾವಣೆಯ ಸರಳ ರೇಖೆಯಲ್ಲಿ ಮುನ್ನುಗ್ಗುತ್ತಿದೆ – ಏಕಮುಖ ವಾಹನ ರಸ್ತೆಯ ಹಾಗೆ. ಋತುಗಳೇನೊ ಪ್ರಕೃತಿಯನ್ನು ಜತನದಲ್ಲಿಡುವ ವಾಗ್ದಾನ ಕೊಟ್ಟಂತೆ ಎಚ್ಚರಿಕೆಯ ಆವರ್ತನದಲ್ಲಿ ಮರುಕಳಿಸಿಕೊಂಡು ಸಾಗುತ್ತಿದೆ. ಆದರೆ ಒಂದೇ ನೇರದಲ್ಲಿ ಹಿಂದಿರುಗಲಾಗದಂತೆ ನಡೆದಿರುವ ನಮ್ಮ ಕಥೆ ಮತ್ತು ಭವಿಷ್ಯ? ಭವಿತ ಕಾಲದ ಕನ್ನಡಿಯಲ್ಲಿ ಕಾದಷ್ಟೆ ನೋಡಬೇಕೇನೊ…!

ಆ ಕಾಯುವಿಕೆಯ ನಡುವೆಯೆ ಬದಲಾಗುವ ಋತು ಚಿತ್ತದ ಒಂದು ಪಲುಕು, ಮೆಲುಕು ಈ ಕೆಳಗಿನ ಕವನದ ರೂಪದಲ್ಲಿ 🙂

ಋತು ಚಿತ್ತ ಬದಲಾಗುವತ್ತ
_________________

ಬದಲಾವಣೆಯಾಗುವ ಸತತ
ಸಂಭ್ರಮಿಸಿ ಇಣುಕುವ ಋತು ಚಿತ್ತ
ಹೂವಾಗರಳಿ ಎಲೆ ಕೊಂಬೆ ಟೊಂಗೆ ಟಿಸಿಲು
ಕಾಯ ಹಣ್ಣಾಗಿಸುವ ಎಳೆ ಬಲಿತ ಬಿಸಿಲು ||

ಬಿರು ಬೇಸಿಗೆ ಬಿರುಸಲು ಸಂತ
ಬಿರ ಬಿರನೆ ಸವರಿ ‘ಜುಂ’ ವಸಂತ
ರತಿ ಮನ್ಮಥರೇರಿದ ನಿಸರ್ಗ ರಥ ಸವಾರಿ
ಪ್ರಕೃತಿಗು ಕೆರಳಿಸುತ ಕಾಮನ ರಹದಾರಿ ||

ಚೆಲ್ಲಾಟವಾಡುತ ಸೃಷ್ಟಿಯ ಮುನ್ನುಡಿ
ಅಂಗಜನ ಜತೆಯಲಿ ರತಿ ಮತಿ ಕನ್ನಡಿ
ಅನುಕರಿಸುತ ಪ್ರಕೃತಿ ತಿಲ್ಲಾನ ಮಹೋತ್ಸವ
ನೋಡೊಂದೆರಡೆ ಗಳಿಗೆ ಒಡಲ ಹೂವಾಗಿ ಕಾವ ||

ಬಂಜೆಯಂತೆ ಭಣಗುಟ್ಟುತಿದ್ದ ವನಸಿರಿ
ಸಂಜೆ ರಾಗ ರತಿಯ ಮುಸುಕ ಹೊದ್ದ ಪರಿ
ಛೇಡನೆ ಕಾಮನೋ ಅನುರಾಗ ರತಿಯೋ ಪ್ರಕೃತಿ
ಇದ್ದಕಿದ್ದಂತೆ ಮಾಯಾ ವನರಾಜಿಯೆಲ್ಲಾ ವಿಕೃತಿ ||

ಋತುವಿಗು ಗೊತ್ತು ಬದಲಾವಣೆ ಕಾಲಧರ್ಮ
ಹುಲುಸಿರುವಾಗಲೆ ಮೆಲ್ಲುವುದದರ ಮರ್ಮ
ಮಿಂಚಿ ಮಾಯವಾದರೂ ಮೆಲುಕು ಹಾಕುವ ಸೊಗ
ಮದ್ದಾಗಿ ಮರಳಿ ಬರುವ ತನಕ ಕಾಯುವ ಜಗ ||

————————————————————————————
ನಾಗೇಶ ಮೈಸೂರು, ಸಿಂಗಪುರ
————————————————————————————-

ಋತು, ಋತುಚಿತ್ತ, ಬದಲಾಗುವತ್ತ, ನಾಗೇಶ, ನಾಗೇಶಮೈಸೂರು, ನಾಗೇಶ ಮೈಸೂರು, nagesha, nageshamysore, nagesha mysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s