00211. ಕಥೆ: ಪರಿಭ್ರಮಣ..(24)

00211. ಕಥೆ: ಪರಿಭ್ರಮಣ..(24)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00210. ಕಥೆ: ಪರಿಭ್ರಮಣ..(24)

( ಪರಿಭ್ರಮಣ..23ರ ಕೊಂಡಿ – https://nageshamysore.wordpress.com/00210-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-23/ )

ಅಂದಿನ ದಿನವೆಲ್ಲ ಹೇಗೊ ಚಡಪಡಿಕೆಯಲ್ಲೆ ಕಳೆದು ಅರೆಬರೆ ಮನದಲ್ಲೆ ಸಿದ್ದತೆಯತ್ತ ಗಮನ ನೀಡಿದ್ದ ಶ್ರೀನಾಥನಿಗೆ ಕನಿಷ್ಠ ಮರುದಿನವಾದರೂ ಅವಳು ತಪ್ಪಿಸಿಕೊಳ್ಳದೆ ಆಫೀಸಿಗೆ ಬಂದರೆ ಸಾಕಪ್ಪಾ ಅನಿಸಿಬಿಟ್ಟಿತ್ತು. ಶ್ರೀನಿವಾಸ ಪ್ರಭುವಿನ ಆಗಮನಕ್ಕೆ ಮೊದಲು ಅವಳೊಡನೆ ಒಮ್ಮೆಯಾದರೂ ಮಾತನಾಡದಿದ್ದರೆ ಸಮಧಾನವಿರುತ್ತಿರಲಿಲ್ಲದ ಕಾರಣ ಅದೊಂದು ನಿರಂತರ ಆತಂಕವಾಗಿ ಕಾಡಲಾರಂಭಿಸಿತ್ತು. ಮರುದಿನ ಶುಕ್ರವಾರವಾದ ಕಾರಣ ಆ ದಿನವೂ ಅವಳು ಬರಲಿಲ್ಲವೆಂದರೆ ಇನ್ನು ಸೋಮವಾರದವರೆಗೂ ಕಾಯಬೇಕಾಗುತ್ತಿತ್ತು. ಅದೆ ದಿನವೆ ಶ್ರೀನಿವಾಸ ಪ್ರಭುವಿನ ಆಗಮನವೂ ಆಗುತ್ತಿದ್ದ ಕಾರಣ ಆ ಸ್ಥಿತಿಯಲ್ಲಿ ಅವಳೊಡನೆಯ ಖಾಸಗಿ ಮಾತುಕತೆ ಮಟ್ಟವನ್ನು ಸಂಭಾಳಿಸಿ ನಿಭಾಯಿಸುವ ಭರತನಾಟ್ಯ ಮತ್ತು ಅವನ ಜತೆಯಲ್ಲಿನ ಮೀಟಿಂಗಿನ ಒತ್ತಡ – ಎರಡೂ ಮನಸಿಗೆ ತ್ರಾಸದಾಯಕವಾಗಿ ಸುತರಾಂ ಸಮರ್ಪಕವಾದುದೆನಿಸಿರಲಿಲ್ಲ. ಅದರಿಂದಾಗಿ ಅವಳು ಶುಕ್ರವಾರ ಖಂಡಿತವಾಗಿ ಆಫೀಸಿಗೆ ಬರಲಪ್ಪ ಎಂದು ಕಂಡೂ ಕಾಣದ ದೈವಗಳಲೆಲ್ಲ ಪ್ರಾರ್ಥನೆ ಸಲ್ಲಿಸುತ್ತಾ ಮರುದಿನವನ್ನು ಎದುರು ನೋಡುತ್ತಿದ್ದವನಿಗೆ ಆ ದಿನ ಬಂದಾಗ ಮತ್ತೆ ಅಗಾಧ ನಿರಾಶೆಯೆ ಕಾಡಿತ್ತು – ಅವಳು ಆ ದಿನವೂ ಪತ್ತೆಯಿಲ್ಲದಂತೆ ಮಾಯವಾಗಿಬಿಟ್ಟಿದ್ದಳು..! ಮಿಕ್ಕವರಲ್ಲಿ ಅವಳ ಗೈರುಹಾಜಾರಾತಿಯ ಬಗ್ಗೆ ಬಹಿರಂಗವಾಗಿ ವಿಚಾರಿಸುವಂತೆಯೂ ಇರಲಿಲ್ಲ – ಸುಮ್ಮನೆ ಇಲ್ಲಸಲ್ಲದ ಶಂಕೆಗೆ ಆಸ್ಪದ ಕೊಡದಂತಿರಲು. ಹೌಸ್ಕೀಪಿಂಗಿನ ಸಾಮಾನ್ಯ ನೌಕರಳೊಬ್ಬಳ ಕುರಿತು ಅತಿ ಹೆಚ್ಚಿನ ಕಾಳಜಿ ತೋರಿ, ಅದು ಮತ್ತಷ್ಟು ಸಂಶಯ ಗೊಂದಲಕ್ಕೆ ಕಾರಣವಾಗಿ ಸಮಸ್ಯೆಯ ಅಳವನ್ನು ಮತ್ತಷ್ಟು ಜಟಿಲವಾಗಿಸಿ, ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣವಾಗಿಸಿಕೊಳ್ಳಲು ಅವನಿಗೆ ಇಷ್ಟವಿರಲಿಲ್ಲ. ಒಟ್ಟಾರೆ ಒಂದು ಕಡೆ ಅವಳ ಅನಿರೀಕ್ಷಿತ ಅನುಪಸ್ಥಿತಿ ಮರಿ ಹಾಕಿದ ಬೆಕ್ಕಿನಂತಹ ಚಡಪಡಿಕೆಗೆ ಕಾರಣವಾಗಿದ್ದರೆ, ಅದನ್ನು ಬಾಹ್ಯದಲ್ಲಿ ತೋರ್ಪಡಿಸಿಕೊಳ್ಳದೆ ಮುಂದಿನ ವಾರದ ಮೀಟಿಂಗಿನ ಸಿದ್ದತೆಯತ್ತ ಗಮನ ಹರಿಸಬೇಕಾದ ಅನಿವಾರ್ಯ ಪರಿಸ್ಥಿತಿ ಮತ್ತಷ್ಟು ಆಂತರಿಕ ಅಕಾರಣ-ರೌದ್ರತೆಗೆ ಕಾರಣವಾಗಿತ್ತು. ಅನ್ಯಮನಸ್ಕ ಭಾವವನ್ನು ಮೀರಿದ ಕಾರ್ಯತತ್ಪರತೆಯ ಶಿಸ್ತೊ, ಅಭ್ಯಾಸ ಬಲದಿಂದ ಯಾಂತ್ರಿಕವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಛಿದ್ರ ಮನದ ವಿಚಿತ್ರ ಸಾಮರ್ಥ್ಯದ ಪರಿಯೊ – ಮೀಟಿಂಗಿಗೆ ಬೇಕಾದ ಸಿದ್ದತೆ ಮಾತ್ರ ಹೇಗೊ ಕುಂಟುತ್ತಾ ಸಾಗುತ್ತಿತ್ತು . ಆದರೆ ದಿನದ ಕೊನೆಯಾಗುತ್ತಿದ್ದಂತೆ ಇನ್ನು ಮುಗಿಯದ ಕೆಲಸಗಳ ಉದ್ದದ ಪಟ್ಟಿ ಬಾಕಿಯುಳಿದಿದ್ದು ಕಂಡು ಅದೆಲ್ಲವನ್ನು ಅಂದೆ ಮುಂದುವರೆಸಿ ಮುಗಿಸುವ ಇಚ್ಛಾಶಕ್ತಿ ಸಾಲದೆ, ವಾರದ ಕೊನೆಯಲ್ಲಿ ಬಿಡುವು ಮಾಡಿಕೊಂಡು ಮನೆಯಿಂದಲೆ ಮಾಡಿ ಮುಗಿಸುವುದೆಂದು ನಿರ್ಧರಿಸಿ ಮೇಲೆದ್ದಿದ್ದ. ಹಾಗೆ ತೀರ್ಮಾನಿಸುವ ಹೊತ್ತಲ್ಲೆ, ಮನೆಯ ಬದಲು ಮರುದಿನವೂ ಆಫೀಸಿಗೆ ಬಂದರೆ ಹೇಗೆ ಅನಿಸಿದಾಗ ಇದ್ದಕ್ಕಿದ್ದಂತೆ ಮನದಾ ಯಾವುದೊ ಮೂಲೆಯ ಆಶಾಭಾವವೊಂದು ಬಹುಶಃ ಅವಳು ವಾರದ ಕೊನೆಗೆ ಆಫೀಸಿಗೆ ಬಂದರೂ ಬರಬಹುದೆಂಬ ಆಸೆ ಹುಟ್ಟಿಸಿತ್ತು. ಆ ಅನಿಸಿಕೆ ಮೂಡುತ್ತಿದ್ದಂತೆಯೆ ಒಂದು ರೀತಿಯ ಅನುಲ್ಲೇಖಿತ ಉಲ್ಲಸಿತ ಭಾವ ಒಡಮೂಡಿ ಅವಳು ಬಂದಿದ್ದೆ ಆದರೆ ನಾಳೆಗೆ ಈ ಪ್ರಶ್ನೆ ಖಂಡಿತ ಪರಿಹಾರವಾಗಬಹುದೆಂಬ ಅತೀಂದ್ರಿಯ ಪ್ರಜ್ಞೆಯ ಒತ್ತಾಸೆ ಬಲವಾದ ನಂಬಿಕೆ ಮೂಡಿಸಿ, ಆ ನಂಬಿಕೆ ತಂದ ಹರ್ಷದಲ್ಲೆ ಹಗುರಾದ ಮನದಲ್ಲಿ ಎದ್ದು ಹೊರಟಿದ್ದ ಶ್ರೀನಾಥ.

ಆದರೆ ಅವನಂದುಕೊಂಡಿದ್ದಂತೆ ನಡೆಯದೆ, ಶನಿವಾರವೂ ಅವಳು ಬಂದಿರಲಿಲ್ಲ. ಬೇರೆ ಬೇರೆ ಕಾರ್ಯ ನಿಮಿತ್ತ ಮಿಕ್ಕ ಇತರೆ ವಿಭಾಗಗಳ ಒಂದಷ್ಟು ಜನರು ಬಂದಿದ್ದರೂ ಕುನ್. ಸು ಮಾತ್ರ ಸುಳಿವೆ ಇಲ್ಲದವಳ ಹಾಗೆ ಕಾಣೆಯಾಗಿ ಹೋಗಿದ್ದಳು. ಒಂದು ದಿನವೂ ತಪ್ಪಿಸಿಕೊಳ್ಳದೆ ಬರುತ್ತಿದ್ದವಳು ಹೀಗೆ ಏಕಾಏಕಿ ಬಾರದೆ ಹೋದಾಗ ಅವಳಿಗೇನಾಯ್ತೊ ಎಂಬ ಆತಂಕಕ್ಕಿಂತ, ತಮ್ಮ ದುಡುಕಿನ ಮಿಲನದ ತರುವಾಯದ ಸಂಘಟನೆಗಳ ವಿಪರೀತ ಪರಿಣಾಮದಿಂದೇನಾದರೂ ಅವಳು ಬರಲಾಗದ ಪರಿಸ್ಥಿತಿಯುಂಟಾಗಿಬಿಟ್ಟಿತೆ ಅನಿಸಿ ಭಯವಾಗಹತ್ತಿತ್ತು. ಕಾಕತಾಳೀಯವಾಗಿ ಅವಳಿಗೆ ಇದೆ ಹೊತ್ತಿನಲ್ಲಿ ಹುಷಾರು ತಪ್ಪಿ, ಜ್ವರವೊ ನೆಗಡಿಯೊ ಕೆಮ್ಮೊ ಭಾಧಿಸಿ ಅವಳು ಬರಲಿಲ್ಲವೆಂದಿದ್ದರೆ ಅದೊಂದು ರೀತಿ ಪರವಾಗಿರಲಿಲ್ಲ. ಅವಳ ಗೈರುಹಾಜರಿಗೆ ಆ ರೀತಿಯ ಅನಾರೋಗ್ಯವೆ ಕಾರಣವಾಗಿರಲೆಂದು ಅವನು ಮನಸಾರೆ ಪ್ರಾರ್ಥಿಸುತ್ತಿದ್ದುದು ಉಂಟು. ಆದರೀಗ ಅವಳು ಮತ್ತೆ ಕೆಲಸಕ್ಕೆ ಬರುವವರೆಗೆ ಆ ಪ್ರಶ್ನೆಗೆ ಉತ್ತರ ಸಿಗುವಂತಿರಲಿಲ್ಲ. ಹಾಗೆ ಯೋಚಿಸಿತ್ತಾ ಕುಳಿತವನಿಗೆ ಹೀಗೆ ಬರದವಳಿಗಾಗಿ ವ್ಯರ್ಥವಾಗಿ ವ್ಯಥೆ ಪಡುತ್ತಾ ಊಹನಾಲೋಕದಲ್ಲಿ ಭೀತಿಗೊಳ್ಳುತ್ತಾ ಕೂರುವ ಬದಲು, ತೀರಾ ವಿಷಮ ಸ್ಥಿತಿಯೆ ಎದುರಾಗಬಹುದೆಂದು ಭಾವಿಸಿಕೊಂಡು ಅದರ ಪರಿಧಿಯಲ್ಲುಂಟಾಗಬಹುದಾದ ಕಠಿಣಕರ ಪರಿಸ್ಥಿತಿಯನ್ನೆದುರಿಸುವ ಸಿದ್ದತೆಯತ್ತ ಗಮನಿಸುವುದು ಒಳಿತೆನಿಸಿತು. ಒಂದು ವೇಳೆ ನಂತರದ ಆಗುಹೋಗುಗಳು ಸರಳವಾಗಿ ಪರಿವರ್ತಿತಗೊಂಡರೂ ಸಿದ್ದತೆಯೇನೂ ವ್ಯರ್ಥವಾಗುವುದಿಲ್ಲ. ಹೀಗಾಗಿ ಅದುವರೆವಿಗೂ ಈ ವಿಷಯದಲ್ಲಿ ಸುಪ್ತವಾಗಿ ಹಿನ್ನಲೆಗೆ ಸರಿದಿದ್ದ ಅವನ ಪ್ರಾಜೆಕ್ಟು ಮ್ಯಾನೇಜರನ ಮನಸತ್ವ ಜಾಗೃತವಾಗಿ, ‘ರಿಸ್ಕ್ ಮ್ಯಾನೆಜ್ಮೆಂಟ್’ ದಿಸೆಯತ್ತ ಗಂಭೀರವಾಗಿ ಆಲೋಚಿಸತೊಡಗಿತು. ಹಾಗೆ ಸಮಾಧಾನವಾಗಿ ಅಲೋಚಿಸತೊಡಗಿದಂತೆ ಎಲ್ಲವೂ ತಿಳಿಯಾಗತೊಡಗಿ ಭಾವನಾತ್ಮಕತೆಯ ಪ್ರಭಾವ ಕರಗಿ ಅದರ ಜಾಗದಲ್ಲಿ ತಾರ್ಕಿಕ ಮತ್ತು ವಾಸ್ತವಿಕ ಸಾಧ್ಯತೆಗಳ ಪರಿವೆಯ ಚಿತ್ರಣ ಸ್ಪಷ್ಟವಾಗಿ ಮೂಡತೊಡಗಿ, ಆ ಚಿಂತನಾ ಪ್ರಕಾರದಲ್ಲಿ ಅವಳು ಸೋಮವಾರವೆ ಆಫೀಸಿಗೆ ಬಂದು ಮಾತಿಗೆ ಸಿಕ್ಕಿದರೂ ಆಕಾಶ ತಲೆಯ ಮೇಲೆ ಬೀಳುವ ಪರಿಸ್ಥಿತಿಯೇನೂ ಬರಲಾರದೆನಿಸಿತು. ಆ ಸಂದರ್ಭವೆ ಉಂಟಾದರೂ, ಅಂತಹ ಸನ್ನಿವೇಶದಲ್ಲಿ ಸೃಷ್ಟಿಯಾಗಬಹುದಾದ ಯಾವ ಯಾವ ಸಾಧ್ಯತೆಗಳಿವೆಯೆಂದು ಲೆಕ್ಕ ಹಾಕುತ್ತ ಅದಕ್ಕಾವ ರೀತಿಯ ಪ್ರತಿಕ್ರಿಯೆ ಸೂಕ್ತವೆಂದು ಅವಲೋಕಿಸುತ್ತ ಹೋದಂತೆ ಎಲ್ಲವನ್ನು ನಿಭಾಯಿಸುವ ಒಂದಲ್ಲ ಒಂದು ದಾರಿ ತೀರಾ ಸ್ಪಷ್ಟವಾಗಿಯಲ್ಲದಿದ್ದರೂ ಅಸ್ಪಷ್ಟವಾಗಿ ಕಾಣಿಸತೊಡಗಿತು. ತೀರಾ ದುಸ್ಥಿತಿಯೆಂದರೂ ಹೇಗಾದರು ಏಗಿಕೊಂಡು ಮುಂದಿನ ವಾರದ ಅತಿ ಗಂಭೀರ ಮತ್ತು ಪ್ರಾಮುಖ್ಯತೆಯುಳ್ಳ ಸರಕಷ್ಟನ್ನು ಮಾತ್ರ ನಿಭಾಯಿಸಿ, ಶ್ರೀನಿವಾಸ ಪ್ರಭು ಅಲ್ಲಿರುವತನಕ ಏನೂ ಗೊಂದಲವಾಗದಂತೆ ನೋಡಿಕೊಂಡರೆ ಸಾಕು.. ಅವನು ಹೋದ ನಂತರ ಮಿಕ್ಕೆಲ್ಲವನ್ನು ಒತ್ತಡವಿಲ್ಲದ ವಾತಾವರಣದಲ್ಲಿ ಸರಾಗವಾಗಿ ನಿರ್ವಹಿಸಿಕೊಳ್ಳಬಹುದು ಎನ್ನುವ ಸಾಧ್ಯತೆ ಸ್ಪಷ್ಟವಾದಾಗ ಅದುವರೆಗಿನ ಭಾರವೆಲ್ಲ ತಲೆಯಿಂದ ಇಳಿದಂತಾಗಿ ಮತ್ತೆ ಬಹುತೇಕ ನಿರಾಳ ಮನಸ್ಸಿನಿಂದ ಮಿಕ್ಕ ಸಿದ್ದತೆಯ ಕೆಲಸವನ್ನೆಲ್ಲಾ ಚಕಚಕನೆ ಮುಗಿಸತೊಡಗಿದ. ಎಲ್ಲಾ ಸಿದ್ದತೆ ಮುಗಿದ ಹೊತ್ತಿಗೆ ಆ ಒಂದು ಭಾಗದ ಹೊರೆಯಿಳಿದ ಕಾರಣಕ್ಕೊ ಏನೊ, ವಿವರಣೆಗತೀತವಾದ ನಿರಾಳತೆಯ ಭಾವವೊಂದು ಇಡಿ ದೇಹವನ್ನೆಲ್ಲ ಆವರಿಸಿ ತಾನು ಅಲ್ಲಿಯತನಕ ಅದೇಕಿಷ್ಟು ಚಿಂತಿತನಾಗಿದ್ದೆ ಎಂದರಿವಾಗದೆ ಅಚ್ಚರಿಪಡುತ್ತ ಆಫೀಸಿನಿಂದ ಹೊರಕ್ಕೆ ನಡೆದಿದ್ದ ಶ್ರೀನಾಥ.

ಇದೆಲ್ಲದರ ನಡುವೆ ಅವನು ಸಾಕಷ್ಟು ಗಮನ ನೀಡದ ಮತ್ತೊಂದು ಸಮಾಧಾನಕರ ವಿಷಯವೂ ಅವನ ಬಾಹ್ಯ ಪ್ರಜ್ಞೆಗರಿವಿಲ್ಲದಂತೆ ಪ್ರಭಾವ ಬೀರಿತ್ತು – ಪ್ರಾಜೆಕ್ಟು ಗೋಲೈವಿನ ನಂತರದ ಎಲ್ಲ ಚಟುವಟಿಕೆಗಳು ಕೊಂಚವೂ ಅಡೆತಡೆಯಿಲ್ಲದೆ ಸುಗಮವಾಗಿ ಸುಖಕರವಾಗಿ ಮುನ್ನಡೆದಿತ್ತು . ಆ ಸ್ಥಿತಿಯನ್ನು ಕಾಯ್ದುಕೊಂಡಿರುವ ತನಕ ಶ್ರೀನಿವಾಸ ಪ್ರಭು ಬರಿ ಒಣ ಕಿರಿಕಿರಿ ಮಾಡಬಹುದಿತ್ತಲ್ಲದೆ ಮತ್ತೇನೂ ವಿಧ್ವಂಸಕ ಸದೃಶ್ಯ ಗದ್ದಲ ಮಾಡುವಂತಿರಲಿಲ್ಲ. ಅವನೆ ನಾಯಕತ್ವ ವಹಿಸಿದ್ದ ಅದೆಷ್ಟೊ ಹಳೆಯ ಅನುಭವಗಳಿಗೆ ಹೋಲಿಸಿದರೆ, ಈ ಪ್ರಾಜೆಕ್ಟಿನ ಉದ್ಘಾಟನ ತರುವಾಯದ ಪ್ರಗತಿ ಅವನ ಕನಸಿನಲ್ಲೂ ಎಣಿಸಲಾಗದಷ್ಟು ಸುಗಮವಾಗಿ ಸಾಗಿತ್ತು – ಬರಿ ತಾಂತ್ರಿಕವಾಗಿ ಮಾತ್ರವಲ್ಲದೆ ವ್ಯಾಪಾರ ವಹಿವಾಟಿನ ದೈನಂದಿನ ವ್ಯವಹಾರಗಳು ಸೇರಿದಂತೆ. ದೊಡ್ಡದೊಂದು ಸಿಸ್ಟಮ್ಮಿನ ಬದಲಾವಣೆ ಆಗಿದೆಯೆಂದು ಎಷ್ಟೊ ಜನರ ಗಮನಕ್ಕಾಗಲಿ, ಅನುಭವಕ್ಕಾಗಲಿ ಬಾರದಷ್ಟು ನವಿರಾಗಿ ಉರುಳಿತ್ತು ಯಶೋಗಾಥೆಯ ಚಕ್ರ. ಆ ಫಲಿತಾಂಶ ಅವನಿಗೆ ಪ್ರಿಯವಾದುದಲ್ಲದಿದ್ದರೂ, ಅದಕ್ಕವನು ವೈಯಕ್ತಿಕವಾಗಿ ಹೊಟ್ಟೆಕಿಚ್ಚು, ಈರ್ಷೆ ಪಡುವುದನ್ನು ಬಿಟ್ಟು ಮತ್ತೇನೂ ಮಾಡುವಂತಿರಲಿಲ್ಲ. ಇದೆಲ್ಲಾ ಅಂಶಗಳು ಸೇರಿ ತಾನು ನಿಜಕ್ಕೂ ಹೆದರಿ ಕಂಪಿಸುವ ಪರಿಸ್ಥಿತಿಯಲ್ಲಿ ಇನ್ನೂ ಸಿಲುಕಿಲ್ಲವೆಂಬ ನೈಜ ಸತ್ಯದ ಅರಿವು ಮನದಂಗಳದಲ್ಲಿ ಪ್ರಸರಿಸಿದಂತೆ ಒಂದು ವಿಧದ ಪ್ರಪುಲ್ಲ ಭಾವ ಒಳಗೆಲ್ಲ ಹರಡಿಕೊಂಡಂತಾಗಿ ಬೇಡದ ಭಾರ ಕಳೆದು ಹಗುರಾದ ಅನುಭೂತಿ ಮೈ ಮನ ತುಂಬಿಕೊಂಡಿತ್ತು ಶ್ರೀನಾಥನಿಗೆ. ಆ ನಿರಾಳತೆಯೊದಗಿಸಿದ ನೆಮ್ಮದಿಯಿಂದಾಗಿ ಬಹಳ ದಿನಗಳ ನಂತರ, ಆ ಶನಿವಾರ ರಾತ್ರಿ ಪೂರ್ತಿ ಮನಸಾರೆ ಮೈಮರೆತವನಂತೆ ನಿದ್ರಿಸಿದ್ದ ಶ್ರೀನಾಥ !

ಆ ಭಾನುವಾರದ ಪೂರ್ತಿ ಬೇರೇನೂ ಕೆಲಸ ಮಾಡದೆ ಆಲಸಿಕೆಯೊಡನೆ ಕೂತಲ್ಲೆ ಯಾವುದೊ ಪುಸ್ತಿಕೆ ಓದುತ್ತಲೊ, ಟೀವಿ ನೋಡುತ್ತಲೊ ಕಾಲ ಕಳೆದು ಪೂರ್ಣ ವಿರಾಮದಲ್ಲಿ ಚೇತರಿಸಿಕೊಂಡ ಉತ್ಸಾಹದಿಂದ ಸೋಮವಾರದ ದಿನ ಬೆಳಿಗ್ಗೆ ಆಫೀಸಿಗೆ ಬರುತ್ತಿದ್ದಂತೆ, ಅಷ್ಟೊತ್ತಿಗಾಗಲೇ ಬಂದು ಕೂತಿದ್ದ ಶ್ರೀನಿವಾಸ ಪ್ರಭು ಕಣ್ಣಿಗೆ ಬಿದ್ದಿದ್ದ. ಹಿಂದಿನ ದಿನವೆ ವಿಮಾನದಲ್ಲಿ ಪ್ರಯಾಣಿಸಿ ಬಂದಿದ್ದ ಕಾರಣ ಅವನು ಬೆಳಿಗ್ಗೆ ಬೇಗ ಬರುವನೆಂದು ಶ್ರೀನಾಥ ಊಹಿಸಿದ್ದರೂ, ಬೇಕೆಂತಲೆ ಅವಸರ ಮಾಡದೆ ಪ್ರತಿದಿನದಂತೆ ಮಾಮೂಲಿ ಹೊತ್ತಿಗೆ ಹೊರಟು ಬಂದಿದ್ದ. ಬರುತ್ತಿದ್ದಂತೆ ಮುಖ ಊದಿಸಿ ಕೂತಿದ್ದ ಶ್ರೀನಿವಾಸ ಪ್ರಭುವನ್ನು ಕಂಡಾಗಲೆ ಅವನಿಗಾಗಿರಬಹುದಾದ ಅಸಮಾಧಾನದ ಅರಿವಾದರೂ ತೋರ್ಪಡಿಸಿಕೊಳ್ಳದೆ, ಏನೂ ಅರಿಯದವನಂತೆ ಮುಖದಲ್ಲಿ ನಗೆ ಅರಳಿಸುತ್ತಾ ‘ಹಲೋ ಸಾರ್.. ಯಾವಾಗ ಬಂದ್ರಿ ?’ ಎಂದು ವಿಚಾರಿಸಿಕೊಂಡೆ ಒಳಗಡಿಯಿಟ್ಟಿದ್ದ. ಬಹುಶಃ ಅವನು ಆಫೀಸಿಗೆ ಬಂದ ಹೊತ್ತಿನಲ್ಲಿ ಇನ್ನೂ ಯಾರೂ ಬಂದಿರದ ಕಾರಣ ಒಳಗೆ ಬರಲು ರಹದಾರಿ ಕೊಡುವ ಆಕ್ಸೆಸ್ ಕಾರ್ಡಿಲ್ಲದೆ ಪರದಾಡಿಕೊಂಡೆ ಕಾದು ಕೂತಿದ್ದಿರಬೇಕು; ಅದಕ್ಕೆ ಈ ಹನುಮಂತನ ಅವತಾರ ಎಂದು ಒಳಗೊಳಗೆ ನಗುತ್ತ ಸಾವಕಾಶವಾಗೆ ಅವನಿಗೆ ಕೂಡಲೊಂದು ನೆಟ್ವರ್ಕಿದ್ದ ಸೀಟು ತೋರಿಸಿ ತನ್ನ ಲ್ಯಾಪ್ಟಾಪು ಬಿಚ್ಚಿ ಹೊಸದಾಗಿ ಬಂದಿದ್ದ ಇ-ಮೇಯಿಲಿನತ್ತ ಕಣ್ಣಾಡಿಸತೊಡಗಿದ್ದ. ಮೀಟಿಂಗು ಆರಂಭ ಗಂಟೆ ಹತ್ತಕ್ಕೆಂದು ನಿರ್ಧರಿಸಿದ್ದ ಕಾರಣ ಯಾವುದೆ ಟೆಂಕ್ಷನ್ ಇಲ್ಲದೆ ಹೆಚ್ಚು ಕಡಿಮೆ ತನ್ನನ್ನು ನಿರ್ಲಕ್ಷಿಸಿದಂತೆ ಸಾವಧಾನವಾಗಿ ಕೂತಿದ್ದವನನ್ನು ಕಂಡು ಮೈಯೆಲ್ಲಾ ಉರಿಯುತ್ತಿದ್ದರೂ ಬೇರೇನೂ ಮಾಡಲಾಗದೆ ತಾನೂ ಮೆಯಿಲ್ ಬಿಚ್ಚಿಕೊಂಡು ಕುಳಿತಿದ್ದ ಶ್ರೀನಿವಾಸ ಪ್ರಭು. ಆ ಹೊತ್ತಿನಲ್ಲೂ ಸುತ್ತಲೊಮ್ಮೆ ಕಣ್ಣು ಹಾಯಿಸಿ ಕುನ್. ಸು ಏನಾದರೂ ಬಂದಿರಬಹುದೆ ಎಂದು ಅವಲೋಕಿಸಿದ್ದ ಶ್ರೀನಾಥನಿಗೆ ಅವಳು ಬಂದಿರಬಹುದಾದ ಕುರುಹೇನೂ ಕಾಣದಿದ್ದರೂ, ಹಿಂದಿನ ದಿನಗಳ ಮಥನಾ ನಂತರದ ಸ್ಪಷ್ಟತೆಯಿಂದಾಗಿ ಮನಸೇನೊ ನಿರಾತಂಕವಾಗಿತ್ತು. ಆ ಆರಂಭದ ಧನಾತ್ಮಕ ಮನಸ್ಥಿತಿ ತಂದಿದ್ದ ಹೊಸ ತರದ ಹುರುಪು ಮೈ ನೇವರಿಸಿದಂತಾಗಿ ಮೀಟಿಂಗಿನಲ್ಲೂ ಎಲ್ಲಾ ಸೂಸೂತ್ರವಾಗಿ ನಡೆಯಬಹುದೆಂಬ ಅನಿಸಿಕೆ ಮೂಡಿ ಮನಸು ಮತ್ತಷ್ಟು ಪ್ರಪುಲ್ಲಿತವಾಗಿತ್ತು. ಆ ಒಳಗಿನ ಸುಖಾನುಭವ ಏನೊ ಗಾಢ ತೀವ್ರತೆಯನ್ನನುಭವಿಸಿದ ಅನುಭಾವದಲ್ಲಿ ಮೆಲುವಾದ ಶಿಳ್ಳೆಯಾಗಿ ಹೊರಡಲಾರಂಭಿಸಿದಾಗ, ತಟ್ಟನೆ ಅದು ಶ್ರೀನಿವಾಸ ಪ್ರಭುವಿನಲ್ಲಿ ಬೇರೆಯೆ ತರದ ಅಪಾರ್ಥಕ್ಕೆ ಕಾರಣವಾಗಬಹುದೆಂದರಿವಾಗಿ, ಬಂದ ಶಿಳ್ಳೆಗೆ ನಿಟ್ಟುಸಿರಿನ ಹುಸಿ ರೂಪ ತೊಡಿಸಿ ನುಂಗಿಕೊಂಡಿದ್ದ. ಅಂತೂ ಆ ದಿನ ಬೆಳಗಿನ ಹತ್ತಕ್ಕೆ ಸರಿಯಾಗಿ ಮೀಟಿಂಗು ಆರಂಭವಾದಾಗ ಸಂಪೂರ್ಣ ಹುಮ್ಮಸ್ಸಿನಲ್ಲಿ ತನ್ನ ಪರಿಕರಗಳೊಂದಿಗೆ ಸರ್ವಸನ್ನದ್ದನಾಗಿ ಬಿಟ್ಟಿದ್ದ ಶ್ರೀನಾಥ.

ಮೀಟಿಂಗಿನ ಅಜೆಂಡಾ ಮೊದಲೆ ನಿರ್ಧರಿಸಿದ್ದ ಕಾರಣ ಅದರನುಸಾರವೆ ಆರಂಭಿಸಲು ಯೋಜಿಸಿದ್ದ ಶ್ರೀನಾಥನನ್ನು ಆರಂಭದಲ್ಲೆ ತಡೆದಿದ್ದ ಶ್ರೀನಿವಾಸ ಪ್ರಭು, ತಾನು ಆ ದಿನವೆ ವೇರ್ಹೌಸಿಗೂ ಭೇಟಿ ನೀಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದ. ವೇರ್ಹೌಸಿನ ಭೇಟಿ ವೇಳಾಪಟ್ಟಿಯ ಕಡೆಯ ದಿನದಲ್ಲಿ ಈಗಾಗಲೆ ಸೇರಿಸಿದ್ದರೂ ಅದನ್ನು ಮುಂದಕ್ಕೆ ಜರುಗಿಸಿ ಮೊದಲ ದಿನದ ಕಾರ್ಯಸೂಚಿಗೆ ಸೇರಿಸಲು ಆಶಿಸಿದ್ದ. ಅದನ್ನು ನೋಡಲು ಅಷ್ಟೊಂದು ಅವಸರವೇಕೆಂದು ಶ್ರೀನಾಥನೂ ಊಹಿಸಬಲ್ಲವನಾಗಿದ್ದ. ಎಲ್ಲಾ ಪ್ರಕ್ರಿಯೆಗಳು ಅಭಾಧಿತವಾಗಿ, ಅಡೆತಡೆಯಿಲ್ಲದೆ ಸಾಗುತ್ತಿದೆಯೆಂದು ಅವನಿಗೀಗಾಗಲೆ ಗೊತ್ತಾಗಿರಬೇಕು ಅವನ ಪಟಾಲಂನ ಚೇಲಾಗಳಿಂದ. ಅವನ ಐಟಿ ಜೀವನದಲ್ಲಿ ಅಂತದ್ದನ್ನು ಕಾಣುವುದಿರಲಿ, ಕೇಳಿಯೂ ಇರದಿದ್ದ ಅವನಿಗೆ ಅದನ್ನು ಕಣ್ಣಾರೆ ಕಂಡೆ ನಂಬಬೇಕೆಂದು ಅನಿಸಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಅದಕ್ಕೂ ಮೀರಿ ಅಲ್ಲೇನಾದರೂ ಹುಳುಕು ಸಿಕ್ಕಿದರೆ ಅದನ್ನು ನೆಪವಾಗಿ ಹಿಡಿದುಕೊಂಡು ಶ್ರೀನಾಥನ ಯಶಸ್ಸನ್ನು ಜಾಡಿಸಬಹುದಲ್ಲಾ ಎನ್ನುವ ದುರಾಲೋಚನೆ ಮತ್ತೊಂದು ‘ನಿಗೂಢ’ ಕಾರಣ. ಅಲ್ಲಿ ಹೋಗಿ ನೋಡಿದರೆ ಒಂದು ರೀತಿ ಒಳ್ಳೆಯದೆ – ಅವನೇನಾದರೂ ಲೋಪ ದೋಷವನ್ನು ಹುಡುಕಿದಲ್ಲಿ ಅವನ್ನು ತಿದ್ದುವ ಅವಕಾಶ ದೊರೆತಂತಾಗುತ್ತದೆ. ಅವಹೇಳನ ಮಾಡಲು ಅವನಿಗೊಂದು ಕಾರಣ ಸಿಗಬಹುದಾದರೂ ಅದರಿಂದ ಪ್ರಾಜೆಕ್ಟಿಗೆ ಪರೋಕ್ಷವಾಗಿ ಸಹಕಾರಿಯಂತೂ ಆಗುತ್ತದೆ. ಗೊಣಗುಟ್ಟಿದರೆ ಗೊಣಗುಟ್ಟಿಕೊಳ್ಳಲಿ, ಹಾಗಾದರೂ ಪ್ರಾಜೆಕ್ಟಿಗೆ ಪ್ರಯೋಜನಕಾರಿಯಾಗಲಿ ಎಂದೆಣಿಸಿದವನೆ, ಕಡೆಯ ದಿನದ ಕಾರ್ಯಸೂಚಿಯಿಂದ ಅದನ್ನೆತ್ತಿಕೊಂಡು ಮೊದಲ ದಿನದ ಮಧ್ಯಾಹ್ನಕ್ಕೆ ಬದಲಾಯಿಸಿಕೊಟ್ಟ. ಆದರೆ ವೇರ್ಹೌಸಿಗೆ ಹೋಗಲು ತಾನು ಜತೆಯಾಗುವುದರ ಬದಲು ಸೌರಭ್ ದೇವ್ ಬರುವನೆಂದು ತಿಳಿಸಿದ. ಶ್ರೀನಿವಾಸ ಪ್ರಭುವಿಗೂ ಇದೆ ಹಿತವಾಗಿತ್ತು – ಶ್ರೀನಾಥ ಪಕ್ಕದಲ್ಲಿದ್ದರೆ ಅವನು ನಿರಾಳವಾಗಿ ಗೂಢಚಾರಿಕೆ ಮಾಡಲಾಗುವುದಿಲ್ಲವಲ್ಲಾ? ಆ ಮಾತುಕತೆ ನಡೆದಿದ್ದ ಹೊತ್ತಿನಲ್ಲಿ ಅವನ ಪಕ್ಕದಲ್ಲಿ ಕುಳಿತುಕೊಂಡೆ ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಅವನ ಪಕ್ಕಾ ಶಿಷ್ಯರಲ್ಲೊಬ್ಬನಾದ ಸಂಜಯ ಶರ್ಮ ತಾನೂ ಜತೆಗೆ ಹೋಗುವುದಾಗಿ ನುಡಿದಾಗ, ವಿಶ್ವಾಮಿತ್ರ-ನಕ್ಷತ್ರಿಕರಂತೆ ಗುರು ಶಿಷ್ಯರು ಒಂದು ಕಡೆ ಸೇರಿದಂತೆ ಆಗುವುದಲ್ಲ ಅನಿಸಿದರು, ಜತೆಯಲ್ಲಿ ಸೌರಭದೇವನಿರುವ ಕಾರಣ ಅವರೇನಾದರು ಕುತಂತ್ರ, ಷಡ್ಯಂತ್ರಕ್ಕೆ ಹವಣಿಸಿದರೂ, ಕನಿಷ್ಠ ಅವನಿಂದ ಅಲ್ಲಿನ ಮೇಲ್ನೋಟದ ವಿವರವಾದರೂ ಸಿಗುವುದೆಂಬ ನಂಬಿಕೆಯಲ್ಲಿ ‘ಹೂಂ’ ಗುಟ್ಟಿದ್ದ. ಸೌರಭದೇವ್ ಒಳ್ಳೆಯ ಹುಡುಗ.. ರಾಜಕೀಯ ಮಾಡುವ ಪ್ರವೃತ್ತಿಯವನಲ್ಲ.. ಅಲ್ಲದೆ ಈಚಿನ ಬೆಳವಣಿಗೆಯಿಂದ ಶ್ರೀನಾಥನೆಂದರೆ ಮಾನಸಿಕ ಗುರುವಿನಂತೆ, ಮೆಂಟರಿನಂತೆ ಭಾವಿಸುತ್ತಿದ್ದವ; ಹೀಗಾಗಿ ಚಿಂತಿಸುವ ಕಾರಣವಿರಲಿಲ್ಲ. ಅಲ್ಲದೆ ಬರಿ ಗುರುಶಿಷ್ಯರು ಅವರವರೆ ಇದ್ದಾಗ ಈ ಯಶಸ್ಸಿನ ಕುರಿತು ಹೇಗೆ ಮಾತನಾಡಿಕೊಳ್ಳಬಹುದೆಂಬ ಕುತೂಹಲವೂ ಇತ್ತು. ಅಜೆಂಡಾದಲ್ಲಿನ ಆ ಒಂದು ಬದಲಾವಣೆಯ ನಂತರ ಆರಂಭವಾದ ಮೀಟಿಂಗ್ ವ್ಯವಸ್ಥಿತ ರೀತಿಯಲ್ಲಿ ಒಪ್ಪ ಓರಣವಾಗಿ ಚಕಚಕನೆ ಓಡತೊಡಗಿದಾಗ ಅದನ್ನು ಗಮನಿಸಿಯೂ ಮೆಚ್ಚಿಕೊಳ್ಳಲಾಗದಿರಲಿಲ್ಲ ಶ್ರೀನಿವಾಸ ಪ್ರಭುವಿಗೆ. ತಾನು ಕೇಳಬೇಕೆಂದುಕೊಂಡಿದ್ದ ಅಂಶಗಳೆಲ್ಲ ಕೇಳುವ ಮೊದಲೆ ಒಂದೊಂದಾಗಿ ಅನಾವರಣವಾಗುತ್ತಿದ್ದರೆ, ತಾನು ಕೇಳಬೇಕೆಂದುಕೊಂಡಿದ್ದೆಲ್ಲ ಅದು ಹೇಗೆ ಶ್ರೀನಾಥನಿಗೆ ಗೊತ್ತಾಯಿತು ಎಂದು ವಿಸ್ಮಯ ಪಡುವಂತಾಗಿತ್ತು ಅವನಿಗೆ. ಅಷ್ಟೂ ಸಾಲದೆಂಬಂತೆ ಆ ಮಾಹಿತಿಗಳ ಜತೆಯಲ್ಲೆ, ಹೆಚ್ಚಿನ ವಿವರಣೆ ಕೊಡುವ ಹುನ್ನಾರದಲ್ಲಿ ಅವನು ಮತ್ತೆ ಕೇಳಬಹುದಾಗಿದ್ದ ಪ್ರಶ್ನೆ – ಉಪಪ್ರಶ್ನೆಗಳಿಗೂ ಉತ್ತರ ಸೇರಿಸಿಡಲಾಗಿದ್ದ ರೀತಿಗೂ ವಿಸ್ಮಯವಾಗಿತ್ತು. ಹೆಚ್ಚು ಕಡಿಮೆ ಅವನ ಮೆದುಳೊಳಗೆ ಹೊಕ್ಕು ಅವನಂತರಾಳವನ್ನೆಲ್ಲ ‘ಸ್ಟಡಿ’ ಮಾಡಿ ಅದಕ್ಕೆ ತಕ್ಕ ಹಾಗೆ ಪ್ರೆಸೆಂಟೇಷನ್ನನ್ನು ಸಿದ್ದಪಡಿಸಿದಷ್ಟು ನಿಖರವಾಗಿತ್ತು ಶ್ರೀನಾಥ ಚತುರತೆಯಿಂದ ಊಹಿಸಿ ಕಲೆ ಹಾಕಿದ್ದ ಮಾಹಿತಿ . ಅಲ್ಲಿರದಿದ್ದ ಕೆಲವೊಂದು ಮಾಹಿತಿ ಕೇಳಿದಾಗಲೂ ಹಿನ್ನಲೆಯಲ್ಲಿ ಬ್ಯಾಕಪ್ಪಿಗೆಂದು ಹಿಡಿದಿಟ್ಟ ಸ್ಲೈಡುಗಳಿಂದ ಆ ಪ್ರಶ್ನೆಗಳನ್ನು ನಿಭಾಯಿಸಿದಾಗ – ಅವನು ಸರ್ವ ಸನ್ನದ್ಧನಾಗಿಯೆ ಮೀಟಿಂಗಿಗೆ ಬಂದಿದ್ದಾನೆಂದು ಶ್ರೀನಿವಾಸ ಪ್ರಭುವಿಗೂ ಚೆನ್ನಾಗಿ ಮನದಟ್ಟಾಗಿ ಹೋಗಿತ್ತು.

ಈ ನಡುವೆ ಮತ್ತೊಂದು ಅಚ್ಚರಿಯೂ ಕಾದಿತ್ತು ಶ್ರೀನಾಥನಿಗೆ. ಮೀಟಿಂಗಿನ ನಡುವಿನ ಬ್ರೇಕಿನಲ್ಲಿ ಶ್ರೀನಿವಾಸ ಪ್ರಭು ಪೂರ್ತಿ ಸಸ್ಯಾಹಾರಿ ಎಂದು ಗೊತ್ತಿದ್ದ ಕಾರಣ ಪ್ಯಾಂಟ್ರಿಗೆ ಕಾಫಿಯ ಜತೆಗೆ ಸ್ವಲ್ಪ ಬಿಸ್ಕೆಟ್ಟು ಮತ್ತು ಮಫಿನ್ ಅರೆಂಜ್ ಮಾಡಲು ಕೋರಿದ್ದ. ಅಂತೆಯೆ ಆ ಬ್ರೇಕಿನ ಹೊತ್ತಿನಲ್ಲಿ ಟ್ರಾಲಿ ತಳ್ಳಿಕೊಂಡು ಬಂದವಳನ್ನು ನೋಡಿದರೆ ಅಚ್ಚರಿಯೊ ಅಚ್ಚರಿಯೆಂಬಂತೆ – ಕುನ್. ಸು! ಅಂದವಳು ತಡವಾಗಿಯಾದರೂ ಕೆಲಸಕ್ಕೆ ಬಂದೇ ಬಿಟ್ಟಿದ್ದಳು!! ಅವಳನ್ನು ನೋಡುತ್ತಿದ್ದಂತೆ ಶ್ರೀನಾಥನ ಮನದ ಯಾವುದೊ ಮೂಲೆಯಲಿದ್ದ ಮತ್ತೊಂದು ಭಾರವೂ ಒಮ್ಮೆಗೆ ಇಳಿದಂತಾಗಿ ಮುಖವೆಲ್ಲ ಹೂವಂತೆ ಅರಳಿ ಮತ್ತಷ್ಟು ಪ್ರಪುಲ್ಲಿತವಾಗಿಹೋಗಿತ್ತು. ಅವಳು ಇವನನ್ನು ಕಂಡರು ಗಮನಿಸದವಳಂತೆ ತುಟಿಯಂಚಿನಲ್ಲೊಂದು ಕಾಟಾಚಾರದ ನಗೆ ತೂರಿ ಮುಂದೆ ಸಾಗಿದ್ದರೂ ‘ಸದ್ಯ – ಇಂದಾದರು ಬಂದಳಲ್ಲ? ಅದೃಷ್ಟವಶಾತ್ ಇಂದು ಮಧ್ಯಾಹ್ನವೆ ಇವನೂ ವೇರ್ಹೌಸಿಗೆ ಹೊರಟು ನಿಂತದ್ದು ಒಳ್ಳೆಯದೆ ಆಯಿತು… ಇಂದವಳನ್ನು ಹಿಡಿದು ಎಲ್ಲಾ ಸೆಟಲ್ ಮಾಡಿಕೊಂಡು ಬಿಡಬೇಕು… ಇಂದೇನೊ ಶುಭದಿನವೆಂದು ಕಾಣುತ್ತಿದೆ. ಎಲ್ಲಾ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿರುವಂತಿದೆ’ ಎಂದೆಲ್ಲ ಮನದಲ್ಲೆ ಮಂಡಿಗೆ ತಿನ್ನುತ್ತ ಮೀಟಿಂಗನ್ನು ಮುಂದುವರೆಸಿದ್ದ. ಆ ಬಿರುಸಿನಲ್ಲೆ ಯೋಜಿತ ಸಮಯಕ್ಕೆ ಮೊದಲೆ ಮೀಟಿಂಗು ಮುಗಿಯಲಾಗಿ ಎಲ್ಲರನ್ನು ಹೊರಡಿಸಿಕೊಂಡು ಮೊದಲೆ ನಿರ್ಧರಿಸಿದ್ದ ಭಾರತೀಯ ಸಸ್ಯಾಹಾರಿ ರೆಸ್ಟೋರೆಂಟು ‘ಮದ್ರಾಸ್ ಕೆಫೆ’ ಯಲ್ಲಿ ಊಟ ಮುಗಿಸಿ, ಅಲ್ಲಿಂದಲೆ ಟ್ಯಾಕ್ಸಿಯೊಂದನ್ನು ಹಿಡಿದು ಅವರನ್ನೆಲ್ಲ ವೇರ್ಹೌಸಿಗೆ ನೇರ ಸಾಗಹಾಕಿ ತಾನು ಮತ್ತೊಂದು ಟ್ಯಾಕ್ಸಿ ಹಿಡಿದು ಆಫೀಸಿನತ್ತ ಧಾವಿಸಿದ್ದ – ಕುನ್. ಸು ಅನ್ನು ಬೇಗನೆ ಸಂಪರ್ಕಿಸುವ ಧಾವಂತದಲ್ಲಿ. ಅವನು ವಾಪಸ್ಸು ಬಂದ ಹೊತ್ತಿನಲ್ಲಿ ಲಂಚಿಗೆಂದು ಎಲ್ಲರು ಹೊರಗೆ ಹೋಗಿದ್ದ ಕಾರಣ ಹೆಚ್ಚುಕಡಿಮೆ ಪೂರ್ತಿ ಆಫೀಸೆ ಖಾಲಿಯಾಗಿತ್ತು. ಅವಳನ್ನು ಸಂಧಿಸಲು ಇದು ಸೂಕ್ತ ಸಮಯವೆಂದು ಆತುರಾತುರವಾಗಿ ಸೀಟಿನತ್ತ ಬಂದವನಿಗೆ ಮತ್ತೊಂದು ಅಚ್ಚರಿ ಕಾದಿತ್ತು… ಅವನ ಖಾಲಿಯಿದ್ದ ಸೀಟಿನೆದುರಿಗೆ ಅವನಿಗಾಗಿಯೆ ಕಾಯುತ್ತಿದ್ದಂತೆ ಕುನ್. ಸು ಮ್ಲಾನವದನಳಾಗಿ ಕುಳಿತಿದ್ದಳು. ಅಚ್ಚರಿಯೆಂಬಂತೆ ಬೆಳಿಗ್ಗೆ ಧರಿಸಿದ್ದ ಯೂನಿಫಾರಂ ಬದಲಿಗೆ ಮಾಮೂಲಿ ವಸ್ತ್ರ ಧರಿಸಿ ಕೂತಿದ್ದಳು. ಮನೆಗೆ ಹೊರಡಲು ಸಿದ್ಧವಿದ್ದವಳಂತೆ ಕಾಲಿನ ಬಳಿಯೊಂದು ಬ್ಯಾಗೂ ಸಹ ಕೂತಿತ್ತು. ಮೇಜಿನ ಮೇಲೂರಿದ್ದ ಕೈಯಲ್ಲಿ ಮಾತ್ರ ದಪ್ಪನೆಯ ಹಾಗೂ ಉದ್ದದ ಬಿಳಿಯ ಕವರೊಂದನ್ನು ಹಿಡಿದುಕೊಂಡಿದ್ದವಳು ಶ್ರೀನಾಥನು ಬರುತ್ತಿದ್ದ ಹಾಗೆಯೆ, ಎದ್ದು ನಿಂತು ಆ ಕವರನ್ನು ಅವನ ಕೈಗೆ ತುರುಕಿ, ಅವನನ್ನು ಮಾತು ಆಡಿಸದೆ ಅವನ ಮಾತಿಗೂ ಕಾಯದೆ ದುರ್ದಾನ ತೆಗೆದುಕೊಂಡವಳ ಹಾಗೆ ಬಿರುಗಾಳಿಯ ರೀತಿ ಹೊರಟುಹೋಗಿದ್ದಳು. ಅದೆ ಹೊತ್ತಿಗೆ ಇನ್ನಾರೊ ಆಫೀಸಿನ ಒಳಗೆ ಬರುತ್ತಿದುದರಿಂದ ಅವಳನ್ನು ತಡೆಯಲೂ ಆಗದೆ, ಮಾತನಾಡಿಸಲೂ ಸಾಧ್ಯವಾಗದೆ ‘ಶಾಕ್’ ಹೊಡೆದವನಂತೆ ಒಮ್ಮೆ ಅವಳತ್ತ ಮತ್ತೊಮ್ಮೆ ಆ ಕವರಿನತ್ತ ನೋಡುತ್ತ ದಿಗ್ಮೂಢನಾಗಿ ನಿಂತಲ್ಲೆ ನಿಂತುಬಿಟ್ಟಿದ್ದ ಶ್ರೀನಾಥ – ಇನ್ನು ಮತ್ತೇನು ಹೊಸ ಆಘಾತ ಕಾದಿದೆಯೊ ಎಂಬ ಆತಂಕಭರಿತ ಪರಿಭ್ರಾಮಕ ಸ್ಥಿತಿಯಲ್ಲಿ…!

ಈ ಬಾರಿಯೂ ಇನ್ನೊಂದು ಬಾಂಬು ಹಾಕಿದಂತೆ ಮತ್ತಿನ್ನೇನೊ ಕಾಗದ, ರಶೀತಿ ಪತ್ರ ತೋರಿಸಿ ಮತ್ತೊಂದು ದೊಡ್ಡ ಮೊತ್ತದ ಬೇಟೆಗೆ ಹೊಂಚು ಹಾಕಿರಬೇಕೆನಿಸಿ, ಅಂದಿನ ಬೆಳಗಿನಿಂದ ಮೂಡಿದ್ದ ಹರ್ಷ ಭಾವವೆಲ್ಲ ಒಮ್ಮೆಲೆ ಸೋರಿಹೋದಂತಾಗಿ ನಿರಭ್ರ ಸ್ವಚ್ಛ ನೀಲಾಗಸದಲ್ಲಿ ತಟ್ಟನೆ ಒಮ್ಮಿಂದೊಮ್ಮೆಗೆ ಕುದುರಿದ ಕಪ್ಪು ಮೋಡಗಳಂತೆ, ಮಂಕು ಬಂದಾವರಿಸಿಕೊಂಡುಬಿಟ್ಟಿತ್ತು. ತಡವಾಗಿ ಬಂದುದಲ್ಲದೆ ದಿನದ ಮಧ್ಯದಲ್ಲೆ ಏಕೆ ಹೊರಟುಹೋದಳೆಂಬ ಪ್ರಶ್ನೆಯೊಂದು ಕಡೆ, ಮಾತೂ ಆಡದೆ ಏನೊ ಕೈಗಿತ್ತು ಹೊರಟುಹೋದವಳ ಮಾಮೂಲಲ್ಲದ ನಡತೆ, ಎಲ್ಲಕ್ಕೂ ಹೆಚ್ಚಾಗಿ ನೇರ ಮಾತನಾಡಿ ಎಲ್ಲಾ ಮುಗಿಸಿಬಿಡಬೇಕೆಂದುಕೊಂಡಿದ್ದನ್ನು ಕಾರ್ಯಗತಗೊಳಿಸಲೂ ಅವಕಾಶವನ್ನೆ ಕೊಡದಂತೆ ಮಾಯವಾದ ಬಗೆ – ಎಲ್ಲವೂ ಸೇರಿ ಒಂದು ಅಸಹಾಯಕತೆಯೊಡಗೂಡಿದ ವಿಷಾದಪೂರ್ಣ ಖೇದವನ್ನುಂಟು ಮಾಡಿ ಖಿನ್ನನನ್ನಾಗಿಸಿಬಿಟ್ಟಿತ್ತು. ಆ ಅರೆ ಮರಳು ಸ್ಥಿತಿಯಲ್ಲಿ ಅವಳೊಬ್ಬ ದೊಡ್ಡ ಖಳನಾಯಕಿಯಂತೆ, ಪೂರ್ಣ ಕಬಳಿಸಲು ಸಿದ್ದವಾಗಿ ನಿಂತ ರಾಕ್ಷಸಿಯಂತೆ ಭಾಸವಾಗಿ ಯಾಕಾದರೂ ಇವಳ ಸಹವಾಸಕ್ಕಿಳಿದೆನೊ ಎನ್ನುವ ಅಕಾಲ ವೈರಾಗ್ಯವೂ ಕಾಡಿಸತೊಡಗಿತು. ಎಷ್ಟು ಚೆಂದದ ಸೌಮ್ಯ ಮುಖದ ಹಿಂದೆ, ಎಂತಹ ಉಗ್ರ ರೂಪದ ನಾಗಿಣಿಯ ಅವತಾರ ಅಡಗಿದೆಯಲ್ಲಾ ಎನಿಸಿ ರೋಷವೂ ಬಂತು.. ಅದರ ಬೆನ್ನಲ್ಲೆ, ತನ್ನಂತಹವರು ಸ್ವಯಂ ದೌರ್ಬಲ್ಯದಿಂದ ಇಂತಹವರ ಬಲೆಗೆ ಬೀಳುವುದರಿಂದ ತಾನೆ, ಈ ಬಗೆಯ ಸಂಘಟನೆಗಳು ಸಾಧ್ಯವಾಗುವುದು? ಇದೇನು ಬರಿ ಅವಳಾಗಿ ಮೇಲೆ ಬಿದ್ದು ಆರೋಪಿಸಿದ್ದಲ್ಲವಲ್ಲ – ತಾನಾಗೆ ಮುಂದುವರೆದು ಮೈ ಮೇಲೆಳೆದುಕೊಂಡಿದ್ದು ತಾನೆ? ಈಗ ಅದರ ಉಚಿತಾನುಚಿತತೆಯ ಮೌಲ್ಯಮಾಪನದಿಂದ ಪ್ರಯೋಜನವಾದರೂ ಏನು? ಬೇಕಿದ್ದೊ ಬೇಡದೆಯೊ ಸಿಕ್ಕಿನಲ್ಲಿ ಸಿಲುಕಿದ್ದಾಯಿತು, ಈಗ ಅಷ್ಟೆ ನಾಜೂಕಿನಿಂದ ಹೊರಬರುವ ದಾರಿ ಹುಡುಕಿದರೆ ಸರಿಯೆಂದೆಣಿಸುತ್ತ ತನ್ನ ಸೀಟಿನಲ್ಲಿ ಕೂರುವ ಮುನ್ನ ಸುತ್ತಮುತ್ತ ಎಲ್ಲಾ ಬಂದಾಯಿತೆ ಎಂದು ಒಮ್ಮೆ ಕಣ್ಣು ಹಾಯಿಸಿದ್ದ. ಲಂಚಿನ ಅವಧಿ ಮುಗಿಯುತ್ತಾ ಬಂದಿದ್ದರೂ ಇನ್ನೂ ಯಾರು ಹಿಂದಿರುಗಿದ್ದಂತೆ ಕಾಣಲಿಲ್ಲ. ಅದು ಯಾಕೆಂದು ಆಲೋಚಿಸುತ್ತಿದ್ದಂತೆ ನೀರವ ಮೌನದೊಂದಿಗೆ ಸುತ್ತಲೂ ಆವರಿಸಿಕೊಂಡಿದ್ದ ಮಸುಕು ಬೆಳಕಿನ ಪರದೆ ಏಕೆಂದು ಉತ್ತರ ಕೊಟ್ಟಿತ್ತು – ಯಾವ ಮುನ್ಸೂಚನೆಯಿಲ್ಲದೆಲೆ ಹೊರಗೆ ಇದ್ದಕ್ಕಿದ್ದಂತೆ ಮೋಡಗಳು ನೆರೆದು ಜೋರಾದ ಮಳೆ ಆರಂಭವಾಗಿ ಹೋಗಿತ್ತು. ಆ ಹೊತ್ತಿನಲ್ಲಿ ಮಳೆಯೆಂದರೆ ಟ್ರಾಫಿಕ್ಕೆಲ್ಲ ಅಸ್ತವ್ಯಸ್ತವಾಗುವುದು ಮಾತ್ರವಲ್ಲದೆ ಮಿಕ್ಕ ಎಲ್ಲವೂ ಸರಪಳಿಯ ಕೊಂಡಿಯಂತೆ ನಿರ್ಬಂಧಕ್ಕೊಳಗಾಗುವುದರಿಂದ ಎಲ್ಲರೂ ಬರುವುದು ಕನಿಷ್ಠವೆಂದರೂ ಅರ್ಧಗಂಟೆ ತಡವಾಗುವುದು ಗಟ್ಟಿ. ಮಳೆ ಸ್ವಲ್ಪ ಹೆಚ್ಚು ಹೊತ್ತು ಚಂಡಿ ಹಿಡಿದರೆ ಗಂಟೆಯಾದರೂ ಆದೀತು – ಆ ಕೊಚ್ಚೆ, ರಾಡಿಯುಂಟು ಮಾಡಿದ ಪುಟ್ಟ ಪುಟ್ಟ ಮಳೆ ನೀರಿನ ತಾತ್ಕಾಲಿಕ ಹೊಂಡ, ಮಡುಗಳನ್ನು ನಿಭಾಯಿಸಿ ದಾಟಿಕೊಂಡು ಬರಲು. ತನ್ನ ಮನದೊಳಗಿನ ವರ್ಷಧಾರೆಯ ರಾಡಿಯೇನು ಅದಕ್ಕಿಂತ ಕಡಿಮೆಯದಿಲ್ಲವೆಂದು ಒಳಗೊಳಗೆ ಪರಿತಪಿಸುತ್ತಾ ಕತ್ತಲಾವರಿಸಿಕೊಂಡಂತಿದ್ದ ಆಫೀಸಿನಲ್ಲಿ ಬೆಳಕಾಗಲೆಂದು ಹತ್ತಿರದ ಲೈಟು ಸ್ವಿಚ್ ಆನ್ ಮಾಡಿ ಕೈಲಿದ್ದ ಕವರನ್ನು ಮತ್ತೆ ದಿಟ್ಟಿಸುತ್ತ ಕುಳಿತಾಗ, ಸುತ್ತಲೂ ಯಾರೂ ಇಲ್ಲವೆಂಬ ವಾಸ್ತವಾಂಶ ಅವನ ಜಾಗೃತ ಪ್ರಜ್ಞೆಗೆ ನಿಲುಕಿ, ಆ ಕವರನ್ನು ಕೂತಲ್ಲೆ ಬಿಚ್ಚಿ ಒಳಗಿನದನ್ನೆಲ್ಲ ಒಂದೊಂದಾಗಿ ಹೊರಗೆ ತೆಗೆಯಹತ್ತಿದ್ದ. ಕವರಿನ ಬಾಯಿ ತೆರೆಯುತ್ತಿದ್ದಂತೆ ಅದರೊಳಗಿಂದ ಅನೇಕ ಕಾಗದಗಳನ್ನು ಜೋಡಿಸಿದ್ದ ಪುಟ್ಟ ಕಂತೆಯೆ ಹೊರಬಿದ್ದಿತ್ತು. ಅದರ ಜತೆಯಲ್ಲಿ ಮತ್ತೊಂದು ಸೀಲು ಮಾಡಿದ ತೆಳ್ಳನೆಯ ಮತ್ತೊಂದು ಕವರು ಸೇರಿಕೊಂಡಿತ್ತು. ಮಿಕ್ಕವುಗಳನ್ನು ನೋಡುವ ಮುನ್ನ ತೆಳ್ಳನೆಯ ಕವರಿನೊಳಗೆ ಅದೇನಿರಬಹುದೆಂದು ಕಾತರದಿಂದ ಒಡೆದು ನೋಡಿದವನಿಗೆ ಅವನ ಜೀವನದ ಮತ್ತೊಂದು ದೊಡ್ಡ ‘ಶಾಕ್’ ಕಾದು ಕೂತಿತ್ತು…!

ಆ ಪುಟ್ಟ ಕವರನ್ನು ಹರಿದು ಬಿಚ್ಚುತ್ತಿದ್ದಂತೆ ಅದನ್ನು ಭಾರವಾಗಿಸಿದ್ದ ಕೆಲವು ನಾಣ್ಯಗಳು ಮೊದಲು ಹೊರಬಿದ್ದಿದ್ದವು.. ಅದರ ಹಿಂದೆಯೆ ಒತ್ತೊತ್ತಾಗಿ ನೀಟಾಗಿ ಜೋಡಿಸಿದ್ದ ಸಾವಿರ, ಐನೂರು, ನೂರು, ಐವತ್ತು, ಇಪ್ಪತ್ತರ ಗರಿ ಗರಿ ನೋಟುಗಳು ಇಣುಕಿದ್ದವು! ಆ ನೋಟಿನ ಕಟ್ಟಿಗೆ ರಬ್ಬರ್ಬ್ಯಾಂಡಿನ ಮುಖಾಂತರ ಬಂಧಿಸಿಟ್ಟಿದ್ದ ತುಸು ದಪ್ಪ ರಟ್ಟಿನ ಗಾತ್ರದ ಚೀಟಿಯೊಂದು ಕಣ್ಣಿಗೆ ಬಿದ್ದು, ಅದೇನೆಂದು ನೋಡಿದರೆ ಅಲ್ಲೊಂದು ಪುಟ್ಟ ಲೆಕ್ಕಾಚಾರದ ಪಟ್ಟಿ ಸೊಟ್ಟ ಸೊಟ್ಟ ಹಸ್ತಾಕ್ಷರದಲ್ಲಿ ದಾಖಲಿಸಲಾಗಿತ್ತು. ಅಚ್ಚರಿಯೆಂಬಂತೆ ಪ್ರತಿ ಸಾಲಿನ ಥಾಯ್ ಅಕ್ಷರಗಳ ನಡುವೆ ಒಂದೊಂದು ಆಂಗ್ಲ ಪದವೂ ಸೇರಿದ್ದರಿಂದ ಆ ಸಾಲುಗಳಲಿದ್ದ ವಿವರವನ್ನು ಗ್ರಹಿಸುವುದೇನು ತೀರಾ ಕಷ್ಟವಾಗಿರಲಿಲ್ಲ. ಮೊದಲ ಸಾಲಿನಲ್ಲಿದ್ದ ಅಂಕಿಯನ್ನು ನೋಡಿದರೆ ಗೊತ್ತಾಗುತ್ತಿತ್ತು – ಅದು ಅದುವರೆವಿಗೂ ಅವನು ಅವಳಿಗಿತ್ತಿದ್ದ ಹಣದ ಒಟ್ಟು ಮೊತ್ತ. ಎರಡನೆ ಸಾಲಿನಲ್ಲಿ ‘ಹಾಸ್ಪಿಟಲ್’ ಎಂದು ಇಂಗ್ಲೀಷಿನಲ್ಲಿ ಬರೆದು ಸೇರಿಸಿದ್ದ ಕಾರಣ ಅದು ಆಸ್ಪತ್ರೆಯ ಚಿಕಿತ್ಸೆಗೆಂದು ಬಳಸಿದ್ದ ಹಣವೆಂದು ಊಹಿಸುವುದು ಕಷ್ಟವಿರಲಿಲ್ಲ. ಅದರ ಮುಂದೆ ಮೂರುವರೆ ಸಾವಿರ ಬಾತುಗಳೆಂದು ನಮೂದಿಸಲಾಗಿತ್ತು. ಹೀಗೆ ಮಿಕ್ಕೆಲ್ಲಾ ಸಣ್ಣ ಪುಟ್ಟ ಲೆಕ್ಕದ ಅಂಕಿಗಳು ಸೇರಿ ಒಟ್ಟು ಐದುವರೆ ಸಾವಿರದ ಒಟ್ಟು ಮೊತ್ತ ತೋರಿಸಿತ್ತು. ಅದರ ಮುಂದಿನ ಸಾಲಿನಲ್ಲಿ ಒಟ್ಟು ಹಣದಿಂದ ಈ ಐದೂವರೆ ಸಾವಿರವನ್ನು ಕಳೆದು ಮಿಕ್ಕ ಹಣವನ್ನು ತೋರಿಸಿತ್ತು. ಅದರ ಜತೆಗಿಟ್ಟಿದ್ದ ಕವರಿನ ಹಣವನ್ನು ಎಣಿಸಿ ನೋಡಿದರೆ ಆ ಮಿಕ್ಕ ಹಣಕ್ಕೆ ಸರಿಯಾಗಿ ತಾಳೆಯಾಗುವಂತೆ ಚಿಲ್ಲರೆಯ ಸಮೇತ ಇಟ್ಟು ಕೊಟ್ಟುಬಿಟ್ಟಿದ್ದಳು ಕುನ್. ಸು! ಅದನ್ನು ನೋಡುತ್ತಿದ್ದಂತೆಯೆ ಅದರ ಹಿನ್ನಲೆಯೆಲ್ಲಾ ಅರಿವಾದಂತೆ ಮುಖವೆಲ್ಲ ಕಪ್ಪಿಟ್ಟು ಹೋಗಿತ್ತು ಶ್ರೀನಾಥನಿಗೆ. ಒಂದೆಡೆ ಅವಳನ್ನು ಹಣ ಸುಲಿಯಲು ಹೊರಟಿರುವ ಪಿಶಾಚಿ, ತನ್ನನ್ನು ಕಾಡಬಂದಿರುವ ನಾಗಿಣಿ ಹೆಣ್ಣು ಎಂದೆಲ್ಲ ಚಿತ್ರಿಸಿಕೊಂಡು ಅವಳನೊಬ್ಬಳು ದೊಡ್ಡ ಖಳನಾಯಕಿಯಂತೆ ಊಹಿಸಿಕೊಂಡು ಕೂತಿದ್ದವನಿಗೆ ಮರ್ಮಾಘಾತವಾಗುವಂತೆ ತೀರಾ ವ್ಯತಿರಿಕ್ತವಾಗಿ ವರ್ತಿಸಿ ತನ್ನ ದೊಡ್ಡತನವನ್ನು ತೋರಿಸಿಕೊಂಡು ಬಿಟ್ಟಿದ್ದಳು ಆ ಸಾಮಾನ್ಯ ಕೆಲಸದ ಹೆಣ್ಣು. ಅವಳ ಆ ವ್ಯಕ್ತಿತ್ವದ ಮುಂದೆ ತಾನು ತೀರಾ ಸಣ್ಣವನಾಗಿ ಕುಬ್ಜನಾದಂತೆನಿಸಿಬಿಟ್ಟಿತ್ತು ಶ್ರೀನಾಥನಿಗೆ. ಅವನು ಅವಳಿಗೆ ಹಣದ ಆಮಿಷವೊಡ್ಡಿ ಗರ್ಭ ತೆಗೆಸುವಂತೆ ಮನವೊಲಿಸಿ ಒಂದಷ್ಟು ಹಣ ಕೊಟ್ಟು ಕೈ ತೊಳೆದುಕೊಳ್ಳಬೇಕೆಂದು ಹವಣಿಸುತ್ತಿದ್ದರೆ, ಅವಳು ಯಾವ ಮಾತೂ ಆಡದೆ ತಾನೆ ಎಲ್ಲವನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು, ತನ್ನಲ್ಲೆ ಏನು ಮಾಡಬೇಕೆಂದು ನಿರ್ಧರಿಸಿಕೊಂಡು, ಅವನಿಗೂ ಯಾವುದೆ ರೀತಿಯ ಕಳಂಕ ತಟ್ಟದ ರೀತಿಯಲ್ಲಿ ‘ಎಂಟಿಪಿ (ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ)’ ಮಾಡಿಸಿಕೊಂಡು ಬಂದು ಬಿಟ್ಟಿದ್ದಾಳೆ..! ಬಹುಶಃ ಅವಳ ಆರ್ಥಿಕ ಹಿನ್ನಲೆಯಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ‘ಅಬಾರ್ಶನ್’ ಮಾಡಿಸಿಕೊಳ್ಳುವುದು ಸಾಧ್ಯವಿಲ್ಲದ ಕಾರಣಕ್ಕೊ ಏನೊ – ಅವನಿಂದ ಹಣ ಪಡೆದು ಹೋಗಿದ್ದಳಷ್ಟೆ… ಅದೂ ಎಷ್ಟಾಗಬಹುದೆಂದು ನಿಖರವಾಗಿ ಗೊತ್ತಿರದಿದ್ದ ಕಾರಣ ಅಂದಾಜಿನ ಮೇಲೆ ಕೇಳಿ ತೆಗೆದುಕೊಂಡು ಹೋಗಿದ್ದವಳು, ಕೆಲಸ ಮುಗಿದ ಮೇಲೆ ಮಿಕ್ಕ ಹಣವನ್ನು ಚೊಕ್ಕವಾದ ಲೆಕ್ಕದೊಂದಿಗೆ ವಾಪಸ್ಸು ನೀಡಿ ಬಿಟ್ಟಿದ್ದಾಳೆ ! ಅದರ ಜತೆಗೆ ಆಸ್ಪತ್ರೆಗೆ ಕಟ್ಟಿದ್ದ ಬಿಲ್ಲು, ರಿಪೋರ್ಟು ಮತ್ತಿತರ ದಾಖಲೆಗಳ ಸಮೇತ ಇಟ್ಟಿದ್ದಾಳೆ ಪ್ರತಿಯೊಂದಕ್ಕೂ ಸಾಕ್ಷಿ ಸಹಿತ ದಾಖಲೆ ಒದಗಿಸುವವಳಂತೆ.

ಆ ಕಾಗದದ ಕಂತೆಯ ನಡುವೆ ಇರಿಸಿದ್ದ ಎರಡು ಚೀಟಿಗಳನ್ನು ಗಮನಿಸಿದರೆ ಅವೆರಡು ಬಸ್ಸಿನ ಟಿಕೆಟುಗಳೆಂದು ಗೊತ್ತಾಗುತ್ತಿತ್ತು. ಒಂದರಲ್ಲಿ ‘ಚಿಂಗ್ಮಾಯಿ’ ಎಂದಿದ್ದರೆ ಮತ್ತೊಂದರಲ್ಲಿ ‘ ಬ್ಯಾಂಕಾಕ್’ ಎಂದಿತ್ತು. ಅಂದರೆ ಯಾರಿಗೂ ಗೊತ್ತಿರದಂತೆ ರಜೆ ಹಾಕಿ ಅವಳೊಬ್ಬಳೆ ಚಿಂಗ್ಮಾಯಿಗೆ ಹೋಗಿ ಎರಡು ದಿನ ಅಲ್ಲೆ ಕಳೆದು ಗುಟ್ಟಾಗಿ ಕೆಲಸ ಮುಗಿಸಿಕೊಂಡು ಬಂದಿರಬೇಕು..ಈ ನಡುವೆ ಕೆಲದಿನ ಅವಳು ಆಫೀಸಿನಿಂದ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಕ್ಕೆ ಇದೆ ಕಾರಣವಾಗಿತ್ತು. ಅವಳಿಗೆ ಸಾಧ್ಯವಿದ್ದಿದ್ದರೆ ಬಹುಶಃ ಅವನಿಂದ ಹಣ ಪಡೆಯದೆಲೆ ತಾನೆ ನಿಭಾಯಿಸಿಕೊಳ್ಳುತ್ತಿದ್ದಳೊ ಏನೊ? ಆವಳ ಬಡ ಹಿನ್ನಲೆ ಅದಕ್ಕೆ ಅನುವಿತ್ತಿರಲಿಲ್ಲವಾಗಿ ಈ ಮಾರ್ಗ ಹಿಡಿದಿದ್ದಳೇನೊ? ಅಷ್ಟೆ ಅಲ್ಲದೆ ಇಂತಹ ಗುಟ್ಟಿನ ವೈಯಕ್ತಿಕ ಸಂಕಟದ ಸಂದರ್ಭಕ್ಕೆ ಬೇರಾರನ್ನು ಹಣವನ್ನಾಗಲಿ, ಸಹಾಯವನ್ನಾಗಲಿ ಕೇಳುವಂತೆಯೂ ಇರಲಿಲ್ಲ. ಯಾಚಿತವಾಗಿಯೊ ಆಯಾಚಿತವಾಗಿಯೊ ಇದಕ್ಕೆ ಕಾರಣನಾಗಿದ್ದ ಶ್ರೀನಾಥನೂ ನೈತಿಕವಾಗಿ ಇದಕ್ಕೆ ಹೊಣೆಗಾರನಾಗಿದ್ದ ಕಾರಣ ಅವನಿಂದಲೆ ಹಣ ಪಡೆದಿದ್ದರೂ, ಆ ಸಂಕಷ್ಟದ ನಿವಾರಣೆಯ ಅಗತ್ಯಕ್ಕೆ ಎಷ್ಟು ಬೇಕೊ ಅಷ್ಟನ್ನು ಮಾತ್ರ ಬಳಸಿ ಮಿಕ್ಕದ್ದನ್ನೆಲ್ಲ ಕಟ್ಟುನಿಟ್ಟಾಗಿ, ನಿಷ್ಠೆಯಿಂದ ಹಿಂದಿರುಗಿಸುವ ಮೂಲಕ ಅವಳ ಸಾಮಾನ್ಯ ಸಮಯಪ್ರಜ್ಞೆಯ ಸೂಕ್ಷ್ಮಪ್ರಜ್ಞೆಯೂ ಪ್ರದರ್ಶಿತವಾದುದರ ಜತೆಗೆ, ಹಣದ ಹೊರತು ಮಿಕ್ಕೆಲ್ಲ ಪ್ರಕ್ರಿಯೆಗೆ ಅವನನ್ನು ಸೆಳೆಯದೆ ತಾನೆ ಒದ್ದಾಡಿ ನಿಭಾಯಿಸಿಕೊಂಡ ರೀತಿಯೂ ಸೇರಿ ಅವಳನ್ನು ಮತ್ತಷ್ಟು ಎತ್ತರಕ್ಕೆ ಏರಿಸಿಬಿಟ್ಟಿತ್ತು. ಖೇದವೆಂದರೆ ಅಲ್ಲಿಯತನಕ ಅವಳ ಕುರಿತು ಏನೇನೊ ಊಹಿಸಿ, ವಿಕೃತ ಕಲ್ಪನೆ ಕಟ್ಟಿಕೊಂಡಿದ್ದ ಶ್ರೀನಾಥನ ಮನಸತ್ವದ್ದು. ಅವಳಂತಹ ಸಾಮಾನ್ಯ ಹೆಣ್ಣಿನ ಮನೋಭಾವದ ಮುಂದೆ, ಅವನ ವಿಕಾರ ಮನೋಭಾವದ ಪರಿ, ಮೇರು ಶಿಖರದೆದುರಿನ ಪುಟ್ಟ ಬೆಣಚು ಕಲ್ಲಿಗೂ ಕಡೆಯದರಂತೆನಿಸಿಬಿಟ್ಟಿತ್ತು. ಶ್ರೀನಾಥನನ್ನು ಅದೆಲ್ಲಕ್ಕಿಂತಲೂ ಹೆಚ್ಚು ಕಾಡಿದ ಅಂಶವೆಂದರೆ – ಅವಳು ಹಿಂದಿರುಗಿಸಿದ್ದ ಹಣದಲ್ಲಿ ಅವನು ಮಿಲನಾನಂತರ ತಕ್ಷಣದ ಗಳಿಗೆಯಲ್ಲಿ ನೀಡಿ ಬಂದಿದ್ದ ಹಣವೂ ಸೇರಿಕೊಂಡಿತ್ತು. ಭಾವನಾ ಸೌಖ್ಯವನ್ನು ಹಣದಿಂದಳೆಯುವ ಅವನ ಪುರುಷತ್ವದ ಹಮ್ಮನ್ನು, ತಾನು ಹಣಕ್ಕಾಗಿ ದೇಹವನ್ನು ಮಾರಿಕೊಳ್ಳುವ ಬೆಲೆವೆಣ್ಣಿನ ವ್ಯಕ್ತಿತ್ವದವಳಲ್ಲ ಎಂಬ ಸರಳ ಸುಶೀಲ ಸ್ವಾಭಾವಿಕ ಸ್ತ್ರೀತ್ವದ ಭಾವದಿಂದ ಒಂದೆ ಏಟಿಗೆ ಹೊಡೆದು ಮಲಗಿಸಿಬಿಟ್ಟಿದ್ದಳು ಆ ಸಾಧಾರಣ ಹೆಣ್ಣು. ಒಂದೆಡೆ ಅವಳಂತಹ ಸಾಮಾನ್ಯ ಹೆಣ್ಣಿನ ಮನಸನ್ನು ಸರಿಯಾಗಿ ಅರಿಯಲಾಗದ ಅಸಮರ್ಥನಾಗಿ ಹೋದೆನಲ್ಲ ಎಂಬ ಕೀಳರಿಮೆಯಿಂದ ಕುಗ್ಗಿಹೋಗುವಂತಾಗಿದ್ದರೆ, ಮತ್ತೊಂದೆಡೆ ಇಡಿ ಪರಿಸ್ಥಿತಿಯನ್ನು ಅದರ ಸೂಕ್ಷ್ಮತೆಯೆಲ್ಲದರೊಡನೆ ಸರಿಯಾಗಿ ಅರಿತು ನಿಭಾಯಿಸಲಿಲ್ಲವೆಂಬ ‘ಪ್ರಾಜೆಕ್ಟು ಮ್ಯಾನೇಜರನ ಅಹಂ’ಗೆ ಬಿದ್ದ ಪೆಟ್ಟಿನಿಂದ ನರಳುವಂತಾಗಿ ಹೋಗಿತ್ತು. ಅದಕ್ಕೆಲ್ಲ ಪುಟವಿಟ್ಟಂತೆ ಆ ಕವರಿನಲ್ಲಿದ್ದ ಪುಟ್ಟ ಬಣ್ಣದ ಕಾಗದವೊಂದರಲ್ಲಿ ಕೊನೆಯಲ್ಲಿ ‘ಥ್ಯಾಂಕ್ ಯೂ – ಕಾಪ್ ಕುನ್ ಕಾಪ್’ ಎಂದು ಬೇರೆ ಬರೆದಿಟ್ಟು ಅವನ ಮಹಾತ್ಕಾರ್ಯಕ್ಕೆ ಧನ್ಯವಾದ ಬೇರೆ ಸಲ್ಲಿಸಿ ಹೋಗಿಬಿಟ್ಟಿದ್ದಳು. ಏನೇನೊ ಭಾವಗಳ ತಾಕಲಾಟದಲ್ಲಿ ಕಲಸು ಮೇಲೋಗರವಾಗಿ ಹೋಗಿದ್ದ ಆ ಹೊತ್ತಿನ ಮನಸ್ಥಿತಿಯ ಸಂಘರ್ಷದಲ್ಲಿ, ಅವಳನ್ನು ನೇರವಾಗಿ ಕಂಡು, ಕೈ ಜೋಡಿಸಿ ‘ಕ್ಷಮೆ’ ಕೇಳುವುದು ತಾನು ಮಾಡಬಹುದಾದ ತೀರಾ ಕನಿಷ್ಠವಾದ ಕರ್ತವ್ಯವೆನಿಸಿಬಿಟ್ಟಿತ್ತು ಶ್ರೀನಾಥನಿಗೆ. ನಾಳೆ ಅವಳು ಬರುತ್ತಿದ್ದ ಹಾಗೆ ತಾನು ಮಾಡಬೇಕಾದ ಮೊದಲ ಕೆಲಸವೆ ಅದೆಂದು ನಿರ್ಧರಿಸಿಕೊಂಡು ಮೇಲೆದ್ದ ಶ್ರೀನಾಥನಿಗೆ, ಆ ತಪ್ಪೊಪ್ಪಿಗೆಯ ಸಾಧ್ಯತೆಯ ‘ನಾಳೆ’ ಮತ್ತೆ ಬರುವುದೇ ಇಲ್ಲವೆಂದು ಆ ಹೊತ್ತಿನಲ್ಲಿ ಇನ್ನು ಅರಿವಾಗಿರಲಿಲ್ಲ…!

– ಯಾಕೆಂದರೆ ಆ ದಿನದಿಂದಲೆ ಊರ್ಜಿತವಾಗುವಂತೆ ಅವಳನ್ನು ಆಫೀಸಿನ ಕೆಲಸದಿಂದ ತೆಗೆದು ಹಾಕಲಾಗಿದೆಯೆಂಬ ಸತ್ಯ ಆ ಹೊತ್ತಿನಲ್ಲಿ ಕೇವಲ ಅವಳಿಗೆ ಮಾತ್ರ ಗೊತ್ತಿತ್ತು! ಆದರೆ ಅವಳ ಆ ಕೆಲಸದಿಂದ ವಂಚಿತಳಾಗುವ ಸ್ಥಿತಿಗೆ ತಾನೆ ಕಾರಣನೆಂದು ಮಾತ್ರ ಶ್ರೀನಾಥನಿಗೂ ಗೊತ್ತಿರಲಿಲ್ಲ !!

(ಇನ್ನೂ ಇದೆ)
__________

( ಪರಿಭ್ರಮಣ..25ರ ಕೊಂಡಿ – https://nageshamysore.wordpress.com/00212-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-25/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s