00214. ಕಥೆ: ಪರಿಭ್ರಮಣ..(25)

00214. ಕಥೆ: ಪರಿಭ್ರಮಣ..(25)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00214. ಕಥೆ: ಪರಿಭ್ರಮಣ..(25)

( ಪರಿಭ್ರಮಣ..24ರ ಕೊಂಡಿ – https://nageshamysore.wordpress.com/00211-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-24/ )

ಒಂದು ಬಗೆಯ ವಿಚಿತ್ರ ಸಮ್ಮೋಹನ ಸ್ಥಿತಿಯಲ್ಲಿ ಸಿಲುಕಿ ಕದಡಿ ಹೋಗಿತ್ತು ಶ್ರೀನಾಥನ ಮನ. ಅಲ್ಲಿಯವರೆಗೂ ಅವಳೊಡ್ಡಬಹುದಾಗಿದ್ದ ಸಂಕಟದ ಪರಿಕಲ್ಪನೆ ಯಾತನೆಗೆ ಮೂಲವಾಗಿದ್ದರೆ, ಈಗ ಅವಳೊಡ್ಡಿದ್ದ ಔದಾರ್ಯದ ಉರುಳಿನಲ್ಲಿ ಸಿಕ್ಕಿಬಿದ್ದ ವೇದನೆ ಇನ್ನು ಘೋರವಾಗಿತ್ತು. ಆ ನಡುವೆಯೂ ಒಂದೆ ಒಂದು ಸಮಾಧಾನದ ವಿಷಯವೆಂದರೆ, ಅವನು ಭೀತಿಗೊಂಡಿದ್ದ ಮಟ್ಟಕ್ಕೆ ಈ ವಿಷಯ ಉಲ್ಬಣಗೊಳ್ಳುವ ಸಾಧ್ಯತೆ ಇನ್ನು ಸಂಪೂರ್ಣವಾಗಿ ಇಲ್ಲವಾಗಿದ್ದು. ಆ ಸುದ್ದಿಯುಂಟು ಮಾಡಬಹುದಾಗಿದ್ದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಒತ್ತಡಗಳ ಪರಿವೆಯಿಲ್ಲದೆ ಈಗ ಬರಿ ಪ್ರಾಜೆಕ್ಟಿನ ಸಾಧಕ ಭಾಧಕಗಳಷ್ಟನ್ನೆ ಪರಿಗಣಿಸಿ ಮುಂದುವರೆಯಬಹುದಿತ್ತು. ಪ್ರಾಜೆಕ್ಟು ಫಲಿತಾಂಶಗಳು ಚೆನ್ನಾಗಿ ಕೆಲಸ ಮಾಡುತ್ತಿರುವ ಹೊತ್ತಿನಲ್ಲಿ ಅದೇನು ತೀರಾ ತಲೆ ಕೆಡಿಸಿಕೊಳ್ಳಬೇಕಾದ ವಿಷಯವಾಗಿರಲಿಲ್ಲ. ಆ ನಿರಾಳತೆಯಿಂದ ಮುಂದಿನ ದಿನದ ಬದಲಾದ ಅಜೆಂಡಾ ಅನುಸಾರ ಸಿದ್ದತೆಗಳನ್ನು ಮುಂದುವರೆಸುವತ್ತ ಗಮನ ಹರಿಸಿದ್ದ ಶ್ರೀನಾಥ. ಎಲ್ಲವನ್ನು ಅಣಿಗೊಳಿಸಿ ಸ್ಲೈಡುಗಳನ್ನೆಲ್ಲ ತಿದ್ದಿ ತೀಡಿ ಅಂತಿಮ ರೂಪಕ್ಕೆ ತರುವಷ್ಟು ಹೊತ್ತಿಗೆ ಆರುಗಂಟೆಯಾಗಿ ಹೋಗಿತ್ತು. ಹೊರಗೆ ಮೋಡ ಮುಸುಕಿದ ವಾತಾವರಣ ಹಾಗೆ ಮುಂದುವರೆದಿದ್ದ ಕಾರಣ ಅಷ್ಟೊತ್ತಿಗಾಗಲೆ ಮಬ್ಬುಗತ್ತಲೆಯಾವರಿಸಿಕೊಂಡ ರೀತಿ ಮಸುಕಾಗಿಹೋಗಿತ್ತು. ಇನ್ನೇನು ದಿನಚರಿ ಮುಗಿಸಿ ಹೊರಡಬೇಕೆಂದು ಅಂದುಕೊಳ್ಳುವ ಹೊತ್ತಿಗೆ ವೇರ್ಹೌಸಿಗೆ ಹೋಗಿದ್ದ ಸೌರಭ್ ದೇವ್ ಹಿಂದಿರುಗಿ ಒಳಗೆ ಬರುತ್ತಿರುವುದು ಕಾಣಿಸಿತ್ತು. ಜತೆಯಲ್ಲಿ ಹೋಗಿದ್ದವರಾರೂ ಕಾಣದೆ ಅವನೊಬ್ಬ ಮಾತ್ರ ಹಿಂದೆ ಬಂದುದನ್ನು ನೋಡಿ ಕುತೂಹಲವಾಗಿ ಅವನು ತನ್ನ ಸೀಟಿನತ್ತ ಬರುವುದನ್ನೆ ಕಾಯುತ್ತಿರುವವನಂತೆ ಎದ್ದು ನಿಂತಿದ್ದ. ಹೊರಗಿನಿಂದ ಬಂದ ತಕ್ಷಣ ಕತ್ತಲಲ್ಲಿ ಯಾರು ಎಂದು ಸರಿಯಾಗಿ ಕಾಣಿಸದಿದ್ದರೂ ಎದ್ದು ನಿಂತ ಪರಿಣಾಮವಾಗಿ ಕಣ್ಣಿಗೆ ಬಿದ್ದು ಶ್ರೀನಾಥನೆಂದು ಅರಿವಾಗಿ ಅವನತ್ತ ನೇರ ಬಂದಿದ್ದ ಸೌರಭ್ ದೇವ್.

‘ಹಲೋ ಸೌರಭ್ .. ವಿಸಿಟ್ ಓವರ್ ? ಉಳಿದವರೆಲ್ಲ ಎಲ್ಲಿ ? ಒಬ್ಬನೆ ಬಂದ ಹಾಗಿದೆ ? ‘ ತನ್ನತ್ತ ಬರುತ್ತಿದ್ದವನನ್ನೆ ನೋಡುತ್ತ ವಿಚಾರಿಸಿದ್ದ ಶ್ರೀನಾಥ.

‘ ಆಯ್ತು ಸಾರ್ .. ಪ್ರಭುಜಿ ಮತ್ತು ಶರ್ಮಾಜಿ ಅಲ್ಲಿಂದಲೆ ನೇರ ವೆಜಿಟೇರಿಯನ್ ಡಿನ್ನರಿಗೆ ಹೋಗುವೆವೆಂದು ಹೇಳಿ ಹೋದರು.. ನನ್ನ ಕಂಪ್ಯೂಟರು ಬ್ಯಾಗು ಆಫೀಸಿನಲ್ಲೆ ಇರುವುದರಿಂದ ನಾನು ಹಿಂದೆ ಬಂದೆ..’

‘ ವಿಸಿಟ್ ಹೇಗಿತ್ತು ? ಎವೆರಿ ಥಿಂಗ್ ವಾಸ್ ಫೈನ್ ? ಎನಿ ಸರ್ಪ್ರೈಜಸ್ ?’

ಆ ಮಾತಿಗೆ ವಿಚಿತ್ರ ರೀತಿಯ ಗೂಢ ನಗೆಯೊಂದನ್ನು ಬೀರಿದ ಸೌರಭ್ ದೇವ್, ‘ವೇರ್ಹೌಸಿನಲ್ಲೇನೊ ಎಲ್ಲಾ ಮಾಮೂಲಿಯಾಗೆ ಇತ್ತು ಸಾರ್, ಬಟ್ …’ ಎಂದವನೆ ಅರ್ಧಕ್ಕೆ ನಿಲ್ಲಿಸಿದ್ದ.

ಅದನ್ನು ಕೇಳಿಯೆ ಅಲ್ಲೇನೊ ನಡೆದಿರಬಹುದೆಂಬುದನ್ನು ಊಹಿಸಿದರು, ಅವನೇನೋ ಹೇಳಲು ಅನುಮಾನಿಸುತ್ತಿರುವುದು ಕಂಡು ಆಫೀಸಿನ ಹೊರಗೆ ತುಸು ಖಾಸಗಿಯಾಗಿ ಮಾತನಾಡುವುದೆ ಒಳಿತೆಂದು ಗ್ರಹಿಸಿ, ‘ ಸೌರಭ್ ಈಗ ನಾನೂ ಹೊರಡುವುದರಲಿದ್ದೆ.. ನೀನು ಬಂದಿದ್ದು ಒಳಿತೆ ಆಯ್ತು.. ನಿನ್ನದೂ ಇನ್ನು ಊಟಾ ಆಗಿಲ್ಲವೆಂದು ಕಾಣುತ್ತದೆ… ಡು ಯು ಮೈಂಡ್ ಜಾಯ್ನಿಂಗ್ ಫಾರ್ ಡಿನ್ನರ್ ಟುಡೆ ? ವೀ ಕ್ಯಾನ್ ಆಲ್ಸೋ ಚಾಟ್ ಓವರ್ ಡಿನ್ನರ್ ?’

ಕಳೆದ ವಾರದಿಂದ ಶ್ರೀನಾಥನೊಡನಾಡಿಯಾಗಿ ಪಳಗಿದ್ದ ಸೌರಭ್ ದೇವನಿಗೂ ಅದು ಪ್ರಿಯವಾದ ಸಲಹೆಯೆ ಆಗಿತ್ತು. ಬ್ರಹ್ಮಚಾರಿಯಾದ ಕಾರಣ ಅವನೂ ಹೆಚ್ಚು ಕಡಿಮೆ ದಿನವೂ ಹೊರಗೆ ತಿನ್ನುವವನೆ ಆದ ಕಾರಣ ಆಗಲೆನ್ನುವಂತೆ ತಲೆಯಾಡಿಸುತ್ತ ಜತೆಯಲ್ಲಿ ಹೊರಟ. ಸಮೀಪದ ಸೆಂಟ್ರಲ್ ಮಾಲಿನ ಬೇಸ್ಮೆಂಟಿನಲ್ಲಿದ್ದ ‘ಎಸ್ ಅಂಡ್ ಪಿ’ ಥಾಯ್ ರೆಸ್ಟೊರೆಂಟಿಗೆ ಇಬ್ಬರೂ ನಡೆದು ಮೂಲೆಯಲ್ಲಿ ತುಸು ಖಾಸಗಿಯಾಗಿದ್ದ ಟೇಬಲ್ಲೊಂದನ್ನು ಆರಿಸಿ ಕುಳಿತುಕೊಂಡರು… ಅಲ್ಲಿ ಕೊಂಚ ಸಾಂಪ್ರದಾಯಿಕ ಥಾಯ್ ಶೈಲಿಯನ್ನೆ ಆಧುನಿಕರಿಸಿ, ತುಸು ಪಾಶ್ಚಾತ್ಯ ರೀತಿಯ ಕೊಲೇಜ್ ಮಾಡಿದ ತಿನಿಸುಗಳು ಸಿಗುವುದರಿಂದ ಆ ಜಾಗವನ್ನೆ ಆರಿಸಿಕೊಂಡಿದ್ದ ಶ್ರೀನಾಥ. ಇಬ್ಬರೂ ತಮಗೆ ಬೇಕಾದ ತಿನಿಸನ್ನು ಆರಿಸಿ ಆರ್ಡರು ಮಾಡಿ ನಿಧಾನವಾಗಿ ತಂಪಾದ ಲೈಮ್ ಜೂಸು ಕುಡಿಯುತ್ತ ಮಾತಿಗಿಳಿದರು.

‘ ಅವರಲ್ಲಿದ್ದಾಗ ಅಲ್ಲಿನ ಪ್ರೋಸೆಸ್ ಯಾವುದೂ ಕೈ ಕೊಡಲಿಲ್ಲ ತಾನೆ? ಪ್ರಿಂಟಿಂಗ್, ಶಿಪ್ಪಿಂಗ್, ಇನ್ವಾಯ್ಸಿಂಗ್..’

‘ ಇಲ್ಲಾ ಸಾರ್.. ಅದೆಲ್ಲ ಪಕ್ಕಾ…ಯಾವ ತೊಂದರೆಯೂ ಇಲ್ಲದಂತೆ ಸಾಗಿತ್ತು .. ಇನ್ ಫ್ಯಾಕ್ಟ್ ಎರಡನೆ ವಾರದ ಅರ್ಧ ಟರ್ನೋವರನ್ನು ಮೊದಲ ವಾರದಲ್ಲೆ ಸಾಧಿಸಿಬಿಟ್ಟಿದ್ದಾರೆ..’

‘ ಅದನ್ನ ಅವರಿಬ್ಬರ ಹತ್ತಿರವೂ ಹೇಳಿಕೊಂಡರಾ?’

‘ಹೌದು ಸಾರ್..ಕುನ್. ಸೋವಿ ಬಹಳ ಖುಷಿಯಿಂದ ಎಲ್ಲಾ ವಿವರಿಸುತ್ತಿದ್ದ..ಈ ತಿಂಗಳು ರೆಕಾರ್ಡ್ ಶಿಪ್ಪಿಂಗ್ , ರೆಕಾರ್ಡ್ ಟರ್ನೋವರ್ ಗ್ಯಾರಂಟಿ ಅಂತಲೂ ಹೇಳಿಬಿಟ್ಟ..! ‘

ಅದು ಒಳ್ಳೆಯ ಸುದ್ಧಿಯಾದರೂ ಶ್ರೀನಿವಾಸ ಪ್ರಭುವಿಗೆ ಅದನ್ನು ಹೇಳಿದ್ದು ಶುಭಸೂಚಕವೆಂದೇನೂ ಅನಿಸಿರಲಿಲ್ಲ ಶ್ರೀನಾಥನಿಗೆ. ಅವನು ಒಳ್ಳೆಯ ಸುದ್ದಿ ಹೇಳಿದಷ್ಟೂ ಶ್ರೀನಿವಾಸ ಪ್ರಭುವಿನ ಹೊಟ್ಟೆಗೆ ಕೆಂಡ ಸುರಿಯುವಂತೆ ಆಗುವುದರಿಂದ ಆದಷ್ಟು ‘ಲೋ ಪ್ರೊಫೈಲಿನಲ್ಲೆ’ ಇದ್ದು ತಿಂಗಳ ಕೊನೆಯ ನಂತರ ಫಲಿತಾಂಶದ ಮೂಲಕ ಮಾತನಾಡುವುದು ಒಳ್ಳೆಯ, ಬುದ್ಧಿವಂತಿಕೆಯ ಲಕ್ಷಣ. ಇದರಿಂದ ಮತ್ತೇನಾದರೂ ನಡುವೆ ಎಡಬಿಡಂಗಿಯಾದರೂ, ಸಾವರಿಸಿ ನಿವಾರಿಸಿಕೊಳ್ಳಲು ಒತ್ತಡ ರಹಿತವಾಗಿರುವ ವಾತಾವರಣದಿಂದಾಗಿ ಸುಲಭ ಸಾಧ್ಯತೆಯಿರುತ್ತದೆ.. ಒಮ್ಮೆ ಕಮಿಟ್ ಆಗಿಬಿಟ್ಟರೆ ಆಮೇಲೆ ಬದಲಿಸುವುದು ಕಷ್ಟ. ಆದರೆ ಕುನ್. ಸೋವಿ ಸ್ವಲ್ಪ ‘ಎಮೋಶನಲಿ ಎಗ್ಸೈಟೆಡ್’ ಆಸಾಮಿ.. ಅವನನ್ನು ಪ್ರಾಜೆಕ್ಟಿನ ಕಡೆಯಿಂದ ತಡೆಯಲಾಗದು.. ಅದು ಏನಿದ್ದರು ನಾಳಿನ ಮೀಟಿಂಗಿನಲ್ಲಿ ಸ್ವಲ್ಪ ನಿರಾಶಾಜನಕ ವರದಿಯನ್ನೇ ಎತ್ತಿ ಹಿಡಿಯುವುದು ಒಳಿತು ಎಂದು ಮನದಲ್ಲೆ ಅಂದುಕೊಳ್ಳುತ್ತ , ‘ಅದಿರಲಿ, ಅವರೇನೂ ಪ್ರಶ್ನೆ ಕೇಳಲಿಲ್ಲವೆ ಕುನ್. ಸೋವಿಯ ಹತ್ತಿರ ?’ ಎಂದು ಕೇಳಿದ.

‘ಕೇಳಿದ್ದೇನೊ ನಿಜ.. ಆದರೆ ಅವರು ಕೇಳಿದ ವಿಷಯ, ಒತ್ತಾಯಿಸಿದ ರೀತಿ ಮಾತ್ರ ವಿಚಿತ್ರವಾಗಿತ್ತು..’

‘ಅಂದರೆ ಗೋ ಲೈವಿಂದಾಚೆಗೆ ಸಿಸ್ಟಮ್ಮಿನ ದೋಷಕ್ಕೆ ಸಂಬಂಧಿಸಿದಂತೆ ಒಟ್ಟು ಎಷ್ಟು ‘ಇಶ್ಯೂ’ ರೆಕಾರ್ಡ್ ಆಗಿದೆಯೆಂಬ ಅಂಕಿ-ಅಂಶದ ಬಗೆ ತುಂಬಾ ವಿಚಾರಿಸುತ್ತಿದ್ದರು …’

‘ ಐ ಸಿ.. ಅದಕ್ಕೆನಂದರು ನಮ್ಮ ಸೋವಿ ಸಾಹೇಬರು?’ ತುಸು ಅಣಕದಲ್ಲೆ ಪ್ರಶ್ನಿಸಿದ್ದ ಶ್ರೀನಾಥ. ಹಿಂದಿನ ಪ್ರಾಜೆಕ್ಟಿನ ಅನುಭವದಿಂದ ಅವನೇಕೆ ಆ ಪ್ರಶ್ನೆ ಹಾಕಿದ್ದನೆಂದು ಶ್ರೀನಾಥನಿಗೆ ಚೆನ್ನಾಗಿ ಅರ್ಥವಾಗಿ ಹೋಗಿತ್ತು. ಆ ಹಿಂದಿನ ಗೋಲೈವಿನಲ್ಲಿ ಮೊದಲ ವಾರವೆ ಸುಮಾರು ಇನ್ನೂರರಿಂದ ಮುನ್ನೂರು ದೋಷಗಳು ಗುರುತಿಸಲ್ಪಟ್ಟು ಅದರಲ್ಲಿ ಅರ್ಧಕ್ಕಿಂತ ಹೆಚ್ಚು ತಂತ್ರಾಂಶಕ್ಕೊ, ಸಿಸ್ಟಮ್ಮಿನ ದೋಷಕ್ಕೊ ಸಂಬಂಧಿಸಿದ್ದಾಗಿತ್ತು. ಮಿಕ್ಕವೆಲ್ಲ ಪ್ರೋಸೆಸ್ಸಿಗೆ, ಮಾಸ್ಟರು ಡೇಟಾ ಮತ್ತು ಟ್ರೈನಿಂಗಿಗೆ ಸಂಬಂದಿಸಿದ್ದವಾಗಿದ್ದವು. ಅದನ್ನೆಲ್ಲ ಬಿಡಿಸಿ, ನಿಭಾಯಿಸಿ ಸುಧಾರಿಸಲೆ ಗೋಲೈವ್ ತರುವಾಯದ ನಂತರ ಮೂರು ತಿಂಗಳ ಕಾಲ ಹಿಡಿದಿತ್ತು. ಇಲ್ಲಿ ಆ ತರಹದ ‘ಇಶ್ಯೂ’ಗಳೆಷ್ಟಿವೆಯೆಂದು ನೋಡುತ್ತಿದ್ದಾನೆ ಚಾಣಾಕ್ಷ – ಹೋಲಿಸಿ ನೋಡಿ ಏನಾದರೂ ಹುಳುಕಿದೆಯೆ ಎಂದು ಹುಡುಕಲು ..’

‘ಕುನ್. ಸೋವಿ ಡೈರೆಕ್ಟಾಗಿ ‘ಜೀರೋ ಇಶ್ಯೂಸ್’ .. ಆಲ್ ಗೋಯಿಂಗ್ ವೆರಿ ಫೈನ್’ ಅಂದುಬಿಟ್ಟಾ ಸಾರ್..’

‘ ಇಂಟರೆಸ್ಟಿಂಗ್ …’

‘ ಆದರೆ ಪ್ರಭು ಸಾರ್ ಮಾತ್ರ ಅದನ್ನ ನಂಬದವರಂತೆ ಪದೇ ಪದೇ ಅದನ್ನೇ ತಿರುಗಿಸಿ ಮುರುಗಿಸಿ ಕೇಳುತ್ತಿದ್ದರೂ ಸಾರ್.. ಪ್ರೋಸೆಸ್ಸಿನಲ್ಲಿ, ಮಾಸ್ಟರು ಡೇಟಾದಲ್ಲಿ, ಟ್ರೈನಿಂಗಿನಲ್ಲಿ, ರೀಪೋರ್ಟಿನಲ್ಲಿ, ಫಾರ್ಮಿನಲ್ಲಿ ಎಲ್ಲೂ ಇಲ್ಲವೇ? ಎಂದು.. ಆದರೆ ಕುನ್. ಸೋವಿ ಮಾತ್ರ ಎಲ್ಲದಕ್ಕೂ ‘ಜೀರೋ, ಜೀರೋ – ಇಶ್ಯೂಸ್ ಎಲ್ಲೂ ಇಲ್ಲಾ’ ಎಂದೆ ಉತ್ತರ ಕೊಟ್ಟು ಬಿಟ್ಟ ..!’

ಅಂದರೆ ಚೆನ್ನಾಗಿ ಆಡಿಟಿಂಗ್ ನಡೆದಿರುವಂತೆ ಕಾಣುತ್ತಿದೆ..ಇರಲಿ ಇದು ಒಂದು ರೀತಿ ಒಳ್ಳೆಯದೆ.. ಪರಿಶೋಧನೆಯಲ್ಲಿ ಗಟ್ಟಿ ಫಲಿತ ಬಂದಷ್ಟು ಪ್ರಾಜೆಕ್ಟಿನ ಆರೋಗ್ಯಕ್ಕೆ ಒಳ್ಳೆಯದು ಎಂದುಕೊಳ್ಳುತ್ತಲೆ, ‘ಆದರೆ ಶ್ರೀನಿವಾಸ ಪ್ರಭು ಮಾತ್ರ ಆ ಉತ್ತರದಿಂದ ತೃಪ್ತರಾದಂತೆ ಕಾಣಲಿಲ್ಲ, ಅಲ್ಲವೇ? ‘ ಎಂದು ಪ್ರಶ್ನಾರ್ಥಕವನ್ನಿಟ್ಟ.

‘ಹೌದು ಸಾರ್ ಅದೆ ವಿಚಿತ್ರ – ಎಲ್ಲಾ ಸ್ಮೂಥಾಗಿದೆಯೆಂದರೆ ಖುಷಿ ಪಡಬೇಕು .. ಆದರೆ ಅವರ್ರಿಗೇಕೊ ಸಮಾಧಾನವಾದ ಹಾಗೆ ಕಾಣಲಿಲ್ಲ..’

‘ ಅದಕ್ಕೆ ಬೇರೆ ಹಿನ್ನಲೆಯಿದೆ.. ನೀನು ಹೋದ ಪ್ರಾಜೆಕ್ಟಿನಲ್ಲಿರದಿದ್ದ ಕಾರಣ ನಿನಗೆ ಆ ಹಿನ್ನಲೆಯೆಲ್ಲ ಗೊತ್ತಿಲ್ಲ .. ಇರಲಿ ಮುಂದೇನಾಯ್ತು ..’

‘ ಅವರು ಒಂದೆ ಸಮನೆ ಒತ್ತಾಯಿಸಿದಾಗ ನಾನೆ ಮಧ್ಯ ಪ್ರವೇಶಿಸಿ, ಆ ಪ್ರಮೋಶನಲ್ ಐಟಮ್ಮಿನ ಇನ್ವಾಯ್ಸ್ ಪ್ರಿಂಟಿಂಗಿನ ತೊಂದರೆ ಕುರಿತು ಹೇಳಿ, ಆ ಇಶ್ಯೂ ಈಗಾಗಲೇ ಕ್ಲೋಸ್ ಆಗಿದೆಯೆಂದು ಹೇಳಿದೆ.. ಆದರೆ ಕುನ್. ಸೋವಿ ನಡುವೆ ಬಾಯಿ ಹಾಕಿ, ಆ ದೋಷ ಕಂಡು ಹಿಡಿದ ಎರಡೆ ಗಂಟೆಯೊಳಗೆ ಅದನ್ನು ಫಿಕ್ಸ್ ಮಾಡಿದ್ದರಿಂದ ಅದು ದಾಖಲಿಸುವ ದೋಷವೆ ಅಲ್ಲವೆಂದು ವಾದಿಸಿಬಿಟ್ಟ..!’

ತಮ್ಮ ಪರವಾಗಿ ಕುನ್. ಸೋವಿ ಬೆಂಬಲಿಸುತ್ತಿರುವುದು ಒಂದು ರೀತಿ ವಿಚಿತ್ರವ ಸನ್ನಿವೇಶವಾದರು ಹಿತಕರವಾದುದಾಗಿತ್ತು. ಅದೇನೆ ಇದ್ದರೂ ತಾನು ಮಾತ್ರ ತುಸು ಮಂಕಾಗಿರುವ ಚಿತ್ರಣವನ್ನೆ ಒದಗಿಸಿಕೊಟ್ಟು ಅವನಿಗಷ್ಟು ‘ವಿಘ್ನ ಸಂತೋಷಿ’ ಸಮಾಧಾನ ಒದಗಿಸಬೇಕೆಂದು ನಿಶ್ಚಯಿಸಿದ ಶ್ರೀನಾಥ, ಮುಂದೇನಾಯ್ತೆಂಬ ಕುತೂಹಲದಲ್ಲಿ ಸೌರಭನತ್ತ ದಿಟ್ಟಿಸಿದ್ದ.

‘ ಅದೆಲ್ಲಾ ಮಾತುಕತೆ ಮುಗಿದ ಮೇಲೆ ನನ್ನನ್ನೂ ತರಾಟೆಗೆ ತೆಗೆದುಕೊಂಡರು ಸಾರ್..’

‘ನಿನ್ನನ್ನೆ? ಯಾಕಂತೆ?’

‘ ಕಸ್ಟಮರುಗಳು ಏನಾದರೂ ದೋಷ ಹುಡುಕಿದರೆ ತಕ್ಷಣಕ್ಕೆ ಪರಿಹಾರ ಕೊಡಲು ಆತುರ ಪಡಬಾರದು.. ತುಸು ಸಮಯ ಕಳೆದೆ ನಿಧಾನಿಸಿ ಪರಿಹಾರ ಒದಗಿಸಬೇಕೆಂದು ಬುದ್ದಿ ಹೇಳಿದರು …’

‘ಆಹಾ! ಅದು ಏಕಂತೊ?’

‘ ಅವರಿಗೆ ವೇಗದ ಸೇವೆಯ ಅಭ್ಯಾಸವಾಗಿಬಿಟ್ಟರೆ ಪ್ರತಿಯೊಂದನ್ನು ಅದೆ ವೇಗದಲ್ಲಿ ಬಯಸಲು ಆರಂಭಿಸಿಬಿಡುತ್ತಾರೆ ಎಂದಂತೆ.. ಅದೂ ಅಲ್ಲದೆ ಎಲ್ಲಾ ಪ್ರೋಗ್ರಾಮರುಗಳು ಅದೆ ವೇಗದಲ್ಲಿ ನಿಭಾಯಿಸಲಾಗದ ಕಾರಣ ಉಳಿದವರ ಮೇಲೆಲ್ಲ ವಿನಾಕಾರಣ ಒತ್ತಡ ಏರಿದಂತಾಗುತ್ತದಂತೆ – ಪೀರ್ ಲೆವೆಲ್ಲಿನಲ್ಲಿ’ ಅಂದರು.

‘ ಅದಕ್ಕೆ ನೀನೇನೆಂದೆ..?’

‘ ನಾನು – ಗೋಲೈವ್ ಇಶ್ಯೂ ಎಂದಷ್ಟೆ ವೇಗವಾಗಿ ಮಾಡಿದೆವು .. ಮಾನೂಲಿಯಾಗಿ ಇಷ್ಟು ಬೇಗ ಮಾಡುವುದಿಲ್ಲ ಎಂದೆ..’

‘ ಗುಡ್ ಆನ್ಸರ್..’ ಮೆಚ್ಚುಗೆಯಲ್ಲಿ ನುಡಿದಿದ್ದ ಶ್ರೀನಾಥ..

‘ ಅದೆಲ್ಲಾ ಆದ ಮೇಲೂ ನನ್ನನ್ನು ಪಕ್ಕಕ್ಕೆ ಕರೆದು ನಾವು ಕೊನೆಗಳಿಗೆಯಲ್ಲಿ ಬದಲಾಯಿಸಿದ ಪ್ರಿಂಟಿಂಗ್ ಪ್ರೋಗ್ರಾಮಿನ ಕುರಿತು ಪುನಃ ಪುನಃ ವಿಚಾರಿಸಿದರು ಶ್ರೀನಾಥ್ ಸಾರ್..’

ಇದೇಕೋ ಸ್ವಲ್ಪ ವಿಚಿತ್ರವಾಗಿ ಕಂಡಿತ್ತು ಶ್ರೀನಾಥನಿಗೆ.. ಈ ಪ್ರೋಗ್ರಾಮು ಮತ್ತದರ ಬದಲಾವಣೆ ಕುರಿತು ಅವನಿಗ್ಹೇಗೆ ಗೊತ್ತು? ಅವನಿಗೆ ಸುದ್ದಿ ಮುಟ್ಟಿಸಿದವರ್ಯಾರು? ಶರ್ಮನೇನಾದರೂ ಅವನಿಗೆ ಸತತ ಮಾಹಿತಿ ಕೊಡುತ್ತಿದ್ದನೆ – ಬೇಹುಗಾರನಂತೆ? ಇದ್ಯಾಕೊ ತುಸು ಅತಿಯಾದ ರೀತಿಯೆನಿಸಿತು.

‘ ನಾನು ಏನೇನೂ ಬದಲಾಯಿಸಿದೆ, ಯಾರು ಬದಲಾಯಿಸಲು ಹೇಳಿದರು, ತೊಂದರೆಯಿದೆಯೆಂದು ಕಂಡು ಹಿಡಿದದ್ದು ಯಾರು, ಹೇಗೆ ಪತ್ತೆ ಮಾಡಿದ್ದು ಎಂದೆಲ್ಲಾ ವಿವರಗಳನ್ನು ಕೇಳಿದರು ಸಾರ್.. ನಾನು ಎಲ್ಲದಕ್ಕೂ ನಿಮ್ಮತ್ತ ತೋರಿಸಿಬಿಟ್ಟೆ..’

ಇದೇನೋ ಸ್ವಲ್ಪ ಆತಂಕಕಾರಿ ಬೆಳವಣಿಗೆಯಿದ್ದಂತಿದೆಯೆನಿಸಿತ್ತು ಶ್ರೀನಾಥನಿಗೆ. ಏನಿರಬಹುದದರ ಹಿನ್ನಲೆ, ಹುನ್ನಾರ ಎಂದು ಆಲೋಚಿಸುತ್ತಲೆ, ‘ ಒಳ್ಳೆಯದೆ ಮಾಡಿದೆ .ಸರಿಯಾಗಿಯೆ ಹೇಳಿದ್ದಿಯಾ..ಅದರ ವಿಚಾರ ಬಿಡು ನಾನು ನೋಡಿಕೊಳ್ಳುತ್ತೇನೆ ‘ ಎಂದು ಅವನಿಗೆ ನಿರಾಳವನ್ನುಂಟುಮಾಡಿದ್ದ.

ಅಷ್ಟೊತ್ತಿಗಾಗಲೆ ತಿಂದಿದ್ದೆಲ್ಲ ಮುಗಿದು ಪ್ರಮೋಶನ್ನಿಗೆಂದು ಕೊಡುತ್ತಿದ್ದ ಡೆಸರ್ಟಿನ ಪ್ಲೇಟನ್ನು ತಂದಿಟ್ಟು ಹೋಗಿದ್ದ, ರೆಸ್ಟೋರೆಂಟಿನ ಸಿಬ್ಬಂದಿ. ಅದನ್ನು ಕೈಗೆತ್ತಿಕೊಳ್ಳುತ್ತಾ ಸೌರಭ್ ದೇವ್ ತುಸು ಅರೆ ಮನಸಿನ ದನಿಯಲ್ಲೇ ‘ ಸಾರ್ ಇನ್ನೊಂದು ವಿಷಯ’ ಎಂದ

ತಿನ್ನುವುದನ್ನು ನಿಲ್ಲಿಸಿ ‘ಏನು?’ ಎಂಬಂತೆ ಅವನನ್ನೆ ದಿಟ್ಟಿಸಿದ್ದ ಶ್ರೀನಾಥ. ಆದರೂ ಯಾವುದೊ ಮುಜುಗರದ ವಿಷಯ ಹೇಳುವಾಗ ಇರುವ ‘ಹೇಳಬಹುದೊ ಹೇಳಬಾರದೊ ?’ ಎನ್ನುವ ಅಳುಕು , ಅನುಮಾನ ತೀರಿದ್ದಂತೆ ಕಾಣಲಿಲ್ಲ. ಬಹುಶಃ ಏನೋ ಗುಟ್ಟಿನದಿದ್ದರೂ ಇರಬಹುದೆಂದು ಭಾವಿಸಿದ ಶ್ರೀನಾಥ,

‘ ಸೌರಭ್ ಯು ಕ್ಯಾನ್ ಟ್ರಸ್ಟ್ ಮಿ.. ಏನಿದ್ದರೂ ಧೈರ್ಯವಾಗಿ ಹೇಳು.. ಇಟ್ ವಿಲ್ ಬಿ ಕಾನ್ಫಿಡೆನ್ಶಿಯಲ್’ ಎಂದು ಧೈರ್ಯ ತುಂಬಿ ಉತ್ತೇಜಿಸಿದ.

ಆ ಮಾತಿಂದ ತುಸು ಬಲ ಬಂದವನಂತೆ ‘ ಸಾರ್ ಆಮೇಲೆ ಪ್ರಭು ಮತ್ತು ಶರ್ಮರಿಬ್ಬರು ತಂತಮ್ಮಲ್ಲೆ ತುಸು ದೂರದ ಮೂಲೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು.. ನನಗೆ ತಮಿಳು ಬರುವುದಿಲ್ಲವೆಂದುಕೊಂಡೊ ಏನೊ – ಇಬ್ಬರೂ ತಮಿಳಿನಲ್ಲಿ ಚರ್ಚಿಸುತ್ತಿದ್ದರು..’

ಈಗದು ಏನೊ ಗುಟ್ಟಿನ ವಿಷಯವೇ ಎಂದು ಖಚಿತವಾಗಿ ಶ್ರೀನಾಥನಿಗೂ ಕುತೂಹಲ ಕೆರಳಿಸಿ ಕಿವಿ ನೆಟ್ತಗಾಯ್ತು..

‘ ನಾನು ತಮಿಳುನಾಡಿನ ಪ್ರಾಜೆಕ್ಟೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ್ದೆ .. ಹೀಗಾಗಿ ನನಗೂ ತಮಿಳು ಸುಮಾರು ಚೆನ್ನಾಗಿಯೆ ಅರ್ಥವಾಗುತ್ತದೆ..’

‘ ಸದ್ಯ ಅದನ್ನು ಅವರಿಗೂ ಹೇಳಲಿಲ್ಲಾ ತಾನೇ..ಅದಿರಲಿ ಏನು ಮಾತಾಡಿಕೊಂಡರು?’ ಎಂದು ಮೆಲುವಾಗಿ ಛೇಡಿಸಿದವನನ್ನು ನಿರ್ಲಕ್ಷಿಸುತ್ತ, ‘ ಶರ್ಮನನ್ನು ಪ್ರಭು ದೂಷಿಸುತ್ತಿದ್ದರು – ಅದು ಹೇಗೆ ಪ್ರೋಗ್ರಾಮ್ ಬದಲಿಸಲು ಬಿಟ್ಟೆ?’ ಎಂದು ತರಾಟೆಗೆ ಬೇರೆ ತೆಗೆದುಕೊಂಡರು ಸಾರ್..’

‘ ಹಾಂ!’

‘ ಆ ಪ್ರೋಗ್ರಾಮ್ ಬದಲಿಸದೆ ಇದ್ದಿದ್ದರೆ ಗೋಲೈವ್ ಇಷ್ಟು ಸ್ಮೂಥಾಗಿ ಇರುತ್ತಿರಲಿಲ್ಲ ಎಂದು ಹೇಳಿದರು.. ‘ನಾನು ಅಷ್ಟೆಲ್ಲಾ ಐಡಿಯ ಕೊಟ್ಟು ಮಾಡಿದ್ದೆಲ್ಲ ನಿನ್ನ ನಿರ್ಲಕ್ಷದಿಂದ ಮಣ್ಣು ಪಾಲಾಯ್ತು .. ಈಗ ನೋಡು ಈ ಸಕ್ಸಸ್ಸಿನಿಂದ ನಮ್ಮ ಪ್ರಾಜೆಕ್ಟು ತುಂಬಾ ಬಡವಾಗಿ ಕಾಣುತ್ತದೆ ‘ ಅಂತಲೂ ಹೇಳುತ್ತಿದ್ದರು..’

ಆ ಮಾತು ಕೇಳುತ್ತಿದ್ದಂತೆ ಕೈಯಲ್ಲಿದ್ದ ಐಸ್ಕ್ರೀಮಿನ ಕಪ್ಪನ್ನು ಹಾಗೆ ಕುಕ್ಕಿ ಕುಸಿದು ಹಿಂದಕ್ಕೊರಗಿದ್ದ ಶ್ರೀನಾಥ… ಹಾಗಾದರೆ ಈ ರೀತಿಯ ಪ್ರಿಂಟು ಪ್ರೋಗ್ರಾಮ್ ಮೂಲ ಯೋಜನೆಗೆ ವ್ಯತಿರಿಕ್ತವಾಗಿ ಮಾಡಿದ್ದೆಲ್ಲ ಒಂದು ಪೂರ್ವಯೋಜಿತ ಷಡ್ಯಂತ್ರದ ಭಾಗವೆ ? ಹೇಗಾದರೂ ಪ್ರಾಜೆಕ್ಟಿನ ಫಲಿತಾಂಶ ಹದಗೆಡಲೆಂದೋ ಅಥವಾ ಹಿಂದಿನ ಪ್ರಾಜೆಕ್ಟಿಗೆ ಮೀರಿ ಯಷಸ್ಸಾಗದಿರಲೆಂದೊ ಒಳಗೊಳಗೆ ‘ಸಬೋಟೇಜ್’ ಯತ್ನ ನಡೆದಿತ್ತೆ ? ತನಗೇನೊ ಆಕಸ್ಮಿಕವಾಗಿ ಆರನೆ ಇಂದ್ರೀಯದ ತಿದಿ ಗುದ್ದಿ ಹೇಗೊ ಏನೊ ವಾಸನೆ ಹತ್ತಿ ಬೆನ್ನಟ್ಟಲಾಗಿ ಕೊನೆ ಗಳಿಗೆಯಲ್ಲಿ ಬಚಾವು ಮಾಡಿತ್ತು .. ಅದೇನಾದರೂ ಆಗದೆ ಇದ್ದಿದ್ದರೆ…? ಆಗಲೂ ಕಣ್ತಪ್ಪಿನಿಂದಾದ ತಪ್ಪಿರಬಹುದೆಂದೆನಿಸಿತ್ತೆ ಹೊರತು ಯಾರಾದರೂ ಬೇಕೆಂತಲೇ ಮಾಡಿರಬಹುದೆಂದು ಖಡಾಖಂಡಿತವಾಗಿ ಅನಿಸಿರಲಿಲ್ಲ. ಹಾಗೆ ಮುಂದುವರೆದು ಸೌರಭ್ ದೇವನಲ್ಲಿ ಮತ್ತಷ್ಟು ಪ್ರಶ್ನೆ ಕೇಳಿ ಅನುಮಾನಗಳೆಲ್ಲ ಪರಿಹರಿಸಿಕೊಂಡ ಮೇಲೆ ಅವರೇನೋ ಕುತಂತ್ರ ಹೂಡಿದ್ದರೆಂದು ಮಾತ್ರ ಖಚಿತವಾಗಿ ಹೋಗಿತ್ತು.

ಅದೆಲ್ಲ ಮುಗಿದ ಮೇಲೆ ಯಾಕೊ ಮಿಕ್ಕ ಡೆಸರ್ಟನ್ನು ತಿನ್ನಲು ಮನಸಾಗದೆ ಅರ್ಧಕ್ಕೆ ಬಿಟ್ಟು ಮೇಲೆದ್ದ ಶ್ರೀನಾಥ, ‘ ದೇವ್.. ಡೊಂಟ್ ಟೆಲ್ ದಿಸ್ ಟು ಎನಿ ವನ್..ಇದು ತುಂಬಾ ಸೀರಿಯಸ್ ಆಗಿರುವಂತೆ ಕಾಣುತ್ತಿದೆ.. ಥ್ಯಾಂಕ್ಸ್ ಫಾರ್ ಆಲ್ ದೀಸ್ ಇನ್ಪುಟ್ಸ್.. ನಾವಿನ್ನೂ ತುಂಬಾ ಜಾಗರೂಕರಾಗೆ ಇರಬೇಕು ಪ್ರಾಜೆಕ್ಟು ಮುಗಿಯುವವರೆಗೆ.. ಇದೆಲ್ಲ ಗೊತ್ತಿದ್ದರೂ ಪ್ರೂವ್ ಮಾಡಿ ತೋರಿಸಲು ಕಷ್ಟ.. ನೀನು ಮಾತ್ರ ಅವರೊಂದಿಗೆ ಮಾಮೂಲಿನಂತೆ ಇರು.. ಮಿಕ್ಕಿದ್ದು ನಾನು ಹ್ಯಾಂಡಲ್ ಮಾಡುತ್ತೇನೆ’ ಎಂದಿದ್ದ. ಆದರೆ ಅವನ ತಲೆಯಲ್ಲಿ ಮಾತ್ರ ಹತಾಶೆಯ ಭೂತ ನರ್ತನ ಆರಂಭವಾದಂತಾಗಿ, ಒಳಗೆಲ್ಲ ಹೊಸದೊಂದು ಭೂತದ ಕೋಲವೆ ನಡೆಯುತ್ತಿರುವಂತೆ ಗದ್ದಲದಿಂದ ತುಂಬಿಹೋಗಿತ್ತು.

ಮುಂದಿನ ದಿನಗಳ ಮೀಟಿಂಗಿನಲ್ಲಿ ಎಲ್ಲಾ ಸಿದ್ದಪಡಿಸಿದ್ದ ಕಾರ್ಯಸೂಚಿಯಂತೆ ನಡೆದಿದ್ದರೂ ಶ್ರೀನಿವಾಸ ಪ್ರಭುವಿನ ಅಸಹನೆ, ಚಡಪಡಿಕೆಗಳು ಈಗ ಹಿಂದಿನ ದಿನಕ್ಕಿಂತ ಹೆಚ್ಚು ಬಹಿರಂಗವಾಗಿ ಪ್ರಕಟಗೊಳ್ಳುತ್ತಿರುವುದು ಕಾಣಿಸುತ್ತಿತ್ತು. ಪ್ರಾಜೆಕ್ಟಿನ ಒಪ್ಪು ತಪ್ಪು ಕೊರತೆಗಳ ಬದಲಿಗೆ ಸ್ಲೈಡುಗಳಲ್ಲಿನ ಅಕ್ಷರದ ಗಾತ್ರ, ಬಣ್ಣ, ವಿನ್ಯಾಸಗಳಂತಹ ಚಿಲ್ಲರೆ ಅಂಶಗಳಲ್ಲಿರುವ ಕುಂದು ಕೊರತೆ, ನ್ಯೂನತೆಗಳನ್ನು ಎತ್ತಿ ತೋರಿಸುತ್ತ ಕಂಪನಿಯ ನಿರ್ದಿಷ್ಠ ನಿರ್ದೇಶಿತ ಗುಣಮಟ್ಟದನುಸಾರ ಸಿದ್ದಪಡಿಸಿಲ್ಲವೆಂಬ ಗೊಣಗಾಟ ಆರಂಭಿಸಿದ್ದ. ಸ್ಥಳೀಯವಾಗಿ ಹೊರಡಿಸಿದ್ದ ಆದೇಶಾನುಸಾರ ಅಲ್ಲಿಯ ಟೆಂಪ್ಲೇಟುಗಳನ್ನು ಬಳಸಬೇಕೆಂಬ ನಿಯಮವಿದ್ದುದರಿಂದ ಶ್ರೀನಾಥ ಅವುಗಳನ್ನು ಉಪಯೋಗಿಸಿದ್ದ. ಮೂಲತಃ ಅದೇನು ದೊಡ್ಡ ವಿಷಯವಾಗಿರಲಿಲ್ಲ. ಆದರೆ ಈ ಗೊಣಗಾಟದ ಹಿನ್ನಲೆ ಬೇರೆಯೆ ಇದ್ದ ಕಾರಣ ಆ ಕುರಿತಾದ ವಾದವಿವಾದಕ್ಕೆ ಇಳಿಯದೆ ನಿರ್ಲಕ್ಷಿಸಲು ನಿರ್ಧರಿಸಿದ್ದ ಶ್ರೀನಾಥ. ಹಿಂದಿನ ದಿನ ಸೌರಭದೇವನಿಂದ ಸಿಕ್ಕಿದ ವರದಿಯಿಂದಾಗಿ, ಪರಿಸ್ಥಿತಿಯ ಸೂಕ್ಷ್ಮ ತಾನಂದುಕೊಂಡಿದ್ದಕ್ಕಿಂತ ನವಿರಾಗಿರುವ ಸುಳಿವು ಸಿಕ್ಕ ಕಾರಣ ಆದಷ್ಟು ಗದ್ದಲ, ತಾಕಲಾಟಕೆಡೆಗೊಡದಂತೆ ಸೂಕ್ಷ್ಮವಾಗೆ ನಿಭಾಯಿಸಬೇಕೆಂದು ರಾತ್ರಿಯೆಲ್ಲ ಚಿಂತಿಸಿ ತೀರ್ಮಾನಿಸಿದ್ದ ಶ್ರೀನಾಥನಿಗೆ, ಮತ್ತೆ ಯಾವ ಹೊಸ ಪ್ರಚೋದನೆಗೂ ಬಲಿಯಾಗದೆ ಮಿಕ್ಕುಳಿದ ಪ್ರಾಜೆಕ್ಟಿನ ಕಡೆಯ ಹಂತಗಳನ್ನು ಬೇಗನೆ ಮುಗಿಸಿದ್ದರೆ ಸಾಕಾಗಿತ್ತು. ಸಿಸ್ಟಮ್ಮಿನ ನಡಾವಳಿಯನ್ನೆಲ್ಲ ತನ್ನ ಬಸಿರಲ್ಲಿ ‘ಬಿಟ್ಸ್’ ಮತ್ತು ‘ಬೈಟು’ಗಳ ರೂಪದಲ್ಲಿ ಅಡಗಿಸಿಟ್ಟುಕೊಳ್ಳುವ ದೊಡ್ಡ ಕಂಪ್ಯೂಟರ್ ಹಿರಿಯಣ್ಣನಾದ ‘ಸರ್ವರ ಹಾಡ್ವೇರ್’ ಇದ್ದುದು ಸಿಂಗಾಪುರದಲ್ಲಿ. ಅದರ ಮೇಲುಸ್ತುವಾರಿ, ದೈನಂದಿನ ಆರೋಗ್ಯದ ಜವಾಬ್ದಾರಿಯಿದ್ದುದು ಶ್ರೀನಿವಾಸ ಪ್ರಭುವಿನ ಕೈಯಲ್ಲೆ. ಈ ಹೊತ್ತಲ್ಲಿ ಅವನೇನೂ ತರಲೆ ಮಾಡದಂತೆ ನೋಡಿಕೊಳ್ಳಬೇಕೆಂದರೆ, ತಮ್ಮ ನಡುವಿನ ಮುಸುಕಿನ ಗುದ್ದಿನ ಹೋರಾಟ, ಬಹಿರಂಗ ಹೊಡೆದಾಟದ ಮಟ್ಟಕ್ಕಿಳಿಯದಂತೆ ನೋಡಿಕೊಳ್ಳಬೇಕು. ಮೊದಲ ಒಂದು ತಿಂಗಳು ಕಳೆದು, ತಿಂಗಳ ಕೊನೆಯ ಎಲ್ಲಾ ಪ್ರಮುಖ ಪ್ರಕ್ರಿಯೆಗಳು ಸುಗಮವಾಗಿ ಮುಗಿದಾಗಲಷ್ಟೆ ಸುಖ ಪ್ರಸವದ ಜತೆಗೆ ಬಾಣಂತಿತನವೂ ಮುಗಿದ ಹಾಗೆ ಲೆಕ್ಕ. ಆಮೇಲಿನ ಜವಾಬ್ದಾರಿ, ಹೊಣೆಗಾರಿಕೆ ಎಲ್ಲ ಪ್ರಾಜೆಕ್ಟಿನ ಹೆಗಲಿನಿಂದ ಶ್ರೀನಿವಾಸ ಪ್ರಭುವಿನ ಹೆಗಲಿಗೆ ವರ್ಗಾಯಿಸಿಕೊಳ್ಳುವುದರಿಂದ ಏನಾದರೂ ಮಾಡಿಕೊಂಡು ಹಾಳಾಗಲಿ ಎಂದು ಬಿಟ್ಟು ಬಿಡಬಹುದು. ಆದರೆ ಅಲ್ಲಿಯ ತನಕ ತುಸು ಜೋಪಾನವಾಗಿ ಕಾಯ್ದುಕೊಳ್ಳುವುದೆ ಜಾಣತನ. ಹೀಗಾಗಿ ಅವನ ಕೊಂಕು, ಕುಹುಕಗಳಿಗೆಲ್ಲ ಪ್ರಚೋದನೆಗೊಳಗಾಗದೆ ವಸ್ತುನಿಷ್ಠವಾಗಿ ಉತ್ತರಿಸಹತ್ತಿದ್ದ ಶ್ರೀನಾಥ. ಒಂದು ಕಡೆ ಅವನು ಪ್ರಾಜೆಕ್ಟಿನ ಯಶಸ್ಸಿಗೆ ಅಡ್ಡಗಾಲು ಹಾಕುವ ಪ್ರಯತ್ನಕ್ಕಿಳಿದಿದ್ದನ್ನು ಎತ್ತಿ ತೋರಿಸಿ ಜಾಡಿಸಬೇಕೆಂಬ ಅದಮ್ಯ ಬಯಕೆಯುಂಟಾಗಿದ್ದರೂ ಅದನ್ನು ಗಟ್ಟಿಯಾಗಿ ನಿರೂಪಿಸುವ ಸಾಕ್ಷಾಧಾರವಿಲ್ಲದೆ ಸುಮ್ಮನೆ ಖಾಲಿ ಆರೋಪಿಸುವಂತಿರಲಿಲ್ಲ.. ಅದು ಬೇರೆ ರೀತಿಯ ತಿರುವು ಪಡೆದುಕೊಳ್ಳುವ ಸಾಧ್ಯತೆಯಿತ್ತು. ಅದೆ ಹೊತ್ತಲ್ಲಿ ಹಿನ್ನಲೆಯಲ್ಲಿ ಮತ್ತೊಂದು ಅಲೋಚನೆಯೂ ನುಸುಳಿ, ಈಗ ಈ ಕುಂದುಗಳ ಕುರಿತು ಸದ್ದುಗದ್ದಲ ಮಾಡುವ ಬದಲು ಪ್ರಾಜೆಕ್ಟು ಪೂರ್ತಿ ಯಶಸ್ವಿಯಾಗಿ ಮುಗಿದ ನಂತರ ಎತ್ತಿ ತೋರಿಸಿದರೆ, ಯಶಸ್ಸಿನ ತೇಜಸ್ಸಿನಲ್ಲಿ ಅದರ ಮೌಲ್ಯ ಮತ್ತು ಪ್ರಖರತೆ ಎರಡೂ ಹೆಚ್ಚಾಗುವ ಕಾರಣ, ಅಲ್ಲಿಯತನಕ ಸಹನೆಯಿಂದ ಕಾಯುವುದೆಂದು ಹಿಂದಿನ ದಿನ ರಾತ್ರಿಯೆ ಬಲವಾಗಿ ನಿರ್ಧರಿಸಿಬಿಟ್ಟಿತ್ತು ಶ್ರೀನಾಥನ ಮನ ಮಥನ. ಆಗ ಸೋಲಿಗೆ ನೆಪ ಹುಡುಕುತ್ತಿದ್ದಾರೆಂದು ಯಾರೂ ದೂರುವಂತಿರಲಿಲ್ಲ… ಯಶಸ್ಸಿನ ಜತೆಗೆ ಹೇಳುತ್ತಿರುವ ಕಾರಣ ಕ್ರೇಡಿಬಲಿಟಿಯೂ ಹೆಚ್ಚುತ್ತಿತ್ತು. ಹೀಗಾಗಿ ಉರಿದು ಭುಗಿಲೇಳುತ್ತಿದ್ದ ಮನವನ್ನು ಬಲು ಕಷ್ಟದಿಂದ ಹಿಡಿತದಲ್ಲಿರಿಸಲು ಯತ್ನಿಸುತ್ತ ಮೀಟಿಂಗನ್ನು ಮುಗಿಸಲು ಹೆಣಗಾಡತೊಡಗಿದ್ದ ಶ್ರೀನಾಥ.

(ಇನ್ನೂ ಇದೆ)
__________

(ಪರಿಭ್ರಮಣ..26ರ ಕೊಂಡಿ – https://nageshamysore.wordpress.com/00216-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-26/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s