00230. ಕಥೆ: ಪರಿಭ್ರಮಣ..(36)

00230. ಕಥೆ: ಪರಿಭ್ರಮಣ..(36)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00230. ಕಥೆ: ಪರಿಭ್ರಮಣ..(36)

( ಪರಿಭ್ರಮಣ..35ರ ಕೊಂಡಿ – https://nageshamysore.wordpress.com/00225-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-35/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ಗಡದ್ದಾಗಿ ಊಟ ಮುಗಿಸಿದವರನ್ನು ಹೊತ್ತು ಅಲ್ಲಿಂದ ಮತ್ತೆ ಹೊರಟ ಬಸ್ಸು ನೇರ ನಡೆದದ್ದು ‘ಕಾಂಚನಾಬುರಿ’ಯತ್ತ. ಐತಿಹಾಸಿಕ ಮಹತ್ವದ ಈ ಪಟ್ಟಣದಲ್ಲಿರುವ ಕೆಲ ಸ್ಥಳಗಳಿಗೆ ಭೇಟಿ ನೀಡಬೇಕೆಂದಿರುವ ಉದ್ದೇಶವೇನೊ ಎಂದುಕೊಳ್ಳುತ್ತಿದ್ದ ಶ್ರೀನಾಥನಿಗೆ, ಅದು ಸರಿಯಾದ ಊಹೆಯೊ ಅಲ್ಲವೊ ಎಂದು ಗೊತ್ತಾಗುವ ಮೊದಲೆ ಮತ್ತೊಂದು ಕಡೆ ನಿಂತುಕೊಂಡುಬಿಟ್ಟಿತ್ತು ಬಸ್ಸು – ಈ ಬಾರಿ ದೊಡ್ಡದೊಂದು ದ್ರಾಕ್ಷಿ ತೋಟದ ಮುಂದೆ. ವಿಸ್ತಾರವಾಗಿದ್ದ ಆ ತೋಟದ ತುಂಬೆಲ್ಲ ಚಪ್ಪರ ಹಾಕಿದ್ದು ಅದರಲ್ಲಿ ನೋಡಿದಲ್ಲೆಲ್ಲ ಗೊಂಚಲು ಗೊಂಚಲಾಗಿ ನಳನಳಿಸುತ್ತಿದ್ದ ದ್ರಾಕ್ಷಿಯನ್ನು ಕಾಣಬಹುದಿತ್ತು. ನಡುವೆ ಮಾಡಿದ್ದ ಪುಟ್ಟ ಕಾಲುಹಾದಿಯ ಮೂಲಕ ಒಳಗೆಲ್ಲಾ ಓಡಾಡುವ ಅನುಕೂಲವಿತ್ತು. ಅಲ್ಲಿ ಸುಮಾರು ಒಂದು ಗಂಟೆಯಷ್ಟು ಹೊತ್ತು ಓಡಾಡಲು ಬಿಟ್ಟು ಕಡೆಯಲ್ಲಿ ಯಥಾರೀತಿ ಕೊಳ್ಳ ಬಯಸಿದವರಿಗೆ ಹತ್ತಿರದಲ್ಲಿ ಗುಡಾರದಂತಿದ್ದ ಕಡೆ ಕುಕ್ಕೆಗಳಲ್ಲಿ ಗುಡ್ಡೆ ಹಾಕಿಟ್ಟಿದ್ದ ಹಣ್ಣನ್ನು ಮಾರುವ ವ್ಯವಸ್ಥೆ ಮಾಡಲಾಗಿತ್ತು. ಅದನ್ನು ನೋಡಿ, ತಿಂದು, ಕೊಂಡು ಮುಗಿಸಿ ಎಲ್ಲರು ಹೊರಡುವ ಹೊತ್ತಿಗೆ ಸಂಜೆಯಾಗಿ ಮತ್ತೆ ರಸ್ತೆ ಪಯಣದ ಹಂತ ಶುರುವಾದಾಗ, ದೂರದಾಗಸದಲ್ಲಿ ತನ್ನ ಪ್ರಖರತೆಯನ್ನು ಸೌಮ್ಯವಾಗಿಸಿಕೊಂಡು ಕೆಂಪಾದ ಸೂರ್ಯನ ಮೋಡಗಳ ಸಿಕ್ಕಿನಲ್ಲಿ ಆವರಿಸಿಕೊಂಡು ಬಿಡಿಸಿಕೊಳ್ಳಲಾಗದೆ ಒದ್ದಾಡುವಂತಿದ್ದ ಚಿತ್ರ ಸುತ್ತಲೂ ಆವರಿಸಿಕೊಳ್ಳತೊಡಗಿತ್ತು. ನೋಡ ನೋಡುತ್ತಿದ್ದಂತೆ ಶ್ರೀನಾಥ ಬಸ್ಸು ಕಾಂಚನಬುರಿಯ ಮುಖ್ಯಹಾದಿ ಬಿಟ್ಟು ಮತ್ತೊಂದು ಕವಲು ದಾರಿ ಹಿಡಿದಿದ್ದನ್ನು ಗಮನಿಸುತ್ತಿದ್ದ ಹಾಗೆಯೆ ಅನತಿ ದೂರದಿಂದಲೆ ಆರಂಭವಾಗಿತ್ತು ನಿಧಾನವಾಗಿ ದಟ್ಟವಾಗತೊಡಗಿದ್ದ ಕಾಡಿನ ಪರಿಸರ. ಖಾಲಿ ಬಯಲಿನ ಜಾಗಗಳೆಲ್ಲ ನಿಧಾನವಾಗಿ ಮಾಯವಾಗುತ್ತ ಬಂದು ಅದರ ಜಾಗವನ್ನು ದಟ್ಟವಾಗಿ ಬೆಳೆದಿದ್ದ ಪೊದೆಗಳು, ಮರಗಳು ಆಕ್ರಮಿಸಿಕೊಳ್ಳತೊಡಗಿದ್ದಂತೆ ಎರಡು ಬದಿಯ ಹಸಿರಿನ ವಾತಾವರಣ ಸಂಪೂರ್ಣ ನಗರ ಪರಿಸರದ ಅನುಭೂತಿಯನ್ನು ಮರೆಯಾಗಿಸಿ ಶ್ಯಾಮಲ ಪ್ರಕೃತಿಯ ಮೆಲು ಸ್ಪರ್ಷವನ್ನೀಯತೊಡಗಿತ್ತು. ಆ ವಾತಾವರಣದಲ್ಲಿ ನಾಗರೀಕ ಲೋಕಕ್ಕೆ ಸೇತುವೆ ಹಾಕಿದ್ದ ಒಂದೆ ಒಂದು ಅಂಶವೆಂದರೆ ಆ ಬಸ್ಸು ಹಾದುಹೋಗುತ್ತಿದ್ದ ಟಾರು ಬಳಿದ ರಸ್ತೆ. ತುಸು ಮುಂದೆ ಸಾಗುತ್ತಿದ್ದಂತೆ ಸುತ್ತಲಿನ ಮರಗಳು ಭೂತಾಕಾರವಾಗತೊಡಗಿ ಆಕಾಶದುದ್ದಕ್ಕೂ ಪಸರಿಸಿಕೊಂಡಿವೆಯೇನೊ ಎಂಬ ಭ್ರಮೆ ಮೂಡಿಸುವ ಹೊತ್ತಿಗೆ ಆ ಚೆಂದದ ರಸ್ತೆಯೂ ಮುಗಿದು ಕಚ್ಛಾ ರಸ್ತೆಯೊಂದು ಆರಂಭವಾಗುವ ಸೂಚನೆಗಳು ಆರಂಭವಾಗುತ್ತಿದ್ದಂತೆ ಮತ್ತೆ ಇದ್ದಕ್ಕಿದ್ದಂತೆ ಬಸ್ಸನ್ನು ನಿಲ್ಲಿಸಿದ್ದರು – ತಾತ್ಕಾಲಿಕವಾಗಿ. ಯಾಕಿರಬಹುದೆಂದು ನೋಡಿದರೆ, ಪ್ರವಾಸದ ಉಸ್ತುವಾರಿ ಹೊತ್ತಿದ್ದವರಲ್ಲೊಬ್ಬ ಶ್ರೀನಾಥನ ತಂಡವಿದ್ದ ಗುಂಪಿಗೆ ಬಂದು ಥಾಯಿಯಲ್ಲಿ ಏನೋ ಹೇಳುತ್ತ, ಸನ್ನೆ ಮಾಡುತ್ತ ಎರಡು ಸಾಲಲ್ಲಿ ಒಟ್ಟಾಗಿ ಕೂತವರನ್ನು ಮೇಲೆಬ್ಬಿಸಿ ಎರಡು ಭಾಗಗಳಾಗಿ ಮಾಡಿ ಕೆಲವರನ್ನು ಅದೆ ಬಸ್ಸಿನಲ್ಲಿರಿಸಿಕೊಂಡು, ಮಿಕ್ಕವರನ್ನು ಮತ್ತೊಂದು ಬಸ್ಸಿನತ್ತ ಕಳುಹಿಸಿದ್ದ. ಅದೇಕೆ ಈ ರೀತಿ ಮಾಡುತ್ತಿದ್ದಾರೆಂದು ಇವರ್ಯಾರಿಗೂ ಅರಿವಾಗದೆ ಮಿಕ ಮಿಕ ನೋಡುತ್ತಿರುವಾಗಲೆ ಥಾಯ್ ಭಾಷೆಯಲ್ಲಿ ಪ್ರಶ್ನಿಸಲಾಗದ ಅಸಹಾಯಕತೆಗೆ ಸುಮ್ಮನೆ ಅವನ ಸೂಚನೆಯನ್ನು ಪಾಲಿಸತೊಡಗಿದರು. ಗುಂಪನ್ನು ವಿಭಾಗಿಸಲು ಏನೊ ಖಚಿತ ಕಾರಣವಂತೂ ಇರಬಹುದಾದರೂ ಅದೇನೆಂದು ಆ ಹೊತ್ತಿನಲ್ಲಿ ಗೊತ್ತಾಗಿರಲಿಲ್ಲವಷ್ಟೆ.

ಸುತ್ತಲಿನ ಇಂಗ್ಲೀಷ್ ಬಲ್ಲವರಾರನ್ನಾದರೂ ಕೇಳೋಣವೆಂದರೆ ಅವರೂ ಮಿಕಮಿಕನೆ ಇವರನ್ನೇ ನೋಡುತ್ತಿದ್ದ ಪರಿಯಿಂದಾಗಿ ಅವರಿಗೂ ಕಾರಣ ಗೊತ್ತಿಲ್ಲವೆಂದು ಅರಿವಾಗಿತ್ತು. ಅಷ್ಟೂ ಸಾಲದೆನ್ನುವಂತೆ ಬೇರ್ಪಡಿಸಿದ ಪ್ರತಿಯೊಬ್ಬರನ್ನು ಒಂದೆ ಸಾಲಿನಲ್ಲಿ ಕೂರಿಸದೆ ಹಿಂದೆ, ಮುಂದೆ, ನಡುವಿನ ಸೀಟುಗಳಲ್ಲಿ ಆಯ್ದ ವ್ಯಕ್ತಿಗಳ ಪಕ್ಕ ಕೂರಿಸಿದಾಗಲಂತೂ ಇನ್ನೂ ಸೋಜಿಗವಾಗಿತ್ತು, ಜತೆಗೆ ಕೊಂಚ ಮುಜುಗರವೂ ಸಹ. ಸಾಲದ್ದಕ್ಕೆ ಮುಖವನ್ನು ಮರೆಸುವಂತೆ ಟೋಪಿಗಳನ್ನು ಹಾಕಿಕೊಂಡು, ಮುಂದಕ್ಕೆಳೆದುಕೊಳ್ಳುವಂತೆ ಹೇಳಿದ್ದರಿಂದ ತಾವೇನಾದರೂ ಕಪಟತನದಿಂದ ರಹದಾರಿ ರಹಿತರಂತೆ ಒಳಗೆ ಪ್ರವೇಶಿಸುತ್ತಿದ್ದೇವೇನೊ ಎಂಬ ವಿಚಿತ್ರ ಅನುಮಾನವನ್ನು ಹುಟ್ಟಿಸಿಬಿಟ್ಟಿತ್ತು! ಆಗಲೆ ಮಬ್ಬು ಮುಸುಕಿಕೊಂಡು ಕತ್ತಲಿಗೆ ಮುನ್ನುಡಿ ಬರೆಯುತ್ತಿದ್ದ ಹೊತ್ತಲ್ಲಿ ಸುತ್ತಲಿನ ಗಾಢ ಹಾಗೂ ದಟ್ಟವಾದ ಮರಗಳ ಆವರಣದಿಂದಾಗಿ ಕತ್ತಲೆ ಆಗಿಯೆಬಿಟ್ಟಿತೇನೊ ಎಂದು ಭ್ರಮೆ ಹುಟ್ಟಿಸುತ್ತಿದ್ದ ಹೊತ್ತಲ್ಲಿ ತಕ್ಷಣಕ್ಕೆ ಕಾರಣ ವಿಚಾರಿಸುವ ಚರ್ಚೆಗಿಳಿಯದೆ ಅವರ ಸೂಚನೆ ಪಾಲಿಸುವುದು ಒಳಿತೆಂದು ನಿರ್ಧರಿಸಿದ್ದ ಶ್ರೀನಾಥ ಅದನ್ನೆ ತನ್ನ ತಂಡದ ಮಿಕ್ಕವರಿಗು ಪಾಲಿಸಲು ಹೇಳಿದ್ದ. ಕುತೂಹಲವನ್ನು ತಣಿಸುವ ಸಲುವಾಗಿ ಕಾರಣ ವಿಚಾರಿಸುವ ಕೆಲಸವನ್ನು ಹೇಗೂ ನಂತರವೂ ಮಾಡಬಹುದಿತ್ತು. ಇವರೆಲ್ಲರನ್ನು ಹೀಗೆ ವಿಭಜಿಸಿ ಬೇರೆ ಬೇರೆ ಕೂರಿಸಿ ಆದ ಮೇಲೆ ಮತ್ತೆ ಬಸ್ಸು ಹೊರಟಿತ್ತು ಕಚ್ಛಾ ರಸ್ತೆಯಲ್ಲಿ. ಕಚ್ಚಾ ರಸ್ತೆಯ ಒರಟುತನ ಮತ್ತು ಇಕ್ಕಟ್ಟಿನಿಂದಾಗಿ ಸ್ವಲ್ಪ ನಿಧಾನದಲ್ಲೆ ಚಲಿಸಬೇಕಾಗಿದ್ದ ಕಾರಣ ಕೇವಲ ಒಂದೆರಡು ಕಿಲೊಮೀಟರು ದೂರಕ್ಕೂ ಸುಮಾರು ಹೊತ್ತೆ ಹಿಡಿದಂತೆ ಭಾಸವಾಗುವ ಹೊತ್ತಿಗೆ ಧುತ್ತೆಂದು ಪ್ರತ್ಯಕ್ಷವಾದ ಚೆಕ್ ಪೋಸ್ಟೊಂದು ಕಣ್ಣಿಗೆ ಬಿದ್ದು, ಅದರ ತಡೆ ಸೂಚನಾ ಫಲಕವನ್ನು ಹೊತ್ತಿದ್ದ ಲೋಹದ ಕೋಲಿನ ಅಡ್ಡಗಟ್ಟೆಯ ಮುಂದೆ ಬಸ್ಸು ನಿಂತುಕೊಂಡಿತ್ತು. ಒಳಗೆ ಹೋಗುವ ಪರವಾನಗಿ, ಅನುಮತಿ ಇತ್ಯಾದಿಗಳನ್ನೆಲ್ಲ ಪರಿಶೀಲಿಸುತ್ತಿದ್ದರೊ ಏನೊ ಅಲ್ಲೆ ಸುಮಾರು ಹದಿನೈದು ನಿಮಿಷ ಕಾಯಬೇಕಾಗಿ ಬಂದಿತ್ತು. ಎಲ್ಲಾ ಮುಗಿಸಿ ಕೊನೆಯಾಗುವ ಹೊತ್ತಿಗೆ ಚೆಕ್ ಪೋಸ್ಟಿನ ಸಿಬ್ಬಂದಿಯೊಬ್ಬ ಬಸ್ಸಿನ ಒಳಗೆ ಬಂದು ಸೀಟುಗಳ ಮೇಲೆಲ್ಲಾ ಕಣ್ಣಾಡಿಸತೊಡಗಿದಾಗ, ಜಾಗರೂಕನಾಗಿ ನಿದ್ರೆಯಲ್ಲಿರುವವನಂತೆ ಟೋಪಿಯ ಸಮೇತ ತಲೆ ಬಗ್ಗಿಸಿಕೊಂಡು ಕೂತುಬಿಟ್ಟಿದ್ದ ಶ್ರೀನಾಥ. ಬಂದವನು ಹೆಚ್ಚು ವಿಚಾರಿಸದೆ ಕೆಳಗಿಳಿದು ಹೋದ ಮೇಲೆ ಮತ್ತೆ ಬಸ್ಸು ಮುನ್ನಡೆದಿತ್ತು. ಮತ್ತೊಂದು ಐದು ನಿಮಿಷದ ಪಯಣದ ನಂತರ ಬಸ್ಸು ನಿಂತಾಗ ಕೆಳಗಿಳಿದು ನೋಡಿದರೆ ಸಂಪೂರ್ಣ ಕಾಡಿನ ವಾತಾವರಣ; ಉದ್ದುದ್ದಕ್ಕೆ ಬೆಳೆದು ನಿಂತ ವೃಕ್ಷ ಸಮೂಹದ ನಡುವೆ ಸಮತಟ್ಟಿಲ್ಲದ ಪುಟ್ಟ ಗುಡ್ಡಗಳಂತಿದ್ದ ವಿಸ್ತೀರ್ಣದಲ್ಲಿ ಓಡಾಡಲು ಅನುಕೂಲವಾಗುವಂತೆ ಗುಡ್ಡದ ನಡುವೆಯೆ ಮೆಟ್ಟಿಲುಗಳನ್ನು ಕಡೆದಿದ್ದರು. ಆ ಮೆಟ್ಟಿಲ ಹಾದಿಯನ್ನೆ ಅನುಸರಿಸಿಕೊಂಡು ಮೇಲೆ ನೋಡಿದರೆ ಗುಡ್ಡಗಳ ಮೇಲೆಲ್ಲ ಬೊಂಬು, ಬಿದಿರು, ಅದೇ ಕಾಡಿನದೆ ಮರಗಳ ಮೂಲಸಾಮಗ್ರಿಗಳನ್ನು ಬಳಸಿ ಕಟ್ಟಿದ್ದ ಹಲವಾರು ಕಾಟೇಜುಗಳ ಸಾಲು; ಎಲ್ಲವು ನೆಲಮಟ್ಟದಿಂದೆತ್ತರಿಸಿದ ಸ್ತಂಭಗಳ ಮೇಲೆ ನಿಲ್ಲಿಸಿ ಕಟ್ಟಿದಂತಿದ್ದವು, ಬಹುಶಃ ಕಾಡು ಪ್ರಾಣಿಗಳಿಂದ ತೊಡಕಾಗದಿರುವಂತೆ. ಕಾಟೇಜುಗಳನ್ನು ಹತ್ತಿ ಹೋಗಲೆಂದು ಮಾಡಿದ್ದ ಮೆಟ್ಟಿಲುಗಳು ಸಹ ಬಲವಾದ ಗಟ್ಟಿಮುಟ್ಟಾದ ಮರಗಳಿಂದ ಮಾಡಿದ್ದರೂ ಯಾವುದೆ ಆಕರ್ಷಕ ವಿನ್ಯಾಸದ ಹಂಗಿಲ್ಲದೆ ಸರಳವಾಗಿ ಸುಂದರವಾಗಿದ್ದವು – ನಿಸರ್ಗದ ಮಡಿಲಲ್ಲಿ ಸರಳತೆಯೆ ಸೌಂದರ್ಯದ ಪ್ರತೀಕ ಎನ್ನುವಂತೆ.

ಬಸ್ಸಿನಿಂದಿಳಿದ ಎಲ್ಲರನ್ನು ಹೆಸರುಗಳಿಗನುಸಾರವಾಗಿ ಆಯಾ ಕಾಟೇಜುಗಳತ್ತ ನಿರ್ದೇಶಿಸತೊಡಗಿದಾಗ ಎಲ್ಲರಿಗು ರೂಮಿಗಿಬ್ಬರು – ಮೂವರ ಹಾಗೆ ಹಂಚಿಕೆ ಮಾಡಿ ಕಳಿಸುತ್ತಿದ್ದರೂ, ಶ್ರೀನಾಥನಿಗೆ ಮತ್ತು ಕೆಲವು ಹಿರಿಯ ಮುಖ್ಯಸ್ಥರಿಗೆಲ್ಲ ಕಾಟೇಜಿನ ಒಂದೊಂದು ಪೂರ್ತಿ ರೂಮನ್ನೆ ಬಿಟ್ಟು ಕೊಟ್ಟುಬಿಟ್ಟಿದ್ದರು. ಹೀಗಾಗಿ ಇಡಿ ಕಾಟೇಜಿನ ಮೂರ್ನಾಲ್ಕು ರೂಮುಗಳಲ್ಲಿ ಕೇವಲ ಕೆಲವೆ ಜನರಿದ್ದರೂ, ಆ ಕೊಠಡಿಯ ಸರಳ ಹಾಗೂ ವಿಶಿಷ್ಟ ವಿನ್ಯಾಸದಿಂದಾಗಿ ಪ್ರತಿಯೊಂದು ಕೊಠಡಿಯೂ ಬೇರೆ ಬೇರೆಯಾಗಿ ಖಾಸಗಿಯಾಗಿರುವಂತೆ ಭಾಸವಾಗುತ್ತಿತ್ತು. ಶ್ರೀನಾಥನ ತಂಡಕ್ಕೂ ಕೂಡ ಇಬ್ಬಿಬ್ಬರಿಗೊಂದೊಂದು ರೂಮು ಸಿಕ್ಕರೂ, ಇಲ್ಲಿ ಪರಸ್ಪರ ಸುಪರಿಚಿತರಿದ್ದ ತಂಡದವರನ್ನು ಮಾತ್ರವೆ ಜೋಡಿಯಾಗಿಸಿದ್ದ ಕಾರಣ ತೊಡಕೇನು ಆಗದೆ ಆರಾಮವಾಗಿತ್ತು. ಅದೆ ಹೊತ್ತಿನಲ್ಲಿ ಆಯ್ದ ಕೆಲವರು ಕಾಟೇಜಿನತ್ತ ಬರದೆ ಅದರ ವಿರುದ್ಧ ದಿಕ್ಕಿನಲ್ಲಿ ಸಾಗತೊಡಗಿದಾಗ ಆ ಗುಂಪಿನಲ್ಲಿ ಸೌರಭ ದೇವನು ಇದ್ದುದನ್ನು ಕಂಡು ಏಕೆಂದು ವಿಚಾರಿಸಿದಾಗ ಅತ್ತ ಕಡೆ ಕಾಡಿನ ಬದಿಯಲ್ಲಿ ಹೊಳೆಯೊಂದು ಇರುವುದು ತಿಳಿದು ಬಂತು. ಇವರಲ್ಲಿ ಕೆಲವರು ಹೊಳೆಯ ದಡದಲ್ಲಿ ಟೆಂಟು ಹಾಕಿಕೊಂಡು ರಾತ್ರಿಯನ್ನೆಲ್ಲ ಅಲ್ಲೆ ಕಳೆಯುವ ವ್ಯವಸ್ಥೆ ಮಾಡಿಕೊಂಡಿದ್ದರು – ನೀರಿಗಾಗಿ ಬರಬಹುದಾದ ಕಾಡು ಪ್ರಾಣಿಗಳನ್ನು ನೋಡಲೊ ಎಂಬಂತೆ. ಅರೆ! ಪರವಾಗಿಲ್ಲವೆ? ಇವರೇನೇನೊ ವ್ಯವಸ್ಥೆ ಮಾಡಿಕೊಂಡಿದ್ದರ ಸುಳಿವೆ ಹತ್ತಿರಲಿಲ್ಲವಲ್ಲ? ಚಾಲಾಕಿ ಸೌರಭನು ಅವರೊಡನೆ ಸೇರಿ ಪ್ಲಾನ್ ಮಾಡಿಕೊಂಡಿದ್ದಾನಲ್ಲ ? ಎಂದು ಅನಿಸುತ್ತಿರುವಾಗಲೆ ಇದ್ದಕ್ಕಿದ್ದಂತೆ,ಬಸ್ಸಿನಲ್ಲಿ ತಮ್ಮನ್ನೆಲ್ಲ ಏಕೆ ಬೇರ್ಪಡಿಸಿದ್ದರೆಂದು ಸೌರಭನಿಗೆ ಗೊತ್ತಾಗಿರಬಹುದೆಂಬ ಅನುಮಾನವೂ ಬಂದಿತ್ತು. ಹೊಳೆಯಲ್ಲಿ ಹಾಕಿದ್ದ ಟೆಂಟಿನತ್ತ ಹೊರಟವನನ್ನು ಅರೆಗಳಿಗೆ ದಾರಿಯಲ್ಲೇ ತಡೆದು ನಿಲ್ಲಿಸುತ್ತ ಮಾತಿಗೆಳೆದಿದ್ದ ಶ್ರೀನಾಥ, ಆ ಕುರಿತಾಗಿ ಚರ್ಚಿಸಲೆಂದೆ :

‘ ಏಯ್ ಸೌರಭ್ ಒಂದು ನಿಮಿಷ ತಾಳು..ಬಸ್ಸಿನಲ್ಲಿ ನಮ್ಮನ್ನೆಲ್ಲ ಏಕೆ ಬೇರೆ ಬೇರೆ ಕೂರಿಸಿದರೆಂದು ನಿನಗೇನಾದರೂ ಗೊತ್ತಾಯಿತೆ?’ ಎಂದು ಕೇಳುತ್ತಿದ್ದಂತೆ ಏನೋ ನೆನಪಾದವನಂತೆ ಪಕಪಕನೆ ಬಿದ್ದು ಬಿದ್ದು ನಗತೊಡಗಿದ್ದ ಸೌರಭ್. ಹಾಗೆ ನಕ್ಕವನನ್ನೇ ಅವಾಕ್ಕಾಗಿ ನೋಡುತ್ತ ನಿಂತ ಶ್ರೀನಾಥನ ಕುತೂಹಲ ಅವನ ನಗುವಿನಿಂದಾಗಿ ಮತ್ತಷ್ಟು ಹೆಚ್ಚಾಗಿ, ರಸಮಯವಾದ ಹಿನ್ನಲೆಯೇನೊ ಇರಬಹುದೆಂದು ಅನಿಸುತ್ತಿರುವಾಗಲೇ, ಆ ಹಿನ್ನಲೆ ಸೌರಭನಿಗೆ ಗೊತ್ತಿರುವುದು ಸಹ ಖಚಿತವಾಗಿ, ಅವನು ನಗೆ ಮುಗಿಸಿ ಉತ್ತರಿಸುವುದನ್ನೇ ಕಾಡು ನಿಂತ. ತುಸು ಹೊತ್ತಿನ ನಂತರ ಸಾವರಿಸಿಕೊಂಡು ನಗೆ ನಿಲ್ಲಿಸಿದ ಸೌರಭ್,

‘ ಸಾರ್.. ವಿಶೇಷವೆನಿಲ್ಲ.. ಇಲ್ಲಿಗೆ ಒಳಕ್ಕೆ ಬರಬೇಕೆಂದರೆ ಎಂಟ್ರಿ ಫೀ ಕಟ್ಟಿ ಬರಬೇಕು…’

‘ ಸರಿ…ಅದರಲ್ಲೇನು ನಗುವಂತದ್ದು ? ಇಲ್ಲಿ ಎಲ್ಲಿ ಹೋದರೂ ಅದು ಮಾಮೂಲಲ್ಲವೆ ‘

‘ ಮಾಮೂಲೆ…ಆದರೆ ಆ ಹೆಚ್ಚುವರಿ ಶುಲ್ಕ ಬರಿ ವಿದೇಶಿಯರಿಗೆ ಮಾತ್ರ…ಇಲ್ಲಿನವರಿಗೆ ಅದರಿಂದ ವಿನಾಯ್ತಿ..!’

‘ ಆಹಾ..!’

‘ ಥಾಯ್ ಜನರಿಗೆ ಮಾತ್ರ ಪುಕ್ಕಟೆ ಪ್ರವೇಶ ಮತ್ತು ಕಾಟೇಜುಗಳ ಬಾಡಿಗೆಯೂ ಕಮ್ಮಿ ರೇಟಿನಲ್ಲಿ ಸಿಗುತ್ತದೆ..ವಿದೇಶಿಯರೆಂದರೆ ಕಾಟೇಜಿನ ಬಾಡಿಗೆಯೂ ತುಂಬಾ ದುಬಾರಿ.. ಸುಮಾರು ಎಂಟು -ಹತ್ತು ಪಟ್ಟು ಹೆಚ್ಚಿನ ದರ ‘ ಅದನ್ನು ಕೇಳುತ್ತಿದ್ದ ಶ್ರೀನಾಥನಿಗೆ ಈಗೊಂದು ರೀತಿಯ ಸ್ಥೂಲವಾದ ಕಾರಣ ಹೊಳೆಯುತ್ತಿರುವಂತೆ ಅನಿಸುತ್ತಿರುವಾಗಲೆ ಸೌರಭ್ ತನ್ನ ವಿವರಣೆ ಮುಂದುವರೆಸಿದ್ದ.

‘ ನಾವು ವಿದೇಶಿಯವರೆಂದು ಗೊತ್ತಾದರೆ ಹೆಚ್ಚು ಶುಲ್ಕ ಹೆಚ್ಚು ಮತ್ತು ದುಬಾರಿ ಬಾಡಿಗೆ ಕಟ್ಟಬೇಕಲ್ಲ? ಪ್ರವೇಶ ಶುಲ್ಕವೇನೊ ಪರವಾಗಿಲ್ಲ, ಹೆಚ್ಚು ಹೊಡೆತವಿರುವುದಿಲ್ಲ ಆದರೆ ಕಾಟೇಜು ಬಾಡಿಗೆ? ಅದಕ್ಕೆ ಹುಷಾರಾಗಿ ನಮ್ಮನ್ನೆಲ್ಲ ಬೇರೆ ಬೇರೆ ಗುಂಪುಗಳಾಗಿಸಿಬಿಟ್ಟರು, ಒಂದೆ ಗುಂಪಿನಡಿ ಪರದೇಶಿಗಳೆಂದು ನಿಖರವಾಗಿ ಗೊತ್ತಾಗಿ ಗಮನ ಸೆಳೆಯದಿರಲೆಂದು ..’

‘ ಅದೇನೊ ಸರಿ, ಆದರೆ ಎಲ್ಲರಿಗೂ ಸೀಟು ಬದಲಿಸುವ ಅಗತ್ಯವೇಕಿತ್ತೊ? ಅದು ಪ್ರತಿಯೊಬ್ಬರಿಗೂ ಹುಡುಕಿಟ್ಟಂತೆ ಬೇರೆ ಬೇರೆ ಕಡೆ..’

ಆಗ ತುಸು ಹತ್ತಿರಕ್ಕೆ ಬಂದು ಪಿಸು ದನಿಯಲ್ಲಿ ಶ್ರೀನಾಥನಿಗೆ ಮಾತ್ರ ಕೇಳಿಸುವಂತೆ ‘ಸಾರ್..ಇಲ್ಲಿನ ಥಾಯ್ ಜನಗಳ ಜತೆ ನಮ್ಮವರನ್ನು ಯಾವತ್ತಾದರೂ ಹೋಲಿಸಿ ನೋಡಿದ್ದಿರಾ?’

‘ ಅಂದರೆ? ಹೋಲಿಕೆ ಎಂದರೆ ಯಾವ ರೀತಿ?’

‘ ಮೈ ಮಾಟ, ಆಕಾರ, ಗಾತ್ರ ಬಣ್ಣಗಳಲ್ಲಿ..?’

ಹಾಗೆ ನೋಡಿದರೆ ಮಿಕ್ಕೆಲ್ಲಾ ತರದಲ್ಲೂ ಹೆಚ್ಚು ಕಡಿಮೆ ಒಂದೆ ರೀತಿಯ ಆಕಾರ ಗಾತ್ರ ಮೈಕಟ್ಟಿದ್ದರೂ, ಬಹುಶಃ ಒಂದೆ ಒಂದು ವಿಷಯದಲ್ಲಿ ಅವರಲ್ಲಿರುವ ಸಾಮಾನ್ಯ ವ್ಯತ್ಯಾಸ ಎದ್ದು ಕಾಣುವಂತಾದ್ದು; ಮೈ ಬಣ್ಣದ ವಿಷಯದಲ್ಲಿ ಅವರದು ತಮಗಿಂತ ಕೊಂಚ ಹೆಚ್ಚು ಗೌರವರ್ಣ…ಬಹುತೇಖ ಥಾಯ್ ಜನರ ನಡುವೆ ಯಾರದರೂ ಭಾರತೀಯರು, ಅದರಲ್ಲೂ ದಕ್ಷಿಣಾತ್ಯರು ಸೇರಿಕೊಂಡಿದ್ದಾರೆ ಅವರನ್ನು ಗುರುತಿಸಬಹುದಾದ ಒಂದು ಸುಲಭದ ಮಾರ್ಗಗಳಲ್ಲಿ ಅದು ಪ್ರಮುಖವಾದದ್ದೆಂದು ಧಾರಾಳವಾಗಿ ಹೇಳಬಹುದು. ಹಾಂ! ಅಂದರೆ ಅದೆ ಇರಬೇಕು ವಿಷಯ! ತಾವೆಲ್ಲಾ ಒಟ್ಟಾಗಿ ಕೂತಿದ್ದರೆ ನೋಡಿದ ಯಾರಿಗಾದರೂ ತಿಳಿದು ಹೋಗುತ್ತದೆ ತಾವು ಸ್ಥಳೀಯರಲ್ಲವೆಂದು ! ಅದಕ್ಕಾಗಿಯೆ ಒಟ್ಟಾಗಿ ಕೂತು ಎದ್ದು ಕಾಣಿಸದಿರಲೆಂದು ಮುಂಜಾಗರೂಕತೆಯಿಂದ ಹಂಚಿ ಕೂರಿಸಿಬಿಟ್ಟಿದ್ದರು!

‘ಆದರೆ ಅದು ಕೂಡ ಯಾಕೆ ಗುಂಪು ಬೇರೆ ಮಾಡಿದರೆಂದು ವಿವರಿಸುತ್ತದೆಯೆ ಹೊರತು,ಯಾಕೆ ಒಬ್ಬೊಬ್ಬರನ್ನೆ ಬೇರೆ ಸೀಟಿಗೆ ಕೂರಿಸಿದರೆಂದು ವಿವರಿಸುವುದಿಲ್ಲವಲ್ಲ? ಅದರಲ್ಲೂ ಪ್ರತಿಯೊಬ್ಬರ ಹೆಸರನ್ನು ಕರೆದು ಕರೆದು ಮೊದಲೆ ನಿಗದಿ ಪಡಿಸಿದ್ದವರ ಪಕ್ಕದ ಸೀಟಿಗೆ ಕೂರಿಸಿದಂತಿತ್ತು..?’

ಸೌರಭ್ ಇನ್ನಷ್ಟು ಮುಸಿ ಮುಸಿ ನಗುತ್ತ,’ ಅದೇ ಸಾರ್ ಟ್ರಿಕ್ಕು. ಅವರಲ್ಲೆ ಕೆಲವು ಕಡಿಮೆ ಗೌರವರ್ಣವಿದ್ದು ನಮ್ಮ ಬಣ್ಣಕ್ಕೆ ಹತ್ತಿರವಾಗಿದ್ದಂತಹವರನ್ನು ಆಯ್ದು ಅವರ ಪಕ್ಕ ನಮ್ಮನ್ನು ಕೂರಿಸಿದ್ದರು..ಚೆಕ್ಕಿಂಗಿಗೆ ಬಂದಾಗ ಬಣ್ಣಗಳ ವ್ಯತ್ಯಾಸ ರಾಚಿದಂತೆ ಗೋಚರವಾಗಿ ಅನುಮಾನ ಬರಬಾರದಲ್ಲ ಎಂದು!’

ಶ್ರೀನಾಥನಿಗೂ ಈಗೆಲ್ಲಾ ಅರ್ಥವಾಗಿ ಅವನಿಗೂ ನಗೆ ತಡೆಯಲಾಗಲಿಲ್ಲ – ಅವನೂ ಬಿದ್ದು ಬಿದ್ದು ನಗಲಾರಂಭಿಸಿದ; ಅವರಿಬ್ಬರ ನಗು ಕೇಳಿ ಜತೆಯಾದ ಮಿಕ್ಕ ತಂಡದ ಸದಸ್ಯರು ಆ ಕಥಾನಕವನ್ನು ಕೇಳಿ ಜತೆಗೆ ತಾವೂ ನಗರೊಡಗಿದ್ದರು. ಅದರ ನಡುವೆಯೆ ಕಾಲೆಳೆಯುವಂತೆ ಶ್ರೀನಾಥ ಸೌರಭ್ ದೇವನಿಗೆ ಹೇಳಿದ್ದ..

‘ಒಟ್ಟಾರೆ ನಮ್ಮದು ನೆವರ್ ಫೇಡಿಂಗ್, ಗ್ಯಾರಂಟೀಡ್ ಕಲರ – ಎಂದು ಭರವಸೆ ಕೊಟ್ಟರೂ ಇಲ್ಲಿನ ಹುಡುಗಿಯರಾರು ನಮ್ಮ ಹುಡುಗರನ್ನ ಬಾಯ್ ಫ್ರೆಂಢಾಗಿಸಿಕೊಳ್ಳುವುದೊ, ಮದುವೆಯಾಗುವುದೊ ಸಾಧ್ಯವಿಲ್ಲ ಎಂದಾಯ್ತು.. ಹೆಚ್ಚಿನ ಗೌರವರ್ಣದವರಲ್ಲವೆಂದು…?’

ಅವನ ದನಿಯಲ್ಲಿದ್ದ ಛೇಡಿಕೆ, ಹಾಸ್ಯಕ್ಕೆ ದನಿಗೂಡಿಸುತ್ತ ಟೆಂಟಿನತ್ತ ನಡೆಯುವ ಮುನ್ನ ಜಾಣ್ಮೆಯ ಮಾರುತ್ತರ ನೀಡಿದ್ದ ಸೌರಭ್, ‘ಅಯ್ಯೊ ಸುಮ್ಮನಿರಿ ಸಾರ್..ಇಲ್ಲಿ ಮದುವೆ ಗಿದುವೆ ಎಂದರೆ ಡೆಂಜರಸ್ಸು.. ಬಣ್ಣದ ಮಾತು ಬಿಡಿ, ದಮ್ಮಯ್ಯ ಎಂದು ಗಂಟು ಬೀಳುತ್ತಾರೆ – ಇಲ್ಲಿನ ಸಾಂಪ್ರದಾಯಿಕ ಪದ್ದತಿಯನುಸಾರ ನಡೆದುಕೊಂಡರೆ; ನಮ್ಮಲ್ಲಿ ಡೌರಿಯನ್ನು ಹೆಣ್ಣಿನವರು ಗಂಡಿನ ಕಡೆಯವರಿಗೆ ಕೊಟ್ಟರೆ, ಇಲ್ಲಿ ಅದನ್ನೆ ವಧುದಕ್ಷಿಣೆ ರೂಪದಲ್ಲಿ ಹೆಣ್ಣಿನ ಕಡೆಯವರಿಗೆ ಕೊಡಬೇಕಂತೆ..! ಯಾರಿಗೆ ಬೇಕು ಹೇಳಿ ಆ ತಲೇ ನೋವು? ಕಾಸು ಕೊಟ್ಟು ಪರದೇಶಿ ಹೆಣ್ಣು ಮದುವೆಯಾಗಲಿಕ್ಕೆ ನಮ್ಮಲ್ಲೇನು ಹೆಣ್ಣುಗಳಿಗೆ ಕೊರತೆಯೆ? ಊರಿಗೆ ಬಾ ಇದಕ್ಕೆ ಹತ್ತರಷ್ಟು ಚೆಂದದ ಹುಡುಗಿಯರನ್ನು ತೋರಿಸುತ್ತೇವೆ, ದಂಢಿ ದಂಢಿ ವರದಕ್ಷಿಣೆ ಜತೆಗೆ ಅನ್ನುತ್ತಾರೆ ನಮ್ಮಪ್ಪ, ಅಮ್ಮಂದಿರು’ ಎಂದು ಕಣ್ಣು ಮಿಟುಕಿಸಿದ್ದವನ ಚಾಲುಕಿತನಕ್ಕೆ ಮತ್ತೆ ಮೆಚ್ಚಿಗೆಯಿಂದ ಬೆರಗಾಗುತ್ತ, ತಲೆದೂಗುತ್ತ ತನ್ನ ಕಾಟೇಜಿನತ್ತ ನಡೆದಿದ್ದ ಶ್ರೀನಾಥ.

ಆ ಕಾಟೇಜಿನ ವಾತಾವರಣದಲ್ಲಿ ಶ್ರೀನಾಥನ ಗಮನ ಸೆಳೆದ್ದದ್ದೆಂದರೆ ಅದರ ಪ್ರಶಾಂತ ಪರಿಸರದ ಭಾವ. ಸುತ್ತಲೂ ಒಂದು ಚೂರು ಕಸ ಕಡ್ಡಿಯಿರದಂತೆ ನೀಟಾಗಿದ್ದದ್ದು ಒಂದು ಕಾರಣವಾದರೆ ಅಲ್ಲಿ ಹೆಚ್ಚೇನೂ ವಸ್ತುಗಳಿರದೆ ಕೇವಲ ಅಗತ್ಯವಿದ್ದ ವಸ್ತುಗಳಷ್ಟೆ ಇದ್ದದ್ದು ಮತ್ತೊಂದು ಕಾರಣವಾಗಿತ್ತು. ಅನಗತ್ಯವಾಗಿ ಪೇರಿಸಿಟ್ಟ ವಸ್ತುಗಳಿರದಿದ್ದ ರೀತಿಯಿಂದಲೆ ಒಂದು ವಿಧದ ಪ್ರಶಾಂತ, ವಿಸ್ತೃತ ವಿಸ್ತಾರದ ಭಾವ ಮೂಡಿಸಿ ಏನೊ ದೈವಿಕ ಪ್ರಶಾಂತ ಕಳೆಯನ್ನು ಆರೋಪಿಸಿಬಿಟ್ಟಿತ್ತು. ನಗರಗಳಲ್ಲಿನ ಗದ್ದಲಗಳ ಸುಳಿವೂ ಇಲ್ಲದ ಕಾಡಿನ ಪರಿಸರ ಬೇರೆ. ಜತೆಗೆ ಸುತ್ತಲಿನ ವಸ್ತುಗಳನ್ನು ಗಮನಿಸಿದ ಶ್ರೀನಾಥನಿಗೆ ಕಂಡು ಬಂದ ಮತ್ತೊಂದು ಅಂಶವೆಂದರೆ, ಅಲ್ಲಿದ್ದ ಎಲ್ಲವು ಶ್ವೇತಮಯವಾಗಿದ್ದುದ್ದು ; ಅಲ್ಲಿ ಹಾಸಿಗೆಯೆ ಮೇಲೆ ಹಾಸಿದ್ದ ಹೊದಿಕೆಯಿಂದ ಹಿಡಿದು, ಹೊದ್ದುಕೊಳ್ಳುವ ಚಾದರ, ಮೆತ್ತನೆಯ ತಲೆ ದಿಂಬು ಮತ್ತದರ ಹೊದಿಕೆ, ಕೋಣೆಯ ಕಿಟಕಿಗಳಿಗೆ ಹಾಕಿದ್ದ ಪರದೆ, ಸಣ್ಣ ಪ್ರಮಾಣದಲ್ಲಿದ್ದರೂ ಕಟ್ಟಡದ ಭಧ್ರತೆಗೆ ಆಧಾರವಾಗಿದ್ದ ಗೋಡೆಯ ಮೇಲಿನ ಬಣ್ಣ – ಹೀಗೆ ಅಲ್ಲಿ ಎಲ್ಲವೂ ಅಚ್ಚ ಬಿಳಿಯವೆ ಆಗಿದ್ದವು. ಆ ಸುತ್ತಲಿನ ಪ್ರಶಾಂತ ಭಾವಕ್ಕೆ ಅದೂ ಕಾರಣವಿರಬಹುದೆಂದುಕೊಂಡ ಶ್ರೀನಾಥ ಆ ಬಟ್ಟೆಗಳನ್ನು ಹತ್ತಿರದಿಂದ ಮುಟ್ಟಿ ನೋಡಿದರೆ ಮೃದುವಾದ ಸ್ವಚ್ಛ ಹತ್ತಿಯನ್ನು ನವಿರಾಗಿ ಮುಟ್ಟಿದ ಮೃದುಲ ಅನುಭವವಾಗುವಷ್ಟು ಹಿತವಾದ ಸ್ಪರ್ಷ. ಬರಿಯ ಹತ್ತಿಯಿಂದಷ್ಟೆ ಮಾಡಿದಂತಿದ್ದ ಆ ಬಟ್ಟೆಗಳನ್ನು ಮೈ ಮೇಲೆ ಹೊದ್ದಾಗಲೂ ಅವನೆಂದೂ ಅನುಭವಿಸದಿದ್ದ ಹಿತವಾದ ಅನುಭವ. ಹಿಂದೊಮ್ಮೆ ಕೊಂಡಿದ್ದ ಬನಿಯನ್ನುಗಳಲ್ಲೂ ಇದೆ ಅನುಭೂತಿ ಅನುಭವಿಸಿದ್ದ ಶ್ರೀನಾಥನಿಗೆ ಇದು ಅದೆ ಮೂಲದ ಹತ್ತಿಯಿಂದ ಮಾಡಿರಬಹುದಾದ ವಸ್ತ್ರವೆನಿಸಿತ್ತು. ಪ್ರವಾಸಿಗರ ದೃಷ್ಟಿಯಿಂದ ಹೆಚ್ಚು ಪ್ರಚಾರಕ್ಕೊಳಪಡಿಸುವ ಥಾಯ್ ಸಿಲ್ಕಿಗಿಂತ ಈ ಥಾಯ್ ಹತ್ತಿಯ ವಸ್ತುಗಳು ಹೆಚ್ಚು ಆಹ್ಲಾದಕರವೆನಿಸಿದರೂ, ಬಹುಶಃ ಲಾಭದ ದೃಷ್ಟಿಯಲ್ಲಿ ನೋಡಿದರೆ ಥಾಯ್ ರೇಷ್ಮೆಗೆ ಹೆಚ್ಚು ಪೋಷಣೆ ನೀಡುವುದು ಪ್ರವಾಸಿ ಉದ್ಯಮದ ದೃಷ್ಟಿಯಿಂದ ಸೂಕ್ತವಿರಬಹುದೆಂದು ಅಂದುಕೊಳ್ಳುತ್ತಲೆ ಅಲ್ಲಿ ಬೆತ್ತದ ಅಲಂಕರಣದ ಛಾವಣಿಯ ಜತೆಗೆ ಗಟ್ಟಿ ತೇಗದ ಮರವನ್ನು ಬಳಸಿ ಮಾಡಿದ್ದ ಮಂಚದ ಮೇಲೆ ಮಲಗಿ ಯಾವುದೋ ಅವರ್ಣನೀಯ ಸುಖಾನುಭವದಲ್ಲಿ ಅರೆಗಳಿಗೆ ಕಣ್ಣು ಮುಚ್ಚಿದ್ದ ಶ್ರೀನಾಥ. ಇನ್ನೇನು ಮಂಪರು ಕವಿದು ನಿದ್ರೆಗೆ ಜಾರಿಯೆ ಬಿಟ್ಟನೆನಿಸುವ ಹೊತ್ತಿಗೆ ಸರಿಯಾಗಿ ಯಾರೊ ಕರೆದಂತಾಗಿ ಸರಕ್ಕನೆ ಎಚ್ಚರವಾದಾಗ, ಹೊರಗಿನಿಂದ ಎಲ್ಲರನ್ನು ರಾತ್ರಿಯೂಟಕ್ಕೆ ಸಿದ್ದರಾಗಿ ಬರಲು ಕರೆಯುತ್ತಿದ್ದ ದನಿ ಕೇಳಿಸಿತ್ತು. ಅದೆ ವೇಳೆಗೆ ಅಲ್ಲಿಗೆ ಬಂದ ಸಿಬ್ಬಂದಿಯೊಬ್ಬರು ಸೊಳ್ಳೆ ಬತ್ತಿಯಂತಹ ಕಾಯ್ಲೊಂದನ್ನು ಹಚ್ಚಿಟ್ಟು ಹೋದಾಗ ರಾತ್ರಿ ಇಲ್ಲಿಯೂ ಸೊಳ್ಳೆ ಹುಳು ಉಪ್ಪಟೆಗಳ ಕಾಟವಿರಬಹುದೆಂದುಕೊಂಡು ಅದರ ಕುರಿತು ವಿಚಾರಿಸಿದರೆ ಆ ವ್ಯಕ್ತಿ ಅದಕ್ಕಿಂತ ಹೆಚ್ಚಾಗಿ ರಾತ್ರಿ ಓಡಾಡಬಹುದಾದ ಚೇಳುಗಳ ಬಗ್ಗೆ ಜಾಗರೂಕರಾಗಿರಬೇಕೆಂದು ನಗೆಯಾಡುತ್ತಲೆ ಎಚ್ಚರಿಸಿದಾಗ ಬೆಚ್ಚಿ ಬಿದ್ದಿದ್ದ ಶ್ರೀನಾಥ. ಆದರೂ ಹೆದರುವ ಅಗತ್ಯವಿಲ್ಲವೆಂದು, ಒಂದು ರೂಮಿನ ದೀಪವನ್ನು ಆರಿಸದೆ ರಾತ್ರಿಯೆಲ್ಲ ಉರಿಸುವುದು ಆ ಕಾರಣಕ್ಕೆ ಎಂದು ಸಮಾಧಾನಿಸಿದಾಗ ಕೊಂಚ ನಿರಾಳವಾಗಿತ್ತು. ಆದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಗೋಡೆಗೆ ತಗುಲಿ ಹಾಕಿದ್ದ ಬಟ್ಟೆಗಳನ್ನು ಚೆನ್ನಾಗಿ ಕೊಡವಿ ನಂತರ ಧರಿಸುವ ಮುಂಜಾಗರೂಕ ಕ್ರಮ ಬಳಸುವುದು ಉಚಿತವೆಂದು ಪುಕ್ಕಟೆ ಸಲಹೆ ಕೊಟ್ಟು ಹೋಗಿದ್ದ. ಸರಿಯೆಂದು ಲಗುಬಗೆಯಲ್ಲಿ ಎದ್ದು ಮುಖಕ್ಕೆ ಸ್ವಲ್ಪ ನೀರು ತೋರಿಸಿ ಗೋಡೆಗೆ ನೇತು ಹಾಕಿದ್ದ ಅಂಗಿಯನ್ನು ನಾಕಾರು ಬಾರಿ ಒದರಿ ಒದರಿ ಪರಿಶೀಲಿಸಿ, ಏನೂ ಹತ್ತಿಕೊಂಡಿಲ್ಲವೆಂದು ಚೆನ್ನಾಗಿ ಖಚಿತ ಪಡಿಸಿಕೊಂಡ ನಂತರವೆ ಪೂರ್ತಿ ಬಟ್ಟೆ ಬದಲಿಸಿಕೊಂಡು, ಎಲ್ಲರೂ ಸೇರಲು ನಿರ್ಧರಿಸಿದ್ದ ತಗ್ಗಿನ ಹತ್ತಿರದಲ್ಲಿದ್ದ ದೊಡ್ಡ ಕಾಟೇಜಿನ ಮುಂದಿನ ವಿಶಾಲವಾಗಿದ್ದ ಖಾಲಿ ಮೈದಾನಕ್ಕೆ ಬಂದು ಸೇರಿಕೊಂಡ ಶ್ರೀನಾಥ.

(ಇನೂ ಇದೆ)
____________
( ಪರಿಭ್ರಮಣ..37ರ ಕೊಂಡಿ – https://nageshamysore.wordpress.com/00227-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-37/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s