00221. ಕಥೆ: ಪರಿಭ್ರಮಣ..(31)

00221. ಕಥೆ: ಪರಿಭ್ರಮಣ..(31)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00221. ಕಥೆ: ಪರಿಭ್ರಮಣ..(31)

( ಪರಿಭ್ರಮಣ..30ರ ಕೊಂಡಿ – https://nageshamysore.wordpress.com/00220-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-30/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ಮರುದಿನ ಬೆಳಗಿನಿಂದಲೆ ವೇರ್ಹೌಸಿನಲ್ಲಿ ಕೂತು ಹೆಣಗಾಡತೊಡಗಿದ್ದರು ಶ್ರೀನಾಥ, ಸೌರಭ್ ದೇವ್ ಮತ್ತು ಕುನ್. ಸೋವಿ; ಮೂವ್ವರು ಒಟ್ಟಾಗಿ ಎಷ್ಟು ಪ್ರಯತ್ನಿಸಿದರೂ ಒಂದೆ ಒಂದು ಪೋಸ್ಟಿಂಗನ್ನು ಸಹ ಯಶಸ್ವಿಯಾಗಿ ಮಾಡಲು ಸಾಧ್ಯವಾಗಲಿಲ್ಲ. ಒಟ್ಟಾರೆಯಾಗಿ ಆ ತಿಂಗಳಿನ ಲೆಕ್ಕದಲ್ಲಿ ಮಿಕ್ಕಿದ್ದುದು ಬರಿ ಐವತ್ತು ಪೋಸ್ಟಿಂಗುಗಳು ಮಾತ್ರವಷ್ಟೆ ಆದರೂ ಥಾಯ್ ಬಾತಿನ ಲೆಕ್ಕಾಚಾರದಲ್ಲಿ ಅದರ ಒಟ್ಟು ಮೌಲ್ಯ ತಿಂಗಳ ವಹಿವಾಟಿನ ಶೇಕಡಾ ಹತ್ತರಿಂದ ಹನ್ನೆರಡರಷ್ಟಿತ್ತು. ಅವರ ಮುಂದಾಲೋಚನೆಯ ಉಪಾಯದಿಂದ ಆ ಸರಕೆಲ್ಲ ಪ್ಯಾಕಿಂಗ್ ಆಗಿ ಸಿದ್ದವಾಗಿದ್ದರು ಸಹ, ಕೊನೆಯ ಪೋಸ್ಟಿಂಗ್ ಆಗುವತನಕ ಅದರ ಲೆಕ್ಕಾಚಾರ ಟರ್ನೋವರಿನಲ್ಲಿ ಸೇರುತ್ತಿರಲಿಲ್ಲ. ಸಿಸ್ಟಮ್ ಸರಿಯಾದ ವೇಗದಲ್ಲಿ ನಡೆಯುತ್ತಿದ್ದರೆ ಅದು ಕೇವಲ ಅರ್ಧ ಗಂಟೆಯ ಕೆಲಸ; ಆದರೀಗ ದಿನವಿಡಿ ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ! ಕೊನೆಗೆ ಮಧ್ಯಾಹ್ನ ಎರಡು ಗಂಟೆಯ ತನಕ ಲಂಚಿನ ಗೊಡವೆಯನ್ನು ಬಿಟ್ಟು ಒದ್ದಾಡಿದ್ದಕ್ಕೆ ಸಾಧ್ಯವಾದದ್ದು ಕೇವಲ ಒಂದೆ ಒಂದು ಪೋಸ್ಟಿಂಗ್ ಮಾತ್ರ. ಆ ವೇಗದಲ್ಲಿ ಲೆಕ್ಕ ಹಾಕಿದರೆ ದಿನದ ಕೊನೆಗೆ ಎರಡೊ ಮೂರೊ ಆದರೆ ಅದೆ ಹೆಚ್ಚು..ಅಬ್ಬಬ್ಬಾ ಅಂದರೆ ಐದು…ಅಲ್ಲಿಗೆ ಕುನ್. ಸೋವಿಯ ಪ್ರಮೋಶನ್ ಆಸೆಗೆ ಎಳ್ಳು ನೀರು ಬಿಟ್ಟಂತೆಯೆ…!

ಹೀಗೆ ಪ್ರಯತ್ನವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಯ್ತಲ್ಲ ಎನಿಸಿ ಬೇಸತ್ತು ಕುಳಿತಿದ್ದಾಗ ಏನೊ ಚಕ್ಕನೆ ಹೊಳೆದವನಂತೆ ಸೌರಭ್ ಅರೆ ಉತ್ಸಾಹದ ದನಿಯಲ್ಲಿ, ‘ಸಾರ್..ಇದನ್ನು ಆಫೀಸಿನಿಂದ ಪೋಸ್ಟ್ ಮಾಡಲು ಟ್ರೈ ಮಾಡಿದರೆ ಹೇಗೆ? ಅಲ್ಲಿ ಇಷ್ಟು ಸ್ಲೋ ಕನೆಕ್ಷನ್ ಇರುವುದಿಲ್ಲವಲ್ಲಾ?’ ಎಂದ. ಶ್ರೀನಾಥನಿಗೇನೊ ಅದು ಕೆಲಸ ಮಾಡುವುದೆಂಬ ನಂಬಿಕೆ ಇರದಿದ್ದರೂ ಕನಿಷ್ಠ, ಅಲ್ಲಿನ ನೆಟ್ವರ್ಕ್ ವೇಗ ವೇರ್ಹೌಸಿಗಿಂತ ಉತ್ತಮವಾಗಿರುವುದರಿಂದ ಅಲ್ಲೊಮ್ಮೆ ಪ್ರಯತ್ನಿಸಿ ನೋಡುವುದು ವಾಸಿಯೆನಿಸಿತು. ಏನಿಲ್ಲವಾದರೂ ಕನಿಷ್ಟ ಪ್ರಯತ್ನಿಸಿದಂತಾದರೂ ಆಗುವುದಲ್ಲ ಎಂದೆನಿಸಿ ಕುನ್. ಸೋವಿಯ ಹತ್ತಿರ ಉಳಿದ ಡಾಕ್ಯುಮೆಂಟುಗಳನ್ನೆಲ್ಲ ಪೋಸ್ಟಿಂಗ್ ಮಾಡಲು ಬೇಕಿದ್ದ ವಿವರವನ್ನೆಲ್ಲ ಪಡೆದು ಸೌರಭ್ ದೇವನೊಡನೆ ಆಫೀಸಿಗೆ ನಡೆದಿದ್ದ ಶ್ರೀನಾಥ. ಇಬ್ಬರೂ ಆತುರದಲ್ಲೆ ಹೊರಟರೂ ಆ ಹೊತ್ತಿನ ಟ್ರಾಫಿಕ್ಕು ಯಾವುದೊ ನಡುವಿನ ಆಕ್ಸಿಡೆಂಟೊಂದರಿಂದ ಪೂರಾ ಎಡವಟ್ಟಾಗಿ ಆಫೀಸು ತಲುಪಿದಾಗ ಆಗಲೆ ಹತ್ತಿರ ಹತ್ತಿರ ಐದು ಗಂಟೆಯಾಗಿ ಹೋಗಿತ್ತು. ಇನ್ನು ಉಳಿದ ಕೆಲವೆ ಗಂಟೆಗಳಲ್ಲಿ ಏನಾದರೂ ಮಾಡಲೇಬೇಕಿತ್ತು, ಇಲ್ಲವೆ ಪ್ರತಿಕೂಲ ಫಲಿತದ ಪರಿಣಾಮಕ್ಕೆ ಸಿದ್ದರಾಗಬೇಕಿತ್ತು. ಆದರೆ ದುರದೃಷ್ಟವಶಾತ್ ಆಫೀಸಿನ ನೆಟ್ವರ್ಕಿನ ವೇಗದ ತ್ರಾಣ ಸಾಕಾಗದೆ ಮತ್ತೆ ‘ಎಲ್ಲಿ ಹಾಸಿದೆಯೊ ಅಲ್ಲಿಗೆ ವಾಪಸ್ಸು’ ಬಂದು ಬಿದ್ದಂತಾಗಿತ್ತು. ಆಫೀಸಿನಲ್ಲೂ ಪೋಸ್ಟಿಂಗಿನ ಪ್ರಯತ್ನ ಸಫಲವಾಗದೆ ಹೋದಾಗ ಶ್ರೀನಾಥನಿಗೆ ಪೂರ್ತಿ ನಿರಾಶೆಯಾದರೂ ಸದ್ಯ, ತಮ್ಮ ಮುಂಜಾಗರೂಕತೆಯ ಫಲ – ಮ್ಯಾನೇಜ್ಮೆಂಟಿನ ಕೆಂಗಣ್ಣು ಬೀಳಿಸದ ಹಾಗೆ ಸುದೈವವಶಾತ್ ಈಗಾಗಲೆ ತಿಂಗಳ ಮಾಮೂಲಿ ವಹಿವಾಟಿನ ಗಮ್ಯವನ್ನು ದಾಟಿಸುವಂತೆ ಮಾಡಿದ್ದಕ್ಕೆ ಸಂತಸ ಪಡಬೇಕೆಂದು ಸಮಾಧಾನಿಸಿಕೊಳ್ಳುತ್ತಿದ್ದಾಗಲೆ, ಸೌರಭ ಏನೊ ತೀರಾ ಆಳವಾಗಿ ಕಂಪ್ಯೂಟರಿನ ಒಳಗೆ ಹೊಕ್ಕಿಕೊಂಡುಬಿಡುವವನ ಹಾಗೆ ಯಾವುದೊ ಪ್ರೋಗ್ರಾಮನ್ನು ಗಮನಿಸುತ್ತಿದ್ದುದನ್ನು ನೋಡಿ, ಏನಾಯಿತೆಂದು ಕಣ್ಣಲ್ಲೆ ಪ್ರಶ್ನಿಸಿದ.

‘ ಸಾರ್…ಇಲ್ಲೇನೊ ಗೂಸ ಇರುವಂತಿದೆ.. ಒಂದರ್ಧ ಗಂಟೆ ಟೈಮ್ ಕೊಡಿ..ನಾನು ಗಮನಿಸಿದ್ದು ನಿಜವೆ ಆಗಿದ್ದರೆ ಬಂದು ವಿವರಿಸುತ್ತೇನೆ’ ಎಂದ ಸೌರಭ.

ಇತ್ತೀಚೆಗೆ ಪ್ರತಿ ಸಂಕಟ ಸಮಯದಲ್ಲೂ ಏನಾದರೂ ಸಮಯೋಚಿತ ಉಪಾಯ ಹುಡುಕಿ ಸಮಸ್ಯೆಯ ಪರಿಹಾರಕ್ಕೆ ಕಾರಣವಾಗುತ್ತಿದ್ದ ಅವನ ಚುರುಕುತನ, ಸಾಮರ್ಥ್ಯಕ್ಕೆ ಈಗಲೂ ಏನಾದರೂ ಪರಿಹಾರ ಸಿಕ್ಕಿಬಿಡಬಹುದೇನೊ ಅನಿಸಿ ದೂರದಾಸೆ ಮೂಡಿಸಿದರೂ, ಇಷ್ಟು ಕಡೆಯ ಗಳಿಗೆಯಲ್ಲಿ, ಅದರಲ್ಲೂ ಸಿಸ್ಟಮ್ ರೆಸ್ಪಾನ್ಸಿನ ವಿಷಯದಲ್ಲಿ ಪ್ರೋಗ್ರಾಮರನಾಗಿ ಅವನೇನು ತಾನೇ ಮಾಡಲು ಸಾಧ್ಯ? ಎಂಬ ಸತ್ಯವೂ ಕಣ್ಮುಂದೆ ಸುಳಿದು ಮತ್ತೆ ನಿರಾಶೆ ಆವರಿಸಿಕೊಂಡಿತ್ತು.

ಆದರೆ ಅವನ ಅನಿಸಿಕೆಗೆ ಪೂರ್ಣ ವ್ಯತಿರಿಕ್ತವಾಗಿ ತುಸು ಹೊತ್ತಿನ ನಂತರ ಬಂದ ಸೌರಭನ ಮುಖದಲ್ಲಿ ಏನೊ ಕೌತುಕ ಪೂರ್ಣ ಉತ್ಸಾಹವಿದ್ದುದನ್ನು ಕಂಡು ಬಹುಶಃ ಏನಾದರು ಹೊಸತಿನ ಆಸರೆ ಸಿಕ್ಕಿರಬಹುದೆ? ಅನಿಸಿತು. ಎದುರಿಗೆ ಬಂದು ಕುಳಿತ ಸೌರಭ ದೇವ್ ತಾನು ತನ್ಮಯತೆಯಿಂದ ನೋಡುತ್ತಿದ್ದ ವಿಷಯದ ಕುರಿತು ಹೇಳತೊಡಗಿದ… ವಿಷಯವಿದ್ದುದಿಷ್ಟೆ; ಟ್ರಾನ್ಸ್ಯಾಕ್ಷನ್ನಿನ ನಡುವೆ ಯಾಕಿಷ್ಟು ನಿಧಾನಗತಿ ಎಂದು ಪರಿಶೀಲಿಸಲು ಪ್ರೋಗ್ರಾಮಿನೊಳಗೆ ‘ಡೀ ಬಗ್ಗಿಂಗ್’ ಮೋಡಿನಲ್ಲಿ ನೋಡಿದಾಗ ಸ್ವಲ್ಪ ಕೌತುಕವಿರುವ ವಿಷಯವೊಂದು ಅವನ ಕಣ್ಣಿಗೆ ಬಿದ್ದಿತ್ತು. ಬ್ಯಾಂಕಾಕಿನ ಸ್ಥಳೀಯ ನಿಯಮಗಳನುಸಾರ ಸರಿಸುಮಾರು ಪ್ರೋಗ್ರಾಮಿನ ಎಲ್ಲಾ ಕಡೆ ದಿನಾಂಕವನ್ನು ಥಾಯ್ ಲಿಪಿಗೆ ಬದಲಾಯಿಸಿ ಬಳಸಬೇಕಿದ್ದ ಕಾರಣ ಅದಕ್ಕೆಂದೆ ಒಂದು ‘ಫಂಕ್ಷನ್ ಮಾಡ್ಯೂಲ್’ ತಂತ್ರಾಂಶವನ್ನು ಬರೆದಿದ್ದ ಸೌರಭ್ ದೇವ್. ಅದರಿಂದಾಗಿದ್ದ ಅನುಕೂಲವೆಂದರೆ ಎಲ್ಲೆಲ್ಲಿ ಥಾಯ್ ಲಿಪಿಯ ದಿನಾಂಕವನ್ನು ಬಳಸಬೇಕಿತ್ತೊ ಅಲ್ಲೆಲ್ಲ ಈ ಫಂಕ್ಷನ್ ಮಾಡ್ಯೂಲನ್ನು ‘ರೆಫರೆನ್ಸ್’ ಆಗಿ ಸೇರಿಸಿದ್ದರೆ ಸಾಕಿತ್ತು – ಮತ್ತೊಂದು ಪ್ರೋಗ್ರಾಮ್ ಬರೆಯುವ ಗೊಡವೆಯಿಲ್ಲದೆ ಅದನ್ನೆ ಎಷ್ಟು ಬಾರಿ ಬೇಕಾದರೂ ಮರುಬಳಸಬಹುದಿತ್ತು. ಹೆಚ್ಚುಕಡಿಮೆ ಎಲ್ಲಾ ಕಡೆಯೂ ಥಾಯ್ ದಿನಾಂಕದ ಬಳಸುವಿಕೆ ಇರುತ್ತಿದ್ದ ಕಾರಣ ಅಲ್ಲೆಲ್ಲಾ ಕಡೆಯೂ ಇದೆ ಫಂಕ್ಷನ್ ಮಾಡ್ಯೂಲನ್ನು ಬಳಸಲಾಗಿತ್ತು. ಆ ಕಡೆಯ ಗಳಿಗೆಯಲ್ಲಿ ಏನೊ ಪರಿಶೀಲಿಸಲು ಹವಣಿಸುತ್ತಿದ್ದ ಸೌರಭನಿಗೆ ಆ ಫಂಕ್ಷನ್ ಮಾಡ್ಯುಲ್ ಅನ್ನು ಬಳಸದೆ ಇದ್ದ ಪ್ರೋಗ್ರಾಮೊಂದನ್ನು ಬಳಸಬೇಕಾಗಿ ಬಂದಿತ್ತು… ಅದನ್ನು ಬಳಸುವಾಗ ಆಕಸ್ಮಿಕವಾಗಿ ಅಚ್ಚರಿಯೆಂಬಂತೆ, ಯಾವುದೆ ವೇಗದ ತೊಡಕಿಲ್ಲದೆ ಸರಾಗವಾಗಿ ಚಲಾವಣೆಯಾಗಿತ್ತು ಅವನು ಬಳಸಿದ ಟ್ರಾನ್ಸ್ಯಾಕ್ಷನ್! ‘ಅರೆ? ಇದಕ್ಕೆ ಯಾಕೆ ಸಿಸ್ಟಂ ವೇಗ ತೊಡಕುಂಟುಮಾಡುತ್ತಿಲ್ಲ?’ ಎನಿಸಿ ಅನುಮಾನ ದೃಢಪಡಿಸಿಕೊಳ್ಳಲು ಮತ್ತೆರಡು ಅದೆ ರೀತಿಯ ಪ್ರೋಗ್ರಾಮುಗಳನ್ನು ಮತ್ತೆ ಪರೀಕ್ಷಿಸಿ ನೋಡಿದರೆ, ಮತ್ತೆ ಅದೆ ಮಾಮೂಲಿ ವೇಗದ ಪ್ರತಿಕ್ರಿಯೆ ಕಂಡಿತ್ತು….! ಶ್ರೀನಾಥ ಆಗಲೆ ಗಮನಿಸಿದಾಗ ಅವನು ಆಳವಾಗಿ ಕಂಪ್ಯೂಟರಿನ ಒಳ ಹೊಕ್ಕಂತೆ ನೋಡುತ್ತಿದ್ದುದು ಈ ವಿಷಯವನ್ನೆ. ಈಗ ಪೂರ್ತಿಯಾಗಿ ವಿಶ್ಲೇಷಿಸಿ ನೋಡಿಯಾದ ಮೇಲೆ ತೊಡಕಿರುವುದು ಕೇವಲ ಆ ಫಂಕ್ಷನ್ ಮಾಡ್ಯುಲಿನಲ್ಲಿರಬಹುದೆ ? ಎಂಬ ಅನುಮಾನ ಹುಟ್ಟಿ ಅದರ ಚರ್ಚೆಗೆ ಶ್ರೀನಾಥನಲ್ಲಿಗೆ ಬಂದಿದ್ದ. ‘ಸಿಸ್ಟಮ್ ಕ್ರಾಶ್’ ಎಂದು ಘೋಷಿಸಿದ್ದ ಕಾರಣ ಹಾರ್ಡ್ವೇರಿನ ತೊಂದರೆಯೆಂದು ಭಾವಿಸಿ, ಪರಿಹಾರಕ್ಕೆ ಎಲ್ಲರೂ ಅದರತ್ತ ಗಮನ ಹರಿಸಿದ್ದರೆ ಹೊರತು, ಪ್ರೋಗ್ರಾಮಿಂಗಿನ ಕಾರಣಗಳತ್ತ ನೋಡುವ ಅಗತ್ಯವೆ ಕಂಡು ಬಂದಿರಲಿಲ್ಲ. ಆ ಕಾರಣದಿಂದಲೆ ಸೌರಭನಿಗೂ ಅನುಮಾನವಿತ್ತು ತನ್ನ ಈ ಊಹೆ, ಅನುಮಾನವೂ ಸರಿಯೆ, ತಪ್ಪೆ? ಎಂದು. ಅವನ ಅನುಮಾನವನ್ನೆ ತನ್ನ ದನಿಯಲ್ಲೂ ಪ್ರತಿಧ್ವನಿಸುತ್ತ ಶ್ರೀನಾಥ,

‘ನಾವು ಹಾಗಿದ್ದರೆ ರಾಂಗ್ ಡೊಮೈನಿನಲ್ಲಿ ಉತ್ತರಕ್ಕಾಗಿ ಒದ್ದಾಡುತ್ತಿದ್ದಿವಿ ಅನ್ನುತ್ತಿಯಾ?’ ಎಂದು ಕೇಳಿದ.

‘ ಐ ಯಾಮ್ ನಾಟ್ ಶ್ಯೂರ್… ಬಟ್ ಯಾವ್ಯಾವ ಪ್ರೊಗ್ರಾಮ್ ಮಂದಗತಿಯಲ್ಲಿ ಓಡುತ್ತಿದೆಯೊ ಅಲ್ಲೆಲ್ಲ ಈ ಫಂಕ್ಷನ್ ಮಾಡ್ಯೂಲ್ ತಂತ್ರಾಂಶ ಬಳಕೆಯಾಗಿರುವುದು ಕಾಣುತ್ತಿದೆ… ಜತೆಗೆ ಯಾವುದೊ ಮತ್ತೊಂದು ಕಾಣದ ಪ್ರೋಗ್ರಮ್ ಅದನ್ನು ನಿಯಂತ್ರಿಸುತ್ತಿದೆಯೊ ಏನೋ ಅನ್ನುವ ಹಾಗೆ, ಪ್ರತಿ ಪ್ರೋಗ್ರಾಮಿನಲ್ಲಿ ಈ ಫಂಕ್ಷನ್ ಮಾಡ್ಯೂಲ್ ಹಂತ ಬರುತ್ತಿದ್ದ ಹಾಗೆ ಅದು ತಾನು ಹುಡುಕುತ್ತಿರುವ ಥಾಯ್ ದಿನಾಂಕವಿರುವ ಟೇಬಲ್ ಸಿಗದ ಕಾರಣ, ಮತ್ತಾವುದೊ ಉದ್ದದ ಬಳಸು ದಾರಿಯಲ್ಲಿ ಹುಡುಕುತ್ತ ತನ್ನ ಸುತ್ತಲೆ ಗಿರಕಿ ಹಾಕುತ್ತ ಲೂಪ್ ಹಾಕಿಕೊಂಡಂತಿದೆ ಸಾರ್.. ಇದು ಬಹುತೇಕ ಎಲ್ಲಾ ಟ್ರಾನ್ಸ್ಯಾಕ್ಷನ್ನಿನಲ್ಲೂ ಮರುಕಳಿಸಿ ಪುನರಾವರ್ತನೆಯಾಗುತ್ತ ಲೂಪಿಂಗ್ ಕಾಂಪ್ಲೆಕ್ಸಿಟಿಯನ್ನು ಹೆಚ್ಚಿಸುತ್ತ ಸಿಸ್ಟಂ ಸ್ಲೋನೆಸ್ಸಿಗೆ ಕಾರಣವಾಗುತ್ತಿದೆಯೇನೊ ಎಂದು ಅನುಮಾನವಾಗಿದೆ…’ ದಿನಾಂಕದ ಫೀಲ್ಡ್ ಬಹುತೇಕ ಎಲ್ಲಾ ಟ್ರಾನ್ಸ್ಯಾಕ್ಷನ್ನಿನಲ್ಲೂ ಬಳಕೆಯಾಗುವುದರಿಂದ ಅದು ತೀರಾ ದೂರದ ಸಾಧ್ಯತೆಯೆಂದೇನೂ ಅನಿಸಲಿಲ್ಲ ಶ್ರೀನಾಥನಿಗೂ..

‘ಹಾಗಿದ್ದರೆ ಆ ಫಂಕ್ಷನ್ ಮಾಡ್ಯುಲ್ ಒಮ್ಮೆ ಟ್ವೀಕ್ ಮಾಡಿ ನೋಡಬಹುದಿತ್ತಲ್ಲಾ? ತಾತ್ಕಾಲಿಕವಾಗಿ ನಿಷ್ಕ್ರಿಯವಾಗಿಸಿ, ಆಗೇನಾದರೂ ಸಿಸ್ಟಂ ಮಾಮೂಲಿನಂತೆ ವರ್ತಿಸುವುದೆ ಎಂದು ಚೆಕ್ ಮಾಡಿದರೆ..?’

‘ ಆಗಲೆ ಟ್ವೀಕ್ ಮಾಡಿ ನೋಡಿದೆ ಸಾರ್..ಅದು ಮತ್ತು ಟೆಸ್ಟಿಂಗ್ ಸಿಸ್ಟಮ್ಮಿನಲ್ಲಿರುವ ಆವೃತ್ತಿ ಎರಡು ಏಕರೂಪವಾಗಿದೆ. ಅಂದರೆ ಫಂಕ್ಷನ್ ಮಾಡ್ಯೂಲ್ ಏನೂ ಬದಲಾಯಿಸಿದಂತೆ ಕಾಣುತ್ತಿಲ್ಲ…’ ಶ್ರೀನಾಥನ ಮಾತನ್ನು ಪೂರ್ತಿ ಕೇಳಿಸಿಕೊಳ್ಳದೆ ಎತ್ತಲೊ ನೋಡುತ್ತ ನುಡಿದಿದ್ದ ಸೌರಭ..

‘ಮತ್ತೆ…?’

‘ ಆದರೆ ಅದನ್ನು ರೆಫರೆನ್ಸಾಗಿ ಬಳಸಿ ಮತ್ತೊಂದು ಪ್ರೊಗ್ರಾಮಿನ ಮೂಲಕ ಈ ಫಂಕ್ಷನ್ ಮಾಡ್ಯೂಲ್ ನಿಯಂತ್ರಿಸುತಿದ್ದರೆ ಅದನ್ನು ಈಗ ಕಂಡು ಹಿಡಿಯಲು ಕಷ್ಟ…ಅದರಲ್ಲೂ ಈಗುಳಿದಿರುವ ಅಲ್ಪ ಸಮಯದಲ್ಲಿ…ಬೆಳಗಿನವರೆಗೂ ಕಾದರೂ ಸುಖವಿಲ್ಲ.. ಯಾಕೆಂದರೆ, ರಾತ್ರಿ ಹನ್ನೆರಡರ ಗಡಿ ದಾಟುತ್ತಿದ್ದಂತೆ ಮತ್ತೆ ಸಿಸ್ಟಮ್ಮನ್ನು ಮೊದಲಿನ ಹಾಗೆ ಬದಲಿಸಿಟ್ಟುಬಿಡಬಹುದು.. ಆಗ ನಾಳೆ ಬೆಳಿಗ್ಗೆಯಿಂದಲೆ ಸಿಸ್ಟಂ ಮತ್ತೆ ಮಾಮೂಲಿಯಾಗಿ ವರ್ತಿಸತೊಡಗುತ್ತದೆ, ಏನೂ ನಡೆದಿಲ್ಲದ ಹಾಗೆ’

‘ ಹೂಂ.. ಹಾಗಾದರೆ ಈಗ ಏನು ಮಾಡಬೇಕೆನ್ನುತ್ತಿಯಾ? ಏನಿ ಐಡಿಯಾಸ್?’

‘ ನೀವು ಯೋಚಿಸುತ್ತಿರುವ ದಾರಿಯಲ್ಲೆ ಒಂದು ಕ್ವಿಕ್ ಫಿಕ್ಸ್ ಮಾಡಬಹುದು ಅನಿಸಿತು ಸಾರ್..ಕೆಲಸ ಮಾಡುವುದೊ ಇಲ್ಲವೊ ಗೊತ್ತಿಲ್ಲ..ಆದರೆ ನೀವು ‘ಹೂಂ’ ಅಂದರೆ ಪ್ರಯತ್ನಿಸಿ ನೋಡಬಹುದು..’

‘ ಪ್ರಯತ್ನಿಸಿ ನೋಡುವುದರಿಂದ ಕಳೆದುಕೊಳ್ಳುವುದೇನೂ ಇಲ್ಲವಲ್ಲ? .. ಆದರೆ ನಿನ್ನ ಫಿಕ್ಸ್ ಏನೂ ಎಂದೆ ಹೇಳಲಿಲ್ಲ?’

‘ ಏನಿಲ್ಲ ಸಾರ್..ಫಿಕ್ಸ್ ತುಂಬಾ ಸಿಂಪಲ್..ಈಗಿರುವ ಫಂಕ್ಷನ್ ಮಾಡ್ಯೂಲನ್ನು ಬರಿ ಹೆಸರು ಬದಲಿಸಿ ‘ಮರು ನಾಮಕರಣ (ರೀನೇಮ್)’ ಮಾಡಿಬಿಟ್ಟರೆ ಸಾಕು..ಆಮೇಲೆ ಈ ಫಂಕ್ಷನ್ ಮಾಡ್ಯೂಲ್ ಬಳಕೆಯಾಗಿರುವ ಪ್ರೋಗ್ರಾಮಿನ ಟೇಬಲ್ಲಿನ ಎಡೆಗಳಿಗೆಲ್ಲಾ ಹೋಗಿ ಒಂದು ‘ಹುಡುಕು ಮತ್ತು ಬದಲಿಸು (ಫೈಂಡ್ ಆಂಡ್ ರೀಪ್ಲೇಸ್)’ ಬಳಸಿ ಮರುನಾಮಕರಣಗೊಂಡ ಹೊಸ ಹೆಸರಿಗೆ ಬದಲಿಸಿಬಿಟ್ಟರೆ ಆಯ್ತು.. ಮ್ಯಾಕ್ಸಿಮಮ್ ಒಂದರ್ಧ ಗಂಟೆಯ ಕೆಲಸ…’

‘ ಆದರೆ ರೀ ನೇಮಿಂಗ್ ಹೇಗೆ ಹೆಲ್ಪ್ ಮಾಡುತ್ತೆ ಸೌರಭ್?’ ಅರೆಬರೆ ಅರ್ಥವಾದ ಸ್ಥಿತಿಯಲ್ಲಿ ಇನ್ನೂ ಗೊಂದಲ ಪರಿಹಾರವಾಗದೆ ಕೇಳಿದ್ದ ಶ್ರೀನಾಥ.

‘ ಬೇರೆ ಯಾವುದಾದರೂ ಪ್ರೋಗ್ರಾಮಿನ ಮುಖಾಂತರ ಈ ಮಾಡ್ಯೂಲನ್ನ ನಿಯಂತ್ರಿಸುತ್ತಾ ಇದ್ದರೆ, ರೀನೇಮ್ ಮಾಡಿದಾಗ ಆ ಹೆಸರಿನ ನೇರ ಲಿಂಕ್ ತಪ್ಪಿ ಹೋಗುತ್ತದೆ ಸಾರ್.. ಹೆಸರಿನ ಮಿಸ್ ಮ್ಯಾಚಿನಿಂದಾಗಿ. ಹೀಗೆ ನಾವು ಆ ಕಳ್ಳ ಪ್ರೋಗ್ರಾಮಿನ ದಾರಿ ತಪ್ಪಿಸಿದಂತಾಗುತ್ತದೆ.. ಒರಿಜಿನಲ್ ಹೆಸರಲ್ಲದೆ ಬೇರೆ ಹೆಸರನ್ನು ಪ್ರೋಗ್ರಾಮಿಗೆ ಗುರ್ತಿಸಲಾಗುವುದಿಲ್ಲವಲ್ಲ ?’

ಹೌದು.. ಅದರಿಂದ ಕಳ್ಳ ಪ್ರೋಗ್ರಾಮಿನ ದಾರಿ ತಪ್ಪಿಸಬಹುದು – ಅಂತದೊಂದು ‘ಕಳ್ಳ’ ನಿಜಕ್ಕೂ ಕೆಲಸ ಮಾಡುತ್ತಿದ್ದರೆ. ಆದರೆ ಅಂತದ್ದೊಂದು ಕೆಲಸ ಮಾಡುತ್ತಿರುವುದೆ ನಿಜವಾಗಿರದಿದ್ದರೆ? ಅಂದುಕೊಳ್ಳುತ್ತಲೆ, ‘ಐ ಸೀ.. ಈ ನಿನ್ನನುಮಾನ ನಿಜವಾಗಿದ್ದರೆ ಈಗಾಗುತ್ತಿರುವ ಪ್ರೋಗ್ರಾಮ್ ಲೂಪಿಂಗ್ ಸಹ ನಿಂತು ಹೋಗಿಬಿಡಬೇಕಲ್ಲವೇ?..ರೈಟ್?’

‘ ಹೌದು ಸಾರ್..ಆದರೆ ಇದೆಲ್ಲ ನಮ್ಮ ಎಣಿಕೆ, ಅನುಮಾನ ನಿಖರವಾಗಿದ್ದರೆ ಮಾತ್ರ ..ಅದೇನಾದರೂ ಸುಳ್ಳಾಗಿದ್ದರೆ ಇದು ಮತ್ತೆ ಬ್ಯಾಕ್ ಟು ಸ್ಕೈಯರ್ ವನ್…’

‘ ಅಂಡರ್ಸ್ಟುಡ್…ಬಟ್ ನೋ ಹಾರ್ಮ್ ಇನ್ ಟ್ರೈಯಿಂಗ್…ವಿ ಡೋಂಟ್ ಲೂಸ್ ಏನಿ ಥಿಂಗ್..ಪ್ರಯತ್ನಿಸಿ ನೋಡಿ ಕಳೆದುಕೊಳ್ಳುವುದಾದರೂ ಏನು? ಒಂದು ಕೈ ನೋಡಿಯೇಬಿಡೋಣ, ಏನಂತಿ? ‘

‘ ಹಾಗಿದ್ದರೆ ಸರಿ ಸರ್.. ಬೇಗನೆ ಬದಲಾವಣೆ ಮಾಡಿಬಿಡುತ್ತೇನೆ.. ಜತೆಗೆ ಕುನ್. ಸೋವಿಯ ಬಾಕಿಯಿರುವ ಪೋಸ್ಟಿಂಗಿಗೆ, ಬ್ಯಾಕಪ್ಪಿಗೆಂದು ಇಟ್ಟುಕೊಂಡಿದ್ದ ಜಾಬನ್ನು ಹನ್ನೊಂದುವರೆ ಗಂಟೆಯೊತ್ತಿಗೆ ಶೆಡ್ಯೂಲ್ ಮಾಡಿ ರನ್ನಿಂಗಿಗೆ ಇಟ್ಟು ಬಿಡುತ್ತೇನೆ…’

‘ ಹಾಗಾದರೆ ನಿನ್ನ ಈ ಪ್ರೋಗ್ರಾಮ್ ಬದಲಾವಣೆ ಆ ವೇಳೆಗೆ ಮುನ್ನವೆ ಮುಗಿಯುವಂತೆ ನೋಡಿಕೊಳ್ಳಬೇಕು…?’

‘ ಹೌದು..ಅದೆ ರಿಸ್ಕು..ಆದರೆ ಈಗುಳಿದಿರುವ ಸಮಯದಲ್ಲಿ ಇದಕ್ಕಿಂತ ಹೆಚ್ಚಿಗೆ ಇನ್ನೇನು ಮಾಡಲು ಸಾಧ್ಯವಿಲ್ಲ… ವೀ ಕ್ಯಾನ್ ಓನ್ಲಿ ಡೂ ದಿಸ್ ಮಚ್ ಅಂಡ್ ಪ್ರೇ ಗಾಡ್, ಹೋಪಿಂಗ್ ಇಟ್ ವರ್ಕ್ಸ್..’

‘ ಅರ್ಥವಾಯಿತು…ಅಂದ ಮೇಲೆ ಈಗೇನೆ ಮಾಡಿಟ್ಟು ಹೋದರೂ ಫಲಿತಾಂಶ ಗೊತ್ತಾಗುವುದು ಬೆಳಿಗ್ಗೆಗೆ ಮಾತ್ರವೆ..?’

‘ ಯೆಸ್.. ಅದೂ ನಾನು ರನ್ನಿಂಗಿಗೆ ಇಡುತ್ತಿರುವ ಜಾಬ್ ಪೋಗ್ರಾಮ್ ಯಶಸ್ವಿಯಾಗಿ ರನ್ ಆಗಿದ್ದರೆ ಮಾತ್ರ..ಗುಡ್ ನ್ಯೂಸ್ ‘ ಎಂದು ದೇಶಾವರಿ ನಗೆ ನಕ್ಕ ಸೌರಭ್.

ಅವನ ಮಾತಿಗೆ ತಾನೂ ಪೆಚ್ಚು ನಗೆಯೊಂದನ್ನು ಮರಳಿಸುತ್ತ, ‘ ಅಂತೂ ಕೊನೆ ಗಳಿಗೆಯ ತನಕವೂ ಸಸ್ಪೆನ್ಸ್ ಬಿಟ್ಟುಕೊಡದ ಥ್ರಿಲ್ಲರ್ ಮೂವಿಯ ಹಾಗಾಗಿ ಹೋಯ್ತು ನಮ್ಮ ಮಂತ್ ಎಂಡ್ ಪುರಾಣದ ಪಾಡು..ಈವನ್ ನೌ ವೀ ಆರ್ ನಾಟ್ ಶ್ಯೂರ್ ಇಫ್ ಇಟ್ ವರ್ಕ್ಸ್ ಆರ್ ನಾಟ್ ಅಂಡ್ ವಿ ವನ್ ಆರ್ ನಾಟ್…’

‘ ಬಟ್ ಶ್ಯೂರ್ ವಿ ವಿಲ್ ನೋ ಬೈ ಟುಮಾರೋ ಮಾರ್ನಿಂಗ್ ಸಾರ್…’ ಈಗವನ ದನಿಯಲ್ಲೂ ಕಳವಳದ ಬದಲು ‘ಆದದ್ದಾಗಲಿ ಬಿಡು’ ಎನ್ನುವ ವಿಷಾದದ ಛಾಯೆ ಮೂಡಿತ್ತು.

‘ಓ.ಕೆ..ದೆನ್ ಗೋ ಅಹೆಡ್ ಅಂಡ್ ಡೂ ಇಟ್ ಫಾಸ್ಟ್…. ಅಟ್ಲೀಸ್ಟ್ ವೀ ಆರ್ ನಾಟ್ ಗೀವಿಂಗ್ ಅಪ್..ಕೊನೆಯವರೆಗೂ ನಮ್ಮ ಪ್ರಯತ್ನ ನಿಲ್ಲಿಸುತ್ತಿಲ್ಲ .. ದಟ್ ಈಸ್ ಎ ಗುಡ್ ಸೈನ್..’ ಎಂದು ‘ಗ್ರೀನ್ ಸಿಗ್ನಲ್’ ಕೊಟ್ಟಿದ್ದ ಶ್ರೀನಾಥ.

ಆ ನಂತರದ ಮಿಕ್ಕ ಅವಧಿಯಲ್ಲಿ ಶ್ರೀನಾಥನೂ ಜತೆಯಲ್ಲೆ ಕುಳಿತು ತನ್ನಿಂದಾಗುವ ಸಹಾಯವನ್ನು ನೀಡುತ್ತ ಸಹಕರಿಸಿದ. ಬೇಕಿದ್ದ ಬದಲಾವಣೆ ಮುಗಿದಾಗ ಹತ್ತಿರ ಹತ್ತಿರ ಹನ್ನೊಂದುವರೆಯಾಗಿತ್ತು. ಇನ್ನುಳಿದ ಅರ್ಧಗಂಟೆಯಲ್ಲಿ ರನ್ನಿಂಗಿಗೆ ಸೇರಿಸಿದ ಬ್ಯಾಕ್ ಗ್ರೌಂಡ್ ಜಾಬ್ ಯಶಸ್ವಿಯಾಗಿ ನಡೆದರೆ ಇವರು ಗೆದ್ದಂತೆ.. ಅದನ್ನು ಶೆಡ್ಯೂಲ್ ಮಾಡಿ ದೊಡ್ಡದೊಂದು ನಿಟ್ಟುಸಿರು ಬಿಡುವ ಹೊತ್ತಿಗೆ ಆಕಳಿಕೆಯೊಡನೆ ತಾನು ಮೈ ಮುರಿಯುತ್ತ ಮೇಲೆದ್ದ ಸೌರಭ, ಶ್ರೀನಾಥನಿಗೆ ನುಡಿದಿದ್ದ, ‘ಇನ್ನು ನಾವಿಲ್ಲಿ ಮಾಡುವುದೇನೂ ಇಲ್ಲ ಸಾರ್.. ಲೆಟ್ಸ್ ಗೊ.. ನಾಳೆ ಬೆಳಿಗ್ಗೆ ಬೇಕಾದರೆ ಬೇಗನೆ ಬಂದು ನೋಡಬಹುದು… ಈಗ ಎಲ್ಲಾ ದೇಶಗಳು ಮಲಗಿರುವ ಹೊತ್ತು.. ಒಂದು ವೇಳೆ ನನ್ನೆಣಿಕೆ ತಪ್ಪಾಗಿದ್ದರೂ ಈ ರಾತ್ರಿಯ ಹೊತ್ತು ಸ್ಪೀಡ್ ಸ್ವಲ್ಪವಾದರೂ ಜಾಸ್ತಿಯಾಗಬೇಕು. ಅದು ಹೇಗಾದರೂ ಸರಿ, ಆ ಸ್ಪೀಡು ಜಾಬ್ ರನ್ ಮಾಡಿಸುವಷ್ಟಿದ್ದರೂ ಸಾಕು ನಾವೂ ಗೆದ್ದಂತೆ..ಹಾಗೆಂದು ದೇವರಲ್ಲಿ ಪ್ರಾರ್ಥಿಸುತ್ತ ಬೆಳಿಗ್ಗೆಗೆ ಬಂದು ನೋಡುವ..’

ಅವನತ್ತ ವೃತ್ತಿಪರ ಹೆಮ್ಮೆಯಿಂದ ನೋಡುತ್ತ, ಎಲ್ಲಾ ಚೆನ್ನಾಗಿ ಯಶಸ್ವಿಯಾಗಿ ಮುಗಿದರೆ ಇವನ ಬುದ್ದಿವಂತಿಕೆಯನ್ನು ಗುರುತಿಸುವ ಕುರುಹಾಗಿ ಏನಾದರೂ ವಿಶೇಷ ‘ಬಹುಮಾನದ’ ವ್ಯವಸ್ಥೆ ಮಾಡಿಸಬೇಕೆಂದು ಆಲೋಚಿಸುತ್ತಲೆ ಮನೆ ಸೇರಿ ನಿದ್ದೆಗಿಳಿದ ಶ್ರೀನಾಥ. ಆದರೆ ಅಂದೆಲ್ಲಾ ರಾತ್ರಿ ಪೂರ ಬರಿ ಎಡಬಲ ಒದ್ದಾಡಿದ್ದು ಬಿಟ್ಟರೆ ನಿದ್ದೆಯೆ ಹತ್ತಿರ ಸುಳಿದಿರಲಿಲ್ಲ…

ಹಾಗೂ ಹೀಗೂ ನಿದ್ದೆ ಮುಗಿಸಿದ ಶಾಸ್ತ್ರ ಮಾಡಿ, ಕೆಂಪು ಕಣ್ಣಿನಲ್ಲೆ ಮರುದಿನ ಬೆಳಿಗ್ಗೆ ಆಫೀಸಿಗೆ ಬಂದರೆ ಅಲ್ಲಿ ಅದೆ ಸ್ಥಿತಿಯಲ್ಲಿ ಬಾಗಿಲು ಕಾಯುತ್ತಿದ್ದ ಸೌರಭನು ಕಣ್ಣಿಗೆ ಬಿದ್ದಿದ್ದ ! ಇಬ್ಬರೂ ಆತುರಾತುರವಾಗಿ ಒಳಹೊಕ್ಕು ಕಂಪ್ಯೂಟರು ತೆಗೆದು ತಾವು ರಾತ್ರಿ ಓಡಿಸಿದ್ದ ಆ ಜಾಬ್ ರನ್ ಯಶಸ್ವಿಯಾಗಿ ಆಗಿದೆಯೆ ಇಲ್ಲವೆ ಎಂದು ನೋಡಲು ಕಾತುರದಿಂದ ಹವಣಿಸುತ್ತಿರುವಾಗಲೆ ಇಬ್ಬರ ಬಾಯಲ್ಲೂ ಒಂದೆ ಬಾರಿಗೆ, ‘ಹುರ್ರೇ’ ಎಂಬ ಖುಷಿಯಿಂದ ಕೂಡಿದ ಶಬ್ದ ಆಯಾಚಿತವಾಗಿ ಹೊರಬಿದ್ದಿತ್ತು…!

ಅವರ ಆ ಹರ್ಷೋದ್ರೇಕದ ಬಲವಾದ ಉದ್ಗಾರಕ್ಕೆ ಕಾರಣವಿರದಿರಲಿಲ್ಲ….

ಶ್ರೀನಾಥನ ಪರದೆಯ ಮೇಲೆ ಆ ಜಾಬ್ ಯಶಸ್ವಿಯಾಗಿ ಮುಗಿದಿದೆಯೆಂದು ಸ್ಪಷ್ಟವಾಗಿ ತೋರಿಸುತ್ತಿತ್ತು ಸಿಸ್ಟಂ ಲಾಗ್..!

ಅದಕ್ಕನುಗುಣವಾಗಿ ಕೊನೆಗೂ ಪೋಸ್ಟಿಂಗ್ ಯಶಸ್ವಿಯಾಗಿ ಆದ ಕಾರಣ, ಟರ್ನೋವರಿನ ಲೆಕ್ಕಕ್ಕೆ ಸೇರಿಸಲ್ಪಟ್ಟಿದ್ದ ಹೊಸ ಇನ್ವಾಯ್ಸುಗಳು ಮತ್ತದರ ಮೊತ್ತವನ್ನು ತೋರಿಸುತ್ತಿತ್ತು ಸೌರಭನ ಕಂಪ್ಯೂಟರ ಪರದೆ …

ಟೇಬಲ್ಲಿನ ಮೇಲಿದ್ದ ಪೋನ್ ಕೈಗೆಳೆದುಕೊಂಡು ವೇರ್ಹೌಸಿನ ನಂಬರಿಗೆ ಆತುರಾತುರವಾಗಿ ಡಯಲ್ ಮಾಡತೊಡಗಿದ್ದ ಶ್ರೀನಾಥ – ಕುನ್. ಸೋವಿಯೇನಾದರೂ ಆಫೀಸಿಗೆ ಬಂದಾಗಿದ್ದರೆ ತಕ್ಷಣವೆ ಅವನಿಗೆ ಈ ಸಂತಸದ ಸುದ್ದಿ ತಿಳಿಸಲು…!!

(ಇನ್ನೂ ಇದೆ)

( ಪರಿಭ್ರಮಣ..32ರ ಕೊಂಡಿ – https://nageshamysore.wordpress.com/00222-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-32/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

2 thoughts on “00221. ಕಥೆ: ಪರಿಭ್ರಮಣ..(31)”

 1. ನಾಗೇಶರೆ ಕತೆ (ಕಾದಂಬರಿ !) ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ನಿರೂಪಣೆ ಪದೆ ಪದೆ ಯಂಡಮೂರಿ ವಿರೇಂದ್ರರನ್ನು ನೆನಪಿಸುತ್ತದೆ ಎಂದೆ ಬರೆಯಬೇಕೆಂದು ಹೊರಟೆ. ಆದರೆ ಕತೆಯ ವಿಶಯ ವಸ್ತು ತಾಂತ್ರಿಕ ಹಾಗು ಪ್ರೀತಿಯ ಹಾಗು ಹೊರದೇಶದ ಸೊಭಗನ್ನು ವಿವರಿಸುವ ಎಲ್ಲ ವಿವರಗಳನ್ನು ಓದುತ್ತಿರುವಂತೆ. ನಿಮ್ಮ ಕತೆ ಯಂಡಮೂರಿಯವರ ಕತೆಯನ್ನು ಖಂಡೀತ ಮೀರಿಸುತ್ತಿದೆ ಎಂದೆ ಅನ್ನಿಸುತ್ತಿದೆ.
  ಅಭಿನಂದನೆಗಳು

  Liked by 1 person

  1. ಪಾರ್ಥಾ ಸಾರ್..,

   ನಿಮ್ಮಂತಹ ಅನುಭವಿ, ಪರಿಪಕ್ವ ಕಥೆಗಾರರಿಂದ ಈ ಮಾತು ಹೇಳಿಸಿಕೊಳ್ಳುವುದೆಂದರೆ ಅದೊಂದು ದೊಡ್ಡ ಗೌರವವೆ ಸರಿ..! ಕಥೆಯ ಹಂದರದ ಮೂಲ ರೂಪುರೇಷೆ ಸಿದ್ದಗೊಳಿಸಿದಾಗ ಐಟಿ ಜಗತ್ತಿನ ತಾಂತ್ರಿಕ ವಸ್ತುವಿನ ವಿಷಯ ವ್ಯಾಪ್ತಿ, ದೈನಂದಿನದ ಸಾಮಾಜಿಕತೆಯೊಳಗೆ ಬೆರೆತು ಉಂಟುಮಾಡುವ ತಾಕಲಾಟ, ತೊಳಲಾಟ ಮತ್ತದರ ಪರಿಣಾಮ, ಪರಿಮಾಣಗಳನ್ನು ನಮ್ಮ ಸಾಹಿತ್ಯಲೋಕದ ಚೌಕಟ್ಟಿನಲ್ಲಿ ಹಿಡಿದಿಡಲು ಸಾಧ್ಯವೆ ಎನ್ನುವ ಕುತೂಹಲವಷ್ಟೆ ಪ್ರಮುಖ ಪ್ರೇರಣೆಯಾಗಿತ್ತೆ ಹೊರತು ಆಗ ಶೈಲಿಯ ಬಗ್ಗೆ ಅಷ್ಟಾಗಿ ಆಲೋಚಿಸಿರಲೆ ಇಲ್ಲ. ನಾಯಕನ ಪಾತ್ರದ ಮೂಲಕ ಕಥಾನಕ ಹೇಳಿಸುವ ಒಂದು ಸ್ಥೂಲ ಅನಿಸಿಕೆಯಷ್ಟೆ ಮೂಲ ಬಂಡವಾಳವಾಗಿತ್ತು. ಬರೆಯುತ್ತಾ ಹೋದಂತೆ ತಾಂತ್ರಿಕವನ್ನು ಸರಳವಾಗಿಸಿ ಮುಂದಿಡುವ ಸಾಹಸಕ್ಕಿಳಿದಾಗ ಶೈಲಿಗಿಂತ ಹೆಚ್ಚು ‘ಸರಳೀಕರಿಸುವತ್ತಲೆ’ ಗಮನ ಹರಿದಿತ್ತು. ಒಟ್ಟಾರೆಯಾಗಿ ಕಥೆ ಆಸಕ್ತಿಯನ್ನು ಇನ್ನು ಕಾಪಾಡಿಕೊಂಡೆ ಬಂದಿದೆಯೆಂದರೆ ಬರೆವವನಿಗೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು? ಅದೆ ಮಟ್ಟವನ್ನು ಕೊನೆಯವರೆವಿಗೂ ಉಳಿಸಿಕೊಳ್ಳುವುದೆ ಎನ್ನುವುದು ನನಗೂ ಕುತೂಹಲದ ಅಂಶ – ಕಾದು ನೋಡೋಣ 🙂
   .
   ಮತ್ತೆ ನಿಮ್ಮೆ ಮೆಚ್ಚುಗೆಯ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು ಪಾರ್ಥ ಸಾರ್ !

   Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s