00226. ‘ಕನ್ನಡ ಜಾಣ’ ಪದ – 02

00226. ‘ಕನ್ನಡ ಜಾಣ’ ಪದ – 02

ಜೀವನದ ಕೆಲವು ದ್ವಂದ್ವಗಳು ಸತ್ಯವಿದ್ದಷ್ಟೆ ವಿಸ್ಮಯಕಾರಿ ವಾಸ್ತವಗಳು. ಪುರಾಣದಿಂದ ಪುರಾತನದತನಕ ನೋಡಿದೆಡೆಯೆಲ್ಲ ಕಾಣುವ ಈ ದ್ವಂದ್ವ ಬಹುಶಃ ಅದರ ಸಾರ್ವತ್ರಿಕತೆಯನ್ನು ಸಾರುವಷ್ಟೆ ಸಹಜವಾಗಿ ಅದೊಡ್ಡುವ ಪಂಥವನ್ನು , ಸಂದಿಗ್ದವನ್ನು ಪ್ರತಿನಿಧಿಸುತ್ತಿರಬಹುದೇನೊ? ಇಲ್ಲದಿದ್ದರೆ ಆ ದ್ವಂದ್ವಗಳು ಇಷ್ಟು ಢಾಳಾಗಿ, ರಾಜರೋಷವಾಗಿ ಹಾಸಿಕೊಂಡಿರಲು ಅನುವು ಮಾಡಿಕೊಡುತ್ತಿರಲಿಲ್ಲ ನಿಸರ್ಗದ ನಿಯಮ. ಪ್ರಾಯಶಃ ಒಂದರ ಮೇಲೊಂದರ ಅವಲಂಬನೆ ಅದೆಷ್ಟು ಗಾಢವೆಂದರೆ ಒಂದನ್ನು ಬಿಟ್ಟು ಮತ್ತೊಂದರ ಅಸ್ತಿತ್ವವೆ ಇರಲಾಗದಷ್ಟು. ಹೀಗಾಗಿ ಕತ್ತಲಿಗೆ ಬೆಳಕಿನ ಆಸರೆಯ ಅಗತ್ಯವಿದ್ದಷ್ಟೆ, ಬೆಳಕಿಗೂ ಕತ್ತಲೆಯ ಅಗತ್ಯವಿರುವ ಚೋದ್ಯವನ್ನು ಕಾಣಬಹುದು.

ಇಲ್ಲಿ ‘ಕನ್ನಡ ಜಾಣ’ ಪದಗಳಲ್ಲಿ ಅಂತಹ ಕೆಲವು ದ್ವಂದ್ವ, ವೈರುದ್ಧ್ಯಗಳನ್ನು ಹಿಡಿದಿಡುವ ಪ್ರಯತ್ನ – ಈ ಐದು ಪದಗಳ ಮುಖೇನ. ವರ ಕೊಟ್ಟರೆ ತನ್ನನ್ನೆ ಕಬಳಿಸ ಬರುವ ಭಕ್ತರ ಕಾಟಕ್ಕೆ ಬೆದರಿ ವರ ಕೊಡುವುದೊ ಬಿಡುವುದೊ? ಎಂದು ಹಿಂಜರಿವ ದೇವರಿಂದ ಹಿಡಿದು, ಅನಪೇಕ್ಷಿತ ನಿರೀಕ್ಷೆಯ ಬಲೆಯಲ್ಲಿ ಸಿಲುಕಿಸಿ ದ್ವಂದ್ವಗಳಾಗಿ ಕಾಡುವ ನೌಕರರ, ಬಂಧು-ಭಾಂಧವರ, ಸ್ವಯಂ ಸ್ವತಃದ ತಾಕಲಾಟ, ಬರಿ ಖಾಲಿ ಮಾತಿನ ಬಂಡವಾಳದಡಿ ಮೇಲೇರುವ ಸೊಗಸುಗಾರ ಪುಟ್ಟಸ್ವಾಮಿಯರ ನಡುವೆ ಒಣಗಿಹೋಗುವ ಸಜ್ಜನ ಮೌನ ಸಾಧಕರ ಖೇದ, ಮಾತಿನ ನಂಬಿಕೆಗಳಲ್ಲೆ ನಡೆಯುತ್ತಿದ್ದ ಜಗದಿಂದ ಕರುಳಿನ ಕೊಂಡಿಗಳು ಸಹಿ ಬೇಡುವ ಜಗದತ್ತ ನಡೆದ ವ್ಯಂಗ ಮತ್ತು ಕಡೆಯದಾಗಿ ಹಂಚಿ ತಿನಲೆಂದಿಟ್ಟ ಒಂದು ಭೂಮಿಯ ಸೌಖ್ಯವನ್ನು ಅದೆ ಸುಖದ ಬೆನ್ನಟ್ಟುವ ಹವಣಿಕೆಯಲ್ಲಿ ಸರ್ವನಾಶತ್ತ ನಡೆಸುತ್ತಿರುವ ದುರಾಸೆ – ಎಲ್ಲದರತ್ತ ಕಣ್ಣು ಹಾಕುವ ಹುನ್ನಾರ ಈ ‘ಕನ್ನಡ ಜಾಣ’ ಪದಗಳ ಮುಖೇನ.

ಹಣೆಗಣ್ಣ ತೆರೆದು ಸುಡುವ ಬಿರುಗಣ್ಣ ಮಹಾದೇವ
ಕರದೆ ಸುಡೊ ವರ ಕೊಟ್ಟು ಭಕ್ತವತ್ಸಲನಾಗೊ ತತ್ವ
ಕೊಟ್ಟರಪಾತ್ರನಿಗೆ ಬಿಡದೆ ಬೆನ್ನಟ್ಟಿದ ಧೂರ್ತತೆ ಮತ್ತೆ
ಕೊಡಲ್ಹಿಂಜರಿಯೆ ದೇವನ ತಪ್ಪೇನು – ಕನ್ನಡ ಜಾಣ ||

ನೌಕರನ ಚಾಕರಿಯ ಹೀಗಳೆದು ಫಲವುಂಟೆ?
ಬಂಧು ಬಾಂಧವ ಸ್ವೇಚ್ಛೆ ಸಹಿಸದೆ ನಂಟುಂಟೆ?
ಮುಂಡನದೆ ಮಿಕ್ಕ ಖಾಲಿಯಷ್ಟೆ ಸತ್ಯ ಬದುಕು
ನಿನ್ನ ಫಸಲೆತ್ತಿ ಸವರುವರಿನ್ನಾರೊ – ಕನ್ನಡ ಜಾಣ||

ಸೊಗಸುಗಾರ ಪುಟ್ಟರ ಮಾತು, ಬಂಡವಾಳವೆ ಗತ್ತು
ಮೂಢರಾಗಿಸೆ ನಗದೆ, ನಂಬುವುದೇಕೊ ಜಗ ಒಣಶಿಸ್ತು ?
ಸಾಧನೆಯ ಹಂಬಲ ಆತ್ಮ ಪ್ರೇರಣೆಯ ಬಲವಿದ್ದು
ಮಾತಾಡಬರದೆ ಹಿಂದುಳಿವ ಸಜ್ಜನ ಪಾಪ – ಕನ್ನಡ ಜಾಣ ||

ನಂಬಿ ನಡೆದಿದ್ದ ಜಗ, ಆಗಿನ ಯುಗವೆಂದಿನದೊ?
ಕರಾರಿಗ್ಹಸ್ತಾಕ್ಷರವುಣಿಸಿ, ನಂಬಿಸೊ ಈ ಜಗವೆಲ್ಲಿ?
ಬಂಧಗಳೆ ಸಡಿಲ ನಂಟಿಗು ನಂಬಿಕೆಯೆ ಬರದಲ್ಲ
ಕರುಳ್ಕುಡಿಗೂ ಸಹಿಗಿಡುವ ಕಾಲವಿದು – ಕನ್ನಡ ಜಾಣ ||

ಹಂಚಿ ತಿನಲೆಂದೆರಕ, ಹೋಯ್ದನವ ಒಂದಿಳೆಯಾಗಿ
ಕಟ್ಟಿ ಸುತ್ತಿದ ಹಾಸು, ಬಿಚ್ಚಲೆಲೆ ತೆಳು ಎಳೆಯೆಳೆಯಾಗಿ
ನಾರೆಳೆದ ನೇಯ್ಗೆ ನವಿರು ವಸ್ತ್ರ, ಆಗಬಿಡದಂತೆ ವಿವಸ್ತ್ರ
ವ್ಯವಕಲಿಸೆ ಸಂತುಲನ, ನಾಶ ಸಂಕಲಿಸುತೆ – ಕನ್ನಡ ಜಾಣ ||

11.07.2014

ಕನ್ನಡ, ಜಾಣ, ನಾಗೇಶ, ನಾಗೇಶ ಮೈಸೂರು, ನಾಗೇಶಮೈಸೂರು, ಪದ, Nagesha, Nagesha Mysore, nageshamysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s