00234. ಕಥೆ: ಪರಿಭ್ರಮಣ..(39)

00234. ಕಥೆ: ಪರಿಭ್ರಮಣ..(39)

……….ಏಕಾಂಗಿತನ ಮುತ್ತಲು, ಮನಸೆ ಬೆತ್ತಲು…!
_______________________________________________________________________________
ಅವರೋಹಣ…ಆಕ್ರಮಣ…ಅಧಃಪತನ…ಆರೋಹಣ…ಮನಸೆನ್ನುವ ಚಾರಣ, ಈ ಬದುಕಿನ ಹೂರಣ!
_______________________________________________________________________________

00234. ಕಥೆ: ಪರಿಭ್ರಮಣ..(39)

( ಪರಿಭ್ರಮಣ..38ರ ಕೊಂಡಿ – https://nageshamysore.wordpress.com/00233-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-38/ )

ಬಸ್ಸು ಮತ್ತೆ ಕಾಂಚನಾಬುರಿ ಪ್ರಾಂತ್ಯದ ಸರಹದ್ದಿನಲ್ಲೆ ಚಲಿಸಿ ‘ಕೌಯಾಯ್’ ಅನ್ನು ತಲುಪುತ್ತಿದ್ದಂತೆ, ಈ ಬಾರಿ ಕಾನನದ ಪರಿಸರದ ಬದಲು ಶುದ್ಧ ಗ್ರಾಮೀಣ ವಾತಾವರಣ ಕಾಣಿಸಿಕೊಂಡಿತ್ತು. ಅವರು ಹೋಗಿ ತಲುಪಿದ್ದ ಜಾಗ ಅವರೆಲ್ಲ ಉಳಿದುಕೊಳ್ಳಲಿದ್ದ ರೆಸಾರ್ಟಿಗೆ ಸೇರಿದ್ದ ಭಾಗವಾದ ಕಾರಣ, ಅದನ್ನು ಹಳ್ಳಿಯ ವಾತಾವರಣ ಎನ್ನುವುದಕ್ಕಿಂತ ಆ ರೀತಿ ಕಾಣುವ ಹಾಗೆ ಪರಿವರ್ತಿಸಿದ್ದರೆನ್ನುವುದೆ ಹೆಚ್ಚು ಸೂಕ್ತವಾಗಿತ್ತು. ಇಡೀ ರೆಸಾರ್ಟಿನ ವಿಶಾಲ ವಿಸ್ತೀರ್ಣವನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಶುಚಿತ್ವವನ್ನು ನಿರಂತರವಾಗಿರುವಂತೆ ನಿರ್ವಹಿಸುತ್ತಿದ್ದ ಕಾರಣದಿಂದಲೊ ಏನೊ ಸುತ್ತಮುತ್ತಲ ರಸ್ತೆಗಳು ಸೇರಿದಂತೆ ಎಲ್ಲವೂ ವಿರಳ ಜನ ನಿಭಿಢತೆಯೊಡನೆ ತೀರಾ ಖಾಸಗಿಯಾದ ವಾತಾವರಣವನ್ನು ಅನಾವರಣಗೊಳಿಸಿಕೊಂಡಿತ್ತು. ಬಸ್ಸಿನಿಂದಿಳಿದು ನೊಂದಣಿ ಆಫೀಸಿನತ್ತ ನಡೆಯುವ ದಾರಿಯಲ್ಲೆ ಕಣ್ಣಿಗೆ ಬಿದ್ದ ರೆಸಾರ್ಟಿನ ವಿಲ್ಲಾಗಳು ಅಲ್ಲಿನ ವಾತಾವರಣ, ಪರಿಸರದ ವಿಭಿನ್ನತೆಯನ್ನು ಎತ್ತಿ ತೋರಿಸುತ್ತಿದ್ದವು. ಹಿಂದಿನ ದಿನದ ಎತ್ತರದ ಮಟ್ಟದಲ್ಲಿದ್ದ ಕಾಡಿನ ಕಾಟೇಜುಗಳಿಗೆ ಬದಲಾಗಿ ಇಲ್ಲಿ ನೆಲ ಮಟ್ಟದಲ್ಲಿದ್ದ ವಿಲ್ಲಾಗಳು ಪುಟ್ಟ ಬಂಗಲೆಗಳಂತೆ ವಿಶಾಲವಾಗಿದ್ದುದು ಮಾತ್ರವಲ್ಲದೆ ಪ್ರತಿಯೊಂದು ವಿಲ್ಲಾವು ಮತ್ತೊಂದರಿಂದ ಸಾಕಷ್ಟು ದೂರದಲಿದ್ದು, ಪರಸ್ಪರದ ಖಾಸಗಿತನಕ್ಕೆ ಭಂಗವುಂಟಾಗದಂತೆ ಸೃಜಿಸಲಾಗಿತ್ತು. ಅದರ ಗಾತ್ರ ಆಕಾರಗಳನ್ನು ನೋಡಿಯೆ ಅಲ್ಲಿನ ಪ್ರತಿ ವಿಲ್ಲಾದಲ್ಲೂ ಕನಿಷ್ಠ ನಾಲ್ಕೈದಾದರು ಮಲಗುವ ಕೊಠಡಿಗಳೆ ಇರಬೇಕೆಂದು ಲೆಕ್ಕ ಹಾಕಿದ್ದ ಶ್ರೀನಾಥ. ಆದರೆ ಪ್ರತಿ ವಿಲ್ಲಾದ ಹೊರಗಿನ ವಿನ್ಯಾಸದ ಆಕಾರ ಗೋಪುರಾಕಾರದ ಹುಲ್ಲು ಮಾಡಿನ ಗುಡಿಸಿಲನ್ನೆ ಹೋಲುವಂತಿದ್ದು, ನಿಜವಾದ ಕೌವ್ ಬಾಯ್ ಗಳ ನೆಲೆದಾಣಗಳನ್ನು ಹೋಲುವಂತೆ ಸಂಯೋಜಿಸಲಾಗಿತ್ತು. ಆಫೀಸಿನ ಹತ್ತಿರ ಬರುತ್ತಿದ್ದಂತೆ ಅಲ್ಲೊಂದು ಸಂಪೂರ್ಣ ದೇಶಿಯ, ಹಳ್ಳಿಯ ವಾತಾವರಣದ, ದೊಡ್ಡ ಕುಟೀರಗಳಂತೆ ಕಾಣುವ ಪ್ರಾಂಗಣವೊಂದು ಎದುರಾದಾಗ ಅಲ್ಲಿದ್ದ ಸೀಟುಗಳು, ಕುರ್ಚಿ, ಟೇಬಲ್ಲುಗಳ ವ್ಯವಸ್ಥೆಯಿಂದಾಗಿ ಅದೆ ಊಟದ ಹಾಲಿರಬಹುದೆಂದು ಊಹಿಸಬಹುದಾಗಿತ್ತು. ಜತೆಗೆ ಅದರ ಮುಂದೆಯೆ ಇದ್ದ ಸ್ಟೇಜನ್ನು ಗಮನಿಸಿದರೆ ಆ ಡಿನ್ನರಿನ ಜತೆಗೆ ಅಲ್ಲಿ ಯಾವುದಾದರೂ ಪ್ರೋಗ್ರಾಮನ್ನು ನಡೆಸುವುದಕ್ಕೂ ಅನುಕೂಲವಾಗುವ ಹಾಗೆ ನಿರ್ಮಿಸಲಾಗಿತ್ತು. ಅದರ ಹತ್ತಿರ ಬರುತ್ತಿದ್ದಂತೆ ಆ ಹಾಲಿನ ಪೂರ್ತಿ ಪಾಲಿಷ್ ಮಾಡಿದ ಮರದ ದಿಮ್ಮಿ ಹಾಗೂ ತೊಲೆಗಳನ್ನು ಅಡ್ಡಾದಿಡ್ಡಿಯಾಗಿ ಹರಡಿದಂತೆ ಇಟ್ಟಿದ್ದುದನ್ನು ಕಂಡು ಅಚ್ಚರಿಯಿಂದ ಹತ್ತಿರ ಹೋಗಿ ನೋಡಿದರೆ, ಅವನ್ನು ಬೇಕೆಂತಲೆ ಆ ರೀತಿ ಇಟ್ಟಿರುವುದು ಗೊತ್ತಾಗಿತ್ತು. ಆ ದೊಡ್ಡ ಮರದ ದಿಮ್ಮಿಗಳನ್ನೆ ಆಸನಗಳ ರೀತಿ ಕತ್ತರಿಸಿ ನೆಲಮಟ್ಟದಲ್ಲೆ ಕಾಲುಚಾಚಿಕೊಂಡು ಆರಾಮವಾಗಿ ಒರಗಿಕೊಂಡು ಕೂರಲು ಆಗುವ ಹಾಗೆ ವಿನ್ಯಾಸಗೊಳಿಸಲಾಗಿತ್ತು. ದಿಮ್ಮಿಗಳಿಗಿಂತ ಗಾತ್ರದಲ್ಲಿ ಕಿರಿದಾಗಿದ್ದ ತೊಲೆಗಳಾಗಿದ್ದರೆ ಮಾತ್ರ, ಕೇವಲ ಬುಡದಲ್ಲಿ ಸಮತಟ್ಟಾಗಿಸಿ ಅದರ ಸಶಕ್ತ ಕವಲುಗಳ ಸಮೇತ ನೆಲದ ಮೇಲೆ ಕೂರುವಂತೆ ಮಾಡಿ ಆ ಕವಲಿನ ನಡುವಣ ಜಾಗವನ್ನೆ ಆಸನವಾಗಿ ಬಳಸಿಕೊಳ್ಳುವ ಹಾಗೆ ವಿನ್ಯಾಸಗೊಳಿಸಿತ್ತು.

ಇದೆಲ್ಲದರ ಹೊರತಾಗಿಯೂ ಅಲ್ಲಿರುವ ಮತ್ತಿನ್ಯಾವುದೊ ಅಂಶವು ಪ್ರಮುಖವಾಗಿ ಸೇರಿಕೊಂಡು, ಆ ಪರಿಸರವನ್ನು ನಾಗರೀಕತೆಯ ಆಧುನಿಕ ಪ್ರಪಂಚದಿಂದ ಸಂಪೂರ್ಣವಾಗಿ ಬೇರ್ಪಡಿಸಿತ್ತೆನಿಸಿ, ಅದೇನಿರಬಹುದೆಂದು ಸೂಕ್ಷ್ಮವಾಗಿ ಗಮನಿಸಿದಾಗ ಕಂಡಿತ್ತು ಆ ಇಡಿ ಪ್ರಾಂಗಣಕ್ಕೆ ನಾಲು ದಿಕ್ಕಿನಲ್ಲೂ ಆಧಾರದಂತಿದ್ದ ಬೃಹದಾಕಾರದ ವೃಕ್ಷಗಳ ನಾಲ್ಕಾರು ಬೃಹತ್ ಕಾಂಡಗಳು. ಅಲ್ಲಿ ಅದೆ ಜಾಗದಲ್ಲಿ ಸಹಜವಾಗಿ ಬೆಳೆದಿದ್ದ ಆ ಮರಗಳನ್ನೆ ಆಧಾರಗಂಭಗಳಂತೆ ಬಳಸಿ ಆ ಹಜಾರವನ್ನು ಕಟ್ಟಿಬಿಟ್ಟಿದ್ದರು, ಬರಿ ಮರದ ಸಾಮಾಗ್ರಿಗಳನ್ನು ಮಾತ್ರ ಬಳಸಿ. ಆ ಮರದ ಕಾಂಡದ ಬುಡದಲ್ಲಿ ಸಮತಲದಲ್ಲಿ ಸುತ್ತಲೂ ಕಟ್ಟಿದ್ದ ಕಟ್ಟೆಯಿಂದಾಗಿ ಅಲ್ಲೂ ಒಂದಷ್ಟು ಜನ ಆರಾಮವಾಗಿ ಒರಗಿಕೊಂಡು ಕುಳಿತೆ ಲೋಕಾಭಿರಾಮವಾಗಿ ಹರಟೆ ಹೊಡೆಯಲಿಕ್ಕೆ ಸಾಧ್ಯವಾಗುವಂತಿತ್ತು. ಅದರ ಮುಂದಿನ ಬದಿಯಲ್ಲೆ ಎದುರು ಸಾಲಿನಲ್ಲಿದ್ದ ಬಾರ್ ಕೌಂಟರ್ ಕಾಣಿಸಿದ ಮೇಲಂತೂ ಸಂಜೆಯ ಹೊತ್ತು ಅಲ್ಲಿರಬಹುದಾದ ಮಾದಕ ಪರಿಸರದ ಕುರಿತು ಮತ್ತ್ಯಾವ ಅನುಮಾನವು ಉಳಿಯುವಂತಿರಲಿಲ್ಲ. ಇದಕ್ಕೆಲ್ಲ ಕಲಶವಿಟ್ಟಂತೆ ಆ ಇಡಿ ಹಜಾರವೆ ಪೂರ್ಣವಾಗಿ ತೆರೆದುಕೊಂಡ, ಗೋಡೆಗಳೆ ಇಲ್ಲದ ಬಿಚ್ಚು ವಾತಾವರಣದಲ್ಲಿದ್ದುದ್ದು. ಹೀಗಾಗಿ ಪೂರ್ತಿ ಪರಿಸರವೆಲ್ಲ ಯಾರೂ ಹೇಳದೆಯೂ ತನ್ನಂತಾನೆ ಒಂದು ರೀತಿಯ ಅನಧಿಕೃತ, ಸಡಿಲ, ಶಿಷ್ಟಾಚಾರರಹಿತ ವಾತಾವರಣವನ್ನು ಆರೋಪಿಸಿಕೊಂಡುಬಿಟ್ಟಿತ್ತು. ಅಲ್ಲಿ ಹೆಜ್ಜೆಜ್ಜೆಗೂ ಯಾಕೆ ಸಿಗರೇಟಿನ ಆಷ್ ಟ್ರೆಗಳಂತಹ ಸಂಗ್ರಾಹಕ ಬೋಗುಣಿಗಳನ್ನಿಟ್ಟಿದ್ದಾರೆಂದು ಕೂಡ ಆ ಅಂಶವೆ ವಿವರಿಸುವಂತಿತ್ತು. ಒಟ್ಟಾರೆ, ಗುಡಿಸಿಲಿನಂತಹ ವಿನ್ಯಾಸದ ಮೇಲ್ಛಾವಣಿ ಹೊದಿಸಿದ್ದ ಬಟ್ಟ ಬಯಲೊಂದರಲ್ಲಿ ನಿರಾಳವಾಗಿ ಕುಳಿತು ಹರಟೆ ಹೊಡೆಯುತ್ತಾ, ತಿನ್ನುತ್ತಾ, ಕುಡಿಯುತ್ತ ಕಾಲ ಕಳೆಯಲು ಹೇಳಿ ಮಾಡಿಸಿದಂತಹ ಜಾಗ; ಇನ್ನು ಪಾರ್ಟಿಗೆ ರಂಗೇರಿಸುವಂತೆ ಪೇಯ, ಪಾನೀಯದ ಜತೆ ಸ್ಟೇಜಿನ ಮೇಲೇನಾದರೂ ಮೋಜಿನ ಕಾರ್ಯಕ್ರಮವೂ ಸೇರಿಬಿಟ್ಟರೆ ಅಲ್ಲಿಗೆ ಪೂರ್ತಿ ಕಳೆಗಟ್ಟಿದ ಹಾಗೆ ಲೆಕ್ಕವೆನಿಸಿ, ಆ ರಂಗುರಂಗಿನ ಸಂಜೆಯ ಕಾರ್ಯಕ್ರಮವೇನಿರಬಹುದೆಂದು ಕುತೂಹಲ ಹುಟ್ಟಿಸಿಬಿಟ್ಟಿತ್ತು . ಆದರೆ ಆ ಕಾರ್ಯಕ್ರಮದ ಆರಂಭಕ್ಕೆ ಇನ್ನು ಕೆಲವಾರು ಗಂಟೆಗಳ ಬಾಕಿ ಇದ್ದ ಕಾರಣ ಎಲ್ಲರಿಗು ವಿಲ್ಲಾ ರೂಮುಗಳ ಹಂಚಿಕೆ ಮಾಡಿ, ತುಸು ವಿಶ್ರಾಂತಿ ಪಡೆದ ನಂತರ ಸಂಜೆ ಏಳರ ಹೊತ್ತಿಗೆ ರೂಮುಗಳಲ್ಲಿರುವ ‘ಕೌ ಬಾಯ್’ ದಿರಿಸುಗಳನ್ನು ಅಲ್ಲಿರುವ ಟೋಪಿಗಳ ಸಮೇತ ಧರಿಸಿಕೊಂಡು ಹಾಜರಾಗಬೇಕೆಂದು ಸೂಚನೆಯಿತ್ತಿದ್ದರು. ಈ ಬಾರಿ ಶ್ರೀನಾಥನಿದ್ದ ವಿಲ್ಲಾ ಮಾತ್ರ ದೊಡ್ಡದಾಗಿದ್ದರೂ ಕೇವಲ ಎರಡು ರೂಮುಗಳು ಮಾತ್ರವೆ ಇದ್ದವು. ಅದೆ ವಿಲ್ಲಾಗೆ ಮತ್ತೊಬ್ಬ ಉನ್ನತಾಧಿಕಾರಿ ಕುನ್. ಲಗ್ ಕೂಡ ಬಂದಾಗ, ಅದೇಕೆ ಆ ಚಿಕ್ಕ ವಿಲ್ಲಾವನ್ನು ತಮ್ಮಿಬ್ಬರಿಗೆ ಕೊಡಮಾಡಿದ್ದಾರೆಂದು ಅರ್ಥವಾಗಿತ್ತು ಶ್ರೀನಾಥನಿಗೆ. ಪ್ರಾಜೆಕ್ಟು ಮುಗಿಯುವ ಮೊದಲೆ ಈ ರೀತಿಯಾದರೂ ಅವರೊಡನೆ ಖಾಸಗಿಯಾಗಿ ಮಾತನಾಡಿ, ಒಡನಾಡುವ ಅವಕಾಶ ಸಿಕ್ಕಿದ್ದು ಒಂದು ರೀತಿ ಒಳಿತೆ ಆಯಿತೆನಿಸಿ ಪ್ರಸನ್ನ ಚಿತ್ತನಾಗಿದ್ದ ಶ್ರೀನಾಥ.

ಆ ರಂಜನೆಯ ಸಂಜೆ ಆರಂಭವಾಗುವ ಮುನ್ನ ಸಿಕ್ಕಿದ್ದ ತುಸು ಸಮಯದಲ್ಲಿ ಹಾಗೆ ಸ್ವಲ್ಪ ಒರಗಿ ವಿಶ್ರಮಿಸಿಕೊಳ್ಳುವುದೆಂದೆಣಿಸಿ ರೂಮಿನ ಹಾಸಿಗೆಯ ಮೇಲೆ ಅರೆ ಮಲಗಿದ ಭಂಗಿಯಲ್ಲಿ ಕಣ್ಮುಚ್ಚಿದ್ದ ಶ್ರೀನಾಥ, ತನ್ನ ಮೊಣಕೈಯನ್ನೆ ತಲೆಗೆ ಆಸರೆಯಾಗಿರಿಸುತ್ತ. ಪ್ರವಾಸದ ಕಡೆಯ ಇರುಳಾದ ಕಾರಣ, ರಾತ್ರಿಯ ಔತಣ ಭರ್ಜರಿ ರೂಪ ತಾಳಬಹುದೆಂಬ ಅನುಮಾನವಿತ್ತಾಗಿ ಸ್ವಲ್ಪ ಅಣಕು ನಿದ್ದೆ ಮಾಡಿದರೆ ಕಾರ್ಯಕ್ರಮದ ಮುಕ್ತಾಯ ತಡವಾದರೂ ಎಚ್ಚರದಿಂದಿರಲು ಸಾಧ್ಯವಾದೀತು ಎಂಬ ಆಲೋಚನೆಯೂ ಇಂಬುಕೊಟ್ಟು, ಹಾಗೆ ಮಲಗಿದ್ದ ಸ್ಥಿತಿಯಲ್ಲೆ ತುಸು ಜೊಂಪು ಹತ್ತಿಸಿತ್ತು. ಆ ಅರೆಮಂಪರಿನ ಸ್ಥಿತಿಯಲ್ಲೂ, ಕನಿಷ್ಠ ಸಂಜೆ ಆರುಗಂಟೆಯ ಹೊತ್ತಿಗಾದರೂ ಎದ್ದು ಒಂದು ‘ಎಕ್ಸ್ ಪ್ರೆಸ್ಸ್’ ಸ್ನಾನ ಮುಗಿಸಿ ಕೌಬಾಯ್ ದಿರಿಸು ಧರಿಸಿಕೊಂಡು ಹೋಗಬೇಕೆನ್ನುವ ಜಾಗೃತಾವಸ್ಥೆಯ ಪ್ರಜ್ಞೆ ಒಳಗಿಂದೆಲ್ಲೊ ಎಚ್ಚರಿಸುತ್ತಿದ್ದ ಕಾರಣ, ಆಳವಾದ ನಿದ್ದೆಗಿಳಿಯಲೆಣಿಸುತ್ತಿದ್ದ ದೇಹವನ್ನು ಪೂರ್ಣವಾಗಿ ಮೈ ಮರೆಯಲು ಬಿಡದಂತೆ ಅರೆ ಕೂತಂತೆ ಮಲಗಿದ ಭಂಗಿಯ ಅವಸ್ಥೆಯನ್ನು ಬದಲಿಸದೆ ಹಾಗೆ ನಿದಿರೆಗಿಳಿದಿದ್ದ. ಆದರೂ ತುಸು ಹೊತ್ತಿನಲ್ಲಿ ತನಗರಿವಿಲ್ಲದೆ ಹತ್ತಿದ್ದ ಜೊಂಪು ಹತೋಟಿಯಲಿಡ ಬಯಸುತ್ತಿದ್ದ ಅರೆ ಪ್ರಜ್ಞೆಯನ್ನಧಿಗಮಿಸಿ, ಮನದ ನಿಗೂಢ ಮೂಲೆಯ ಯಾವುದ್ಯಾವುದೊ ಭ್ರಮೆಗಳನ್ನು ತಾಕಾಲಾಡಿಸುತ್ತ, ಏನೇನೂ ಸಂಬಂಧವಿರದ ವ್ಯಕ್ತಿ, ಕಾಲ ಮತ್ತು ಘಟನೆಗಳನ್ನು ಅಸಂಬದ್ಧವಾಗಿ ಸಂಯೋಜಿಸುತ್ತ ಅದೇನು ಕನಸೊ, ನನಸೊ ಎಂದು ಆ ಹೊತ್ತಿನ ಮನಃಸ್ಥಿತಿಯಲ್ಲಿ ಗ್ರಹಿಸಲಾಗದ ಗೊಂದಲದಲ್ಲಿ ಸಿಲುಕಿಸಿ, ಆ ನಿದ್ರಾಸ್ಥಿತಿಯಲ್ಲಿ ಸಿಗಬಹುದಾಗಿದ್ದ ಪ್ರಶಾಂತ ವಿರಾಮಕ್ಕೂ ಅಡ್ಡಿಯಾಗಿಸಿಬಿಟ್ಟಿತ್ತು. ಎಲ್ಲೊ ತೇಲಾಡುತ್ತ ಕಂಗಾಲಾಗಿ ದಾರಿ ತಪ್ಪಿ ಅಲೆದಾಡುವ ಹಾಗೆ, ಯಾವುದೊ ಗುರುತು ಪರಿಚಯವಿರದ ಅಪರಿಚಿತ ತಾಣದಲ್ಲಿ ದಿಕ್ಕುಗಾಣದೆ ಪರಿಭ್ರಮಿಸುತ್ತಿರುವ ಹಾಗೆ ಅನಿಸಿ, ಆ ಸ್ಥಿತಿಯಲೇನೊ ಅಭಾಸವಿರುವಂತೆ ಭಾಸವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಮತ್ತಾವುದೊ ಹೊಸದೊಂದು ಜಾಗವನ್ನು ಹೊಕ್ಕಂತೆನಿಸಿ, ಸುತ್ತಲ ವ್ಯಕ್ತಿ ಪರಿಕರ ಪರಿಸರಗಳೆ ಬದಲಾಗಿ ಹಿಂದಿನ ದೃಶ್ಯಕ್ಕೆ ಸಂಬಂಧವೆ ಇರದ ಮತ್ತಾವುದೊ ಹೊಸಲೋಕ ತೆರೆದುಕೊಂಡು ಗೊಂದಲ ಹುಟ್ಟಿಸಿದ ಹಾಗೆ; ಆ ಸ್ವಪ್ನಾವಸ್ಥೆಯಲ್ಲೆ, ಹಿಂದಿನ ದೃಶ್ಯದಲ್ಲಿ ಮಾಡುತ್ತಿದ್ದುದ್ದೇನನ್ನೊ ಸಂಪೂರ್ಣಗೊಳಿಸದೆ ಅಲ್ಲೆ ಹಾಗೆ ಅರ್ಧಕ್ಕೆ ಬಿಟ್ಟಂತೆ, ಚಂಗನೆ ಮನವಿನ್ನೆಲ್ಲೊ ನೆಗೆದು ಇನ್ನಾವುದೊ ಮತ್ತೊಂದು ಪರಿಸರದಲ್ಲಿ ಮತ್ತೇನನ್ನೊ ಮಾಡುತ್ತ, ಇನ್ನೇನನ್ನೊ ನೋಡುತ್ತ ದಿಗ್ಭ್ರಮಿಸುತ್ತಿರುವ ಹೊತ್ತಲ್ಲೆ, ಒಳಗಿನಾವುದೊ ಅಂತರ್ಪ್ರಜ್ಞೆಯ ತುಣುಕೊಂದು ಸೋಜಿಗದಲ್ಲಿ ಅಚ್ಚರಿಗೊಳ್ಳುತ ವಿಸ್ಮೃತಿಯಲ್ಲಿ ನೋಡಹತ್ತಿತ್ತು; ಅಲ್ಲಿ ನಡೆಯುತ್ತಿರುವುದೆಲ್ಲದರ ಅಸಂಗತತೆಯನ್ನು ಆ ಅರೆ ಪ್ರಜ್ಞಾವಸ್ಥೆಯಲ್ಲು ನಿಷ್ಕ್ರಿಯ ಸ್ಥಿತಿಯಲಿದ್ದ ಬಾಹ್ಯೆಂದ್ರೀಯಗಳು ಗ್ರಹಿಸಿ ಆತಂಕಗೊಂಡು, ಮನ ಕಸಿವಿಸಿಗೊಳ್ಳುತ್ತಿದ್ದರೂ ನಡೆಯುತ್ತಿರುವುದನ್ನು ನಿಲ್ಲಿಸಲಾಗದ ಅಸಹಾಯಕತೆಯೆ ಮೈತುಂಬಿ, ಅದನ್ನು ಪ್ರತಿಭಟಿಸಲೂ ಆಗದ ಅಶಕ್ತತೆಯೊಂದು ಹೊಕ್ಕಿಕೊಂಡಂತಾಗಿ ಬಾಯಿಕಟ್ಟಿ, ಮಾತನ್ನು ಆಡಬಿಡದಂತೆ ಮೂಕವಾಗಿಸಿಬಿಟ್ಟಿತ್ತು.

ಅದನ್ನು ಏನಾದರೂ ಮಾಡಿ ತಡೆಯುವುದಿರಲಿ, ಆ ಕನಸಿನಲ್ಲೆ ಅಲ್ಲಿ ನಡೆಯುತ್ತಿರುವುದಕ್ಕೆ ಬೇಷರತ್ ಸಹಕಾರವೀಯುತ, ಆ ಅಪ್ರಿಯವಾದುದೇನಕ್ಕೂ ಪ್ರತಿಭಟಿಸದೆ ಕೈ ಜೋಡಿಸಿ ಮುನ್ನಡೆಯುತ್ತಿರುವ ತನ್ನ ಸ್ವಯಂಬಿಂಬವನ್ನು ಕಂಡೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ಮರುಗುತ್ತಿರುವಾಗಲೆ, ಇದ್ದಕ್ಕಿದ್ದಂತೆ ಆ ರಂಗಮಂಚದ ಸ್ಥಳ-ಸನ್ನಿವೇಶ-ವ್ಯಕ್ತಿ-ಪರಿಸರಗಳು ಬದಲಾಗಿ ತಾನು ಬಂದಿದ್ದ ಅದೇ ಪ್ರವಾಸದ ವೇದಿಕೆಗೆ ಮತ್ತೆ ಸ್ಥಳಾಂತರವಾಗಿತ್ತು. ಆದರೆ ತಾನು ಬಂದಂತಿದ್ದ ಸ್ಥಳಕ್ಕೂ ವಾಸ್ತವದಲ್ಲಿ ಬಂದಿದ್ದ ಜಾಗಕ್ಕೂ ಯಾವ ರೀತಿಯ ಹೋಲಿಕೆಯೆ ಇರದೆ ಕೇವಲ ಅಲ್ಲಿನ ಕೆಲ ಪರಿಚಿತ ಮುಖಗಳು ಮಾತ್ರ ಇಲ್ಲಿಯೂ ಓಡಾಡುತ್ತಿವೆಯೆನಿಸುತ್ತಿದ್ದಂತೆ, ‘ಅರೆ? ತಾನೇಕೆ ಇಲ್ಲಿಗೆ ಬಂದುಬಿಟ್ಟೆ? ಏಳು ಗಂಟೆಗೆ ಆರಂಭವಾಗುವ ಪ್ರೋಗ್ರಾಮಿಗೆ ಆರಕ್ಕಾದರೂ ಏಳಬೇಕೆಂದುಕೊಂಡಿದ್ದರೆ, ಈಗ ಆ ಜಾಗದಿಂದಲೆ ಇನ್ನೆಲ್ಲೊ ಬಂದಂತಾಗಿದೆಯಲ್ಲಾ? ಅದು ಸರಿ, ಇವರೆಲ್ಲ ಏಕೆ ಆ ಪ್ರೋಗ್ರಾಮಿನ ಜಾಗವನ್ನು ಬಿಟ್ಟು ಇಲ್ಲಿಗೆ ಬಂದುಬಿಟ್ಟಿದ್ದಾರೆ? ಕೊನೆಗಳಿಗೆಯಲ್ಲೇನಾದರೂ ಜಾಗ ಬದಲಿಸಿಬಿಟ್ಟರೆ? ಯಾರೂ ಕರೆತರದಿದ್ದರೂ ತಾನ್ಹೇಗೆ ಇಲ್ಲಿಗೆ ಬಂದುಬಿಟ್ಟೆ? ಯಾವುದೆ ಬಸ್ಸಾಗಲಿ, ವಾಹನವಾಗಲಿ ಹತ್ತಿ ಬಂದ ನೆನಪೆ ಇಲ್ಲವಲ್ಲ?’ ಎಂದೆಲ್ಲಾ ವಿಭ್ರಾಂತಸ್ಥಿತಿಯಲ್ಲಿ ಮತ್ತೆ ಕಳುವಾದಂತಿರುವಾಗಲೆ ಎದುರಿನಿಂದ ಕುನ್. ಸು ಯಾವುದೊ ಹಸುಗೂಸೊಂದನ್ನು ಕೈಲ್ಹಿಡಿದುಕೊಂಡು ಹತ್ತಿರಕ್ಕೆ ಬರುತ್ತಿರುವಂತೆ ಕಂಡಿತ್ತು. ಹತ್ತಿರ ಹತ್ತಿರ ಬಂದಂತೆ ಆ ಚಿತ್ರ ಸ್ಪಷ್ಟವಾಗುತ್ತಾ ಹೋಗಿ ಆ ಮಗು ಬೇರಾರದು ಆಗಿರದೆ ತನ್ನ ಸ್ವಂತ ಮಗುವೆ ಆಗಿರುವುದನ್ನು ಕಂಡು ಬೆಚ್ಚಿ ಬೀಳುವಂತಾಗಿ ಮಗುವನ್ನೊಮ್ಮೆ, ಅವಳನ್ನೊಮ್ಮೆ ದಿಟ್ಟಿಸುವ ಹಾಗೆ ನೋಡುತ್ತಿದ್ದಂತೆ, ಅಲ್ಲಿಯವರೆಗಿದ್ದ ಕುನ್. ಸು ವಿನ ಚಿತ್ರಣವೆಲ್ಲ ಮಾಯವಾಗಿ ಅವಳಿದ್ದ ಜಾಗದಲ್ಲಿ ತನ್ನ ಹೆಂಡತಿಯನ್ನೆ ಕಂಡು ಮತ್ತೆ ಅದುರಿ ಬಿದ್ದಿದ್ದ ಶ್ರೀನಾಥ..! ಅದೆ ಹೊತ್ತಲ್ಲಿ ಸರಿಯಾಗಿ ಮತ್ತಾರೊ ಓಡಿ ಬಂದು ಅವಳ ಕೈಯಲ್ಲಿದ್ದ ಮಗುವನ್ನು ಎತ್ತಿಕೊಂಡು ಎಲ್ಲೊ ನಡೆಯುತ್ತಿರುವಂತೆ ಕಂಡು ಬಂದು, ಅದಾರೆಂದು ನೋಡಿದರೆ ಯಾರದೊ ಮುಗುಳ್ನಗುತ್ತಿರುವ ಅಪರಿಚಿತನ ಮುಖ; ಆ ನಗುವಿನ ಮಾಂತ್ರಿಕತೆಯಿಂದಲೊ ಏನೊ ಅವನು ಕಸಿದುಕೊಂಡು ಹೋದರೂ ಪ್ರತಿರೋಧಿಸದೆ ಸುಮ್ಮನೆ ಅವನು ಹೋದತ್ತಲೆ ನೋಡುತ್ತ ನಿಂತಂತೆ ಅನಿಸಿಬಿಟ್ಟಿತ್ತು. ಅದೆ ಹೊತ್ತಲ್ಲೆ ಪಕ್ಕದಲ್ಲಿ ನಿಂತಿದ್ದವಳು ಅವನ ಹಿಂದೆಯೆ ಓಡುತ್ತ ಮಗುವನ್ನು ಹಿಂದಕ್ಕೆ ಪಡೆಯಲೂ ಯತ್ನಿಸುತ್ತಿರುವಂತೆ ಕಂಡು ಅತ್ತ ತಿರುಗಿದರೆ ಅದು ಅವನ ಪತ್ನಿಯಾಗಿರದೆ ಮತ್ತೆ ಕುನ್. ಸು ಮುಖವಾಗಿ ಕಂಡಿತ್ತು.

ಅವರಿಬ್ಬರೂ ಇದ್ದ ಆ ಜಾಗದ ಕಡೆಗೆ ಹೋಗಬೇಕೆಂಬ ಬಲವಾದ ಪ್ರಚೋದನೆಯಾಗುತ್ತಿದ್ದರೂ, ಕಾಲುಗಳು ಒಂದಿಂಚು ಮೇಲೆತ್ತಲಾಗದ ಹಾಗೆ ನೆಲಕ್ಕೆ ಕಚ್ಚಿಕೊಂಡು ಬಿಟ್ಟಿವೆಯೇನೊ ಎನ್ನುವಂತೆ ಸ್ಥಗಿತ ಸ್ಥಿತಿಯಲ್ಲಿ ತಟಸ್ಥವಾಗಿಬಿಟ್ಟಿದ್ದವು; ಹಾಗೆ ನಿಂತ ವಿಭ್ರಾಮಕ ಸ್ಥಿತಿಯಲ್ಲೆ ಮತ್ತೊಂದೆಡೆ ಕಾರ್ಯಕ್ರಮಕ್ಕೆ ತಡವಾಗಿ ಹೋಯ್ತಲ್ಲ, ಇದಾವುದೊ ಗೊತ್ತಿರದ ಜಾಗದಿಂದ ಮತ್ತೆ ಅಲ್ಲಿಗೆ ಹೋಗುವುದು ಹೇಗಪ್ಪಾ? ಎಂದು ಆತಂಕ, ಕಳವಳಗೊಳ್ಳುತ್ತ ‘ಮುಂದೇನು?’ ಅಂದುಕೊಳ್ಳುತ್ತಿರುವಾಗಲೆ ಮತ್ತೆ ಧುತ್ತನೆ ಎಲ್ಲಿಂದಲೊ ತಟ್ಟನುಧ್ಭವಿಸಿ ಎದ್ದು ಬಂದಂತೆ, ತಾನು ಮೊದಲಿದ್ದ ಪರಿಚಿತ ಪ್ರದೇಶವೆ ಅನಾವರಣಗೊಂಡು, ‘ಅರೆ ಮತ್ತೆ ಇಲ್ಲಿಗೆ ಹೇಗೆ ವಾಪಸ್ಸು ಬಂದೆ? ಹೇಗಾದರೂ ಸರಿ, ಸದ್ಯ! ಹೊತ್ತಿಗೆ ಮುಂಚೆ ಬಂದು ತಲುಪಿದೆನಲ್ಲಾ?’ ಎಂದು ನಿಟ್ಟುಸಿರು ಬಿಡುತ್ತ ಸುತ್ತ ನೋಡಿದರೆ ಆಗಲೆ ಎಲ್ಲರೂ ವಾಪಸ್ಸು ಹೋಗಲೆಂದು ಬಸ್ಸು ಹತ್ತುತ್ತಿರುವುದು ಕಾಣಿಸಿ ‘ ಅರೆರೆ? ಪ್ರೋಗ್ರಾಮೆಲ್ಲ ಮುಗಿದು ಬೆಳಗೂ ಆಗಿ ಇವರೆಲ್ಲ ಆಗಲೆ ವಾಪಸ್ಸು ಹೊರಟೂ ಬಿಟ್ಟರೆ? ಅದೂ ತನ್ನನ್ನು ಇಲ್ಲಿಯೆ ಬಿಟ್ಟು ತಮಗೆ ತಾವೆ ಹೊರಟಂತಿದೆಯಲ್ಲ? ತಾನು ನೋಡಿದರೆ ಇನ್ನು ಮಂಚದ ಮೇಲೆ ಹಾಸಿಗೆಯಲ್ಲೆ ಇದ್ದಂತಿದೆ, ಲಗೇಜಿನ ಸಮೇತ..? ಅರೆ ಈ ಮಂಚ ಹಾಸಿಗೆ ಯಾವಾಗ ರೂಮಿನಿಂದಾಚೆಗೆ ತಂದಿಟ್ಟರು? ಇವರೆಲ್ಲ ತಾನಿಲ್ಲಿಗೆ ಹೊಸಬನೆಂದು ಗೊತ್ತಿದ್ದೂ, ತಾನು ಎದ್ದು ರೆಡಿಯಾಗಲಿಕ್ಕೂ ಕಾಯದೆ ಹೊರಟುಬಿಟ್ಟಿದ್ದಾರಲ್ಲ …’ ಎಂದೆಲ್ಲ ಏನೇನೊ ಅನಿಸಿ ಗಾಬರಿಯಾಗಿ ತಡಬಡಾಯಿಸಿಕೊಂಡು ಬಡಬಡಿಸುತ್ತ ಮೇಲೆದ್ದಿದ್ದ ಶ್ರೀನಾಥ. ಹಾಗೆ ಮೇಲೆದ್ದು ಕೂತವನಿಗೆ ತನ್ನ ಸ್ವಪ್ನಾವೇಷದ ಅಪ್ರಜ್ಞಾವಸ್ಥೆಯಿಂದ ಹೊರಬರಲೆ ಕೆಲಕ್ಷಣಗಳು ಹಿಡಿದು ಆ ಅತ್ಯಲ್ಪ ಕ್ಷಣದ ಅಂತರದಲ್ಲೆ, ‘ತಾನಾರು? ತಾನೆಲ್ಲಿದ್ದೇನೆ? ಏಕಿಲ್ಲಿ ಕೂತಿದ್ದೇನೆ? ಇಲ್ಲಿಗೆ ಯಾವಾಗ ಬಂದೆ? ಹೇಗೆ ಬಂದೆ’ ಎಂಬಿತ್ಯಾದಿ ಪ್ರಜ್ಞಾವಸ್ಥೆಯ ತಾತ್ವಿಕ – ಆಧ್ಯಾತ್ಮಿಕ – ವೇದಾಂತಿಕ ಜಿಜ್ಞಾಸೆಯ ಕಾರಣಹೀನ ಪ್ರಶ್ನೆಗಳು ಜಾಗೃತಾವಸ್ಥೆಯ ಬಾಹ್ಯಪ್ರಜ್ಞೆಯಿಂದುದಿತವಾಗಿ ಪೂರ್ತಿ ತಳಮಳ ಗೊಂದಲದಲ್ಲಿ ಕೆಡವುತ್ತ ಗಾಬರಿಯ್ಹುಟ್ಟಿಸುತ್ತಿರುವ ಹೊತ್ತಿನಲ್ಲೆ, ನಿಧಾನವಾಗಿ ಭೌತಿಕ ಪ್ರಜ್ಞೆಗೆ ತೆರೆದುಕೊಂಡ ಮನಸ್ಸು ಮತ್ತು ಪೂರ್ತಿ ಎಚ್ಚರಾದ ಬಾಹ್ಯೆಂದ್ರೀಯಗಳು ಪೂರ್ಣ ಜಾಗೃತ ಸ್ಥಿತಿಯನ್ನು ತಲುಪಿದ್ದವು.

ಭೌತಿಕ ದೇಹದ ನಿಯಂತ್ರಣವನ್ನು ಬಾಹ್ಯೆಂದ್ರೀಯಗಳು ಮತ್ತೆ ಕೈಗೆತ್ತಿಕೊಂಡದ್ದಕ್ಕೊ ಏನೊ – ಕೊಠಡಿಯ ಸುತ್ತಲಿನ ಮಂಚ, ಹಾಸಿಗೆ, ಗೋಡೆಯ ಮೇಲಿದ್ದ ಛಾಯಾಚಿತ್ರ, ಮತ್ತು ತಲೆಯ ಎರಡು ಬದಿಯಲ್ಲಿದ್ದ ಟೇಬಲ್ ಲ್ಯಾಂಪುಗಳ ಪರಿಸರವೆಲ್ಲ ಮತ್ತೆ ಬಾಹ್ಯ ಪ್ರಜ್ಞೆಯ ದೃಶ್ಯ ಗಮ್ಯವಾದಾಗಲಷ್ಟೆ – ತಾನು ಅದುವರೆಗೆ ಕಂಡ ದೃಶ್ಯಾವಳಿಯೆಲ್ಲ ಬರಿಯ ಕನಸಿನ ಭ್ರಾಮಕ ಲೋಕವೆಂದು ಅರಿವಿಗೆ ಬಂದಿತ್ತು. ಇದೇನಿದು, ಹೊತ್ತಲ್ಲದ ಈ ಹೊತ್ತಿನಲ್ಲಿ ಈ ವಿಚಿತ್ರ ಮನ ಕದಡುವ ಕನಸೆಂದು ಆತಂಕದಲ್ಲೆ ಗಡಿಯಾರದತ್ತ ನೋಡಿದರೆ ಇನ್ನು ಐದು ಗಂಟೆ ತೋರಿಸುತ್ತಿತ್ತು. ‘ಛೆ! ಕನಿಷ್ಠ ಇನ್ನು ಒಂದು ಗಂಟೆಯಾದರೂ ಮಲಗಬಹುದಿತ್ತು.. ಹಾಳು ವಿಕೃತ ಕನಸಿಂದ ಎಚ್ಚರವಾಗಿಹೋಯ್ತಲ್ಲ’ ಎನಿಸಿ ಖೇದವಾದರೂ ಬಿದ್ದ ಕನಸಿನ ಧಾಟಿಯ ಭೀತಿಯಿಂದ ಮತ್ತೆ ಮಲಗಲಿಕ್ಕೆ ಮನಸಾಗದೆ ರೂಮಿನ ಟೀವಿ ಹಾಕಿಕೊಂಡು ಕುಳಿತುಕೊಂಡಿದ್ದ. ಅಲ್ಲೂ ಒಂದೆರಡು ನ್ಯೂಸ್ ಚಾನೆಲ್ ಬಿಟ್ಟರೆ ಮಿಕ್ಕೆಲ್ಲಾ ಥಾಯ್ ಚಾನೆಲ್ಗಳೆ ಇದ್ದ ಕಾರಣ ನೋಡಿದ್ದ ನ್ಯೂಸನ್ನೆ ಮತ್ತೆ ನೋಡಲು ಬೇಸರವಾದಾಗ ಶವರಿನಡಿ ಸ್ನಾನವನ್ನಾದರೂ ಮಾಡಿ ಸಿದ್ದನಾಗೋಣವೆಂದು ಬಾತ್ರೂಮಿನತ್ತ ಹೊರಟಿದ್ದ. ಕನಸಿನಿಂದುಂಟಾದ ಉನ್ಮೇಷವೆಲ್ಲ ಕರಗಿ ಹೋಗಲೆಂದು, ಬರಿ ಶವರಿನ ಬದಲು ಟಬ್ಬಿನಲ್ಲಿ ನೀರು ತುಂಬಿ ಕೆಲ ಕಾಲ ನೀರಲ್ಲಿ ಮುಳುಗಿ ಕೂತ ಸಂವೇದನೆಯನ್ನನುಭವಿಸುತ್ತ ಕಣ್ಮುಚ್ಚಿದರೂ ಕನಸಿನ ದೃಶ್ಯಗಳೆ ಪದೆ ಪದೆ ಪುನರಾವರ್ತಿತವಾಗಿ ಯಾಕೊ ಕಲಸಿಹೋದ ಮನವೆಲ್ಲ ಹದಕ್ಕೆ ಬಾರದೆ ಚಡಪಡಿಸತೊಡಗಿತ್ತು. ಅಂತೂ ಹಾಗೂ ಹೀಗೂ ಶವರನ್ನು ಮುಗಿಸಿ ಜೀನ್ಸಿನ ಮೇಲೆ ರೂಮಿನಲ್ಲಿಟ್ಟಿದ್ದ ಕೌ ಬಾಯ್ ಮೇಲು ಡ್ರೆಸ್ ಧರಿಸಿಕೊಂಡು ಟೋಪಿ ಹಾಕಿಕೊಂಡು ಹೊರಡಲು ಸಿದ್ಧನಾದಾಗ ಆರೂ ಮುಕ್ಕಾಲಾಗಿದ್ದರಿಂದ ತುಸು ಮೊದಲೆ ಹೊರಟರೂ ತೊಡಕೇನೂ ಇರದೆಂದು ಹೊರಗೆ ನಡೆದಿದ್ದ, ಆ ರೆಸಾರ್ಟಿನ ಪರಿಸರದಲ್ಲಿ ಹಾಗೆಯೆ ಅಡ್ಡಾಡುತ್ತ. ನೈಸರ್ಗಿಕವಾದ ಸ್ವಚ್ಛ ಗಾಳಿಯ ಸೇವನೆಯ ಚೇತನ ಗೊಂದಲದಿಂದ ಕಲಸಿಹೋದ ಮನಕ್ಕೆ ಪೂರ್ತಿ ಉಪಶಮನ ನೀಡದಿದ್ದರೂ ಕೂಡ, ಅಡ್ಡಾಟ ಮುಗಿಸಿ ಕಾರ್ಯಕ್ರಮದ ಹಾಲಿನತ್ತ ಬರುವ ಹೊತ್ತಿಗೆ ಉಬ್ಬರದ ಕ್ಲೇಷವೆಲ್ಲ ಕರಗಿ ತೆಳು ವಿಕಲ್ಪವಷ್ಟೆ ಉಳಿದು ಮನಸನ್ನು ಬಹುತೇಕ ತಹಬಂದಿಗೆ ತಂದಿಕ್ಕಿ ಬಿಟ್ಟಿತ್ತು, ಆ ಪುಟ್ಟ ವಾಕ್. ಜತೆಗೆ ಫಂಕ್ಷನ್ ಹಾಲಿನ ಹತ್ತಿರ ಬರುತ್ತಿದ್ದಂತೆ ಕೇಳಿಸತೊಡಗಿದ್ದ ಮ್ಯೂಸಿಕ್ಕಿನ ಅಬ್ಬರವೂ ಬೆರೆತು, ಬಾಹ್ಯಾಂತಃಕರಣಗಳನ್ನು ಪೂರ್ತ ಆವರಿಸಿ ಮಿಕ್ಕುಳಿದಿದ್ದ ಭಾವೋನೃಣವನ್ನು ಹಿಂದಕ್ಕಟ್ಟಿ ಸುತ್ತಲಿನ ವಾಸ್ತವ ಜಗದಲ್ಲಿ ಎಳೆತಂದು ನಿಲ್ಲಿಸಿಬಿಟ್ಟಿತ್ತು. ಆ ಅಬ್ಬರದೊಂದಿಗೆ ಎಲ್ಲವನ್ನು ಮರೆತವನಂತೆ ಬಾರ್ ಕೌಂಟರಿನತ್ತ ಹೆಜ್ಜೆ ಹಾಕಿದ್ದ ಶ್ರೀನಾಥ ಕೈಗೊಂದು ಡ್ರಿಂಕ್ ಎತ್ತಿಕೊಳ್ಳಲು.

ಅಷ್ಟೊತ್ತಿಗಾಗಲೆ ಒಬ್ಬೊಬ್ಬರಾಗಿ ಬಂದು ಸೇರುತ್ತ ಆಗಲೆ ವಾತಾವರಣಕ್ಕೊಂದು ತರಹದ ಕಳೆಗಟ್ಟುತ್ತಾ ಇತ್ತು. ಅದೆ ಸಮಯಕ್ಕೆ ಶರ್ಮ, ರಾಮ ಮೂರ್ತಿ ಮತ್ತು ಸೌರಭನೂ ಬಂದು ಸೇರಿಕೊಂಡಾಗ ಮತ್ತಷ್ಟು ನಿರಾಳವಾಗಿ ಎಲ್ಲರೂ ಒಂದೆಡೆ ನಿಂತು ಮಾತಿಗಿಳಿದಿದ್ದರು. ಅಪರೂಪಕ್ಕೆಂಬಂತೆ ರೆಡ್ ವೈನನ್ನು ಗ್ಲಾಸಿನಲ್ಲಿ ಹಿಡಿದುಕೊಂಡು ನಿಂತಿದ್ದ ಶ್ರೀನಾಥನನ್ನು ಕಂಡು ಅದೇನೆಂದು ಕೇಳಿದ್ದ ಸೌರಭ್ ದೇವ್..

‘ ಕೆಂಪು ದ್ರಾಕ್ಷಾರಸ…ಗುಡ್ ಫಾರ್ ಹಾರ್ಟ್..’ ಎಂದು ನಕ್ಕಿದ್ದ ಶ್ರೀನಾಥ.

ಅದೆ ಹೊತ್ತಿಗೆ ಎರಡು ಬಿಯರ ಗ್ಲಾಸು ಹಿಡಿದು ಬಂದ ಶರ್ಮ ಒಂದನ್ನು ಸೌರಭನಿಗಿತ್ತು ಮತ್ತೊಂದನ್ನು ತಾನೆ ಹಿಡಿದುಕೊಂಡು ಗ್ಲಾಸಿಗೆ ಗ್ಲಾಸಿನ ಬುಡ ತಗುಲಿಸುತ್ತ ‘ಚಿಯರ್ಸ್..’ ಎಂದಿದ್ದ. ಆಲ್ಕೋಹಾಲ್ ಕುಡಿಯದ ರಾಮ ಮೂರ್ತಿ ಕೋಕ್ ಗ್ಲಾಸೊಂದನ್ನು ಕೈಲಿ ಹಿಡಿದು ತಾನೂ ಜತೆಗೂಡಿದ್ದ. ಅವರೆಲ್ಲರ ಜತೆಗೆ ತಾನೂ ತನ್ನ ಗ್ಲಾಸು ಸೇರಿಸಿ, ‘ಚಿಯರ್ಸ್ …ಫಾರ್ ದ ಗ್ರೇಟ್ ಸಕ್ಸಸ್ ಆಫ್ ಅವರ ಪ್ರಾಜೆಕ್ಟ್..’ ಎಂದು ದನಿಗೂಡಿಸಿದ್ದ ಶ್ರೀನಾಥ. ಆ ಹೊತ್ತಿನಲ್ಲೆ ವಾತಾವರಣ ತಿಳಿಯಾಗಿಸಲು ಸ್ವಲ್ಪ ಕೀಟಲೆ ಮಾಡಬೇಕೆನಿಸಿ ರಾಮ ಮೂರ್ತಿಯತ್ತ ತಿರುಗಿ,

‘ ಥಾಯ್ ಸಂಪ್ರದಾಯ, ಸಂಸ್ಕೃತಿಯಲ್ಲಿ ಹೀಗೆ ಜತೆಯಲ್ಲಿ ಸೇರಿದಾಗ ಶಿಷ್ಟಾಚಾರಕ್ಕಾದರೂ ಕುಡಿಯದಿದ್ದರೆ ಅಸಭ್ಯತೆಯೆಂದು ಪರಿಗಣಿಸುತ್ತಾರಂತಲ್ಲ ? ಸ್ಯಾಂಪಲ್ಲಿಗಾದರೂ ಸ್ವಲ್ಪ ಕುಡಿಯುವುದು ವಾಸಿಯಿತ್ತೇನೊ?’ ಎಂದಿದ್ದ.

ಅವನ ಛೇಡಿಕೆಯ ಭಾವವನ್ನು ಅರಿತವನಂತೆ ರಾಮಮೂರ್ತಿ, ‘ಅದೆಲ್ಲಾ ಮಾಂಸಾಹಾರಿಗಳಿಗೆ ಮಾತ್ರ ಅನ್ವಯವಾಗುವಂತದ್ದು, ಅಪ್ಪಟ ಸಸ್ಯಾಹಾರಿಗಳಿಗಲ್ಲ. ನಾನಂತೂ ಪಕ್ಕಾ ‘ಮಾಂಗ್ ಸಾ ವಿರಾಟ್..(ಸಸ್ಯಾಹಾರಿ)’ – ಊಟದಲ್ಲೂ ಮತ್ತು ಡ್ರಿಂಕ್ಸಿನಲ್ಲೂ. ಥಾಯ್ ಸಂಸ್ಕೃತಿಯ ಲೆಕ್ಕದಲ್ಲಿ ಐ ಯಾಮ್ ಲೈಕ್ ಏ ಮಾಂಕ್!…ಫುಲ್ಲೀ ಎಗ್ಸೆಂಪ್ಟೆಡ್…’ ಎಂದು ನಗೆಯಾಡಿದ್ದ.

‘ ಅದಿರಲಿ… ಯಾಕೆ ಚಿಯರ್ಸ್ ಹೇಳುವಾಗ ಯಾರೂ ಇಲ್ಲಿನ ಸಂಸ್ಕೃತಿಯನ್ನು ಗೌರವಿಸಲಿಲ್ಲ? ವೆನ್ ಯು ಆರ ಇನ್ ರೋಮ್, ಬೀ ಲೈಕ್ ಏ ರೋಮನ್ ಅನ್ನುತ್ತಾರೆ..ನೀವೆಲ್ಲಾ ಉಲ್ಟಾಪಲ್ಟಾ.. ರೋಮಿಗೆ ಹೋದರೂ ‘ತಿಳಿಸಾರು ಅನ್ನವೆ ಬೇಕು’ ಅನ್ನುವ ಹಾಗೆ…?’

‘ ಅದು ಟಿಪಿಕಲ್ ಇಂಡಿಯನ್ ದೇಶಿ ಸ್ಟೈಲು ಸಾರ್…ಅದು ಬಿಡಿ, ಮೊದಲಿಗೆ ಅದ್ಯಾವ ಸ್ಥಳೀಯ ಸಂಸ್ಕೃತಿ ನಾವು ಅನುಕರಿಸದೆ ಇದ್ದದ್ದು? ಅದನ್ನು ಹೇಳಿ ಸಾರ್..ಬಹುಶಃ ಆ ಪದ್ದತಿಯೆ ನಮಗೆ ಗೊತ್ತಿದೆಯೊ ಇಲ್ಲವೊ….?’ ಎಂದ ಸೌರಭ ನಡುವೆ ದನಿ ತೂರಿಸಿ ರಾಮಮೂರ್ತಿಗೆ ರಕ್ಷಾಯುಧವಾಗುವವನಂತೆ.

‘ವಾಟ್ ಏ ಪಿಟಿ? ಡ್ರಿಂಕ್ಸ್ ಕುಡಿಯೋದ್ ಮಾತ್ರ ಗೊತ್ತು, ಅದರ ‘ಲೋಕಲ್’ ರೂಲ್ಸ್ ಮಾತ್ರ ಗೊತ್ತಿಲ್ಲ? ಈ ರೀತಿ ಗುಂಪಿನಲ್ಲಿ ಕುಡಿತಾ ‘ಚಿಯರ್ಸ’ ಹೇಳೋವಾಗ ಗುಂಪಿನಲ್ಲಿ ಯಾರು ದೊಡ್ಡವರಿರ್ತಾರೊ ಅವರ ಗ್ಲಾಸೆ ಯಾವಾಗಲೂ ಎತ್ತರದಲ್ಲಿರೊ ಹಾಗೆ ನೋಡ್ಕೊಬೇಕು.. ಅಂದರೆ ನೀವು ಗ್ಲಾಸ್ ಟಚ್ ಮಾಡಿದಾದ ನಿಮ್ಮ ಗ್ಲಾಸನ್ನು ಅವರದಕ್ಕಿಂತ ಕೆಳಗಿರೊ ಹಾಗೆ ತಗುಲಿಸಬೇಕು…!’

‘ ದೊಡ್ಡವರು ಅಂದ್ರೆ ವಯಸಲ್ಲೊ, ಪೊಸಿಷನ್ನಿನಲ್ಲೊ?’

‘ ಆಫೀಸಿನ ಕೂಟ ಆದ್ರೆ ಪೊಸಿಷನ್ನು.. ಬೇರೆ ಕಡೆ ಆದ್ರೆ ವಯಸಲ್ಲಿ ದೊಡ್ಡೋರು..’

‘ ಒಂದು ವೇಳೆ ಎರಡೂ ಒಟ್ಟಾಗಿ ಇರೊ ಸ್ಥಿತಿ ಇದ್ರೆ?’

‘ ಯಾರಿಗೆ ಗೊತ್ತು? ಡೌಟ್ ಇದ್ರೆ ಸುಮ್ಮನೆ ಇಬ್ಬರಿಗು ಒಂದೆ ಲೆವಲ್ ಗೌರವ ತೋರಿಸಿಬಿಡಿ.. ತಾಪತ್ರಯವೆ ಇರುವುದಿಲ್ಲ !’

ಆದರೂ ಸೌರಭ್ ಏನೊ ಅನುಮಾನದಿಂದ, ‘ ಇದು ಜಪಾನಿನದೊ, ಚೀನಿಯದೊ ಪದ್ದತಿಯಿರುವಂತೆ ಕೇಳಿದ ಜ್ಞಾಪಕ…ಥಾಯ್ ಪದ್ಧತಿ ಇದ್ದ ಹಾಗೆ ಕಾಣಲಿಲ್ಲ’ ಎಂದ

‘ಇರಬಹುದು.. ಇಲ್ಲಿರುವ ಥಾಯ್ ಚೈನೀಯರು ಅದೆ ತಮ್ಮ ಹಳೆಯ ಸಾಂಪ್ರದಾಯಿಕ ಪದ್ದತಿಯನ್ನು ಇಲ್ಲೂ ಅನುಸರಿಸುತ್ತಿರಬಹುದಲ್ಲಾ? ಹಾಗಾಗಿ ಇಲ್ಲಿಯೂ ಅದೆ ಪದ್ಧತಿ ಬರಬಾರದೆಂದೇನೂ ಇಲ್ಲವಲ್ಲ..’

‘ ಆದರೆ ಚೀನಿಯರಲ್ಲದ ಮಿಕ್ಕ ಒರಿಜಿನಲ್ ಥಾಯ್ ಜನರೂ ಇದೆ ಕ್ರಮ ಅನುಕರಿಸುತ್ತಾರಾ? ‘

‘ ಇರಬಹುದೇನೊ.. ನನಗೂ ಗೊತ್ತಿಲ್ಲ..ಹೇಗಿದ್ದರೂ ಇವತ್ತು ಎಲ್ಲಾ ಸೇರುತ್ತಾರಲ್ಲ? ನೀವೆ ಗಮನಿಸಬಹುದು ಇಲ್ಲವೆ ಯಾರನ್ನಾದರೂ ಕೇಳಬಹುದು..’ ಎಂದು ನಕ್ಕ ಶ್ರೀನಾಥ.

ಅದೆ ಹೊತ್ತಿಗೆ ರಾಮಮೂರ್ತಿ, ‘ ಡ್ರಿಂಕ್ಸಿನ ವಿಷಯ ಗೊತ್ತಿಲ್ಲ.. ಆದರೆ ಊಟದ ವಿಷಯಕ್ಕೆ ಬಂದರೆ ಚೀನಿಯರಲ್ಲಿ ಗುಂಪಿನಲ್ಲಿರುವ ದೊಡ್ಡ ವ್ಯಕ್ತಿಯೆ ಮೊದಲು ಊಟದ ತಟ್ಟೆಯಿಂದ ತಿನಿಸನ್ನು ಚಾಪ್ ಸ್ಟಿಕ್ಕಿನಲ್ಲಿ ಎತ್ತಿಕೊಳ್ಳಬೇಕಂತೆ… ಅವರು ಮುಟ್ಟಿದ ನಂತರವಷ್ಟೆ ಮಿಕ್ಕೆಲ್ಲರು ಕೈ ಹಾಕುವುದಂತೆ..’ ಎಂದ

ಅದನ್ನು ಕೇಳುತ್ತಿದ್ದ ಶರ್ಮ, ‘ ಹೌದೌದು.. ನಾನೊಮ್ಮೆ ಅವರ ಡಿನ್ನರಿನಲ್ಲಿ ಮತ್ತೊಂದು ವಿಷಯ ಗಮನಿಸಿದ್ದೆ…ಅಲ್ಲಿಟ್ಟಿದ್ದ ಹಲವಾರು ಪ್ಲೇಟುಗಳಲ್ಲಿ ಮೀನಿನ ಪ್ಲೇಟೂ ಇತ್ತು.. ಅದರ ತಲೆಯನ್ನು ಅವರಿಗೆದುರಾಗಿ ಅವರನ್ನೆ ನೋಡುತ್ತಿರುವಂತೆ ಇಟ್ಟಿದ್ದರು..’

ಆಗ ಶ್ರೀನಾಥನೂ ತಲೆಯಾಡಿಸುತ್ತ, ‘ ಮೀನು ಎಂದರೆ ಅದರ ಉಚ್ಚಾರಣೆಯ ಸ್ವರ ‘ಸಿರಿ ಸಂಪದದ’ ಜತೆಗೆ ಹೊಂದುವುದರಿಂದ ಮೀನನ್ನು ‘ಲಕ್ಕಿ’ ಎಂದೆ ಭಾವಿಸುತ್ತಾರೆ ಚೀನೀಯರು. ಆ ಕಾರಣಕ್ಕೆ ಅದರ ತಲೆಯನ್ನು ಗುಂಪಿನ ಅತ್ಯಂತ ಹಿರಿಯರತ್ತ ತಿರುಗಿಸಿ ಇಡುವುದು ಅವರಿಗೆ ತೋರಿಸುವ ಆದರ, ಗೌರವ ಎಂದು ಅವರ ನಂಬಿಕೆ..’

ಹೀಗೆ ಮಾತನಾಡುತ್ತಿದ್ದಂತೆ ಅಲ್ಲಿಗೆ ಮತ್ತೊಂದಷ್ಟು ಥಾಯ್ ಸಹೋದ್ಯೋಗಿಗಳು ಬಂದು ಸೇರಿಕೊಂಡಿದ್ದರು ಕೈಲೊಂದೊಂದು ಗ್ಲಾಸಿನಲ್ಲಿ ತಮಗಿಷ್ಟವಾದ ಪೇಯ ಹಿಡಿದುಕೊಂಡು.

(ಇನ್ನೂ ಇದೆ)
___________

( ಪರಿಭ್ರಮಣ..40ರ ಕೊಂಡಿ – https://nageshamysore.wordpress.com/00235-%e0%b2%95%e0%b2%a5%e0%b3%86-%e0%b2%aa%e0%b2%b0%e0%b2%bf%e0%b2%ad%e0%b3%8d%e0%b2%b0%e0%b2%ae%e0%b2%a3-40/ )

ಅವರೋಹಣ, ಆಕ್ರಮಣ, ಅಧಃಪತನ, ಆರೋಹಣ, ಪರಿಭ್ರಮಣ, ನಾಗೇಶ ಮೈಸೂರು, ನಾಗೇಶಮೈಸೂರು, ನಾಗೇಶ, nageshamysore, Nagesha Mysore, nagesha

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s