00210. ಕಥೆ: ಪರಿಭ್ರಮಣ..(23)

00210. ಕಥೆ: ಪರಿಭ್ರಮಣ..(23)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00210. ಕಥೆ: ಪರಿಭ್ರಮಣ..(23)

( ಪರಿಭ್ರಮಣ..22ರ ಕೊಂಡಿ – https://nageshamysore.wordpress.com/00209-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-22/ )

ಸುಮಾರು ಹೊತ್ತು ಅಲುಗದ ಶಿಲೆಯಂತೆ ತದೇಕಚಿತ್ತನಾಗಿ ದಿಟ್ಟಿಸುತ್ತ ಕುಳಿತ ಶ್ರೀನಾಥನಿಗೆ ಈಗ ಎಲ್ಲಿಲ್ಲದ ಕಳವಳ ಆರಂಭವಾದಂತಾಗಿ ಇದ್ದಕ್ಕಿದ್ದಂತೆ ಹೊಟ್ಟೆಯಲ್ಲೇನೊ ಶೂನ್ಯ ಆವರಿಸಿಕೊಂಡ ಭಾವ ಮೈತುಂಬಿಕೊಂಡಿತ್ತು. ಒಳಗಿನ ಹೇಳಿಕೊಳ್ಳಲಾಗದ ಯಾವುದೊ ಸಂಕಟ ವೇದನೆಯ ರೂಪ ತಾಳಿಕೊಂಡು ಬಂದಂತೆ, ಇಡಿ ದೇಹದ ಒಳಗೆಲ್ಲಾ ಅಂಗಗಳು ಕಳಚಿ ಬಿದ್ದುಹೋದ ಹಾಗೆ ಭ್ರಮೆಯುಡಿಸಿ, ಖಾಲಿಖಾಲಿಯಾದ ಕಳವಳದ ಅನುಭೂತಿಯಾಗಿ ಕಾಡತೊಡಗಿತು. ಹಾಗೆ ಯೋಚಿಸುತ್ತಾ ಹೋದಂತೆ ತಾನು ಅದ್ಹೇಗೆ ಈ ವಿಚಿತ್ರ ಸಂಕಟದಲ್ಲಿ ಸಿಕ್ಕಿಬಿದ್ದೆ ಎಂದರಿವಾಗದೆ ದಿಗ್ಭ್ರಮೆಯಾವರಿಸಿಕೊಂಡಿತ್ತು. ಯಾವುದೋ ಗಳಿಗೆಯ ತೆವಲಿನಲ್ಲಿ, ಏನೋ ಪುರುಷಾರ್ಥವನ್ನು ಸಾಧಿಸಿ ತೋರಿಸಿಬಿಡಬೇಕೆಂಬ ಹಮ್ಮಿನಲ್ಲಿ, ಏನೊ ಮಾಡಲು ಹೋಗಿ ಏನೊ ಆಗಿಹೋದ ಸ್ವಯಂಕೃತಾಪರಾಧದ ಖೇದ ಮನವಿಡಿ ಆವರಿಸಿಕೊಂಡು, ‘ ಛೆ! ಛೆ! ಆ ಹೊತ್ತಿನ ಆವೇಶಾಮಿಷಕ್ಕೆ ಸಿಕ್ಕಿ ದುಡುಕಬಾರದಿತ್ತು..ಕನಿಷ್ಠ ಮುಂಜಾಗರೂಕತಾ ಸುರಕ್ಷೆಯನ್ನು ಬಳಸುವಷ್ಟು ಸಾಮಾನ್ಯ ಜ್ಞಾನವೂ ಇರದ ಎಡಬಿಡಂಗಿಯಾಗಿಬಿಟ್ಟೆನೆ? ಹಾಳಾಗಲಿ, ತಾನಂತೂ ಪ್ರಣಯೋನ್ಮತ್ತತೆಯಲ್ಲಿ ಮೈ ಮರೆತೆನೆಂದುಕೊಂಡರೂ ಅವಳಿಗಾದರೂ ಆ ಪ್ರಜ್ಞೆ ಇರಬಾರದಿತ್ತೆ? ‘ ಎಂದೆಲ್ಲ ಪೇಚಾಡತೊಡಗಿತು. ಆದರೆ ‘ಮಿಂಚಿ ಹೋದ ಮೇಲೆ ಚಿಂತಿಸಿ ಫಲವೇನು?’ ಎಂಬಂತೆ ಈಗ ಬಿತ್ತಿದ ಬೆಳೆ ಮೊಳೆತ ಸಸಿಯಾಗಿ, ಫಸಲಾಗಿ ಕೈ ಸೇರುವ ಬಿಸಿ ಕೆಂಡವಾಗಿ ಕೂತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ‘ಇದರ ಪರಿಣಾಮ ಏನಾಗುವುದೊ? ಇದನ್ನವಳು ಬಹಿರಂಗ ಪಡಿಸಿ ರಂಪಾಟವೆಬ್ಬಿಸಿಬಿಟ್ಟರೆ, ಅದರಲ್ಲೂ ಈ ಆಫೀಸಿನ ವಾತಾವರಣದಲ್ಲಿ ಎಲ್ಲಾ ಸಹೋದ್ಯೋಗಿಗಳ ಮುಂದೆ ಅದನ್ನು ಹೇಗೆ ಎದುರಿಸುವುದೊ?’ ಎಂದು ನೆನೆದಾಗ ಎದೆ ಝಿಲ್ಲೆಂದು ನಡುಗಿ, ನಖಶಿಖಾಂತ ಶೀತಲ ಹಿಮದ ಅದೃಶ್ಯ ರೇಖೆಯೊಂದು ಮಿಂಚಿನ ಛಳುಕು ಹೊಡೆದಂತೆ ಬೆನ್ನುಹುರಿಯ ಮೂಲಕ ಹಾದು ಇಡೀ ದೇಹವನ್ನು ಕ್ಷಣಕಾಲ ಥರಥರನೆ ಕಂಪಿಸುವಂತೆ ಮಾಡಿ ಇಡೀ ಮೈಯನ್ನೆಲ್ಲ ಅನೈಚ್ಛಿಕಾವಾದಷ್ಟೆ ಅನಿರೀಕ್ಷಿತವಾಗಿ ಅದುರಿಸಿಬಿಟ್ಟಿತು. ಯಾಕೊ ಆಫೀಸಿನ ಆಲೋಚನೆ ಬರುತ್ತಿದ್ದಂತೆ ಇಷ್ಟು ದಿನ ಅವನತ್ತ ಗೌರವ ಭಾವದಿಂದ ನೋಡುತ್ತಿದ್ದ ಅಲ್ಲಿನ ಸಹೋದ್ಯೋಗಿಗಳಲ್ಲಿ ಯಾವ ರೀತಿಯ ವಿಚಿತ್ರ ತಿರಸ್ಕಾರದ ಭಾವ ಮೂಡಬಹುದೆಂದು ನೆನೆಸಿಯೆ ನಾಚಿಕೆಯಿಂದ ಕುಗ್ಗಿ ಪಾತಾಳಕ್ಕೆ ಹೂತ ಹೋದ ಭಾವನೆಯುಂಟಾಗತೊಡಗಿತು.. ಅಲ್ಲಿನವರಿರಲಿ, ತನ್ನ ಕೆಳಗಿನ ತನ್ನ ಸ್ವಂತ ತಂಡದೆದುರಿಗೆ ತನ್ನ ಕಥೆ ಏನಾಗಬೇಡ? ಅವರೆಲ್ಲರ ಮುಂದಿನ ಕೀಳರಿಮೆಯನ್ನು ಗೆಲ್ಲಲೆಂದಲ್ಲವೆ ತಾನಷ್ಟೊಂದು ಒದ್ದಾಡಿ, ವಿಲಪಿಸಿ ಈ ಹಾದಿ ಹಿಡಿದದ್ದು? ಈ ಸುದ್ದಿ ಅವರ ಕಿವಿ ಸೇರುತ್ತಿದ್ದಂತೆ ತಾನವರ ಕಣ್ಣಲ್ಲಿ ಇನ್ನಷ್ಟು ಅವನತಿ, ಅಧೋಗತಿಗಿಳಿಯುವುದಂತೂ ಖಚಿತ! ತೂಕಡಿಸುವವನಿಗೆ ಹಾಸಿಕೊಟ್ಟಂತೆ, ಮೊದಲೆ ಬೆನ್ನ ಹಿಂದೆ ಗುಟ್ಟಾಗಿ ಆಡಿಕೊಳ್ಳುತ್ತಿದ್ದವರು ಈಗ ರಾಜಾರೋಷವಾಗಿ ಅವಹೇಳನ ಮಾಡಿದರೂ ಅಚ್ಚರಿಯೇನಿಲ್ಲ..’

ಇನ್ನು ಆ ಮಟ್ಟಕ್ಕೆ ಹೋದ ಮೇಲೆ ಇಲ್ಲಿನ ಟಾಪ್ ಮ್ಯಾನೇಜ್ಮೆಂಟಿಗೆ ಈ ವಿಷಯ ಗೊತ್ತಾಗದೆ ಇರುವುದೆ? ಅಲ್ಲಿಗೆ ತಲುಪಿದ ಮೇಲಂತೂ ತನ್ನ ಕಥೆ ಮುಗಿದಂತೆ.. ಇದು ಹೇಳಿ ಕೇಳಿ ಶಿಸ್ತು ಮತ್ತು ನಡತೆಯ ವಿಷಯ..ಡಿಸಿಪ್ಲೀನ್ ಮತ್ತು ಕ್ಯಾರೆಕ್ಟರಿನ ವಿಷಯದಲ್ಲಿ, ಅದರಲ್ಲೂ ಅದು ಒಬ್ಬ ಹೆಂಗಸಿಗೆ ಸಂಬಂಧಿಸಿದ್ದೆಂದರೆ ಸರಿ ತಪ್ಪಿನ ವಿವೇಚನೆಯಲ್ಲಿ ಸೂಕ್ಷ್ಮಜ್ಞತೆಯ ಸಿಂಹಪಾಲು ಸ್ವಾಭಾವಿಕವಾಗಿ ಹೆಣ್ಣಿನ ಪರ ಕಾಳಜಿ ವಹಿಸುವುದು ಸಹಜವೆ… ಅದರಲ್ಲೂ ಪರಿಸ್ಥಿತಿ ಗರ್ಭಿಣಿಯಾಗುವ ಮಟ್ಟಕ್ಕೆ ಮುಟ್ಟಿದೆಯೆಂದರೆ ಸಾಮಾನ್ಯ ವಿಷಯವೆ? ಇದನ್ನು ಮ್ಯಾನೇಜ್ಮೆಂಟು ಕಡೆಗಣಿಸುವಂತಿಲ್ಲವಾದ ಕಾರಣ ಕಠಿಣ ಶಿಸ್ತಿನ ಕ್ರಮ ಕೈಗೊಳ್ಳಲೇಬೇಕು.. ಆದರೆ ತಾನೂ ಈ ಕಂಪನಿಯ ನೇರ ನೌಕರಿಯಲಿಲ್ಲದ ಕಾರಣ ಅವರು ಮೊದಲು ಈ ವಿಷಯವನ್ನು ಸಿಂಗಪುರದಲ್ಲಿರುವ ರೀಜನಲ್ ಮ್ಯಾನೇಜರ ಶ್ರೀನಿವಾಸ ಪ್ರಭುವಿನ ಕಿವಿಗೆ ಹಾಕುತ್ತಾರೆ.. ಅವನೋ, ಮೊದಲೆ ತನ್ನ ಕಂಡರೆ ಕಿಡಿ ಕಾರುವವನು.. ತಾನಿಲ್ಲಿಗೆ ಪ್ರಾಜೆಕ್ಟ್ ಮ್ಯಾನೇಜರನಾಗಿ ಬರುವುದೇ ಅವನಿಗೆ ಸುತರಾಂ ಇಷ್ಟವಿರಲಿಲ್ಲ.. ಕಸ್ಟಮರನ ಕಡೆಯ ಖಚಿತ ಬೇಡಿಕೆಯನ್ನು ಪ್ರತಿರೋಧಿಸಲಾಗದೆ, ಮತ್ತು ಭಾರತದಲಿದ್ದ ಹೆಡ್ ಆಫೀಸಿನ ಬಾಸುಗಳಿಗೆ ಎದುರಾಡಲಾಗದೆ ಬಿಸಿ ತುಪ್ಪವನ್ನು ನುಂಗಿದಂತೆ ತಂಡಕ್ಕೆ ಶ್ರೀನಾಥನ ಆಯ್ಕೆಯನ್ನು ಒಪ್ಪಿಕೊಂಡಿದ್ದವನಾತ… ಈಗಲೂ ತಂಡದಲ್ಲಿರುವ ಕೆಲವರು ಅವನ ಖಾಸಾ ಪಾರ್ಟಿಗಳೆ – ಹಾಗೆ ನೋಡಿದರೆ ವೇರ್ಹೌಸಿನ ಫಾರಂಗಳನ್ನು ಗಬ್ಬೆಬ್ಬಿಸಿದ್ದ ಸಂಜಯ ಶರ್ಮನೂ ಅವನ ನೆಚ್ಚಿನ ಭಂಟರಲ್ಲೊಬ್ಬನಾಗಿದ್ದವ.. ಅದರಿಂದಾಗಿಯೆ ಏನೊ ಶರ್ಮನ ಕೆಲಸಗಳ ಫಲಿತದತ್ತ ಪೂರ್ತಿ ನಂಬದೆ ಒಂದು ಸಡಿಲ ಅನುಮಾನದ ದೃಷ್ಟಿಯಿಟ್ಟುಕೊಂಡೆ ಬಂದಿದ್ದು .. ಈಗ ಈ ಸುದ್ದಿ ಶ್ರೀನಿವಾಸ ಪ್ರಭುವಿನ ಕಿವಿಗೆ ಬಿದ್ದರೆ ಪೂರ್ತಿ ಕಥೆಯೆ ಮುಗಿದಂತೆ; ಸುದ್ದಿ ಕೇಳುತ್ತಿದ್ದಂತೆ ಕುಣಿದು ಕುಪ್ಪಳಿಸಿಕೊಂಡು ಮೊದಲು ಭಾರತದ ಹೆಡ್ ಆಫೀಸಿನ ಬಾಸಿಗೆ ಸುದ್ದಿ ತಲುಪಿಸುತ್ತಾನೆ..’ ನಾನು ಮೊದಲೆ ಹೇಳಿರಲಿಲ್ಲವೇ?’ ಅನ್ನುವ ಗರ್ವಭಾವದಲ್ಲಿ.. ಅಲ್ಲಿಗೆಲ್ಲವೂ ಮುಗಿದಂತೆ ಲೆಕ್ಕ; ತನ್ನ ಕೆರಿಯರಿನ ಮೇಲೆ ಪೂರ್ತಿ ಚಪ್ಪಡಿ ಎಳೆದುಕೊಂಡ ಹಾಗೆಯೆ.. ಅಲ್ಲಿಂದಾಚೆಗೆ ತಾನೆ ರಾಜೀನಾಮೆ ಕೊಟ್ಟರೂ ಒಂದೆ , ಕಂಪನಿಯವರೆ ಕೆಲಸದಿಂದ ಕಿತ್ತೆಸೆದರೂ ಒಂದೆ.. ಅದುವರೆವಿಗೂ ಕಟ್ಟಿಕೊಂಡು ಬಂದಿದ್ದ ಸ್ವಪ್ನಸೌಧವೆಲ್ಲ ಒಂದೆ ಬಾರಿಗೆ ನೆಲಸಮವಾಗಿ ಧೂಳಿಪಟವಾದಂತೆ ಲೆಕ್ಕ.. ಥತ್! ಈ ಹಾಳು ಸ್ವಯಂ ಪ್ರತಿಷ್ಠೆ … ಹಿಂದಿನ ಪ್ರಾಜೆಕ್ಟಿನಲ್ಲಿ ಶ್ರೀನಿವಾಸ ಪ್ರಭುವಿಗೆ ಹೊಂದಿಕೊಂಡು ಎಲ್ಲದಕ್ಕೂ ‘ಹೂಂ’ ಗುಟ್ಟಿಕೊಂಡು ‘ ಎಸ್ ಬಾಸ್’ ಎಂದಿದ್ದರೆ, ಈ ಮುಸುಕಿನೊಳಗಿನ ದ್ವೇಷಕ್ಕೆ ಕಾರಣವಿರುತ್ತಿರಲಿಲ್ಲ. ಇಂತಹ ಸಂಕಟದ ಸಮಯದಲ್ಲಿ ದಮ್ಮಯ್ಯಗುಡ್ಡೆ ಹಾಕಿ ಕೈಯೋ ಕಾಲೋ ಹಿಡಿದು ಪಾರಾಗಲಾದರೂ ಯತ್ನಿಸಬಹುದಿತ್ತು.. ಈಗಂತೂ ಅದು ಸುತರಾಂ ಸಾಧ್ಯವಿಲ್ಲದ ಪರಿಸ್ಥಿತಿ… ಇದೆಲ್ಲಾ ಕೂಲಂಕುಷವಾಗಿ ಯೋಚಿಸಿದರೆ ಈಗುಳಿದಿರುವ ಒಂದೆ ಒಂದು ಬಹುತೇಕ ಸುರಕ್ಷಿತವಾದ ದಾರಿ ಎಂದರೆ – ಕುನ್. ಸು ಮಾತ್ರ. ಅವಳಿಂದ ಈ ವಿಷಯ ಹೊರಗೆ ಬೀಳದಿದ್ದರೆ ಮಿಕ್ಕ ಯಾವ ಭೀತಿಯೂ, ಕಂಟಕವೂ ಕಾಡುವುದಿಲ್ಲ… ಹೌದು, ಹೇಗಾದರೂ ಅವಳನ್ನು ಓಲೈಸಿ ರಮಿಸುವುದೊಂದೆ ಈಗುಳಿದ ದಾರಿ.. ಅವಳನ್ನು ನೋಡಿದರೆ, ಈಗಾಗಲೆ ಒಂದಷ್ಟು ಹಣ ಲಪಟಾಯಿಸಿಕೊಂಡಿದ್ದಾಳೆ.. ಈಗ ಈ ನೆಪವೂ ಸೇರಿ ಬಲು ದೊಡ್ಡ ಬಲೆ ಬೀಸಲು ಸಲೀಸಾದಂತಾಯಿತು ಅವಳಿಗೆ… ತನ್ನನ್ನು ಸರಿಯಾಗಿ ದೋಚಲು ಈ ಸಂಧರ್ಭವನ್ನವಳು ಸೂಕ್ತವಾಗಿ ಬಳಸಿಕೊಳ್ಳದೆ ಬಿಟ್ಟಾಳೆಯೆ?

ಹಾಳಾದ ದುರ್ವಿಧಿ.. ತನ್ನ ಸೋಗಲಾಡಿತನ, ಅನಿಯಂತ್ರಿತ ಸ್ವೇಚ್ಛಾಚಾರದಿಂದಾಗಿ ಈ ಇಕ್ಕಟ್ಟಿನಲ್ಲಿ ಹೇಗೊ ಸಿಕ್ಕಿ ಹಾಕಿಕೊಂಡದ್ದಾಯಿತು.. ಮುಳ್ಳಿನ ಮೇಲೆ ಬಿದ್ದ ಬಿಳಿ ಮಡಿ ಪಂಚೆಯ ಹಾಗೆ ಹುಷಾರಾಗಿ ಬಿಡಿಸಿಕೊಳ್ಳಬೇಕು, ಜತನದಿಂದ. ಅವಳಿಗೆ ಬಾಯಿ ಬಿಚ್ಚದಂತಿರಲು ಒಂದಷ್ಟು ಹೆಚ್ಚು ದುಡ್ಡು ಖರ್ಚು ಮಾಡಬೇಕಾಗಿ ಬಂದರೂ ಸರಿ, ಹೇಗಾದರೂ ಈ ಇಕ್ಕಟ್ಟಿನಿಂದ ಪಾರಾಗಿಬಿಡಬೇಕು ನಾಜೂಕಿನಿಂದ.. ಮತ್ತೆಂದು ಈ ತರದ ಚಕ್ರವ್ಯೂಹಕ್ಕೆ ಸಿಲುಕಿಕೊಂಡು ನರಳದಂತೆ ನಿಗಾ ವಹಿಸಬೇಕು. ಹೌದು, ಸದ್ಯಕ್ಕಿದೊಂದೆ ಮಿಕ್ಕುಳಿದ ಮಾರ್ಗ. ಅವಳಿದನ್ನು ದುರುಪಯೋಗಪಡಿಸಿಕೊಂಡು ಹೆಚ್ಚು ಕಾಸು ಕೀಳಲೆತ್ನಿಸಿದರೂ, ಈ ದಾರಿ ಬಿಟ್ಟರೆ ಬೇರೆ ಯಾವ ದಾರಿಯೂ ಸುಖಾಂತದಲ್ಲಿ ಪರ್ಯಾವಸಾನವಾಗುವುದಿಲ್ಲ…’ ಹೀಗೆ ಕೂತಲ್ಲೆ ಅವಿರತ ಕಾರ್ಯಾಗಾರದಂತೆ ಸಾಧ್ಯತೆಗಳನ್ನೆಲ್ಲಾ ಮಥಿಸುತಿದ್ದ ಮನದ ಸರ್ವಾವೃತ್ತಾಲೋಚನೆಗೆ, ಅವಳಿಗೆ ಹಣದ ಆಮಿಷವೊಡ್ಡಿ ತಾನು ಪಾರಾಗಲೊಂದು ವಿಮೋಚನಾ ಮಾರ್ಗ ಸಾಧ್ಯವಿದೆಯೆಂದೆನಿಸಿದೊಡನೆ ಕೊಂಚ ಹಗುರಾದಂತಾಗಿ, ತಡಬಡಿಸುತ್ತಿದ್ದ ತಲೆ ತುಸು ಸ್ಥಿಮಿತಕ್ಕೆ ಬಂದಿತ್ತು. ಈಗಲೆ ಏನೇನೆಲ್ಲಾ ಆಗಬಹುದೆಂದು ಊಹಿಸಿ ಮತ್ತಷ್ಟು ಭೀತಿಗೊಳ್ಳುವ ಬದಲು, ಹೇಗಾದರೂ ಅವಳನ್ನು ಮೊದಲು ಮಾತನಾಡಿಸಿ ಕೇಸ್ ಸೆಟಲ್ ಮಾಡಿದರೆ, ಎಲ್ಲವೂ ತಹಬಂದಿಗೆ ಬಂದಂತಾಗುವುದೆಂದೆನಿಸಿ ಕೊಂಚ ನಿರಾಳವೂ ಆದಾಗ ತಾನಿನ್ನು ಬಾತ್ರೂಮಿನ ಬಾಗಿಲು ಹಾಕಿಕೊಂಡು, ಕಮೋಡದ ಮೇಲೆ ಕೂತಿರುವ ಅರಿವಾಗಿ ಮೇಲೆದ್ದು ನಿಂತಿದ್ದ ಶ್ರೀನಾಥ. ಆ ನಿಲ್ಲುವ ಹೊತ್ತಿನ ನಿರಾಳತೆಗೊ ಅಥವಾ ಚಿಂತನೆಗಾಸ್ಪದವಿತ್ತಿದ್ದ ಭೀತಿಯ ಮುಸುಕು ಕೊಂಚ ಸರಿದು ಸಡಿಲಾದ ಮನದ ಮೆಲು ಸಂಕ್ರಮಣ ಭಾವಕ್ಕೊ ತಟ್ಟನೆ ಮನದಲುದಿಸಿತ್ತು ಮತ್ತೊಂದು ಹೊಸ ಪ್ರಶ್ನಾರ್ಥಕ ಭಾವ – ‘ ಅದು ಸರಿ, ಅವಳು ಈ ವಿಷಯದಲ್ಲಿ ನಿಜ ಹೇಳುತ್ತಿರುವಳೆಂದು ನಂಬುವುದಾದರೂ ಹೇಗೆ? ದುಡ್ಡು ಹೊಡೆಯಲು ಇದೂ ಅವಳು ಹೂಡಿದ ನಾಟಕವಿರಬಾರದೇಕೆ? ಯಾವುದೊ ಪ್ರೇಗ್ನೆನ್ಸಿ ಸ್ಟ್ರಿಪ್ ತೋರಿಸಿ ತನ್ನನ್ನು ಏಮಾರಿಸಿ ಎಮೋಶನಲ್ ಬ್ಲಾಕ್ಮೇಲ್ ಮಾಡುತ್ತಿರಬಾರದೇಕೆ? ಎಂಬಿತ್ಯಾದಿ ಪ್ರತ್ಯಾಲೋಚನೆಗಳೆಲ್ಲ ನುಗ್ಗಿಬಂದು ಅದುವರೆಗೂ ಕಾಡಿಸಿದ್ದ ಮೊದಲಿನ ಚಿಂತನೆಗಳ ಎದುರಾಳಿಯಂತೆ ಪರಸ್ಪರ ಯುದ್ಧಕ್ಕಿಳಿದು ಘರ್ಷಿಸಿ ಘಾಸಿಗೊಳಿಸತೊಡಗಿದಾಗ ‘ಯಾವ ಅನಿಸಿಕೆ ಸರಿ, ಯಾವುದು ಸರಿಯಲ್ಲವೆಂದು’ ನಿರ್ಧರಿಸಲಾಗದ ದಿಗ್ಮೂಢತೆಯಲ್ಲಿ ಅಸಹಾಯಕತೆಯಿಂದ ಸ್ತಂಭಿಭೂತನಾಗಿ ಮತ್ತೆ ಅಲ್ಲೆ ಅಚಲನಂತೆ ನಿಂತುಬಿಟ್ಟಿದ್ದ ಶ್ರೀನಾಥ, ಸುಮಾರು ಹೊತ್ತಿನವರೆಗೆ – ಈ ಹೊಸ ಚಿಂತನೆಯ ಪಥವನ್ನು ಮಥಿಸುತ್ತ ಅದೆಷ್ಟು ತಪ್ಪು ಸರಿಯಿರಬಹುದೆಂಬ ಕೊನೆಯಿರದ ಜಿಜ್ಞಾಸೆಯಲ್ಲಿ..

ತುಸು ತಾರ್ಕಿಕವಾಗಿ ಮತ್ತು ತಾಂತ್ರಿಕವಾಗಿ ಆಲೋಚಿಸಿದರೆ ಆ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲವೆನಿಸಿತ್ತು ಶ್ರೀನಾಥನಿಗೆ. ಆ ಆಕಸ್ಮಿಕ ಘಟನೆ ಸಂಘಟಿಸಿ ತೀರಾ ಹೆಚ್ಚಿನ ದಿನಗಳೂ ಆಗಿಲ್ಲ.. ಅದೇನೂ ತಾವಿಬ್ಬರೂ ಪೂರ್ವನಿರ್ಧಾರಿತವಾಗಿ ಕೈಗೊಂಡ ಪ್ರಣಯ ಯಜ್ಞವೂ ಆಗಿರಲಿಲ್ಲ. ಎಲ್ಲಾ ಅನಿರೀಕ್ಷಿತವಾಗಿ, ಅನಪೇಕ್ಷಿತವಾಗಿ ಆ ಹೊತ್ತಿನ ಉದ್ವೇಗದ ಬಿಸಿಯಲ್ಲಿ ನಡೆದುಹೋಗಿತ್ತಷ್ಟೆ. ಆ ಆಕಸ್ಮಿಕದ ಸಂಭವನೀಯತೆಯ ಜತೆಗೆ ಅವಳ ಮಾಸ ಚಕ್ರದ ಸಂಭವನೀಯತೆಯ ಸಂಘಟನೆಯೂ ಧನಾತ್ಮಕವಾಗಿ ಕೂಡಿಕೊಂಡು ಈ ಫಲಿತ ನೀಡಿರುವುದೆಂದರೆ ತೀರಾ ಕಾಕತಾಳೀಯವಾಗಿ, ಆಕಸ್ಮಿಕಗಳ ಆಕಸ್ಮಿಕವಾಗಿ ಕಾಣುವುದಿಲ್ಲವೆ? ಅದೂ ಹಾಗೆ ಕೂಡಿದ್ದು ಕೂಡಾ ಕೇವಲ ಒಂದೆ ಒಂದು ಬಾರಿ.. ಆ ನಂತರ ಮತ್ತೆಂದು ಆ ತಪ್ಪು ಮತ್ತೆ ಜರುಗಲು ಅವಕಾಶವನ್ನೆ ಕೊಟ್ಟಿರಲಿಲ್ಲ.. ಹೀಗಿರುವಾಗ ಇಷ್ಟು ಕಡಿಮೆ ಸಮಯದಲ್ಲಿ, ಕೇವಲ ಒಂದೆ ಬಾರಿಯ ಆಕಸ್ಮಿಕ ಮಿಲನದಲ್ಲಿ ಈ ನಿಖರ ಫಲಿತದ ಘಟ್ಟ ತಲುಪುವುದೆಂದರೆ ಯಾಕೊ ನಂಬಿರಲಾಗಲಿಲ್ಲ ಶ್ರೀನಾಥನಿಗೆ. ಅದರಲ್ಲೂ ಕಳೆದ ಬಾರಿಯ ಅವಳು ಕೇಳಿ ಪಡೆದ ಹಣದ ಪ್ರಸಂಗ ನಡೆದ ಮೇಲಂತೂ ಈ ರೀತಿಯ ಯಾವುದಾದರೊಂದು ಕತೆ ಕಟ್ಟಿಕೊಂಡು ಬರಬಹುದೆನ್ನುವ ಅನುಮಾನವಂತೂ ಇದ್ದೆ ಇತ್ತು – ಆ ಬೇಡಿಕೆಯ ಆಳ ಈ ಮಟ್ಟಕ್ಕಿಳಿಯಬಹುದೆಂಬ ಅನಿಸಿಕೆಯಿರದಿದ್ದರೂ ಸಹ. ಆದರೆ ಬರಿ ನಾಟಕವಿರಬಹುದೆಂದು ಪೂರ್ತಿ ತಳ್ಳಿ ಹಾಕುವಂತೆಯೂ ಇರಲಿಲ್ಲ.. ಒಂದು ವೇಳೆ ಅದು ನಿಜವೆ ಆಗಿಬಿಟ್ಟಿದ್ದರೆ? ಹೀಗಾಗಿ ಅದನ್ನು ಪೂರ್ತಿಯಾಗಿ ಕಡೆಗಣಿಸುವ ಅಥವಾ ಸಂಪೂರ್ಣ ನಿರಾಕರಿಸುವ ಹಾಗಿರಲಿಲ್ಲ; ಏನಾದರೊಂದು ವ್ಯವಸ್ಥೆ ಮಾಡಿಯೆ ತೀರಬೇಕಿತ್ತು. ಈ ಗೊಂದಲ ತುಂಬಿಕೊಂಡ ಅಸ್ಪಷ್ಟತೆಯ ಹೊತ್ತಿನಲ್ಲಿ, ಸರಿಸೂಕ್ತವಾದ ದಾರಿಯೆಂದರೆ ಎಚ್ಚರದ, ಎಡವದಂತಹ ಜಾಗೃತಿಯ ಜಾಗರೂಕತೆಯ ಪಥದಲ್ಲಿ ನಡೆಯುವುದು… ಅಂತಿದ್ದೂ ಅವಳ ಮಾತನ್ನು ಅರ್ಧ ವಿಶ್ವಾಸದಲ್ಲೆ ಸ್ವೀಕರಿಸಿದರೂ, ಅದು ಖಂಡಿತವಾಗಿ ನಿಜವೊ, ಸುಳ್ಳೊ ಎಂದು ತಾಳೆ ನೋಡಿ ಖಚಿತಪಡಿಸಿಕೊಂಡು ತದನಂತರ ಮುಂದಿನ ಹೆಜ್ಜೆಯೇನೆಂದು ನಿರ್ಧರಿಸುವುದು ಸರಿಯೆಂಬ ತೀರ್ಮಾನಕ್ಕೆ ಬಂದಿದ್ದ ಶ್ರೀನಾಥ. ಆದರೆ ಈ ದಿಸೆಯಲಿದ್ದ ಬಲು ದೊಡ್ಡ ತೊಡಕೆಂದರೆ ಈ ವಿಷಯದಲ್ಲಿ ಬೇರಾರ ನೆರವನ್ನು ಕೋರುವಂತಿರಲಿಲ್ಲ. ಎಲ್ಲಾ ತನ್ನ ಸ್ವಯಂಬಲದ ಮೇಲೆ, ಅರೆಬರೆ ಭಾಷಾ ತಿಳುವಳಿಕೆಯ ಮೇಲೆ ಮತ್ತು ಪ್ರಜ್ಞಾತೀತ ಪ್ರಜ್ಞೆಯೊದಗಿಸಿದ ಅನಿಸಿಕೆಗಳ ಆಧಾರದ ಮೇಲಷ್ಟೆ ಮುನ್ನಡೆಯಬೇಕಿತ್ತು. ಅದು ಬಿಟ್ಟರೆ ಅವಳ ಸಹಕಾರ, ಹೇಳಿಕೆಗಳಷ್ಟೆ ಜತೆಗಿದ್ದುದು.

ಅವಳು ನೀಡಿದ್ದ ಶಾಕಿಂಗ್ ಸುದ್ದಿಯನ್ನು ನಂಬಲಿ ಬಿಡಲಿ, ಅದಕ್ಕಿಂತ ಮಿಗಿಲಾದ ಬೇರೆಯ ದಾರಿಯೂ ಇರಲಿಲ್ಲವಾಗಿ ಆ ಹಾದಿಯಲ್ಲೇ ಮುನ್ನಡೆಯಲು ನಿರ್ಧರಿಸಿದ್ದ ಶ್ರೀನಾಥ. ತೀರಾ ವಿಪರೀತ ಸ್ಥಿತಿಯೆಂದರೂ ಸ್ವಯಂಸುರಕ್ಷೆಯ ದೃಷ್ಟಿಯಿಂದ ಪರ್ಯಾಲೋಚಿಸಿದರೂ, ಅವಳು ಹೇಳಿದ್ದು ಪೂರ್ಣ ಸತ್ಯ, ಸುಳ್ಳಲ್ಲವೆಂಬ ಆಧಾರದ ಮೇಲೆ ಮುನ್ನಡೆಯಬೇಕಾಗಿತ್ತು. ಆ ನಂಬಿಕೆಯ ಆಧಾರದಲ್ಲಿ ಹೆಚ್ಚು ಹಣ ಕೈ ಬಿಡುತ್ತದೆಂದರೂ ಕೂಡ, ಸಾರ್ವಜನಿಕವಾಗಿ ಸಾರ್ವತ್ರಿಕವಾಗಿ ಆಗಬಹುದಾದ ಅಪಮಾನಕ್ಕೆ ಹೋಲಿಸಿದರೆ ಇದು ನೂರು ಪಾಲು ವಾಸಿ…ಬರಿ ಹಣ ಮಾತ್ರ ಕಳೆದುಕೊಳ್ಳಬೇಕಾದೀತಷ್ಟೆ. ಮಾನ ಮುಕ್ಕಾಗಿ ಮುನ್ನೂರು ಚೂರಾದರೆ ಹಣವಿದ್ದು ಏನು ಸಾಧಿಸಿದಂತಾದೀತು? ಎಂದುಕೊಂಡು ತಾನಿರುವ ಹತಾಶ ಸ್ಥಿತಿಗೆ ತಾನೆ ಕನಿಕರಿಸುತ್ತ, ನಿಟ್ಟುಸಿರು ಬಿಡುತ್ತ ಟಾಯ್ಲೆಟ್ಟಿನಿಂದ ಹೊರಬಂದ್ದಿದ ಶ್ರೀನಾಥ . ಆಗಿನ ಸಂಕಷ್ಟದ ಅವಸರದಲ್ಲಿ ಮೊದಲು ಅವಳನ್ನು ಕಂಡು ತನ್ನಿಂಗಿತದ ಸಂಕೇತ ರವಾನಿಸಬೇಕಾಗಿತ್ತು – ಅವಳು ಅಪ್ಪಿತಪ್ಪಿ ಆ ಸುದ್ದಿಯನ್ನು ಜಾಗಟೆ ಬಾರಿಸಿ ದೊಡ್ಡದಾಗಿಸಿಬಿಡುವ ಮೊದಲೆ. ಹಾಗೆಂದುಕೊಂಡು ಧಾವಂತದಲ್ಲೆ ಅವಳು ಸದಾ ನೆಟ್ಟಿರುತ್ತಿದ್ದ ಪ್ಯಾಂಟ್ರಿಯತ್ತ ಬಿರಬಿರನೆ ಹೆಜ್ಜೆ ಹಾಕಿದ್ದ ಅವಳಿಗಾಗಿ ಅರಸುತ್ತ…. ಆದರೆ ಅಲ್ಲಿ ಬಂದು ನೋಡಿದರೆ – ಪ್ಯಾಂಟ್ರಿಯಲ್ಲಿ ಯಾರೂ ಕಾಣಲಿಲ್ಲ… ‘ಇವತ್ತು ಎಲ್ಲಿ ಹೋದಳಪ್ಪ? ಸದಾ ಇಲ್ಲೆ ಇರುತ್ತಿದ್ದಳಲ್ಲ?’ ಎಂದುಕೊಂಡು ಅಲ್ಲೆ ಬರುತ್ತಿದ್ದ ಮತ್ತೊಬ್ಬ ಸಹೋದ್ಯೋಗಿಯನ್ನು ಅವಳ ಕುರಿತಾಗಿ ಕೇಳಲು, ‘ ಶೀ ಈಸ್ ನಾಟ್ ಫೀಲಿಂಗ್ ವೆಲ್.. ಗೋ ಹೋಂ ಆಲ್ರೆಡಿ..’ ಎಂದಾಗ ಬೆಪ್ಪು ಹಿಡಿದಂತೆ ಅರೆಗಳಿಗೆ ಏನು ಮಾಡಲು ತೋಚದೆ ಅಸಹನೆಯಿಂದ ಚಡಪಡಿಸುತ್ತ ನಿಂತ ಶ್ರೀನಾಥ. ಬಹುಶಃ ಕಾಫಿಗಾಗಿ ಬಂದಿರಬಹುದೆಂದುಕೊಂಡ ಆಕೆ, ‘ ಡು ಯು ವಾಂಟ್ ಸಂ ಕಾಫೀ?’ ಎಂದಾಗ ಭೂಮಿಗಿಳಿದವನಂತೆ, ಬೇಡವೆಂದು ತಲೆಯಾಡಿಸುತ್ತ ತನ್ನ ಸೀಟಿನತ್ತ ನಡೆದಿದ್ದ ಶ್ರೀನಾಥ – ಸಿಡಿಯುವಂತೆ ‘ಗುಂಯ್’ಗುಟ್ಟುತ್ತಿದ್ದ ತಲೆಗೆ ಕಾಫಿಯ ತಕ್ಷಣದ ಅವಶ್ಯಕತೆಯಿದ್ದರೂ ಅದನ್ನು ಬಲವಂತದಿಂದ ಕಡೆಗಣಿಸುತ್ತ. ಆ ಸಿಡಿಯುವ ತಲೆಯ ಮೇಲೊಂದು ಕೈ ಹಿಡಿದುಕೊಂಡೆ ಕಂಪ್ಯೂಟರ ಪರದೆ ತೆರೆದರೆ ಅಲ್ಲಿ ಮತ್ತೊಂದು ಮಿಂಚಂಚೆಯ ಶಾಕ್ ಕಾದು ಕುಳಿತಿತ್ತು – ಶ್ರೀನಾಥನನ್ನು ತೆರೆದ ಬಾಹುಗಳಿಂದ ಸ್ವಾಗತಿಸುತ್ತಾ; ಅಲ್ಲಿದ್ದ ಸುದ್ದಿ – ಸಿಂಗಪುರದ ರೀಜನಲ್ ಹೆಡ್ಡಾಫೀಸಿನಲ್ಲಿ, ಶ್ರೀನಾಥನ ರೀಜನಲ್ ಮ್ಯಾನೇಜರ್ ಆಗಿದ್ದ ಶ್ರೀನಿವಾಸ ಪ್ರಭು ಇನ್ನೆರಡು ದಿನಗಳಲ್ಲಿ ಅಲ್ಲಿಗೆ ಬರಲಿರುವನೆಂದು! ‘ಇವನೂ ಈ ಹೊತ್ತಿನಲ್ಲೇ ಬರಬೇಕಿತ್ತೆ?’ ಎಂದು ಎರಡು ಕೈಯಲ್ಲಿ ಗಿರಗಿಟ್ಟಲೆಯಂತೆ ಸುತ್ತುತ್ತಿದ್ದ ತಲೆಯನ್ನು ಹಿಡಿದು ಸೀಟಿನಲ್ಲಿ ಕುಸಿದು ಕೂತ ಶ್ರೀನಾಥನಿಗೆ ಬಾಯೊಣಗಿದಂತಾಗಿ ಅತೀವ ಬಾಯಾರಿಕೆಯಾದರೂ ಎದುರಲಿದ್ದ ನೀರು ಕುಡಿಯಲೂ ಮನಸಾಗದೆ ಆ ಮಿಂಚಂಚೆಯನ್ನೆ ತದೇಕಚಿತ್ತದಿಂದ ದಿಟ್ಟಿಸುತ್ತ ಕುಳಿತುಬಿಟ್ಟ – ಯಾವುದೊ ಶೂನ್ಯದತ್ತ ಆಳವಾಗಿ ನೋಟ ನೆಟ್ಟವನಂತೆ.

ಶ್ರೀನಿವಾಸ ಪ್ರಭುವಿನ ಆಗಮನ ಕುರಿತಾದ ಶ್ರೀನಾಥನ ಆತಂಕಕ್ಕೂ ಕಾರಣವಿರದಿರಲಿಲ್ಲ. ಈ ಹಿಂದಿನ ಪ್ರಾಜೆಕ್ಟಿನಲ್ಲಿ ಅವನ ನಾಯಕತ್ವದಡಿಯಲ್ಲಿಯೆ ಪ್ರಾಜೆಕ್ಟಿನಲ್ಲಿ ಕೆಲಸ ಮಾಡಬೇಕಾಗಿ ಬಂದಿದ್ದ ಕಾರಣ ಅವನ ಕಾರ್ಯಶೈಲಿಯ ಸಂಪೂರ್ಣ ಪರಿಚಯವಾಗಿತ್ತು ಶ್ರೀನಾಥನಿಗೆ. ಪೂರ್ಣವಾಗಿ ತಾಂತ್ರಿಕ ಹಿನ್ನಲೆಯಿಂದ ಬಂದಿದ್ದ ಪ್ರಭುವಿಗೆ ಮ್ಯಾನೇಜ್ಮೆಂಟಿನ ದೃಷ್ಟಿಕೋನದಿಂದ ಪ್ರಾಜೆಕ್ಟು ನಿಭಾಯಿಸುವ ಛಾತಿಯೂ ಇರಲಿಲ್ಲ, ಜತೆಗೆ ಆ ದಿಸೆಯಲ್ಲಿ ಆಳವಾದ ಅನುಭವವೂ ಇರಲಿಲ್ಲ. ಕೇವಲ ವರ್ಷಾಂತರಗಳ ಪ್ರೋಗ್ರಾಮಿಂಗ್ ಅನುಭವದಿಂದಲೆ ಬೆಳೆದು, ತನ್ನಂತಾನೆ ವಿಕಾಸವಾದ ಐಟಿ ಬೂಮಿನ ದಿನಗಳಲ್ಲುದಿಸಿದ್ದ, ಆ ಸಚೇತಕ ಹಾಗೂ ಅನುಕೂಲಕರ ವ್ಯವಸ್ಥೆಯ ಅಡಿಯಲ್ಲಿ ಬಡ್ತಿ ಪಡೆದು ಪ್ರಾಜೆಕ್ಟು ಮ್ಯಾನೇಜರನ ಮಟ್ಟಕ್ಕೇರಿದ್ದ ಹಿನ್ನಲೆಯವನು. ಅವನ ಸುತ್ತಲಿನ ಜನರೂ ಹೆಚ್ಚುಕಡಿಮೆ ಅದೆ ಹಿನ್ನಲೆಯವರಾಗಿದ್ದ ಕಾರಣ, ಅದೆ ರೀತಿಯ ವ್ಯವಸ್ಥೆಯ ಬಸಿರಲ್ಲೆ ಪೋಷಿತರಾಗಿ ಬೆಳೆದು ಬಂದವರು. ನಿಜ ಹೇಳುವುದಾದರೆ ಅವರಿದ್ದ ವಾತಾವರಣದಲ್ಲಿ ನಿರೀಕ್ಷೆ ಕೂಡ ಬರಿಯ ತಾಂತ್ರಿಕ ಮಟ್ಟದ್ದಾಗಿದ್ದರಿಂದ, ಅದೊಂದು ರೀತಿಯ ಸ್ವಯಂಪೋಷಿತ ವ್ಯವಸ್ಥೆಯಾಗಿ ಹೇಗೊ ನಡೆದುಕೊಂಡು ಬಂದಿತ್ತು. ಆದರೆ ಈಗಿನ ಪ್ರಾಜೆಕ್ಟಿನ ಪಂಥ ಕೇವಲ ತಾಂತ್ರಿಕ ಸ್ತರ ಮಾತ್ರದ್ದಾಗಿರದೆ, ವಾಣಿಜ್ಯ ವ್ಯವಹಾರದೊಂದಿಗೆ ಅತೀ ಸನಿಹದ ಸಂಬಂಧ ಹೊಂದಿದ್ದಾಗಿತ್ತು. ಹೀಗಾಗಿ ಇಡಿ ವ್ಯಾಪಾರಿ ಅಗತ್ಯಗಳನ್ನು ಪೂರೈಸುವ ಬಿಜಿನೆಸ್ ಪ್ರೋಸೆಸ್ಸಿನ ಒಳಗೆ ಪೂರಕಾಂಶದಂತೆ, ಅಂತರ್ಗತವಾಗಿಯಷ್ಟೆ ತಾಂತ್ರಿಕತೆ ಮತ್ತದರ ನೈಪುಣ್ಯತೆ ಮಿಳಿತಗೊಂಡಿತ್ತು. ಆ ರೀತಿಯ ಪ್ರಾಜೆಕ್ಟನ್ನು ಹಿಂದೆಂದೂ ನಿಭಾಯಿಸಿ ಅನುಭವವಿರದಿದ್ದ ಹಿನ್ನಲೆಯಲ್ಲೆ, ಹೇಗೊ ಸಂಭಾಳಿಸುವ ಒಪ್ಪಂದ ಮಾಡಿಕೊಂಡು ಪ್ರಭುವನ್ನು ಮ್ಯಾನೇಜರನನ್ನಾಗಿ ಮಾಡಿ ಕಳಿಸಲಾಗಿತ್ತು – ಇದು ಒಂದು ಕಲಿಕೆಯ ಅವಕಾಶವೂ ಆದೀತೆಂಬ ಆಶಯದಲ್ಲಿ. ಆದರೆ ವ್ಯವಹಾರದ ನೇರ ಕೈಯಾಡಿಸಿದ್ದ ಅನುಭವದ ಲವಲೇಶವೂ ಇರದಿದ್ದ ಶ್ರೀನಿವಾಸ ಪ್ರಭು ಇಡಿ ಪ್ರಾಜೆಕ್ಟನ್ನು ಕೇವಲ ವೈಭವೋಪೇತ ತಾಂತ್ರಿಕ ಕಾರ್ಯಕ್ರಮವೊಂದರಂತೆ ಅಡ್ಡಾದಿಡ್ಡಿ ನಡೆಸತೊಡಗಿದಾಗ, ಕೊಂಚ ವ್ಯವಹಾರಿಕ ಅನುಭವದ ಹಿನ್ನಲೆಯಿಂದ ಬಂದಿದ್ದ ಶ್ರೀನಾಥನಿಗೆ ಇದು ಖಂಡಿತ ಪತನದ ಪ್ರಪಾತದತ್ತ ಜಾರುತ್ತಿದೆಯೆಂದು ಖಚಿತವಾಗಿಹೋಗಿತ್ತು. ಅದನ್ನು ಹೇಗಾದರೂ ತಪ್ಪಿಸಿ ಸರಿ ದಾರಿ ಹಿಡಿಸುವ ಉದ್ದೇಶದಿಂದ ಮೀಟಿಂಗುಗಳಲ್ಲಿ ಈ ಅಂಶವನ್ನೆತ್ತಿ ತೋರಿಸುತ್ತ ಅದರ ಕುರಿತು ಚರ್ಚೆಗೆಳೆಯಲು ಯತ್ನಿಸಿದ್ದ. ಆದರೆ ಈ ರೀತಿಯ ವಿಷಯಗಳಲ್ಲಿ ತೆರೆದ ಮನಸಿನ ವ್ಯಕ್ತಿತ್ವವಿರದಿದ್ದ ಪ್ರಭು ಮತ್ತವನ ಸಹಚರರ ಕೂಟಕ್ಕೆ ಶ್ರೀನಾಥನದೇನೊ ಬೇಡದ ತಲೆಹರಟೆಯಾಗಿ ಕಂಡಿತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಸರಿದಾರಿಗೆ ನಡೆಸುವ ಅವನ ಪ್ರಾಮಾಣಿಕ ಯತ್ನ, ಅವರ ಕಣ್ಣಲ್ಲಿ ಅನುಭವದಲ್ಲಿ ಹಿರಿಯರಾಗಿದ್ದ ಅವರ ಜ್ಞಾನ ಮತ್ತು ಸಾರ್ವಭೌಮತ್ವವನ್ನು ಪ್ರಶ್ನಿಸುವ, ಅವಹೇಳನ ಮಾಡುವ ಪರಿಕರದಂತೆ ಕಂಡು ಬಂದು, ಆ ಭಾವನೆಯೆಲ್ಲ ಶ್ರೀನಾಥನ ಮೇಲಿನ ಅಲಿಖಿತ ಅಸಹನೆಯಾಗಿ ಪರಿವರ್ತನೆಗೊಂಡಿತ್ತು. ತಮಗಿಂತ ಜೂನಿಯರುಗಳು ತಾವು ಹೇಳಿದ್ದಷ್ಟನ್ನು ಮಾತ್ರವೆ ಮಾಡಿಕೊಂಡು ಹೋಗುವಂತಹ ವ್ಯವಸ್ಥೆಯಲ್ಲಿ ಇವನ್ಯಾರೋ ತಮ್ಮನ್ನು ಪ್ರಶ್ನಿಸುವುದು ಎಂದರೆ, ಅವರ ಅಧಿಕಾರವನ್ನೇ ಪ್ರಶ್ನಿಸಿ ಪಂಥಾಹ್ವಾನ ನೀಡಿದಂತೆ ಎಂದು ಭಾವಿಸಿದ ಕಾರಣ ಅವರ ಅಸಹನೆ ಕಾಲ ಕಳೆದಂತೆಲ್ಲ ಏಕಸಾಂದ್ರವಾಗುತ್ತ ಹೋಗಿ, ಅಂತಿಮವಾಗಿ ಏಕಾಏಕಿ ಅವನ ಮೇಲಿನ ದ್ವೇಷಾರೋಪದ ರೂಪ ತಾಳಿತ್ತು. ಇದ್ದಕ್ಕಿದ್ದಂತೆ ತನಗರಿವಿಲ್ಲದ ಹಾಗೆ, ಉಳಿದವರೆಲ್ಲ ಒಂದು ಗುಂಪು, ತಾನೊಬ್ಬನೆ ಇನ್ನೊಂದು ಗುಂಪು ಎನ್ನುವಂತೆ ಕೆಲಸದಲ್ಲಿ ಮಾತ್ರವಲ್ಲದೆ ಕಾಫಿ ಟೀ ಬ್ರೇಕಿನಲ್ಲಿ, ಊಟದ ಜತೆಯ ಒಡನಾಟದಲ್ಲಿ ಮತ್ತು ಮತ್ತಿತರ ಸಾಧಾರಣ ಸಾಮಾಜಿಕ ಒಡನಾಟಗಳಲ್ಲಿಯೂ ವ್ಯಕ್ತವಾಗ ತೊಡಗಿದಾಗ, ತಟ್ಟನೆ ಎಚ್ಚೆತ್ತವನಂತೆ ಹುಷಾರಾಗಿದ್ದ ಶ್ರೀನಾಥ. ಆದರೆ ಅಷ್ಟು ಹೊತ್ತಿಗೆ ಸಮಯ ಮೀರಿಹೋಗಿತ್ತು – ಪರಸ್ಪರರ ನಡುವಿನ ಕಂದಕದ ಆಳ ಮುಚ್ಚಲಾಗದಷ್ಟು ಅಗಲವಾಗಿ ಬಿರಿದು ಹೋಗಿತ್ತು. ಅಲ್ಲಿಂದಾಚೆಗೆ ಶ್ರೀನಾಥನೆ ತುಸು ಹಿಂಜರಿದು ಎಷ್ಟು ಬೇಕೋ ಅಷ್ಟು ಮಾತ್ರ ತನ್ನ ಪಾಡಿಗೆ ತಾನು ಕೆಲಸ ಮಾಡಿಕೊಂಡು ಹೋಗುವ ದಾರಿ ಹಿಡಿದರೂ, ಪ್ರಭುವಿನ ಪ್ರತ್ಯಕ್ಷವಾಗಿಯೊ, ಪರೋಕ್ಷವಾಗಿಯೊ ಪ್ರದರ್ಶಿತವಾಗುತ್ತಿದ್ದ ನಡತೆಗನುಸಾರವಾಗಿ ಬಹುತೇಕ ಮಿಕ್ಕವರ ಗುಂಪು ಕೂಡ ಅವನನ್ನು ಪ್ರತ್ಯೇಕಿಸುತ್ತ, ಸಿಕ್ಕ ಸಿಕ್ಕ ಸಣ್ಣ ಪುಟ್ಟ ಅವಕಾಶಗಳಲ್ಲಿಯೂ ಬಿಡದೆ ಅವನ ಕಾಲೆಳೆಯುತ್ತ, ಹೀಗಳೆಯುತ್ತ ನಿತ್ಯವೂ ಕಾಡಿಸತೊಡಗಿತ್ತು. ಅಂದಿನಿಂದ ತನ್ನ ಪಾಡಿಗೆ ತಾನು ಎಷ್ಟು ಬೇಕೋ ಅಷ್ಟರಮಟ್ಟಿಗೆಂಬಂತೆ ಇದ್ದರೂ ತಂಡದ ವಾತಾವರಣದಲ್ಲಿ ತನ್ನ ದಿಟ್ಟ ಅಭಿಪ್ರಾಯ ಪ್ರದರ್ಶನ ತೀರಾ ಅಸಹನೀಯ ಪರಿಸ್ಥಿತಿಯನ್ನುಂಟು ಮಾಡಿದ್ದಕ್ಕೆ ಕಸಿವಿಸಿಗೊಳ್ಳುತ್ತ, ಸದ್ಯಕ್ಕೆ ಈ ಪ್ರಾಜೆಕ್ಟ್ ಮುಗಿದರೆ ಸಾಕಪ್ಪ ಅನಿಸುವಂತೆ ಮಾಡಿಬಿಟ್ಟಿತ್ತು.

ಶ್ರೀನಾಥನೆಣಿಕೆಯಂತೆ ಪ್ರಾಜೆಕ್ಟಿನ ಗೋಲೈವಿನಲ್ಲಿ ಎಲ್ಲಾ ಎಡವಟ್ಟಾಗಿ ಇಡಿ ಕಂಪನಿ ವ್ಯವಹಾರ ತಹಬಂದಿಗೆ ಬರಲು ಮೂರು-ನಾಲ್ಕು ತಿಂಗಳೆ ಹಿಡಿದಿತ್ತು – ಅದೂ ಸರಿಸುಮಾರು ಎನ್ನುವ ಮಟ್ಟಿಗೆ ಮಾತ್ರ. ಆದರೆ ಶ್ರೀನಾಥನ ಜವಾಬ್ದಾರಿಯಿದ್ದ ಭಾಗದಲ್ಲಿ ಮಾತ್ರ ಮೊದಲ ದಿನದಿಂದಲೆ ಎಲ್ಲಾ ಸುಗಮವಾಗಿ, ಶಿಸ್ತುಬದ್ದವಾಗಿ ಹೂವೆತ್ತಿಟ್ಟಂತೆ ಸಾಗುತ್ತಿದ್ದುದು ಪ್ರಭು ಮತ್ತವನ ಪಟಾಲಂಗೆ ನುಂಗಲಾರದ ತುತ್ತಾಗಿ ಪರಿಣಮಿಸಿಬಿಟ್ಟಿತ್ತು. ಹೇಗಾದರೂ ಈ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ಶ್ರೀನಾಥನನ್ನು ಎತ್ತಂಗಡಿ ಮಾಡಿ ವಾಪಸ್ಸು ಕಳಿಸಿಬಿಡಬೇಕೆಂಬ ಹಂಚಿಕೆಯಲ್ಲಿದ್ದವರಿಗೆ, ಕಸ್ಟಮರಿನ ಕಡೆಯಿಂದ ಥಾಯ್ಲ್ಯಾಂಡಿನ ಪ್ರಾಜೆಕ್ಟಿಗೆ ಶ್ರೀನಾಥನೆ ಇರಬೇಕೆಂದು, ಅದೂ ಅವನೇ ಮ್ಯಾನೇಜನಾಗಿ ನಿಭಾಯಿಸಬೇಕೆಂದು ಪಟ್ಟು ಹಿಡಿದು ಕೂತಾದ್ದು ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆದರೆ ಕಸ್ಟಮರನೆ ಹಠ ಹಿಡಿದು ಕೂತಾಗ ಒಪ್ಪಿಕೊಳ್ಳದೆ ಬೇರೆ ದಾರಿಯಿರಲಿಲ್ಲ. ಆದರೂ ತಾನು ಹೊರದೇಶಕ್ಕೆ ಪ್ರಯಾಣಿಸಲಾಗದೆಂದು ನೆಪ ಹೂಡಿ ಸಿಂಗಪುರದಲ್ಲೆ ಉಳಿದುಕೊಂಡರೂ ಥಾಯ್ಲ್ಯಾಂಡಿನ ಪ್ರಾಜೆಕ್ಟಿಗೆ ತನ್ನೆಲ್ಲ ಮಿಕ್ಕ ಬಂಟರನ್ನು ನುಸುಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಶ್ರೀನಿವಾಸ ಪ್ರಭು. ಈ ಎಲ್ಲಾ ಹಿನ್ನಲೆಯಿಂದರ್ಧ ಶ್ರೀನಾಥ ಪ್ರಾಜೆಕ್ಟಿನ ಯಶಸ್ಸಿನ ಬಗ್ಗೆ ತೀರಾ ಆತಂಕಗೊಂಡಿದ್ದು. ಈಗ ಈ ಗೋಲೈವ್ ಅಭೂತಪೂರ್ವ ಯಶಸ್ಸಿನೊಂದಿಗೆ ಉದ್ಘಾಟನೆಯಾಗಿರುವುದು ಅವರ್ಯಾರಿಗೂ ಸಹನೆಯಾಗುವ ಫಲಿತವಲ್ಲ; ಒಲ್ಲದ ಗಂಡಿಗೆ ಮೊಸರನ್ನದಲ್ಲಿ ಕಲ್ಲು ಎನ್ನುವ ಹಾಗೆ ಏನಾದರೂ ತಪ್ಪು ಹುಡುಕುವುದು ಖಂಡಿತ. ಅಂತಹದ್ದರಲ್ಲಿ ಅವನು ಈ ಹೊತ್ತಿನಲ್ಲಿ ಬಂದರೆ, ಅದಕ್ಕೆ ಸರಿಯಾಗಿ ಅವನಿದ್ದ ಸಮಯದಲ್ಲೆ ಈ ಸೂಕ್ಷ್ಮ ವಿಷಯ ಹತೋಟಿ ಮೀರಿ ಭುಗಿಲೆದ್ದರೆ – ಆಯಿತು, ಹುಡುಕುವ ಬಳ್ಳಿಗೆ ತೊಡರಿ ಎಡವಿ ಬಿದ್ದವನಂತೆ, ಸಿಕ್ಕ ಅವಕಾಶವನ್ನು ಬಾಚಿಕೊಳ್ಳದೆ ಬಿಡುವವನಲ್ಲ ಶ್ರೀನಿವಾಸ ಪ್ರಭು. ಅವನು ಒಂದೆರಡು ವಾರವಾದರೂ ಕಳೆದು ಎಲ್ಲಾ ತಣ್ಣಗಿರುವಾಗ ಬಂದಿದ್ದರೆ ಸರಿಯಿರುತ್ತಿತ್ತೊ ಏನೋ? ಬಹುಶಃ ಇಲ್ಲಿ ಎಲ್ಲಾ ತುಂಬಾ ಸುಗಮವಾಗಿ, ಶುಭಾರಂಭವಾಯ್ತೆಂದು ಸುದ್ದಿ ಮುಟ್ಟಿರಬೇಕು.. ಅದನ್ನು ಕೇಳಿ ಜೀರ್ಣಿಸಿಕೊಳ್ಳಲಾಗದ ನಂಬಿಕೆಯಿರದೆ ಅಸಹನೆ, ಚಡಪಡಿಕೆಗರ್ಧ ತಟ್ಟನೆ ಹೊರಟು ಬರುತ್ತಿರಬೇಕು. ಸದಾ ಈರ್ಷೆ ಅಸೂಯೆ ಮಾತ್ಸರ್ಯಗಳಡಿ ಬೇಯುವ ಗುಣದವನಾದ ಶ್ರೀನಿವಾಸ ಪ್ರಭು ಈ ಗೆಲುವು ಕಂಡು ಹೊಟ್ಟೆ ಉರಿದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ.. ಆದರೆ ಈಗಿನ ವಿಚಿತ್ರ ಪರಿಸ್ಥಿತಿಯಲ್ಲಿ ಅವನು ಬರದಿದ್ದರೆ ಚೆನ್ನಿತ್ತು ಎನ್ನುವುದು ವಿಪರ್ಯಸವಲ್ಲದೆ ಮತ್ತೇನು? ಆದರೀಗ ಏನೂ ಮಾಡುವಂತಿಲ್ಲ.. ಹೇಗಾದರೂ ಮಾಡಿ ಅವನು ಬರಲು ಮಿಕ್ಕಿರುವ ಎರಡೆ ದಿನಗಳಲ್ಲಿ ಕುನ್. ಸು ಜತೆ ಮಾತಾಡಿ ಎಲ್ಲಾ ಸಂಧಿ ವ್ಯವಹಾರ ಕುದುರಿಸಿಕೊಂಡುಬಿಡಬೇಕು… ಆವತ್ತಂತೂ ಕೈಗೆ ಸಿಗದಂತೆ ತಪ್ಪಿಸಿಕೊಂಡು ಮನೆಗೆ ಹೋಗಿಬಿಟ್ಟಿದ್ದಳು.. ಮರುದಿನವಾದರೂ ಬೆಳಿಗ್ಗೆ ಹಿಡಿದು ಹಾಕಲೇಬೇಕು.. ಆನಂತರ ಮಿಕ್ಕ ಸಮಯದಲ್ಲಿ, ಪ್ರಾಜೆಕ್ಟಿನ ವಿವರದ ಸಂಗತಿಗಳನ್ನು ಒಮ್ಮೆ ವಿಮರ್ಶಿಸಿ ಬೇಕಿದ್ದ ತೇಪೆ ಹಾಕಿ ರಿಪೇರಿ ಮಾಡಿಟ್ಟುಕೊಳ್ಳಬೇಕು – ಅವನ ಪಿಶಾಚ ಕಣ್ಣಿಗೇನೂ ಕೊರತೆ ಕಾಣದ ಹಾಗೆ. ಹಾಗೆಂದುಕೊಂಡವನೆ ಗಡಿಯಾರದತ್ತ ತಿರುಗಿ ನೋಡಿದರೆ ತಟ್ಟನೆ ರಾತ್ರೀ ಒಂಭತ್ತಾಗಿ, ಮಿಕ್ಕವರೆಲ್ಲರೂ ಆಗಲೆ ಹೊರಟು ಹೋಗಿದ್ದುದರ ಕುರುಹಾಗಿ ಸುತ್ತಲ ದೀಪಗಳೆಲ್ಲ ಆರಿಹೋಗಿ, ಬರಿ ಕತ್ತಲು ತುಂಬಿದ್ದ ಸುತ್ತಲ ಪರಿಸರ ಅನುಭವಕ್ಕೆ ನಿಲುಕಿದಾಗ, ತಡಬಡಿಸಿಕೊಂಡು ಮೇಲೆದ್ದು ಹೊರನಡೆದಿದ್ದ ಶ್ರೀನಾಥ, ಆತಂಕಪೂರಿತವಾಗಿ ಪೂರ್ಣ ವಿಚಲಿತವಾಗಿದ್ದ ಮನದ ಭಾರವನ್ನು ಹೊತ್ತುಕೊಂಡೆ.

ಮರುದಿನ ಎಂದಿಗಿಂತ ಬೇಗನೆ ಎದ್ದು ಮಾಮೂಲಿ ಹೊತ್ತಿಗೆ ಮುಂಚಿತವಾಗಿಯೆ ಆಫೀಸಿಗೆ ಬಂದು ಅವಳಿಗಾಗಿ ಹುಡುಕಾಡಿದ ಶ್ರೀನಾಥನಿಗೆ ನಿರಾಶೆ ಕಾದಿತ್ತು. ಸಾಧಾರಣವಾಗಿ ಮಿಕ್ಕವರೆಲ್ಲರಿಗಿಂತಲು ಮೊದಲೆ ಆಫೀಸಿನಲ್ಲಿರುತ್ತಿದ್ದವಳು, ಅಂದು ಮಾತ್ರ ಕಣ್ಣಿಗೆ ಬೀಳಲೇ ಇಲ್ಲ. ಪ್ಯಾಂಟ್ರಿಯಲ್ಲಿ ಅವಳ ಜತೆ ಕೆಲಸ ಮಾಡುವ ಮಿಕ್ಕವರೆಲ್ಲ ಕಣ್ಣಿಗೆ ಬಿದ್ದರೂ ಅವಳ ಸುಳಿವು ಮಾತ್ರ ಇರದೆ, ಯಾಕವಳು ಪತ್ತೆಯಿಲ್ಲವೆಂಬ ಆತಂಕದಿಂದ ಎದೆ ಬಡಿತ ಹೆಚ್ಚಾಗಲು ಕಾರಣವಾಗಿತ್ತು. ಸಾಮಾನ್ಯವಾಗಿ ಅವಳ ಶಿಫ್ಟ್ ಒಂದು ಗಂಟೆ ಮೊದಲೆ ಶುರುವಾಗುವ ಕಾರಣ ಅಷ್ಟೊತ್ತಿಗೆಲ್ಲ ಅವಳಲ್ಲಿ ಇರಬೇಕಿತ್ತಲ್ಲ? ಎಂಬ ಕಸಿವಿಸಿಯಲ್ಲೆ ದಿನವನ್ನಾರಂಭಿಸಿದ್ದ ಶ್ರೀನಾಥನಿಗೆ ನಿಧಾನವಾಗಿ ಮಿಕ್ಕೆಲ್ಲರೂ ಬಂದು ಆಫೀಸು ಎಂದಿನ ಕಲರವದ ವಾತಾವರಣಕ್ಕೆ ಬದಲಾದಾಗಲು ಅವಳ ಸುಳಿವೆ ಕಾಣದಾದಾಗ, ಅವಳಿನ್ನು ಬರುವ ಸಾಧ್ಯತೆ ಕಡಿಮೆಯೆಂದು ಖಚಿತವಾಗಿ ಹೋಗಿತ್ತು. ಸ್ಥಿರತೆಯಿಲ್ಲದೆ ಚಡಪಡಿಸುವ ಮನ ಅಸಹಾಯಕತೆಯಿಂದ ದಿಕ್ಕುಗಾಣದೆ ಒಳಗೊಳಗೆ ವಿಲಪಿಸುತ್ತಿರುವ ಆ ಹೊತ್ತಲ್ಲೆ, ಹೇಗಾದರೂ ಅದನ್ನು ತಹಬಂದಿಗೆ ತರುವ ಯತ್ನವಾಗಿ ಇನ್ನೆರಡೆ ದಿನದಲ್ಲಿ ಬರಲಿರುವ ಶ್ರೀನಿವಾಸ ಪ್ರಭುವಿನ ಆಗಮನದ ನಿಮಿತ್ತ ಬೇಕಾಗಬಹುದಾದ ಸಿದ್ದತೆಯತ್ತ ಮನಗೊಡಲು ಚಂಚಲ ಚಿತ್ತದಲೆ ಹವಣಿಸತೊಡಗಿದ. ಮನಸೆಲ್ಲೊ ಇದ್ದು ನಿಜ ಗಮನವಿನ್ನೆಲ್ಲೊ ಇದ್ದ ಕಾರಣ ಆ ಕೆಲಸಕ್ಕೂ ಏಕಾಗ್ರತೆಯಿಂದ ಗಮನ ಕೆಂದ್ರೀಕರಿಸುವುದು ಕಷ್ಟವೆನಿಸತೊಡಗಿದರೂ, ಬರುವವನ ಮನೋಭಾವದ ಅರಿವಿದ್ದ ಕಾರಣ ಮನದಲ್ಲುತ್ಪನ್ನವಾಗಿದ್ದ ಭೀತಿ ನಿಧಾನವಾಗಿ ಚಂಚಲತೆಯನ್ನಧಿಗಮಿಸಿ, ಪೂರ್ವಸಿದ್ದತೆಗನುಗುಣವಾಗಿ ನೋಡಬೇಕಿದ್ದ ಸಣ್ಣಪುಟ್ಟ ವಿವರಗಳತ್ತ ಧ್ಯಾನವನ್ನೋಡಿಸಿ, ತನ್ನರಿವಿಲ್ಲದವನಂತೆ ಅದರಲ್ಲೆ ಮುಳುಗಿ ತಲ್ಲೀನನಾಗಿ ಹೋಗಿದ್ದ ಶ್ರೀನಾಥ.

ಶ್ರೀನಿವಾಸ ಪ್ರಭುವಿನ ಗುಣಾವಗುಣಗಳ ಸ್ಪಷ್ಟ ಪರಿಚಯವಿದ್ದ ಶ್ರೀನಾಥನಿಗೆ ಈ ಭೇಟಿಯಲ್ಲಿ ಅವನ ನಿರೀಕ್ಷೆಯೇನಿರಬಹುದೆಂದು ಊಹಿಸುವುದು ಕಷ್ಟವೇನೂ ಇರಲಿಲ್ಲ. ಅದರಲ್ಲೂ ಅವನನ್ನೂ ತೀರಾ ಹತ್ತಿರದಿಂದ ನೋಡಿದ್ದ ಹಾಗೂ ಅವನ ‘ಸೈಕಾಲಜಿ’ ಯನ್ನು ಗಾಢವಾಗಿ ಅಭ್ಯಸಿಸಿದ್ದ ಕಾರಣ ಅವನ ನಿರೀಕ್ಷಿತ ಮನಸ್ಥಿತಿಗನುಸಾರವಾಗಿ, ಅವನಿಗೆ ಬೇಕಾದ ರೀತಿಯ ವಿವರಗಳನ್ನು ಹೆಕ್ಕಿ ಎತ್ತಿ ತೋರಿಸುವ ಕೆಲಸ ಮಾಡಬೇಕಿತ್ತು. ಹೆಸರಿಗೆ ಮ್ಯಾನೇಜರನ ಪಟ್ಟಕ್ಕೇರಿದ್ದರೂ ಆಂತರ್ಯದಲ್ಲಿ ಪಕ್ಕಾ ಪ್ರೋಗ್ರಾಮರನ ಮನಸತ್ವ ಹೊಂದಿದ್ದ ಪ್ರಭುವಿಗೆ ಅದರ ಸಂಬಂಧಿತ ವಿಷಯಗಳೆ ಹೆಚ್ಚು ಪ್ರಾಮುಖ್ಯವಾಗಿರುತ್ತಿದ್ದವು. ಅಲ್ಲದೆ ಆ ದಿನಗಳಲ್ಲೆ ಅವನಲ್ಲೊಂದು ವಿಚಿತ್ರ ದೌರ್ಬಲ್ಯವನ್ನು ಗುರುತಿಸಿಕೊಂಡಿದ್ದ ಶ್ರೀನಾಥ. ತೀರಾ ಹಳೆಯ ಕಾಲದ ಕೊಬಾಲ್, ಪ್ಯಾಸ್ಕಲ್ ರೀತಿಯ ಪ್ರೋಗ್ರಾಮಿಂಗಿನ ಕಾಲದಿಂದ ಬಂದವನಾಗಿದ್ದ ಅವನಿಗೆ, ಅವನ ತಂಡದಲ್ಲೆ ಯಾರಾದರೂ ಏನಾದರೂ ಹೊಸ ಪ್ರೋಗ್ರಾಮನ್ನೊ ಅಥವಾ ಹೊಸ ವಿಧಾನವನ್ನೂ ಕಲಿತು ಬಂದರೆ ಅಥವಾ ಬಳಸಿಬಿಟ್ಟರೆ ಅವನಿಗೆ ಹೇಳಲಾಗದ ಅಪಾರ ತಳಮಳ, ಅಸುರಕ್ಷತಾ ಭೀತಿ ಹುಟ್ಟಿಕೊಂಡು ಬಿಡುತ್ತಿತ್ತು. ತಂಡದ ಪ್ರತಿಯೊಬ್ಬರೂ ಅವನಿಗೆ ಪೂರ್ಣವಾಗಿ, ಚೆನ್ನಾಗಿ ಗೊತ್ತಿರುವ ಮತ್ತು ಪರಿಣಿತಿಯಿರುವ ತಂತ್ರ ವಿಧಾನಗಳನ್ನಷ್ಟೆ ಬಳಸಬೇಕಿತ್ತಲ್ಲದೆ, ಅಪ್ಪಿ ತಪ್ಪಿ ಯಾರಾದರೂ ಏನಾದರೂ ವ್ಯತ್ಯಾಸ ಮಾಡಿಬಿಟ್ಟರೆ , ಸಿಟ್ಟಿನಿಂದ ಉರಿದೆದ್ದು ಆಕಾಶ ಭೂಮಿಯನ್ನು ಒಂದು ಮಾಡಿಬಿಡುತ್ತಿದ್ದ. ಸಾಲದಕ್ಕೆ ಯಾರನ್ನೂ ನಂಬುವ ಆಸಾಮಿಯೂ ಅಲ್ಲ; ಹೀಗಾಗಿ ಹಗಲೂ ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ತಂಡದ ಪ್ರೋಗ್ರಾಮರುಗಳು ಬರೆದು ಮುಗಿಸಿಟ್ಟಿದ್ದ ಪ್ರೋಗ್ರಾಮಿನೊಳಗೆಲ್ಲ ಹೋಗಿ ಹುಡುಕುತ್ತಿದ್ದ – ಯಾರಾದರೂ, ತನ್ನನ್ನೇನಾದರೂ ಏಮಾರಿಸಿಬಿಟ್ಟಿದ್ದಾರೆಯೆ ಎಂದು. ಆಧುನಿಕ ಜಗದ ತಾಂತ್ರಿಕ ವಿಧಿ ವಿಧಾನಗಳಲ್ಲಿ ಕೇವಲ ಒಬ್ಬರೆ ಸಂಪೂರ್ಣವಾಗಿ ಎಲ್ಲವನ್ನು ತಿಳಿದುಕೊಂಡು, ಅಭಿಮನ್ಯುವಿನಂತೆ ಏಕಾಂಗಿಯಾಗಿ ಎಲ್ಲವನ್ನು ನಿಭಾಯಿಸುವುದು ಸುತರಾಂ ಸಾಧ್ಯವಿಲ್ಲವೆಂಬ ಸತ್ಯ ಸಂಗತಿ ಅವನಲ್ಲಿನ್ನು ಸಾಕ್ಷಾತ್ಕಾರವಾಗಿರಲಿಲ್ಲ. ಹಾಗೆಂದು ಹೊರ ಜಗತ್ತಿನಲ್ಲಾಗುತ್ತಿದ್ದ ಮಾಹಿತಿ ತಂತ್ರಜ್ಞಾನದ ಕ್ಷಿಪ್ರ ಬದಲಾವಣೆಯ ಕ್ರಾಂತಿಯನ್ನು ಅವನು ಗಮನಿಸಿರಲಿಲ್ಲವೆಂದೇನೂ ಅಲ್ಲ ; ಅದೇನೆ ಬದಲಾವಣೆಯಾದರೂ ಅದು ತನ್ನ ಹೊಸ್ತಿಲಿನ ಮಟ್ಟಕ್ಕೆ ಮುಟ್ಟದೆಂಬ ಅಗಾಧ ಅಂಧ – ಆತ್ಮವಿಶ್ವಾಸವಷ್ಟೆ ಅವನಲ್ಲಿ ದಂಢಿಯಾಗಿದ್ದುದ್ದು. ಅವನಿಗರಿವಿಲ್ಲದೆ ಮತ್ತವನ ಅನುಮತಿಯಿಲ್ಲದೆ ಅವನಿಗೆ ಪರಿಣಿತಿಯಿಲ್ಲದ ಹೊಸತೇನೂ ಕಾಲಿಡಲೂ ಬಿಡದಂತೆ ಶತಾಯಗತಾಯ ಹೋರಾಡುತ್ತ ಕಾದುಕೊಂಡಿದ್ದ ಜತನದಿಂದ. ಹೀಗಾಗಿ ಕೆಲವೊಮ್ಮೊ ಹೊಸತಿನ ವಿಧಾನದಿಂದ ಸುಲಭವಾಗಿಬಿಡಬಹುದಿದ್ದ ಸಂಕೀರ್ಣ ಸಮಸ್ಯೆಗಳು, ಹಳೆಯ ವಿಧಾನದಿಂದ ಹೆಚ್ಚು ಕ್ಲಿಷ್ಟಕರವೂ, ತೀರಾ ನಿಯಮಿತ ವೈವಿಧ್ಯತೆಯಿಂದ ಕೂಡಿದ್ದವೂ ಆಗಿಬಿಡುತ್ತಿದ್ದವು. ಇದರಿಂದಾಗಿ ಅವನ್ನು ಮುಗಿಸಲು ಹೆಚ್ಚು ವೇಳೆ ಹಿಡಿಯುತ್ತಿದ್ದುದು ಒಂದು ತೊಡಕಾಗಿದ್ದರೆ, ಏನಾದರೂ ದೋಷ ಕಂಡು ಬಂದಲ್ಲಿ ಅದನ್ನು ನಿವಾರಿಸಲು ಹರಸಾಹಸ ಪಡಬೇಕಾಗುತ್ತಿತ್ತು. ಇದೆಲ್ಲಕ್ಕೂ ಮಿಗಿಲಾಗಿದ್ದ ಮತ್ತೊಂದು ತೊಂದರೆಯೆಂದರೆ, ಸದಾ ಹೊಸತಿನ ಕಲಿಕೆಗೆ ಹಾತೊರೆಯುವ ನೂತನ ಯುವ ಜನಾಂಗಕ್ಕೆ ಈ ನಿಯಂತ್ರಣ ನೀತಿ ಪಥ್ಯವಾಗದೆ ಮುಜುಗರವಾಗುತ್ತಿದ್ದುದು. ಅವನೊಡನೆ ಕೆಲಸ ಮಾಡುವ ಅವಕಾಶ ಸಿಕ್ಕಿದ ಯುವಕರೆಲ್ಲ ಹೇಗಾದರೂ, ಆ ಪ್ರಾಜೆಕ್ಟ್ ಮುಗಿಯುತ್ತಿದ್ದಂತೆ ಮತ್ತೆ ಬೇರೆ ತಂಡದ ಪ್ರಾಜೆಕ್ಟಿಗೆ ವರ್ಗಾಯಿಸಿಕೊಂಡುಬಿಡುತ್ತಿದ್ದರು. ಹೀಗಾಗಿ ಹೆಚ್ಚುಕಡಿಮೆ ಅವನ ನೆಚ್ಚಿನ ಪಟಾಲಂ ಮಾತ್ರವೆ ಸದಾ ಜತೆಗಿರುವ ನಿಷ್ಠ ತಂಡವಾಗಿ ಸ್ಥಾಪಿತವಾಗಿ ಹೋಗುತ್ತಿತ್ತು ಪ್ರತಿ ಪ್ರಾಜೆಕ್ಟಿನಲ್ಲೂ. ಇದರ ನಡುವೆಯೂ ಯಾರಾದರೂ ಧೀಮಂತ ಸಾಹಸಿಗರು, ಒಂದು ವೇಳೆ ಅವನ ಅನುಮತಿ ಪಡೆದೆ ಹೊಸತಿನ ಬಳಕೆಗುಪಕ್ರಮಿಸಿದರೂ, ಅವರು ಅದರ ಪ್ರತಿ ಮಿಲಿಮೀಟರನ್ನು ಸಂಪೂರ್ಣ ದಾಖಲಿಸುವಂತೆ ನೋಡಿಕೊಳ್ಳುತ್ತಿದ್ದ. ನಂತರ ತಾನೊಬ್ಬನೆ ಕುಳಿತುಕೊಂಡು, ಅದನ್ನು ಓದಿ ಜೀರ್ಣಿಸಿಕೊಂಡು ತಾನೂ ಅದರ ಪರಿಣಿತಿಯನ್ನು ಸಾಧಿಸಲು ಯತ್ನಿಸುತ್ತಿದ್ದ. ನಿನ್ನೆ ಮೊನ್ನೆ ಬಂದ ಹೊಸ ಹುಡುಗರೇನಾದರೂ ತಾವು ಹೊಸದಾಗಿ ಕಲಿತಿದ್ದ ಸಣ್ಣ ವಿಷಯವನ್ನು ಪ್ರಸ್ತಾಪಿಸಿದರೂ ಸಾಕು ಹೌಹಾರಿ ಎಗರಿ ಬೀಳುವ ಮಟ್ಟಕ್ಕಿತ್ತು ಅವನ ಆತಂಕದ ಭೀತಿ. ‘ ಒಹ್ ! ಇವನಿಗೆ ನನಗಿಂತ ಹೆಚ್ಚು ಗೊತ್ತಿದೆಯಲ್ಲಾ? ಇವನೇನು ನನ್ನ ಸ್ಥಾನಕ್ಕೆ ಎರವಾಗಿಬಿಡುತ್ತಾನೊ ಏನೋ?’ ಎಂಬಂತೆ ವರ್ತಿಸುವ ರೀತಿ ಕೆಲವೊಮ್ಮೆ ತೀರಾ ಹಾಸ್ಯಾಸ್ಪದವಾಗಿಯೂ ಕಾಣುತ್ತಿತ್ತು. ಕೇವಲ ಆರಂಭಿಕ ಹಂತದ ಪ್ರೋಗ್ರಾಮರನೊಬ್ಬ ಇಪ್ಪತ್ತು ವರ್ಷಗಳಿಗೂ ಮೀರಿದ ಅನುಭವವಿರುವ ಅವನಿಗೆ ಪ್ರತಿಸ್ಪರ್ಧಿಯಾಗಲಿ, ಸ್ಥಾನಕ್ಕೆ ಆತಂಕವನ್ನೊಡ್ಡುವ ಮಟ್ಟ ಮುಟ್ಟುವುದಾಗಲಿ ಊಹಾಲೋಕದಲೂ ಸಾಧ್ಯವಿರಲಿಲ್ಲ; ಆದರೆ ಅವನ ನಡುವಳಿಕೆ ಮಾತ್ರ ಆ ನೀಚ ಸ್ತರದ ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತ ಇರುತ್ತಿತ್ತು.

ಅದಾವ ಭೀತ ಆಂತರಿಕ ಮನಸತ್ವ ಆ ರೀತಿಯ ಅಸಂಭವನೀಯ ಭಯಕ್ಕೆ ಕಾರಣವಾಗಿತ್ತೊ ಏನೊ ಅರಿವಾಗದಿದ್ದರೂ, ಆ ದುರ್ಬಲತೆಯ ಹಿನ್ನಲೆಯೆ ಅವನೆಲ್ಲಾ ನಿರ್ಧಾರ, ಕಾರ್ಯ ಚಟುವಟಿಕೆಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಭಾವ ಬೀರುವುದನ್ನು ನಿಖರವಾಗಿ ಗುರುತಿಸಿದ್ದ ಶ್ರೀನಾಥ. ಹೀಗಾಗಿ ಅವನ ಮನಸತ್ವದನುಸಾರವೆ ಆಲೋಚಿಸುತ್ತಾ ಅವನೇನೇನನ್ನು ವಿಮರ್ಶಿಸಬಯಸಬಹುದೆಂದು ಊಹಿಸಿ ಅದರದೊಂದು ಪಟ್ಟಿ ಮಾಡಿಕೊಳ್ಳತೊಡಗಿದ. ಅವನು ತಾಂತ್ರಿಕ ಅಂಶದತ್ತ ಹೆಚ್ಚು ಆದರವಿದ್ದವನೆಂದು ಅರಿವಿದ್ದ ಕಾರಣ, ಆ ಕ್ಷೇತ್ರದ ಪರಿಧಿಯಲ್ಲೆ ಹೆಚ್ಚು ಗಮನ ನೀಡುತ್ತಿದ್ದಾಗ ಗೋಲೈವಿನ ಹಿಂದಿನ ವಾರದಲ್ಲಿ, ಕಡೆ ಗಳಿಗೆಯಲ್ಲಿ ಬದಲಿಸಿದ್ದ ಪ್ರಿಂಟು ಪ್ರೋಗ್ರಾಮಿನ ನೆನಪಾಗಿ, ಮೊದಲು ಸೌರಬ್ ದೇವನಿಗೆ ಹೇಳಿ ಅದರ ಡಾಕ್ಯುಮೆಂಟೇಷನ್ನನ್ನು – ಕನಿಷ್ಠ ಅದರ ಡ್ರಾಫ್ಟ್ ಪ್ರತಿಯನ್ನಾದರು ಸಿದ್ದವಿಟ್ಟುಕೊಂಡಿರಲು ಸೂಚನೆ ಕೊಡಬೇಕೆನಿಸಿತು. ಅದನ್ನು ತನ್ನ ಪಟ್ಟಿಗೆ ಸೇರಿಸುತ್ತಾ ಅದೆ ಜಾಡಿನಲ್ಲಿ ಸಾಗುತ್ತ ಜಾಲಾಡಿದಾಗ, ಹೆಚ್ಚುಕಡಿಮೆ ಅವನನ್ನು ಸಂಭಾಳಿಸಲು ಬೇಕಾದ ಸಾಮಾಗ್ರಿ ಸಲಕರಣೆಗಳೆಲ್ಲವೂ ಪಟ್ಟಿಯಲ್ಲಿ ಸೇರಿತೆನಿಸಿದಾಗ ಅದರಲೊಂದೊಂದನ್ನೆ ಆಯ್ದು ಅದರ ನಿರ್ವಹಣಾ ಜವಾಬ್ದಾರಿಯಿದ್ದ ತಂಡದ ಸದಸ್ಯರಿಗೆ ಮಿಂಚಂಚೆಯ ಮೂಲಕ ಸೂಚನೆ ರವಾನಿಸತೊಡಗಿದ. ಕೆಲವನ್ನು ಸ್ವಯಂ ತಾನೆ ನೇರ ನಿಭಾಯಿಸಬೇಕಿದ್ದ ಕಾರಣ ಅವುಗಳದನ್ನೆ ಬೇರೆ ಪಟ್ಟಿ ಮಾಡಿಕೊಂಡು ಪುಟ್ಟದೊಂದು ಚೀಟಿಗೆ ರವಾನಿಸಿ ಜೇಬಿಗೆ ಸೇರಿಸಿದ್ದ. ಅದೆಲ್ಲ ಮುಗಿವ ಹೊತ್ತಿಗೆ ಲಂಚಿನ ಸಮಯ ಹತ್ತಿರವಾಗುತ್ತಿತ್ತು. ಲಂಚಿಗೆ ಹೊರಡುವ ಮೊದಲೊಮ್ಮೆ ವೇರ್ಹೌಸಿನಲ್ಲಿದ್ದ ಸೌರಭ್ ದೇವ್ ಜತೆ ಮಾತಾಡಿ ಅಲ್ಲೆಲ್ಲ ಸುಗಮವಾಗಿ ನಡೆದಿದೆಯೆಂದು ಖಾತರಿ ಪಡಿಸಿಕೊಂಡ ಮೇಲೆ ಏಕೊ ಬಾಯೆಲ್ಲಾ ತೀರಾ ಒಣಗಿದಂತಾಗುತ್ತಿದೆಯೆಂದೆನಿಸಿ ಬಾಟಲಿಗೆ ಕೈ ಹಾಕಿದರೆ ಅದು ನೀರಿಲ್ಲದೆ ಖಾಲಿಯಾಗಿತ್ತು. ಕಾಫಿ ತಂದಿಡುವಾಗ ಸದಾ ಬಾಟಲಿಯಲ್ಲಿ ನೀರನ್ನು ತುಂಬಿಡುತ್ತಿದ್ದವಳು ಇಂದು ಬರದ ಕಾರಣ ಕಾಫಿಗೂ ಖೋತ, ನೀರಿಗೂ ಸೊನ್ನೆ ಎಂದರಿವಾಗುತ್ತಿದ್ದ ಪ್ರಜ್ಞೆಯಲ್ಲೆ ಅವಳೊಡನೆ ಮಾತನಾಡಿ ಸಂಭಾಳಿಸಬೇಕಿದ್ದ ಮಹಾನ್ ಕಾರ್ಯ ಮತ್ತೆ ತಟ್ಟನೆ ನೆನಪಾಗಿ, ಅದುವರೆಗೂ ಮರೆತಂತಿದ್ದ ಎಲ್ಲ ಕಹಿ ಮತ್ತೆ ಮರುಕಳಿಸಿ, ಇದ್ದಕ್ಕಿದ್ದಂತೆ ಮೈ ಪೂರ್ತಿ ಯಾವುದೊ ವಿಷಾದಪೂರ್ಣ ಖೇದವಾವರಿಸಿದವನಂತೆ ನಿರಾಸಕ್ತಿ ಮೂಡಿ ಊಟಕ್ಕೆ ಹೊರಡಲೂ ಮನಸಾಗದೆ ಸೀಟಿನಲ್ಲಿ ಕುಸಿದು ಕೂತುಬಿಟ್ಟಿದ್ದ ಶ್ರೀನಾಥ.

(ಇನ್ನೂ ಇದೆ)
__________

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

( ಪರಿಭ್ರಮಣ..24ರ ಕೊಂಡಿ – https://nageshamysore.wordpress.com/00211-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-24/ )

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s