00231. ಮುನಿಸೆಂಬ ದ್ರಾಕ್ಷಾರಸ…

00231. ಮುನಿಸೆಂಬ ದ್ರಾಕ್ಷಾರಸ…

ಜಗಳ, ಮುನಿಸುಗಳಿಲ್ಲದ ನಂಟುಗಳಾದರೂ ಯಾವಿದ್ದಾವು? ಎಲ್ಲಾ ತರಹದ ಬಂಧ ಸಂಬಂಧಗಳಲ್ಲೂ ಒಂದಲ್ಲ ಒಂದು ರೀತಿಯ ತಿಕ್ಕಾಟ, ಕಸಿವಿಸಿಗಳುಧ್ಬವಿಸಿ ಬಹಿರಂಗ ಕದನವಾಗಿಯೊ, ಮುಸುಕಿನ ಗುದ್ದಾಟವಾಗಿಯೊ, ತಮ್ಮ ಮಾತಿಯ ‘ವಾಗ್ಯುದ್ಧ’ದ ಪರಿಣಿತಿಯನ್ನು ಪ್ರಸ್ತುತ ಪಡಿಸುವ ರಣರಂಗದ ಅಖಾಡವಾಗಿಯೊ ತಮ್ಮ ವರಸೆ ತೋರುವುದು ಎಲ್ಲರ ಬದುಕಿನ ಶಾಲೆಯಲ್ಲಿ ಪರಿಚಿತವಾಗಿ ಕಾಣುವ ಚಿತ್ರಣ. ಅದೆ ದೈನಂದಿನ ಸ್ತರದಲ್ಲಿ ಒಟ್ಟಾಗಿ ಬಾಳುವ ಹತ್ತಿರದ ನಂಟುಗಳಲ್ಲಿ ಈ ಬಗೆಯ ಕದನ ಕೋಲಹಲ ಭುಲೆದ್ದುಬಿಟ್ಟರಂತು ಮಾತನಾಡುವಂತಿಲ್ಲ; ದಿನ ನಿತ್ಯವೂ ಏನಾದರೊಂದು ಕಾರಣಕ್ಕೆ ಪಟಾಕಿ ಹೊತ್ತಿಕೊಂಡು ಸಿಡಿಯುತ್ತಲೆ ಇರುತ್ತದೆ. ನಡೆಯುವ ಪ್ರತಿ ಮಾತು, ಸಾಧಾರಣವಾಗಿ ಆರಂಭವಾದರೂ ಆಡುವವರಿಗರಿವಿಲ್ಲದ ಹಾಗೆ ಯಾವುದೊ ಒಳಗಡಗಿದ ಅಸಹನೆ ಹೇಗೊ ಒಳಗಿಂದೆದ್ದು ಸಂಭಾಷಣೆಯ ಒಳಗೆ ಅರಿವಿಲ್ಲದ ಹಾಗೆಯೆ ತೂರಿಕೊಂಡು, ಇದ್ದಕ್ಕಿದ್ದಂತೆ ಆ ಮಾಮೂಲಿ ಮಾತಿನ ವರಸೆಯನ್ನು ದಿಕ್ಕು ತಪ್ಪಿಸಿ ಎತ್ತರದ ಸ್ವರದ ಅರಚಾಟವನ್ನಾಗಿಸಿಬಿಡುತ್ತದೆ. ಎತ್ತರಿಸಿದ ಅಸಹನೆಯ ದನಿಯೆ ಮೊದಲ ಚಿಹ್ನೆ – ಮುಂದಿನ ಕೋಳಿ ಜಗಳದಂಕಣಕ್ಕೆ ಅದೆ ಮುನ್ನುಡಿ ಮತ್ತು ‘ಟ್ರಿಗರ’ ಎಳೆಯುವ ಪಾತಕಿ. ಒಂದು ಕಡೆ ದನಿ ಎತ್ತರಿಸುತ್ತಿದ್ದ ಹಾಗೆ ಮತ್ತೊಂದೆಡೆಯಿಂದಲೂ ಪ್ರತಿಕ್ರಿಯೆ, ಬಲಾಬಲ ಪ್ರದರ್ಶನ ಆರಂಭವಾಗಿ ಆ ಹೊತ್ತಿನಲ್ಲಿ ಆಡುತ್ತಿದ್ದ ಮಾತಿಗೆ ಸಂಬಂಧವೆ ಇರದ ಮತ್ತಿನ್ನೇನೇನೊ ಹಳೆಯ ಮಾತುಕಥೆಯೆಲ್ಲ ನುಸುಳಿ ಪರಸ್ಪರ ದೂಷಣೆ, ಆರೋಪ, ಪ್ರತ್ಯಾರೋಪಗಳಲ್ಲಿ ಪರ್ಯಾವಸಾನವಾಗುತ್ತದೆ. ಅಲ್ಲಿಗೆ ಮುಗಿಯಿತು ಅಳಿದುಳಿದಿದ್ದ, ಅಡಗಿದ್ದ ಸಹನೆಯ ಘಟ್ಟ; ನಿಯಂತ್ರಣವಿರದೆ ಅಡೆತಡೆಯಿಲ್ಲದೆ, ಸುತ್ತಮುತ್ತಲ ಪರಿವೆಯಿಲ್ಲದೆ ಅವ್ಯಾಹತ ಸಾಗುವ ಮಾತಿನ ಪರಿ ಎರಡೂ ಕಡೆ ಉಳಿಸಿ ಹೋಗುವ ಬಲವಾದ ಗಾಯ, ಖೇದ, ವಿಷಾದ, ಆಕ್ರೋಶಾದಿಗಳ ಅನುಭೂತಿ ಮಾತಿನಲ್ಲಿ ಪ್ರಕಟವಾಗಿದ್ದಕ್ಕಿಂತಲೂ ಹೆಚ್ಚಾಗಿ ಕಹಿ ಅನುಭವದ ರೂಪದಲ್ಲಿ ಅನಾವರಣಗೊಳ್ಳುವ ಸಮಯ.

ಶಕ್ತಿ ಮೀರಿ ನಡೆವ ಯುದ್ಧಕ್ಕೂ ಶಕ್ತಿಯ ಖಜಾನೆ ಮತ್ತು ಮಾತಿನ ಹರಿವಾಣ ಖಾಲಿಯಾದಾಗ ಕದನದ ದಮನವಾಗಲೇಬೇಕಲ್ಲ? ಭುಸುಭುಸುಗುಡುತ್ತಿದ್ದ ಆಕ್ರೋಶ ಪೇಲವಗೊಂಡು ಪಿಸು ಪಿಸುಗುಡುವ ಗೊಣಗಾಣದ ಮಟ್ಟ ತಲುಪುವ ಹೊತ್ತಿಗೆ ಕೆಲವು ನಡು ಹಂತಗಳನ್ನು ಒಂದೊಂದಾಗಿ ದಾಟಿಕೊಂಡೆ ಬಂದಿರುತ್ತದೆ – ಕೆಲವೊಂದು ವಿಪರೀತದ ಸಂಧರ್ಭದಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರುವುದು ಕೂಡ ಸೇರಿದಂತೆ. ರಕ್ತದೊತ್ತಡ, ಆವೇಶವೆಲ್ಲ ಕ್ರಮೇಣವಾಗಿ ಇಳಿಯುವ ಹೊತ್ತಲಿ ಮೆಲುಮೆಲುವಾಗಿ ಜ್ಞಾನೋದಯವಾದಂತೆ ಮಾತಿನ ಕೊಸರಾಟ ಕಡಿಮೆಯಾಗುತ್ತ, ಮುನಿಸಿನ ಮೌನದ ರೂಪಕ್ಕೆ ತಿರುಗುವುದು ಸಹ ಸಾಮಾನ್ಯ. ಆದರೆ ಆ ಮೌನ ಕೂಡ ಹೊರಗಿನ ದೃಷ್ಟಿಯಲಷ್ಟೆ – ಒಳಗಿನ ಮಾನಸಿಕ ಅಂತರ್ಯುದ್ಧ, ವಾಗ್ವಾದ, ವಾದ – ಪ್ರತಿವಾದ ನಡೆದೆ ಇರುತ್ತದೆ, ತನ್ನ ವಾದವೆ ಸರಿಯೆಂದು ನಿರೂಪಿಸಿಕೊಳ್ಳುವ ಹುನ್ನಾರದಲ್ಲಿ. ಒಟ್ಟಾರೆ ರಣರಂಗದ ಕೊನೆಯಲ್ಲಿ ಸಾಮ್ರಾಜ್ಯವಾಡುವ ಅಸಹನೀಯ ಮೌನ ಅದಕ್ಕೆ ಮುನ್ನದ ಸದ್ದುಗದ್ದಲದ ಕದನಕ್ಕಿಂತ ತೀವ್ರ ಘಾತಕವುಳ್ಳದ್ದು. ಯಾಕೆಂದರೆ, ಮಾತಿನ ಯುದ್ಧ ಮುಗಿದ ಮೇಲೂ ಒಂದು ರೀತಿಯ ಅಸಹಕಾರ ಚಳುವಳಿಯ ಕೊಸರು ಮುಂದುವರೆದುಕೊಂಡೆ ಹೋಗಿರುತ್ತದೆ – ಮಾಡುವ ಪ್ರತಿ ಸಣ್ಣ ಪುಟ್ಟ ಪ್ರತಿಕ್ರಿಯೆಯಲ್ಲೂ! ಕೆಲವೊಮ್ಮೆ ಗಂಟೆಗಳ ಮಟ್ಟಿಗಾದರೆ ಮತ್ತೆ ಕೆಲವೊಮ್ಮೆ ದಿನಗಟ್ಟಲೆ. ಆದರೆ ಬಹುತೇಖ ಸಂಧರ್ಭಗಳಲ್ಲಿ ಒಂದು ರಾತ್ರಿಯ ಚಡಪಡಿಕೆಯ ನಿದ್ದೆಯ ನಂತರ ಆ ಕಹಿಯೆಲ್ಲ ಮನದಾಳದ ಸ್ಮೃತಿಪಟಲದಲೆಲ್ಲೊ ಹೂತು ಹೋಗಿ, ಹಿನ್ನಲೆಗೆ ಸರಿದು ಹೋಗುವುದು ಸಾಧಾರಣವಾಗಿ ಕಾಣುವ ಚಿತ್ರ.

ಆ ಮಾತು ಮುನಿಸಿನ ಹೊತ್ತಿನ ಭಾವದ ಒಂದು ಕವನ ರೂಪಿ ಚಿತ್ರಣ ಈ ಕೆಳಗಿನ ಕವನ 🙂

ಮಾತು, ಮುನಿಸು
_________________________

ಮುನಿಸಿಕೊಂಡಿದೆ ಮನ
ಮುದುಡಿಡುತಿದೆ ಯಾಕೊ ದಿನ
ಯಾಕಿಲ್ಲಿ ಜಗಳ ಕದನ ಯುದ್ಧ ?
ಗೇಣುದ್ದವು ಬೆಳೆಯುತ ಮಾರುದ್ದ? ||

ಸಣ್ಣಪುಟ್ಟ ವಿಷಯ ತನ್ನ
ಕಿರುಬೆರಳಲೆ ಆಡಿಸಿ ಘನ
ಯಾಕಾಡಿಸಿದೆ ತುದಿಯಲೆ ನಿತ್ಯ
ಕಾಡಿಸುತಿದೆ ತಡಕಾಡಿಸುತ ಸತ್ಯ ||

ಸಾಕಿತ್ತಲ್ಲ ಮೌನದ ಚಿತ್ತ
ಕರಗಬಿಟ್ಟು ಕ್ಷಣದಾ ಪಿತ್ತ
ಚಿಗುರ್ಹೊಡೆಯಬಿಡದೆ ಮಾತ ವೃಕ್ಷ
ಮುನಿಸಿಗೆರೆದು ನೀರೆ ಬೆಳೆಸಿ ಸುಭೀಕ್ಷ ||

ತಕ್ಷಣದ ಮಾತ ಆ ಮುಂಗೋಪ
ಆ ಕ್ಷಣದೆ ಹೊರಬಿಡದೆ ಸಂತಾಪ
ಗುಡ್ಡೆಯನ್ನೆ ಗುಡ್ಡವಾಗಿಸಬಿಡೊ ದರ್ಪ
ಜೋಡಿಸುವ ಬದಲಾಡಿಸುವ ಹುರುಪ ||

ಆಡದೆ ಒಳಗುಳಿದರು ಕಷ್ಟ
ಹೃದಯದೊಳಗೆ ಕಟ್ಟಿ ಗಷ್ಟ
ತನು ಭಕ್ಷಿಸೊ ಮನ ದಾನವತೆ ಕ್ರೂರ
ಸುಮ್ಮನಿದ್ದರು ಕೊಲುವ ಬದುಕ ಘೋರ ||

———————————————-
ನಾಗೇಶ ಮೈಸೂರು, ಸಿಂಗಪುರ
———————————————-

ಮುನಿಸೆಂಬ, ದ್ರಾಕ್ಷಾರಸ, ಮಾತು, ಮುನಿಸು, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, nagesha, nagesha mysore

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s